ಸದಸ್ಯ:Sandhya.s345/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಹಾರಾ ಮರುಭೂಮಿ

ಸಹಾರಾದಲ್ಲಿ ಹಿಮನದಿಗಳು[ಬದಲಾಯಿಸಿ]

ಸಹಾರಾ ಜಗತ್ತಿನ ಅತ್ಯಂತ ನಿರ್ಜನ ಮರುಭೂಮಿ. ಉತ್ತರ ಆಫ್ರಿಕದ ಬಹುಭಾಗವನ್ನು ವ್ಯಾಪಿಸಿರುವ ಈ ಮರುಭೂಮಿಯಲ್ಲಿ ನೈಲ್ ನದಿಯೊಂದು ಹರಿಯದಿದ್ಧರೆ ಇಡೀ ಈಜಿಪ್ಟ್ ಸಹ ಇಂದು ವಿಸ್ತಾರವಾದ ಸಹಾರಾದ ಒಂದು ಭಾಗವಾಗಿರುತ್ತಿತ್ತು. ಇಲ್ಲಿನ ಶೆಖೆ ಎಷ್ಟೊಂದು ಭೀಕರವಾಗಿರುತ್ತದೆಂದರೆ ಇಲ್ಲಿ ಬೆರಳೆನಿಕೆಯಷ್ಟು ಇರುವ ಗಿರಿಜನರೂ ರಾತ್ರಿಯಾದ ಅನಂತರವೆ ಪ್ರಯಾಣ ಮಾಡುತ್ತಾರೆ. ದೂರ ದೂರದಲ್ಲಿ ಎಲ್ಲೋ ಒಂದೊಂದಿರುವ ಓಯಸಿಸ್ಗಳ ಬಳಿ ಮಾತ್ರ ಜನ ವಸತಿಯಿದೆ. ಮರದ ನೆರಳಿಲ್ಲದ ಮೋಡದ ತುಣುಕಿಲ್ಲದ ಈ ಸಹಾರಾ ನಿರಾಸೆಯ, ಹತಾಶೆಯ ಪ್ರತೀಕವಾಗಿದೆ. ಚಳಿಗಾಲದಲ್ಲೂ ಸಹ ಬಿಸಿಲು ಎಷ್ಟೊಂದು ಪ್ರಖರವಾಗಿರುತ್ತದೆಂದರೆ, ಇಲ್ಲಿ ಕಾದ ಮರಳಿನ ಮೇಲೆ ಕಾಲಿಟ್ಟರೆ ಕಾಲು ಸುಟ್ಟು ಬೊಬ್ಬೆಯೇಳುತ್ತದೆ.

ಕೆಲವು ವರ್ಷಗಳ ಹಿಂದೆ ಮಧ್ಯ ಸಹಾರಾದಲ್ಲಿ ಫ್ರೆಂಚ್ ವಿಜ್ನಾನಿಗಳಲ್ಲಿ ಹಲವರು ಗ್ಲೇಸಿಯರ್ ಅಥವಾ ಹಿಮನದಿಗಳು ಹರಿದಿರುವ ಗುರುತುಗಳನ್ನು ಕಂಡರು. ನೀಳವಾಗಿ ನೂರಾರು ಮೈಲುದ್ದ ಹಿಮನದಿಗಳು, ಬಂಡೆಗಳಲ್ಲಿ ತಮ್ಮ ಪಾತ್ರ ಕೊರೆದಿರುವುದನ್ನು ಕಂಡರು. ಹಿಮನದಿಗಳಲ್ಲಿ ಗಟ್ಟಿಯಾಗಿ ಘನೀಕರಿಸಿದ ಹಿಮ ಮೆಲ್ಲಗೆ ಹರಿಯುತ್ತದೆ. ಇವು ಸರಿಯುವಾಗ ತಳದಲ್ಲಿನ ಕಲ್ಲು, ಮರಳು ಮತ್ತು ಬಂಡೆಗಳನ್ನೂ ತಮ್ಮೊಡನೆ ಒಯ್ಯುತ್ತವೆ. ಈ ಕಲ್ಲುಗಳು ಜರುಗುವಾಗ ನದಿಯ ತಳದ ಬಂಡೆಗಳನ್ನು ತಮ್ಮ ಪಾತ್ರಕ್ಕೆ ತಕ್ಕಂತೆ ಕೊರೆದು ದೊಡ್ಡ ದೊಡ್ಡ ಓಣಿಗಳನ್ನು ಮಾಡುತ್ತವೆ. ಆದ್ದರಿಂದಲೇ ಹಿಮನದಿಯ ಪಾತ್ರ ಸಾಧಾರಣ ನದಿಗಳ ಪಾತ್ರದಂತಿಲ್ಲದೆ ತಕ್ಷಣ ಗೊತ್ತಾಗುತ್ತದೆ. ಅಂತೂ ಫ್ರೆಂಚ್ ವಿಜ್ನಾನಿಗಳ ಸಂಶೋಧನೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು.

ಹಿಮನದಿಯ ಹರಿಯುವಿಕೆ

ಮರುಭೂಮಿಯಲ್ಲಿ ಹಿಮ![ಬದಲಾಯಿಸಿ]

ಜನವಿಹೀನವಾದ, ನೀರಿನ ಸೋಂಕಿಲ್ಲದ, ಕಾದ ಮರಳಿನ ರಾಶಿಯಿಂದ ತುಂಬಿರುವ ಈ ಮರುಭೂಮಿಯಲ್ಲಿ ಯಾವಾಗ ಮತ್ತು ಹೇಗೆ ಹಿಮನದಿಗಳು ಉದ್ಭವಿಸಿದವು? ಭೂಮಧ್ಯ ರೇಖೆಯ ಉಷ್ಣವಲಯದಲ್ಲಿ ಹಿಮ ಬೀಳುವುದೇ ಅಪರೂಪ. ಅಂಥದರಲ್ಲಿ ಮಧ್ಯ ಸಹಾರಾದ ಭೀಕರ ಮರಳುಗಾಡಿನ ದಟ್ಟ ಉಷ್ಣದಲ್ಲಿ ಹಿಮನದಿಗಳ ಪಾತ್ರ ಹೇಗೆ ನಿರ್ಮಾಣವಾಯಿತು? ವಿಜ್ನಾನಿಗಳು ತಮ್ಮ ಸಂಶೋಧನೆಯನ್ನು ಮುಂದುವರಿಸಿದಾಗ ಗ್ಲೇಸಿಯರ್ ಗಳ ಪಾತ್ರದ ಬಳಿಯೇ ಶೀತವಲಯದ ಜೀವಿಗಳ, ಸಸ್ಯಗಳ ಪಳಯುಳಿಕೆಗಳು ಸಹ ಕಂಡುಬಂದವು. ವಿಜ್ನಾನಿಗಳು ಈ ಪಳೆಯುಳಿಕೆಗಳ ಸಹಾಯದಿಂದ ಗ್ಲೇಸಿಯರ್ ಗಳು ಇಲ್ಲಿ ಹರಿದ ಕಾಲವನ್ನು ನಿರ್ಣಯಿಸಲು ಯತ್ನಿಸಿದರು. ಅದರಂತೆ ಅಂದಾಜು ೪೫೦ ಮಿಲಿಯನ್ ವರ್ಷಗಳ ಹಿಂದೆ ಇಂದಿನ ಅತ್ಯಂತ ಉಷ್ಣದ ಮರಳುಗಾಡಾದ ಸಹಾರಾದಲ್ಲಿ ಹಿಮನದಿಗಳು ಹರಿಯುತ್ತಿದ್ದವು ಎಂದಾಯಿತು.

ಹೇಗೆ ಸಾಧ್ಯ?[ಬದಲಾಯಿಸಿ]

ಜಗತ್ತಿನ ಅತ್ಯಂತ ಉಷ್ಣದ ದಾಖಲೆ ಅಂದರೆ ೧೩೭ ಡಿಗ್ರಿ ಫ್ಯಾರನ್ ಹೀಟ್. ಹೀಗಿರುವಾಗ ಇಲ್ಲಿ ಹಿಮನದಿಗಳು ಹರಿಯುವುದಾದರೂ ಹೇಗೆ? ವಿಜ್ನಾನಿಗಳಿಗೂ ಇದೊಂದು ಒಗಟಾಯಿತು. ಇಲ್ಲಿರುವ ಸಾಕ್ಷ್ಯಾಧಾರಗಳನ್ನು ಸಂಯೋಜಿಸಿ ಒಂದು ಸಮರ್ಥ ಸಿದ್ಧಾಂತವನ್ನು ರೂಪಿಸಲು ವಿಜ್ನಾನಿಗಳು ಇನ್ನೂ ಹೆಚ್ಚಿನ ಸಂಯೋಜನೆಗಳನ್ನು ಕೈಗೊಂಡರು. ಹಿಮನದಿಗಳ ಪಾತ್ರಗಳಿರುವುದು ಸಹಾರಾಕ್ಕೆ ಸಂಬಂಧಿಸಿದ ಎಲ್ಲ ದೇಶಗಳಿಂದಲೂ ವರದಿಯಾಗತೊಡಗಿದವು. ಮೊರಾಕ್ಕೋ, ಅಲ್ಜಿಯರ್ಸ್, ಮಾರಿಟಾನಿಯಾ, ನೈಜರ್, ಜಾಡ್ ಮುಂತಾದ ಎಲ್ಲಾ ದೇಶಗಳಲ್ಲೂ ಹಿಮನದಿಗಳು ಹರಿದು ದಾರಿ ಕೊರೆದಿರುವ ಗುರುತುಗಳು ಪತ್ತೆಯಾದವು. ಸುಮಾರು ೩೦೦೦ ಮೈಲು ಉದ್ದಗಲಕ್ಕೆ ಹಿಮನದಿಗಳು ಹರಿದಾಡಿದಿರುವುದನ್ನು ವಿಜ್ನಾನಿಗಳು ವಿಶ್ಲೇಷಿಸುವುದಾದರೂ ಹೇಗೆ? ಧ್ರುವವವಲಯದ ಅಗಾಧ ಹಿಮಚಪ್ಪಡಿಗಳಿರುವ ಪ್ರದೇಶಗಳಲ್ಲಿ ಮಾತ್ರ ಇಷ್ಟೊಂದು ಹಿಮನದಿಗಳ ಕೊರೆತ ಸಾಧ್ಯವೇ ಹೊರತು ಆಕಸ್ಮಿಕ ಹಿಮಪಾತಗಳಿಂದ ಉದ್ಭವಿಸುವ ಹಿಮನದಿಗಳಿಂದಲೂ ಇದು ಸಾಧ್ಯವಿಲ್ಲ.

ಸುಮಾರು ೪೦೦ ಮಿಲಿಯನ್ ವರ್ಷಗಳ ಹಿಂದಿನ ಪಳೆಯುಳಿಕೆಗಳನ್ನು ಯುರೋಪ್ನಲ್ಲಿ ತೆಗೆದು ಪರಿಶೀಲಿಸಿದಾಗ ಉತ್ತರ ಯೂರೋಪಿನ ಪಳೆಯುಳಿಕೆಗಳು ಅಲ್ಲಿ ಉಷ್ಣವಲಯದ ಪರಿಸರ ಇದ್ದುದನ್ನು ಮತ್ತು ದಕ್ಷಿಣ ಯೂರೋಪಿನ ಪಳೆಯುಳಿಕೆಗಳು ಅಲ್ಲಿ ಶೀತವಲಯದ ಪರಿಸರವಿದ್ದುದನ್ನ ಬಿಂಬಿಸುತ್ತವೆಂದು ತೀರ್ಮಾನಕ್ಕೆ ಬಂದರು. ಆ ಕಾಲದ ಪಳೆಯುಳಿಕೆಗಳು ಜಗತ್ತಿನ ಎಲ್ಲೆಡೆ ಯಾವ ಯಾವ ರೀತಿ ದೊರೆಯುತ್ತದೆಂಬುದನ್ನು ಒಟ್ಟಿನಲ್ಲಿ ಸಂಯೋಜಿಸಿ ನೋಡಿದಾಗ ವಿಜ್ನಾನಿಗಳಿಗೆ ಬಹುಕಾಲದ ಹಿಂದೆ ದಕ್ಷಿಣ ಧ್ರುವ ಯೂರೋಪಿಗೆ ಸಮೀಪವಾಗಿ ಆಫ್ರಿಕದಲ್ಲೆಲ್ಲೋ ಇದ್ದಿರಬೇಕೆಂಬ ಸಂಶಯ ಆರಂಭವಾಯಿತು. ಹಾಗಿದ್ದರೆ ದಕ್ಷಿಣ ಧ್ರುವ ಈಗಿನ ಸಹಾರಾ ಮರುಭೂಮಿಯಲ್ಲಿತ್ತೆ? ಸಹಾರಾದ ಹಿಮನದಿಗಳ ಪಾತ್ರಗಳು ಇದನ್ನೇ ಹೇಳುತ್ತವೆಯೇ? ಈ ಒಗಟನ್ನು ಬಿಡಿಸಲು ಬೇರೊಂದು ಸಂಶೋಧನ ಮಾರ್ಗವನ್ನು ವಿಜ್ನಾನಿಗಳು ಕಂಡುಹಿಡಿದರು. ಭೂಮಿಯ ಯಾವುದೇ ಶಿಲೆಯಲ್ಲಿಯೂ ಅತ್ಯಲ್ಪ ಪ್ರಮಾಣದ ಆಯಸ್ಕಾಂತ ಶಕ್ತಿ ಇರುತ್ತದೆ, ಕಬ್ಬಿಣದಲ್ಲಿ ಇದು ಹೆಚ್ಛಿಗೆ ಇರುತ್ತದೆ ಅಷ್ಟೇ, ಈ ಶಿಲೆಗಳ ಆಯಸ್ಕಾಂತ ಶಕ್ತಿಯೂ ಕೂಡಾ ಆ ಶಿಲೆಗಳು ರೂಪುಗೊಂಡಾಗಲೇ ರೂಪುಗೊಳ್ಳುತ್ತದೆ, ಅಲ್ಲದೇ ಈ ಕಲ್ಲುಗಳ ಆಯಸ್ಕಾಂತ ಶಕ್ತಿಯ ಧ್ರುವರೇಖೆಗಳು, ಆ ಕಲ್ಲುಗಳು ರೂಪುಗೊಂಡಾಗ ಯಾವ ದಿಕ್ಕಿನಲ್ಲಿ ಭೂಮಿಯ ಧ್ರುವಗಳಿದ್ದವೋ ಆ ದಿಕ್ಕಿನಲ್ಲೇ ಶಾಶ್ವತವಾಗಿ ಇರುತ್ತವೆ, ತದನಂತರ ಭೂಮಿಯ ಧ್ರುವಗಳು ವ್ಯತ್ಯಾಸವಾದರೂ ಈ ಕಲ್ಲುಗಳ ಆಯಸ್ಕಾಂತ ಧ್ರುವರೇಖೆಗಳು ವ್ಯತ್ಯಾಸವಾಗುವುದೇ ಇಲ್ಲ.

ಹಿಮನದಿಗಳಿಂದ ಉಂಟಾಗಿರುವ ಕೊರೆತ

ಧ್ರುವ ಪ್ರದೇಶವಾಗಿದ್ದ ಸಹಾರಾ[ಬದಲಾಯಿಸಿ]

ಈ ಸಂಶೋಧನೆ ತಿಳಿದ ಕೂಡಲೇ ವಿಜ್ಜಾನಿಗಳು ೪೫೦ ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡ ಶಿಲೆಗಳ ಆಯಸ್ಕಾಂತ ಧ್ರುವಗಳನ್ನು ಪರೀಕ್ಷಿಸಿದರು, ೧೯೬೦ರಲ್ಲಿ ಫ್ರೆಂಚ್ ಭೂಗರ್ಭ ಶಾಸ್ತ್ರಜ್ಜರು ಬ್ರಿಟಿಷ್ ಮತ್ತು ಆಸ್ತ್ರೇಲಿಯನ್ ಭೂಗರ್ಭ ಶಾಸ್ತ್ರಜ್ಜರು ಬೇರೆ ಬೇರೆಯಾಗಿ, ಬೇರೆ ಬೇರೆ ಕಾರಣಗಳಿಗಾಗಿ ಈ ದಿಸೆಯಲ್ಲಿ ಸಂಶೋಧನೆ ನಡೆಸುತ್ತಿದ್ದರು, ದಕ್ಷಿಣ ಅಮೇರಿಕಾ ಮತ್ತು ಆಫ್ರಿಕಾಗಳ ಅನೇಕ ಪ್ರಾಚೀನ ಶಿಲಾಪದರದ ಕಲ್ಲುಗಳು ಸಹಾರಾ ಮರುಭೂಮಿಯತ್ತಲೇ ತಮ್ಮ ಧ್ರುವರೇಖೆಯನ್ನು ಶಾಶ್ವತವಾಗಿ ಉಳಿಸಿಕೊಂಡಿದ್ದವು. ಆಫ್ರಿಕಾದಲ್ಲಿ ಹಿಂದೊಮ್ಮೆ ಧ್ರುವಬಿಂದು ಇತ್ತೆಂಬುದಕ್ಕೆಇದೊಂದು ಪ್ರಧಾನ ಸಾಕ್ಷಿಯಾಯಿತು.

ಸಹಾರಾದ ಬಳಿಯ ಸಮುದ್ರತಳವನ್ನು ಪರೀಕ್ಷೆ ಮಾಡಲಾಯ್ತು. ಸಮುದ್ರ ತಳದಲ್ಲಿ ಅಗಾಧವಾದ ಗ್ರಾನೈಟ್ ಬಂಡೆಗಳು ರಾಶಿ ರಾಶಿ ಉರುಳಿದ್ದವು. ಎಂದರೆ ಇದರರ್ಥ ಹಿಮನದಿಗಳು ಬಂದು ಸಮುದ್ರವನ್ನು ಸೇರುತ್ತಿದ್ದ ಜಾಗಗಳಿವು ಎಂದು. ಕೇವಲ ಹಿಮನದಿಗಳು ಮಾತ್ರ ಘನೀಭವಿಸಿದ ಹಿಮದ ಚಪ್ಪಡಿಗಳನ್ನು ಜರುಗಿಸುತ್ತಾ ಇಂಥ ಬೃಹತ್ ಪ್ರಮಾಣದ ಕಲ್ಲುಗಳನ್ನು ಸಮುದ್ರಕ್ಕೆ ಸಾಗಿಸಬಲ್ಲವು. ಈ ಕಲ್ಲುಗಳು ಸಮುದ್ರದೊಳಗಿನ ಬಂಡೆಗಳಾಗಿರದೆ ಭೂಮಿಯ ಮೇಲೆ ದೊರೆಯುವ ಗ್ರಾನೈಟ್ ಮತ್ತು ಕ್ವಾರ್ಟ್ಸ್ ಕಲ್ಲುಗಳಾಗಿವೆ ಎಂಬುದು ಅಲ್ಲಿನ ಮುಖ್ಯಾಂಶ.

ಇಷ್ಟಲ್ಲದೇ ಸಹಾರಾದ ಮೇಲ್ಮೈನಲ್ಲಿ ಅನೇಕ ವಿಚಿತ್ರವಾದ, ಚಂದ್ರನಲ್ಲಿ ಕಾಣುವಂತಹ ಗುಳಿಗಳು ವೈಮಾನಿಕ ವೀಕ್ಷಣೆಗೆ ಕಾಣಸಿಗುತ್ತವೆ. ಇವನ್ನೆಲ್ಲಾ ಮೊದಲು ವಿಜ್ನಾನಿಗಳು ಉಲ್ಕಾಪಾತದಿಂದ ಆಗಿರುವ ಗುಂಡಿಗಳಿರಬಹುದು ಎಂದು ಊಹಿಸಿದ್ದರು, ಆದರೆ ಒಮ್ಮೆ ಸಹಾರಾ ದಕ್ಷಿಣ ಧ್ರುವ ವಾಗಿತ್ತೆಂಬ ಕಲ್ಪನೆ ಬಂದನಂತರ ಇವು ಚಿಕ್ಕ ಚಿಕ್ಕ ಜ್ವಾಲಾಮುಖಿಗಳ ಬಾಯಿಗಳೆಂದು ಗೊತ್ತಾಯಿತು. ಮೇಲೆ ಕೊರೆಯುವ ಹಿಮದ ಚಪ್ಪಡಿಗಳಿದ್ದಾಗ ಮಾತ್ರ ಜ್ವಾಲಾಮುಖಿಗಳ ಬಾಯಿ ಈ ರೀತಿ ವಿಚಿತ್ರ ಸ್ವರೂಪವನ್ನು ತಾಳುತ್ತದೆಂದು ಈಗ ಐಸ್ ಲ್ಯಾಂಡ್ ದೇಶದಲ್ಲಿರುವ ಜೀವಂತ ಜ್ವಾಲಾಮುಖಿಗಳ ಸಾದೃಶ್ಯದಿಂದ ಕಂಡುಕೊಂಡರು.

ಈ ಎಲ್ಲಾ ಸಾಕ್ಷ್ಯಾಧಾರಗಳ ಅನಂತರ ಸಹಾರಾ ಈಗಿನ ಭಯಂಕರ ಮರಳುಗಾಡಿನ ಹವಾಮಾನದ ಪರಿಸ್ಥಿತಿಗೆ ತದ್ವಿರುದ್ಧವಾದ, ಹಿಮಮಯ ಕೊರೆಯುವ ಚಳಿಯ ಪ್ರದೇಶವಾಗಿತ್ತು ಎಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಾದರೆ ಈಗಿನ ಧ್ರುವ ಪ್ರದೇಶವಾಗಿರುವ ಅಂಟಾರ್ಟಿಕ ಆರ್ಕಿಟೆಕ್ಟ್ ಗಳು ಏನಾಗಿದ್ದವು? ಈ ಪ್ರಶ್ನೆಗೆ ಉತ್ತರವನ್ನು ಧ್ರುವವಲಯದಲ್ಲಿ ಕವಿದಿರುವ, ಮಂಜಿನ ಭೀಕರ ಚಪ್ಪಡಿಗಳಡಿ ಹುದುಗಿರುವ ಆ ಪ್ರದೇಶಗಳ ಭೂಮಿಯಲ್ಲಿ ಹುಡುಕಬೇಕಾಗಿದೆ. ಮುಂದೆ ಭೂಗರ್ಭ ಶಾಸ್ತ್ರಜ್ನರು ಇದಕ್ಕೆ ಉತ್ತರ ಕಂಡುಹಿಡಿಯಬಹುದೇನೋ? ಹೇಳಲಾಗದು .[೧] [೨] [೩]

  1. ವಿಸ್ಮಯ (ಕೆ.ಪಿ.ಪೂರ್ಣಚಂದ್ರ ತೇಜಸ್ವಿ)
  2. ಪರಿಸರದ ಕಥೆ (ಪೂರ್ಣಚಂದ್ರ ತೇಜಸ್ವಿ)
  3. ಬಾನಾಮತಿ (ಡಾ.ಸಿ.ಆರ್.ಚಂದ್ರಶೇಖರ್)