ಸದಸ್ಯ:Ramyashri.Dondole/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಎಂ ಗೋವಿಂದ ಪೈ[ಬದಲಾಯಿಸಿ]

ಬಾಲ್ಯ[ಬದಲಾಯಿಸಿ]

ಎಮ್. ಗೋವಿಂದ ಪೈ ಅವರು ಮಂಗಳೂರಿನ ಸಾಹುಕಾರ ತಿಮ್ಮಪ್ಪ ಪೈ ಅವರ ಹಿರಿಯ ಮಗ. ಇವರಿಗೆ ಮೂವರು ತಮ್ಮಂದಿರು ಮತ್ತು ಮೂವರು ಸಹೋದರಿಯರಿರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಎಮ್. ಗೋವಿಂದ ಪೈ ಅವರ ಪದವಿ ಪೂರ್ವದ ವಿದ್ಯಾಭ್ಯಾಸ ಮಂಗಳೂರಿನಲ್ಲಿ ನಡೆಯಿತು. ಅವರ ಒಡನಾಡಿಗಳಲ್ಲಿ ಎಮ್. ಎನ್. ಕಾಮತ್ ಒಬ್ಬರು. ಅವರಿಗೆ ಪಾಠ ಕಲಿಸಿದ ಗುರುವರ್ಯರಲ್ಲಿ ಪಂಜೆ ಮಂಗೇಶರಾಯರೂ ಒಬ್ಬರು. ಬಿ.ಎ ಪದವಿ ಶಿಕ್ಷಣಕ್ಕಾಗಿ 1903-1906ರವರೆಗೆ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಾಯಿತು.ತಂದೆಯ ಮರಣದಿಂದಾಗಿ ಬಿ.ಎ ಪದವಿ ಪರೀಕ್ಷೆಯ ಮಧ್ಯದಲ್ಲಿಯೇ ಅವರು ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ವಹಿಸಬೇಕಾಯಿತು. ಬಿ.ಎ ಪದವಿ ಪಡೆಯಲಾಗದಿದ್ದರೂ ಇಂಗ್ಲಿಷ್ ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದುದರಿಂದ ಚಿನ್ನದ ಪದಕನ್ನು ಗಳಿಸಿದರು. ಅವರ ವ್ಯಾಸಂಗ ಅರ್ಧಕ್ಕೆ ನಿಂತರೂ ಅವರ ಅಧ್ಯಯನ ಮಾತ್ರ ನಿರಾತಂಕವಾಗಿ ಸಾಗಿತು. ಅವರು ತಮ್ಮ ತಾಯಿಯ ಊರಾದ ಮಂಜೇಶ್ವರದಲ್ಲಿ ಹುಟ್ಟಿದರು. ಆಕೆಯ ಮೂಲಕ ತಮಗೆ ದತ್ತವಾದ ಆಸ್ತಿಯನ್ನು ನೋಡಿಕೊಂಡು ಅಲ್ಲಿಯೇ ನೆಲೆಸಿದ್ದರಿಂದ ಅವರನ್ನು ಮಂಜೇಶ್ವರದ ಗೋವಿಂದ ಪೈ ಎಂದೇ ಕರೆಯುವುದು ರೂಢಿಯಾಯಿತು.

ಜೀವನ ಮತ್ತು ಸಾಹಿತ್ಯ ಕೃಷಿ[ಬದಲಾಯಿಸಿ]

ಅವರ ಪತ್ನಿ ಕೃಷ್ಣಾಬಾಯಿ ತನ್ನ 45ನೇ ವರ್ಷದಲ್ಲಿ ತೀರಿಕೊಂಡರು. ಅವರು ಬದುಕಿದ್ದಷ್ಟು ಕಾಲ ಉಬ್ಬಸದಿಂದ ಬಳಲುತ್ತಿದ್ದರು. ತಮ್ಮ ಪತ್ನಿಯನ್ನು ಗೋವಿಂದ ಪೈ ತಾವೇ ಮಗ್ಗುಲ ದಾಯಿಯಂತೆ ನೋಡಿಕೊಳ್ಳಬೇಕಿತ್ತು ಎಂದು ಅವರ ಆತ್ಮಕಥನದಲ್ಲಿ ಹೇಳಲಾಗಿದೆ. ತನ್ನ ಪತ್ನಿಯ 46ನೇ ವರ್ಷಗಳ ನೆನೆಪಿಗಾಗಿ 35 ವೃತ್ತಗಳುಳ್ಳ ಪ್ರಸಾರಹಿತವಾದ ಗುಮ್ಮಟ ಸ್ತುತಿ ಎಂಬ ಒಂದು ಕವಿತೆಯನ್ನು ರಚಿಸಿದರು.1928 ನೆಯ ಜನವರಿಯಲ್ಲಿ ಪ್ರಕಟಿಸಿ ಅದನ್ನು ಅವರಿಗೆ ಕಾಣಿಕೆ ನೀಡಿದರು (ಆತ್ಮಕಥನ, ಕನ್ನಡದ ಮೊರೆ) ಎಂದುತಾವೇ ಹೇಳಿಕೊಂಡಿರುತ್ತಾರೆ. ಅವರ ಪತ್ನಿಯ ನೆನಪಿಗಾಗಿ 87 ಕವಿತೆಗಳನ್ನು ಬರೆದು ನಂದಾದೀಪವೆಂಬ ಕವನ ಸಂಕಲನವೊಂದನ್ನು ಅಣಿಗೊಳಿಸಿದರು. ಮಕ್ಕಳಿಲ್ಲದ ತಮ್ಮ ಉಳಿದ ಆಯುಷ್ಯವನ್ನು ತಮ್ಮ ತಮ್ಮನಾದ ಸುಬ್ರಾಯ ಪೈ ಯವರ ಸಂಸಾರದ ನೆರವಿನಿಂದ ಕಳೆದರು. ಮನೆಯ ಮೇಲ್ವಿಚಾರಣೆಯ ಹೊಣೆಯನ್ನೆಲ್ಲಾ ತಮ್ಮನಿಗೆ ವಹಿಸಿಕೊಟ್ಟು , ತಾವು ಸರ್ವದಾ ಶಾರದೋಪಾಸನೆಯಲ್ಲಿ ನಿರತರಾದರು. ತಮ್ಮ ವ್ಯಾಸಾಂಗದ ಕೋಣೆಯಲ್ಲಿ ಗೋಡೆಗೆ ತೂಗು ಹಾಕಿದ್ದ ಪತ್ನಿಯ ಭಾವಚಿತ್ರಕ್ಕೆ ಪ್ರತಿನಿತ್ಯವೂ ಒಂದು ಪುಷ್ಪವನ್ನು ಸಮರ್ಪಿಸದೆ ದಿನದ ಕೆಲಸ ಮೊದಲಾಗುತ್ತಿರಲಿಲ್ಲ ಎಂದು ಮಾಸ್ತಿಯವರ ಮಾತಿನಿಂದ ತಿಳಿದು ಬರುತ್ತದೆ. ಮುಪ್ಪಿನಲ್ಲಿಯೂ ಮುಗ್ದರಂತೆ ಕಂಡುಬಂದ ಪೈಯವರನ್ನು ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಕವಿತೆಯಲ್ಲಿ ‘ಬೆಳ್ಳಿ ಮೀಸೆಯ ಮಗು’ ಎಂದು ಕರೆದರು. ಪೈಯವರು 6-9-1963 ನೆಯ ಶುಕ್ರವಾರದಂದು ತನ್ನ ಎಂಭತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು.

ಕಾವ್ಯಕ್ಷೇತ್ರ[ಬದಲಾಯಿಸಿ]

ಎಮ್. ಗೋವಿಂದ ಪೈ ಅವರ ಕನ್ನಡದ ಸಂಶೋಧಕರಾಗಿದರು. ಆದರೆ ಅವರ ಸಾಹಿತ್ಯ ವ್ಯವಸಾಯ ಕಾವ್ಯಸೃಷ್ಟಿಯಿಂದ ತೊಡಗಿತೆನ್ನುವುದನ್ನು ನಾವು ಮರೆಯುವಂತಿಲ್ಲ. ಈ ಕಾವ್ಯ ಪ್ರೇರಣೆ ಅವರಿಗೆ ಹೇಗಾಯಿತೆನ್ನುವುದನ್ನು ಅವರೇ ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ. ತನ್ನ ತಮ್ಮನ ಮುಂಜಿಯ ಗಡಿಬಿಡಿಯಲ್ಲಿ ಎತ್ತಲಿಂದಲೋ ಯಾವುದೋ ಹಾಡು ಕೇಳಿ ಬಂದು ಅವರ ಸುಪ್ತಚಿತ್ತವೂ ಚೇತರಿಸಿಕೊಂಡಿತಂತೆ. ಕೂಡಲೇ ಏಕಾಂಮ್ತ ಸ್ಥಳದಲ್ಲಿ ಕುಳಿತು ತಮ್ಮ ಲೇಖಣಿ ಅಣಿಗೊಳಿಸಿದರಂತೆ “ಹೀಗೆ ಸಾಹಿತ್ಯ ಮಂದಿರದ ಹೊಸ್ತಿಲಲ್ಲಿ ಅಕಾಂಡವಾಗಿ ಎಡವಿದೆ ಮುಚ್ಚು ಕದಕ್ಕೆ ಡಿಕ್ಕಿ ಹೊಡೆದೆ. ಅಗುಳಿ ಇಲ್ಲದ ಬಾಗಲು ಹಾರಿತು. ಒಳಹೊಕ್ಕೆ.ನನ್ನ ಜೀವಮಾನದಲ್ಲಿ ಅದೊಂದು ಅಮಗ (ಉತ್ಸವ ಸಮಯ). ನೆನೆಪಿನಲ್ಲಿ ಹಚ್ಚಿ ಚುಚ್ಚಿದಂಮ್ತಿರುವ ಆ ದಿನವನ್ನು ಎಂದಿಗೂ ಮರೆಯುಂತಿಲ್ಲ” ಎಂದು ತಿಳಿಸಿರುವರು. ಮೊದಮೊದಲು ಕೆಲವು ನಾಟಕಗಳನ್ನು ಬರೆಯಲು ಹೊರಟರು. ಅವರಿಗೆ ತೃಪ್ತಿ ನೀಡಲಿಲ್ಲ ಅನಂತರ ಕವಿತೆಯತ್ತ ಅವರ ಚಿತ್ತ ಹೊರಳಿತು. ಅದೂ ಒಂದು ಆಕಸ್ಮಿಕವೇ ಸರಿ. 1900ರಲ್ಲಿ ಮಂಗಳೂರಿನಿಂದ ‘ಸುಹಾಸಿನಿ’ ಎಂಬ ಪತ್ರಿಕೆ ಪ್ರಕಟವಾಗತೊಡಗಿದೆ. ಅದಕ್ಕೆ ಎಮ್. ಗೋವಿಂದ ಪೈ ಅವರು ‘ಸುಹಾಸಿನಿ’ ಎಂಬ ಹೆಸರಿನಲ್ಲಿಯೇ ಮೂರು ಕಂದ ಪದ್ಯಗಳನ್ನು ಬರೆದು ಕಳುಹಿಸಿದರು. ಅದು ಆ ಪತ್ರಿಕೆಯಲ್ಲಿ ಪ್ರಕಟವಾದುದಲ್ಲದೆ ಅದಕ್ಕಾಗಿ ಇಟ್ಟಿದದ್ ಮೂರು ರುಪಾಯಿ ಬಹುಮಾನವೂ ಬಂದಿತು. ಆಗ ಪೈ ಅವರು ಎಂಟನೇ ತರಗತಿಯಲ್ಲಿ ಓದುತ್ತಿದ್ದರು. ಕೇವಲ ಅಹದಿನೆಳು ವರ್ಷದ ಹುಡುಹ ಇದರಿಂದ ಉತ್ತೇಜಿತರಾಗಿ ಮೇಲಿಂದ ಮೇಲೆ ಪದ್ಯಗಳನ್ನು ಬರೆದರು. ಆ ಕಾಲಕ್ಕೆ ತಕ್ಕಂತೆ ಕಂದ ವೃತ್ತಗಳಲ್ಲಿಯೇ ತಮ್ಮ ಪದ್ಯಗಳನ್ನು ಬರೆಯುತ್ತಿದ್ದರು. ದ್ವಿತಿಯಾಕ್ಷರ ಪ್ರಾಸದ ಬಗ್ಗೆ ಅವರಿಗೆ ಕುತೂಹಲ ಕೆರಳಿತು.ಅದನ್ನು ಬಿಡಬಾರದೇಕೆ ಎಂದೆನಿಸಿತ್ತು. ಈ ವೇಳೆಗೆ ಅವರ ಗುರುಗಳಾಗಿದ್ದ ಪಂಜೆ ಮಂಗೇಶರಾಯರೊಂದಿಗೆ ವಿಚಾರ ನಡೆಸಿದ್ದರು. ಅವರಿಂದ ಸೂಕ್ತವಾದ ಪ್ರತಿಕ್ರಿಯೆ ಬರಲಿಲ್ಲ.ಆನಂತರ 1911ರಲ್ಲಿ ಬಡೊದೆಗೆ ಹೋಗಿದ್ದಾಗ ಅಲ್ಲಿ ಇದೇ ಚಿಂತನೆಯಲ್ಲಿಯೇ ಅಡ್ಡಾಡುತ್ತಿದ್ದಾಗ ಈ ಪ್ರಾಸೋಲ್ಲಂ ಘಟನೆಯನ್ನು ಮಾಡುವುದೇ ಸರಿಯೆಂದು ನಿರ್ದರಿಸಿದರು. ಅವರ ಮಾತಿನಲ್ಲಿಯೇ ಹೇಳುವುದಾದರೆ “ಪ್ರಾಸವನೀಗಲೆ ತೊರೆದು ಬಿಡುವುದು ನಿಶ್ಚಿಯಂ” ಎಂದು ಶಪಥ ಮಾಡಿದರು. ಆ ಬಳಿಕ ರವೀಂದ್ರರ ಎರಡು ಗೀತೆಗಳನ್ನು ಮಹಮ್ಮದ್ ಇಕ್ಬಾಲ್ ಅವರ ಒಂದು ಪದ್ಯವನ್ನು ಅನುವಾದಿಸಿದರು. ಅಂದಿನ‘ಸ್ವದೇಶಾಭಿಮಾನಿ’ ಪತ್ರಿಕೆಯಲ್ಲಿ ಅವುಗಳು ಪ್ರಕಟವಾದಾಗ ದೊಡ್ಡ ಹುಯಿಲೆ ಎದ್ದಿತೆಂದು ತಿಳಿದು ಬರುತ್ತದೆ. ಅನಂತರ ಅವರ ಗಮನ ಇಂಗ್ಲಿಷ್ ಕವಿತೆಗಳಲ್ಲಿ ಪ್ರಯೋಗವಾಗುತ್ತಿದ್ದ ಅಂತ್ಯಾಕ್ಷರ ಪ್ರಾಸಕ್ಕೆ ಹೆಚ್ಚಾಗಿ ಮನವೊಲಿದಂತೆ ಕಾಣುತ್ತದೆ. ಆಧುನಿಕ ಕನ್ನಡ ಕವಿತೆಗಳು ಬಳಕೆಗೆ ಬಂತಂತೆಲ್ಲಾ ಪೈ ಅವರ ಕಾವ್ಯ ಸಾಮ್ರಾಜ್ಯ ವಿಜೃಂಭಿಸಲಾರಂಭಿಸಿತು. 1990ರಲ್ಲಿ ಪ್ರಾರಂಭವಾದ ಅವರ ಕವಿತಾ ರಚನೆ 1930 ರ ವೇಳೆಗೆ ಸಾಕಷ್ಟು ಪುಷ್ಟಿ ಪಡೆದಿದ್ದನ್ನು ಮನಗಂಡ ಅವರ ಗುರುಗಳಾದ ಪಂಜೆಮಂಗೇಶರಾಯರು, ಅವರ ‘ಗಿಳಿವಿಂಡು’ ಎಂಬ ಮೊತ್ತಮೊದಲನೆಯ ಕವನ ಸಂಕಲನವನ್ನು ‘ಬಾಲ ಸಾಹಿತ್ಯ ಮಂಡಲ’ದ ಮೂಲಕ ಬೆಳಕಿನ ತಂದರು. ಈ ಪುಸ್ತಕದ ಅಳಿದುಳಿದ ಪ್ರತಿಗಳನ್ನು ಪೈ ಅವರೇ ದುಡ್ಡು ತೆತ್ತು ತರಿಸಿಕೊಂಡರಂತೆ. ಈ ಅನುಭವಕ್ಕೆ ಅವ್ರು “ಹೂವು ಮೂಸಿದರೆಒಂದು ವಾಸನೆ, ತಿಕ್ಕಿದರೆ ಒಂದು ವಾಸನೆ” ಎಂದಿರುತ್ತಾರೆ. ಅವರ ಎರಡನೇ ಕವನ ಸಂಕಲನವಾದ ನಂದಾದೀಪದ ಸಂಕಲನದ ರೂಪುರೇಷೆಗಳನ್ನೆಲ್ಲಾ ಅಣಿಗೊಳಿಸಿದ್ದರು. ಆದರೆ ಈ ಅಪೂರ್ವ ಸಂಕಲನ ಅವರ ಜೀವಿತಾವಧಿಯಲ್ಲಿ ಪ್ರಕಟವಾಗಲಿಲ್ಲ. ಪ್ರಕಾಶಕರು ಎಚ್ಚರಿಕೆ ವಹಿಸಿ ಪೈ ಅವರ ಸೂಚನೆಗಳನ್ನು ಚಾಚೂ ತಪ್ಪದೆ ಇದನ್ನು ಬೆಳಕಿಗೆ ತಂದಿರುತ್ತಾರೆ. ಗಿಳಿವಿಂಡುವಿನಲ್ಲಿ ಒಟ್ಟು 46 ಪದ್ಯಗಳಿದ್ದರೆ, ನಂದಾದೀಪದಲ್ಲಿ 37 ಪದ್ಯಗಳಿವೆ. ಗೋವಿಂದ ಪೈ ಅವರ ಕೃತಿಗಳ ಪ್ರಕಟನೆಯ ಸರ್ವಸ್ವಾಮ್ಯವನ್ನು ಪಡೆದ ಮೈಸೂರಿನ ಕಾವ್ಯಾಲಯದವರು ಅಲ್ಲಿ ಇಲ್ಲೈ ಪತ್ರಿಕೆಗಳಲ್ಲಿ ಚೆದುರಿಹೋಗಿದ್ದ ಕವನಗಳನ್ನು ಹುಡುಕಿ, ತಡಕಿ, 1969 ರಲ್ಲಿ ‘ಹೃದಯರಂಗ’ ಎಂಬ ಮೂರನೆಯ ಕವನ ಸಂಕಲನವನ್ನು ಪ್ರಕಟಿಸಿದರು. ಇದರ ಶೀರ್ಷಿಕೆ ಮತ್ತು ಕವನ ಕ್ರಮಗಳ ಹೊಣೆಯೆಲ್ಲಾ ಪ್ರಕಾಶಕರದೇ ಸರಿ. ಇದರಲ್ಲಿ ವೈವಿದ್ಯಪೂರ್ಣಾವಾದ 44 ಪದ್ಯಗಳಿವೆ. ಕಾವ್ಯಾಲಯದ ಒಡೆಯರಾಗಿದ್ದ ಕೂಡಲಿ ಚಿದಂಬರಂ ಅವರು ‘ವಿಟಂಕ’ ಎಂಬ ಹೆಸರಿನಲ್ಲಿ ಪೈ ಅವರ ನಾಲ್ಕನೆಯ ಕವನ ಸಂಕಲನಕ್ಕಾಗಿ 35 ಪದ್ಯಗಳನ್ನು ಆರಿಸಿ ಕೂಡಿಸುವ ಕಾರ್ಯದಲ್ಲಿ ತೊಡಗಿದ್ದರು. ಅವುಗಳಲ್ಲಿ ಕೆಲವು ಮಾತ್ರ ದೊರೆತಿದ್ದುದರಿಂದ ಈ ಸಂಕಲನ ಕಾರ್ಯ ಸ್ಥಗಿತವಾಯಿತು. ಈಗ ಸದ್ಯದಲ್ಲಿಯೇ ಆ ಕವನ ಸಂಕಲನವೂ ಹೊರಬರಲಿದೆ. ಇವುಗಳಲ್ಲದೆ ಎಮ್. ಗೋವಿಂದ ಪೈ ಅವರ ‘ಗೋಲ್ಗೊಥಾ’ ಮತ್ತು ‘ವೈಶಾಖಿ’ ಎಂಬ ನೀಳ್ಗವಿತೆಗಳು ಮೊದಲು ಬಿಡಿಬಿಡಿಯಾಗಿ ಇಅಚ್ಚಾಗಿ, ಅನಂತರ ಕಾವ್ಯಾಲಯದವರು ಎರಡನ್ನೂ ಒಟ್ಟುಗೂಡಿಸಿ ಈವರೆಗೆ ನಾಲ್ಕು ಮುದ್ರಗಳನ್ನು ತಂದಿದ್ದಾರೆ. ಎಮ್. ಗೋವಿಂದ ಪೈ ಅವರು ಆಗೊಮ್ಮೆ ಈಗೊಮ್ಮೆ ಈ ಕವಿತೆಗಳನ್ನು ರಚಿಸಿದೆನೆಂದೂ ಹೇಳಿಕೊಂಡಿದ್ದರೂ ಇವುಗಳಲ್ಲಿ ವಾಕ್ತವಾಗುವ ಭಾವವೈವಿಧ್ಯ, ಪ್ರಕಾರ ನೈಪುಣ್ಯ ಮತ್ತು ಶೈಲಿವೈಶಿಷ್ಟ್ಯಗಳು ಅಧ್ಯಯನ ಮಾಡುವವರಿಗೆ ಸಾಕಷ್ಟಿವೆ.ವ್ ವಿ.ಎಂ ಇನಾಂದಾರರು ತಮ್ಮ ಒಂದು ಪುಸ್ತಕದಲ್ಲಿ ನಿರ್ದೇಶಿಸಿರುವಂತೆ ‘ಅವರ ಕಾವ್ಯಚೈತನ್ಯವನ್ನು ನಿಲ್ಲಿಸಿ ನಡೆಸುವ ಕಲ್ಪನಾ ವಿಲಾಸ ಸತ್ವಯುತವಾದುದು, ನೀಡುಗಣ್ಣ ನೋಟದಿಂದ ಬದುಕನ್ನು ನೋಡುವವನ, ಅನುಭವಿಸಿದವನ ಧೀರತೆಯುಳ್ಳದ್ದು; ತಲಸ್ಪರ್ಶಿಯಾದ ವಿದ್ವತ್ತಿನಿಂದಾಗಿ ಈಡು, ಆಳ ವಿಸ್ತಾರಗಳನ್ನು ಪಡೆದು ಹಿರಿಯ ಸಾಹಿತ್ಯ ವ್ಯಾಸಾಂಗದಿಂದ ಶ್ರೀಮಂತವಾದದ್ದು; ಸಮತೂಕದ ದೃಷ್ಟಿಯಿಂದಾಗಿ ಅರ್ಥಪೂರ್ಣವಾದದ್ದು; ಸಂವೇದನಾಶಿಲವಾದ ಮನಸ್ಸಿನಿಂದ ಮೊನೆಗೊಂಡದ್ದು”. ಇದೇ ಲೇಖಕರು ಹದಿನೆಂಟು ವರ್ಷವಾದ ಬಳಿಕವೂ ಎಮ್. ಗೋವಿಂದ ಪೈ ಅವರ ಸಂಕಲನಗಳನ್ನು ಪುನಃ ಪರಿಶೀಲಿಸಿದಾಗಲೂ ಅವರ ಅಭಿಪ್ರಾಯಗಳು ಅಂತೆಯೇ ಅಚಲವಾಗಿದೆಯೆಂದು ಬಳಿಕ ಪೈ ಅವರ ಕಾವ್ಯದ ಮೌಲ್ಯ ಎಷ್ಟು ಶಾಶ್ವತ ಎನ್ನುವುದನ್ನು ತಿಳಿಯಬಹುದು. ಎಮ್. ಗೋವಿಂದ ಪೈ ಅವರ ಕವನಗಳಲ್ಲಿ ನಮ್ಮ ಚಂಪೂ ಕವತೆಗಳಲ್ಲಿ ಕಂಡುಬರುವಂತೆ ಪ್ರತಿಭೆ ಮತ್ತು ಪಾಂಡಿತ್ಯಗಳೆರಡೂ ಹದವಾಗಿ ಕೂಡಿಕೊಂಡು ಬರುತ್ತವೆ. ಆದ್ದರಿಂದ ಒಮ್ಮೊಮ್ಮೆ ಅದು ಕಬ್ಬಿಣದ ಕಡಲೆಯಂತೆ ತೋರಿರಬಹುದು. ಅವರು ತಾವು ಬರೆಯುವ ಅಪೂರ್ವ ಶಬ್ದಗಳಿಗೆ, ಇಲ್ಲ ತಾವೇ ಸೃಷ್ಟಿಸುವ ಪದಗಳಿಗೆ ಅಡಿಟಿಪ್ಪಣಿಗಳನ್ನು ಕೊಡುವುದನ್ನು ಕಂಡು ಬೆರಗಾಗಬಹುದು. ಅವರ ಪಾಲಿಗೆ ಈ ಕ್ರಿಯೆ ಕೇವಲ ಒಂದು ಚಪಲವಲ್ಲ; ಅದೊಂದು ಅಪೂರ್ವವಾದ ಕಲಾಕೌಶಲï, ಕಲ್ಪನೆ ಮತ್ತು ಕಲೆಗಳ ಮಧುರ ಸಮನ್ವಯ. ಅವರಿಗೆ ಕವಿ ಕಾವ್ಯಗಳಲ್ಲಿರುವ ಶ್ರದ್ದೆ ಮತ್ತು ಗೌರವಗಳು ಅಪಾರವಾದುದು. ಪೈ ಅವರು ‘ಕವಿತಾವತಾರ’ವೆಂಬ ಕವನದಲ್ಲಿ ಆದಿಕವಿ ವಾಲ್ಮೀಕಿಯನ್ನು ನೆನೆದು, “ಸುಯ್ಯೊಂದು, ನರುಕಂಬನಿಯೊಂದು, ಬಿಕ್ಕೊಂದು-ಕವಿತೆ ಗಡ ಮರುಕಂ” ಎಂದು ಹೇಳಿರುವ್ ಅಮಾತು ಔಪಚಾರಿಕವಲ್ಲ; ಅದು ಅವರ ಅತಃಕರಣದ ಅನುಭವವೂ ಹೌದು. ‘ಕವಿತೆ’ಯ ಕರ್ಮವನ್ನು, ಮರ್ಮವನ್ನು ಚೆನ್ನಾಗಿ ಚಿಂತನೆ ಮಾಡಿರುವ ಅವರು “ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತನಿಗೀಡಿ, ಕವಿತೆ ನವರಸ ರಂಗವದು, ತ್ರಿವೆಣಿಯ ಸಂಗಮಿದೋ ನೆನಸು ಕನಸು ಮನಸ್ಸಿನ ತ್ರಿತಯಮೊಡಗೂಡಿ” ಎಮ್ದು ವರ್ಣಿಸಿದ್ದರಿಂದ ಅದರ ಬಗ್ಗೆ ಲಘುವಾಗಿ ಭಾವಿಸುವವರಲ್ಲ. ಕವಿತೆಗೆ ಶೋಭಾವಹವಾದ, ಪ್ರಾಸ, ಛಂದಸ್ಸು, ಶೈಲಿ, ಅರ್ಥಲಾಲಿತ್ಯಗಳನ್ನು ಪುರಸ್ಕರಿಸುವ ಸ್ವಭಾವ ಅವರದು. ಬ್ರಹ್ಮಸೃಷ್ಟಿ ಕಾಲಾಧೀನವಾದದ್ದಾದರೆ, ಕವಿಯ ಸೃಷ್ಟಿ ಕಾಲಾತೀತವಾದದ್ದು ಎನ್ನುವುದನ್ನು ತಮ್ಮ ‘ಬರ್ದಿಲ’ವೆಂಬ ಕವನದಲ್ಲಿ ಸಕಾರಣವಾಗಿ ಪ್ರತಿಪಾದಿಸಿದ್ದಾರೆ. “ ಕಾವ್ಯಂ ನ ಮಮಾರ ನ ಜೀರ್ಯತಿ” (ಕಾವ್ಯಕ್ಕೆ ಮರಣವಿಲ್ಲ, ಮುಪ್ಪಿಲ್ಲ) ಎಂಬ ಉನ್ನತ ಧ್ಯೇಯದಿಂದ ಪ್ರೇರಿತವಾಗಿ ಕಾವ್ಯಕ್ಷೇತ್ರದಲ್ಲಿ ಪ್ರವೇಶಿಸಿದ ಅವರು ನಿರ್ವಹಿಸಿರುವ ಕಾರ್ಯ ಭವ್ಯ ಪ್ರಯತ್ನವೇ ಸರಿ.

ಸಾಹಿತ್ಯ ಮತ್ತು ಸಮಷ್ಟಿತೆ[ಬದಲಾಯಿಸಿ]

ಎಮ್. ಗೋವಿಂದ ಪೈ ಅವರ ಕಾವ್ಯ ಸೃಷ್ಟಿಯನ್ನು ಸಮದೃಷ್ಟಿಯಿಂದ ಸಮೀಕ್ಷಿಸಿದಾಗ ಅಲ್ಲಿ ಪ್ರಧಾನವಾಗಿ ದೇಶಭಕ್ತಿ, ದೈವ ಭಕ್ತಿ, ಮಾನವೀಯತೆ, ವಿಭೂತಿಸ್ತುತಿ, ಮತ್ತು ಪ್ರಕೃತಿ ಪ್ರೇಮಗಳ ಪ್ರೇರಣೆಗಳನ್ನು ಗುರುತಿಸಬಹುದು. ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಕುಡಿಯೊಡೆದು, ಕನ್ನಡ ನಾಡಿನ ಸುತ್ತಲೂ ಬಳ್ಳಿವರಿದು, ಕಡೆಗೆ ಭಾರತಾಂಬೆಯ ಮುಡಿಯಲ್ಲಿ ಹೂವಾಗಿ ಅರಳಿ ಪರಿಮಳಿಸುತ್ತದೆ. ಈ ಸ್ವಾನುಭವ ಕಲ್ಪನಾವಿಲಾಸ ಮತ್ತು ವಿಚಾರಗಳೆರಡರಿಂದಲೂ ಪುಷ್ಟಿಪೂರ್ಣವಾದದ್ದು “ಜಯ ಜಯ ತುಳುವ ತಾಯೇ ಮಣಿವೆ, ತಂದೆ ತಾಯಂದಿರ ತಾಯೇ, ಭುವನದಿ ತ್ರಿದಿವಚ್ಚಾಯೆ” ಎಂದು ಮೊದಲಾಗುವ ಈ ತುಳುವ ಮಾತೆಯ್ ಸಸ್ತುತಿಯಲ್ಲಿ. ಆ ಪ್ರದೇಶದ ಐತಿಹ್ಯ್, ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನೆಲ್ಲಾ ಹೇಳಿ, ಕೇಳುಗರನ್ನೆಲ್ಲಾ ಹುರಿದುಂಬಿಸುತ್ತಾರೆ. ಅದು ಪರಶುರಾಮನ ಕೊಡಲಿಯ ಮೊನೆಯಿಂದ ಮುಡಿ ಬಂದರೂಭರತ ಮಾತೆಯ ತೊಡೆಯ ಒಂದುಭಾಗವೆನ್ನುವುದನ್ನು ಮರೆಯುವಂತಿಲ್ಲ. ಅ ತುಳುವ ಮಾತೆಯನ್ನು ಕುರಿತು ‘ಮರಳಿ ಬಾರ, ಕಂದಾ ನನ್ನುದರದಿ” ಎಂದು ಹರಕೆಯನ್ನು ಕೋರಿ ತಮ್ಮ ತವರುನಾಡಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಅನಂತರ ಕನ್ನಡ ನಾಡಿನ ಕಡೆಗೆ ಅವರ ದೃಷ್ತಿ ಹರಿದಾಗ, ಅವರ ಅಂತರಂಗ ಮತ್ತಷ್ಟು ಮಿಗಿಲಾಗಿ ಮಿಡಿಯುವುದು. “ ತಾಯೇ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ, ಹರಸು ತಾಯೇ, ಸುತರ ಕಾಯೇ, ನಮ್ಮ ಜನ್ಮದಾತೆಯೇ” ಎಂದು ಅಂದು ಅವರು ಕೊರಳೆತ್ತಿಹಾಡಿದ ಹಾಡು, ಎಂದೆಂದಿಗೂ ಕನ್ನಡಿಗರ ತನುಮನಗಳಲ್ಲಿ ಮಾರ್ದನಿಸುತ್ತಿರುವುದು. “ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮೆವು” ಎಂಬ ಮಾತುಗಳು, ಅವರ ಬಾಯಿಂದ ಹೊರಹೊಮ್ಮಿದ ಮಂತ್ರಗಳೇ ಸರಿ! ಎಂದಿನಂತೆಯೇ ತಮ್ಮ ವ್ಯಕ್ತಿತ್ವಕ್ಕೆ ಅನುಗುನವಾಗಿ ಕನ್ನಡ ನಾಡಿನ ಪ್ರಕೃತಿ ಸಂಪತ್ತು, ಪೌರಾಣಿಕ ಮಹತ್ವ, ಚಾರಿತ್ರಿಕ ಹಿನ್ನಲೆ, ಸಾಹಿತ್ಯಿಕ ಸಾಧನೆ,ಧಾರ್ಮಿಕ ಸಹಿಷ್ಟುತ್ತೆ ಮತ್ತು ವಾಸ್ತುಶಿಲ್ಪಗಳ ವೈಭವನ್ನೆಲ್ಲಾ ಈ ಕವನ ಶಿಲ್ಪದಲ್ಲಿ ಕಡೆದಿರಿಸಿರುತ್ತಾರೆ. ಪ್ರಕೃತ ದುಸ್ಥಿತಿಯನ್ನು ಕಂಡು ಕವಿಯ ಕಂಠ ಗದ್ಗದಿತವಾಗಲು “ ನಿನ್ನ ಮೂರ್ತಿ ಜಗತ್ಕೀರ್ತಿ, ಎಂದಿಗೆಮೆಗೆ ತೋರುವೆ?” ಎಂದು ಕಂಬನಿಯೋಂದನ್ನು ಸುರಿಇಸಿ ಸಮಾಧಾನಕೊಳ್ಳುತ್ತಾರೆ. ( ಈ ಅಚ್ಚುಕಟ್ಟಾದ ಬಿಡಿಗವಿತೆಯನ್ನು ಓದುತ್ತಿದ್ದರೆ ‘ಶ್ರೀ’ ಅವರ ‘ಕನ್ನಡತಾಯ್ ನೋಟ’ ನಿಡಿದಾದ ಪ್ರಗಾಥದ ನೆನೆಪಾಗದೆ ಇರದು) ಗೋವಿಂದ ಪೈ ಅವರ ಈ ನಾಡಿನನೊಲುಮೆ ಮತ್ತಷ್ಟು ಮಹಾಪೂರವಾಗಿ ತುಂಬಿತುಳುಕಿ ಭಾರತಾಂಬೆಯತ್ತ ಧಾವಿಸುತ್ತದೆ. ಭಾರತ ಭೂಮಿಯ ಚೆಲುವು ನಲಿವುಗಳನ್ನು, ಮೆಲ್ಮೆ ಮಹಿಮೆಗಳನ್ನು ಬಣ್ಣಿಸಿದ ಬಾಯಿಗೆ ಆಕೆ ದಾಸ್ಯ ಶೃಂಖಲೆಯಲ್ಲಿ ತೊಳಲುತ್ತಿರುವುದನ್ನು ಕಂಡು ದುಃಖ ಒತ್ತರಿಸಿ ಬರುತ್ತದೆ. “ ಮೂಡುವನೆಂದೀಭಾರತ ಭಾಗ್ಯಭಾಸ್ಕರಂ? ಮರಳುವುದೆಂದೆಮಗಲಿದ ಸ್ವತಂತ್ರಮತಿ ಯಶಸ್ಕರಂ?” ಎಂದು ನಿಟ್ಟುಸಿರು ಬಿಡುತ್ತಾರೆ. “ಉದಾರ ಚರಿತಾನಾಂ ತು ವಸುದೈವ ಕುಟುಂಬಕಂ” ಎಂಬ್ ಭವಭೂತಿಯ ಮಾತಿನ ಸರಣಿಯನ್ನು ಸ್ಮರಿಸಿಯೋ ಏನೋ “ಭಾರತದಲ್ಲಿ ಸರ್ವಧರ್ಮಮೊಂದಲಿ ಸದನಂ ಮಾಣಿಸಲೀಕೆಯೆ ಸ್ವಸ್ತಿ ಧ್ವಜಮಧರ್ಮದೊಳಕದನಂ” ಎಂದು ಶುಭವನ್ನು ಕೋರುವರು. ಕಡೆಗೆ ‘ಭಾರತಾಂಬೆಯ ಮಹಿಮೆಯನ್ನು’ ಮತ್ತೆ ಮತ್ತೆ ಮೆಚ್ಚಿಕೊಂಡು “ಭಾರತವನಳಿಯುತ್ತ ನನಗೆ ಜೀವನವೆತ್ತ? ಭಾರತವೆ ನನ್ನುಸಿರು. ‘ನನ್ನೊಗೆದ ಬಸಿರು’ ಎಮ್ದು ತಮ್ಮ ಭಕ್ತಿಯ ಸುಮಮಾಲೆಯನ್ನು ಆಕೆಯ ಮುಡಿಗೆ ತೊಡಿಸಿ “ಭಾರತ ಯಶೋಗಾನವೆನ್ನೆಯ ತಾನ” “ಭಾರತಾಂಬೆಯ ಭಕ್ತಿ ನನಗಾತ್ಮ ಶಕ್ತಿ” ಎಂದು ಹಿಗ್ಗುವರು. ರಾಷ್ಟ್ರಾಭ್ಯುದಯದ ಹೊಂಗನಸನ್ನು ಕಾಣುತ್ತಿದ್ದ ಕವಿಗೆ, ಸ್ವಾತಂತ್ರ್ಯಾ ನಂತರದ ದುಃಖ ಪರಂಪರೆಯನ್ನು ಕಂಡು ಆದ ಹತಾಶೆ ಹೇಳತೀರದು. “ಇನ್ನು ಹೆರವರ ನೊಗಕೆ ಮಣೆವರಾವಲ್ಲ? ಆಗದಿ ತಲೆಯೆತ್ತಿ ಹೆಬ್ಬಾಳಲೆದ್ದಿಹೆವು; ಕಳಕೊಂಡ ಮರಳಿ ಗೆದ್ದಿಹೆವು: ನಡೆ ಮುಂದೆ, ಹೆಂದವಿನ್ನಡಿಮೆಯನ್ನೊಲ್ಲ!” ಎಂದು ಎತ್ತರಿದ ಅವರ ಧ್ವನಿ ಇದ್ದಕ್ಕಿಂದತೆಯೇ ಸ್ವಾತಂತ್ರ್ಯದಾತನನ್ನು ನೆನೆದು “ಏನು ತೋರಿಸಿದೆಮಗೆ? ಮೇಣೇನನಿತ್ತೆ: ಕಳಕೊಂಡ ಬಿಡುಗಡೆಯನೆಮಗಿತ್ತೆ ತಂದೆ! ಆದರೀಗಣ ಕಥೆಯ ಬಲ್ಲೆಯಾ ಮತ್ತೆ? ರಾಹುವನು ತುಲಗಿಸಿದೆ, ಕೇತುವನು ತಂದೆ!” ಎಂದು ಇಳಿಮುಖವಾಗುವುದು. ಗಾಂಧೀಜಿಯನ್ನು ಸ್ಮರಿಸಿ “ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು!” ಎಂದು ಯಾತನೆ ಪಡುವರು. ಮಾತೃಭೂಮಿಯನ್ನು ಈಶ್ವರನೆಂದು ಕಲ್ಪಿಸಿಕೊಂಡು ರಚಿಸಿರುವ ಅಷ್ಟಕದಲ್ಲಿ “ಅಧ್ವಶ್ರಾಂತಗೆ ಬೆಲ್ಲವಿತ್ತೊಡನೆ ನೀರಂ ನೀಡಬೇಡಾ” ಎಂದು ಪ್ರಶ್ನಿಸಿ, “ಕಾಯೈ ಪ್ರಾರ್ಥಿಸುವರು. ಸ್ವತಂತ್ರ ಭಾರತದ ಅತಂತ್ರವನ್ನು ವರ್ಷ ವರ್ಷವೂ ಬರೆದಿರುವ ಚತುರ್ದಶಪದಿಗಳನ್ನು ನೋಡಿದರೆ, ಕವಿಯ ಕಂಬನಿಯ ಕುಯ್ಲನ್ನು ಕಾಣಬಹುದು. ಎಮ್. ಗೋವಿಂದ ಪೈ ಅವರ ಈ ದೇಶಪ್ರೇಮ , ಸ್ವದೇಶಕ್ಕೆ ಮಾತ್ರ ಸೀಮಿತವಾಗದೆ, ದೂರದ ತುರ್ಕಿಯನ್ನು ಕಬಳಿಸಲು ಇಟಲಿಯು ಮಾದಿದ ಸನ್ನಾಹವನ್ನು ಖಂಡಿಸುವವರೆಗೂ ವ್ಯಾಪಿಸಿರುವುದು.

ಭಾಷಾಭಿಮಾನ[ಬದಲಾಯಿಸಿ]

ಇನ್ನು ನುಡಿಯಮೆಲಿನ ಅವರ ಅಭಿಮಾನವನ್ನು ಒಂದೆರಡು ಮಾತುಗಳಲ್ಲಿಯೇ ಹೇಳಿ ಮುಗಿಸಬಹುದು. ಅವರ ಮಾತೃಭಾಷೆ ಕೊಂಕಣಿಯಾದರೂ ಅವರ ಕೈಂಕರ್ಯವೆಲ್ಲ ಕನ್ನಡಕ್ಕೆ ಮೀಸಲಾಗಿತ್ತು. |ಈ ಬಗ್ಗೆ ಅವರೇ ಹೇಳಿಕೊಂಡಿರುವ ಮಾತುಗಳು ಮನನೀಯವಾಗಿದೆ. “ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ…. ಆದರೆ ತಾಯಿಯ ಮೊಲೆಯಲ್ಲಿಹಾಲಿಲ್ಲ. ಕೊಂಕಣಿಯಲ್ಲಿ ಸಾಹಿತ್ಯವಿಲ್ಲ. ಆಕೆ ಆ ಬಗ್ಗೆ ನನ್ನನ್ನು ಕನ್ನಡದ ಮೊರೆಯಲ್ಲಿ ಹಾಕಿದಳು. ಈ ದಾಯಿಯಾದರೆ ಪಯಸ್ವಿನಿ. ಅಷ್ಟು ಕಾಲದಿಂದ ಎಷ್ಟೋ ಕವಿಗಳನ್ನು ಊಡಿಸಿಯೂ ಮತ್ತೂ ಬತ್ತದ, ದೇವರ ದ್ಯೆಯಿಂದ ಸರ್ವದಾ ಬತ್ತಬಾರದ ಸದಾಸ್ನುಹಿ. ತನ್ನ ಮೊಲೆಯನ್ನು ಆಕೆ ತಾಯಿಗೂ ಮಿಕ್ಕ ಅಳ್ತಿಯಿಂದ ನನಗೆ ಉಣಿಸಿದಳು. ಆಕೆಯ ಅಕ್ಕರೆಯ ಸಾಲವನ್ನೂ ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ”. ಆಯಾ ಜನರ ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕೆಂಬ ತತ್ವವನ್ನು ಒಪ್ಪಿದ್ದ ಪೈ ಅವರು “ತನ್ನ ತಾಯ್ನುಡಿಯಿಂದ ದುಡಿದ ಬಿಜ್ಜೆಯೇ ಬಿಜ್ಜೆ! ಹೆರರ ನಾಲಗೆಯೆಂಜಲೆನ್ನಗಂ ಸವಿಯೋ?” ಎಂದು ಎಚ್ಚರಿಸಿರುವರು. ಎಮ್. ಗೋವಿಂದ ಪೈ ಅವರು ತಮ್ಮ ಕಾವ್ಯ ಪ್ರತಿಭೆಯನ್ನು ಯಾವ ಪಂಥ ಇಲ್ಲವೇ ಪ್ರಚಾರಕ್ಕೂ ಒತ್ತೆ ಇಟ್ಟವರಲ್ಲ. ಅವರಲ್ಲಿ ಸಾಂಪ್ರದಾಯಕವಾದ ಶ್ರದ್ಧೆ ಮತ್ತು ಆಧುನಿಕ ಪ್ರಜ್ಞೆಗಳೆರಡೂ ಸಹಜವಾಗಿ ಮೇಳವಿಸಿಕೊಂಡು ಬಂದಿರುತ್ತದೆ. ಆದ್ದರಿಂದ ಅವರಲ್ಲಿ ಜಾಗೃತವಾಗಿ ತೋರಿ ಬರುವ ಆಧ್ಯಾತ್ಮಿಕ ದೃಷ್ಟಿ ಹೇಗೆ ಸರ್ವಜನಾದರಣೀಯವಾಗಿದೆಯೆನ್ನುವುದನ್ನುಅವರ ಕೆಲೆವು ಕವನಗಳಿಂದ ಗ್ರಹಿಸಬಹುದು. ಪಂಢರಪುರದ ವಿಠೋಬನನ್ನು ಮೊದಲ್ಗೊಂಡು, ಯರೂಸೆಲೇಮಿನ ಯೇಸು ಕ್ರಿಸ್ತನವರೆಗೆ ಅವರ ಆಧ್ಯಾತ್ಮಿಕ ಧಾರೆ ಪ್ರವಹಿಸಿದೆ. ಅವತಾರ ಪುರುಷರಾದ ಶ್ರೀಕೃಷ್ಣ ಮತ್ತು ಬುದ್ಧರಲ್ಲಿ ಅವರಿಗೆ ಸಮಾನ ಭಾವನೆ. ಅವರ ಭಕ್ತಿ ಪ್ರತಿಪಾದನೆಯೂ ವಿಶಿಷ್ಟವಾದುದು. ಪಂಢರಪುರದ ವಿಠೋಬನ ಎದುರಿನಲ್ಲಿ ನಿಂತು, ಅವರ ಭಕ್ತರನ್ನೆಲ್ಲ ಸ್ಮರಿಸಿ, ಅವರನ್ನು ಸಲಹಿದಂತೆಯೇ ತನ್ನನ್ನು ಕಾಪಾಡಬೇಕೆಂದು ಕೇಳಿಕೊಳ್ಳುವ ವೈಖರಿಯ ವೈಭವವೇ ಬೇರೆ. ಆ ದೇವನ ಭಂಗಿಯನ್ನು ಕಂಡು “ನಡುವಲಿ ಕೆಯ್ಮಡಗುತ ನಿಡುನಿಂತೆ, ಕೃತಕೃತ್ಯನೊಲೆನ್ನ ಕಾವಮುಂತೆ ಮುಗಿವುದೆಂತು ನಿನ್ನ ಕೆಲಸವಂತೆ?” ಎಂದು ವಿನಂತಿ ಮಾಡಿಕೊಳ್ಳುವ ವಿಧಾನ ವಿನೂತನವಾದುದು. ಇಟ್ಟಿಗೆಯ ಮೇಲೆ ನಿಂತಿರುವ ಸ್ವಾಮಿಯನ್ನು ನೋಡಿ “ಹಳಸಿರದೆ ಅಂದಿನಿಟ್ತಿಗೆ ನಿನ್ನ? ನೋಡ ಜೀಯ ತಂದಿದೆ ಹೊಸತನ್ನ, ಮೆಟ್ಟಿ ನಿಲ್ಲು ನಿಷ್ಠುರ ಮನಮೆನ್ನ” ಎಂಬ ಪ್ರಾರ್ಥನೆ ಎಷ್ಟು ಚಿತ್ತಾಕರ್ಷಕವಾಗಿದೆಯೋ ಅಷ್ಟೇ ಭಾವಾಪೂರ್ಣವಾಗಿದೆ. ಇತರರು ದೇವರಿಗೆ ಹಣ್ಣುಕಾಯಿಗಳನ್ನು ನೀಡಬಯಸಿದರೆ, ಪೈ ಅವರು ಪರಮಾತ್ಮನಿಗೆ ತಮ್ಮ ನಿಷ್ಠುರ ಮನವೆಂಬ ಇಟ್ಟಿಗೆಯನ್ನೇ ನೀಡಲು ಸಿದ್ದರಾಗಿರುವುದು ಅತ್ಯಂತ ಆತ್ಮೀಯವಾಗದೆ? ಎಲ್ಲಿಯ ಕೃಷ್ಣ – ಎಲ್ಲಿಯ ಕ್ರಿಸ್ತ ಆದರೆ ಎಮ್. ಗೋವಿಂದ ಪೈ ಅವರ ಆಧ್ಯಾತ್ಮ್ಕ ಪ್ರಜ್ಞೆಗೆ ಆ ಇಬ್ಬರೂ ಒಂದೇ ಶಕ್ತಿಯ ಎರಡು ಅವತಾರಗಳೆಂಬ ಪೂಜ್ಯ ಭಾವನೆ! ಸಂಪ್ರದಾಬದ್ಧವಾದ ಧಾರ್ಮಿಕ ಪ್ರಪಂಚದಲ್ಲಿ ಇದಕ್ಕಿಂತಲೂ ಕ್ರಾಂತಿಕಾರವಾದ ತರ್ಕವನ್ನು ಹೂಡಲು ಸಾಧ್ಯವೇ? ಪೈ ಅವರು ‘ಯೇಸುಕೃಷ್ಣ’ ಎಂಬ ಕವಿತೆಯಲ್ಲಿ ಈ ಅಸದೃಶ ಸಾಮ್ಯವನ್ನು ಎತ್ತಿ ತೋರಿಸಿದ್ದಾರೆ. ಕೃಷ್ಣನು ಸೆರೆಮನೆಯಲ್ಲಿ ಹುಟ್ಟಿದರೆ, ಯೇಸುವು ದನದ ಕೊಟ್ಟಿಗೆಯಲ್ಲಿ ಹುಟ್ಟಿದವನು. ಒಬ್ಬ ಕೊಳಲೂದಿ ದನಗಾಹಿನಿಸಿದರೆ, ಇನ್ನೊಬ್ಬ ಬಡಗಿಯ ಕೆಲಸವನ್ನು ಅವಲಂಬಿಸಿದವನು. ಒಬ್ಬ ರಾಧೆಯ ಪ್ರೇಮಪಾಶದಲ್ಲಿ ಬಂಧಿತನಾದರೆ ಇನ್ನೊಬ್ಬ ಮಗ್ದಲದ ಮರಿಯಳ ಅನುರಾಗಕ್ಕೆ ಪಾತ್ರನಾಗುತ್ತಾನೆ. ಒಬ್ಬ ಕೌರವನಿಂದ ಬಂಧಿತನಾದರೆ, ಇನ್ನೊಬ್ಬನು ತನ್ನವರ ಮೂಲಕವೇ ತಲೆಗೆ ಮುಳ್ಳಿನ ಕಿರೀಟವನ್ನು ತೊಡಬೇಕಾಗುತ್ತದೆ. ಈ ತೆರನಾದ ಸದೃಶ್ಯ ಪರಂಪರೆಯನ್ನು ಪಟ್ಟಿ ಮಾಡಿ, ಕಡೆಗೆ ಪೈ ಅವರು “ಯದುಯಾಥನೆ ಯೂದನಾಥನಲ್ಲವೆ?” ಎಂದು ವಿಸ್ಮಯಚಕಿತರಾಗುವರು. ಕಾಲ, ದೇಶಗಳು ಬೇರೆ ಬೇರೆಯಾದರೂ ಅವರಿಗೆ ಆ ಈರ್ವರನ್ನು ಒಂದೇ ದೈವ ಶಕ್ತಿಯ ಎರಡು ಅವತಾರಗಳೆಂದು ಎಣಿಸಲು ಮನಸ್ಸು ಹಿಂತೆಗೆಯುವುದಿಲ್ಲ. ಈ ಬಗ್ಗೆ ಆಕ್ಷೇಪವೆತ್ತಿದವರಿಗೆ “ದಿನವೆರಡರ ಭಾಸ್ಕರನೆರಡಹನೆ?” ಎಂಬ ಪ್ರಶ್ನೆಯೇ ಅವರಿಗೆ ಸದುತ್ತರ. ಉಡುಪಿಯ ಶ್ರೀಕೃಷ್ಣನನ್ನು ಕಂಡಾಗಲೂ ಅವರ ವಿಚಾರಧಾರೆ ವಿಶಿಷ್ಟವಾಗಿಯೇ ವ್ಯಕ್ತವಾಗುತ್ತದೆ. ಹಿಂದೂಗಳಲ್ಲಿ ಐಕಮತ್ಯವನ್ನು ರೂಢಿಸಬೇಕೆಂದೂ, ದ್ವಾಪರಯುಗದಲ್ಲಿ ಮಹಾಭಾರತದಲ್ಲಿ ಸೂತ್ರಧಾರನಂತಿದ್ದು ಧರ್ಮವನ್ನು ಉದ್ಧರಿಸಿದಂತೆ ಇಂದಿನ ಭಾರತದ ಗೋಳನ್ನು ಪರಿಹರಿಸಬೆಕೆಂದೂ ಮೊರೆಯಿಡುವರು. “ಬಡಗೋಳ ಕೇಳೆಮ್ಮ ಕಡಗೋಲ ಕನ್ನ! ಸಡಗರಿಸೋ ಬಿಡಿಗಡಿಸೆ ಭಾರತದ ನಿನ್ನ!” ಎಂಬ ಯುಗಳ ಪಂಕ್ತಿಗಳಲ್ಲಿ ಮುಕ್ತಾಯವಾಗುವ ಈ ಚತುರ್ದಶಪದಿಪೈ ಅವರ ಹೃದಯವೈಶಾಲ್ಯಕ್ಕೆ ಸಾಕ್ಷಿಯಂತಿದೆ. ‘ಶ್ರೀ ಗೊಮ್ಮಟಜಿನಸ್ತುತಿ’ಯಲ್ಲಿ ಅವರ ಪಾರಮಾರ್ಥಿಕ ದೃಷ್ಟಿ ಆ ವಿಗ್ರಹದಷ್ಟೆ ಎತ್ತರವೂ, ಬಿತ್ತರವೂ ಆದುದು. ಬೊಪ್ಪಣ ಪಂಡಿತ ವಿರಚಿತ ‘ಗೊಮ್ಮಟ ಸ್ತುತಿ’ ಹೇಗೆ ನಮಗೆ ಮಾನ್ಯವಾದುದೋ, ಎಂ ಗೊವಿಂದ ಪೈ ಅವರು ಗೊಮ್ಮಟನಲ್ಲಿ ಕೇಳಿಕೊಳ್ಳುವ ಕ್ರಮವನ್ನು ಕಂಡರೆ ಆ ಬಾಹುಬಲಿ ಸ್ವಾಮಿ ಸರ್ವಸಂರಕ್ಷಕನೆಂಬ ವಿಶಾಲವಾದ ಭಾವನೆ ಮೂಡುತ್ತದೆ. ಕಾಯೈ ಭೇದಮನೊಲ್ಲದೆಲ್ಲರಲ್ಲಿ ಸತ್ಯೌದಾರ್ಯಮಂ ವೀರ್ಯಮಂ! ಕಾಯೈ ಗಂಡಸರಲ್ಲಿ ಮಾತೃಭುವಿಯಾ ಸಂಪ್ರೀತಿಯಂ ನೀತಿಯಂ! ಕಾಯೈ ಹೆಂಗಸರಲ್ಲ ನನ್ಯ ಪರ ಪಾತಿವ್ರತ್ಯಮಂ ಸತ್ಯಮಂ! ಕಾಯೈ ಮಕ್ಕಳೋಳಾತ್ಮದೀಧಿಯ ನೀ! ಶ್ರೀ ಗೋಮಟಾಧೀಶ್ವರಾ! ತಮಮ್ ಪತ್ನಿಯನ್ನು ಕಳೆದುಕೊಂಡಿದ್ದ ಎಂ ಗೋವಿಂದ ಪೈ ಅವರು ಆಕೆಯ ಸ್ಮರಣಾರ್ಥವಾಗಿ ರಚಿಸಿದ ಈ ವೃತ್ತಗಳಲ್ಲಿ ಎಲ್ಲಿಯಾದರೂ ಒಂದೆಡೆಯಲ್ಲಿ ತಮ್ಮ ಸ್ವಾರ್ಥವನ್ನು ಪ್ರಕಟಿಸದೇ ಇರುವುದು ಸೋಜಿಗವೆನ್ನಿಸದೆ ಇರದು. ಎಂ ಗೋವಿಂದ ಪೈ ಅವರ ಈ ದೈವಾರಾಧನೆ ಬರಬರತ್ತ ಹೇಗೆ ವಿಶ್ವಾರಾಧನೆಯಾಗಿ ಪರಿಣಮಿಸಿದೆಯೆನ್ನುವುದನ್ನು ಅವರ ‘ವಿಶ್ವಾಂಜಲಿ’ ಎಂಬ ಕವನದಲ್ಲಿ ನಿಚ್ಚಳವಾಗಿ ಕಾಣಬಹುದು. “ಏನು ಅದ್ಭುತ ಮಹಿಮೆಯೋ ನಿನ್ನ, ಪ್ರಭೋ ಪೆÇಗಳಲಳವೆ ನನ್ನ” ಎಂದು ಈ ಪದ್ಯ ಸಾಂಪ್ರದಾಯಿಕವಾದ ಸರಣಿಯಲ್ಲಿ ಪ್ರಾರಂಭವಾದರೂ ಮುಂದುವರಿದಂತೆಲ್ಲ ಅವರ ಕಲ್ಪನೆ ಭೂಮವಾಯಿತು. ಅನ್ನುವುದು ಅನುಭವಕ್ಕೆ ಬರುತ್ತದೆ. ಮೇಲೆ ವ್ಯಾಪಿಸಿರುವ ನೀಲಿಯ ವ್ಯೂಮ, ಸೂರ್ಯರಶ್ಮಿ, ರಾತ್ರಿಯಲ್ಲಿ ರಾರಾಜಿಸು ನಕ್ಷತ್ರಖಚಿತವಾದ ನಭ, ಬೀಸಿ ಬರುವ ಗಾಳಿ, ಸರ್ವರನ್ನು ಸಹನೆಯಿಂದ ಸಾಕಿ ಸಲಹುವ ಭೂದೇವಿ, ಕೈಗನ್ನಡಿಯಂತೆ ತೋರಿ ಬರುವ ಕಡಲು, ದೇವರ ಯಶಸ್ತಂಭದಂತೆ ನಿಂತಿರುವ ಬೆಟ್ಟ ಗುಡ್ಡಗಳ ಪಂಕ್ತಿ, ಅತ್ತಲಿಂದಲೇ ಹರಿದು ಬರುವ ನದಿಯ ನೀರಿನ ನಿರ್ಘೋಷ ಮೊದಲಾದವು ಪರಮಾತ್ಮನ ಪ್ರತ್ಯಕ್ಷ ದರ್ಶನಕ್ಕೆ ಪ್ರಮಾಣವೆಂದು ಮುಕ್ತಕಂಠದಿಂದ ಪ್ರಶಂಸಿಸಿ, ತಾವು ಆ ದಿವ್ಯದೇವನ ಹಸುಗೂಸು ಎಂದು ಭಾವಿಸಿ “ಮಗು ತೊದಲುಲಿವೊಲುತಾಯನು ಕರೆಯೆ ಉಲಿವೆನು, ಮುಗುಳ್ದುಲಿವೆನು. ಶ್ರೀ ಹರಿಯೇ ನಿನ್ನ ನಾಮವನು” ಎಂದು ತಮ್ಮಲ್ಲಿನ ದೈನ್ಯವನ್ನು ವ್ಯಕ್ತಪಡಿಸಿದರು. ಈ ಪಾರಮಾರ್ಥಿಕ ಪ್ರಜ್ಞೆಯಿಂದ ಜೀವನಕ್ಕೆ ದೊರೆಯುವ ಶಾಂತಿ, ಸಮಾಧಾನ, ತುಷ್ಟಿ, ಪುಷ್ಟಿಗಳು ಎಂತಹುದೆನ್ನುವುದನ್ನು ಪೈ ಅವರ ಹಲವಾರು ಕವಿತೆಗಳಲ್ಲಿ ನಾವು ಮನಗಾಣಬಹುದು. ಕವಿಗಳ ಈ ಗಾಢವಾದ ದೇಶಭಕ್ತಿಯೇ ಅವರ ಪತ್ನಿವಿಯೋಗದ ಬಾಷ್ಪಾಂಜಲಿಯನ್ನು, ಭಗವಂತನಿಗೆ ಶ್ರದ್ದಾಂಜಲಿಯಾಗಿ ಸಮರ್ಪಿಸಲು ಸಮರ್ಥವಾಯಿತು. ಆಕೆಯ ನೆನಪಿಗಾಗಿ ಅವರು ಹಚ್ಚಿಟ್ಟಿರುವ ನಂದಾದೀಪದ ಕವನಗಳು ಕನ್ನಡ ಕಾವ್ಯ ಪ್ರಂಪಚಕ್ಕೆ ಒಂದು ಅಮೂಲ್ಯವೂ, ಅಪೂರ್ವವೂ ಆದ ಕೊಡುಗೆ. ಕವನಸಂಕಲನದಲ್ಲಿರುವ ಏಕಸೂತ್ರತೆಯನ್ನು, ಎಂದರೆ ಕವಿಯ ವಿರಹೋದ್ವೇಗ ಮತ್ತು ಅಚಲ ದೈವಶ್ರದ್ಧೆಗಳ ಎಳೆಗಳನ್ನು ಗುರುತಿಸುವ ಕೆಲಸ ತುಸು ಪ್ರಯಾಸವೆನ್ನಿಸಿದರೂ, ಪ್ರಯತ್ನಿಸಿದ್ದೇ ಆದರೆ ಫಲಕಾರಿಯಾಗದೆ ಇರದು. ಈ ಕೆಲಸದಲ್ಲಿ ಯಶಸ್ವಿಯಾಗಿರುವ ವಿ.ಎಂ ಇನಾಂದಾರರು ತಮ್ಮ ಇಂಗ್ಲಿಷ್ ಪುಸ್ತಕದಲ್ಲಿ ಈ ಸಂಕಲನದ ಮೌಲ್ಯಗಳನ್ನು ನಿರ್ಣಯಿಸುವಲ್ಲಿ “ಈ ಕವಿತೆಗಳನ್ನು ಆಗಿಂದಾಗ್ಗೆ ಬರೆದಿದ್ದರೂ ಅವಿಚ್ಚಿನ್ನವಾಗಿ ಮುಂದುವರಿಯುವ ಭಾವನೆಯಿಂದಲೂ, ವಾಸ್ತವಿಕ ಆ ಚಿಂತನೆ ಏಕಾಗ್ರವಾದ ದೈವಿಕಧ್ಯೇಯ ಮತ್ತು ಆಕಾಂಕ್ಷೆಗಳ ಸುತ್ತಲೂ ಬಳಸಿ ಬೆಳಗುವುದರಿಂದಲೂ ಇವುಗಳು ಅನ್ಯೂನ್ಯವಾಗಿ ಹೊಂದಿಕೊಂಡಿವೆ” ಎಂದು ನೀಡಿರುವ ಅಭಿಪ್ರಾಯ ಸಮರ್ಪಕವೆನ್ನಿಸುತ್ತದೆ. ಬಿಡಿಬಿಡಿಯಾದ ಮತ್ತು ಕೆಲವು ಸಣ್ಣ ಕಥನ-ಕವನಗಳಲ್ಲಿ ಕಂಡುಬರುವ ಎಮ್ ಗೋವಿಂದ ಪೈ ಅವರ ಹೃದಯದ ಮಾರ್ದವ, ಮಾನವೀಯತೆಗಳು ಸ್ತುತ್ಯವಾದುವು. ತನ್ನ ದುರ್ದೈವದಿಂದ ಮೂರು ಮಕ್ಕಳನ್ನು ಒಟ್ಟಿಗೇ ಕಳೆದುಕೊಂಡ ಹತಭಾಗಿನಿಯೊಬ್ಬಳನ್ನು ಕುರಿತು ಚತುರ್ದಶಪದಿಯಲ್ಲಿ ಬರೆದ ‘ಅಂದಿನಿಂದಾಕೆ ನಕ್ಕಿಲ್ಲ, ಅತ್ತಿಲ್ಲ’ ಎಂಬ ಪಂಕ್ತಿಯಲ್ಲಿ ಪೂರ್ಣಪ್ರಮಾಣದ ಪಶ್ಚಾತ್ತಾಪ ಪ್ರತಿಸ್ಪಂದಿಸುತ್ತದೆ. ಇನ್ನು ಅವರು ಬೌದ್ಧ ಸಾಹಿತ್ಯದಿಂದ ಆರಿಸಿಕೊಂಡಿರುವ ‘ಮಾತಂಗಿ’ ಎಂಬ ಕಥನ ಕವನದಲ್ಲಿ ವ್ಯಕ್ತವಾಗುವ ಅಶ್ಪೃಶ್ಯ ಜನರ ಮೇಲಿನ ಅವರ ಅನುಕಂಪ, ‘ಭಿಕ್ಷುವೂ ಪಕ್ಷಿಯೂ’ ಎಂಬಲ್ಲಿ ಗೋಚರವಾಗುವ ಭಿಕ್ಷುವಿನ ಸಹನೆ, ‘ವಾಸವದತ್ತೆ’ ಎಂಬಲ್ಲಿ ಪರಿತ್ಯಕ್ತ ವೇಶ್ಯೆಯ ಬಗ್ಗೆ ಪ್ರಕಾಶಿತವಾಗುವ ಉಪಗುಪ್ತನ ಉದಾರದೃಷ್ಟಿ ಮೊದಲಾದವು ಕವಿಯ ಮಾನವೀಯತೆಯನ್ನು ಪ್ರತಿಬಿಂಬಿಸುವ ಉತ್ತಮ ಉದಾಹರಣೆಗಳು; ಸುಪ್ರಸಿದ್ದವಾದ ಹರಿಶ್ಚಂದ್ರನ ಕಥೆಗೆ ಒಂದು ಹೊಸ ತಿರುವನ್ನು ಕೊಟ್ಟು, ಅವನ ಸತ್ಯಸಂದತೆಯನ್ನು ಮೆಚ್ಚಿದ ನಭೋವಾಣಿಯೊಂದು ಅವನನ್ನು ದೇವಲೋಕಕ್ಕೆ ತರೆದುತರಲು ವಿಮಾನವನ್ನು ಕಳುಹಿಸಲು ಅವನು ‘ಶ್ವಪಚನನು ಜತೆಗೊಳದೆ ದಿವಕೇರ್ವೆನೆಂತು’ ಎಂದು ನಿರಾಕರಿಸಿರುವುದು ನಿಬ್ಬೆರಗಿಸುವಂತಿದೆ. ದಾಸಿಪುತ್ರನಾದ ಕವಷನೆಂಬ ಋಷಿಯನ್ನು ಇತರ ಋಷಿಗಳು ತಮ್ಮ ಯಾಗಮಂಟಪದಿಂದ ದೂರದ ಮರಳುಗಾಡಿಗೆ ಅಟ್ಟಲು, ಅವನು ತನ್ನ ಬಲದಿಂದ ಸರಸ್ವತಿ ನದಿಯನ್ನು ತನ್ನೆಡೆಗೇ ಬರಮಾಡಿಕೊಳ್ಳುವನು. ಆಗ ಗರ್ವಿಷ್ಠರಾಗಿದ್ದ ಇತರ ಋಷಿಗಳು ಅವನ ಕ್ಷಮಾಪಣೆಯನ್ನು ಕೋರುವರು. ಋಗ್ವೇದದಲ್ಲಿ ಹುದುಗಿದ್ದ ಈ ಅದುರನ್ನು ಒಪ್ಪವಿಟ್ಟು ಮೆರೆಸಿರುವ ಕೀರ್ತಿ ಪೈ ಅವರಿಗೆ ಸಲ್ಲುತ್ತದೆ.

ಪ್ರಕೃತಿ ಪ್ರೀತಿ[ಬದಲಾಯಿಸಿ]

ಪ್ರಕೃತಿ ಸೌಂದರ್ಯವನ್ನೂ ಅವರು ಅಲಕ್ಷಿಸಿಲ್ಲ. ‘ಮಿಂಚುಳ್ಳಿ’ಯೆಂಬ ಕವನದಲ್ಲಿ ಆ ಪುಟ್ಟ ಹಕ್ಕಿಯ ವಿಲಾಸವನ್ನು ವಿಧವಿಧವಾಗಿ ವರ್ಣಿಸಿ ಅದರೊಂದಿಗೆ ತನ್ಮಯರಾಗುತ್ತಾರೆ. ‘ಪ್ರಭಾಸ’ವೆಂಬ ನೀಯೋಜಿತ ನೀಳ್ಗವಿತೆಗೆ ಅವರು ಮೊತ್ತಮೊದಲಿನಲ್ಲಿಯೇ ಕಡಲನ್ನು ಕುರಿತು ಮಾಡಿರುವ ವರ್ಣನೆ ಉಲ್ಲಾಸದಾಯಕ ಆಗಿರುವುದಲ್ಲದೆ, ಉದ್ಬೋಧಕವೂ ಆಗಿದೆ. ಈಗ ಪ್ರಕಟಿತವಾಗಿರುವ ಎಮ್ ಗೋವಿಂದ ಪೈ ಅವರು ಸಮಕಾಲೀನ ಸಮಸ್ಯೆಗಳಾಗಿದ್ದ ಅಸ್ಪೃಶ್ಯತೆ, ಬಡತನ, ಸ್ವಾತಂತ್ರ್ಯ ಸಂಗ್ರಾಮ, ಧಾರ್ಮಿಕ ಸಂಕುಚಿತ ಭಾವನೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಸ್ತಾಪಿಸುತ್ತಾರೆ. ‘ಶ್ರೀ” ಅವರು ‘ಹೊಂಗನಸುಗಳು’ ಎಂಬ ತಮ್ಮ ಕವನ ಸಂಕಲನದಲ್ಲಿ ಸಮಕಾಲೀನ ಸಂಗತಿಗಳಿಗೂ ಹೇಗೆ ಹಳಗನ್ನಡವನ್ನು ಬಳಸಿರುವರೋ ಹಾಗೆ ಎಮ್ ಗೋವಿಂದ ಪೈ ಅವರು ತಮ್ಮದೇ ಆದ ಒಂದು ರೀತಿಯಲ್ಲಿ ಕಾವ್ಯಶೈಲಿ ಅಳವಡಿಸಿಕೊಂಡಿದ್ದರು. ಆದ್ದರಿಂದ ಅವರು ಸಮಕಾಲೀನ ಸಮಸ್ಯೆಗಳಿಗೆ ಗಮನವೀಯಲಿಲ್ಲ ಎಂಬ ಆಕ್ಷೇಪಣೆಯಾಗಲೀ, ಅವರು ತಮ್ಮ ಕಾವ್ಯಶಿಲ್ಪ ನಿರ್ಮಾಣದತ್ತ ತೋರಿದ ಆಸಕ್ತಿ ಅವರ ಕವನಗಳ ತಿರುಳಿನ ಕಡೆ ನೀಡಲಿಲ್ಲವೆಂಬ ನಿಷ್ಠುರ ದೃಷ್ಟಿಯಾಗಲೀ ಸಾಧುವಲ್ಲವೆಂದು ನನ್ನ ಎಣಿಕೆ. ಎಮ್ ಗೋವಿಂದ ಪೈ ಅವರು ವಿಭೂತಿ ಮಹತ್ವವನ್ನು ಕಂಡಲ್ಲಿ ಕೈ ಮುಗಿದು ತಲೆಬಾಗುವ ತಲೆಮಾರಿನವರು. ಈ ಕ್ಷೇತ್ರದಲ್ಲಿ ಅವರಿಗೆ ಕಾಲ ದೇಶಗಳ ಅಂತರವಾಗಲಿ; ಜಾತಿ, ಮತ, ಪಂಥಗಳ ತಾರತಮ್ಯವಾಗಲಿ ಇಲ್ಲ. ಅವರ ಈ ಪೂಜ್ಯ ಭಾವನೆ ಯೇಸುವಿನ ಕಡೆಯ ದಿನವನ್ನು ಕುರಿತ ‘ಗೋಲ್ಗೊಥಾ’ ಮತ್ತು ಬುದ್ಧನ ಕಡೆಯ ದಿನವನ್ನು ಕುರಿತ ‘ವೈಶಾಖಿ’ ಎಂಬ ನೀಳ್ಗವಿತೆಗಳಲ್ಲಿ ವಿಶ್ವರೂಪವನ್ನೇ ತಾಳಿರುವುದನ್ನು ಕಾಣಬಹುದು. ಈ ಎರಡು ಕೃತಿಗಳನ್ನು ಕುರಿತಂತೆ ವಿದ್ವಾಂಸರು ಈಗಾಗಲೇ ಸಾಕಷ್ಟು ಸಮಾಲೋಚನೆಗಳನ್ನು ಮಾಡಿರುವುದರಿಂದ, ಈ ರಚನೆಗಳ ವಿವರಕ್ಕೆ ಹೋಗದೆ ಮೇಲ್ಮೈಯನ್ನು ಮಾತ್ರ ಇಲ್ಲಿ ಪರಿಚಯ ಮಾಡಿಕೊಡಲಾಗುವುದು. ಈ ಎರಡು ಕೃತಿಗಳನ್ನು ಕೆಲವು ವಿಮರ್ಶಕರು ಖಂಡಕಾವ್ಯಗಳೆಂದು ನಿರ್ದೇಶಿಸಿರುವರು. ‘ಗೋಲ್ಗೊಥಾ’ದಲ್ಲಿ 377 ಪಂಕ್ತಿಗಲಿದ್ದರೆ ‘ವೈಶಾಖಿ’ಯಲ್ಲಿ 732 ಪಂಕ್ತಿಗಳಿವೆ. ಈ ರಚನೆಗಳು ತಮ್ಮ ಮಟ್ಟಿಗೆ ದೀರ್ಘವಾಗಿದ್ದರೂ ಇಲ್ಲಿ ಕವಿಯ ದೃಷ್ಟಿಯಲ್ಲಿ ಏಕೈಕ ವ್ಯಕ್ತಿಯ ಅಂತ್ಯ ದಿನದ ಮೇಲೆ ಮಾತ್ರ ಕೆಂದ್ರೀಕೃತವಾಗಿರುವುದನ್ನು ಮಾತ್ರ ನಾವು ಮರೆಯುವಂತಿಲ್ಲ. ಉಳಿದ ಪಾತ್ರಗಳು ಕೇವಲ ಪೋಷಕ ಪಾತ್ರವಲ್ಲದೆ ಅವು ಪ್ರತ್ಯೇಕವಾದ ಪರಿಗಣನೆಗೆ ಒಳಪಡುವುದಿಲ್ಲ. ಕ್ರಿಯೆ ಕಾಲ ಮತ್ತು ಸ್ಥಳಗಳಲ್ಲಿಯೂ ಬಹುಮಟ್ಟಿಗೆ ಕವಿಗಳು ಐಕ್ಯವನ್ನೇ ಪರಿಪಾಲಿಸುತ್ತಾರೆ. ಆದ್ದರಿಂದ ಇವುಗಳನ್ನು ನೀಳ್ಗವಿತೆಗಳೆಂದು ನಿರ್ದೇಶಿಸುವಲ್ಲಿ ಯಾವ ಬಾಧಕವೂ ಇಲ್ಲವೆಂದು ಹೇಳಬಹುದು. ಈ ಕೃತಿಗಳೂ ಧಾರ್ಮಿಕ ಪುರುಷರನ್ನು ಕುರಿತವಾದುದರಿಂದ, ವಿಷಯವನ್ನು ಪ್ರತಿಪಾದಿಸುವಲ್ಲಿ ಕವಿಯ ಹೊಣೆ ಬಹಳ ದೊಡ್ಡದಾದುದು. ಆ ಸಲುವಾಗಿಯೆ ಪೈ ಅವರು ‘ಗೋಲ್ಗೊಥಾ’ದ ವಸ್ತುವನ್ನು ಸಂಗ್ರಹಿಸುವಲ್ಲಿ ಮೂಲ ಆಕರಗಳನ್ನು ಎಷ್ಟು ನಿಷ್ಠಿಯಿಂದ ವ್ಯಾಸಾಂಗ ಮಾಡಿರುವುದೆನ್ನುವುದನ್ನೂ ‘ವೈಶಾಖಿ’ಗೆ ಸಂಬಂಧಿಸಿದ ಪಾಳಿಭಾಷೆಯ ಗ್ರಂಥಗಳನ್ನೇ ಅವಲಂಬಿಸಿರುವರು ಎಂಬುವುದನ್ನೂ ಅವರು ಕೊಟ್ಟಿರುವ ಟಿಪ್ಪಣಿಗಳಿಂದ ತಿಳಿಯಬಹುದು. ಅವರು ಕೈಗೊಂಡಿರುವ ಕೆಲಸವಾದರೋ ಆಯಾ ಧರ್ಮದ ಪ್ರಚಾರವಲ್ಲ. ಆಯಾ ಮಹಾಪುರುಷರ ಮಹಾತ್ಮೆ ಮಾತ್ರ. ಈ ಎರಡರಲ್ಲಿ ಗೋವಿಂದ ಪೈ ಅವರು ಮೊದಲು ‘ಗೋಲ್ಗೊಥಾ’ವನ್ನು ಬರೆದರು ಈ ದೀರ್ಘ ಕವನ ಮೊದಲು ಬಿಡಿಬಿಡಿಯಾಗಿಯೂ ಅನಂತರ ಇಡಿಯಾಗಿಯೂ ಪ್ರಕಟವಾಯಿತು. ಈ ಕೃತಿ ಅಚ್ಚಾದ ಕೂಡಲೆ ಗೋವಿಂದ ಪೈ ಅವರ ಹೆಸರು ಮತ್ತು ಕಾವ್ಯ ಪರಿಚಯ ಬಹು ಜನರಿಗೆ ಪರಿಚಯವಾಯಿತು. ಈ ಕವನದುದ್ದಕ್ಕೂ ತೋರಿ ಬರುವ ಪೈ ಅವರ ಕಾವ್ಯಪ್ರತಿಭೆ ಅಸದೃಶವಾದದ್ದು. ಯೆಸುವಿನ ಮೇಲೆ ಅವರ ಅತಃಕರಣವೆಲ್ಲಾ ತನಗೆ ತಾನೆ ರೂಪುವೆತ್ತು ಕಡೆದು ನಿಲ್ಲಿಸಿದ ಜೀವಂತ ಕೃತಿಯೆನ್ನಿಸಿ ಕನ್ನಡದಲ್ಲಿ ಅಮರವಾಗಿದೆ. ಆ ಬಳಿಕ ಕೆಲವು ವರ್ಷಗಳ ತರುವಾಯ ರಚಿಸಿದ ‘ವೈಶಾಖಿ’ ಎನ್ನುವುದೂ ಗೋವಿಂದ ಪೈ ಅವರ ಅಮೃತ ಕಥನ ಕಲೆಗೆ ಮತ್ತೊಂದು ಸಾಕ್ಷಿ. ವೈಶಾಖ ಶುಕ್ಲ ಪೂರ್ಣಮೆಯಂದು ರಾಜಕುಮಾರನಾಗಿ ಹುಟ್ಟಿದ ಸಿದ್ದಾರ್ಥನು, ಸರ್ವವನ್ನೂ ತ್ಯಾಗ ಮಾಡಿ ಸನ್ಯಾಸವನ್ನು ಕೈಗೊಂಡು ವೈಶಾಖ ಶುಕ್ಲ ಪೂರ್ಣಮೆಯಂದೇ ಜ್ಞಾನೋದಯವನ್ನು ಪಡೆದು ಬುದ್ದನೆಂಬ ಹೆಸರಿನಿಂದ ಜಗತ್ ಪ್ರಸಿದ್ದನಾಗಿ, ವೈಶಾಖಶುಕ್ಲ ಪೂರ್ಣಮೆಯಂದೇ ಪರಿನಿರ್ವಾಣವನ್ನು ಪಡೆದುದರಿಂದ, ಕವಿಗಳು ಈ ಹೆಸರನ್ನು ಇಟ್ಟಿರುವುದು ಅರ್ಥಪೂರ್ಣವಾಗಿದೆ. ಪೈ ಅವರು ‘ವೈಶಾಖಿ’ಯನ್ನು ಬರೆದು ವಿದ್ವಾಂಸರಿಗೆ ಒಂದು ಹೊಸ ಸವಾಲನ್ನೇ ಒಡ್ಡಿದ್ದರು. ಈ ಎರಡರಲ್ಲಿ ಯಾವುದು ಹೆಚ್ಚು ಪರಿಣಾಮಕಾರಿಯೆಂಬ ಜಿಜ್ಞಾಸೆ ಅಂದಿನಿಂದ ಈವರೆಗೂ ನಡೆದಿದೆ.ಬಾ ಅಮಳ ಕವನಗಳ ಗುರಿ ಮತ್ತು ನಿರೂಪಣೆಗಳಲ್ಲಿ ಸಮಾನಧರ್ಮವನ್ನು ನಾವು ಕಾಣಬಹುದಾದರೂ ಆಯಾ ಮಹಾವ್ಯಕ್ತಿಯ ಮರಣಕ್ಕನುಗುಣವಾಗಿ ಅದರದರ ಅನುಭವ ಬೇರೆಯೆನ್ನಿಸುವುದು ಸಹಜ. ಒಬ್ಬನ ಸಾವು ದುರಂತವೆನಿಸಿದರೆ, ಇನ್ನೊಬ್ಬನ ಸಾವು ಸುಖಾಂತವಾದುದು. ಒಬ್ಬನು ತನ್ನ ಹರೆಯದಲ್ಲಿಯೇ ತನ್ನವರ ಅಸಹನೆಯಿಂದ ಸಾವಿನ ನೋವಿಗೆ ಈಡಾದರೆ; ಇನ್ನೊಬ್ಬನು ತನ್ನ ವಾರ್ಧಕ್ಯದಲ್ಲಿ ಆತ್ಮೀಯರ ಅಭಿಮಾನ ಆದರಗಳ ಮಧ್ಯೆ ಸಾವಿನ ಸವಿಯನ್ನು ಅನುಭವಿಸುತ್ತಾನೆ. ಪೈ ಅವರು ಜೀವಂತವಾಗಿರುವಾಗಲೇ ಅವರ ಕೃತಿಗಳನ್ನು ಸಮೀಕ್ಷಿಸಿದ ಜಿ.ಪಿ ರಾಜರತ್ನಂ ಅವರು ‘ಗೊಲ್ಗೊಥಾ’- ಕವಿಚಕ್ರವರ್ತಿ ರನ್ನನ ‘ಗದಾಯುದ್ಧ’ ಇದ್ದಂತೆ, ‘ವೈಶಾಖಿ’- ಅದೇ ಕವಿಚಕ್ರವರ್ತಿಯ ‘ಅಜಿತತೀರ್ಥ ಪುರಾಣ ತಿಲಕ’ ಇದ್ದ ಹಾಗೆ. ಮೊದಲಿನ ಕೃತಿಯ ತುಂಬ ‘ಕಾವ್ಯಾಂಗ’ “ಎರಡನೆಯ ಕೃತಿಯ ತುಂಬ ‘ಭವ್ಯಾಂಗ” – ಎಚಿದು ಹೇಳಿರುವುದು ಸಮ್ಮತವೆನಿಸುತ್ತದೆ. ವಿ.ಎಂ ಇನಾಂದಾರರು ‘ಗೊಲ್ಗೊಥಾ’ ಧವಲಗಿರಿಯಾದರೆ, ‘ವೈಶಾಖಿ’ ಕಾಂಚನಗಂಗೆ ಎಂದು ಪ್ರಶಂಸಿದ್ದಾರೆ. ಗೋವಿಂದ ಪೈ ಅವರ ಈ ಕಾವ್ಯ ಸಮೀಕ್ಷೆ ಕೆವಲ ಒಂದು ಅಂತರಿಕ್ಷ ವೀಕ್ಷಣೆ (ಏರಿಯಲ್ ವ್ಯೂ) ಯೆನ್ನಿಸಿದರೂ ಅವರ ಕಾವ್ಯ ನಿರ್ಮಿತಿಯ ಒಂದು ಸ್ಥೂಲ ಪರಿಚಯವನ್ನಾದರೂ ಮಾಡಿಕೊಡಬಹುದೆಂದು ಎಣಿಸಿರುತ್ತೇನೆ. ಅವರ ಕೃತಿಗಳಲ್ಲಿ ವ್ಯಕ್ತವಾಗುವ ಪ್ರಮುಖ ಪ್ರೇರಣೆಗಳು, ಅಪೂರ್ವ ಶಬ್ದಪ್ರಯೋಗಗಳು, ಛಂದೋವೈವಿಧ್ಯಗಳು, ಶೈಲಿಯ ವಜ್ರಬಂಧ, ಪ್ರಯೋಗಶೀಲತೆ, ಕಾವ್ಯಾನುಸಂಧಾನ, ಪ್ರಾಚೀನ ಕವಿಗಳ ಪ್ರಭಾವ ಮೊದಲದವುಗಳನ್ನು ಗಮನಿಸಿದರೆ, ಅವರನ್ನು ಆಧುನಿಕ ಕನ್ನಡ ಕಾವ್ಯದ ಪಂಡಿತ ಕವಿಗಳೆಂದು ಪರಿಗಣಿಸಬಹುದು. ಸಂಶೋಧನ ಸಾಮ್ರಾಜ್ಯ ಕವಿ ಮತ್ತು ಸಂಶೋಧಕನ ಪ್ರಜ್ಞೆಗಳೆರಡನ್ನೂ ಒಳಗೊಂಡಿರುವ ಎಂ ಗೋವಿಂದ ಪೈ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಕಂಡು ಡಾ/ ಎ.ಎನ್. ಉಪಾಧ್ಯೆ ಅವರು ವಿಸ್ಮಿತರಾಗಿರುವುದುಂಟು.

ಸಂಶೋಧನೆ[ಬದಲಾಯಿಸಿ]

ಈ ಎರಡರ ವಿಚಿತ್ರ ಸಮನ್ವಯವನ್ನು ಕುರಿತು ಪೈ ಅವರು ಆತ್ಮಶೋಧನೆ ಮಾಡಿಕೊಂಡಿರುವುದೂ ಉಂಟು: “ಕವಿತಾ ಮಾರ್ಗ ಬೇರೆ, ಸಂಶೋಧನಾಮಾರ್ಗ ಬೇರೆ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು. ವಿಶಿಷ್ಟವಾದ ದೈವಕೃಪೆ ಉಳ್ಳವರು ಅವೆರಡನ್ನು ಕಯ್ಕೊಂಡು ಹುತ್ತನ್ನು ಹಿಡಿತದಿಂದ ಬಳಸಿದರೆ ಸವ್ಯಸಾಚಿಸಬದುದಾದರೂ ನನ್ನ ಬಗೆಗಾದರೋ ಅವು ಮುಳುವಾಗಿದೆ. ಆದರೆ ಎಷ್ಟೋ ವರ್ಷಗಳಿಂದ ಅವೆರಡನ್ನೂ ಸಾಧಿಸಿಕೊಂಡು ಹೋದ ಮೇಲೆ ಇನ್ನು ಹೆಡಮೆಟ್ಟಲಾಗುವುದಿಲ್ಲ. ಕಾಲವೂ ತಪ್ಪಿತು; ಕಾಲೂ ತಪ್ಪಿತು. ಇನ್ನು ಈಸಿದಷ್ಟು ಈಸುವುದು ಮತ್ತೆ ಗಂಗಾದೇವಿ ತೇಲಿಸಿಕೊಂಡು ಹೋದಲ್ಲಿ” (ಆತ್ಮಕಥನ, ಕನ್ನಡದ ಮೊರೆ, ಪು. 21) ಎನ್ನುವರು. ಅವರ ಸಂಶೊಧನ ಸಾಮ್ರಾಜ್ಯವನ್ನು ಸಮೀಕ್ಷಿಸಿದರೆ ಈ ಮಾತುಗಳು ಅವರ ಸೌಜನ್ಯದ ಸಂಕೇತವೇ ಹೊರತು ವಾಸ್ತವವೆನ್ನಿಸುವುದಿಲ್ಲ.

ಪಾಶ್ಚಾತ್ಯ ವಿದ್ವಾಂಸರಾದ ರೆವೆರೆಂಡ್ ಎಫ್.ಕಿಟ್ಲ್ ಅವರು ಮತ್ತು ಬಿ.ಎಲ್.ರೈಸ್ ಅವರು ಕನ್ನಡ ಸಾಹಿತ್ಯದ ರೂಪುರೇಶೆಗಳನ್ನು ತೋರಿಸಿಕೊಟ್ಟಂದಿನಿಂದ ಕನ್ನಡದಲ್ಲಿ ಸಂಶೋಧನ ಯುಗ ಮೊದಲಾಯಿತು ಎನ್ನಬಹುದು. ಕವಿಗೂ ಆತನ ಕಾವ್ಯಕ್ಕೂ ಇರುವ ಪರಸ್ಪರ ಸಂಬಂಧವನ್ನು ವಿಶ್ಲೇಷಿಸುವಲ್ಲಿ, ಆಯಾ ಕವಿಗಳ ಕಾಲ ಮತ್ತು ಮತ ದೇಶಗಳ ಪರಿಜ್ಞಾನದ ಪಾತ್ರವೇನು ಎನ್ನುವುದು ನಮ್ಮವರಿಗೆ ಮನವರಿಕೆಯಾಯಿತು. ಆ ಬಳಿಕ ಈ ಕಾರ್ಯಕ್ಷೇತ್ರದಲ್ಲಿ ಶ್ರಮಿಸಿದ ಅಗ್ರಪಂಕ್ತಿಯ ವಿದ್ವಾಂಸರಲ್ಲಿ ಪೈ ಅವರು ಒಬ್ಬರು. ಅವರ ಈ ಕಾರ್ಯಕ್ಷೇತ್ರದ ಹರವು ಬಹಳ ದೊಡ್ಡದು. ಇಂಗ್ಲಿಷ್, ಕೊಂಕಣಿ ಮತ್ತು ಕನ್ನಡ ಭಾಷೆಗಳಲ್ಲಿ ಅವರ ಲೇಖನಗಳನ್ನು ಬರೆದಿರುತ್ತಾರೆ. ಕೇವಲ ಕನ್ನಡವೊಂದನ್ನೇ ತೆಗೆದುಕೊಂಡರೂ 1927 ರಲ್ಲಿ ಮೊದಲಾದ ಅವರ ಈ ಕೆಲಸ 1967ರ ವರೆಗೆ ವ್ಯಾಪಿಸಿದೆ. ಈ ನಿಡಿದಾದ 40 ವರ್ಷಗಳ ಅವಧಿಯಲ್ಲಿ ಅವ್ರು ನನ್ನ ಎಣಿಕೆಯಂತೆ, ಹತ್ತಿರ ಹತ್ತಿರ 120 ಲೇಖನಗಳನ್ನು ಬರೆದಿರುತ್ತಾರೆ. ಬಹುಭಾಷಾ ವಿಶಾರದರಾದ ಅವರು ಬೇರೆ ಬೇರೆ ಭಾಷೆಗಳಿಂದ ಅವರು ವಿಷಯಗಳ ರಾಶಿಯನ್ನೇ ತಂದು ಸುರಿದಿರುವುದಲ್ಲದೆ, ಹಲವಾರು ವಿಷಯಗಳನ್ನು ಜಿಜ್ಞಾಸೆ ಮಾಡಿರುತ್ತಾರೆ ಅವರ ಈ ವಸ್ತುವೈವಿಧ್ಯವನ್ನು ಕನ್ನಡಕ್ಕೆ ಸೀಮಿತಗೊಳಿಸಿಕೊಂಡು ವಿಭಜಿಸಿದರೂ, ಕನ್ನಡ ನಾಡಿನಲ್ಲಿ ಪ್ರಚಲಿತವಾಗಿದ್ದ ವಿವಿಧ ಧರ್ಮಗಳು, ರಾಜವಂಶಗಳು, ಕನ್ನಡನುಡಿ ಮತ್ತು ಸಾಹಿತ್ಯಗಳು ಸಮಾವೇಶಗೊಳ್ಳುತ್ತದೆ. ಈ ಹಲವಾರು ಲೇಖನಗಳು ಬೇರೆ ಬೇರೆ ಪತ್ರಿಕೆಗಳು, ಸಂಭಾವನಾ ಸಂಪುಟಗಳು, ಸಂಸ್ಕರಣ ಸಂಚಿಕೆಗಳಲ್ಲಿ ಚೆದುರಿಹೋಗಿರುವುದರಿಂದ; ಇವುಗಳ ಮೌಲ್ಯ ನಿರ್ಣಯವನ್ನು ಈವರೆಗೆ ಮಾಡಲು ವಿದ್ವಾಂಸರಿಗೆ ಅವಕಾಶವಾಗಿಲ್ಲ. ಗೋವಿಂದ ಪೈಯವರ ಜನ್ಮಶತಮಾನೋತ್ಸವದ ಕಾಲದಲ್ಲಿಯೂ ಈ ಬಗ್ಗೆ ಪ್ರಕಟವಾಗಿರುವ ಪ್ರಬಂಧಗಳು ತೀರಾ ವಿರಳ; ಅಷ್ಟೇ ಅಲ್ಲದೆ,  ಅಸಮಗ್ರವಾಗಿಯೋ ಅಸಮರ್ಪಕವಾಗಿಯೋ ಉಳಿದಿದೆ. ಬೇರೆ ಬೇರೆ ವಿಷಯಗಳಲ್ಲಿಯೂ ತಜ್ಞರಾದವರು ಮಾಡಬೇಕಾದ ಈ ಕೆಲಸ ಸ್ಥೂಲವಾಗಿಯಾದರೂ ಆಗಿದ್ದರೆ ನನ್ನ ಈ ಸಮಾಲೋಕನಕ್ಕೆ ತುಮ್ಬ ಅನುಕೂಲವಾಗುತ್ತಿತ್ತು. 

ಲೇಖನಗಳು[ಬದಲಾಯಿಸಿ]

ಗೋವಿಂದ ಪೈ ಅವರು ಬೌದ್ಧ ಧರ್ಮದ ಕುರುಹನ್ನು ಗುರುತಿಸುವಲ್ಲಿ ಮಂಗಳೂರಿನ ಕದಿರೆಯಲ್ಲಿರುವ ಮಂಜುನಾಥೇಶ್ವರ ಮತ್ತು ಧರ್ಮಸ್ಥಳದಲ್ಲಿರುವ ಮಂಜುನಾಥೇಶ್ವರ ಶಿವಲಿಂಗಗಳ ಬಗ್ಗೆ ಹೇಳಿರುವ ಸಂಗತಿಗಳು ಕುತೂಹಲಪ್ರದವಾದವು. ಮಹಾವೀರ ಮತ್ತು ಬುದ್ಧರ ಪರಿನಿರ್ವಾಣ ಕಾಲವನ್ನು ಕುರಿತು ಬಹು ದೀರ್ಘವಾದ ಲೇಖನಗಳನ್ನು ಬರೆದಿರುವ ಪೈ ಅವರ ನಿರ್ಣಯವನ್ನು ಡಾ. ಎ.ಎನ್ ಉಪಾಧ್ಯ ಸಮ್ಮತಿಸಿರುವುದು ಸ್ವಾಗತಾರ್ಹ. ಕರ್ನಾಟಕದಲ್ಲಿ ಪ್ರತಿಷ್ಟಿತವಾಗಿರುವ ಗೋಮ್ಮಟೇಶ್ವರ, ಕಾರ್ಕಳದ ಗೋಮ್ಮಟೇಶ್ವರ ಮತ್ತು ವೇಣೂರಿನ ಗೋಮ್ಮಟೇಶ್ವರಗಳನ್ನು ಕುರಿತು ಅವರು ಬರೆದಿರುವ ಲೇಖನಗಳು ಅಮೂಲ್ಯವಾದವು. ನೃಪತುಂಗನ ಮತವಿಚಾರ, ಮಧ್ವಾಚಾರ್ಯರ ಕಾಲ, ಬಸವೇಶ್ವರರ ಕಾಲನಿರ್ಣಯಗಳು ಲೇಖನಗಳಲ್ಲಿ ವ್ಯಕ್ತವಾಗುವ ಪೈ ಅವರ ಪರಿಶ್ರಮ ಪ್ರಶಂಸನೀಯವಾದುದು. ಗೋವಿಂದ ಪೈ ಅವರು ಧಾರ್ಮಿಕ ಲೇಖನಗಳಲ್ಲಿ ಕರ್ನಾಟಕಕ್ಕೆ ಮಾತ್ರ ತಮ್ಮ ಗುರಿಯನ್ನು ಸೀಮಿತಗೊಳಿಸದೆ ಸಮಗ್ರ ಭಾರತದ ಇತಿಹಾಸವನ್ನೇ ತಮ್ಮ ವ್ಯಾಸಾಂಗದ ಅವಧಿಯನ್ನಾಗಿ ಇಟ್ಟುಕೊಂಡಿದ್ದಾರೆ. ಹಾಗೆ ಕನ್ನಡಾ ಭಾಷೆ ಮತ್ತು ಸಾಹಿತ್ಯವನ್ನು ಕುರಿತಂತೆ ಪೈ ಅವರು ಮಾಡಿರುವ ಕೆಲಸಗಳನ್ನು ಕಂಡರೆ ಆಶ್ಚರ್ಯವಾಗುತ್ತದೆ. ಕನ್ನಡದ ಪ್ರಾಚೀನತೆ, ಹಾಗೆ ಪಂಪನಿಂದ ಪಾರ್ತಿಸುಬಬ್ನವರೆಗೆ ಲೇಖನಗಳನ್ನು ಬರೆದಿದ್ದಾರೆ. ಒಟ್ತಿನಲ್ಲಿ ಗೋವಿಂದ ಪೈ ಅವರ ಸಂಶೋಧನ ಪ್ರಬಂಧಗಳನ್ನು ಸಾವಧಾನವಾಗಿ ಪರಿಶೀಲಿಸಿದಲ್ಲಿ ಅವುಗಳ ಮೌಲ್ಯವನ್ನು ಕುರಿತಂತೆ ಹೀಗೆ ಹೇಳಬಹುದು: 1.ಅವರ ಪ್ರತಿಯೊಂದು ಸಂಶೋಧನ ಲೇಖನವೂ ಒಂದು ಅಪೂರ್ವವಾದ ಗಣಿ. ಅದರಲ್ಲಿ ದೊರೆಯುವ ಅದರುಗಳನ್ನು ಒಮ್ಮೆ ಒಪ್ಪವಿಟ್ಟು ನೋಡಬೇಕು. 2.ಅನ್ಯರ ಭಿನ್ನಾಭಿಪ್ರಾಯಗಳು ಹಾಗಿರಲಿ, ಅವರೇ ತಮ್ಮ ಅಭಿಪ್ರಯಗಳನ್ನು ಪುನರ್ವಿಮರ್ಶಿಸಿ, ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಾಮಾಣಿಕತೆ ಪ್ರಶಂಸನೀಯ. 3.ಇತರರು ಎತ್ತಿದ ಆಕ್ಷೇಪಣೆಗಳಿಗೆ ಅವ್ರು ಪ್ರತ್ಯುತ್ತರ ನೀಡುವಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಂಡಿರುವುದು ತೀರಾ ವಿರಳ. 4.ಬಹುಭಾಷಾತಜ್ಞರಾದ ಅವರು ಸಾಮಾಗ್ರಿ ಸಂಗ್ರಹಿಸುವಲ್ಲಿ ಅತ್ಯಂತ ಸಮರ್ಥರು. 5.ಅವರ ಪ್ರತಿಪಾದನೆಯಲ್ಲಿ ಆಗಿಂದಾಗ್ಗೆ ತೋರಿ ಬರುವ ದೂರಾನ್ವಯ ಮತ್ತು ಬಳಸು ಬಳಸಾದ ಅವರ ನಿರ್ಣಯಗಳು ಮಸುಕಾಗುವವಲ್ಲದೆ, ಮಾನ್ಯವಾಗದೇ ಹೋಗುವುದೂ ಉಂಟು. ಕನ್ನಡದ ಮಟ್ಟಿಗೆ ಅವರ ಸಂಶೋಧನ ಸಾಮಾಗ್ರಿ ಪ್ರಪ್ರಥಮ ಪ್ರಯತ್ನಗಳೆನ್ನುವುದರಲ್ಲಿ ಸಂಶಯವಿಲ್ಲ. “ಅವರು ತಮ್ಮ ಪಾಂಡಿತ್ಯ ಬಲದಿಂಂದ ಏನು ಸಾಧಿಸುವರೋ ಅದೇ ಅವರ ಪಾಲಿಗೆ ಸಂದ ಸನ್ಮಾನ” ಎಂದು ಡಾ.ಉಪಾಧ್ಯೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇತರ ಕೃತಿಗಳು[ಬದಲಾಯಿಸಿ]

ಗೋವಿಂದ ಪೈ ಅವರ ಇತರ ಕೃತಿಗಳಲ್ಲಿ, ಅವರು ರಚಿಸಿರುವ ‘ಹೆಬ್ಬೆರಳು’ ‘ಚಿತ್ರಭಾನು’ ಅಥವಾ 1942 ಮತ್ತು ‘ತಾಯಿ’ ಎಂಬವು ನಾಟಾಕಗಳಾದರೆ, ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಆಗಿಂದಾಗ್ಗೆ ಬರೆದ ಕೆಲವು ವ್ಯಕ್ತಿಚಿತ್ರಗಳು, ಆತ್ಮಕಥನಗಳು ಮತ್ತು ಭಾಷಣಗಳು ಅಡಕವಾಗಿದೆ. ಪೈ ಅವರ ಕೆಲವು ಪತ್ರಗಳು ಎಂಬ ಸಂಕಲನ ಆ ವ್ಯಕ್ತಿಯ ಔನ್ನತ್ಯವನ್ನು ತಿಳಿಯ ಹೇಳುವ ಪ್ರತ್ಯಕ್ಷ ಸಾಕ್ಷಿಯಂತಿವೆ. ವರ ಅನುವಾದಿತ ಕೃತಿಗಳಲ್ಲಿ ‘ಶ್ರೀ ಕೃಷ್ಣ ಚರಿತ್ರ’ವೆನ್ನುವುದು ಶ್ರೀ ನವೀನ ಚಂದ್ರಸೇನರ ಬಂಗಾಳಿ ಕಾವ್ಯದ ಗದ್ಯಾನುವಾದವಾದರೆ, ‘ನೋ ನಾಟಕಗಳು’ ಎಂಬವು ಜಪಾನಿ ಭಾಷೆಯ ಕೆಲವು ನಾಟಕಗಳ ಅನುವಾದಗಳು. ಅವರ ಕವನಸಂಕಲನದಲ್ಲಿ ಉಮರ್ ಖಯ್ಯಾಮಿನ 50 ರೂಬಾಯಿಗಳ ಭಾಷಾಂತರವಲ್ಲದೆ, ಇಂಗ್ಲಿಷ್, ಉರ್ದು, ಬ್‍ಂಗಾಳಿ ಭಾಷೆಯ ಅನುವಾದಗಳೂ ಇವೆ. ಪೈ ಅವರು ಅನುವಾದಿಸಿದ್ದ ಟಾಕೂರರ ‘ಗೀತಾಂಜಲಿ’ ಪದ್ಯಗಳಲ್ಲಿ ಕೆಲವು ‘ಕನ್ನಡ ಸಹಕಾರಿ’ ಎಂಬ ಪಕ್ಷ ಪತ್ರಿಕೆಯಲ್ಲಿ ಬಿಡಿ ಬಿಡಿಯಾಗಿ ಅಚ್ಚಾಗಿದೆ. ಪ್ರಕೃತದಲ್ಲಿ ಅವರ ‘ಹೆಬ್ಬೆರಳು’ ನಾಟಕದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬಹುದು, ಮಹಾಭಾರತದಲ್ಲಿ ಕಂಡುಬರುಅವ ಏಕಲವ್ಯನಿಗೆ ಆದ ಅನ್ಯಾಯಕ್ಕಾಗಿ ಮರುಗಿ, ಅವನನ್ನು ಕುರಿತಂತ ಕನ್ನಡದಲ್ಲಿಯೇ ಕುವೆಂಪು ವಿರಚಿತ ‘ಬೆರಳ್‍ಗೆ ಕೊರಳ್’ ಎಂಬ ನಾಟಕವೊಂದರ ಜೊತೆಗೆ, ಗಮನಾರ್ಹವಾದ ಪೈ ಅವರ ‘ಹೆಬ್ಬೆರಳು’ ಎನ್ನುವುದೂ ಸೇರಿ ಎರಡು ಇವೆ. ಕೈಲಾಸ್ ಅವರ ‘ಪರ್ಪಸ್’ ಎನ್ನುವುದು ಇಂಗ್ಲಿಷ್ ನಲ್ಲಿದ್ದು ಸಾಕಷ್ಟು ಸುಪ್ರಸಿದ್ದವಾಗಿದೆ. ಒಂದೇ ವಸ್ತುವನ್ನು ಒಳಗೊಂಡಿದ್ದರೂ ಆಯಾ ಲೇಖಕರ ದೃಷ್ಟಿಗೆ ಅನುಗುಣವಾಗಿ ಅವು ಬೇರೆ ಬೇರೆ ಗುರಿಯನ್ನು ಸಾಧಿಸುತ್ತದೆ. ಕುವೆಂಪು ಅವರು ಈ ಪ್ರಸಂಗದಲ್ಲಿ ಗ್ರೀಕ್ ನ್ನಾತಾಕಗಳಲ್ಲಿ ಕಂಡುಬರುವ ದೈವ ಸಂಕಲ್ಪವನ್ನು ನ್ನಿರೂಪಿಸಿದರೆ, ಪೈ ಅವರು ಆರ್ಯ ಮತ್ತು ಅನಾರ್ಯ ಘರ್ಷಣೆಯತ್ತ ಹೆಚ್ಚು ಗಮನಹರಿಸಿರುತ್ತಾರೆ. ಸರಳ ನಾಟಕವಾದ ‘ಹೆಬ್ಬೆರೆಳು’ ಎಂಬ ಕೃತಿಯಲ್ಲಿ ಪೈ ಅವರ ಗ್ರೀಕ್ ನಾಟಕದ ರಚನೆಯಲ್ಲಿ ಕಂಡುಬರುವ ‘ಗೋಂದಳ’ವನ್ನು ಬಳಸಿಕೊಂಡಿರುತ್ತಾರೆ. ನಾಲ್ಕು ನೋಟಗಳುಳ್ಳ ಈ ನಾಟಕ ಪೈ ಅವರ ಜೀವನದೃಷ್ಟಿಯನ್ನು ಯಶಸ್ವಿಯಾಗಿ ಪ್ರತಿಪಾದಿಸುವಂತಿದೆ. ಧ್ವನಿಪೂರ್ಣವಾದ ಶೀರ್ಷಿಕೆ, ಉನ್ನತವಾದ ಧ್ಯ್ಯೇಯ, ಪ್ಶ್ಚಾತಾಪದಿಂದ ಪುನೀತವಾಗುವ ಪಾತ್ರಗಳ ಸಂಯೋಜನೆ, ಅಪೂರ್ವವಾದ ಕಲಾಕೌಶಲ್ಯದಿಂದ ‘ಹೆಬ್ಬೆರಳು’ ನಾಟಕ ಮನಮೆಚ್ಚುವಂತಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂಗತಿಯನ್ನು ಒಳಗೊಂಡ ‘ಚಿತ್ರಭಾನು ಅಥವಾ 1942’ ಎಂಬ ಗದ್ಯನಾಟಕ ಮತ್ತು ‘ತಾಯಿ’ ಎನ್ನುವುದು ಕೇವಲ್ ಪ್ರಯತ್ನಗಳೆಂದು ಹೇಳಿ ಸಮಾಧಾನಪಟ್ಟುಕೊಳ್ಳಬಹುದು. ಪ್ರಬಂಧಗಳಲ್ಲಿ ಪೈ ಅವರ ‘ಆತ್ಮಕಥನ’ ಅವರ ಸಾಹಿಯ್ತ ಕೃಷಿಯ ಮಥನದ ನವನೀತವೆನ್ನಿಸಿದರೆ ‘ಬರಹಗಾರನ ಹಣೆಬರಹ’ ಲೇಖಕನ್ ಕಷ್ಟನಿಷ್ಠುರಗಳ ಕೈಗನ್ನಡಿಯಂತಿದೆ. ವ್ಯಕ್ತಿಚಿತರ್ಗಳಲ್ಲಿ ಪಂಜೆ ಮಂಗೇಶರಾಯರನ್ನು ಕುರಿತ ‘ಕನಸಾದ ನನಸು’ ಎನ್ನುವುದು ಪೈ ಅವರಿಗೆ ತಮ್ಮ ಗುರುಗಳಾದ ಪಂಜೆಯವರಲ್ಲಿದ್ದ ಪೂಜ್ಯಭಾವÀ ಪ್ರತೀಕದಂತಿದೆ.ತಮ್ಮ ಒಡನಾದಿಗಳದ ಎಮ್,ಎನ್. ಕಾಮತ್ ಮತ್ತು ಕಿಲ್ಲೆಯವರ ಚಿತ್ರಗಳಾನ್ನು ಬಿಡಿಸುವಲ್ಲಿ ಅವರ ಮೈತ್ರಿಯೇ ಮೂರ್ತಿವೆತ್ತಂತಿದೆ. ಎಮ್.ಆರ್ ಶ್ರೀನಿವಾಸ್‍ಮೂರ್ತಿಯವರಿಗೆ ಸಲ್ಲಿಸಿರುವ ನೆನೆಪಿನ ಕಾಣಿಕೆ ಹೃತ್ಪೂರ್ವಕವಾದ ಒಂದು ಹಣತೆಯ ದೀಪವೇ ಸರಿ. ದ.ರಾ ಬೇಂದ್ರೆಯವರ 50ನೇ ಹುಟ್ಟಿದ ಹಬ್ಬಕ್ಕೆ ಅವರು ಕಳುಹಿಸಿಕೊಟ್ಟಿರುವ ‘ಹರಕೆ’ಯಂತೂ ‘ಕವಿಗೆ ಕವಿ ಮುನಿವಂ’ ಎಂಬ ಹೇಳಿಕೆಯನ್ನೇ ಹುಸಿಯೆನ್ನಿಸುತ್ತದೆ. ಬೊಂಬಾಯಿ ಕನ್ನಡ ಸಾಹಿತ್ಯ ಸಮ್ಮೇಳನದ ಬಾಷಣವಾದ ‘ಕನ್ನಡದ ಮೊರೆ’ ಎನ್ನುವುದು ಆದ್ಯಂತವೂ ಅವರ್ ಕನ್ನಡದ ಮೆಲಿನ ಅಕ್ಕರೆಯ ತೆರೆಮಾಲೆಯೇ ಸರಿ; ಆಧುನಿಕ ಸಾಹಿತ್ಯದ ಕೆಲವು ಪ್ರಕಾರಗಳನ್ನು ಕುರಿತಂತೆ ಅವರು ಬರೆದಿರುವ ಬರಹಗಳು ಆಯಾ ಕ್ಷೇತ್ರದ ಮೊತ್ತಮೊದಲ ಹೆಜ್ಜೆಯ ಜಾಡನ್ನು ಗುರುತಿಸುವ ಪ್ರಯತ್ನಗಳಂತಿದೆ. ವಿದ್ವತ್ಪ್ರಬಂಧಗಳಲ್ಲಿ ಕಂಡುಬರುವ ಪೈ ಅವರ ಶೈಲಿ, ಈ ಮೇಲಿನ ಪ್ರಬಂಧಗ|ಳಲ್ಲಿ ಎಷ್ಟು ಲಲಿತವಾಗಿದೆಯೋ ಅಷ್ಟೇ ಆತ್ಮೀಯವೂ ಆಗಿದೆ. ಅವರ ಪತ್ರಗಳ ಮೂಲಕ ವಿಶದವಾಗುವ್ವ ಪೈ ಅವರ ಸರಳಾತೆ, ಪ್ರಾಮಾಣಿಕತೆ, ವಿಚಾರಪ್ರಿಯತೆ ಅವರ ಜೀವನದ ನಿತ್ಯಸೂತ್ರಗಳಂತಿದೆ.

ಉಪಸಂಹಾರ[ಬದಲಾಯಿಸಿ]

ಗೋವಿಂದ ಪೈ ಅವರ ಅನುವಾದಿತ ಕೃತಿಗಳ ಬಗ್ಗೆ ಹೆಚ್ಚು ಹೇಳಲಾಗದಿದ್ದರೂ ಅವರು ಆಯಾ ಭಾಷೆಯ ಮೂಲವನ್ನೇ ಕಲಿತು ಹೇಗೆ ಅದರಲ್ಲಿ ಉದ್ಯುಕ್ತರಾದರೆನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಅವರ ಈ ಅನುವಾದಗಳಲ್ಲಿ ಕೆಲವು ಭಾವಾನುವಾದವಾಗಿರಬಹುದು, ಕೆಲವು ರೂಪಾಂತರಗಳಾಗಿರರಬಹುದು. ಈ ಬಗ್ಗೆ ವ್ಯಾಸಾಂಗಪೂರ್ಣವಾದ ವಿಶ್ಲೇಷಣೆ ನಡೆಸಿರುವ ಪ್ರಧಾನ್ ಗುರುದತ್ತ ಅವರು, “ಕೆಲವೆಡೆಗಳಲ್ಲಿ ಅವು ಸಾಕಷ್ಟು ತೃಪ್ತಿಕರವೆನ್ನಿಸದಿದ್ದರೂ ಕನ್ನಡ ಸಾಹಿತ್ಯಕ್ಕೆ ಈ ಹೊಸ ಆಯಾಮವನ್ನು ಜೋಡಿಸಿದ ಅವರ ಕಿರ್ತಿಗೆ ಕುಂದನ್ನೇನೂ ತಾರವು” ಎಂದು ಹೇಳಿರುವುದನ್ನು ಒಪ್ಪಿ ಹೆಮ್ಮೆಪಟ್ಟುಕೊಳ್ಳಬಹುದಾಗಿದೆ. ಗೋವಿಂದ ಪೈ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಕೃತಿಗಳಲ್ಲಿ ಕೆಲವು ಪರಿಚಯಾತ್ಮಕವಾದುದು; ಕೆಲವು ವರ್ಣನಾತ್ಮಕವಾದುದು. ಅವರ ಕೃತಿಗಳ ಮೌಲ್ಯನಿರ್ಣಯ ಮಾಡುವಲ್ಲಿ ವಿ.ಎಂ ಇನಾಂದಾರರ ‘ಗೋವಿಂದ ಪೈ’ ಎಂಬ ಪುಸ್ತಕ ತನ್ನ ಏಕಸೂತ್ರತೆ ಹಾಗೂ ವಸ್ತುನಿಷ್ಠ ದೃಷ್ಟಿಯಿಂದ ಉತ್ಕೃಷ್ಟವಾಗಿದೆ. ಲೇಖನ ಸಂಕಲನಗಳಾನ್ನು ಒಳಗೊಂಡ ಪುಸ್ತಕಗಳಲ್ಲಿ, ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯವರು ಪ್ರಕಟಿಸಿರುವ ‘ಗೋವಿಂದಪೈ ಶತಮಾನ ಸ್ಮರಣೆ’ ಎಂಬ ಕೃತಿ ಒಂದು ಕೈಗಂಬವಾಗಿ ಉಳಿಯುತ್ತದೆ. ಪ್ರತಿಭೆ ಮತ್ತು ಪಾಂಡಿತ್ಯಗಳ ಸಮನ್ವಯವನ್ನು ಸಾಧಿಸಿ ಪಾಲಿಸಿಕೊಂಡು 62 ವರ್ಷಗಳ ಕಾಲ ಕನ್ನಡ ಕಾರ್ಯವನ್ನು ಕೈಗೊಂಡು ಕೃತಕೃತ್ಯರಾದ ಗೋವಿಂದ ಪೈ ಅವರ ಈ ಸಾಹಿತ್ಯಾವಲೋಕನ “ಕರಿಯು ಕನ್ನಡಿಯೊಳಗಿಪ್ಪ ತೆರನಂತೆ” ತೋರಿ ಕೊಡುವ ಒಂದು ಪ್ರಯತ್ನವೇ ಹೊರತು, ಪೂರ್ಣ ಪ್ರಮಾಣದ ಚಿತ್ರವಲ್ಲ್. ಗೋವಿಂದ ಪೈ ಅವರ ವ್ಯಕಿತ್ವ ಅವರ ಅಚ್ಚುಮೆಚ್ಚಿನ ಗೊಮ್ಮಟೇಶ್ವರನಂತೆಯೇ ಉನ್ನತವೂ, ಉದಾತ್ತವೂ ಆದುದು. “ಶ್ರಮವಿರದೆ ನಿಮ್ಮಂತರಂಗವನರಿಯಲಹುದೆ?” ಎಂಬ ಸ್ತುತಿಗೆ ಇವರು ಪ್ರತ್ಯಕ್ಷ ಸಾಕ್ಷಿಯೇ ಸರಿ.