ಸದಸ್ಯ:Raksha Bhaskar Bhat/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಒರಿಸ್ಸ ನೃತ್ಯ ಸಂಪ್ರದಾಯ: ಭರತನಾಟ್ಯ, ಕಥಕ್, ಕಥಕಳಿ, ಮಣಿಪುರಿಗಳಂತೆ ಇದು ಒಂದು ಸ್ವತಂತ್ರ್ಯ ನೃತ್ಯಕಲಾ ಪ್ರಕಾರ ಎಂಬ ವಾದವನ್ನು ಒಪ್ಪುವುದು ಕಷ್ಟವಾದರೂ ನೃತ್ಯಕಲೆ ಒರಿಸ್ಸದಲ್ಲಿ ಬಹುಪ್ರಾಚೀನ ಕಾಲದಿಂದಲೂ ಪುಷ್ಟವಾಗಿ ಬೆಳೆದಿದೆಯೆಂಬುದನ್ನೂ ಸ್ವಲ್ಪ ಮಟ್ಟಿಗೆ ಅದರ ಶಾಸ್ತ್ರ, ಕಲೆಗಳಲ್ಲಿನ ಪ್ರಾದೇಶಿಕ ವೈಶಿಷ್ಟ್ಯಗಳ ಮೂಲಕ ಇತರ ಸಂಪ್ರದಾಯಕಗಳಿಗಿಂತ ಸ್ವಲ್ಪ ಭಿನ್ನತೆಯನ್ನು ಪಡೆದುಕೊಂಡಿದೆಯೆಂಬುದನ್ನೂ ಒಪ್ಪಿಕೊಳ್ಳಬಹುದು. ಭರತಮುನಿ ತನ್ನ ನಾಟ್ಯಶಾಸ್ತ್ರದಲ್ಲಿ ಆವಂತಿ, ದಾಕ್ಷಿಣಾತ್ಯ, ಪಾಂಚಾಲೀ ಮತ್ತು ಓಢ್ರಮಾಗಧೀ ಎಂಬ 4 ನಾಟ್ಯರೀತಿಗಳನ್ನು ಹೇಳಿದ್ದಾನೆ. ಪ್ರಸಿದ್ಧವಾದ ಹಾಥಿಗುಂಫ ಶಾಸನದಲ್ಲಿ ಗಾಂಧರ್ವ ವಿದ್ಯೆಯ ಉಲ್ಲೇಖವಿದೆ. ಕೇಸರಿ ಸಂತತಿಯಲ್ಲಿ ಗಾಂಧರ್ವ ಕೇಸರಿ 851-68ರಲ್ಲಿಯೂ ಶೈವತಂತ್ರ ನೃತ್ಯಕೇಸರಿ 949-65ರಲ್ಲಿಯೂ ಓಢ್ರದೇಶವನ್ನಾಳಿದರು. ನೃತ್ಯಕಲೆಯನ್ನು ಶೈವತಂತ್ರ ರಾಜರ ವಿದ್ಯಾಭ್ಯಾಸದ ಅವಿಭಾಜ್ಯ ಅಂಗವಾಗಿ ವಿಧಿಸುತ್ತದೆ. ಕೇಸರಿ ಸಂತತಿಯವರೂ ಜೋಡ ಗಂಗದೇವನ ಸಂತತಿಯವರೂ ದೇವಾಲಯಗಳಲ್ಲಿ ನೂರಾರು ನಾಟ್ಯ ಮಂದಿರಗಳನ್ನು ಕಟ್ಟಿಸಿದುದಲ್ಲದೆ ಸ್ವತಃ ನಾಟ್ಯಕಲೆಯ ಪ್ರೇಮಿಗಳೂ ಪೋಷಕರೂ ಆಗಿದ್ದರು. ಪುರಿಯ ಜಗನ್ನಾಥ ದೇವಾಲಯ ಇಂದಿಗೂ ರಂಗಪುಜೆಯ ಅಂಗವಾಗಿ ಶುದ್ಧವಾದ ನಾಟ್ಯಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ. ಒರಿಸ್ಸದ ಶಿಲ್ಪದಲ್ಲಿ ನಾಟ್ಯಕಲೆಯನ್ನು ವಿಪುಲವಾಗಿ ಉಳಿಸಿಕೊಂಡು ಬರಲಾಗಿದೆ. ಹೀಗೆ ಖಾಂದಗಿರಿ ಉದಯಗಿರಿಗಳ ಜೈನ ಮಹಾದೇವಾಲಯಗಳು, ಭರತೇಶ್ವರದ ಶಿವದೇವಾಲಯ, ಪರಶುರಾಮೇಶ್ವರ ದೇವಾಲಯ, ಭುವನೇಶ್ವರದ ಮುಕ್ತೇಶ್ವರ ದೇವಾಲಯ, ರಾಜಾರಾಣಿ ದೇವಾಲಯ, ಪುರಿಯ ಜಗನ್ನಾಥ ದೇವಾಲಯ, ಕೋಣಾರ್ಕದ ಪ್ರಸಿದ್ಧ ಸೂರ್ಯದೇವಾಲಯ ಮುಂತಾದುವುಗಳಲ್ಲಿ ನೃತ್ಯಮಗ್ನವಾದ ಹಲವು ಸುಂದರ ಶಿಲ್ಪಗಳು ದೊರೆಯುತ್ತವೆ. 16ನೆಯ ಶತಮಾನದಲ್ಲಿ ಪ್ರತಾಪರುದ್ರದೇವನ ಮಂತ್ರಿಯಾಗಿದ್ದ ರಾಯರಮಾನಂದ ಸಂಸ್ಕೃತ ನಾಟಕಕಾರನಾಗಿದ್ದುದಲ್ಲದೆ ಸ್ವತಃ ನರ್ತಕನಾಗಿದ್ದು ಜವಲು ದೇವದಾಸಿಯರಿಗೆ ನಾಟ್ಯಾಚಾರ್ಯನಾಗಿದ್ದ. ಒರಿಸ್ಸ ನೃತ್ತದಲ್ಲಿ ಅಭಿನಯವನ್ನು ಸೇರಿಸಿ ನೃತ್ಯವನ್ನಾಗಿಸಿದಾತ ಇವನೇ ಎಂದು ನಂಬಲಾಗಿದೆ. 13ನೆಯ ಶತಮಾನದಲ್ಲಿ ಕೋಣಾರ್ಕದ ದೇವಾಲಯವನ್ನು ಕಟ್ಟಿಸಿದ ನರಸಿಂಗದೇವನ ಮಗಳು ಚಂದ್ರಾದೇವಿ ಪ್ರಸಿದ್ಧ ನರ್ತಕಿಯಾಗಿದ್ದಳು. ಗಜಪತಿ ಕಪಿಲೇಂದ್ರ ಸಂಗೀತ ನೃತ್ಯ ಕಲೆಗಳ ಪೋಷಕನಾಗಿದ್ದು ಪರಶುರಾಮ ವಿಜಯವೆಂಬ ನೃತ್ತನಾಟಕವನ್ನು ಬರೆದು ಪುರಿಯ ಜಗನ್ನಾಥ ಮಂದಿರದಲ್ಲಿ ಅನೂಚಾನವಾಗಿ ಅಭಿನೀತವಾಗಲು ಏರ್ಪಾಡು ಮಾಡಿದ. 17, 18ನೆಯ ಶತಮಾನಗಳಲ್ಲಿ ವೈಷ್ಣವ ಸಂತರು ರಾಧಾಕೃಷ್ಣಪ್ರೇಮವನ್ನು ಅಮರವಾಗಿಸಿ ರಚಿಸಿದ ಹಾಡುಗಳಿಗೆ ಅಭಿನಯವನ್ನು ಅಳವಡಿಸಿ ಗೊತಿಪುವ ನಟರು ಲಾಸ್ಯತಾಂಡವ ಸಂಪ್ರದಾಯಗಳಲ್ಲಿ ಬೆಳೆಸಿಕೊಂಡು ಬಂದರು. ಒರಿಸ್ಸದಲ್ಲಿ ನೃತ್ಯಸಂಪ್ರದಾಯ ಶೈವ ವೈಷ್ಣವ ಮತ್ತು ಬೌದ್ಧ ಧರ್ಮಗಳ ಪ್ರಭಾವದಿಂದ ಬೆಳೆಯಿತು. ವೈಷ್ಣವ ಮತದಲ್ಲಿ ಮುಖ್ಯ ಚೈತನ್ಯಪಂಥದ ರಾಧಾಕೃಷ್ಣರ ಪ್ರೇಮ ವಿಷಯಕವಾದ ಅಭಿನಯಪುರ್ಣ ಲಾಸ್ಯಪ್ರಕಾರಗಳು ನೃತ್ಯಕಲೆಯನ್ನು ಬೆಳೆಸಿದರೆ ಶೈವ ಬೌದ್ಧ ಧರ್ಮಗಳಲ್ಲಿ ತಂತ್ರಶಾಸ್ತ್ರದಿಂದ ಪ್ರಭಾವಿತವಾದ ನೃತ್ಯಸಂಪ್ರದಾಯ ಬೆಳೆಯಿತು. ಬೌದ್ಧಮತೀಯ ನೃತ್ಯಶೈಲಿ ಮುಖ್ಯವಾಗಿ ಥೇರಗಾಥಾ ಮತ್ತು ಥೇರಿಗಾಥಾಗಳಿಂದ ಸ್ಫೂರ್ತಿ ಪಡೆದು ವಜ್ರಯಾನ ಪದ್ಧತಿಯಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿತು. ಇದೇ ಅನಂತರದ ಟಿಬೆಟ್ ದೇಶದ ಪ್ರೇತನೃತ್ಯವಾಗಿ ಪರಿಣಮಿಸಿತೆನ್ನುತ್ತಾರೆ. ಹೀಗೆ ನೃತ್ಯವಿಷಯವುಳ್ಳ ಕಾಲಚಕ್ರ, ಹೇರುಕ, ಅಚಲ, ವಜ್ರಭೈರವ, ಸಂಭಾರ, ಮಹಾಕಾಲ ಮೊದಲಾದ ಬುದ್ಧ ಶಿಲ್ಪಗಳು ಒರಿಸ್ಸದಲ್ಲಿ ವಜ್ರಯಾನ, ಕಾಲಚಕ್ರಯಾನ, ಸಹಜಯಾನಗಳ ಪ್ರಭಾವವನ್ನು ಸೂಚಿಸುತ್ತವೆ. ಇವು ಶೈವರ ನಟರಾಜ ಕಲ್ಪನೆಯಿಂದ ಸ್ಫೂರ್ತಿ ಪಡೆದು ಜನ್ಮತಾಳಿದುವೆಂದು ಸ್ಥೂಲವಾಗಿ ಹೇಳಬಹುದು. ಶೈವರ ಕಾಪಾಲಿಕ, ಮತ್ತಮಯೂರ, ಪಾಶುಪತ, ತಾಂತ್ರಿಕ ಪಂಥಗಳು ನೃತ್ಯಕಲೆಯ ಶಿಲ್ಪಗಳಲ್ಲಿ ಪ್ರಭಾವ ಬೀರಿರುವುದನ್ನು ಅಲ್ಲಲ್ಲಿ ಕಾಣಬಹುದು. ಇದಲ್ಲದೆ ಜಯದೇವನ ಗೀತಗೋವಿಂದದ ಅಷ್ಟಪದಿ ಆಟ ಒರಿಸ್ಸ ನೃತ್ಯಕಲೆಯ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ. ಒರಿಸ್ಸ ನೃತ್ಯಕಲೆಗೆ ಮಹಾದೇವ ಮಹಾಪಾತ್ರನ ಅಭಿನಯಚಂದ್ರಿಕಾ, ಯದುನಾಥರಾಜಸಿಂಹನ ಸಂಗೀತಾಭಿನಯ ದರ್ಪಣಗಳೇ ಮೂಲ ಆಕರಗಳೆಂದು ಹೇಳಬೇಕು. ನಾರಾಯಣ ಮಿಶ್ರನ ದೇವದಾಸೀ ನೃತ್ಯಪದ್ಧತಿ, ಮಧು ಪಟ್ನಾಯಕನ ನಾಚುನಿವಿಧಿ, ಮುಕ್ತಾಮಹರಿಯ ನೀಲಾದ್ರಿನಾಚ ಎಂಬ ಅಪ್ರಕಟಿತ ಗ್ರಂಥಗಳು ದೇವದಾಸಿಯರ ನೃತ್ಯಕಲೆಯ ಮೇಲೆ ಸಾಕಷ್ಟು ಪ್ರಭಾವವನ್ನು ಮೂಡಿಸಿವೆ.ಒರಿಸ್ಸ ನೃತ್ಯ ತನ್ನದೇ ಆದ ಕೆಲವು ಹಸ್ತಮುದ್ರೆಗಳು, ಭಂಗಿಗಳು, ಸ್ಥಾನಕಗಳು, ಭ್ರಮರಿಗಳು ಮತ್ತು ಚಾಲನಿಕಗಳನ್ನು ಸೃಷ್ಟಿಸಿಕೊಂಡು ಅಲ್ಪಸ್ವಲ್ಪ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ಒರಿಸ್ಸ ನೃತ್ಯಸಂಪ್ರದಾಯದಲ್ಲಿ ನರ್ತಕಿ ಮೊದಲು ಭೂಮಿ ಮತ್ತು ನಾಟ್ಯಾಚಾರ್ಯರನ್ನು ವಂದಿಸಿ ರಂಗಾಧಿಪತಿಗಳಿಗೆ ನಮಿಸುತ್ತಾಳೆ. ಸಂಗೀತ ವಾದ್ಯಗಳಿಗೆ ನಮಿಸಿ ಅನಂತರ ವಿಘ್ನನಿವಾರಣಕ್ಕಾಗಿ ಗಣೇಶವಂದನೆಯನ್ನು ಕೈಗೊಳ್ಳುತ್ತಾಳೆ. ಇದಾದ ಅನಂತರ ಕಚೇರಿ ವಟುಕಭೈರವ ಪುಜಾ ಸಂಕೇತವಾದ ವಟುನೃತ್ಯದಿಂದ ಪ್ರಾರಂಭವಾಗುತ್ತದೆ; ಇದರಲ್ಲಿ ಕ್ಲಿಷ್ಟವಾದ ತಾಂಡವನೃತ್ಯ ವಿನ್ಯಾಸಗಳೂ ಕ್ಲಿಷ್ಟ ಭಂಗಿಗಳೂ ಇರುತ್ತವೆ. ಇದರ ಅನಂತರ ಪಲ್ಲವಿಯ ನೃತ್ತಲಾಸ್ಯಭಂಗಿಗಳಿಂದ ಜರುಗುತ್ತದೆ. ಇದು ಕಚೇರಿಯ ಮುಖ್ಯ ರಸಕ್ಕೆ ಕರೆದೊಯ್ಯಲು ಪೋಷಕವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಮದ್ದಳೆಯ ಪಾಟಾಕ್ಷರಗಳಿಗೆ ಕುಣಿಯುವಂಥದು ವಾದ್ಯಪಲ್ಲವಿ; ಹಾಡಿಕೆಗೆ ಕುಣಿಯುವಂಥದು ಸ್ವರಪಲ್ಲವಿ; ಎರಡರಲ್ಲಿಯೂ ಪಾಟಾಕ್ಷರಗಳೇ ಪ್ರಧಾನ. ಇದರ ಅನಂತರ ರಸನೃತ್ಯ ನಡೆಯುತ್ತದೆ. ಇದರಲ್ಲಿ ವನಮಾಲೀದಾಸ, ಉಪೇಂದ್ರಭಂಜ್, ಬಲದೇವ ರಥ ಮೊದಲಾದವರ ರಚನೆಗಳನ್ನು ಮತ್ತು ಜಯದೇವನ ಗೀತಗೋವಿಂದದ ಅಷ್ಟಪದಿಗಳನ್ನು ಆರಿಸಿಕೊಂಡು ಕಾವ್ಯರಸವನ್ನು ನೃತ್ತರಸ ಗೀತರಸಗಳಿಂದ ಬೆಳೆಸಲಾಗುತ್ತದೆ. ಇವುಗಳಲ್ಲಿ ಪ್ರತಿ ನುಡಿಯ ಅನಂತರವೂ ನರ್ತಕಿ ದ್ರುತಗತಿಯ ನೃತ್ತವನ್ನು ಮಾಡುತ್ತಾಳೆ. ಕಚೇರಿಯ ಅಂತ್ಯ ಭಾವನೃತ್ತದಿಂದಾಗುತ್ತದೆ. ಇದನ್ನು ಸಾಮಾನ್ಯವಾಗಿ ಝೂಲ, ಪಹಪಟತಾಳಗಳ ದ್ರುತಗತಿಯಲ್ಲಿ ಪಾಟಪ್ರಧಾನವಾಗಿ ನೃತ್ತದಿಂದ ಮಾಡಲಾಗುತ್ತದೆ. ಶಾಸ್ತ್ರೀಯ ಒರಿಸ್ಸ ನೃತ್ತದಲ್ಲಿ ಸ್ಥಾಯಿ, ನಟವರ, ಚೌಕ, ಚೀರ, ಲಕ್ಷ್ಮೀ, ಬೈತಿ, ಚೌರಸ್ ಮುಂತಾದ ಭಂಗಿಗಳನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಗ್ರಂಥಪರಂಪರೆಯ ಇಪ್ಪತ್ತಾರು ಅಸಂಯುತ ಹಸ್ತಗಳೂ ಗುರು ಪರಂಪರೆಯಿಂದ ಬಂದ ಎಂಟು ಅಸಂಯುತ ಹಸ್ತಗಳೂ ಸೇರಿ ಒಟ್ಟು ಮೂವತ್ತುನಾಲ್ಕು ಅಸಂಯುತ ಹಸ್ತಗಳೂ ಅನೇಕ ನಾನಾರ್ಥ ಹಸ್ತಗಳೂ ಈ ನೃತ್ತಪರಂಪರೆಯಲ್ಲಿ ಸೇರಿವೆ. ಇವುಗಳಲ್ಲಿ ಬೇರೆ ಬೇರೆ ಲಕ್ಷಣಗಳಿರುವ ಹಲವಕ್ಕೆ ಒಂದೇ ಹೆಸರುಗಳೂ ಒಂದೇ ಲಕ್ಷಣಗಳಿರುವ ಹಲವಕ್ಕೆ ಬೇರೆ ಬೇರೆ ಹೆಸರುಗಳೂ ನಾಟ್ಯಶಾಸ್ತ್ರ, ಅಭಿನಯದರ್ಪಣ, ಸಂಗೀತರತ್ನಾಕರ, ಭರತಾರ್ಣವ, ಸಂಗೀತಸುಧಾಕರ ಮುಂತಾದ ಗ್ರಂಥಗಳಲ್ಲಿ ದೊರೆಯುತ್ತವೆ. ಕಥಕಳಿಯಲ್ಲಿ ಬಳಸಲಾಗುವ ಕೆಲವು ಹಸ್ತಮುದ್ರೆಗಳೂ ಇಲ್ಲಿ ನಾಮಾಂತರದಿಂದ ಸೇರಿಹೋಗಿವೆ. ಹಸ್ತಮುದ್ರೆಗಳಿಗೆ ವಿನಿಯೋಗಗಳೂ ಅಲ್ಲಲ್ಲಿ ಬೇರೆಯಾಗಿವೆ. ಹೀಗೆ ಒರಿಸ್ಸ ನಾಟ್ಯಕಲೆ ನೃತ್ತಕ್ಕಿಂತ ನೃತ್ಯ ಪ್ರಧಾನವಾಗಿದೆ. ಭರತನಾಟ್ಯದ ದೇವದಾಸಿ ಪದ್ಧತಿ ಒರಿಸ್ಸದಲ್ಲಿ ಮಹರಿಗಳಿಂದ ಮುಂದುವರಿದಿದೆಯೆನ್ನ ಬಹುದು. ಮಹರಿಗಳ ಕಲ್ಪನೆ ಮುಖ್ಯವಾಗಿ ಕರ್ನಾಟಕದಿಂದಲೂ ಸ್ವಲ್ಪಮಟ್ಟಿಗೆ ತಮಿಳುನಾಡಿನಿಂದಲೂ ಬಂದುದು. ಈ ಪ್ರಾಂತ್ಯದಲ್ಲಿ ನೃತ್ತಸಂಪ್ರದಾಯ ಕಳೆದ ಸುಮಾರು ಸಾವಿರ ವರ್ಷಗಳಿಂದಲೂ ಉಳಿದು ಬೆಳೆದುಕೊಂಡು ಬರಲು ಮಹರಿಗಳು ಬಹುಮಟ್ಟಿಗೆ ಕಾರಣರಾಗಿದ್ದಾರೆ. ದೇವಾಲಯಗಳಲ್ಲಿ ನೃತ್ಯ ಸೇವೆಗೆಂದೇ ಮೀಸಲಾದ ಇವರಲ್ಲಿ ಬಾಹರ್ ಗನೀ (ಗಣಿಕಾ), ಭೀತರ್ ಗನೀ ಎಂಬ ಎರಡು ಬಗೆಯಿದೆ. ಇದರಲ್ಲಿ ಬಾಹರ್ಗನಿಗಳಿಗೆ ಗರ್ಭಗುಡಿಯ ಒಳಗೆ ಪ್ರವೇಶವಿಲ್ಲ ಹಾಗೂ ಅವರು ರಾಜದಾಸಿ, ಅಲಂಕಾರದಾಸಿಯರೂ ಆಗಿರಬಹುದು; ಆದರೆ ಭೀತರ್ಗನಿಗಳು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಿ ಪವಿತ್ರಾತ್ಮರಾಗಿರಬೇಕು. ಇವರಿಗೆ ಪರಮಾತ್ಮನಲ್ಲದೆ ಅನ್ಯಪುರುಷ ಸಂಪರ್ಕವಿಲ್ಲ. ಇವರು ಗಾಯಕಿಯರೊಡನೆ ರಾಜಗುರುವಿನ ಮಾರ್ಗದರ್ಶನದಲ್ಲಿ ದೇವಾಲಯದ ಗರುಡಸ್ತಂಭದ ಬಳಿಗೆ ಬಂದು ಅಲ್ಲಿ ಅವನ ನೇತೃತ್ವದಲ್ಲಿ ದೈವವಂದನೆ, ರಾಜಗುರುವಂದನೆಯಾದ ಅನಂತರ ನರ್ತಿಸುತ್ತಾರೆ. ಸಾಮಾನ್ಯವಾಗಿ ಚೌಕ, ಮೀನದಂಡಿ, ವರ್ತುಲ, ಫೇರ ಮತ್ತು ದ್ವಿಮುಖ ಎಂಬ ಐದಂಕದ ವಿನ್ಯಾಸಗಳಲ್ಲಿಯೂ ಗೋಯ್ಧಿ, ಚಪುವನಿ ಕಡಾಫೋಸರ, ಥಿಯಾಪುಚಿ ಮತ್ತು ಪುಹಾನಿಯ ಎಂಬ ಆರು ಚಾರೀಕ್ರಮಗಳಲ್ಲಿಯೂ ಮಹರಿಯ ನೃತ್ಯ ನಡೆಯುತ್ತದೆ; ಇತರ ದೇವಸ್ಥಾನಗಳಲ್ಲಿ ಅಲ್ಲಲ್ಲಿ ರೂಢಿಯಲ್ಲಿದ್ದರೂ ಶೈವ ಹಾಗೂ ವೈಷ್ಣವ ದೇವಾಲಯಗಳಲ್ಲಿಯೇ ಮಹರೀ ಪದ್ಧತಿ ಹೆಚ್ಚು ಬಳಕೆಯಲ್ಲಿದ್ದು ಪುರಿಯ ಜಗನ್ನಾಥ ದೇವಾಲಯದಲ್ಲಿ ಅತ್ಯಂತ ಪ್ರಸಿದ್ಧವಾಗಿತ್ತು. ಭರತನಾಟ್ಯದಲ್ಲಿ ಆದಂತೆ ಇಲ್ಲಿಯೂ ಮಹರಿಗಳು ವೇಶ್ಯಾವೃತ್ತಿಗೆ ಇಳಿದುದರಿಂದ ಕಲೆಗೆ ಅಪಾರ ಹಾನಿತಟ್ಟಿತು. ಒರಿಸ್ಸ ದೇಶದಲ್ಲಿ ಹಲವು ಸುಂದರವಾದ ಜಾನಪದ ನೃತ್ತಪ್ರಕಾರಗಳಿವೆ. ಇವುಗಳಲ್ಲಿ ಸಂಭಾಲಪುರದ ಕರಮಾ ಮತ್ತು ದಲಖಾಯ್ಗಳು ಬಹುಸುಂದರವೂ ಪ್ರಸಿದ್ಧವೂ ಆಗಿವೆ. ಕೇಲಿಕಡ, ದಸರ, ಭಾಯಿಜಾಂತಿಯಾ, ಫಾಗುನ್ ಪುನಿ ಮುಂತಾದ ಸಂದರ್ಭಗಳಲ್ಲಿ ಮಯೂರಭಂಜ್, ಸುಂದರಘಡ, ಬೋಲಂಗೀರ್ ಮುಂತಾದ ಗುಡ್ಡಗಾಡುಗಳಲ್ಲಿ ಕರಮಾ ನೃತ್ತವನ್ನು ಖರಿಯಾ, ಕಿಸಾನ್ ಮತ್ತು ಓರಾನ್ ಬುಡಕಟ್ಟಿನವರೂ ಇತರರೂ ಮಾಡುತ್ತಾರೆ. ದಲಖಾಯಿ ನೃತ್ತವನ್ನು ಇದೇ ಸಂದರ್ಭಗಳಲ್ಲಿ ಬಿಂಝಾಲ್, ಸೌರ, ಕುಡನಿರ್ಧ ಪ್ರದೇಶಗಳಲ್ಲಿಯೂ ಕುಣಿಯಲಾಗುತ್ತದೆ. ಒರಿಸ್ಸ ದೇಶದಲ್ಲಿ ರಾಸ್ ಮತ್ತು ಗರಬಾ ನೃತ್ತಗಳು ಸುಂದರವೂ ಪ್ರಸಿದ್ಧವೂ ಆಗಿವೆ.