ಸದಸ್ಯ:Pavithra bk/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರಿಯ ಆರಾಧನೆ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ಜಾನಪದ ಆಚರಣೆಗಳಲ್ಲಿ ಮಾರಿ ಆರಾಧನೆಯೂ ಒಂದು.

ಉಗಮ[ಬದಲಾಯಿಸಿ]

ವಿಶಿಷ್ಟ ಜಾನಪದೀಯರ ನಂಬಿಕೆಯ ಅನ್ವಯ ಈ ಆಚರಣೆ ನಡೆಸಲ್ಪಡುತ್ತದೆ. ಗರ್ಭ ಧರಿಸುವ ಮತ್ತು ಮಕ್ಕಳಿಗೆ ಜನ್ಮ ನೀಡುವ ಶಕ್ತಿ ಪಡೆದ ಹೆಣ್ಣು ಫಲವಂತಿಕೆಯ ಪ್ರತೀಕವಾಗಿ ಎಲ್ಲರ ಗೌರವಕ್ಕೆ ಪಾತ್ರಳಾಗಿದ್ದಳು. ಹುಟ್ಟಿಗೆ ಕಾರಣಳಾದ ಹೆಣ್ಣನ್ನು ಪೂಜಿಸುವ ಪರಿಪಾಠವೂ ಆರಂಭದಲ್ಲಿ ಎಲ್ಲೆಡೆ ವ್ಯಾಪಿಸಿತ್ತು. ಗರ್ಭಧಾರಕ ಶಕ್ತಿ ಪಡೆದ ಭೂಮಿ, ಅದರಲ್ಲಿ ಬೆಳೆಯುವ ಸಮೃದ್ಧ ಫಸಲು ಹಾಗು ಆ ಫಸಲನ್ನು ಜವಾಬ್ದಾರಿಯಿಂದ ಕಾಯ್ದುಕೊಂಡ ಸ್ತ್ರೀ ದೇವತೆಗಳ ಉಗಮಕ್ಕೆ ಕಾರಣವಿರಬಹುದು.ಮಾರಿ ಹಬ್ಬದ ಹಲವು ಆಚರಣೆಗಳನ್ನು ಕಂಡಾಗ ಮಾರಿ ಪೂಜೆಯ ಮೂಲ ಇಂಥ ಫಲ ಸಮೃಧ್ದಿಯ ಸಂಕೇತವೇ ಆದರೂ, ಅನಂತರದ ಘಟ್ಟಗಳಲ್ಲಿ ಸೃಷ್ಟಿಗೊಂಡ ಸಾಮಾಜಿಕ ಶ್ರೇಣೀಕರಣ ಮಾರಿಯ ಆಶಯವನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ಯುತ್ತದೆ. ಈ ಹೆನ್ನೆಲೆಯಲ್ಲಿ ಮಾರಿಯನ್ನು ಕುರಿತು ಹುಟ್ಟಿಕೊಂಡಿರುವ ಹತ್ತಾರು ಬಗೆಯ ಪುರಾಣಗಳನ್ನು ನಾವು ನೋಡಬೇಕಾಗುತ್ತದೆ. ಕರ್ನಾಟಕದ ಎಲ್ಲೆಡೆ ಬಹುತೇಕ ಕೆಳವರ್ಗಗಳಿಂದ ಪೂಜೆಗೊಳ್ಳುತ್ತಿರುವ ಮಾರಿದೇವತೆಯ ಈ ಪುರಾಣಗಳು ಹಲವು ಸಾಮಾಜಿಕ ಸತ್ಯಗಳ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಮಾರಿ ಹಬ್ಬದಲ್ಲಿ ನಾವು ಕಾಣಲಾಗುವ ಕೋಣನ ಬಲಿ ಪರಸ್ಪರ ವಿರುದ್ದಾಶಯಗಳನ್ನು ಹೊತ್ತು ನಮ್ಮನ್ನು ವಿಚಲಿತಗೊಳಿಸುತ್ತದೆ.

ಮಾರಿ ಪುರಾಣಗಳು[ಬದಲಾಯಿಸಿ]

ಪುರಾಣ ಓಂದು[ಬದಲಾಯಿಸಿ]

"ಈಕೆಯ ಹೆಸರು ಶ್ರೀಬಾಲಗೌರಿ. ಹುಟ್ಟಿದ್ದು ಬ್ರಾಹ್ಮಣರ ಮನೆಯಲ್ಲಿ, ತಂದೆ ತಾಯಿಗಳಿಗೆ ಮುದ್ದಿನ ಮಗಳು. ಗಂಡು ಮಕ್ಕಳಿಲ್ಲ. ಅವರ ಮನೆಗೆ ಮಾದಿಗರ ಹುಡುಗನಾದ ಕರಿಯ ಮನೆಬೆಟ್ಟು ಬಂದು ಬ್ರಾಹ್ಮಣನಂತೆ ನಂಬಿಸಿ ಸೇರಿಕೊಂಡ. ಅವರಿಗೆ ಯಾವುದೇ ರೀತಿಯಲ್ಲಿ ಸಂಶಯ ಬರದಂತೆ ಬಾಳತೊಡಗಿದ. ಹುಡುಗನ ನಡತೆ ಮೆಚ್ಚುಗೆಯಾಗಿ ಹುಡುಗ ಹುಡುಗಿ ಪ್ರೀತಿಸಿದರು; ವಿವಾಹವಾದರು. ಬಹಳಷ್ಟು ದಿನಗಳು ಕಳೆದ ಮೇಲೆ ಕರಿಯಂಭಟ್ಟನ ತಾಯಿ ಮಗನನ್ನು ಹುಡುಕಿಕೊಂಡು ಅದೇ ಗ್ರಾಮದ ಹೊರಭಾಗಕ್ಕೆ ಬಂದಳು. ಅವಳು ಹುಡುಕುತ್ತಿರುವ ಮಗನ ವಿಚಾರವನ್ನು ಕರಿಯಂಭಟ್ಟನ ಜೊತೆ ಹೇಳಿದಾಗ ತಾನೇ ಅವನು ಎಂದು ಹೇಳಿದ. ಆಕೆ ಅಗಲಿದ ಮಗನನ್ನು ಕೂಡಿ ಆನಂದದ ಕಣ್ಣೀರಿಟ್ಟಳು. ಮಗ ತನ್ನ ತಾಯಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಮೊದಲೇ ಬ್ರಾಹ್ಮಣತಿಯಂತಿರಬೇಕೆಂದು ಬುದ್ದಿ ಹೇಳಿದನು. ವೇಷ ಬದಲಿಸಿ ಕರೆದುಕೊಂಡು ಹೋಗಿ ಊಟ ಮಾಡುವಾಗ ಊಟದ ರುಚಿ ಹೇಗಿದೆ ಎಂದು ತನ್ನ ತಾಯಿಯನ್ನು ಕೇಳಿದ. 'ಆಕೆ 'ನಮ್ಮದೊ ಮದು ಕೋಣನ ಕರುವಿನ ಕಾಲಿನ ಬೆಲೆಯಿಲ್ಲ' ಎಂದು ಖಡಾಖಂಡಿತವಾಗಿ ನುಡಿದುಬಿಟ್ಟಳು. ಅಪರೂಪವಾಗಿ ಬಂದ ಅತ್ತೆಗೆ ಊಟ ಬಡಿಸುತ್ತಿದ್ದ ಶ್ರೀಬಾಲಗೌರಿಗೆ ಈ ಮಾತನ್ನ ಕೇಳಿ ಬೆಂಕಿಯನ್ನು ತುಳಿದಂತಾಯಿತು. ನೇರವಾಗಿ ತಂದೆ ತಾಯಿಗಳ ಬಳಿಗೆ ಹೋಗಿ 'ನಾಯಿ ಮುಟ್ಟಿದ ಮಡಕೆಯನ್ನು ಏನು ಮಾಡಬೇಕೆಂದು' ಕೇಳಿದಾಗ ನಾಯಿ ಕೊರಳಿಗೆ ಕಟ್ಟಬೇಕೆಂದರು. ಆತ ವಂಚಿಸಿ ಮೋಸ ಮಾಡಿದ ತಪ್ಪಿಗಾಗಿ ಶ್ರೀಬಾಲಗೌರಿ ಬೆಂಕಿಗೆ ಆಹುತಿಯಾದಳು. ದೇಹತ್ಯಾಗ ಮಾಡುವ ಮೊದಲು ಗಂಡನಿಗೆ ನಾನು ಮಾರಿಯಾಗಿ ಹುಟ್ಟುತ್ತೇನೆ. ನೀನು ಪಟ್ಟದ ಕೋಣನಾಗಿ ಹುಟ್ಟು, ಮಟ್ಟ ಮಂಗಳವಾರ ಸರಿ ರಾತ್ರಿಗೆ ನಿನ್ನ ಬಲಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಕೆಂಡಮಂಡವಾದಳು. ಶ್ರೀಬಾಲಗೌರಿ ಮಾರಮ್ಮನಾಗಿ ಹುಟ್ಟಿದಳು. ಕರಿಯಂಭಟ್ಟ ಅವಳ ಶಾಪದಿಂದ ಕೊಣವೇಗೌಡನ ಮನೆಯಲ್ಲಿ ಪಟ್ಟದ ಕೋಣವಾಗಿ ಹುಟ್ಟಿದ. ಕೋಣ ಚೆನ್ನಾಗಿ ಮೇದು ವಯಸ್ಸಿಗೆ ಬಂತು. ಮಾರಿಯ ಕಣ್ಣು ಕೋಣನ ಮೇಲೆ ಬಿತ್ತು. ಮಾರಿ ಗೌಡನಿಗೆ ಕೋಣವನ್ನು ಕೊಡು ಎಂದು ಪೀಡಿಸಿದಳು. ಗೌಡ ಅದಕ್ಕೆ ಲಕ್ಷ್ಯವೀಯದೆ ಅವಳಿಗೆ ಏಳು ಜೊತೆ ಸೀರೆ ಉಡಿಸಿ, ಊರ ಮುಂದಲ ಕಂಬಕ್ಕೆ ಕಟ್ಟಿಸಿ, ಎಣ್ಣೆ ಸುರಿಸಿ, ಬೆಂಕಿ ಹಚ್ಚಿಸಿದರೂ ಬೇಯಲಿಲ್ಲ. ಗೌಡನಿಗೇ ಬೆಂಕಿ ಹತ್ತಿಕೊಂಡಾಯಿತು. ವಿವೇಕ ಮೂಡಿ ಕೋಣವನ್ನು ಕೊಡುವುದಾಗಿ ಒಪ್ಪಿದ. ಮಂಗಳವಾರ ಮಾರಮ್ಮ ಗದ್ದುಗೆ ಮೇಲೆ ಬಂದಳು. ಗಂಡನೇ ಕೋಣವಾದ ಮಾವ ಗೋರುಗಂಬ ಕೋಣವನ್ನು ಕಡಿಯಲು ಬಂಧಿಸುವ ಕಂಬವಾದ. ಅತ್ತೆ ಫಟಗಡಿಗೆಯಾದಳು. ಸರಿ ರಾತ್ರಿಗೆ ಸರಿಯಾಗಿ ಕೋಣವನ್ನು ಬಲಿ ತೆಗೆದುಕೊಂಡಳು. ಈಕೆಗೆ ಮಾರಿಯಾಗುವ ಮೊದಲು ಮಕ್ಕಳಾಗಿದ್ದವು. ಕಣ್ಣು ಜರಸಲು ಮರಿ, ಧೂಳುಮರಿ, ಎಲ್ಲೆಮರಿಗಳ ರೂಪದಲ್ಲಿ ಆ ಮಕ್ಕಳನ್ನೂ ಬಲಿ ತೆಗೆದುಕೊಂಡಳು."

ಪುರಾಣ ಎರಡು[ಬದಲಾಯಿಸಿ]

ಭಟ್ಕಳದ ಮಾರಿಯ ಬಗ್ಗೆ ಪ್ರಚಲಿತವಿರುವ ಪುರಾಣವನ್ನು ನೋಡಿದರೆ ಇದು ಬೇರೆಡೆ ದೊರೆಯುವ ಪುರಾಣಕ್ಕಿಂತ ಭಿನ್ನವಾಗಿ ನಿಲ್ಲತ್ತದೆ. ಇಲ್ಲಿನ ಪುರಾಣ ಈ ರೀತಿ ವಿವರಣೆ ನೀಡುತ್ತದೆ. " ಒಂದು ದಿನ ಮರದ ಕೆಲಸ ಮಾಡುವ ಆಚಾರಿಯ ಮನೆಯ ಮುಂದೆ ಆರು ವರ್ಷದ ಹುಡುಗಿಯೊಬ್ಬಳು ಕುಳಿತಿದ್ದಳು. ಆಚಾರಿಯ ಮನೆಯವರು ಬೆಳಿಗ್ಗೆಯೇ ಎದ್ದು ಬಾಗಿಲು ತೆರೆದಾಗ ಕುಳಿತಿದ್ದ ಹುಡುಗಿಯನ್ನು ಕಂಡರು. ಆಗ ಅವರು ಆಕೆಯನ್ನು ಯಾರು ನೀನು? ಎಂದು ಪ್ರಶ್ನಿಸಿದರು. ಅದಕ್ಕೆ ಆಕೆ 'ನಾನು ಬ್ರಾಹ್ಮಣರ ಹುಡುಗಿ, ನನಗೆ ತಂದೆ ತಾಯಿ ಯಾರೂ ಇಲ್ಲ' ಎಂದು ಉತ್ತರಿಸಿದಳು. ಆಚಾರಿ ಮನೆಯವರಿಗೆ ಆಕೆಯ ಬಗ್ಗೆ ಕರುಣೆ ಮೂಡಿ ಆಕೆಯನ್ನು ಮನೆಯೊಳಗಡೆ ಕರೆದುಕೊಂಡರು. ಅಂದಿನಿಂದ ಆ ಹುಡುಗಿ ಅವರ ಮನೆಯಲ್ಲಿ ಬೆಳೆದಳು. ಅವಳು ಮನೆಯ ಹೊರಗಡೆ ಓಡಾಡುವಾಗ ದಾರಿ ಮಧ್ಯೆ ಪ್ರತಿದಿನ ಒಬ್ಬ ಹುಡುಗ ಆಕೆಯನ್ನು ನೋಡಿ ನಗುತ್ತಾ ಹೋಗುತ್ತಿದ್ದನು. ಮೊದಲ ಒಂದೆರಡು ದಿನ ಅವನ ನಗೆಗೆ ಪ್ರತಿಕ್ರಿಯೆ ತೋರದೆ ಅವಳು ತಲೆ ಬಗ್ಗಿಸಿಕೊಂಡು ಹೊರಟು ಹೋದಳು. ಅನಂತರ ಅವನ ನಗೆಗೆ ಪ್ರತಿನಗೆ ಬೀರುತ್ತಾ ಹೋಗುತ್ತಿದ್ದಳು. ಹೀಗೆ ಕಾಲಕಳೆದಂತೆ ಅವಳು ಆ ಹುಡುಗನಲ್ಲಿ ಅನುರಕ್ತಳಾದಳು.ಅವರಿಬ್ಬರು ದಾರಿಯಲ್ಲಿ ಸಂಧಿಸಿದಾಗ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ಕಂಡ ಜನದು ಆಕೆಯ ಮನೆಯವರಿಗೆ ಸುದ್ದಿ ತಿಳಿಸಿದರು. ಆಚಾರಿಯ ಮನೆಯವರು ಅವರಿಬ್ಬರು ಮಾತನಾಡುವಾಗ ಕಣ್ಣಾರೆ ಕಂಡರು. ಆಕೆಯನ್ನು ಕರೆದು ಆ ಹುಡುಗನೊಡನೆ ಮಾತನಾಡುವುದನ್ನು ನಿಲ್ಲಿಸಲು ಹೇಳಿದಾಗ ಅವಳು ಅದನ್ನು ತಿರಸ್ಕರಿಸಿ ಆತನನ್ನು ತಾನು ಮದುವೆಯಾಗುತ್ತೇನೆಂದು ಹೇಳಿದಳು. ಮನೆಯವರು ಇನ್ನು ಹಟ ಹಿಡಿದರೆ ಸರಿಯಿಲ್ಲವೆಂದು ತಿಳಿದು ಅವರಿಬ್ಬರ ಮದುವೆ ನಿಶ್ಚಯ ಮಾಡಲು ಆ ಹುಡುಗನನ್ನು ಮನೆಗೆ ಕರೆದು ಅವನ ಜಾತಿ ಮತ ಯಾವುದೆಂದು ಪ್ರಶ್ನಿಸಿದರು. ಅವನು ತಾನು ಬ್ರಾಹ್ಮಣನೆಂದು ಹೇಳಿಕೊಂಡನು. ಆಗ ಮನೆಯವರು ಇಬ್ಬರ ಜಾತಿಯು ಒಂದೇ ಆಗಿರುವುದರಿಂದ ಮದುವೆಯಾಗಲು ಅಡ್ಡಿಯಿಲ್ಲವೆಂದು ಮದುವೆ ಮಾಡಿಕೊಟ್ಟರು. ಮದುವೆಯಾದ ನಂತರ ಆಕೆ ಗಂಡನ ಮನೆಗೆ ಹೋದಳು. ಅಲ್ಲಿನ ಪರಿಸರವನ್ನು ಓಡಾಡುತ್ತಲೇ ಗಮನಿಸುತ್ತಿದ್ದಳು. ಆ ಮನೆಯಲ್ಲಿನ ಒಂದು ಕೋಣೆಗೆ ಯಾವಾಗಲೂ ಬೀಗ ಹಾಕೇ ಇರುತ್ತಿತ್ತು. 'ಅದ್ಯಾಕೆ ಈ ಕೋಣೆಗೆ ಯಾವಾಗ್ಲೂ ಬೀಗ ಹಾಕಿರ್ತಾರೆ' ಎಂದು ಅವಳು ಯೋಚಿಸತೊಡಗಿದಳು. ಒಂದು ದಿನ ಗಂಡ ಮನೆಯಿಂದ ಹೊರಗೆ ಹೋಗುವಾಗ 'ತಾನು ಸಂಜೆ ವಾಪಸ್ ಬರ್ತೀನಿ ಎಂದು ಹೇಳಿಹೋದನು. ಇದೇ ಸಮಯ ಎಂದು ಆಕೆ ಕೋಣೆಯ ಬೀಗ ಒಡೆದು ಒಳ ಹೊಕ್ಕಳು. ಅಲ್ಲಿ ಗೋಡೆಯ ಮೇಲೆ ಒಂದೆರಡು ಧನದ ಚರ್ಮ ನೇತುಹಾಕಿದ್ದರು. ಇನ್ನೊಂದೆಡೆ ಡೋಲಿನ ಸಾಮಾನು ನೇತುಹಾಕಿದ್ದರು. ಆಕೆ ಅವುಗಳನ್ನೆಲ್ಲಾ ಕಂಡು ಆಶ್ಚರ್ಯಪಟ್ಟಳು. ಚರ್ಮದ ಸಾಮಾನುಗಳನ್ನು ಮನೆಯಲ್ಲಿಟ್ಟುಕೊಳ್ಳಲು ಕಾರಣವೇನು? ತನ್ನ ಗಂಡ ಬ್ರಾಹ್ಮಣನಾಗಿದ್ದರೆ ಚರ್ಮವನ್ನೇಕೆ ಇಟ್ಟುಕೊಳ್ಳುತ್ತಿದ್ದ? ಎಂದು ಆಲೋಚಿಸ ತೊಡಗಿದಳು. ಹೇಗೂ ಸಂಜೆಗೆ ಗಂಡ ಬರುತ್ತಾನೆ, ಆಗ ಅದರ ಬಗ್ಗೆ ವಿಚಾರಿಸಿಕೊಳ್ಳೋಣವೆಂದು ನಿಶ್ಚಯಿಸಿ ಕೋಣೆಯ ಬಾಗಿಲು ಭದ್ರಪಡಿಸಿದಳು. ಸಂಜೆಗೆ ಗಂಡ ಮನೆಗೆ ಬಂದ. ಹೆಂಡತಿಯು ಮಾತನಾಡದೆ ಮುಖ ಗಂಟಿಕ್ಕಿಕೊಂಡು ಓಡಾಡುತ್ತಿರುವುದನ್ನು ಗಮನಿಸಿದ. ಆತ 'ಏಕೆ ಹೀಗೆ ಮಾತನಾಡದೆ ಕುಳಿತಿರುವೆ?' ಎಂದು ಪ್ರಶ್ನಿಸಿದ. ಅದಕ್ಕೆಅವಳು ಕೈಹಿಡಿದು ಕೋಣೆಗೆ ಕರೆದುಕೊಂಡು ಹೋಗಿ ನೇತು ಹಾಕಿದ ಧನದ ಚರ್ಮ ತೋರಿಸಿ ಇದೆಲ್ಲಾ ಏನು? ನಿಜ ಹೇಳು, ನೀನು ಯಾವ ಜಾತಿಯವನು? ಎಂದು ಪ್ರಶ್ನಿಸಿದಳು. ದಿಕ್ಕು ತೋಚದ ಅವನು ಪೇಚಿಗೆ ಸಿಕ್ಕಿಕೊಂಡ ಕಾರಣ ಸುಳ್ಳು ಹೇಳಲಾಗದೆ 'ತಾನು ಕೊರಗರವ' ಎಂದನು. ಆಗ ತಕ್ಷಣ ಅವಳು ಗಂಡನ ಮನೆ ಬಿಟ್ಟು ತನ್ನ ಸಾಕುತಂದೆಯ ಮನೆಗೆ ಬಂದು ತನ್ನ ತಂದೆಯನ್ನು ಕುರಿತು,'ಅಪ್ಪ ನಾಯಿ ಮುಟ್ಟಿದ ಮಡಕೆ ಹೇಗೆ ಶುದ್ಧ ಮಾಡಬಹುದು?' ಎಂದು ಕೇಳಿದಳು.ಅದಕ್ಕೆ ಆತ 'ಮಡಕೆಯನ್ನು ಬೆಂಕಿಯಲ್ಲಿ ಸುಟ್ಟು ಅದಕ್ಕೆ ಪಂಚಗವ್ಯ ಹಾಕಿದರೆ ಶುದ್ಧವಾಗುತ್ತೆ' ಎಂದನು. ಅದನ್ನು ಕೇಳಿದ ತಕ್ಷಣ ಆಕೆ ಕೋಣೆಯೊಳಗೆ ಹೋಗಿ ಬೆಂಕಿ ಹಚ್ಚಿಕೊಂಡಳು. ಮೈಸುಡುತ್ತಿದ್ದ ಬೆಂಕಿಯ ದಗೆಯನ್ನು ತಾಳಲಾರದೆ ಹೊರಗೆ ಓಡಿದಳು. ಕೊನೆಗೆ 'ಮುಸ್ಟಜಾಲಿ' ಎಂಬಲ್ಲಿ ಸಮುದ್ರಕ್ಕೆ ಬಿದ್ದು ಪ್ರಾಣಬಿಟ್ಟಳು.ಇಂದಿಗೂ ಆ ಸ್ಲಳವನ್ನು 'ಮಾರಿ ಗುಂಡಿ' ಎಂದು ಕರೆಯುತ್ತಾರೆ. ಪ್ರತಿವರ್ಷದ ಮಾರಿಜಾತ್ರೆ ಮುಗಿದ ನಂತರ ಮಾರಿಯನ್ನು ತೆಗೆದುಕೊಂಡು ಹೋಗಿ ಮಾರಿಗುಂಡಿಯಲ್ಲಿ ಹಾಕಿ ಬರುತ್ತಾರೆ." ಭಟ್ಕಳದ ಮಾರಿಯ ಪುರಾಣವು ಇತರಕಡೆ ಸಿಗುವ ಪುರಾಣಕ್ಕಿಂತ ಭಿನ್ನವಾಗಿದೆ. ಆದರೆ ಮಾರಿ ಜಾತ್ರೆಯ ಆಚರಣೆ ಸಾಮಾನ್ಯವಾಗಿ ಇತರೆಡೆಯಂತೆಯೇ ನಡೆಯುತ್ತದೆ.

ಪುರಾಣ ಮೂರು[ಬದಲಾಯಿಸಿ]

ಶೂದ್ರನೆಂದು ತಿಳಿಯದೆ ಮದುವೆಯಾಗಿ ಮಕ್ಕಳನ್ನು ಪಡೆದಿದ್ದ ಬ್ರಾಹ್ಮಣ ಯುವತಿ ಒಮ್ಮೆ ಹಿತ್ತಲಿನಲ್ಲಿ ಬಾಳೆ ಪಟ್ಟಿಯಿಂದ ಎಕ್ಕಡ ಹೊಲೆಯುತ್ತಿರುವ ಮಗನನ್ನು ನೋಡುತ್ತಾಳೆ. ಆಶ್ಚರ್ಯ, ಅನುಮಾನ, ಜಿಗುಪ್ಸೆಗಳಿಂದ ಮಗನನ್ನು ವಿಚಾರಿಸಿದಾಗ, 'ಅಪ್ಪ ದಿನಾ ಮಾಡುವುದು ಇದೇ ಕೆಲಸ, ನಾನು ಅದನ್ನೆ ಕಲಿಯುತ್ತಿದ್ದೇನೆ' ಅನ್ನುತ್ತಾನೆ.ಹೀಗಾಗಿ ತನ್ನ ಗಂಡ ಬ್ರಾಹ್ಮಣನಲ್ಲ ಮೆಟ್ಟು ಹೊಲೆಯುವ ಕಸುಬಿನ ಜಾತಿಗೆ ಸೇರಿದವನು ಎಂದು ತಿಳಿಯುತ್ತದೆ. ಮೋಸದಿಂದ ತಾನು ಜಾತಿ ಭ್ರಷ್ಟಳಾದ ಬಗ್ಗೆ ಕೋಪಗೊಂಡ ತಾಯಿ ಮಗನನ್ನು ಹಿಡಿದು ಬಡಿಯಲು ಮುಂದಾಗುತ್ತಾಳೆ. ತಾಯಿಯ ರೌದ್ರಾವತಾರಕ್ಕೆ ಹೆದರಿದ ಹುಡುಗ ತಪ್ಪಿಸಿಕೊಂಡು ಓಡುತ್ತಾನೆ. ಕೂಡಲೇ ಕಲ್ಲೊಂದನ್ನು ತೆಗೆದು ಅವನೆಡೆಗೆ ಬಲವಾಗಿ ಬೀಸುತ್ತಾಳೆ. ಅದು ಹುಡುಗನ ತಲೆಗೆ ಬಡಿಯುತ್ತದೆ. ತಲೆಯೊಡೆದು ರಕ್ತ ಸೋರುತ್ತಿದ್ದರೂ ಪ್ರಾಣಭಯದಿಂದ ಓಡಿಹೋಗಿ ತಲೆಮರೆಸಿಕೊಳ್ಳುತ್ತಾನೆ. ಮಗನನ್ನು ಕಾಣದ ಇವಳು ಅದೇ ಆವೇಶದಲ್ಲಿ ಗಂಡನನ್ನು ಅರಸಿ ಹೊರಡುತ್ತಾಳೆ. ಇವಳ ಬರುವನ್ನೆ ನೋಡಿ ಭೀತಿಗೊಂಡ ಅವನು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಕೆದರಿದ ತಲೆ, ಉರಿಗಣ್ಣು - ಹೀಗೆ ಭಯಂಕರವಾಗಿ ಕಾಣುತ್ತಿದ್ದ ಇವಳು ಅವನು ಎಲ್ಲಿ ಹೊಕ್ಕರೂ ಬಿಡುವಂತೆ ಕಾಣುವುದಿಲ್ಲ. ದಾರಿ ಕಾಣದೆ ಅವನು ಕೋಣನ ಹೊಟ್ಟೆಯೊಳಗೆ ಹೋಗಿ ಸೇರಿಬಿಡುತ್ತಾನೆ. ಅವಮಾನ,ನಿರಾಸೆ, ದುಃಖಗಳಿಂದಾಗಿ ಅವಳೂ ಊರಿಗೆ ಹಿಂದಿರುವುದಿಲ್ಲ. ಗಂಡ ಮಕ್ಕಳನ್ನು ಕಳೆದುಕೊಂಡಿದ್ದೂ ಅಲ್ಲದೆ ತೌರನ್ನೂ ಮರೆತು ಹೇಗೂ ಒಂದೆಡೆ ಕಾಲ ಕಳೆಯುತ್ತಿರುತ್ತಾಳೆ. ಒಂದು ದಿನ ಆಗಲೇ ಸಂಜೆ; ಮುತ್ತು ರತ್ನಗಳನ್ನು ಮಾರುತ್ತಾ ಯಾರೊ ಒಬ್ಬ ಯುವಕ ಇವಳ ಮನೆ ಕಡೆಗೆ ಬರುತ್ತಾನೆ. ಆ ಯುವಕನನ್ನು ಕಂಡ ಕೂಡಲೇ ಇವಳ ಮನಸ್ಸು ಚಂಚಲವಾಗುತ್ತದೆ. ಹತ್ತಾರು ವರ್ಷಗಳಿಂದ ಅದುಮಿಟ್ಟುಕೊಂಡಿದ್ದ ಆಸೆ-ಆಕಾಂಕ್ಷೆಗಳು ಒಮ್ಮೆಗೇ ಕೆರಳುತ್ತದೆ. ಯಾಕೊ ಏನೂ ಕ್ಷಣಾರ್ಧದಲ್ಲಿ ಆ ಯುವಕನಲ್ಲಿ ಆಕರ್ಷಿತಳಾಗುತ್ತಾಳೆ. ಅವನೊಡನೆ ಯಾವುದೋ ಸಂಬಂಧ ಬಲವಾಗಿ ಕಾಡಿದಂತಾಗುತ್ತದೆ. ಹೀಗಾಗಿ ವ್ಯಾಪಾರ ಮಾಡುವ ನೆಪದಲ್ಲಿ ಅವನನ್ನು ಕರೆದು ಮಾತನಾಡಿಸುತ್ತಾಳೆ. ಕೊನೆಗೆ ಸಂಜೆಯ ನೆವ ಒಡ್ಡಿ ತನ್ನ ಮನೆಯಲ್ಲೇ ಆ ರಾತ್ರಿ ಉಳಿಸಿಕೊಳ್ಳುತ್ತಾಳೆ. ತನ್ನ ಹತ್ತಾರು ವರ್ಷದ ಕಾಮದಾಹ ಈ ಯುವಕನಿಂದ ಆ ರಾತ್ರಿ ತೀರುತ್ತದೆ. ಬೆಳಗ್ಗೆ ಎದ್ದು ಸ್ನಾನ ಮಾಡುವಾಗ ಅವನ ಬೆನ್ನು, ತಲೆಗಳನ್ನು ಉಜ್ಜುತ್ತಾಳೆ. ಅವನ ತಲೆಯ ಮೇಲೆ ಯಾವುದೋ ಗಾಯದಿಂದಾಗಿ ಕೂದಲೂ ಬೆಳೆಯದೇ ಇರುವುದನ್ನು ಗಮನಿಸುತ್ತಾಳೆ. ತಟ್ಟನೆ ತನ್ನ ಮಗನ ನೆನಪು ಬರುತ್ತದೆ. ಕುತೂಹಲಕ್ಕಾಗಿ ಈ ಗಾಯ ಹೇಗಾಯಿತು? ಏಕಾಯಿತು? ಎಂದು ವಿಚಾರಿಸುತ್ತಾಳೆ. ಅವನು ಹಿಂದಿನದೆಲ್ಲವನ್ನು ವಿವರವಾಗಿ ಹೇಳುತ್ತಾನೆ. ಇವನೆ ತನ್ನ ಮಗನೆಂದು ತಿಳಿದು ಹೋಗುತ್ತದೆ. ಜಾತಿಭ್ರಷ್ಟಳಾಗಿದ್ದಲ್ಲದೇ ತನ್ನ ಮಗನನ್ನೇ ತಾನು ಕೂಡಿದ ಪಾಪಿಯಾದೆನಲ್ಲಾ ಎಂಬ ಜಿಗುಪ್ಸೆಯಿಂದ ಕೆಂಡಕೊಂಡವಾಗಲು ನಿರ್ಧರಿಸುತ್ತಾಳೆ. ಆತ್ಮಾರ್ಪಣೆಗೆ ಮುನ್ನ ಇಷ್ಟಕ್ಕೆಲ್ಲ ಕಾರಣನಾದ ಕೋಣನ ರೂಪದ ತನ್ನ ಗಂಡನನ್ನು ಮಾರಿಯಾಗಿ ಜನ್ಮ ತಳೆದು ಬಲಿ ತೆಗೆದುಕೊಳ್ಳುವುದಾಗಿ ಶಪಥ ಮಾಡಿ ಬೆಂಕಿಗೆ ಹಾರುತ್ತಾಳೆ. ನಂತರ ಮಾರಿ ದೇವತೆಯಾಗಿ ಹುಟ್ಟಿ ಕೋಣವನ್ನು ಬಲಿತೆಗೆದುಕೊಳ್ಳುತ್ತಾಳೆ."

ಹಬ್ಬ ಆಚರಣೆ[ಬದಲಾಯಿಸಿ]

ಈ ಪುರಾಣಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಇಂದು ನಡೆಯುತ್ತಿರುವ ಆಚರಣೆಗಳನ್ನು ಗಮನಿಸಬೇಕಾಗುತ್ತದೆ. ಮಾರಮ್ಮನ ಆಚರಣೆಗಳಲ್ಲಿ ನೂರಾರು ಬಗೆಗಳನ್ನು ನಾವು ಗುರುತಿಸಬಹುದಾದರೂ ಉದಾಹರಣೆಗಾಗಿ ಒಂದು ಹಬ್ಬವನ್ನು ಇಲ್ಲಿ ಗಮನಿಸಬಹುದು: "ಪ್ರಾಚೀನ ಕಾಲದಲ್ಲಿ ಸ್ಪಷ್ಟ ಆಕಾರವಿಲ್ಲದ ಶಿಲೆಯನ್ನುಪೂಜಿಸುತ್ತಿದ್ದರು. ಇಂತಹ ಕಪ್ಪು ಶಿಲೆಯೊಂದು ಶಿವಮೊಗ್ಗ ಜೆಲ್ಲೆಯ ಹೊನ್ನಾಳಿ ತಾಲೂಕಿನ ಒಡೆಯರಹತ್ತೂರು ಗ್ರಾಮದಲ್ಲಿ ಮಾರಮ್ಮನೆಂದು ಪೂಜೆಗೊಳ್ಳುತ್ತಿದೆ. ಈ ಊರಿನ ಮಾರಿಹಬ್ಬ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಹಬ್ಬಕ್ಕೆ ಮೂರು ದಿನ ಮೊದಲೇ 'ಸಾರಾಕುತ್ತಾರೆ'. ಸಾರಾಕಿದ ನಂತರ ಹೊರಗಿನ ಯಾರನ್ನೂ ಊರೊಳಗೆ ಬಿಡಿವುದಿಲ್ಲ. ಅದಕ್ಕಾಗಿ ಅಗಸೆಯ ಬಳಿ ಕಾವಲಿರುತ್ತಾರೆ. ಊರೊಳಗೆ ಬರಲು ಇರುವ ಇತರ ದಾರಿಗಳನ್ನು ಆಗಲೇ ಮುಳ್ಳು ನೆಟ್ಟು ಮುಚ್ಚಿಬಿಡುತ್ತಾರೆ. ಕೋಣ ಕಡಿದು ರಕ್ತ ಚೆಲ್ಲುವವರೆಗೂ ಯಾರೇ ಬಂದರೂ ಒಳಗೆ ಬಿಡದ ಅಗಸೆಯ ಬಳಿ ಕಟ್ಟುನಿಟ್ಟಾಗಿ ಕಾವಲಿರುತ್ತಾರೆ. ಸಾರಾಕಿದ ದಿನ ಬಲಿಗೆ ಸಿದ್ಧವಾದ ಪಟ್ಟದ ಕೋಣವನ್ನು ಮಾರಮ್ಮನ ಗದ್ದಿಗೆ ಅಥವಾ ತಟ್ಟೆಯ ಬಳಿಗೆ ಹಿಡಿಹೊಯ್ದು ಕಂಕಣ ಕಟ್ಟುತ್ತಾರೆ. ಅನ್ಯಮತರ ಜೋಡಿ ತಮಟೆ ಬಡಿಯುತ್ತಾ ಊರ ಹೊರಸುತ್ತಿನಲ್ಲಿ ಸುತ್ತಿಸುತ್ತಾರೆ.

ಹುಲುಸು[ಬದಲಾಯಿಸಿ]

ಸಾರಾಕಿದ ಎರಡನೇ ದಿನ ಪಟ್ಟದ ಕೋಣವನ್ನು ಹಿಡಿದು ಊರ ಪ್ರತಿ ಮನೆಗೂ ಹೋಗುತ್ತಾರೆ. ಮನೆಯವರು ಅದಕ್ಕೆ ಊದಿನ ಕಡ್ಡಿ ಬೆಳಗಿ ತಮ್ಮ ಮನೆಯಲ್ಲಿದ್ದ ಅಕ್ಕಿಯ ನುಚ್ಚನ್ನು ಜೋಳವನ್ನು ಕೊಡುತ್ತಾರೆ. ಹೀಗೆ ಕೊಡುವುದರಿಂದ ತಾವು ಬೆಳೆದ ಬೆಳೆಯು ಹುಲುಸುತ್ತದೆ ಎಂದು ನಂಬುತ್ತಾರೆ. ಮಾರನೇ ದಿನ ಅಂದರೆ ಮಂಗಳವಾರ ಸಂಜೆಗೆ ಮಾರಮ್ಮನ ಗದ್ದಿಗೆಯಿಂದ ಹೊರಟು ಮೊದಲು ಗೌಡರು, ಬುದ್ದಿವಂತರು,ಸ್ವಾಮಿಗಳು,ಮಡಿವಾಳರು ಮೊದಲಾದ ಐದು ಜನ ಹಿರಿಯರ ಮನೆ ಬಾಗಿಲಿಗೆ ಕೋಣವನ್ನು ಹಿಡಿದುಕೊಂಡು ಹೋಗುತ್ತಾರೆ.

ಬೇವುಡೆ[ಬದಲಾಯಿಸಿ]

ಸಾಮಾನ್ಯವಾಗಿ ಬೇವುಡುವುದು ಹೆಂಗಸರು. ಆದರೆ ಇಲ್ಲಿ ಮೂರು ಜನ ಗಂಡಸರು ಬೇವುಡುವುದು ನಡೆದು ಬಂದ ಆಚಾರ. ಬೆತ್ತಲೆ ದೇಹಕ್ಕೆ ಬೇವಿನಸೊಪ್ಪು ಸುತ್ತಿಕೊಂಡು ತಲೆಯ ಮೇಲೆ ಕೇಲು ಹೊತ್ತು ವಾದ್ಯದೊಂದಿಗೆ ಅಮ್ಮನ ಗದ್ದಿಗೆ ಬಳಿ ಬಂದು, ಕೇಲು ಸಲ್ಲಿಸಿ,ಅಮ್ಮನಿಗೆ ಅಡ್ಡಬಿದ್ದು, ಬೇವು ಕಳಚಿ ಹೊಸ ಬಟ್ಟೆ ಉಡುತ್ತಾರೆ. ಇವರಲ್ಲದೆ ಹರಕೆ ಹೊತ್ತ ಹೆಂಗಸರು ಬೇವುಡುತ್ತಾರೆ. ಸಾಮಾನ್ಯವಾಗಿ ಮೂರು ವರ್ಷದ ಮಗುವಿನಿಂದ ದೊಡ್ಡವರವರೆಗೆ ಬೇವುಡುವುದಿದೆ. ಆದರೆ ಹೆಂಗಸರಲ್ಲಿ ಮುತ್ತೈದೆಯರು ಮಾತ್ರ ಉಡಬೇಕಂತೆ.

ಗದ್ದಿಗೆ ಮರಿ[ಬದಲಾಯಿಸಿ]

ಕೋಣ ಊರಾಡಿ ಬರುವವರೆಗೂ ಅಮ್ಮನ ಮುಂದೆ ತೆರೆ ಹಾಕಿರುತ್ತಾರೆ. ಕೇಕೆ ಹಾಕುತ್ತಲೇ ಕೋಣವನ್ನು ಹಿಡಿದು ತಂದ ಜನ ಗದ್ದಿಗೆ ಸುತ್ತ ಮೂರು ಸುತ್ತು ಹಾಕಿಸುತ್ತಾರೆ. ನಂತರ ಅಮ್ಮನ ಮುಂದೆ ತೆರೆಯ ಆಚೆ ಒಂದು ಕುರಿ ಕುಡಿಯುತ್ತಾರೆ. ಇದನ್ನು ಗದ್ದಿಗೆ ಮರಿ ಎಂದು ಕರೆಯುತ್ತಾರೆ. ಇದಕ್ಕೆ ಕಸರುಮರಿ ಎಂದೂ ಸಹ ಕರೆಯುತ್ತಾರೆ. ಈ ಗದ್ದಿಗೆ ಮರಿ ಅಮ್ಮನ ಮಗನಂತೆ. ಈ ಮರಿ ಕಡಿದ ನಂತರವೇ ಅಮ್ಮನ ಮುಂದಿನ ತೆರೆ ತೆಗೆಯುವುದು.

ಪಟ್ಟದ ಕೋಣ[ಬದಲಾಯಿಸಿ]

ಗದ್ದಿಗೆ ಮರಿ ಬಿದ್ದನಂತರ ಕೇಕೆ ಹಾಗೂ ತಮಟೆ ಬಡಿತಗಳು ಪರಾಕಾಷ್ಠೆಗೆ ಮುಟ್ಟುತ್ತದೆ. ಆಗ ಕೋಣವನ್ನು ಬಲಿಗೆ ಸಿದ್ದಗೊಳಿಸುತ್ತಾರೆ. ಹಿಂದೆ ಮುಂದೆ, ಅಕ್ಕ ಪಕ್ಕ ಜನ ಮಿನಿ ಹಾಕಿ ಮಿಸುಕಾಡದಂತೆ ಹಿಡಿಯುತ್ತಾರೆ. ನಂತರ ಅಮ್ಮನ ಬಂಡಾರ ತಂದು ಅದರ ಹಣೆಗೆ ಹಚ್ಚುತ್ತಾರೆ. ಹಿರಿಯರು ಕೋಣನ ಕಡಿಯಾಕೆ ಅಪ್ಪಣೆನಾ? ಎನ್ನುತ್ತಾರೆ. ಆಗ ಕೋಣನ ಕಡಿಯುವುದಕ್ಕಾಗಿಯೇ ಜೋಗಯ್ಯರಿಂದ ಶಾಸ್ತ್ರೋಕ್ತವಾಗಿ ಮುತ್ತು ಕಟ್ಟಿಸಿಕೊಂಡಾತ. ಅರ್ಧಚಂದ್ರಾಕಾರದ ಗಂಡುಗೊಡಲಿ ಹಿಡಿದು ಅಮ್ಮನಿಗೆ ನಮಸ್ಕರಿಸಿ ಎರಡು ಸಾರಿ ಅದರ ಕುತ್ತಿಗೆ ಮುಟ್ಟಿಸಿ ಮೂರನೇ ಬಾರಿಗೆ ಎತ್ತಿ ಜೋರಾಗಿ ಹೊಡೆದು ಕಡಿಯುತ್ತಾನೆ. ಮೂರನೇ ಏಟಿಗೆ ಪೂರ್ಣ ಕತ್ತರಿಸದಿದ್ದರೆ ಗರಗಸದಂತೆ ಕೊರೆಯುತ್ತಾರೆಯೇ ಹೊರತು ನಾಲ್ಕನೆ ಏಟು ಹಾಕುವುದಿಲ್ಲ. ಹೇಗೆ ಕಡಿಯುವಾಗ ಅರಚಬಾರದಂತೆ; ಅರಚಿದರೆ ಕೇಡೆಂದು ಭಾವಿಸುತ್ತಾರೆ.

ಚರಗ[ಬದಲಾಯಿಸಿ]

ಆ ವೇಳೆಗಾಗಲೇ ಗೌಡರ ಮನೆಯಿಂದ 'ಚರಗದ ಅನ್ನ' ಬುಟ್ಟಿಗಟ್ಟಲೆ ಬಂದಿರುತ್ತದೆ. ಅದಕ್ಕೆ ಕೋಣದ ರಕ್ತ ಬೆರೆಸುತ್ತಾರೆ. ಅದನ್ನೇ 'ಚರಗ' ಎನ್ನುತ್ತಾರೆ. ಆ ಚರಗದ ಪುಟ್ಟಿಯನ್ನು ಕೆಲವರು ಬೆನ್ನಮೇಲೆ ಹೊತ್ತರೆ ಇನ್ನು ಕೆಲವರು ಹಿಂದಿನಿಂದ ಚೆಲ್ಲುತ್ತಾ ಅಮ್ಮನ ಗದ್ದಿಗೆಯ ಸುತ್ತ ಮೂರು ಸುತ್ತು ಬರುತ್ತಾರೆ.

ಕೊಲ್ಲಾರಿ ಬಂಡಿ[ಬದಲಾಯಿಸಿ]

ಜೂಲ, ಕೊಂಬಣಸು, ಹಣೆಗನ್ನಡಿ, ಮೊದಲಾದವುಗಳಿಂದ ಸಿಂಗಾರಗೊಂಡ ಎತ್ತುಗಳನ್ನು, ಬಣ್ಣದ ಸೀರೆ, ಮಾವಿನ ಸೊಪ್ಪು, ಬಾಳೆಕಂದುಗಳಿಂದ ಅಲಂಕಾರಗೊಂಡ ಕಮಾನು ಗಾಡಿಗೆ ಹೂಡಿ, ದೊಡ್ಡ ದೊಡ್ಡ ಪಾನಕದ, ಮಜ್ಜಿಗೆಯ ಹಂಡೆಗಳನ್ನಿಟ್ಟುಕೊಂಡು ಮಧ್ಯಾಹ್ನದ ವೇಳೆಗೆ ಅಮ್ಮನ ಗದ್ದಿಗೆ ಬಳಿ ಬರುತ್ತಾರೆ. ಜಾತ್ರೆಗೆ ಬಂದವರಿಗೆಲ್ಲ ಪಾನಕ-ಮಜ್ಜಿಗೆಯನ್ನು ಹಂಚುತ್ತಾರೆ.

ಮೋಚುವುದು[ಬದಲಾಯಿಸಿ]

ಸಂಜೆಯಾಗುತ್ತಿದ್ದಂತೆ ಅಮ್ಮನನ್ನು ಮತ್ತು ಕೋಣನ ತಲೆ, ಕಾಲು, ಮತ್ತು ಹಣತೆ ಇತ್ಯಾದಿಗಳನ್ನು ತೆಗೆದುಕೊಂಡು ಮೊದಲೆ ಗೊತ್ತು ಮಾಡಿದ್ದ ಊರಾಚೆಯ ಒಂದು ಭಾಗಕ್ಕೆ ಹೋಗುತ್ತಾರೆ. ಸುಮಾರು ಎರಡು ಅಡಿ ಅಗಲ ಮೂರುವರೆ ಅಡಿ ಉದ್ದದ ಕುಳಿ ತೆಗೆದು ಅಮ್ಮನನ್ನು ಪೂಜಿಸುತ್ತಾರೆ. ಗಂಡನೆನಿಸಿಕೊಂಡ ಕೋಣನ ಬಲಿಯಾದ್ದರಿಂದ ಅಲ್ಲಿ ಅಮ್ಮನ ಮೂಗುತಿ ತೆಗೆದು, ಬಳೆ ಒಡೆದು, ತಾಳಿ ಹರಿದು ಮುಂಡೆ ಮಾಡುತ್ತಾರೆ. ಆ ಕುಳಿಯಲ್ಲಿ ಹೂವು, ಹಣ್ಣು, ಕಾಯಿ, ಕರ್ಪೂರ, ಬಸವಂಗಟ್ಟು (ವಿಭೂತಿಗಟ್ಟು) ಇಟ್ಟು ಐದು ಜನ ಐದು ಹಿಡಿ ಮಣ್ಣು ಹಾಕಿ ಮುಚ್ಚುತ್ತಾರೆ.

ತಿಥಿ[ಬದಲಾಯಿಸಿ]

ಮೋಚದ ಮೂರು ದಿನಕ್ಕೆ ಮಡಿವಾಳರ ಮನೆಯಲ್ಲಿ ಕೇಲು ಇಟ್ಟು ಪೂಜೆ ಮಾಡುತ್ತಾರೆ. ಹೋಳಿಗೆ, ಕರಿಗಡಬು ಮೊದಲಾದ ಅಡಿಗೆ ಮಾಡಿ ತಿಥಿ ಮಾಡುತ್ತಾರೆ.

ಕೋಣನ್ನ ಬಿಡುವುದು[ಬದಲಾಯಿಸಿ]

ಅನಂತರ ಬರುವ ಮಂಗಳವಾರ ಮತ್ತೆ ಗಂಡನನ್ನು ಬಿಡಬೇಕು, ಅಂದರೆ ಕೋಣನ್ನ ಬಿಡುವುದು, ಎಳೆಗೋಣ ಒಂದನ್ನು ತಂದು ಅಮ್ಮನ ಮುಂದೆ ಕಂಕಣ ಕಟ್ಟಿ ಊರಲ್ಲಿ ಬಿಡುತ್ತಾರೆ. ಹೀಗೆ ಬಿಟ್ಟ ಕೋಣ ಎಲ್ಲಿ ಯಾರ ಹೊಲದಲ್ಲಿ ಏನನ್ನೇ ಮೇಯ್ದರು ಯಾರೂ ಕೇಳುವಂತಿಲ್ಲ.

ಮಾರಿ ಕುಣಿತ[ಬದಲಾಯಿಸಿ]

ಮಾರಿಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಈ ಕುಣಿತ ಎರಡು ರೀತಿಯಲ್ಲಿ ಇರುತ್ತದೆ.

  1. ಬಲಿ ಕೊಡಲಾದ ಕೋಣನ ತಲೆಯನ್ನು ಹೊತ್ತು ಕುಣಿಯುತ್ತಾ ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸೇರುವುದು ಒಂದು ಬಗೆ. ಇದು ಸಂಪೂರ್ಣವಾಗಿ ಆಚರಣೆಯ ಒಂದು ಭಾಗ. ಮಾರಿ ಹಬ್ಬದ ಸಂದರ್ಭದಲ್ಲಿ ಕೊಂಡ,
  2. ಬಂಡಿ ಇತ್ಯಾದಿ ಆಚರಣೆಗಳು ಮುಗಿದ ನಂತರ ಮಾರಿಯ ಪ್ರತೀಕವನ್ನು ಹೊತ್ತು ಕುಣಿಯುವುದು ಇನ್ನೊಂದು ಬಗೆ.

ಕೋಣನ ತಲೆಯನ್ನು ಹೊತ್ತು ಮೆರವಣಿಗೆ ಹೊರಡುವ ಆಚರಣೆಯ ಭಾಗವಾಗಿ ಬರುವ ಕುಣಿತ ಎಲ್ಲರಿಗೆ ಸಂಬಂಧಿಸಿದ್ದಲ್ಲ. ಈ ಆಚರಣೆ ಸಂಪೂರ್ಣವಾಗಿ ದಲಿತರಿಗೆ ಸೇರಿದ್ದು. ದಲಿತರಲ್ಲಿ ಕೂಡ ಮಾರಿಯ ಪೂಜಾರಿ ಮಾತ್ರ ಆ ತಲೆಯನ್ನು ಹೊರಬೇಕು.

ಮಾರಿ ಕುಣಿತದ ಹಾಡು[ಬದಲಾಯಿಸಿ]

ಗಲ್ಲುಗಲ್ಲೆಂಬುತಾಳೆ ಮಾರಮ್ಮ,

ನಿಲ್ಲೆಂದರೋಗುತಾಳೆ,

ಹೋಂಬಾಳೆಗೆ ವಾಲುತಾಳೆ,

ಚಿನ್ನದಾಗೆ ತೂಗುತಾಳೆ,

ಹೊಂಬಾಳೆ ಹೊಳೆವ ನೋಡು,

ಮಾರವ್ನ ಕೆನ್ನೆಯ ತೆಳವ ನೋಡು,

ಕೆಣಕಿದರವಳ ಕಿಡಿಗಣ್ಣೆ ಮಾರವ್ನ,

ಮರೆತೋರ ಸೊಕ್ಕ ಮುರಿವಳು,

ಸಂಪ್ರದಾಯ[ಬದಲಾಯಿಸಿ]

ಮಾರಮ್ಮನ ಪೂಜಾರಿಗಳು ಹೆಚ್ಚಿನವರು ಹೊಲೆಯರು. ಕೆಲವು ಗ್ರಾಮಗಳಲ್ಲಿ ಬೆಸ್ತರು, ಪರಿವಾರದವರು, ಕುರುಬರು, ಒಕ್ಕಲಿಗರು ಮುಂತಾಗಿ ಇತರೆ ಶೂದ್ರ ಸಮುದಾಯದವರೂ ಪೂಜಾರಿಗಳಾಗಿರುವುದುಂಟು. ಇಂಥ ಕುಣಿತಗಳ ಸಂದರ್ಭದಲ್ಲಿ ಪೂಜಾರಿ ಹೊತ್ತ ಕಳಸಕ್ಕೆ ಅಥವಾ ಗುಡ್ಡ ಹೊತ್ತ ದೇವರಿಗೆ ಮಕ್ಕಳನ್ನು ಮುಟ್ಟಿಸುವ ಸಂಪ್ರದಾಯವೂ ಉಂಟು. ಇದರಿಂದ ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಹೆಗಲ ಮೇಲೆ ಮಕ್ಕಳನ್ನು ಕುಳ್ಳಿರಿಸಿಕೊಂಡು ಕುಣಿತದವರ ಜೊತೆ ಸೇರುವ ಕುಣಿತಗಾರರೂ ಇರುತ್ತಾರೆ. ಕ್ರಮೇಣವಾಗಿ ಇದೊಂದು ಸಾಮೂಹಿಕ ಕುಣಿತವಾಗಿ ರೂಪುಗೊಳ್ಳತ್ತದೆ.

ಕುಣಿತದ ವಾದ್ಯಗಳು[ಬದಲಾಯಿಸಿ]

ಕುಣಿತದಲ್ಲಿ ಪ್ರಧಾನವಾಗಿ ಚರ್ಮವಾದ್ಯಗಳಾದ ತಮಟೆ, ನಗಾರಿ, ಹಲಗೆ, ಡೋಲು, ಚಕ್ರಾದಿಬಳೆ, ಉರುಮೆ, ಅರೆ ಮುಂತಾದವುಗಳಲ್ಲದೆ ವಾಲಗ, ಶೃತಿ ಮೋರಿ, ಕೊಂಬು, ಕಹಳೆ ಮುಂತಾದ ಗಾಳಿವಾದ್ಯಗಳೂ ಬಳಕೆಯಾಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. ಸಂಪಾದಕ: ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬, ಪುಟ: ೩-೯.