ಸದಸ್ಯ:Manjunath dandinashivara/ನನ್ನ ಪ್ರಯೋಗಪುಟ

ಹಾಸ್ಯರತ್ನ "ನರಸಿಂಹರಾಜು"
ಹಿಂದಿನ ಕನ್ನಡ ಚಿತ್ರರಂಗದಲ್ಲಿ ಹಾಸ್ಯಪಾತ್ರಕ್ಕೆ ಪ್ರಧಾನವಾದ ಸ್ಥಾನ ಕಲ್ಪಿಸಲಾಗಿತ್ತು. ಪ್ರೇಕ್ಷಕರು ಹಾಸ್ಯವನ್ನು ಮನಸಾರೆ ಮೆಚ್ಚುತ್ತಿದ್ದರು. ತಮ್ಮ ದಂತಗಳನ್ನು ಪ್ರದರ್ಶಿಸುತ್ತಾ, ಒಂದು ಶಬ್ದವನ್ನು ಮಾತನಾಡದೇ ಜನರನ್ನು ನಗೆಗಡಲಲ್ಲಿ ತೇಲಿಸುವಂತಹ ಅದ್ಬುತ ಚಾಣಾಕ್ಷತೆಯನ್ನು ಮೈಗೂಡಿಸಿಕೊಂಡಿದ್ದವರೆಂದರೆ ಜನಪ್ರಿಯ ಹಾಸ್ಯನಟ ತಿಪಟೂರು ರಾಮರಾಜು ನರಸಿಂಹರಾಜು.
ನರಸಿಂಹರಾಜು ( ೧೯೨೩-೧೯೭೯) ಅವರ ತಂದೆ ರಾಮರಾಜು ಬ್ರಿಟಿಷ್ ಸರ್ಕಾರದಲ್ಲಿ ಹೆಡ್ ಕಾಸ್ತೇಬಲ್ ಅಗಿದ್ದರು. ಇವರ ಐದು ಮಕ್ಕಳಲ್ಲಿ ನರಸಿಂಹರಾಜು ಹಿರಿಯ ಮಗನಾಗಿದ್ದರು. ಇವರಿಗೆ ಒಬ್ಬ ಸೋದರ ಮತ್ತು ಮೂವರು ಸೋದರಿಯರಿದ್ದರು. ಇವರ ಚಿಕ್ಕಪ್ಪ ಲಕ್ಷ್ಮೀಪತಿರಾಜು ನಾಟಕ ಕಂಪನಿಯಲ್ಲಿದ್ದರು. ಆದ್ದರಿಂದ ತಮ್ಮ ಆರನೇ ವಯಸ್ಸಿನಲ್ಲಿಯೇ ಸಿ.ಬಿ.ಮಲ್ಲಪ್ಪನವರ ಕಂಪನಿಯಲ್ಲಿ ಜೀವನ ವೃತ್ತಿ ಆರಂಭಿಸಿದರು.
ನರಸಿಂಹರಾಜು ಎಂದಿಗೂ ಸ್ಕೂಲಿಗೆ ಹೋಗಲ್ಲಿಲ್ಲ. ಅದರೆ ಅವರು ನಾಟಕ ಕಂಪನಿಯಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ಕಂಪನಿಯ ಹಿರಿಯ ಕಲಾವಿದರ ಸಹಾಯದಿಂದ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತರು. ಕೃಷ್ಣಶಾಸ್ತಿçಯವರಿಂದ ಇಂಗೀಷ್ ಕಲಿತರು. ಶ್ರೀ ಚೆನ್ನ ಬಸವೇಶ್ವರ ನಾಟಕ ಕಂಪನಿಯು ನರಸಿಂಹರಾಜು ಅವರ ತವರುಮನೆಯಾಯಿತು. ಕಂಪನಿಯ ಮಾಲೀಕರಾದ ಗುಬ್ಬಿ ವೀರಣ್ಣರು ಇವರ ಗುರುಗಳಾದರು. ಡಾ. ರಾಜಕುಮಾರ್, ಜಿ.ವಿ.ಅಯ್ಯರ್ ಮತ್ತು ಬಾಲಕೃಷ್ಣ ಇವರುಗಳು ನರಸಿಂಹರಾಜುರವರ ಜೊತೆಗಾರರಾಗಿದ್ದರು.
೧೯೪೯ ರಲ್ಲಿ ನರಸಿಂಹರಾಜು ಶಾರದಮ್ಮನವರನ್ನು ವಿವಾಹವದರು. ಆನಂತರ ಇವರ ಜೀವನ ಯಶಸ್ವಿಯಾಗುತ್ತಾ ಸಾಗಿತು. ಯಾವಾಗ ಗುಬ್ಬಿ ವೀರಣ್ಣನವರು ಬೇಡರ ಕಣ್ಣಪ್ಪ ಚಲನಚಿತ್ರ ನಿರ್ಮಿಸಿದರೋ ಅಂದಿನಿAದ ನರಸಿಂಹರಾಜು ಹಾಸ್ಯ ನಟರಾಗಿ ಜನಪ್ರಿಯರಾದರು. ಆ ಚಿತ್ರದಲ್ಲಿ ಇವರ ಕಾಶಿ ಪಾತ್ರ ಜನಮನ್ನಣೆ ಗಳಿಸಿತ್ತು.
ನರಸಿಂಹರಾಜು ನಟನೆಯು ಚಾರ್ಲಿಚಾಪ್ಲಿನ್‌ರ ನಟನೆಯನ್ನು ಹೋಲುತ್ತಿತ್ತು.ಇದು ಇವರ ವಿಶೇಷ. ಚಾಪ್ಲಿನ್ ತರಹವೇ ಇವರ ದೇಹ ಚಲನೆ ಮತ್ತು ಮುಖಭಾವ ಇವರದಾಗಿತ್ತು. ಇದರಿಂದಾಗಿ ನೋಡುಗರು ಇವರೆಡೆ ಆಕರ್ಷಿತರಾಗಿದ್ದರು. ಸದಾ ನೆನಪಿನಲ್ಲುಳಿಯುವ ಹಲವಾರು ಚಿತ್ರಗಳಲ್ಲಿ ಇವರ ನಟನೆಯನ್ನು ಕಾಣಬಹುದು.
ಮಕ್ಕಳ ರಾಜ್ಯ, ಸ್ಕೂಲ್ ಮಾಸ್ತರ್, ಗಂಧದಗುಡಿ, ಕೃಷ್ಣಗಾರುಡಿ,ಸಂಧ್ಯಾರಾಗ,ಮನೆ ತುಂಬಿದ ಹೆಣ್ಣು, ಪ್ರೀತಿ ಮಾಡು ತಮಾಷೆ ನೋಡು, ನವಜೀವನ, ಕಿಟ್ಟುಪುಟ್ಟು, ಗೋವಾದಲ್ಲಿ ಸಿಐಡಿ ೯೯೯, ಶರಪಂಜರ, ಸಾಕ್ಷಾತ್ಕಾರ ಮತ್ತು ಅಪರಾಧಿಮುಂತಾದ ಚಿತ್ರಗಳಲ್ಲಿ ನರಸಿಂಹರಾಜು ಹಾಸ್ಯ ನಟರಾಗಿ ತುಂಬಾ ಜನಪ್ರಿಯರಾಗಿದ್ದಾರೆ.
ನಕ್ಕರದೇ ಸ್ವರ್ಗ ಚಿತ್ರವು ನರಸಿಂಹರಾಜು ಅವರ ನೂರನೇ ಚಿತ್ರವಾಗಿದೆ. ಇದರಲ್ಲಿ ಇವರು ನಾಯಕ ನಟರಾಗಿ ನಟಿಸಿದ್ದಾರೆ. ನರಸಿಂಹರಾಜು ಒಟ್ಟು ೧೨೫ ಚಿತ್ರಗಳಲ್ಲಿ ನಟಿಸಿದ ಮೊಟ್ಟಮೊದಲ ಕನ್ನಡದ ಹಾಸ್ಯನಟರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇವರು ಒಟ್ಟು ೨೫೬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇವರ ಮಗ ಶ್ರೀಕಾಂತ್ ೧೯೭೧ ರಲ್ಲಿ ಸ್ಕೂಟರ್ ಅಪಘಾತದಲ್ಲಿ ಮರಣ ಹೊಂದಿದಾಗ ನರಸಿಂಹರಾಜು ತುಂಬಾ ದುಃಖಿತರಾದರು. ಆಗ ಮದ್ಯಪಾನವನ್ನು ದುಃಖ ಮರೆಯಲು ಆಶ್ರಯಿಸಿದರು. ಮಗನ ನೆನಪಿಗಾಗಿ ತಮ್ಮ ಸ್ವಂತ ನಿರ್ಮಾಣದಲ್ಲಿ " ಪ್ರೋಫೆಸರ್ ಹುಚ್ಚುರಾಯ" ಎಂಬ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು. ಈ ಚಿತ್ರದಲ್ಲಿ ನಟರಾಗಿ ಅರೆಬರೆ ಬುದ್ದಿಯ ಪ್ರೋಫೆಸರ್ ಪಾತ್ರ ನಿರ್ವಹಿಸಿದರು. ಈ ಚಿತ್ರ ಯಶಸ್ವಿಯಾಯಿತು. ಅಂದಿನಿAದ ನರಸಿಂಹರಾಜು ಬಿಡುವಿಲ್ಲದ ನಟರಾದರು.
ರಂಗಭೂಮಿ ಮತ್ತೆ ಇವರನ್ನು ಕೈ ಬೀಸಿ ಕರೆಯಿತು. ಆಗ ಸದಾರಮೆ ನಾಟಕದಲ್ಲಿ ಸಾಹುಕಾರನ ಪಾತ್ರವನ್ನು ಬಹು ಚೆನ್ನಾಗಿ ನಿರ್ವಹಿಸುತ್ತಿದ್ದರು.
ನಾಟಕದ ಕಂಪನಿಗಳಲ್ಲಿ ಬಹು ಕಾಲದವರೆಗೆ ಜೀವನ ಸವೆಸಿದ ಇವರು ನಂತರ ತಮ್ಮ ಬಿಡುವಿನ ಸಮಯವನ್ನು ಸ್ಥಳೀಯ ಜನರೊಂದಿಗೆ ಕಳೆಯುತ್ತಿದ್ದರು. ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡುತ್ತಿದ್ದರು. ಇವರು ಕವಿಗಳ ಮತ್ತು ಬರಹಗಾರರ ಸ್ನೇಹ ಸಂಪಾದಿಸಿದ್ದರು. ಎನ್.ಆರ್. ಕೃಷ್ಣರಾವ್, ಬೀಚಿ ಮತ್ತು ತ.ರಾ.ಸು ಇವರ ಆಪ್ತರಾಗಿದ್ದರು. ಆದ್ದರಿಂದ ಕನ್ನಡ ಸಂಸ್ಕೃತಿಯನ್ನು ನರಸಿಂಹರಾಜು ಅಪಾರವಾಗಿ ಪ್ರೀತಿಸುತ್ತಿದ್ದರು.
ಮನೆ ತುಂಬಿದ ಹೆಣ್ಣು ಮತ್ತು ಸ್ಕೂಲ್ ಮಾಸ್ಟರ್ ಚಿತ್ರಗಳ ಅಭಿನಯಕ್ಕೆ ೧೯೫೮ರಲ್ಲಿ ಇವರಿಗೆ ಉತ್ತಮ ನಟ ಪ್ರಶಸ್ತಿ ದೊರಕಿತ್ತು. ಜಟಕಾರತ್ನ ಗುಂಡಾಜೋಷಿ, ನಕ್ಕರದೇ ಸ್ವರ್ಗ, ಮನೆ ಮಾಡಿ ನೋಡು, ಸತ್ಯಹರಿಶ್ಚಂದ್ರ ಮತ್ತು ಕಿತ್ತೂರರಾಣಿ ಚೆನ್ನಮ್ಮ ಚಿತ್ರಗಳ ಅಭಿನಯಕ್ಕಾಗಿ ಇವರಿಗೆ " ಫಿಲಮ್ ಪೇರ್ " ಪ್ರಶಸ್ತಿ ದೊರೆತಿದೆ.
ಹಾಸ್ಯರತ್ನ, ಹಾಸ್ಯವಿನೋದ ರತ್ನ ಮತ್ತು ಹಾಸ್ಯ ಚಕ್ರವರ್ತಿ ಬಿರುದುಗಳು ನರಸಿಂಹರಾಜು ಅವರ ಮುಡಿಗೇರಿವೆ. ಇವರ ಅಭಿಮಾನಿಗಳು ನರಸಿಂಹರಾಜು ಸ್ಮಾರಕ ಸಮಿತಿಯನ್ನು ಸಹ ಸಂಘಟಿಸಿದ್ದಾರೆ.
ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಐದು ಜನ ಹೆಣ್ಣು ಮಕ್ಕಳಿದ್ದಾರೆ. ಇವರ ನಾಲ್ಕನೇ ಮಗಳು ಸುಧಾ ನರಸಿಂಹರಾಜು ಈಗ ಜನಪ್ರಿಯ ಕಿರುತೆರೆ ಮತ್ತು ಚಿತ್ರ ನಟಿಯಾಗಿ ತಂದೆಗೆ ಗೌರವ ತಂದಿದ್ದಾರೆ.
ಕೊನೆಯದಾಗಿ ಒಂದು ಮಾತು ನರಸಿಂಹರಾಜು ಅವರು ಅಂದಿನ ಕಾಲದಲ್ಲಿ ಎಷ್ಟು ಬೇಡಿಕೆಯ ನಟರಾಗಿದ್ದರೆಂದರೆ ಚಿತ್ರ ನಿರ್ಧೇಶಕರು ಮೊದಲು ಇವರ ಕಾಲ್‌ಶೀಟ್ ಪಡೆದು ಅನಂತರ ರಾಜಕುಮಾರ್ ಅವರ ದಿನಾಂಕ ನಿಗಧಿಪಡಿಸುತ್ತಿದ್ದರಂತೆ. ಇದರಿಂದ ನಮಗೆ ನರಸಿಂಹರಾಜು ಅವರ ಜನಪ್ರಿಯತೆ ಗೊತ್ತಾಗುತ್ತದೆ. ಅಲ್ಲವೇ ?.