ಸದಸ್ಯ:Manishchrist/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೂಕ್ಲಿಡ್ ಯಾರು?[ಬದಲಾಯಿಸಿ]

ಯೂಕ್ಲಿಡ್ ಆಫ್ ಅಲೆಕ್ಸಾಂಡ್ರಿಯ

'ಯೂಕ್ಲಿಡ್ ಆಫ್ ಅಲೆಕ್ಸಾಂಡ್ರಿಯ' ಎಂದೇ ಕರೆಯಲ್ಪಡುವ 'ಯೂಕ್ಲಿಡ್' ಒಬ್ಬ ಪ್ರಸಿದ್ಧ ಗ್ರೀಕ್ ಗಣಿತಜ್ಞರಾಗಿದ್ದರು. ಇವರು ರೇಖಾಗಣಿತದ ಪಿತಾಮಹ ಎಂದೇ ಕರೆಯಲ್ಪಡುತ್ತಾರೆ. [೧]ಈಜಿಪ್ಟಿನ ಅಲೆಕ್ಸಾಂಡ್ರಿಯಾದವರಾದ ಇವರು 'ಟಾಲೆಮಿ'ಯ ಸಮಕಾಲೀನರು. ಇವರ 'ಎಲಿಮೆಂಟ್ಸ್' ಪುಸ್ತಕವು ಗಣಿತಶಾಸ್ತ್ರಕ್ಕೆ ಇವರು ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ರೇಖಾಗಣಿತದ ಹೊಸ ಯುಗಕ್ಕೆ ನಾಂದಿ ಹಾಡಿದ ಈ ಪುಸ್ತಕವು ಇಂದಿಗೂ ಕೂಡ ಜ್ಯಾಮಿತಿಯ ಅತ್ಯಂತ ಪ್ರಮುಖ ಪುಸ್ತಕವಾಗಿ ಪರಿಗಣಿಸಲ್ಪಟ್ಟಿದೆ. ಯೂಕ್ಲಿಡ್ ಅವರು ಈ ಪುಸ್ತಕದಲ್ಲಿ ಚಿಕ್ಕ ಚಿಕ್ಕ ಸ್ವಯಂಸಿದ್ಧಾಂತಗಳನ್ನು ಉಪಯೋಗಿಸಿಕೊಂಡು ಅನೇಕ ಪ್ರಮೇಯಗಳನ್ನು ಸಾಧಿಸಿದ್ದಾರೆ. ಇವರು ಅಭಿವೃದ್ಧಿಪಡಿಸಿದ ಈ ಪ್ರಮೇಯಗಳನ್ನೊಳಗೊಂಡ ರೇಖಾಗಣಿತಕ್ಕೆ ಯೂಕ್ಲಿಡಿಯನ್ ಜ್ಯಾಮಿತಿಯೆಂದೇ ಕರೆಯುತ್ತಾರೆ. ಇದಕ್ಕಷ್ಟೇ ಸೀಮಿತವಾಗಿರದ ಇವರು ಶಂಖುವಿನ ವಿಭಾಗ, ಗೋಳದ ಜ್ಯಾಮಿತಿ, ಸಂಖ್ಯಾಶಾಸ್ತ್ರ ಮುಂತಾದವುಗಳಲ್ಲೂ ಕೂಡ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ.[೨][೩][೪]

ಜೀವನ[ಬದಲಾಯಿಸಿ]

೧೯ ನೇ ಶತಮಾನದಲ್ಲಿ ಜೋಸೆಫ್ ದುರ್ಹ್ಯಾಂ ಕೆತ್ತನೆಯ ಯೂಕ್ಲಿಡ್

ಯೂಕ್ಲಿಡ್ ಅವರ ಜೀವನದ ಬಗ್ಗೆ ಇಲ್ಲಿಯವರೆಗೆ ಅತ್ಯಂತ ಕಡಿಮೆ ಮಾಹಿತಿಯನ್ನು ಕಲೆಹಾಕಲಾಗಿದೆ. ಇವರು ಹುಟ್ಟಿದ ಹಾಗೂ ಮರಣಹೊಂದಿದ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲವಾದರೂ ಇವರ ಜೊತೆ ಇದ್ದ ಜನರ ಕಾಲದ ಅನುಸಾರ ಇವರು ಕ್ರಿ.ಪೂ. ೩೨೫ ರಲ್ಲಿ ಜನಿಸಿರಬಹುದು ಎಂದು ಇತಿಹಾಸ ಶಸ್ತ್ರಜ್ಞರು ಹೇಳುತ್ತಾರೆ. ಯೂಕ್ಲಿಡ್ ಅವರ ವಿಸ್ತೃತ ಜೀವನ ಚರಿತ್ರೆಯನ್ನು ಅರೇಬಿಯನ್ ಲೇಖಕರು ಬರೆದಿರುವುದನ್ನು ನಾವು ಕಾಣಬಹುದು. ಈ ಜೀವನ ಚರಿತ್ರೆಗೆ ಯಾವುದೇ ನಂಬಬಹುದಾದಂತಹ ದಾಖಲೆಗಳಿಲ್ಲವಾದ್ದರಿಂದ ಇದನ್ನು ಕಾಲ್ಪನಿಕವೆಂದೇ ಹೇಳಲಾಗುತ್ತದೆ. ಯೂಕ್ಲಿಡ್ ಅವರ ಸಮಕಾಲೀನರಾಗಿದ್ದ ಟಾಲೆಮಿಯವರು ಒಂದು ಬಾರಿ 'ಎಲಿಮೆಂಟ್ಸ್ ಪುಸ್ತಕವನ್ನು ಹೊರತುಪಡಿಸಿ ಜ್ಯಾಮಿತಿಯನ್ನು ಅಭ್ಯಸಿಸಲು ಯಾವುದಾದರು ಸರಳ ದಾರಿಯಿದೆಯೇ' ಎಂದು ಯೂಕ್ಲಿಡ್ ಅವರಿಗೆ ಕೇಳಿದಾಗ, 'ಯಾವುದೇ ರಾಜಮಾರ್ಗದ ಮೂಲಕ ಜ್ಯಾಮಿತಿಯನ್ನು ಮುಟ್ಟಲು ಸಾಧ್ಯವಿಲ್ಲ' ಎಂದು ಹೇಳುವ ಮೂಲಕ ಅದರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಿದ್ದರೆಂದು ಸ್ವತಃ ಟಾಲೆಮಿಯವರೇ ಹೇಳಿಕೊಂಡಿದ್ದರು.[೫]

ಗಣಿತಶಾಸ್ತ್ರಕ್ಕೆ ಯೂಕ್ಲಿಡ್ ರ ಕೊಡುಗೆ[ಬದಲಾಯಿಸಿ]

'ಎಲಿಮೆಂಟ್ಸ್' ನ ಹಲವು ಅಂಶಗಳು ಯೂಕ್ಲಿಡ್ ಅವರಿಗಿಂತ ಮೊದಲೇ ಬೇರೆ ಗಣಿತಜ್ಞರಿಂದ ಹೇಳಲ್ಪಟ್ಟಿದ್ದರೂ,ಓದುಗರಿಗೆ ಸರಳವಾಗುವಂತೆ ಅವೆಲ್ಲವುಗಳನ್ನು ಒಂದೆಡೆಗೆ ಸೇರಿಸಿ ಸುಸಂಬದ್ಧವಾದ ಸಾಧನೆಗಳೊಂದಿಗೆ ತಮ್ಮದೇ ಆದ ಅನನ್ಯ ಶೈಲಿಯಲ್ಲಿ ವ್ಯಕ್ತಪಡಿಸಿದ್ದು ಜ್ಯಾಮಿತಿಯ ವಿಭಾಗವನ್ನೇ ಉಚ್ಛ ಮಟ್ಟಕ್ಕೇರಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ೨೩ ಶತಕಗಳ ನಂತರವೂ, ಯೂಕ್ಲಿಡ್ ಅವರ ಸಾಧನೆಗಳು ಜ್ಯಾಮಿತಿಯ ಮೂಲಭೂತ ಅಂಶಗಳಾಗಿ ಉಳಿದುಕೊಂಡಿರುವುದೇ ಅವರ ಅನನ್ಯತೆಗೆ ಸಾಕ್ಷಿಯಾಗಿದೆ. ಯೂಕ್ಲಿಡ್ ಅವರ ಸ್ವಯಂಸಿದ್ಧಾಂತಗಳನ್ನು ವಿಧಾನ ಹಾಗೂ ಅವರ ರಚನಾತ್ಮಕ ಶೈಲಿಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಯೂಕ್ಲಿಡ್ ರ ಅನೇಕ ಪ್ರತಿಪಾದನೆಗಳು ರಚನಾತ್ಮಕವಾಗಿದ್ದವು. ಅವರು ತ್ರಿಜ್ಯವನ್ನು ಬಳಸಿಕೊಂಡು ಒಂದು ವಸ್ತುವನ್ನು ನಿರ್ಮಿಸಲು ಬಳಸಿದ ಹಂತಗಳನ್ನು ವಿವರಿಸುವ ಮೂಲಕ ಕೆಲವು ಆಕೃತಿಗಳ ಅಸ್ತಿತ್ವವನ್ನು ಪರಿಚಯಿಸಿದರು. ರೇಖೆ ಹಾಗೂ ವೃತ್ತಗಳ ಅಸ್ತಿತ್ವವು ರಚನಾತ್ಮಕವೆಂದು ಹೇಳುವ ಇವರ ಒಂದು ಮತ್ತು ಮೂರನೇ ಪ್ರಮೇಯಗಳಲ್ಲೂ ಕೂಡ ಇವರು 'ಎಲಿಮೆಂಟ್ಸ್'ನಲ್ಲಿ ರಚನೆಗೆ ಕೊಟ್ಟ ಪ್ರಾಮುಖ್ಯತೆಯನ್ನು ನಾವು ಅರ್ಥೈಸಿಕೊಳ್ಳಬಹುದು. ಯೂಕ್ಲಿಡ್, ಯಾವುದೇ ಒಂದು ಆಕೃತಿಯನ್ನು ಪ್ರಮೇಯ ಸಾಧಿಸಲು ಬಳಸಬೇಕೆಂದರೆ, ಆ ಪ್ರಮೇಯದ ಹಿಂದಿನ ಪ್ರತಿಪಾದನೆಯಲ್ಲಿಯೇ ಆ ಆಕೃತಿಯನ್ನು ರಚಿಸುತ್ತಿದ್ದರು. ಉದಾಹರಣೆಗೆ, ಇವರು ಮೊದಲು ಚೌಕದ ರಚನೆಯ ಬಗ್ಗೆ ಒಂದು ಪ್ರತಿಪಾದನೆಯನ್ನು ಮಂಡಿಸಿ ಆನಂತರ ಆ ಚೌಕವನ್ನು ಒಂದು ಲಂಬಕೋನ ತ್ರಿಭುಜದ ಬಾಹುಗಳ ಮೇಲೆ ರಚಿಸುವ ಮೂಲಕ ಪೈಥಾಗೊರಸ್ ಪ್ರಮೇಯವನ್ನು ಸಾಧಿಸಿದ್ದಾರೆ. ಈ ಶೈಲಿಯನ್ನು ಇಂದಿಗೂ, ರೇಖಾಗಣಿತದಲ್ಲಷ್ಟೇ ಅಲ್ಲದೇ ಗಣಿತಶಾಸ್ತ್ರದ ಎಲ್ಲಾ ವಿಭಾಗಗಳಲ್ಲೂ ಅನುಸರಿಸುತ್ತಿದ್ದಾರೆ. ಸ್ವಯಂಸಿದ್ಧಾಂತದ ಸಹಾಯವಿಲ್ಲದೇ ಸಾಧಿಸಿದ ಪ್ರಮೇಯವು ಗರಿಯಿಲ್ಲದ ಹಕ್ಕಿಯಂತೆ ಕಾಣುವದರಲ್ಲಿ ಎರಡು ಮಾತಿಲ್ಲ.[೬]

ಉಲ್ಲೇಖಗಳು[ಬದಲಾಯಿಸಿ]

  1. Bruno, Leonard C. (2003) [1999]. Math and mathematicians : the history of math discoveries around the world. Baker, Lawrence W. Detroit, Mich.: U X L. p. 125. ISBN 978-0-7876-3813-9. OCLC 41497065
  2. Ball, pp. 50–62
  3. Boyer, pp. 100–19
  4. Macardle, et al. (2008). Scientists: Extraordinary People Who Altered the Course of History. New York: Metro Books. g. 12
  5. Proclus, p. XXX; O'Connor, John J.; Robertson, Edmund F., "Euclid of Alexandria"
  6. Struik p. 51 ("their logical structure has influenced scientific thinking perhaps more than any other text in the world")