ವಿಷಯಕ್ಕೆ ಹೋಗು

ಸದಸ್ಯ:Kalikekannada

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಘೋರಿಗಳ ಲೋಕದಲ್ಲಿ ...!

[ಬದಲಾಯಿಸಿ]


ಆಕೆ ಅಘೋರ ಲೋಕದ ಅಚ್ಚರಿ...

[ಬದಲಾಯಿಸಿ]

"...ನಾನು ಎರಡು ಡಿಗ್ರಿ ಮತ್ತು ಒಂದು ವಿಶೇಷ ಪಿ.ಜಿ ಮಾಡಿದ್ದೀನಿ. ಹಾಗೆಂದು ನಾನು "ಅಘೋರಿ ಮಾ" ಆಗಬಾರದು ಎಂದೆಲ್ಲಿ ಹೇಳಿದ್ದಿದೆ ಅಥವಾ ಓದಿದವರು ತಿಳಿದವರು ನಾಗರಿಕರು ಅಘೋರಿ ಪಂಥವನ್ನು ಅದರ ಅನುಭಾವವನ್ನೂ ಪರಿಗಣಿಸಿ ಅದನ್ನು ಪಾಲಿಸುವುದಿಲ್ಲ ಅಥವಾ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲವೆಂದು ಯಾರು ಹೇಳಿದ್ದು...? ಮನುಷ್ಯನಿಗೆ ಅವರವರ ನಂಬಿಕೆ ಮತ್ತು ಅಸಕ್ತಿ ಆಯಾ ಮಾರ್ಗವನ್ನು ಅನುಸರಿಸುವಂತೆ ಮಾಡುತ್ತವೆ. ಅದರಲ್ಲೂ ಯಾವ ಮಾರ್ಗದಲ್ಲಿ ಬದುಕಿಗೆ ಮುಕ್ತಿಯ ಭರವಸೆ ಮತ್ತು ನಂಬುಗೆಯ ಒಳಸೆಲೆಗಳು ಗೋಚರವಾಗುತ್ತವೆಯೋ ಆಯಾ ಮಾರ್ಗವನ್ನು ಮನುಷ್ಯ ಹಿಂಬಾಲಿಸುತ್ತಾನೆ. ಅಷ್ಟಕ್ಕೂ ನಿಮನ್ನೆಲ್ಲಾ ನಾಗರಿಕರು ಎನ್ನಬೇಕೇಕೆ..? ಹಾಗಾದರೆ ಅಘೋರಿಗಳೆಲ್ಲಾ ಬೇರೆ ಲೋಕದಲ್ಲಿ ಜೀವಿಸುತ್ತಿದ್ದಾರಾ..? ಇರಲಿ ನಾಗರಿಕರೆನಿಸಿಕೊಂಡ ನಿಮ್ಮಲ್ಲೆಲ್ಲರೂ ಉತ್ತಮ ಮತ್ತು ಉದಾತ್ತ ಜೀವನವನ್ನೇ ನಡೆಸುತ್ತಿದ್ದಾರಾ..? ಹೆಂಗಸರಿಲ್ಲದೆ ಯಾವ ವಾಮಮಾರ್ಗವೂ, ತಾಂತ್ರಿಕ ಕಾರ್ಯವೂ ಹೇಗೆ ಪೂರ್ಣಗೊಳ್ಳುವುದಿಲ್ಲವೋ ಹಾಗೆಯೇ ಅಘೋರ ಪ್ರಪಂಚದಲ್ಲೂ ಕಾಳಿ ಮಾತೆಗೆ ಮೊದಲ ಸ್ಥಾನ ಇರುವುದು ನೆನಪಿರಲಿ..."

ಆಕೆ ಮಾತನಾಡುತ್ತಿದ್ದರೆ, ಆಕೆ ಆತ್ಮವಿಶ್ವಾಸ ತುಂಬಿದ ಬಿರುಸಿನ ಮುಖ ಮತ್ತು ಕಣ್ಣುಗಳಲ್ಲಿನ ಆ ಪ್ರಖರತೆ ಜೊತೆಗೆ ದೇಹದ ಭಾಷೆಯಲ್ಲಿ ಆಗುತ್ತಿದ್ದ ಖರಖರನೆನಿಸುವ ಕದಲುವಿಕೆಗಳು, ಎದೆಯ ಮೇಲೆ ಹೊದ್ದಿದ್ದ ಉತ್ತರೀಯದಂತಹ ಕೇಸರಿ ಬಟ್ಟೆ ಪೂರ್ತಿ ಜರಿದು ಬಿದ್ದು ಅಗಾಧ ಎದೆಯ ಸೀಳು ಮತ್ತು ಅರ್ಧಕ್ಕೂ ಹೆಚ್ಚು ಭಾಗ, ಭಾರಕ್ಕೆ ಪ್ರದರ್ಶನವಾಗುತ್ತಿದ್ದರ ಅರಿವು... ಉಹೂಂ ಯಾವುದೆಂದರೆ ಯಾವುದರ ಅರಿವೂ ಆಕೆಗೆ ಇದ್ದಂತಿರಲಿಲ್ಲ. ತನ್ನ ನಂಬಿಕೆ ಮತ್ತು ಅದಕ್ಕೆ ತಕ್ಕಂತೆ ಕೊಡಬೇಕಾದ ಭರವಸೆ, ಎರಡರ ಮೇಲೆ ಮಾತ್ರ ಆಕೆಯ ಗಮನವಿದ್ದಿದ್ದು ಗೊತ್ತಾಗುತ್ತಿತ್ತು.

ಎದುರಿಗೆ ಕೂತ ನಮ್ಮೆಲ್ಲರ ಕಣ್ಣುಗಳ ಮೇಲೆ ಆಕೆಯ ತೀಕ್ಷ್ಣ ಕಣ್ಣುಗಳು ನೆಟ್ಟಿದ್ದರೂ, ನಮ್ಮ ಹಿಡಿತ ಮೀರಿ ಅಗಾಗ ನಾವು ಆಕೆಯ ತೆರೆದೆದೆಯ ಅಗಾಧ ಅಳತೆಯ ಸೀಳಿಗೆ ದಿಟ್ಟಿಸುತ್ತಿದ್ದ ರೀತಿ, ಆಕೆಯ ಅರೆ ತೆರೆದ ದೇಹ ಯಾವುದೂ ಅಕೆಯ ಗಮನದಲ್ಲಿರಲೇ ಇಲ್ಲ. ಗೊತ್ತಾಗುತ್ತಿದ್ದರೂ ‘ಏನೀಗ’ ಎಂಬ ಅಸಡ್ಡೆ ಇತ್ತಾ ಅಂತ..? ಏನಿದ್ದರೂ ತಮ್ಮ ಈ ಪ್ರಾಸಂಗಿಕ ಮತ್ತು ಕೈಗೊಂಡಿರುವ ವಿಧಿ ವಿಧಾನಗಳ ಬಗ್ಗೆ ಸಂಪೂರ್ಣ ಭರವಸೆಯ ಕೃತ್ಯ ಎನ್ನುವಂತೆ ಸಮರ್ಥಿಸಿಕೊಳ್ಳಬೇಕಿತ್ತು. ಅಷ್ಟೆ. ಶವ ಸಾಧನಾ ಅನುಷ್ಠಾನ ಎನ್ನುವುದು ಮೂರು ಪ್ರಮುಖ ಹಂತಗಳಲ್ಲಿ ಮೊದಲನೆಯದ್ದು. ಸ್ಮಶಾನ ಸಾಧನೆ ಎಂದೂ ಕೂಡಾ ಕರೆಯುತ್ತಾರೆ ಇದನ್ನು. ನಂತರದ್ದೇ ಶಿವ ಸಾಧನೆ ಮತ್ತು ಕೊನೆಯದ್ದು ಮಹಾ ಸಾಧನಾ. ಹಾಗಾಗಿ ಮೊದಲ ಹಂತದ ಸಾಧನೆಯನ್ನು ಅದೂ ಎದುರಿಗೆ ಯಾವುದೋ ದೇಶದ ಪ್ರತಿನಿಧಿಗಳಂತೆ ನಾವು ಕೂತಿರುವಾಗ ಸಾಧಿಸಿಕೊಳ್ಳಲೇಬೇಕಿತ್ತು.

ಕಾರಣ ನಾನು ಮತ್ತು ನಿರ್ಮಲ ಬಾಬಾ (ಈತ ಅಷ್ಟಾಗಿ ಯಾವ ನಿಯಮವನ್ನು ಪಾಲಿಸದ ಆದರೆ ಮಾನವರು ಮತ್ತು ಅಘೋರಿಗಳು ಎರಡೂ ಕಡೆಯಲ್ಲೂ ಆಪ್ತನಾಗಿರುತ್ತಾ, ಬದುಕು ಕಟ್ಟಿಕೊಂಡಿರುವ ಅರೆಬರೆ ಸಾಧಕ. ಹೊರಗಿನ ಪ್ರಪಂಚಕ್ಕೆ ಈತ ನಿರ್ಮಲದಾಸ್ ಪಂಡಿತಜೀ. ನಾವಿಬ್ಬರೂ ಆಗಷ್ಟೆ ಸುಡುತ್ತಿದ್ದ ಶವವೊಂದರ ಮುಂದೆ ನಿಂತು ತನ್ನ ಕೈಂಕರ್ಯದಲ್ಲಿ ತೊಡಗಿದ್ದ ಆಕೆಯ ಅಘೋರ ಕಾರ್ಯಾಚರಣೆಗೆ ಜೀವಂತ ಸಾಕ್ಷಿಗಳಾಗಿ ಕೂತೆದ್ದು ಈಚೆಗೆ ಬಂದಿದ್ದೆವು. ಬನಾರಸ್ಸಿನ ತುಂಬರ್ ಚೌರಾಹದಿಂದ ಇಪ್ಪತೈದು ಕಿ.ಮೀ.ದೂರದ ಸ್ಮಶಾನದ ಕಟ್ಟೆಯ ಮೇಲೆ ಈ ಕಲಾಪ ಜರುಗಿತ್ತು. ನಾನೂ ನಿರ್ಮಲಜೀ ವಿಧಿಯಲ್ಲಿ ಪಾಲ್ಗೊಳ್ಳುವ ಸಂಬಂಧಿಕರಂತೆ ತೆರಳಿ, ಕಟ್ಟೆಯೊಂದರ ಮೇಲೆ ಸುಮಾರು ಹೊತ್ತಿನಿಂದ ಕೂತಿದ್ದೆವು. ಆವತ್ತು ಮಧ್ಯಾನ್ಹದ ಹೊತ್ತಿಗೆ ಕಲಾಪ ಇರುತ್ತದೋ ಇಲ್ಲವೋ ಗೊತ್ತಿಲ್ಲದೆ ಸಮಯ ವ್ಯಯಿಸುವ ಬದಲಾಗಿ ಸಾರಾನಾಥ್ ತೆರಳಿ, ಚಿತ್ರ ತೆಗೆಯುತ್ತಾ ನಾನು ಅಲ್ಲಿನ ಪಳೆಯುಳಿಕೆಗಳ ಮಧ್ಯೆ ಕಳೆದುಹೋಗಿದ್ದೆ. ಅಂಥಾ ಸರಹೊತ್ತಿನಲ್ಲಿ ಕರೆ ಮಾಡಿದ್ದ ನಿರ್ಮಲ್ ದಾಸ್ ಕೂಡಲೇ ಬರುವಂತೆ ಒತ್ತರಿಸಿದ್ದ. ಹಾಗಾಗಿ ಅಲ್ಲಿಂದ ಸೀದಾ ರಾಮಪುರದವರೆಗೆ ಕಾರಿನಲ್ಲಿ ಬಂದಿಳಿದವನೆ ಅಲ್ಲಿನ ವಿವೇಕಚೌರಾಹ್‌ದ ಮೂಲೆಯಲ್ಲಿ ಕಾಯ್ದು ನಿಂತು ಸರಸರನೆ ಮಣ್ಣಿನ ಕಪ್ಪಿನಲ್ಲಿ ಚಹ ಕುಡಿದು ಹೊರಟು ಬಂದಿದ್ದೆ.) ನನ್ನ ಮಸ್ತಿಷ್ಕದಲ್ಲಿ ಗಾಢವಾಗಿ ಮನುಷ್ಯನ ದೇಹ ಸುಡುತ್ತಿರುವ ಕಮಟು ಘಾಟಿನ ಅಲೆಗಳೇ ಕದಲುತ್ತಿದ್ದವು. ಈ ಬಗ್ಗೆ ನನಗೆ ಅರಿವಿರಲಿಲ್ಲ ಎಂದಲ್ಲ. ಆದರೆ ಸ್ತ್ರೀಯೊಬ್ಬಳು ಅದರಲ್ಲೂ ಖಣ್.. ಖಣ್.. ಎನ್ನಿಸುವ ಇಂಗ್ಲೀಷು ಮತ್ತು ಅನಾಮತ್ತಾಗಿ ಅಂತರಾಷ್ಟ್ರೀಯ ವಿದ್ಯಮಾನದಲ್ಲಿ ಮಾತಾಡಬಲ್ಲವಳೊಬ್ಬಳು ವಾಮಮಾರ್ಗದಲ್ಲಿ ಈ ಪರಿ ನಂಬಿಕೆ ಇಟ್ಟು ಶ್ರದ್ಧೆಯಿಂದ ಕೂತುಕೊಳ್ಳುತ್ತಾಳೆ ಎಂದೆನ್ನಿಸಿರಲಿಲ್ಲ. ಅದಕ್ಕಿಂತಲೂ ಎದುರಿಗಿದ್ದವರನ್ನು ನಂಬಿಸುವ ಮತ್ತು ತಾನು ಮಾಡುತ್ತಿದ್ದ, ಮಾಡುತ್ತಿರುವ ಅಪರೂಪದ ಈ ಕಾರ್ಯ, ಕ್ರಿಯೆ ಎಲ್ಲಾ ಪರಮ ಪವಿತ್ರ ಎನ್ನುವುದನ್ನು ರುಜುವಾತು ಮಾಡುವ ಅರ್ಜೆಂಟು ಆಕೆಗಿತ್ತು.

ಈ ಬಗ್ಗೆ ಇನ್ನಷ್ಟೆ ಆಕೆಯ ಬಳಿ ಕೂತು ಅಥವಾ ಇನ್ನಾರಾದರೂ ಮಾಹಿತಿ ನೀಡಿದರೆ, ಅವಕಾಶ ಸಿಕ್ಕಿದರೆ ನೋಡಿ ಬರುವ ಬಗ್ಗೆ ಕಾಯುತ್ತಲೇ ಇದ್ದೆ. ಆದರೆ ಹೀಗೆ ರಣರಣ ಬಿಸಿಲಿನ ಸಾಯಂಕಾಲಗಳಲ್ಲಿ ಹೀಗೊಬ್ಬ ಹೆಣ್ಣುಮಗಳು (ಮದುವೆ ಅಥವಾ ಸಂಸಾರ ಇತ್ತೋ ಇಲ್ಲವೋ ಕಡೆಗೂ ಗೊತ್ತಾಗಲೇ ಇಲ್ಲ) ಶವದೆದುರಿಗೆ ಅಪರ ಕೆಂಪು ಸೀರೆಯನ್ನು ಕಚ್ಚೆಯಂತೆ ಬಿಗಿದುಕೊಂಡು ಹಣೆಗಿಂತಲೂ ಅಗಲವಾಗಿ ಅರಿಶಿನ ಬಳಿದುಕೊಂಡು, ಅದರ ಮಧ್ಯೆ ಒಂದು ತ್ರಿನೇತ್ರ ಬರೆದುಕೊಂಡು ಕಲಾಪ ನಡೆಸುತ್ತಾ ಕೂತಿದ್ದಾಳೆ ಎನ್ನುವುದನ್ನು ಎರಡೆರಡು ಬಾರಿ ನೋಡಿ ಖಚಿತಪಡಿಸಿಕೊಳ್ಳಬೇಕಾಗಿ ಬಂದಿತ್ತು.

(ಈಗೀಗ ಹೆಂಗಸರೂ ಅಘೋರಿಗಳಾಗುವುದು, ಹಾಗೆ ಸಿದ್ಧಿಯನ್ನು ಪಡೆಯಲು ತಮ್ಮದೇ ರೀತಿಯಲ್ಲಿ ಸಾಧನೆಗಿಳಿಯುವುದು ಸಹಜವಾಗಿ ಹೋಗಿದೆ. ಆದರೆ ಹೀಗೆ ತಾಂತ್ರಿಕ ಕ್ರಿಯೆಯಲ್ಲಿ ಜರುಗುವ ಪಾಲ್ಗೊಳ್ಳುವ ತಾನೇ ಅಧ್ವೈರ್ಯುವಾಗುವ ಎದೆಗಾರಿಕೆ ಬಗ್ಗೆ ಕೇಳಿರಲಿಲ್ಲ. ಅದರಲ್ಲೂ ಅಪರ ಕರ್ಮಠ ಬೈರಾಗಿಯಂತೆ ನಿರ್ಲಿಪ್ತವಾಗಿ ಹೆಣದ ಪೂಜಾ ಕ್ರಿಯಾವಿಧಿ ಮಾಡುವುದು ಅಷ್ಟು ಸುಲಭವಲ್ಲವೇ ಅಲ್ಲ. ಅಲ್ಲಿ ಕ್ರಿಯೆಗೆ, ತಂತ್ರ ಪದ್ಧತಿ ಅಥವಾ ವ್ಯವಸ್ಥೆಗಿಂತ, ಪಾಲ್ಗೊಳುವ ಮತ್ತು ಮಾಡುವ ಎದೆಗುಂಡಿಗೆಯ ಮೀಟರಿಗೆ ಕಿಮ್ಮತ್ತು ಜಾಸ್ತಿ. ನಾಗಾದೀಕ್ಷೆ ಪಡೆದ ಮೇಲೆ ಪುರುಷರು ಸಂಪೂರ್ಣ ನಗ್ನರಾದರೆ, ಹೆಂಗಸರಿಗೆ ಆ ವಿಷಯದಲ್ಲಿ ಮಾತ್ರ ವಿನಾಯಿತಿ ಇದೆ. ಆದರೆ ಸಾಮಾನ್ಯವಾಗಿ ಏಕವಸ್ತ್ರ ಧಾರಣೆಯನ್ನೆ ಮಾಡುತ್ತಾರೆ. ಅಂದ ಹಾಗೆ ನಾಗಾಗಳು ಕೇಸರಿ ವಸ್ತ್ರಧಾರಿಗಳಾದರೆ, ಅಘೋರರು ಅಪ್ಪಟ ಕಪ್ಪು.

ಅಂದ ಹಾಗೆ ನಾಗಾಗಳಾಗುವ ಪುರುಷರು ಒಳಗೊಳ್ಳುವ ಶವ ಸಂಭೋಗ, ಸ್ವಮಲ ಭಕ್ಷಣೆ, ಸ್ವಮೂತ್ರ ಪಾನೀಯ ಇತ್ಯಾದಿಗಳಿಗೆ ಇವರನ್ನೂ ಪಕ್ಕಾಗಿಸುತ್ತಾರಾ..? ಪುರುಷ ನಾಗಗಳಾದರೆ ಹೇಗಾದರೂ ಸರಿ ಹೆಣ್ಣಿನ ಶವದೊಡನೆ ಕ್ರಿಯಾವಿಧಿ ಅನುಸರಿಸಿಯಾರು. ಅದೇ ಮಹಿಳೆಯಾದರೆ ಪುರುಷನ ಶವ ಇರಿಸಿಕೊಂಡು ಅದೇಗೆ ಶವ ಸಂಭೋಗದಂತಹ ವಿಧಿಗೆ ಪಕ್ಕಾಗಲು ಸಾಧ್ಯ..? ಇಂಥಾ ಪ್ರಶ್ನೆಗಳಿಂದ ಹಲವು ಕಡೆಗಳಲ್ಲಿ ಹೊರದಬ್ಬಿಸಿಕೊಂಡು ಬಂದಿದ್ದೇನೆ. ಕಾರಣ ತಾಂತ್ರಿಕವಾಗಿ ಇದು ಸಾಧುವೇ ಎನ್ನುವ ತರ್ಕಕ್ಕೆ ಅಲ್ಲಿ ಬೆಲೆ ಇಲ್ಲ. ಒಂದು ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಅಸಾಧ್ಯ ಅನಿಸಿದಾಗೆಲ್ಲ ನಾನು ಸುಮ್ಮನೆ ಎದ್ದು ಬಂದಿದ್ದೇನೆ. ಇಲ್ಲದಿದ್ದರೆ ಆಗಬಹುದಾದ ಸಂಭಾವ್ಯ ದಾಳಿಗೆ ನಾನು ತಯಾರಿರಬೇಕಲ್ಲ. ಆದರೆ ಕೆಲವು ಕಡೆಗಳ ಚರ್ಚೆಯಲ್ಲಿ ವಾದಗಳು ಮಕಾಡೆ ಮಲಗಿದ್ದೂ ಇದೆ. )

ಆವತ್ತು ಸಂಜೆಯ ನಾಲ್ಕೂವರೆಗೆಲ್ಲಾ ನಾನು ಅಸ್ಸಿ ಘಾಟಿನ ಪೌಳಿಯ ಮೇಲೆ ಕೂತು ಲ್ಯಾಪ್‌ಟಾಪಿನಲ್ಲಿ ಏನೋ ಮಾಡುತ್ತಿದ್ದೆ. (ಈ ಅಸ್ಸಿ ಘಾಟೆನ್ನುವುದು ಈಗ ಅತೀ ರೋಮಾಂಟಿಕ್ ಜಾಗವಾಗಿ ಬದಲಾಗಿದೆ ಈಗ. ಅದರಲ್ಲೂ ಬಸಂತ ಪಂಚಮಿಯಂತಹ ಸಂದರ್ಭದಲ್ಲಿ ಅಧಿಕೃತ, ಅನಧಿಕೃತ ಎಳೆಯ ಜೋಡಿಗಳು ಮನೆಯಿಂದ ಆಚೆಗೆ ದೇವಸ್ಥಾನದ ನೆಪದಲ್ಲಿ ರೌಂಡು ಬೀಳುವುದು ಸಾಮಾನ್ಯ. ಹಾಗೆ ಬಂದವರು ಸೀದಾ ಗಂಗೆಯನ್ನು ದಾಟಿ ಆಚೆ ದಂಡೆಗೆ ನಡೆದು ಬಿಡುತ್ತಾರೆ. ಅಲ್ಲಿ ಕಿ.ಮೀ.ಗಟ್ಟಲೇ ಮರಳ ದಿಬ್ಬಗಳ ಉದ್ದಾನು ಉದ್ದದ ಏಕಾಂತ. ಅಲ್ಲಲ್ಲೆ ಕೂತೆದ್ದು ಸಂಜೆಯ ಗಂಗಾ ಆರತಿ ಹೊತ್ತಿಗೆ ಮೊದಲು ವಾಪಸ್ಸಾಗುತ್ತಾರೆ). ಈಗಾಗಲೇ ಮೊದಲೆರಡು ದಿನದಿಂದ ಅಲ್ಲೆ ಕೂತು ಚಹ ಕುಡಿಯುತ್ತಿದ್ದುದರಿಂದ, ಹಾಗೆ ಆವತ್ತು ನಾನು ಅಲ್ಲಿಗೆ ಬಂದು ಕೂರುತ್ತಿದ್ದರೆ, ನಿಶಬ್ದವಾಗಿ ಒಂದು ಪರಿಚಯದ ನಗೆ ಬಿಸಾಕುತ್ತಾ, ದೊನ್ನೆಯಂತಹ ಮಣ್ಣಿನ ಕುಡಿಕೆಯಲ್ಲಿ ತಾಸಿಗೊಮ್ಮೆ ಚಹ ತಂದಿಟ್ಟು ಹೋಗುತ್ತಿದ್ದ ಹುಡುಗ,

"..ಭಯ್ಯಾ.. ಔರ್ ಏಕ್ ಬಾರ ಚಾಹಿಯೇ ಕ್ಯಾ..?" ಎನ್ನುವ ಹೊತ್ತಿಗೆ ಅಷ್ಟು ದೂರದಲ್ಲಿ ನಿರ್ಮಲ ದಾಸ ಬರುತ್ತಿದ್ದು ಕಾಣಿ ಸಿತ್ತು. ಕೂಡಲೇ

"..ಬಾದ್ ಮೇ ನಹಿ ಚಾಹಿಯೇ.. ಅಭೀ ಔರ್ ಏಕ್ ಬಡಾ ಲೇಕರ್ ಆನಾ.." ಎನ್ನುತ್ತಾ ಲ್ಯಾಪಿ ಮುಚ್ಚಿಟ್ಟು ಅವನು ನಡೆದು ಬರುತ್ತಿದ್ದ ಚಿತ್ರವನ್ನು ಗಂಗೆಯ ಹಿನ್ನೀರಲ್ಲಿ ಫೋಟೊ ಮಾಡಿಕೊಳ್ಳುತ್ತಾ ಕೂತಿದ್ದೆ. ಹಾಗೆ ಬಂದು ನನ್ನ ಪಕ್ಕದ ಚಹದ ಬಟ್ಟಲು ಮತ್ತು ಕಟ್ಟೆಯ ಮೇಲೆ ಇಟ್ಟುಕೊಂಡಿದ್ದ ಸಣ್ಣ ಪುಟ್ಟ ಸರಂಜಾಮನ್ನು ದಿಟ್ಟಿಸುತ್ತಾ, ಇನ್ನೊಂದು ಕಲ್ಲಿನ ತುದಿಗೆ ಕುಳಿತ. ಹುಡುಗ ದೊಡ್ಡ ಮಂಕರಿ ಕಪ್ಪನ್ನು ಚಹ ತುಂಬಿಸಿ ಅವನ ಕೈಗೆ ಕೊಡುತ್ತಿದ್ದಂತೆ ನಿರ್ಮಲ್ ಯಾವ ಮುಲಾಜೂ ಇಲ್ಲದೆ ಸೊರಸೊರನೆ ಶಬ್ದಿಸುತ್ತಾ ಅರ್ಧ ಕುಡಿದು ಹೇಳಿದ,

".. ಕಲ್... ತಾಂತ್ರಿಕ ಮಾತಾ ಕೀ ಔರ್ ಜಾಯೆಂಗೆ ವಿಜಯಾ ಮಾತಾಜೀ ಕೆ ಅಡ್ಡಾ ಮೆ..ವಿವೇಕ್ ಚೌರಾಹ ಕೆ ಉಸ್ ಪಾರ್.." ಎಂದುಬಿಟ್ಟ.

"..ಹೌದೇ.." ನನಗೆ ಪೂರ್ತಿಯಾಗಿ ನಂಬಿಕೆ ಬಂದಿರಲಿಲ್ಲ. ಆದರೆ ಅವನು ಅದರಲ್ಲಿ ಯಾವ ವಿಶೇಷತೆನೂ ಇಲ್ಲ ಎನ್ನುವಂತೆ,

"..ಹಾಂ. ನಾಳೆ ಪೂಜೆಯ ಅಗತ್ಯಕ್ಕೆ ಬೇಕಾದುದೆಲ್ಲವನ್ನೂ ನಾನೇ ಒದಗಿಸಿ ಕೊಡುತ್ತೇನೆ ಎಂದು ಹೇಳಿದ್ದೆ. ಹಾಗೆಂದೆ ಸಾಮಾನು ಎಲ್ಲಾ ಒಯ್ದು ಅಲ್ಲಿಟ್ಟು ಬರ್ತಾ ಇದ್ದೇನೆ. ಹೆಚ್ಚು ಕಡಿಮೆ ಮಧ್ಯಾನ್ಹ ಹೊತ್ತಿಗೂ ಮೊದಲೇ ಶವ ಬರುತ್ತೆ. ಆಮೇಲೆ ಅಗ್ನಿ ಕೊಡುತ್ತಾರೆ. ಅದರ ನಂತರ ಪೂರ್ತಿ ಆಗುವ ಹೊತ್ತಿಗೆ ಮಾತಾಜೀ ಪೂಜೆಯೂ ಮುಗಿಯುತ್ತದೆ..." ಎಂದ.

"..ಹಾಗಾದರೆ ಬೆಳಿಗ್ಗೆ ಎಂಟಕ್ಕೂ ಮೊದಲೇ ಹೊರಟು ಬಿಡೋಣ.." ಎಂದು ನಾನು ಅವನ ಅನುಮತಿ ಕಾಯದೆ ಅವಸರಿಸಿದ್ದೆ. ಸಾಮಾನ್ಯವಾಗಿ ಶವ ಪೂಜೆ ಮತ್ತು ಅದರ ಎದುರಿಗೆ ಕೂತು ಧ್ಯಾನಸ್ಥ ಸ್ಥಿತಿಗೆ ತಲುಪುವುದು, ಕೆಲವೊಮ್ಮೆ ಅದೇ ಶವದಿಂದ ಒಂದಿಷ್ಟು ಮಾಂಸ ಮಡ್ಡಿ ಎಳೆದುಕೊಂಡು ತಿಂದುಬಿಡುವುದೂ ಸೇರಿದಂತೆ ಮನುಷ್ಯ ಮಾತ್ರರಿಗೆ ಸಾಧ್ಯವಾ ಎನ್ನಿಸುವಂತಹ ತರಹೇವಾರಿ ಕಾರ್ಯಗಳನ್ನು ಅಘೋರಿಗಳು ಮಾಡುವುದು ಸಹಜವೇ. ಆದರೆ ಸ್ತ್ರೀಯೊಬ್ಬಳು ಹೀಗೆ ಶವ ಪೂಜೆಯ ವಿಧಾನಕ್ಕೆ ಪಕ್ಕಾಗುವುದು ಅದರಲ್ಲೂ ಅಘೋರಿಯ ರೂಪದಲ್ಲಿದ್ದವಳ ಸ್ವಯಂ ಭೇಟಿಯ ಬಗ್ಗೆ ಇನ್ನಿಲ್ಲದ ಆಸಕ್ತಿ ಮತ್ತು ಕಾತುರತೆಯ ಜತೆಗೆ ಮೊದಲ ಬಾರಿಗೆ ಅಘೋರಿ ಮಹಿಳೆಯ ಕಲಾಪಕ್ಕೆ ಹೊರಟ ಎಕ್ಸೈಟ್‌ಮೆಂಟೂ ಸೇರಿಕೊಂಡು ನಾನು ಎದ್ದು ನಿಂತುಬಿಟ್ಟಿದ್ದೆ.

"..ಯಾರು ಶವವನ್ನು ಕೊಟ್ಟಿದಾರೆ..? ಹಾಗೆ ಶವವನ್ನು ಮನೆಯವರು ಒಪ್ಪಿಕೊಂಡು ಕೊಡುತ್ತಾರಲ್ಲ ಅದಕ್ಕೆ ಮೊದಲೇ ಮಾತುಕತೆಯಾಗಿರುತ್ತದಾ..?.." ಎನ್ನುತ್ತಾ ನಾನು ನಿರ್ಮಲದಾಸನಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಅದೆಲ್ಲಾ ಕೇಳುವುದು ನಿಷಿದ್ಧ ಎನ್ನುವಂತೆ ಕಣ್ಸನ್ನೆ ಮಾಡುತ್ತಾ,

"..ಆಯಿತು ಹೊರಡು. ನಾಳೆ ನಾನು ಕರೆ ಮಾಡಿದ ಕೂಡಲೇ ರಾಮಪುರ ಚೌರಾಹ್‌ಕ್ಕೆ ಬಂದು ಬಿಡು.." ಎನ್ನುತ್ತಾ ಕುಡಿಕೆ ನೆಲಕ್ಕಿಟ್ಟು ಎದ್ದುನಿಂತ.

"..ನಾಳೆ ಬರುವಾಗ ನಿನ್ನ ಬೂಟು ಬಿಚ್ಚಿಟ್ಟು ಬಿಡು. ಸೊಂಟಕ್ಕೆ ಬೆಲ್ಟಿದ್ದರೆ ಅದನ್ನೂ ತೆಗೆದಿಡು. ಆ ನಿನ್ನ ಬಳೆ ಮೊದಲು ಆಚೆಗಿಡು.." ಎನ್ನುತ್ತಾ ಎಲ್ಲಾ ರೀತಿಯ ಕರ್ಮ ಕಾರ್ಯಸ್ಥಳದ ನಿಷೇಧಗಳನ್ನು ನಿಜಕ್ಕೂ ಹೇಳುತ್ತಿದ್ದನೊ, ಜತೆಗೆ ಅವನದ್ದೂ ಕೆಲವು ಕಂಡಿಷನ್ ಒಂದಿಷ್ಟು ಸೇರಿಸುತ್ತಾ ಸ್ಕೋಪು ತೆಗೆದುಕೊಳ್ಳುತ್ತಿದ್ದಾನೋ ಗೊತ್ತಾಗಲಿಲ್ಲ. ಆದರೆ ಈ ಅಘೋರರಲ್ಲೂ ವಿಚಿತ್ರ ಬಗೆಯ, ಹಲವು ತಮಾಷಿಯ ನಂಬುಗೆಗಳಿವೆ. ಕೆಲವೊಬ್ಬರಿಗೆ ನೇರ ದಿಟ್ಟಿಸಿ ನೋಡಬಾರದಂತೆ, ಕೈ ಕಟ್ಟಿ ನಿಲ್ಲಬಾರದು. ಕಾಲು ಕ್ರಾಸ್ ಆಗಿ ಕೂತಿರಬಾರದು, ಚರ್ಮದ ಉಡುಗೆ ಇರಬಾರದು, ಲಂಗೋಟಿ ಇದ್ದವರು ಅಲ್ಲಿ ನಿಲ್ಲುವಂತೆಯೆ ಇಲ್ಲವಂತೆ, ಜನಿವಾರವಿದ್ದರೆ ಅದಕ್ಕೆ ಗಂಟು ಹಾಕಿರ ಬಾರದು, ಕಾಮಪ್ರೇರಿತಳಾಗಿ ಸ್ರವಿಸಿ ಒದ್ದೆಯಾದ ಹೆಂಗಸು ನಿಲ್ಲುವಂತಿಲ್ಲ, ಕಾಮ ಕ್ರೀಡೆ ಮುಗಿಸಿ ಬಂದ ಹೆಂಗಸೂ/ಗಂಡಸೂ ಇಬ್ಬರೂ ಕನಿಷ್ಠ ಎರಡು ತಾಸು ಅಲ್ಲಿಗೆ ಕಾಲಿಡುವಂತಿಲ್ಲ. ಕಾರಣ ಕ್ರೀಡೆಯ ನಂತರವೂ ಒಸರುವ ತೇವ ಅವರ ಕ್ಷುದ್ರ ಶಕ್ತಿಗಳನ್ನು ಆ ವಾಸನೆಯ ಮೂಲಕವೇ ಆಕರ್ಷಿಸುತ್ತವಂತೆ..!

ಲಿಂಬೆಹಣ್ಣನ್ನು ಅಡ್ಡಡ್ಡ ಇಟ್ಟು ಅದಕ್ಕೆ ಮೊಳೆ ಹೊಡೆದುಕೊಂಡು ಕೈಯ್ಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಮೆಣಸಿನಕಾಯಿ ತರುವಂತಿಲ್ಲ. ಹೀಗೆ ಹಲವು ರೂಪದಲ್ಲಿ ನಂಬುಗೆಗಳು ಚಾಲ್ತಿಯಲ್ಲಿವೆ. ಲಿಂಬೆ ಋಣಾತ್ಮಾಕ ಶಕ್ತಿಗಳನ್ನು ಆಕರ್ಷಿಸುತ್ತದಂತೆ. ಹಾಗಾಗಿ ಅವರು ತಾಂತ್ರಿಕ ಕ್ರಿಯೆ ಪೂರೈಸಿ ಅಂತಹ ಶಕ್ತಿಗಳನ್ನು ಬಿಡುಗಡೆಗೊಳಿಸಿರುತ್ತಾರಲ್ಲ. ಅದಕ್ಕೊಂದು ಗಮ್ಯವನ್ನೂ ಕಲ್ಪಿಸಬೇಕಿರುತ್ತದೆ. ಅದಾಗುವ ಮೊದಲೇ ಹೀಗೆ ಮೊಳೆ, ಲಿಂಬೆ ಎಂದೆಲ್ಲಾ ವಸ್ತುಗಳನ್ನು ಹಿಡಿದುಕೊಂಡಿದ್ದರೆ ಅಲ್ಲೆ ಆಕರ್ಷಿತವಾಗುವ ಅವು ಆಚೆಗೆ ಹೋಗುವುದೇ ಇಲ್ಲ ಎನ್ನುವ ನಂಬಿಕೆ. ಇನ್ನು ಮೆಣಸಿನಕಾಯಿ (ಕೆಂಪು, ಹಸಿರು ಎರಡೂ) ಮೂಲತ: ಖಾರ ಗುಣಗಳುಳ್ಳವು. ಅಂದರೆ ಆದಷ್ಟೂ ದೂರ ಇಡುವ ಪ್ರವೃತ್ತಿ ಅದರದ್ದು. ಹಾಗಾಗಿ ಅಲ್ಲಿನ ಧೋರಣೆಯಿಂದ ಮುಗ್ಧ ಮನಸ್ಕರು ಸುಲಭಕ್ಕೆ ಆಗಬಹುದಾದ ಪ್ರಭಾವದಿಂದ ದೂರ ಸರಿಯುತ್ತಾರೆ ಎನ್ನುತ್ತದೆ ನಾಗಾತರ್ಕ. ಹೇಗಿದೆ..?

ಹೌದೇ..? ಹೇಗೆ..? ನನಗಂತೂ ಗೊತ್ತಾಗಲಿಲ್ಲ.

ಹೀಗೆ ಬೇಡದ ಕಂಡಿಶನ್ನುಗಳ ಸರಮಾಲೆ ನೋಡಿ ನಾನು ತಡೆಯಲಾರದೇ ಕೇಳಿದ್ದೆ,

"..ಒಳ ಚಡ್ಡಿ ಇದ್ದರೆ ಪರವಾಗಿಲ್ವಾ..?" ಎಂದರೆ ಅದಕ್ಕೂ ಅವನು,

"..ಇಲ್ಲಿ ಪರವಾಗಿಲ್ಲ. ಆದರೆ ನಂಗಾಬಾಬಾನ ಎದುರು ಆಶೀರ್ವಾದ ಬೇಕಾದರೆ ಪೂರ್ತಿ ಬಿಚ್ಚಿ ಕೂತು ಕೊಳ್ಳಬೇಕು.." ಎಂದಿದ್ದ. ಆ ಕ್ಷಣಕ್ಕೆ ನಾನು ಅವನ ಆಶೀರ್ವಾದವೂ ಬೇಡ, ಅವನೊಂದಿಗೆ ಬೆತ್ತಲಾಗುವ ಸುಖವೂ ಬೇಡ ಎಂದು ಅಂದುಕೊಂಡಿದ್ದೇನಾದರೂ ಅನಿವಾರ್ಯವಾಗಿ ಪೂರ್ತಿ ಬೆತ್ತಲಾಗಿ ಗುಡಾರದಂತಹ ಬಟ್ಟೆಯೊಳಗೊಮ್ಮೆ ಸೇರಿಕೊಳ್ಳುವ ಸಮಯ ದೂರವಿರಲಿಲ್ಲ. ಆದರೆ ನಾನು ಬೇಡ ಬೇಡ ಎನ್ನುತ್ತಿದ್ದರೂ ಅವನ ಆಶೀರ್ವಾದದಿಂದ ದೇಹಕ್ಕೆ ವಜ್ರಬಲ ಬರುತ್ತದೆ ಅದಕ್ಕಾಗಿಯಾದರೂ ಬೆತ್ತಲಾಗು ಎಂದು ನನ್ನ ಪೂರ್ತಿ ಖಾಲಿ ಮಾಡಿಸಿ ಕೂಡಿಸಿದ್ದ.

ದುರ್ಯೋಧನ ಮಾತ್ರ ಗಳಿಸಿದ್ದ ವರ ಅದು ಎನ್ನುತ್ತಾನೆ.

           ನಾನು ಲ್ಯಾಪ್‌ಟಾಪ್ ಬ್ಯಾಗು ಮತ್ತು ಇತರ ಸರಂಜಾಮು ಚಹದ ಅಂಗಡಿ ಹುಡುಗನಿಗೆ ಕೊಟ್ಟು ಕೇವಲ ಮೊಬೈಲ್ ಮಾತ್ರ ಕೈಗೆತ್ತಿಕೊಂಡು ಹೊರಟು ನಿಂತೆ. ಗಂಗೆಯ ಆ ತುದಿಗೊಮ್ಮೆ ಹೋಗಿ ಬಂದು ಬಿಡುವ ಕೊನೆಯ ಅವಕಾಶ ಆವತ್ತಿಗಿತ್ತು. ನಂತರದಲ್ಲಿ ಆ ಮರಳು ದಿಬ್ಬಗಳಿಗೆ ಯಾರೂ ದೋಣಿ ಹಾಕುವುದೇ ಇಲ್ಲ. ಆವತ್ತು ಬಸಂತ್ ಪಂಚಮಿಯಾದ್ದರಿಂದ ಜನ ಪಿಕ್‌ನಿಕ್ ತರಹ ಅತ್ಲಾಗೆ ಹೋಗುತ್ತಾರೆ ಎಂದು ಮೊದಲೆ ಗೊತ್ತಾಗಿದ್ದುದ್ದರಿಂದ ಸೀದಾ ರೇವಾ ಘಾಟ್‌ನ ಕಡೆಯಿಂದ ಹೊರಡುವ ಬಗ್ಗೆ ಅತ್ತ ತಿರುಗಿದ್ದೆ. ( ಅಘೋರಿಗಳ ಲೋಕದಲ್ಲಿ... ಪುಸ್ತಕದಿಂದ )