ಸದಸ್ಯ:Jhansi.kl/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರ್ಯಾಮ್ ಮಿರ್ಝಾಖನಿ
ಮರ್ಯಾಮ್ ಮಿರ್ಝಾಖನಿ
ಜನನ೧೨ ಮೆ ೧೯೭೭
ಟೆಹ್ರಾನ್
ಮರಣ೧೪ ಜೂಲೈ ೨೦೧೭
ಕ್ಯಾಲಿಫೊರ್ನಿಯ
ಕಾರ್ಯಕ್ಷೇತ್ರಗಣಿತಶಾಸ್ತ್ರ
ವಿದ್ಯಾಭ್ಯಾಸ
  • ಷರೀಫ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಸ್ನಾತಕ ಪದವಿ)
  • ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ (ಸ್ನಾತಕೋತ್ತರ ಪದವಿ)
ಗಮನಾರ್ಹ ಪ್ರಶಸ್ತಿಗಳು
  • ಬ್ಲೂಮೆಂತಲ್ ಪ್ರಶಸ್ತಿ(೨೦೦೯)
  • ರುತ್ ಲಿಟ್ಲೇ ಸಾಟ್ಟರ್ ಪ್ರಶಸ್ತಿ(೨೦೧೩)
  • ಕ್ಲೇ ರಿಸರ್ಚ್ ಪ್ರಶಸ್ತಿ (೨೦೧೪)
  • ಫೀಲ್ಡ್ಸ್ ಮೇಡಲ್ (೨೦೧೪)

ಮರ್ಯಾಮ್ ಮಿರ್ಝಾಖನಿ ಅವರು ಇರಾನಿನ ಪ್ರಸಿದ್ದ ಗಣಿತಶಾಸ್ತ್ರಜ್ಞರಾಗಿದ್ದರು. ಅವರು ಗಣಿತದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿಗಳಿಸಿರುವ 'ಫೀಲ್ಡ್ಸ್' ಪದಕ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ಜೀವನ[ಬದಲಾಯಿಸಿ]

ಮಿರ್ಝಾಖನಿ ಅವರು ಮೇ ೧೨, ೧೯೭೭ ರಲ್ಲಿ ಇರಾನಿನ ಟೆಹ್ರಾನ್ ನಲ್ಲಿ ಜನಿಸಿದರು. ಅವರ ತಂದೆ ಮಿರ್ಝಾಖನಿ. ಅವರ ತಾಯಿ ಜಹ್ರಾ ಹಘೀಘಿ. ಅವರು ೨೦೦೮ ರಲ್ಲಿ ಝೆಕ್ ನ ಥಿಯೆರೇಟಿಕಲ್ ಕಂಪ್ಯೂಟರ್ ವಿಜ್ಞಾನಿ ಹಾಗೂ ಅನ್ವಯಿತ ಗಣಿತಶಾಸ್ತ್ರಜ್ಞರಾದ ಜಾನ್ ವೊಂಡ್ರಕ್ ಅವರನ್ನು ಮದುವೆಯಾದರು. ೨೦೧೧ ರಲ್ಲಿ ಅವರು ಅನಾಹಿತಾ ಎಂಬ ಪುತ್ರಿಗೆ ಜನ್ಮ ನೀಡಿದರು.

ಶಿಕ್ಷಣ[ಬದಲಾಯಿಸಿ]

ಮಿರ್ಝಾಖನಿ ಅವರು ಇರಾನ್ - ಇರಾಕ್ ಯುದ್ಧ ಅಂತ್ಯಗೊಳ್ಳುವ ವೇಳೆಗೆ ಪ್ರಾಥಾಮಿಕ ಶಿಕ್ಷಣವನ್ನು ಮುಗಿಸಿ ಟೆಹ್ರಾನ್‌ನ ಫರ್ಜಾನೆಗನ್ ಶಾಲೆಯಲ್ಲಿ ತಮ್ಮ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿದರು. ಅವರು ೧೯೯೪ ರಲ್ಲಿ ಮ್ಯಾಥಮೆಟಿಕಲ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ೪೨ ಕ್ಕೆ ೪೧ ಅಂಕಗಳನ್ನು ಗಳಿಸಿ ಸ್ವರ್ಣ ಪದಕವನ್ನು ಗೆದ್ದರು. ಅವರು ೧೯೯೫ ರಲ್ಲಿ ಮ್ಯಾಥಮೆಟಿಕಲ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ೪೨ ಕ್ಕೆ ೪೨ ಅಂಕಗಳನ್ನು ಗಳಿಸಿ ಸ್ವರ್ಣ ಪದಕವನ್ನು ಪುನಃ ಗೆದ್ದರು. ೧೯೯೫ ರಲ್ಲಿ ಅವರು ಷರೀಫ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕ ಪದವಿಯನ್ನು ಪ್ರಾರಾಂಭಿಸಿದರು. ೧೯೯೯ರಲ್ಲಿ ಷರೀಫ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕ ಪದವಿಯನ್ನು ಮುಗಿಸಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಯುನೈಟೆಡ್ ಸ್ಟೇಟ್ಸ್ ಗೆ ತೆರಳಿದರು. ೨೦೦೪ ರಲ್ಲಿ ಮರ್ಯಾಮ್ ಅವರಿಗೆ ಡಾಕ್ಟರೇಟ್ ಪದವಿಯನ್ನು ಹಾರ್ವಡ್ ವಿಶ್ವವಿದ್ಯಾಲಯದಿಂದ ನೀಡಲಾಯಿತು.

ವೃತ್ತಿ ಜೀವನ[ಬದಲಾಯಿಸಿ]

ಮಿರ್ಝಾಖನಿ ಅವರಿಗೆ ೨೦೦೪ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲವು ಜೂನಿಯರ್ ಫೆಲೋಶಿಪ್ ನೀಡಿತು ಆದರೆ ಆಕೆಯು ಉತ್ತಮ ನಿರೀಕ್ಷೆಯಲ್ಲಿದ್ದರಿಂದ ಆ ಆಹ್ವಾನವನ್ನು ತಿರಸ್ಕರಿಸಿದರು. ೨೦೦೪ರಲ್ಲಿ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಸಹಾಯಕ ಪ್ರೊಫೆಸರ್ ಆಗಿ ನೇಮಕಗೊಂಡರು. ಆ ವರ್ಷದಲ್ಲಿ ಅವರಿಗೆ ಕ್ಲೇ ರಿಸರ್ಚ್ ಫೆಲೋಶಿಪ್ ನೀಡಲಾಯಿತು. ಅವರು 2009 ರಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡರು. ೨೦೧೪ ರಲ್ಲಿ ಮಿರ್ಝಖಾನಿ ಗಣಿತದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿಗಳಿಸಿರುವ 'ಫೀಲ್ಡ್ಸ್' ಪದಕ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಡೈನಾಮಿಕ್ಸ್ ಮತ್ತು ರೀಮನ್ ಸರ್‌ಫೇಸ್‌‌ಗಳ ರೇಖಾಗಣಿತ ಹಾಗು ಮಾಡ್ಯೂಲೈ ಸ್ಪೇಸ್‍‌ಗಳಿಗೆ ತಮ್ಮ ಅತ್ಯುತ್ತಮ ಕೊಡುಗೆಗಳಿಗಾಗಿ ಅವರಿಗೆ ಅಂತರಾಷ್ಟ್ರೀಯ ಮ್ಯಾಥಮೆಟಿಕಲ್ ಯೂನಿಯನ್ ಗಣಿತದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿಗಳಿಸಿರುವ 'ಫೀಲ್ಡ್ಸ್' ಪದಕವನ್ನು ೨೦೧೪ ರ ಆಗಸ್ಟ್ ೧೩ ರಂದು ದಕ್ಷಿಣ ಕೊರಿಯಾಸಿಯೋಲ್ ಅಲ್ಲಿ ನಡೆದ ಇಂಟರ್ನ್ಯಾಷನಲ್ ಕಾಂಗ್ರೆಸ್ ಆಫ್ ಮ್ಯಾಥಮೆಟಿಸಿಯನ್ಸ್ ನಲ್ಲಿ ನೀಡಲಾಯಿತು.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಮಿರ್ಝಾಖನಿ ಅವರಿಗೆ ತನ್ನ ಅಲ್ಪ ಜೀವಿತಾವಧಿಯಲ್ಲಿ ಅನೇಕ ಪ್ರಶಸಿಗಳು ಹಾಗು ಗೌರವಗಳು ದೊರಕಿವೆ. ಅವರು ಮ್ಯಾಥಮೆಟಿಕಲ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ೧೯೯೪ ರಲ್ಲಿ ಹಾಗು ೧೯೯೫ ರಲ್ಲಿ ಸ್ವರ್ಣ ಪದಕ ಗೆದ್ದರು. ಅವರಿಗೆ ಐ ಪಿ ಮ್ ಫೆಲೋಶಿಪ್ (೧೯೯೫) , ಹಾರ್ವರ್ಡ್ ವಿಶ್ವವಿದ್ಯಾಲಯದ ಜೂನಿಯರ್ ಫೆಲೋಶಿಪ್ (೨೦೦೩) ಹಾಗು ಕ್ಲೇ ರಿಸರ್ಚ್ ಫೆಲೋಶಿಪ್ (೨೦೦೪) ದೊರಕಿತು. ಅವರಿಗೆ ಎ ಮ್ ಎಸ್ ಬ್ಲೂಮೆಂತಲ್ ಪ್ರಶಸ್ತಿ(೨೦೦೯), ರುತ್ ಲಿಟ್ಲೇ ಸಾಟ್ಟರ್ ಪ್ರಶಸ್ತಿ(೨೦೧೩), ಸಿಮನ್ಸ್ ಇನ್ವೇಸ್ಟಿಗೇಟರ್ ಪ್ರಶಸ್ತಿ (೨೦೧೩), ಕ್ಲೇ ರಿಸರ್ಚ್ ಪ್ರಶಸ್ತಿ (೨೦೧೪) ಹಾಗು ಫೀಲ್ಡ್ಸ್ ಮೇಡಲ್ (೨೦೧೪) ಅನ್ನು ಅವರಿಗೆ ನೀಡಲಾಯಿತು. ಅವರು ೨೦೧೫ ರಲ್ಲಿ ಪ್ಯಾರಿಸ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಅಮೆರಿಕನ್ ಫಿಲಾಸಫಿಕಲ್ ಸೊಸೈಟಿ, ೨೦೧೬ ರಲ್ಲಿ ನ್ಯಾಷ್‍ನಲ್ ಅಕಾಡೆಮಿ ಆಫ್ ಸೈನ್ಸಸ್ ಹಾಗು ೨೦೧೭ ರಲ್ಲಿ ಅಮೆರಿಕನ್ ಆಕಾಡೆಮಿ ಆಫ್ ಆರ್ಟ್ಸ್ ಮತ್ತು ಸೈನ್ಸಸ್ ಗೆ ಆಯ್ಕೆಯಾದರು. ಅವರು ೨೦೧೦ ರಲ್ಲಿ ಇಂಟರ್‌ನ್ಯಾಷ್‌ನಲ್ ಕಾಂಗ್ರೆಸ್ ಆಫ್ ಮ್ಯಾಥಮೆಟಿಸಿಯನ್ಸ್ ನ ಟೊಪೋಲಜಿ ಮತ್ತು ಡೈನಾಮಿಕ್ ಸಿಸ್ಟಮ್ಸ್ ಹಾಗು ಆರ್ಡಿನರಿ ಡಿಫ್‌ರೆಂಟ್ಸಿಯಲ್ ಇಕ್ವೇಸನ್ಸ್ ವಿಭಾಗದ ಆಹ್ವಾನಿತ ಭಾಷಣಕಾರರಾಗಿದ್ದರು ಹಾಗು ೨೦೧೪ ರಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆದ ಇಂಟರ್‌ನ್ಯಾಷ್‌ನಲ್ ಕಾಂಗ್ರೆಸ್ ಆಫ್ ಮ್ಯಾಥಮೆಟಿಸಿಯನ್ಸ್ ನಲ್ಲಿ ಭಾಷಣಕಾರರಾಗಿದ್ದರು.

ನಿಧನ[ಬದಲಾಯಿಸಿ]

೨೦೧೩ ರಲ್ಲಿ ಮಿರ್ಝಾಖನಿ ಅವರು ಕ್ಯಾನ್ಸರ್‌‌ನಿಂದ ಬಳಲುತ್ತಿದ್ದರೆಂದು ಗುರುತಿಸಲಾಯಿತು. ೨೦೧೬ ರಲ್ಲಿ ಕ್ಯಾನ್ಸರ್ ಮೂಲೆಗಳಿಗೆ ಮತ್ತು ಪಿತ್ತಜನಕಾಂಗಕ್ಕೆ ಹರಡಿತು. ಅವರು ಜುಲೈ ೧೪,೨೦೧೭ ರಂದು ತಮ್ಮ ೪೦ ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ಆಸ್ಪತ್ರೆಯಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]