ಸದಸ್ಯ:Disha merina dsouza/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                            ಚಿನ್ನ           

ಚಿನ್ನ(Gold)ವು ಒಂದು ಮೂಲಧಾತು. ರಸಾಯನಶಾಸ್ತ್ರದಲ್ಲಿ ಇದರ ಚಿಹ್ನೆ Au ( ಲ್ಯಾಟಿನ್ ಭಾಷೆಯ ಹೊಳೆಯುವ ಪ್ರಭಾತ ಎಂಬರ್ಥ ಕೊಡುವ ಆರಮ್ ಎಂಬ ಪದದಿಂದ ಆರಿಸಿಕೊಳ್ಳಲಾಗಿದೆ). ಚಿನ್ನದ ಪರಮಾಣು ಸಂಖ್ಯೆ ೭೯. ಬಹು ಜನಪ್ರಿಯ ರಾಜಲೋಹವಾಗಿರುವ ಚಿನ್ನವನ್ನು ಸಹಸ್ರಮಾನಗಳಿಂದಲೂ ಮಾನವನು ಮೋಹಿಸಿರುವನು. ಚಿನ್ನವನ್ನು ಹಿಂದಿನ ಕಾಲದಿಂದಲೂ ಹಣವಾಗಿ, ಆಭರಣಗಳಲ್ಲಿ ಮತ್ತು ಬಹುಮೂಲ್ಯ ವಸ್ತುವಾಗಿ ಮಾನವನು ಬಳಸುತ್ತಿರುವನು. ಚಿನ್ನವು ಭೂಮಿಯಲ್ಲಿ ತುಣುಕುಗಳಾಗಿ ಅಥವಾ ಕಾಳುಗಳಾಗಿ ಶಿಲೆಗಳಲ್ಲಿ ಹುದುಗಿರುತ್ತದೆ. ಚಿನ್ನವು ನಾಣ್ಯಗಳಲ್ಲಿ ಬಳಸಲ್ಪಡುವ ಒಂದು ಲೋಹ. ಚಿನ್ನವು ಮೃದು, ಸಾಂದ್ರ ಮತ್ತು ಹೊಳೆಯುವ ಲೋಹವಾಗಿದೆ. ಇದನ್ನು ತಗಡುಗಳನ್ನಾಗಿ ತಂತಿಯನ್ನಾಗಿ ರೂಪಿಸುವುದು ಬಲು ಸುಲಭ. ಎಲ್ಲಾ ಲೋಹಗಳ ಪೈಕಿ ಚಿನ್ನವು ಅತ್ಯಂತ ಮೃದು. ಶುದ್ಧ ಚಿನ್ನವು ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಅಂತಾರಾಷ್ಟ್ರೀಯ ಹಣಹಾಸು ನಿಧಿಯು ಚಿನ್ನವನ್ನು ಆರ್ಥಿಕ ಪ್ರಮಾಣವನ್ನಾಗಿ ಪರಿಗಣಿಸುತ್ತದೆ. ಚಿನ್ನವು ರಾಸಾಯನಿಕ ಕ್ರಿಯೆಗಳಿಗೆ ತೀವ್ರ ಪ್ರತಿರೋಧ ಒಡ್ಡುವುದರಿಂದಾಗಿ ಆಧುನಿಕ ಕೈಗಾರಿಕೆಗಳಲ್ಲಿ ದಂತಶಾಸ್ತ್ರದಲ್ಲಿ ಮತ್ತು ವಿದ್ಯುನ್ಮಾನ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಚಿನ್ನವು ಹೆಚ್ಚಿನ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯೆ ನಡೆಸುವುದಿಲ್ಲ. ಆದರೆ ಕ್ಲೋರಿನ್, ಫ್ಲೂರೀನ್, ರಾಜೊಧಕ(ಅಕ್ವಾ ರೀಜಿಯ) ಮತ್ತು ಸಯನೈಡ್ ಗಳು ಚಿನ್ನದ ಮೇಲೆ ರಾಸಾಯನಿಕ ಪರಿಣಾಮವುಂಟುಮಾಡುತ್ತವೆ. ಚಿನ್ನವು ಪಾದರಸದಲ್ಲಿ ಕರಗಿ ಕೆಲ ಮಿಶ್ರಧಾತುಗಳನ್ನು ಸೃಷ್ಟಿಸುವುದಾದರೂ ಪಾದರಸದೊಂದಿಗೆ ರಾಸಾಯನಿಕ ಕ್ರಿಯೆ ಉಂಟಾಗುವುದಿಲ್ಲ. ಒಂದಕ್ಕೆ ಮೂರರ ಪ್ರಮಾಣದಲ್ಲಿರುವ ಸಾಂದ್ರ ನೈಟ್ರಿಕ್ ಆಮ್ಲ ಮತ್ತು ಹೈಡ್ರೋಕ್ಲೋರಿಕ್ ಆಮ್ಲಗಳ ಮಿಶ್ರಣದಲ್ಲಿ ಮಾತ್ರ ಚಿನ್ನವು ಕರಗುವುದು. ಈ ದ್ರಾವಣವನ್ನು ಅಕ್ವಾ ರೀಜಿಯ ಎಂದು ಕರೆಯುವರು. ನೈಟ್ರಿಕ್ ಆಮ್ಲದಲ್ಲಿ ಚಿನ್ನವು ಕರಗಲಾರದು. ಈ ಗುಣವನ್ನು ವಸ್ತುಗಳಲ್ಲಿ ಚಿನ್ನದ ಇರುವಿಕೆಯನ್ನು ಕಂಡುಕೊಳ್ಳುವಲ್ಲಿ ಬಳಸಲಾಗುತ್ತದೆ. ಅಲ್ಲದೆ ಸಾಮಾನ್ಯವಾಗಿ ಚಿನ್ನವು ಪ್ರಕೃತಿಯಲ್ಲಿ ಬೆಳ್ಳಿಯೊಡನೆ ಬೆರೆತಿರುವುದರಿಂದಾಗಿ ಚಿನ್ನವನ್ನು ಶುದ್ಧೀಕರಿಸಿ ತೆಗೆಯುವಾಗ ನೈಟ್ರಿಕ್ ಆಮ್ಲದ ದ್ರಾವಣದ ಬಳಕೆಯಾಗುವುದು. ಬೆಳ್ಳಿಯು ನೈಟ್ರಿಕ್ ಆಮ್ಲದಲ್ಲಿ ಕರಗುತ್ತದೆ.

ಚಿನ್ನವು ಅತಿ ಮೃದುಲೋಹ. ಕೇವಲ ಒಂದು ಗ್ರಾಮಿನಷ್ಟು ಚಿನ್ನವನ್ನು ಒಂದು ಚದರ ಮೀಟರ್ ಅಗಲ ಹಾಳೆಯಾಗಿ ಬಡಿಯಬಹುದು. ಅರೆಪಾರದರ್ಶಕವಾಗುವಷ್ಟು ತೆಳು ಹಾಳೆಯಾಗಿ ಚಿನ್ನವನ್ನು ರೂಪಿಸಬಹುದಾಗಿದೆ. ಚಿನ್ನವು ಹಲವು ಲೋಹಗಳೊಂದಿಗೆ ಸುಲಭವಾಗಿ ಬೆರೆತು ಮಿಶ್ರಲೋಹಗಳನ್ನು ಸೃಷ್ಟಿಸುವುದು. ವಿಶಿಷ್ಟ ವರ್ಣದ ವಸ್ತುಗಳನ್ನು ತಯಾರಿಸುವಲ್ಲಿ ಇಂತಹ ಮಿಶ್ರಲೋಹಗಳ ಬಳಕೆಯಾಗುತ್ತದೆ. ಭೂಮಿಯಲ್ಲಿರುವ ಚಿನ್ನವು ಸಾಮಾನ್ಯವಾಗಿ ೮ ರಿಂದ ೧೦% ಬೆಳ್ಳಿಯೊಂದಿಗೆ ಮಿಶ್ರವಾಗಿರುತ್ತದೆ.

ಇತರ ಉಪಯೋಗಗಳು[ಬದಲಾಯಿಸಿ] · ಮಧ್ಯಕಾಲದಲ್ಲಿ ಚಿನ್ನವು ಮಾನವನ ಆರೋಗ್ಯವರ್ಧಕವೆಂದು ಪರಿಗಣಿಸಲಾಗಿತ್ತು. ಇಂದು ಸಹ ಕೆಲ ವೈದ್ಯಕೀಯ ಪದ್ಧತಿಗಳು ಚಿನ್ನವನ್ನು ಔಷಧಿಯ ರೂಪದಲ್ಲಿ ಬಳಸುತ್ತವೆ. ಚಿನ್ನದ ಕೆಲವು ಲವಣಗಳು ಸಂಧಿವಾತದಂತಹ ಖಾಯಿಲೆಗಳ ಉಪಶಮನಕ್ಕಾಗಿ ಬಳಸಲ್ಪಡುವುವು. ಆದರೆ ಶುದ್ಧ ಚಿನ್ನವು ಶರೀರದೊಳಗಿನ ಎಲ್ಲ ರಾಸಾಯನಿಕ ಕ್ರಿಯೆಗಳಿಗೂ ಜಡವಾಗಿರುವುದರಿಂದ ಶುದ್ಧ ಚಿನ್ನದ ನೇರ ಸೇವನೆ ಯಾವುದೇ ಪ್ರಯೋಜನ ನೀಡಲಾರದು. · ಚಿನ್ನದ ಎಲೆ, ರೇಕು ಅಥವಾ ಧೂಳನ್ನು ಕೆಲ ಸಿಹಿಪದಾರ್ಥಗಳು ಮತ್ತು ಪಾನೀಯಗಳಲ್ಲಿ ಅಲಂಕಾರಿಕವಾಗಿ ಉಪಯೋಗಿಸಲಾಗುತ್ತದೆ. ಇದು ಮಧ್ಯಕಾಲದಿಂದ ನಡೆದು ಬಂದ ಪರಂಪರೆ. ಅಂದು ಆತಿಥೇಯನು ತನ್ನ ಸಿರಿಯ ಪ್ರದರ್ಶನಕ್ಕಾಗಿ ಅಥವಾ ಬಲು ಬೆಲೆಬಾಳುವ ವಸ್ತು ಆರೋಗ್ಯಕ್ಕೆ ಸಹ ಒಳ್ಳೆಯದನ್ನು ಮಾಡುವುದೆಂಬ ನಂಬಿಕೆಯಿಂದ ಆಹಾರ ಮತ್ತು ಪಾನೀಯಗಳಲ್ಲಿ ಚಿನ್ನವನ್ನು ಸೇರಿಸುತ್ತಿದ್ದನು. · ಆಭರಣಗಳ ತಯಾರಿಕೆಯಲ್ಲಿ ಚಿನ್ನವನ್ನು ಬೆಸುಗೆಯ ಲೋಹವನ್ನಾಗಿ ಉಪಯೋಗಿಸುವರು. ಆಭರಣವು ಅತ್ಯುತ್ತಮ ದರ್ಜೆಯದಾಗಿರಬೇಕಾದರೆ ಬೆಸುಗೆಗೆ ಬಳಸುವ ಚಿನ್ನವು ಆಭರಣದ ಚಿನ್ನದಷ್ಟೇ ಶುದ್ಧವಾಗಿರಬೇಕಾಗಿರುತ್ತದೆ.