ಸದಸ್ಯ:Chaithanya kudinalli/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದ್ಯುಚ್ಛಕ್ತಿಯನ್ನು ಅಳೆಯುವುದು ಹೇಗೆ?[ಬದಲಾಯಿಸಿ]

ಲೋಕದಲ್ಲಿರುವ ಪ್ರತಿ ಪದಾರ್ಥವನ್ನೂ ಅಳೆಯಬಹುದು. ಬಟ್ಟೆಯನ್ನು ಕೊಂಡುಕೊಳ್ಳಬೇಕಾದರೆ ಒಂದು ಗಜಕ್ಕೆ ಇಷ್ಟೆಂದೂ, ಭೂಮಿಯನ್ನು ಕೊಳ್ಳಬೇಕಾದರೆ ಒಂದು ಸಲೆ ಅಡಿಗೆ, ಅಥವಾ ಒಂದು ಸಲೆ ಗಜಕ್ಕೆ, ಅಥವಾ ಒಂದು ಎಕರೆಗೆ ಇಷ್ಟೆಂದೂ, ಮರದ ದಿಮ್ಮಿಗಳನ್ನು ಕೊಳ್ಳಬೇಕಾದರೆ ಒಂದು ಘನ ಅಡಿಗೆ ಇಷ್ಟೆಂದೂ, ಹಾಲನ್ನು ಕೊಳ್ಳಬೇಕಾದರೆ ಒಂದು ಅಳೆಯುವ ಸೇರಿಗೆ ಇಷ್ಟೆಂದೂ, ಸಕ್ಕರೆಯನ್ನು ಕೊಳ್ಳಬೇಕಾದರೆ ಒಂದು ತೂಕದ ಸೇರಿಗೆ, ಅಥವಾ ಒಂದು ಮಣಕ್ಕೆ ಇಷ್ಟೆಂದೂ ಹೇಳುವೆವು. ಹೀಗೆ ಪ್ರತಿ ಪದಾರ್ಥಕ್ಕೂ ಬೇರೆ ಬೇರೆ ಮಾನಗಳಿರುವುವು. ವಿದ್ಯುಚ್ಛಕ್ತಿಗೂ ಹೀಗೆಯೇ ಒಂದು ಮಾನವುಂಟು. ಆದರೆ ಅದನ್ನು ತಿಳಿಯುವುದು ಮೇಲೆ ಹೇಳಿದವುಗಳಷ್ಟು ಸುಲಭವಲ್ಲ.

ಫೋರ್ಸ್ ಮತ್ತು ಎನರ್ಜಿ[ಬದಲಾಯಿಸಿ]

ಭೌತಿಕಶಾಸ್ತ್ರಗಳಲ್ಲಿ ಉಪಯೋಗಿಸುವ ಪ್ರತಿಯೊಂದು ಪದಕ್ಕೂ, ಗೊತ್ತಾದ ಒಂದೇ ಅರ್ಥವಿರಬೇಕು. ನಾವು ಸಾಮಾನ್ಯವಾಗಿ ಮಾತನಾಡುವಾಗ ಕೆಲವು ವೇಳೆ ಒಂದೇ ಪದವನ್ನು ಅನೇಕ ಅರ್ಥಗಳಲ್ಲಿ ಉಪಯೋಗಿಸುವುದುಂಟು. ಹೀಗೆ ಶಾಸ್ತ್ರದಲ್ಲಿ ಹೇಳಿದರೆ ಬಹಳ ತೊಂದರೆಯುಂಟಾಗುವುದು. ಇಂಗ್ಲೀಷಿನಲ್ಲಿ‘ಫೋರ್ಸ್’, ‘ಎನರ್ಜಿ’ ಎಂಬ ಎರಡು ಪದಗಳನ್ನು ಬೇರೆ ಬೇರೆ ಅರ್ಥದಲ್ಲಿ ಉಪಯೋಗಿಸುವರು; ಇವೆರಡಕ್ಕೂ ನಾವು ಸಾಮಾನ್ಯವಾಗಿ ‘ಶಕ್ತಿ’ ಎಂಬ ಪದವನ್ನು ಉಪಯೋಗಿಸುವೆವು; ಇದು ತಪ್ಪು. ‘ಫೋರ್ಸ್’ ಎಂಬುದಕ್ಕೆ ‘ಬಲ’ ಎಂಬ ಪದವನ್ನೂ, ‘ಎನರ್ಜಿ’ ಎಂಬುದಕ್ಕೆ ‘ಶಕ್ತಿ’ ಎಂಬ ಪದವನ್ನೂ ನಾವು ಉಪಯೋಗಿಸುವೆವು. ಇವೆರಡಕ್ಕೂಇರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ. ತೆಂಗಿನ ಮರದಿಂದ ಮಟ್ಟೆಗಳು ಅಥವಾ ಕಾಯಿಗಳು ಕೆಳಕ್ಕೆ ಬೀಳುವುದುಂಟು. ಇದಕ್ಕೆ ಭೂಮಿಯ ಆಕರ್ಷಣ ಬಲವೇ ಕಾರಣ. ತೆಂಗಿನಕಾಯಿಯು ಬಹಳ ಎತ್ತರದಿಂದ ಬಿದ್ದರೂ ಸ್ವಲ್ಪ ಎತ್ತರದಿಂದ ಬಿದ್ದರೂ ಆಕರ್ಷಣ ಬಲವು ಒಂದೇ ಆಗಿರುವುದು; ಆದರೆ ಬಹಳ ಎತ್ತರದಿಂದ ಬಿದ್ದಲ್ಲಿ ಅದಕ್ಕೆ ಶಕ್ತಿಯು ಹೆಚ್ಚಾಗಿರುವುದು. ಒಂದು ತೆಂಗಿನಕಾಯಿಯನ್ನು ಒಬ್ಬನ ತಲೆಯ ಮೇಲೆ ಒಂದು ಅಡಿಯ ಎತ್ತರದಿಂದ ಬಿಟ್ಟರೆ ಅವನಿಗೆ ವಿಶೇಷ ಬಾಧೆಯಾಗಲಾರದು, ತೆಂಗಿನ ಮರದ ಮೇಲಿನಿಂದ ತಲೆಯ ಮೇಲೆ ಬಿದ್ದಲ್ಲಿ ತಲೆಯೊಡೆದು ಪ್ರಾಣ ಹೋಗಬಹುದು.ಇವೆರಡು ಸಂದರ್ಭಗಳಲ್ಲಿಯೂ ಬಲವು ಒಂದೇ ಆಗಿದ್ದರೂ ಶಕ್ತಿಯು ವ್ಯತ್ಯಸ್ತವಾಗಿರುವುದು. ನೆಲದ ಮೇಲಿರುವ ಒಂದು ಪೌಂಡು ತೂಕವನ್ನು ನೆಲದಿಂದ ಒಂದಡಿಯ ಎತ್ತರಕ್ಕೆ ಎತ್ತಬೇಕಾದರೆ, ಒಂದು ಕ್ಲುಪ್ತವಾದ ಅಳತೆಯ ಶಕ್ತಿಯನ್ನು ಉಪಯೋಗಿಸ ಬೇಕಾಗುವುದು; ಈ ಶಕ್ತಿಯ ಮಾನವನ್ನು ಒಂದು ಎನ್ನೋಣ. ಅದೇ ತೂಕವನ್ನು ಹತ್ತು ಅಡಿಯ ಎತ್ತರಕ್ಕೆ ಎತ್ತಬೇಕಾದರೆ ಮೊದಲಿನ ಹತ್ತರಷ್ಟು ಶಕ್ತಿಯನ್ನು-ಎಂದರೆ, ಹತ್ತು ಮಾನದ ಶಕ್ತಿಯನ್ನುಖರ್ಚು ಮಾಡಬೇಕು. ಹತ್ತು ಪೌಂಡು ತೂಕವನ್ನು ಹತ್ತು ಅಡಿಯ ಎತ್ತರಕ್ಕೆ ಎತ್ತಬೇಕಾದರೆ ಮೊದಲಿನ ನೂರರಷ್ಟು ಶಕ್ತಿಯನ್ನು ವೆಚ್ಚ ಮಾಡಬೇಕಾಗುವುದು. ಆದುದರಿಂದ ಯಾವ ಶಕ್ತಿಯನ್ನು ಅಳೆಯಬೇಕಾದರೂ ಒಂದು ಪೌಂಡ್‍ತೂಕವನ್ನು ಒಂದಡಿಯ ಎತ್ತರಕ್ಕೆ ಎತ್ತಲು ಬೇಕಾಗುವ ಶಕ್ತಿಯನ್ನು ಮೌನವಾಗಿಟ್ಟುಕೊಂಡು, ಅದನ್ನು ಒಂದು “ಅಡಿ ಪೌಂಡ್” ಎಂದು ಕರೆಯುವೆವು. ಒಬ್ಬ ಕೂಲಿಯಾಳು 70 ಪೌಂಡ್‍ಒಟ್ಟು ತೂಕವುಳ್ಳ ಇಟಿಕೆಗಳನ್ನು ಹೊತ್ತುಕೊಂಡು 12 ಅಡಿಯ ಎತ್ತರದಲ್ಲಿರುವ ಮಾಳಿಗೆಗೆ ಹತ್ತಿಹೋದರೆ ಅವನು 840 ಅಡಿ ಪೌಂಡುಗಳ ಕೆಲಸ ಮಾಡಿದಂತಾಯಿತು. ಈ ಕೆಲಸವನ್ನು 1 ಮಿನಿಟು, ಅಥವಾ 60 ಸೆಕೆಂಡುಗಳಲ್ಲಿ ಮಾಡಿದರೆ, ಅವನ ‘ಸಾಮರ್ಥ್ಯ’ವು 840/60 ಅಥವಾ ‘14 ಅಡಿ ಪೌಂಡು ಸೆಕಂಡು’ ಗಳಾಯಿತು. ಹೀಗೆ ಲೆಕ್ಕ ಮಾಡಿ, ಒಂದು ‘ಕುದುರೆಯ ಸಾಮರ್ಥ್ಯ’ ಎಂದರೆ, ಒಂದು ಸೆಕಂಡಿಗೆ 550 ಅಡಿಪೌಂಡುಗಳ ಕೆಲಸವನ್ನು ಮಾಡುವ‘ಶಕ್ತಿ’ಯೆಂದು ಶಾಸ್ತ್ರಜ್ಞರು ಗೊತ್ತುಮಾಡಿರುತ್ತಾರೆ.

ವಿದ್ಯುತ್ತಿನ ಶಕ್ತಿಯನ್ನು ಅಳೆಯುವುದು[ಬದಲಾಯಿಸಿ]

ವಿದ್ಯುತ್ತಿನ ಶಕ್ತಿಯನ್ನು ಅಳೆಯುವುದು ಇಷ್ಟು ಸುಲಭವಲ್ಲ. ಇದನ್ನು ತಿಳಿಯುವುದಕ್ಕಾಗಿ ಒಂದು ಉದಾಹರಣೆಯನ್ನು ಕೊಡುವೆವು. ಒಂದು ಎತ್ತರವಾದ ಪೀಪಾಯಿಯ ಅಡಿಯಲ್ಲಿ ಒಂದು ಕಂಡಿಯನ್ನು ಮಾಡಿ ಅದಕ್ಕೆ ಒಂದು ಕೊಳವಿಯನ್ನು ಸಂದುಬಿಡದಂತೆ ತೊಡಿಸೋಣ. ಪೀಪಾಯಿಗೆ ಸ್ವಲ್ಪ ನೀರನ್ನು ಹಾಕಿದರೆ ಅದು ಕೊಳವಿಯಲ್ಲಿ ನಿಧಾನವಾಗಿ ಹರಿದು ಹರಕ್ಕೆ ಬರುವುದು. ಪೀಪಾಯಿಯಲ್ಲಿ ನೀರಿನ ಎತ್ತರವು ಹೆಚ್ಚುತ ಹೆಚ್ಚುತ ಕೊಳವಿಯಲ್ಲಿ ನೀರು ಹೆಚ್ಚು ಹೆಚ್ಚು ಬಿರುಸಾಗಿ ಬರುವುದು. ನೀರಿನ ಮೇಲ್ಭಾಗವನ್ನೆಲ್ಲಾ ಒಂದು ಹಲಗೆಯಿಂದ ಮುಚ್ಚಿ ಪೀಪಾಯಿಯ ಒಳಮೈಗೂ ಹಲಗೆಯ ಏಣಿಗೂ ಸುತ್ತಲೂ ಕೊಂಚವು ಸಂದುಬಿಡದೆ ಮಾಡಿ, ಹಲಗೆಯ ಮೇಲೆ ಭಾರವನ್ನು ಹೇರಿದರೆ ಕೊಳವಿಯಲ್ಲಿ ನೀರು ಮತ್ತಷ್ಟು ಬಿರುಸಾಗಿ ಬರುವುದು.ಭಾರ, ಅಥವಾ ಒತ್ತಡವು ಹೆಚ್ಚಿದಂತೆಲ್ಲಾ ನೀರಿನ ಬಿರುಸೂ ಹೆಚ್ಚುವುದು. ಕೊಳವಿಯು ಅಗಲವಾಗಿದ್ದಲ್ಲಿ ಅದರ ಕೊನೆಯಿಂದ ಒಂದು ಸೆಕಂಡಿಗೆ ಹೊರಕ್ಕೆ ಬರುವ ನೀರು, ಕಿರುದಾಗಿದ್ದಲ್ಲಿ ಅದರಿಂದ ಬರುವ ನೀರಿಗಿಂತಲೂ ಹೆಚ್ಚಾಗಿರುವುದು. ಈ ಕೊಳವಿಯಿಂದ ಹೊರಕ್ಕೆ ಬರುವ ನೀರಿನಿಂದ ಒಂದು ಚಕ್ರವನ್ನು ತಿರುಗಿಸಬೇಕಾದರೆ, ಒಂದು ಸೆಕಂಡಿಗೆ ಕೊಳವಿಯಿಂದ ಹೊರಕ್ಕೆ ಬರುವ ನೀರಿನ ಮೊತ್ತದೊಡನೆ ಅದರ ಬಿರುಸನ್ನು ಗುಣಿಸಬೇಕು. ಹೀಗೆಯೇ, ವಿದ್ಯುಚ್ಛಕ್ತಿಯನ್ನಳೆಯಿವಾಗ ವಿದ್ಯುತ್ತಿನ ಬಿರುಸಿನೊಡನೆ ಅದರ ಮೊತ್ತವನ್ನು ಗುಣಿಸಿದರೆ ಅದಕ್ಕಿರುವ ಶಕ್ತಿ-ಅಥವಾ, ಅದು ಮಾಡುವ ಕೆಲಸವು ತಿಳಿಯುವುದು. ವಿದ್ಯುತ್ತಿನ ಬಿರುಸು, ಅಥವಾ ಒತ್ತಡದ ಮಾನಕ್ಕೆ 1 ‘ಓಲ್ಟ್’ಎಂದೂ, ಒಂದು ಸೆಕಂಡಿಗೆ ಬರುವ ವಿದ್ಯುತ್ತಿನ ಮೊತ್ತದ ಮಾನಕ್ಕೆ 1‘ಆಂಪೇರ್’ ಎಂದೂ ಹೆಸರು. ಓಲ್ಟುಗಳನ್ನು ಆಂಪೇರುಗಳಿಂದ ಗುಣಿಸಿ ಬರುವ‘ಸಾಮರ್ಥ್ಯ’ದ ಮಾನಕ್ಕೆ‘ವಾಟ್’ಎಂದು ಹೆಸರು. ಇಂತಹ‘ವಾಟ್’ಗಳು 746 ಆದರೆ ಒಂದು ‘ಕುದುರೆ’ಯ ಸಾಮರ್ಥ್ಯ ವಾಗುವುದು. ಸಾವಿರ ವ್ಯಾಟುಗಳಿಗೆ ಒಂದು ‘ಕಿಲೊವಾಟ್’ ಎಂದು ಹೆಸರು.ಈ ‘ಸಾಮರ್ಥ್ಯ’ವನ್ನು 1 ಗಂಟೆಯ ಹೊತ್ತು ಉಪಯೋಗಿಸಿದರೆ ‘ಒಂದು ಕಿಲೊವಾಟ್‍ಗಂಟೆ’ಯ ‘ಶಕ್ತಿ’ಯು ಬರುವುದು.ಈ ‘ಶಕ್ತಿ’ಯ ಮೊತ್ತಕ್ಕೆ ‘ಬೋರ್ಡ್‍ಆಫ್‍ಟ್ರೇಡ್‍ಯೂನಿಟ್’ಅಥವಾ ‘ಬಿ.ಟಿ.ಯೂ’ಎಂದು ಹೆಸರು. ಇದೇ ವಿದ್ಯುತ್ತಿನ ಶಕ್ತಿಮಾನವು ವಿದ್ಯುದ್ದೀಪಗಳನ್ನು ಉರಿಸುವುದರಲ್ಲಿ ಎಷ್ಟು ಶಕ್ತಿಯನ್ನು ಉಪಯೋಗಿಸುವೆವು ಎಂಬುದನ್ನು ಕಂಡುಹಿಡಿಯುವ ಬಗೆ ಹೇಗೆ? “ಟಂಗ್ ಸ್ಟನ್” ಎಂಬ ಲೋಹದ ಎಳೆಗಳುಳ್ಳ ದೀಪಗಳು ಬರುವುದಕ್ಕೆ ಮುಂಚೆ ಎಲ್ಲರೂ ಇಂಗಾಲದ ಎಳೆಗಳುಳ್ಳ ದೀಪಗಳನ್ನು ಉರಿಸುತ್ತಿದ್ದರು. ಈಗ ಅವುಗಳ ಉಪಯೋಗವು ಬಹಳ ಅಪರೂಪವಾಗಿರುವುದು.16 ಮೇಣದ ಬತ್ತಿಯ ದೀಪಗಳ ಬೆಳಕನ್ನು ಕೊಡುವ ಇಂಗಾಲದೆಳೆಯ ವಿದ್ಯುದ್ದೀಪವು ಅದು ಉರಿಯುವಾಗ ಪ್ರತಿಕ್ಷಣದಲ್ಲಿಯೂ ಅರವತ್ತು ವ್ಯಾಟುಗಳಷ್ಟು ಅಥವಾ 60/1000 ಕಿಲೊವ್ಯಾಟುಗಳಷ್ಟು ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವುದು. ಆದುದರಿಂದ ಈ ಸಾಮರ್ಥ್ಯವನ್ನು 16 2/3 ಗಂಟೆಗಳು ಉಪಯೋಗಿಸಿದರೆ 60/1000 * 16 2/3 ಅಥವಾ, ಒಂದುಕಿಲೊವಾಟ್‍ಗಂಟೆ-ಎಂದರೆ, ಒಂದು ಬಿ.ಟಿ.ಯೂ.ಮಾನದ ಶಕ್ತಿಯನ್ನು ಉಪಯೋಗಿಸಿಕೊಂಡಂತಾಯಿತು. ಈ ಮಾನದ ಶಕ್ತಿಗೆ ಬೆಲೆ 2||0 ಆಣೆಗಳು.ಇದೇ ಬೆಲೆಗೆ ಅದೇ ಬೆಳಕನ್ನು ಕೊಡುವ ಲೋಹದ ಎಳೆಗಳುಳ್ಳ ದೀಪಗಳು ಮೂರನ್ನು ಉರಿಸಬಹುದು. ಉಪಯೋಗಿಸಿಕೊಂಡ ವಿದ್ಯುಚ್ಛಕ್ತಿಯನ್ನು ಅಳೆಯುವುದಕ್ಕೆ ಚಿತ್ರದಲ್ಲಿ ತೋರಿಸಿರುವಂತೆ ಮುಖವುಳ್ಳ “ಮೀಟರ್” ಎಂಬ ಗಡಿಯಾರದಂತಹ ಮಾಪಿನಿಯನ್ನು ಉಪಯೋಗಿಸುವವರು. ನಾವು ಉಪಯೋಗಿಸಿಕೊಳ್ಳುವ ಶಕ್ತಿಯು ಈ ಮೀಟರಿನ ಮೂಲಕ ಹೊರಕ್ಕೆ ಬರಬೇಕಾದುದರಿಂದ, ಈ ಶಕ್ತಿಯು, ಮೀಟರಿನಲ್ಲಿತಕ್ಕಂತೆ ಅಳವಡಿಸಿರುವ ಚಕ್ರಗಳನ್ನು ತಿರುಗಿಸುವಂತೆ ಮಾಡಿರುವರು.ಗಡಿಯಾರದ ಮುಖದಲ್ಲಿರುವಂತಹ ಸಂಖ್ಯಾಚಕ್ರಗಳ ಸುತ್ತಲೂ ಮುಳ್ಳುಗಳು ಸುತ್ತುವುದರಿಂದ ಎಷ್ಟು ಬಿ.ಟಿ.ಯೂ.ಗಳನ್ನು ಉಪಯೋಗಿಸಿರುವೆವೆಂದು ಸುಲಭವಾಗಿಗೊತ್ತು ಮಾಡಬಹುದು. ಚಿತ್ರವನ್ನು ನೋಡಿದರೆ, ಬಲಗಡೆಯ ಮೊದಲನೆಯ ಚಕ್ರವು ಏಕಗಳನ್ನೂ, ಎರಡನೆಯದು ದಶಕಗಳನ್ನೂ, ಮೂರನೆಯದು ಶತಕಗಳನ್ನೂ, ನಾಲ್ಕನೆಯದು ಸಹಸ್ರಕಗಳನ್ನೂ ತೋರಿಸುವುವು.ಇವು “ಕಿಲೊವಾಟ್ ಗಂಟೆಗಳು”ಅಥವಾ, ಬಿ.ಟಿ.ಯೂನಿಟ್ಟುಗಳು. ಸಹಸ್ರಕದಲ್ಲಿ ಮುಳ್ಳು 2ರ ಮುಂದೆಯೂ, ಶತಕದಲ್ಲಿ 8ರ ಮುಂದೆಯೂ, ದಶಕದಲ್ಲಿ 7ರ ಮುಂದೆಯೂ, ಏಕದಲ್ಲಿ 1ರ ಮುಂದೆಯೂ ಇರುವುದರಿಂದ, ಈ ಮೀಟರು 2,871 ಯೂನಿಟ್ಟುಗಳನ್ನು ತೋರಿಸುವುದು. ಇಲ್ಲಿಂದ ಮುಂದೆ ಒಂದು ತಿಂಗಳಲ್ಲಿ ಎಷ್ಟು ಶಕ್ತಿಯನ್ನು ಉಪಯೋಗಿಸಿದೆವೆಂದು ತಿಳಿಯಬೇಕಾದರೆ ಆ ಕಾಲವಾದನಂತರ ಮೀಟರನ್ನು ಪುನಃ ಓದಿ ಬರುವ ಸಂಖ್ಯೆಯಿಂದ 2,871 ನ್ನು ಕಳೆಯಬೇಕು.

ವಿದ್ಯುತ್ತನ್ನು ಉಳಿಸುವ ಬಗೆ[ಬದಲಾಯಿಸಿ]

ವಿದ್ಯುದ್ದೀಪಗಳನ್ನು ಹಾಕಿಸುವುದರಲ್ಲಿ, ದೀಪಗಳ ಸಂಖ್ಯೆ ಹೆಚ್ಚಾದ ಹಾಗೆಲ್ಲಾ, ಎಲ್ಲಾ ದೀಪಗಳನ್ನೂ ಉರಿಸಲೀ, ಬಿಡಲೀ, ಶಕ್ತಿಯನ್ನು ಹೆಚ್ಚಾಗಿ ಉಪಯೋಗಿಸಲೀ, ಕಡಿಮೆಯಾಗಿ ಉಪಯೋಗಿಸಲೀ, ಕೊಡಬೇಕಾದ ತೆರಿಗೆಯು, ಉಪಯೋಗಿಸುವ ಸಾಮರ್ಥ್ಯಕ್ಕೆತಕ್ಕಂತೆ, ಹೆಚ್ಚು ಹೆಚ್ಚಾಗಿ ಕ್ಲುಪ್ತಮಾಡಿರುವ ಮೊಬಲಗಿಗೆ ಕಡಿಮೆ ಬೀಳುವುದಿಲ್ಲ. ಇದನ್ನು ವಿವರಿಸುವೆವು. ಒಂದು ಮನೆಯಲ್ಲಿ ಲೋಹದೆಳೆಯ 16 ಮೇಣದ ಬತ್ತಿಯ ಬೆಳಕಿನ ದೀಪಗಳು 15 ಇವೆ ಎಂದೆನ್ನೋಣ. ಇವೆಲ್ಲವನ್ನೂಏಕಕಾಲದಲ್ಲಿ ಉರಿಸಿದರೆ ಸುಮಾರು 360 ವ್ಯಾಟುಗಳಷ್ಟು ‘ಸಾಮರ್ಥ್ಯ’ವು ಬೇಕು.ತೆರಿಗೆಯನ್ನು ಹಾಕುವುದರಲ್ಲಿ, ವಿದ್ಯುತ್ತಿನಇಲಾಖೆಯವರು 60 ವ್ಯಾಟುಗಳಿಗೆ-ಎಂದರೆ, ಇಂಗಾಲದ ಎಳೆಯ 16 ಮೇಣದ ಬತ್ತಿಗಳ ಬೆಳಕಿನ ಒಂದು ದೀಪವನ್ನು ಉರಿಸುವುದಕ್ಕೆ ಬೇಕಾಗುವ ಸಾಮರ್ಥ್ಯವನ್ನು, ಒಂದು ‘ಪಾಯಿಂಟ್’ ಎಂದು ಹೇಳುವರು. 360 ವ್ಯಾಟುಗಳಿಗೆ ಆರು ‘ಪಾಯಿಂಟ್’ ಆಯಿತು.ಪ್ರತಿ ಪಾಯಿಂಟಿಗೂ ತಿಂಗಳು ಒಂದಕ್ಕೆಆರಾಣೆಯ ಬೆಲೆಯನ್ನು ಕೊಟ್ಟೇತೀರಬೇಕು.ಆದುದರಿಂದ ಆರುಪಾಯಿಂಟಿಗೂ ಎರಡು ರೂಪಾಯಿ ನಾಲ್ಕಾಣೆಗಳಿಗೆ ಕಡಿಮೆಯಿಲ್ಲದೆ ಕೊಟ್ಟೇಕೊಡಬೇಕು.ಮೀಟರನ್ನು ನೋಡಿದರೆ, ಒಂದು ತಿಂಗಳಲ್ಲಿ 10 ಯೂನಿಟ್‘ಶಕ್ತಿ’ ಮಾತ್ರವೇ ಖರ್ಚಾಗಿರುವುದೆನ್ನೋಣ.ಯೂನಿಟ್ಟಿಗೆ 2||0 ಆಣೆಯ ಮೇರೆಇದಕ್ಕೆಒಂದು ರೂಪಾಯಿ ಒಂಬತ್ತು ಆಣೆಗಳಾಯಿತು.ಆದರೂ 6 ಪಾಯಿಂಟುಗಳಿಗೆ ಕ್ಲುಪ್ತವಾಗಿರುವ ಎರಡುರೂಪಾಯಿ ನಾಲ್ಕಾಣೆಯನ್ನುಕೊಟ್ಟೇತೀರಬೇಕು.ಮತ್ತೊಂದು ತಿಂಗಳಲ್ಲಿ 40 ಯೂನಿಟ್‍ಖರ್ಚಾಯಿತೆಂದೆನ್ನೋಣ.2||0 ಆಣೆಯ ಮೇರೆಇದರ ಬೆಲೆ 6/0 ರೂಪಾಯಿಗಳಾಗುವುದು.ಈ ಮೊಬಲಗನ್ನು ಆ ತಿಂಗಳಲ್ಲಿ ಕೊಡಬೇಕಾಗುವುದು. ಮೇಲೆ ಹೇಳಿದಂತೆ ಎಲ್ಲಾ ದೀಪಗಳನ್ನೂ ಪ್ರತಿದಿನವೂ ಏಕಕಾಲದಲ್ಲಿ ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ. ಒಂದು ದೀಪವನ್ನು ಸಾಯಂಕಾಲ 6 ಗಂಟೆಯಿಂದ ರಾತ್ರಿ.10 ಗಂಟೆಯವರೆಗೂ, ಮತ್ತೊಂದನ್ನು ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಉರಿಸಿ, ಮಿಕ್ಕವುಗಳನ್ನು ಬೇಕಾದಾಗ ಹತ್ತಿಸಿ, ಬೇಡದೆ ಇರುವಾಗ ಆರಿಸಿ ಬಿಡುವೆವೆಂದೆನ್ನೋಣ. ಹೀಗೆ ಮಾಡುವುದರಿಂದ ಎಷ್ಟು ಶಕ್ತಿಯು ವೆಚ್ಚವಾಯಿತೆಂದು 24 ವ್ಯಾಟುಗಳ ಒಂದು ದೀಪವು 4 ಗಂಟೆಗಳು ಉರಿಯುತ್ತದೆ, ಎಂದರೆ 96 ‘ವಾಟ್‍ಗಂಟೆ’ಗಳ ಶಕ್ತಿಯನ್ನುಉಪಯೋಗಿಸುತ್ತದೆ. ಎರಡನೆಯದು 12 ಗಂಟೆಗಳ ಹೊತ್ತುಉರಿಯುತ್ತದೆ.ಇದಕ್ಕೆ 24*12 ಅಥವಾ 288 “ವಾಟ್‍ಗಂಟೆ” ಗಳ ಶಕ್ತಿ ಬೇಕು.ಇವೆರಡರಿಂದಲೂ ದಿನ ಒಂದಕ್ಕೆ 384 ವಾಟ್‍ಗಂಟೆಗಳು ಅಥವಾ, ತಿಂಗಳು ಒಂದಕ್ಕೆ 384*30/1000 ಕಿಲೊವಾಟ್‍ಗಂಟೆಗಳು, ಎಂದರೆ, 11.52 ಬಿ.ಟಿ.ಯೂನಿಟ್ಟುಗಳ ಶಕ್ತಿ ಬೇಕು.ಇದರ ಬೆಲೆ ದರ 2|| ಆಣೆ ಮೇರೆ, ರೂ. 1-12-10 ಆಯಿತು. ಕ್ಲುಪ್ತವಾದ ಮೊತ್ತಕ್ಕೆ- ಎಂದರೆ, ರೂ.2-4-0 ಗೆ ಹೆಚ್ಚಾಗಿ ಶಕ್ತಿಯನ್ನುಉಪಯೋಗಿಸಬಾರದೆಂಬ ಅಭಿಪ್ರಾಯದಲ್ಲಿ ಮಿಕ್ಕದೀಪಗಳನ್ನು ಬಾಕಿ ಮೊಬಲಿಗೆ ತಕ್ಕಷ್ಟೇಉಪಯೋಗಿಸಬೇಕಾಗುವುದು.ಎಷ್ಟುಕಡಿಮೆ ಸಂಖ್ಯೆಯ ದೀಪಗಳನ್ನೇ ಹಾಕಿಸಲಿ, ಮೂರು ಪಾಯಿಂಟುಗಳ ಬೆಲೆಗಿಂತಲೂಕಡಿಮೆಯಾದ-ಎಂದರೆ, ಒಂದುರೂಪಾಯಿಎರಡಾಣೆಗೆಕಡಿಮೆಯಾದ ಮೊತ್ತವನ್ನು ತೆಗೆದುಕೊಳ್ಳುವಿದಿಲ್ಲ. ಮೇಲೆ ಹೇಳಿದ ದೀಪಗಳು ಹದಿನೈದನ್ನು ಹಾಕಿಸಬೇಕಾದರೆ ಈಗಿನ ಬೆಲೆಯ ಪ್ರಕಾರ ಸುಮಾರು ಮುನ್ನೂರು ರೂಪಾಯಿಗಳಾಗುವುವು. 16 ಮೇಣದ ಬತ್ತಿಯ ಬೆಳಕನ್ನು ಕೊಡುವ ದೀಪಗಳನ್ನೇ ಹಾಕಬೇಕೆಂಬುವ ನಿಯಮವಿಲ್ಲ. ಈ ದೀಪಗಳಲ್ಲಿ 8,25,50,100 ಮೊದಲಾದ ಬೆಳಕನ್ನು ಕೊಡುವ ದೀಪಗಳೂ, ಇದಕ್ಕೂ ಹೆಚ್ಚಾದ ಬೆಳಕನ್ನು ಕೊಡುವ ದೀಪಗಳೂ ಇರುವುವು. 16 ರ ದೀಪ ಒಂದಕ್ಕೆ ಬದಲಾಗಿ 8 ರ ದೀಪಗಳು ಎರಡನ್ನೂ, 25 ರ ದೀಪಗಳು 4 ಕ್ಕೆ ಬದಲಾಗಿ 100 ರ ದೀಪ ಒಂದನ್ನೂ ಹಾಕಬಹುದು.

  • ಶಕ್ತಿಯನ್ನು ಹೆಚ್ಚಾಗಿ ಉಪಯೋಗಿಸುವ ಸಂಭವವಿರುವ ಮನೆಗಳಲೆಲ್ಲಾ ಇದನ್ನು ಅಳೆಯುವ ಮೀಟರನ್ನುಇಡುವರು. ಇದಕ್ಕೆ ಬಾಡಿಗೆ, ತಿಂಗಳು ಒಂದಕ್ಕೆಎಂಟು ಆಣೆಗಳಿಗೆ ಕಡಿಮೆಯಿಲ್ಲದೆ ಕೊಡಬೇಕು.

ದೀಪದಕಡ್ಡಿಯ ಪೆಟ್ಟಿಗೆಯೊಂದಕ್ಕೆ 3 1/3 ಕಾಸು ಬೆಲೆಯಾಗುವುದು. ಅದರಲ್ಲಿ ಸುಮಾರು 60 ಕಡ್ಡಿಗಳಿರುವುವು. ಆದುದರಿಂದ ಕಾಸಿಗೆ ಸುಮಾರು 18 ಕಡ್ಡಿಗಳು ಬಿದ್ದಹಾಗಾಯಿತು. ಇಂಥ ಒಂದು ಕಡ್ಡಿಯನ್ನು ಗೀಚಿ ಬಿಸಾಡುವ ಬೆಲೆಗೆ, 16 ರ ಲೋಹದೆಳೆಯ ದೀಪವೊಂದನ್ನು ಸುಮಾರು 5 ಮಿನಿಟುಗಳು ಉರಿಸಬಹುದು.

  • ನಮ್ಮ ಮ್ಯುನಿಸಿಪಾಲಿಟಿಯವರು ಬೀದಿಯಲ್ಲಿ ಉರಿಸುವ ದೀಪವೊಂದಕ್ಕೆ ಆಗುವ ವೆಚ್ಚವನ್ನು ಗುಣಿಸೋಣ: ಪ್ರತಿಯೊಂದು ದೀಪವೂ 12 ಗಂಟೆಗಳ ಹೊತ್ತುಉರಿಯುವುದು; ‘ಸಾಮರ್ಥ್ಯ’ 55ವ್ಯಾಟುಗಳು;ಆದುದರಿಂದ ತಿಂಗಳು ಒಂದಕ್ಕೆ ವೆಚ್ಚವಾಗುವ ಶಕ್ತಿ 12*55*30/1000=19.8 ಕಿಲೊವಾಟ್‍ಗಂಟೆಗಳು. ದರ 2||0 ಆಣೆಯ ಮೇರೆ ಇದಕ್ಕಾಗುವ ಮೊಬಲಗು ರೂ 3-1-6.