ಸದಸ್ಯ:BVageesha/ನನ್ನ ಪ್ರಯೋಗಪುಟ-2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಭರ್ತೃಹರಿ (ಸುಮಾರು ಏಳನೆಯ ಶತಮಾನ). ಸಂಸ್ಕ್ರತ ಸಾಹಿತ್ಯದ ಪ್ರಸಿದ್ದ ವಿದ್ವಾಂಸ, ವಾಕ್ಯಪದೀಯ ಮತ್ತು ಸುಭಾಷಿತ ಶತಕತ್ರಯದ ರಚನಕಾರ.

ಕಾಲಮಾನ[ಬದಲಾಯಿಸಿ]

ಭರ್ತೃಹರಿಯ ಕಾವ್ಯ ಎಷ್ಟು ಪ್ರಸಿದ್ಧವೋ ವ್ಯಕ್ತಿತ್ವ ಅಷ್ಟೇ ಅಜ್ಞಾತ. ಈತನ ಕಾಲ ಮತ್ತು ಜೀವನದ ಬಗೆಗೆ ಹೆಚ್ಚಿನದು ಏನೂ ತಿಳಿಯದು. ಹೀಗಾಗಿ ದಂತ ಕಥೆಗಳು ವಿಪುಲ. ಒಂದು ದಂತಕಥೆಯ ಆಧಾರದ ಮೇಲೆ ಈತನನ್ನು ಶಕವರ್ಷ ಸ್ಥಾಪಕ ವಿಕ್ರಮಾಂಕನ ಅಣ್ಣನೆಂದೂ ಭಾವನೆ. ಆದರೆ, ಈತನ ಸಾಹಿತ್ಯದಲ್ಲಿ ರಾಜವೈಭವದ ಯಾವ ಸೊಂಕೂ ಕಾಣದು. ಆದ್ದರಿಂದ ಇದು ದಂತಕಥೆಯೇ ಹೊರತು ನಿಜ ಚರಿತ್ರೆ ವಿಷಯವಲ್ಲ ಎಂಬ ಇನ್ನೊಂದು ಅಭಿಪ್ರಾಯ. ವಾಕ್ಯಪದೀಯ ಬರೆದ ಭರ್ತೃಹರಿ ಮತ್ತು ಶತಕತ್ರಯ ಬರೆದ ಭರ್ತೃಹರಿ ಭಿನ್ನರೆಂದು ಕೆಲವರೂ, ಅಭಿನ್ನರೆಂದು ಕೆಲವರೂ ಅಭಿಪ್ರಾಯ ಪಡುತ್ತಾರೆ. ಈ ಎರಡು ವಾದಗಳಿಗೂ ಪೋಷಕವಾಗುವಂಥ ಪ್ರಮಾಣಗಳು ಇವೆ ಎಂದು ಸಂಶೋಧಕರು ಒಪ್ಪಿದ್ದಾರೆ. ಆದರೆ ಈತನ ಶತಕಗಳ ಅನುಶೀಲನೆಯಿಂದ ಈತ ವೈದಿಕ ಧರ್ಮಾವಲಂಬಿಯಾಗಿದ್ದುದಲ್ಲದೆ ಕರ್ಮಠ ಅದ್ವೈತಿಯಾಗಿದ್ದನೆಂದು ಕೂಡ ವ್ಯಕ್ತವಾಗುತ್ತದೆ. ವೈದಿಕಧರ್ಮದ ಆಚಾರ, ವಿಚಾರ, ಪದ್ಧತಿ ಪ್ರಕ್ರಿಯೆಗಳಲ್ಲಿ ಈತನಿಗೆ ಸಂಪೂರ್ಣ ವಿಶ್ವಾಸವಿತ್ತೆಂದು ತಿಳಿದುಬರುತ್ತದೆ.

ಈಜಿಂಗ್/ಇತ್ಸಿಂಗ್ ಕ್ರಿ.ಶ. ೭ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದನೆಂದು ತಿಳಿದುಬರುತ್ತದೆ. ವೈಯಾಕರಣನೂ ಬೌದ್ಧನೂ ಆದ ಭರ್ತೃಹರಿ ತಾನು ಭಾರತಕ್ಕೆ ಬರುವುದಕ್ಕೆ 40 ವರ್ಷಗಳ ಹಿಂದೆ ಮೃತನಾದನೆಂದು ಈತ ಬರೆದಿದ್ದಾನೆ. ವಾಕ್ಯಪದಿಯದ ಕರ್ತೃ ಭರ್ತೃಹರಿಗೆ ಈ ಮಾತು ಸಂಬಂಧಿಸುತ್ತದೆಯೆಂದು ಅನೇಕರ ಅಭಿಪ್ರಾಯ. ಇತ್ಸಿಂಗ್ ಈತನನ್ನೇ ಕುರಿತು ಹೇಳುತ್ತಾನೆ ಎನ್ನಲಾಗದು ಎಂದು ದಾಸಗುಪ್ತರ ಆಶಯ.

ಇತ್ಸಿಂಗನ ಹೇಳಿಕೆಯಂತೆ ಭರ್ತೃಹರಿ ಕ್ರಿ.ಶ.೬೫೧ರಲ್ಲಿ ಮೃತನಾದನೆಂದು ತಿಳಿಯುತ್ತದೆ. ಕ್ರಿ.ಶ.೬೫೦ರಲ್ಲಿದ್ದ ಕಾಶಿಕಾವೃತ್ತಿಕಾರ ತನ್ನ ಗ್ರಂಥದಲ್ಲಿ ಭರ್ತೃಹರಿಯನ್ನು ಪ್ರಮಾಣೀಕರಿಸಿದ್ದಾನೆ. ತೆಲಂಗರು ಮತ್ತು ಕುನ್‍ಹನ್ ರಾಜಾ ಅವರು ಕ್ರಿ.ಶ ೧-೨ನೆಯ ಶತಮಾನದಲ್ಲಿ ಈತ ಬಾಳಿರಬೇಕೆಂದು ಅಭಿಪ್ರಾಯಪಡುತ್ತಾರೆ. ಪಂಡಿತ ಚಾರುದೇವಶಾಸ್ತ್ರಿಗಳು ಸಂಪಾದಿಸಿದ ಲಾಹೋರ್ ಮುದ್ರಣದ ವಾಕ್ಯಪದೀಯದ ಉಪೋದ್ಘಾತದಲ್ಲಿ ಇತ್ಸಿಂಗ್ ನ ಹೇಳಿಕೆ ವಿಶ್ವಸನೀಯನಲ್ಲವೆಂದೂ ಭರ್ತೃಹರಿ ಸರ್ವಥಾ ಬೌದ್ಧನಲ್ಲವೆಂದೂ ಹೇಳುತ್ತಾರೆ.

ಅಭಿಪ್ರಾಯಗಳು ಹೇಗೆಯೇ ಇರಲಿ. ವಾಕ್ಯಪದೀಯ ಬರೆದ ಭರ್ತೃಹರಿ ಪರಮ ವೈದಿಕ; ವೇದಾಂತಿ ವೇದಶಾಸ್ತ್ರಗಳಲ್ಲಿ ಅಪಾರ ಭಕ್ತಿಶ್ರದ್ಧೆಯಿದ್ದವ ಎಂದು ಕೈಯಟ, ಭಟ್ಡೋಜಿದೀಕ್ಷಿತ ಮುಂತಾದ ವೈದಿಕ ಪಂಡಿತರು ಈತನನ್ನು ಪೂಜ್ಯ ಭಾವದಿಂದ ಕಂಡಿದ್ದಾರೆ. ಈತ ಶಬ್ದಬ್ರಹ್ಮವಾದಿ; ಅದ್ವೈತಿಸುಭಾಷಿತ ತ್ರಿಶತಿಯಿಂದ ಈತನಿಗೆ ಶಿವನಲ್ಲಿ ವಿಶೇಷವಾದ ಭಕ್ತಿ ಇತ್ತೆಂದು ತಿಳಿದುಬರುತ್ತದೆ.

ಕಾವ್ಯಗಳು[ಬದಲಾಯಿಸಿ]

ಈತನ ಗ್ರಂಥಗಳು ವಾಕ್ಯಪದೀಯ, ಸುಭಾಷಿತ ತ್ರಿಶತೀ ಎಂಬ ಎರಡು ಗ್ರಂಥಗಳು.

ವಾಕ್ಯಪದೀಯ[ಬದಲಾಯಿಸಿ]

ವಾಕ್ಯಪದೀಯ ವ್ಯಾಕರಣಶಾಸ್ತ್ರದ ದಾರ್ಶನಿಕ ತತ್ತ್ವಗಳನ್ನು ವಿವರಿಸುವ ಗ್ರಂಥ. ಈ ಗ್ರಂಥದಲ್ಲಿ ಸುಮಾರು ೨೦೦೦ ಶ್ಲೋಕಗಳಿವೆ. ಎಲ್ಲವೂ ಅನುಷ್ಟುಪ್ ಛಂದಸ್ಸಿನಲ್ಲಿ ಬರೆದವು. ಈ ಗ್ರಂಥದಲ್ಲಿ ಬ್ರಹ್ಮಕಾಂಡ, ವಾಕ್ಯಕಾಂಡ ಮತ್ತು ಪದಕಾಂಡವೆಂದು ಮೂರು ವಿಭಾಗಗಳಿವೆ. ಬ್ರಹ್ಮಕಾಂಡಕ್ಕೆ ಆಗಮಕಾಂಡವೆಂದೂ, ಪದಕಾಂಡಕ್ಕೆ ಪ್ರಕೀರ್ಣಕಾಂಡವೆಂದೂ ನಾಮಾಂತರ ಉಂಟು. ಒಂದನೆಯ ಬ್ರಹ್ಮಕಾಂಡ ಸ್ಫೋಟ ಮಹಾವಾಕ್ಯ ರೂಪವಾದದ್ದು. ಆದ್ದರಿಂದ ಬ್ರಹ್ಮಕಾಂಡ ವಾಕ್ಯಕಾಂಡದಲ್ಲಿಯೇ ಅಂತರ್ಗತವಾಗುತ್ತದೆ. ವಾಕ್ಯ ಮತ್ತು ಪದವನ್ನು ಅಧಿಕರಿಸಿ ಬರೆದ ಗ್ರಂಥ ವಾಕ್ಯಪದೀಯ.

ವಾಕ್ಯಪದೀಯದಲ್ಲಿ ಪಾಣಿನಿಯ ಅಷ್ಟಾಧ್ಯಾಯಿ, ಕಾತ್ಯಾಯನನ ವಾರ್ತಿಕ ಮತ್ತು ಪತಂಜಲಿಯ ಮಹಾಭಾಷ್ಯಗಳಲ್ಲಿ ಕಂಡುಬರುವ ದಾರ್ಶನಿಕ ತತ್ತ್ವಗಳನ್ನು ಕ್ರೋಡಿಕರಿಸಿ ನಾನಾ ದೃಷ್ಟಾಂತ, ಯುಕ್ತಿಗಳಿಂದ ವಿಶದವಾಗಿ ನಿರೂಪಿಸಲಾಗಿದೆ. ಪತಂಜಲಿಗಿಂತ ಪ್ರಾಚೀನನಾದ ವ್ಯಾಕರಣಕಾರ ವ್ಯಾದಿ ವಿರಚಿಸಿದ್ದ 'ಸಂಗ್ರಹ' ಎಂಬ ಗ್ರಂಥದಿಂದ ಅನೇಕ ಕಾರಿಕೆಗಳನ್ನು ಇದರಲ್ಲಿ ಉದಾಹರಿಸಿದ್ದಾನೆ. ವಾಕ್ಯಪದೀಯದಲ್ಲಿರುವ ವಿಷಯ ಗಹನವಾದದ್ದು. ಶೈಲಿ ಕಠಿಣವೆಂದೇ ಹೇಳಬೇಕು. ಕೈಯಟ, ಭಟ್ಟೋಜೀದೀಕ್ಷಿತ, ನಾಗೇಶಭಟ್ಟ ಮುಂತಾದ ವೈಯಾಕರಣರು ವಾಕ್ಯಪದೀಯವನ್ನು ಅತ್ಯಂತ ಪ್ರಾಮಾಣಿಕವೆಂದು ಗೌರವಿಸಿ ತಮ್ಮ ಗ್ರಂಥಗಳಲ್ಲಿ ಇದರಿಂದ ವಾಕ್ಯಗಳನ್ನು ಉದ್ಧರಿಸಿದ್ದಾರೆ. ಶಬ್ದದ ಮಾಹಾತ್ಮ್ಯ; ಶಬ್ದ ನಿಷ್ಪತ್ತಿಯಲ್ಲಿರುವ ಮತಭೇದ, ಅಸಾಧುಶಬ್ದಗಳ ಸ್ವರೂಪ; ಸರ್ವಶಾಸ್ತ್ರಗಳಿಗೂ ಶಬ್ದಶಾಸ್ತ್ರ ಆಧಾರ ಮುಂತಾದ ವಿಷಯಗಳು ಬ್ರಹ್ಮಕಾಂಡದಲ್ಲಿ ನಿರೂಪಿಸಲ್ಟಟ್ಟಿದೆ.

ವಾಕ್ಯಕಾಂಡದಲ್ಲಿ ವಾಕ್ಯವೆಂದರೇನೆಂದು ವಿಚಾರಮಾಡಿ ಅರ್ಥಜ್ಞಾನ ವಾಕ್ಯದಿಂದ ಆಗುತ್ತದೆಯೇ ಎಂದು ವಿಮರ್ಶಿಸಿ ವಾಕ್ಯದಿಂದಲೇ ಅರ್ಥಜ್ಞಾನವಾಗುತ್ತದೆ ಎಂದು ನಿರ್ಣಯಿಸಿದೆ. ಶಬ್ದವನ್ನು ಪ್ರಕೃತಿಪ್ರತ್ಯಯಗಳಾಗಿ ವಿಂಗಡಿಸುವುದು ಅಸಾಧ್ಯ; ಪದಗಳಿಗೂ ವಾಕ್ಯಕ್ಕೂ ಇರುವ ದ್ಯೋತಕಗಳೂ ಹೌದು, ವಾಚಕಗಳೂ ಹೌದು; ಪದಗಳಿಗೂ ವಾಕ್ಯಕ್ಕೂ ಇರುವ ಸಂಬಂಧ ಮುಂತಾದ ವಿಚಾರಗಳನ್ನು ಸಂಯುಕ್ತಿಕವಾಗಿ ವಿವೇಚನೆ ಮಾಡಲಾಗಿದೆ.

ಪದಕಾಂಡದಲ್ಲಿ ೧೪ ಸಮುದ್ದೇಶಗಳುಂಟು. ಒಂದನೆಯದು ಜಾತಿಸಮುದ್ದೇಶ, ೧೪ನೆಯದು ವೃತ್ತಿಸಮುದ್ದೇಶ. ಶಬ್ದದ ಶಕ್ಯಾರ್ಥ ಜಾತಿಯೇ ವ್ಯಕ್ತಿಯೆ? ಶಕ್ತಿ ಸ್ವರೂಪ, ಕ್ರಿಯಾಸ್ವರೂಪ , ಕಾಲದ ಲಕ್ಷಣ, ಸಂಖ್ಯಾವಿಚಾರ, ಆತ್ಮನೇಪದ ಪರಸ್ಮೈಪದಗಳ ಅರ್ಥಭೇದ ಲಿಂಗ ಕಾರಕ-ಸಮಾಸಾದಿ ವೃತ್ತಿಗಳ ವಿಮರ್ಶೆಗಳು ಈ ಕಾಂಡದಲ್ಲಿ ನಿರೂಪಿಸಲ್ಪಟ್ಟಿವೆ. ವ್ಯಾಕರಣಶಾಸ್ತ್ರದ ನಾನಾಸ್ಥಳಗಳಲ್ಲಿ ಹರಡಿರುವ ಪ್ರಕೀರ್ಣ ವಿಷಯಗಳನ್ನು ಚರ್ಚಿಸಿರುವುದರಿಂದ ಪದಕಾಂಡಕ್ಕೆ ಪ್ರಕೀರ್ಣಕಾಂಡವೆಂದೂ ಹೆಸರಿದೆ.

ವ್ಯಾಖ್ಯಾನಗಳು: ವಾಕ್ಯಪದೀಯಕ್ಕೆ ಭರ್ತೃಹರಿಯೇ ಸ್ವತಃ ವೃತ್ತಿಯನ್ನು ಬರೆದಿದ್ದಾನೆ. ಈಗ ಬ್ರಹ್ಮಕಾಂಡಕ್ಕೆ ಆತ ಬರೆದ ವೃತ್ತಿ ಮಾತ್ರ ದೊರಕುತ್ತದೆ. ವಾಕ್ಯಪದೀಯದ ೨ ಕಾಂಡಗಳಿಗೆ ವ್ಯಾಖ್ಯಾನ ಬರೆದಿದ್ದಾನೆ. ಭರ್ತೃಹರಿ ವೃತ್ತಿಸಹಿತವಾದ ಪ್ರಥಮಕಾಂಡವನ್ನು ವೃಷಭದೇವ ವ್ಯಾಖ್ಯಾನ ಬರೆದಿದ್ದಾನೆ. ಈತ ಎಲ್ಲ ಕಾಂಡಗಳಿಗೂ 'ಪ್ರಕಾಶ' ಎಂಬ ವ್ಯಾಖ್ಯಾನ ಬರೆದಿದ್ದಾನೆ. ಧರ್ಮಪಾಲ ಎಂಬುವ ಪದಕಾಂಡಕ್ಕೆ ವ್ಯಾಖ್ಯಾನ ಬರೆದಿದ್ದಾನೆಂದು ಚೀನಾಯಾತ್ರಿಕ ಇತ್ಸಿಂಗ್ ಹೇಳುತ್ತಾನೆ. ಈ ವ್ಯಾಖ್ಯಾನ ಉಪಲಬ್ಧವಿಲ್ಲ.

ಗ್ರಂಥಪಾತ: ವಾಕ್ಯಪದೀಯದ ಕೆಲವು ಭಾಗ ದೊರೆಯುವುದಿಲ್ಲ. ಲಕ್ಷಣ ಸಮುದ್ದೇಶದಲ್ಲಿ ಲಕ್ಷಣಗಳ ಸ್ವರೂಪ ವಿಸ್ತಾರವಾಗಿ ಸಮಾಲೋಚಿಸಲ್ಪಡುತ್ತದೆಯೆಂದು ಭರ್ತೃಹರಿಯೇ ಹೇಳಿದ್ದಾನೆ. ಈ ಲಕ್ಷಣ ಸಮುದ್ದೇಶ ಈಗ ದೊರೆಯುವುದಿಲ್ಲ. ಇದು ವ್ಯಾಖ್ಯಾನಕಾರ ಪುಣ್ಯರಾಜನಿಗೂ ದೊರಕಿರಲಿಲ್ಲ. ಹಾಗೆಯೇ ಬಾಧಾಸಮುದ್ದೇಶ ಎಂಬ ಭಾಗವೂ ಈಗ ಉಪಲಬ್ಧವಿಲ್ಲ. ಇದು ಪುಣ್ಯರಾಜನಿಗೆ ಉಪಲಬ್ಧವಿತ್ತು.

ಗ್ರಂಥದ ಸಮಾಪ್ತಿಯಲ್ಲಿ ಇತಿ ಶ್ರಿಹರಿವೃಷಭಮಹಾವೈಯಾಕರಣವಿರಚಿತೇ ವಾಕ್ಯಪದೀಯೇ ಎಂದು ಬರೆಹವಿರುತ್ತದೆ. ಇಲ್ಲಿ ವೃಷಭಶಬ್ದ ಎಂಬುದು ಶ್ರೇಷ್ಠವಾಚೀ.

ಸುಭಾಷಿತ ತ್ರಿಶತೀ[ಬದಲಾಯಿಸಿ]

ಇದರಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕಗಳೆಂಬ ಮೂರು ಶತಕಗಳಿವೆ. ಒಂದೊಂದು ಶತಕದಲ್ಲಿ ೧೦೦ ಶ್ಲೋಕಗಳಂತೆ ಒಟ್ಟು ೩೦೦ ಶ್ಲೋಕಗಳಿವೆ. ಇದನ್ನು ಅಬ್ರಹಾಮ್ ರೋಜರ್ ಎಂಬ ಪಾಶ್ಚಾತ್ಯ ಪಂಡಿತ ೧೬೫೧ರಲ್ಲಿಯೇ ಡಚ್ ಭಾಷೆಗೆ ಅನುವಾದಿಸಿದ. ಶಿಲ್ಹಣನೆಂಬ ವೈಷ್ಣವ ಕವಿ ತನ್ನ ಸುಭಾಷಿತ ಸಂಗ್ರಹದಲ್ಲಿ ಭರ್ತೃಹರಿಯ ತ್ರಿಶತಿಯಿಂದ ಅನೇಕ ವಿಷಯಗಳನ್ನು ಕವಿತಾಪಾದಗಳನ್ನೂ ಎರವಲಾಗಿ ಪಡೆದಿದ್ದಾನೆ. ತ್ರಿಶತಿಯ ಶೈಲಿ ಸರಳ ಮನೋಹರ ಹೃದಯಸ್ಪರ್ಶಿಯಾಗಿದೆ.

ನೀತಿಶತಕದಲ್ಲಿ ಮೂರ್ಖಪದ್ಧತಿ ವಿದ್ವತ್ ಪದ್ಧತಿ ಮುಂತಾದ ಹತ್ತು ಪ್ರಕರಣಗಳು, ಶೃಂಗಾರ ಶತಕದಲ್ಲಿ ಐದು ಪ್ರಕರಣಗಳು ಹಾಗು ವೈರಾಗ್ಯಶತಕದಲ್ಲಿ ಐದು ಪ್ರಕರಣಗಳು ಇವೆ.

ನೀತಿಶತಕದಲ್ಲಿ ಸಜ್ಜನರ ಸ್ನೇಹದ ಬಗೆಗೆ ಈ ರೀತಿ ಹೇಳುತ್ತಾನೆ :

ದುರ್ಜನರ ಸ್ನೇಹ ಪೂರ್ವಾಹ್ಣದ ನೆರಳಿನಂತೆ ಮೊದಲು ದೊಡ್ಡದಾಗಿದ್ದು ಕ್ರಮೇಣ ಕ್ಷಯಿಸುತ್ತಾ ಹೋಗುವುದು. ಸಜ್ಜನರ ಸ್ನೇಹ ಅಪರಾಹ್ಣದ ನೆರಳಿನಂತೆ.

ಶೃಂಗಾರ ಶತಕದಲ್ಲಿ ವಿರಹಿ ದುಃಖವನ್ನು ಈ ರೀತಿ ತೋಡಿಕೊಳ್ಳುತ್ತಾನೆ.

ದೀಪವಿದೆ, ಅಗ್ನಿಇದೆ, ನಕ್ಷತ್ರ, ರತ್ನ ಚಂದ್ರರು ಪ್ರಕಾಶಿಸುತ್ತಿದ್ದಾರೆ. ಆದರೂ ನನ್ನ ಹರಿಣಲೋಚನೆ ಇಲ್ಲದ್ದರಿಂದ ಜಗತ್ತೆಲ್ಲ ನನ್ನ ಪಾಲಿಗೆ ಕತ್ತಲೆಯಿಂದ ತುಂಬಿಹೋಗಿದೆ.

ವೈರಾಗ್ಯಶತಕದಲ್ಲಿ ನಿತ್ಯಸಂತುಷ್ಟನಾದ ವಿರಕ್ತ ರಾಜನಿಗೆ ಹೇಳುವ ಮಾತಿದು:

ಎಲೈ ರಾಜನೆ, ನಾವು ನಾರು ಬಟ್ಟೆಗಳಿಂದ ಸಂತುಷ್ಟರಾಗಿದ್ದೇವೆ, ನೀನು ವಿಚಿತ್ರವಾದ ರೇಷ್ಮೆಯ ಬಟ್ಟೆಗಳಿಂದ ಸಂತುಷ್ಟನಾಗಿದ್ದೀಯೆ. ನಮ್ಮಿಬ್ಬರ ಸಂತೋಷವೂ ಒಂದೇ. ಇದರಲ್ಲಿ ವಿಶೇಷವಿಲ್ಲದ್ದೇ ಒಂದು ವಿಶೇಷ. ಯಾವನಿಗೆ ಧನದ ಆಸೆ ಹೆಚ್ಚಾಗಿದೆಯೋ ಅವನೇ ದರಿದ್ರ. ಮನಸ್ಸು ತೃಪ್ತವಾದಾಗ ಧನಿಕನಾರು? ದರಿದ್ರನಾರು?

ವಾಕ್ಯಪದೀಯ ಕರ್ತನಾದ ಭರ್ತೃಹರಿಯೇ ಸುಭಾಷಿತ ತ್ರೀಶತಿಯನ್ನು ಬರೆದಿದ್ದಾನೆಯೆ? ಅಥವಾ ಬೇರೂಬ್ಬನೇ ಎಂಬ ಚರ್ಚೆಯುಂಟು. ವಾಕ್ಯಪದೀಯದ ಭರ್ತೃಹರಿ ಕವಿಯೆಂದು ಇತ್ಸಿಂಗ್ ಹೇಳಿರುವುದರಿಂದಲೂ ವೈಯಾಕರಣನಾದ ಭರ್ತೃಹರಿ ಕವಿಯೆಂದು ಇತ್ಸಿಂಗ್ ಹೇಳಿರುವುದರಿಂದಲೂ ತ್ರಿಶತಿಯ ಕವಿ ಬೇರೂಬ್ಬನೆಂದು ಹಲವರು ತರ್ಕಿಸುತ್ತಾರೆ. ವೈರಾಗ್ಯಶತಕದಲ್ಲಿ ಭ್ರಾಂತಂ ದೇಶಮನೇಕದುರ್ಗ ವಿಷಮಮ ಎಂಬುದು ಪ್ರಯೋಗವಾದ್ದರಿಂದ ಈ ಕವಿ ವೈಯಾಕರಣನಾದ ಭರ್ತೃಹರಿಯಲ್ಲವೆಂದು ಇವರ ಊಹೆ. ಆದರೆ ವಾಕ್ಯಪದೀಯ ಶಾಸ್ತ್ರ, ತ್ರಿಶತಿಯ ಕಾವ್ಯ, ಆದ್ದರಿಂದ ಶೈಲೀಭೇದ ಸ್ವಾಭಾವಿಕ. ರಾಮಚಂದ್ರ ಭುದೇಂದ್ರ ತ್ರಿಶತಿಯ ತನ್ನ ವ್ಯಾಖ್ಯಾನದ ಆರಂಭದಲ್ಲಿ ಅಶೇಷವಿಶೇಷಸಾರ ಪಾರದೃಶ್ವಾವಿಶ್ವಾತಿಶಾಯಿ ಗುಣಗರಿಮಾವತಾರ: ಭರ್ತೃ ಹರಿನಾಮಾ ಮಹಾಯೋಗೀಶ್ವರ: ಎಂದು ಭರ್ತೃಹರಿಯನ್ನು ಗೌರವಿಸುತ್ತಾನೆ. ಇಷ್ಟು ಗೌರವಾರ್ಹನಾದ ಭರ್ತೃಹರಿ ವಾಕ್ಯಪದೀಯ ಕರ್ತನಲ್ಲದೆ ಇನ್ನೊಬ್ಬನಿದ್ದನೆನ್ನುವುದಕ್ಕೆ ಸಾಕ್ಷ್ಯವಿಲ್ಲ.