ಸದಸ್ಯ:2411029 Huchegowda Bhuvan Gowda/ನನ್ನ ಪ್ರಯೋಗಪುಟ
ಜಿಎಸ್‌ಟಿ – ಸುಧಾರಣೆಯೇ, ಸವಾಲೇ.
[ಬದಲಾಯಿಸಿ]ವಿಸ್ತೃತ ವಿಶ್ಲೇಷಣಾತ್ಮಕ ಲೇಖನ ಭಾರತದ ತೆರಿಗೆ ವ್ಯವಸ್ಥೆಯಲ್ಲಿ 2017ರ ಜುಲೈ 1ರಂದು ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಒಂದು ಐತಿಹಾಸಿಕ ಸುಧಾರಣೆ. ಸುಮಾರು 70 ವರ್ಷಗಳಿಂದ ನಡೆದು ಬಂದಿದ್ದ ವಿವಿಧ ತೆರಿಗೆ ಪದ್ಧತಿಗಳನ್ನು ಒಂದೇ ವ್ಯವಸ್ಥೆಯಡಿ ತರಲು ಜಿಎಸ್‌ಟಿ ನೆರವಾಗಿದೆ. “ಒಂದು ರಾಷ್ಟ್ರ – ಒಂದು ತೆರಿಗೆ – ಒಂದು ಮಾರುಕಟ್ಟೆ” ಎಂಬ ಮಹತ್ವಾಕಾಂಕ್ಷಿ ಪರಿಕಲ್ಪನೆಗೆ ಜೀವ ತುಂಬಿದ ಈ ತೆರಿಗೆ ಪದ್ಧತಿ, ದೇಶದ ಆರ್ಥಿಕತೆಯನ್ನು ಏಕೀಕರಿಸಲು ದೊಡ್ಡ [೧]ಹೆಜ್ಜೆಯಾಗಿದೆ. ಜಿಎಸ್‌ಟಿ ಜಾರಿಗೆ ಮೊದಲು ಭಾರತದಲ್ಲಿ ತೆರಿಗೆ ವ್ಯವಸ್ಥೆ ಬಹಳ ಸಂಕೀರ್ಣವಾಗಿತ್ತು. ರಾಜ್ಯದಿಂದ ರಾಜ್ಯಕ್ಕೆ ತೆರಿಗೆ ಪದ್ಧತಿ ಬದಲಾಗುತ್ತಿದ್ದುದರಿಂದ ವ್ಯಾಪಾರಿಗಳಿಗೆ ಅನೇಕ ಅಡೆತಡೆಗಳು ಎದುರಾಗುತ್ತಿದವು. ಸರಕು ಸಾಗಣೆಗೆ ಹೆಚ್ಚು ದಾಖಲೆಗಳು ಬೇಕಾಗುತ್ತಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಸಮಯ ಮತ್ತು ಇಂಧನ ವ್ಯರ್ಥವಾಗುತ್ತಿತ್ತು. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಡಿಮೆ ಇದ್ದ ಕಾರಣ ಭ್ರಷ್ಟಾಚಾರಕ್ಕೂ ಅವಕಾಶ ಇತ್ತು. ಹೆಚ್ಚಿನ ಕಾರ್ಯಗಳು ಕೈಯಲ್ಲಿ ನಡೆಯುತ್ತಿದ್ದುದರಿಂದ ವ್ಯವಹಾರ ಪ್ರಕ್ರಿಯೆ ನಿಧಾನವಾಗುತ್ತಿತ್ತು. ಈ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಕಾರ ಜಿಎಸ್‌ಟಿ ಎಂಬ ಹೊಸ ಹಾಗೂ ಏಕೀಕೃತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿತು.
ಜಿಎಸ್‌ಟಿ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಾಗಿ ರೂಪುಗೊಂಡಿದ್ದು, ನೋಂದಣಿ, ರಿಟರ್ನ್ ಸಲ್ಲಿಕೆ, ಇನ್ವಾಯ್ಸ್ ಅಪ್‌ಲೋಡ್ ಮತ್ತು ತೆರಿಗೆ ಪಾವತಿ ಎಲ್ಲವೂ ಆನ್‌ಲೈನ್ ಮೂಲಕ ನಡೆಯುತ್ತಿವೆ. ಇದರಿಂದ ವ್ಯಾಪಾರ ಪ್ರಕ್ರಿಯೆ ಹೆಚ್ಚು ಸರಳ ಮತ್ತು ವೇಗವಾಗಿದೆ. ಹಿಂದಿನ ಹಲವು ತೆರಿಗೆಗಳನ್ನು ರದ್ದುಪಡಿಸಿ ಒಂದೇ ತೆರಿಗೆಯನ್ನು ಜಾರಿಗೆ ತಂದಿರುವುದು ವ್ಯಾಪಾರಿಗಳಿಗೆ ದೊಡ್ಡ ಅನುಕೂಲವಾಗಿದೆ. ಜಿಎಸ್‌ಟಿ ದರಗಳನ್ನು ಸ್ಪಷ್ಟವಾಗಿ ವಿಂಗಡಿಸಿರುವುದರಿಂದ ಗ್ರಾಹಕರಿಗೂ ತೆರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗಿದೆ. ಪ್ರತಿಯೊಂದು ವ್ಯವಹಾರ ಡಿಜಿಟಲ್ ಆಗಿ ದಾಖಲಾಗುವುದರಿಂದ ತೆರಿಗೆ ಮರೆಮಾಚುವ ಸಾಧ್ಯತೆ ಕಡಿಮೆಯಾಗಿದೆ. ಜಿಎಸ್‌ಟಿ ಜಾರಿಯಾದ ನಂತರ ಸರ್ಕಾರದ ತೆರಿಗೆ ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಡಿಜಿಟಲ್ ಟ್ರೇಲ್ ಇರುವುದರಿಂದ ಕಪ್ಪುಹಣ ಮತ್ತು ಅಕ್ರಮ ವ್ಯವಹಾರಗಳನ್ನು ನಿಯಂತ್ರಿಸಲು ಸಹಾಯವಾಗಿದೆ. ರಾಜ್ಯಗಳ ನಡುವಿನ ವ್ಯಾಪಾರ ಸುಗಮವಾಗಿದ್ದು, ಸರಕು ಸಾಗಣೆ ವೇಗವಾಗಿ ನಡೆಯುತ್ತಿದೆ. ಇದರಿಂದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗಿ ಪೂರೈಕೆ ಸರಪಳಿಯ ಪರಿಣಾಮಕಾರಿತ್ವ ಹೆಚ್ಚಾಗಿದೆ. ಕಾಂಪೊಸಿಷನ್ ಸ್ಕೀಮ್ ಮೂಲಕ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ತೆರಿಗೆ ದರದಲ್ಲಿ ವ್ಯವಹಾರ ನಡೆಸುವ ಅವಕಾಶವೂ ಲಭ್ಯವಾಗಿದೆ.
ಆದರೆ ಜಿಎಸ್‌ಟಿ ಸಂಪೂರ್ಣವಾಗಿ ಸಮಸ್ಯೆಗಳಿಲ್ಲದ ವ್ಯವಸ್ಥೆಯೇನಲ್ಲ. ತಾಂತ್ರಿಕ ಪದ್ಧತಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಪ್ರತಿ ತಿಂಗಳು ಮತ್ತು ವರ್ಷಕ್ಕೆ ಹಲವು ರಿಟರ್ನ್‌ಗಳನ್ನು ಸಲ್ಲಿಸುವ ಹೊರೆ ವ್ಯಾಪಾರಿಗಳ ಮೇಲೆ ಹೆಚ್ಚಾಗಿದೆ. ಐಟಿಸಿ ಮ್ಯಾಚಿಂಗ್ ಸಮಸ್ಯೆಗಳು, ಪೋರ್ಟಲ್ ದೋಷಗಳು ಮತ್ತು ಇ-ವೇಬಿಲ್ ಸಂಬಂಧಿತ ತೊಂದರೆಗಳು ವ್ಯವಹಾರಕ್ಕೆ ಅಡ್ಡಿಯಾಗುತ್ತಿವೆ. ತೆರಿಗೆ ದರಗಳ ವರ್ಗೀಕರಣದಲ್ಲಿ ಗೊಂದಲವಿರುವುದರಿಂದ ಕೆಲವೊಮ್ಮೆ ತಪ್ಪುಗಳಾಗುತ್ತವೆ. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಫ್ಟ್‌ವೇರ್, ಅಕೌಂಟೆಂಟ್ ಶುಲ್ಕ ಮತ್ತು ಇತರೆ ವೆಚ್ಚಗಳು ಹೆಚ್ಚಾಗಿವೆ.
ಜಿಎಸ್‌ಟಿ ಗ್ರಾಹಕರ ಮೇಲೂ ಪ್ರಭಾವ ಬೀರಿದೆ. ಕೆಲವು ವಸ್ತುಗಳ ಬೆಲೆ ಕಡಿಮೆಯಾಗಿದ್ದರೆ, ಕೆಲವು ದಿನಸಿ ವಸ್ತುಗಳ ಬೆಲೆ ಸ್ವಲ್ಪ ಏರಿಕೆಯಾಗಿದೆ. ಆದರೂ ಪಾರದರ್ಶಕ ಬಿಲ್ಲಿಂಗ್ ವ್ಯವಸ್ಥೆಯಿಂದ ಗ್ರಾಹಕರು ತಾವು ಪಾವತಿಸುವ ತೆರಿಗೆಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ಜಿಎಸ್‌ಟಿ ಜಾರಿಯ ನಂತರ ಅಕೌಂಟಿಂಗ್, ಐಟಿ, ಲಾಜಿಸ್ಟಿಕ್ಸ್ ಮತ್ತು ಸಲಹೆಗಾರಿಕೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಡಿಜಿಟಲೀಕರಣದ ಮೂಲಕ ಭಾರತವನ್ನು ಆಧುನಿಕ ಆರ್ಥಿಕ ವ್ಯವಸ್ಥೆಯತ್ತ ಕೊಂಡೊಯ್ಯುವಲ್ಲಿ ಜಿಎಸ್‌ಟಿ ಪ್ರಮುಖ ಪಾತ್ರವಹಿಸಿದೆ.
ಭವಿಷ್ಯದಲ್ಲಿ ಜಿಎಸ್‌ಟಿಯನ್ನು ಇನ್ನಷ್ಟು ಪರಿಣಾಮಕಾರಿ ಮಾಡಲು ತೆರಿಗೆ ದರಗಳ ಸರಳೀಕರಣ, ಪೋರ್ಟಲ್ ಸುಧಾರಣೆ, ಸಣ್ಣ ವ್ಯಾಪಾರಿಗಳಿಗೆ ತರಬೇತಿ ಮತ್ತು ನಿಯಮಗಳ ಸ್ಪಷ್ಟೀಕರಣ ಅಗತ್ಯವಿದೆ. ಯಾವುದೇ ದೊಡ್ಡ ಸುಧಾರಣೆಯಂತೆ ಜಿಎಸ್‌ಟಿಗೂ ಆರಂಭಿಕ ಸವಾಲುಗಳು ಸಹಜವಾಗಿವೆ. ಅವುಗಳನ್ನು ಕ್ರಮೇಣ ಪರಿಹರಿಸುವುದೇ ವ್ಯವಸ್ಥೆಯ ಯಶಸ್ಸಿಗೆ ಕಾರಣವಾಗುತ್ತದೆ.
ಒಟ್ಟಾರೆಯಾಗಿ, ಜಿಎಸ್‌ಟಿ ಭಾರತೀಯ ತೆರಿಗೆ ವ್ಯವಸ್ಥೆಯಲ್ಲಿ ತಂದಿರುವುದು ದೊಡ್ಡ ಬದಲಾವಣೆ. ಇದು ಒಂದು ಕಡೆ ಸುಧಾರಣೆ ಆಗಿದ್ದರೆ, ಇನ್ನೊಂದು ಕಡೆ ಸವಾಲುಗಳನ್ನೂ ಹೊಂದಿದೆ. ಆದರೆ ದೀರ್ಘಾವಧಿಯಲ್ಲಿ ಜಿಎಸ್‌ಟಿ ದೇಶದ ಆರ್ಥಿಕ ಬೆಳವಣಿಗೆಗೆ ಬಲ ನೀಡುವ ಮಹತ್ವದ ಸುಧಾರಣೆಯಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ನನ್ನ ಬಗ್ಗೆ – ಹೆಚ್ ಭುವನ್ ಗೌಡ
ನನ್ನ ಹೆಸರು ಹೆಚ್ ಭುವನ್ ಗೌಡ. ನಾನು ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಬಿಕಾಂ ಅಕೌಂಟಿಂಗ್ ಮತ್ತು ಟ್ಯಾಕ್ಸೇಶನ್ ಕೋರ್ಸ್‌ನಲ್ಲಿ ಓದುತ್ತಿದ್ದೇನೆ. ನಾನು ಹುಟ್ಟಿದ್ದು ಮತ್ತು ಬೆಳೆದದ್ದು ಬೆಂಗಳೂರು ನಗರದಲ್ಲಿ, ಆದರೆ ನನ್ನ ಮೂಲ ಊರು ಮಂಡ್ಯ ಜಿಲ್ಲೆ. ಈ ಎರಡು ಸ್ಥಳಗಳ ಸಂಸ್ಕೃತಿಯ ಸಂಯೋಜನೆಯಿಂದ ನನ್ನ ವ್ಯಕ್ತಿತ್ವ ರೂಪುಗೊಂಡಿದೆ.
ನಾನು ಎಲ್ ಕೆ ಜಿ ಇಂದ 10ನೇ ತರಗತಿವರೆಗೂ ಪೋಲಿಸ್ ಪಬ್ಲಿಕ್ ಶಾಲೆಯಲ್ಲಿ ಓದಿರುತ್ತೇನೆ. ನಾನು 10ನೇ ತರಗತಿಯಲ್ಲಿ 79% ಪಡೆದಿರುತ್ತೇನೆ. ನಂತರ ನಾನು ನನ್ನ ಪಿಯುಸಿ ಶಿಕ್ಷಣವನ್ನು ಸೈಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದು, ಅಲ್ಲಿ ನಾನು 92.5% ಪಡೆದಿರುತ್ತೇನೆ.
ನನ್ನ ಅಜ್ಜಿಯ ಹೆಸರು ಶ್ರೀಮತಿ ನಿಂಗಮ್ಮ,ತಾಯಿಯ ಹೆಸರು ಶ್ರೀಮತಿ ಶೈಲಮ್ಮ ಮತ್ತು ತಂದೆಯ ಹೆಸರು ಶ್ರೀ ಎಚ್.ಕೆ. ಹುಚೇಗೌಡ. ನನಗೆ ಒಬ್ಬ ತಂಗಿ ಇದ್ದಾಳೆ ಕುಮಾರಿ ಭವ್ಯಾ ಶ್ರೀ.ಎಚ್. ನಮ್ಮ ಕುಟುಂಬ ಸದಾ ನನ್ನ ಬೆಂಬಲವಾಗಿದೆ ಮತ್ತು ಅವರ ಪ್ರೀತಿಯಿಂದಲೇ ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ.
ನನಗೆ ಪ್ರಚಲಿತ ವಿದ್ಯಮಾನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ. ನಾನು ಪ್ರತಿದಿನವೂ ದಿನಪತ್ರಿಕೆ ಓದುತ್ತೇನೆ, ಹೊಸದಾಗಿ ನಡೆಯುತ್ತಿರುವ ಸುದ್ದಿಗಳನ್ನು ಗಮನಿಸುತ್ತೇನೆ. ಜೊತೆಗೆ ಪ್ರವಾಸ ಮಾಡುವುದು, ಹೊಸ ಸ್ಥಳಗಳನ್ನು ನೋಡಿ ಅರಿಯುವುದು ನನಗೆ ತುಂಬಾ ಇಷ್ಟ. ನಾನು ಭವಿಷ್ಯದಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಲು ಬಯಸುತ್ತೇನೆ, ಇದರ ಮೂಲಕ ನನ್ನ ಹವ್ಯಾಸಗಳನ್ನು ಮತ್ತು ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ನಾನು ಕ್ರೈಸ್ಟ್ ವಿಶ್ವವಿದ್ಯಾಲಯದ ಧಮನಿ ಎಂಬ ನಾಟಕ ಕ್ಲಬ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ಇಲ್ಲಿ ನಾನು ಬೀದಿ ನಾಟಕದಲ್ಲಿ ಭಾಗವಹಿಸಿದ್ದೇನೆ. ನಾನು ದರ್ಪಣ್ ನಲ್ಲಿ 3ನೇ ಬಹುಮಾನ ಮತ್ತು ಬ್ಲಾಸಮ್ ಕಾರ್ಯಕ್ರಮದಲ್ಲಿ 2ನೇ ಬಹುಮಾನ ಪಡೆದಿದ್ದೇನೆ. ಈ ಕ್ಲಬ್‌ನಲ್ಲಿರುವ ಅನುಭವಗಳಿಂದ ನಾನು ನನ್ನ ಗೆಳೆಯರೊಂದಿಗೆ ಆತ್ಮೀಯ ಸಂಬಂಧಗಳನ್ನು ನಿರ್ಮಿಸಿದ್ದೇನೆ. ಇದು ನನ್ನ ವಿದ್ಯಾರ್ಥಿ ಜೀವನದ ಅಮೂಲ್ಯ ಅನುಭವವಾಗಿದೆ.
ನನ್ನ ಭವಿಷ್ಯದ ಗುರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಆಗುವುದಾಗಿದೆ. ಸಮಾಜಕ್ಕೆ ಸೇವೆ ಮಾಡುವ ಅವಕಾಶವಿರುವ ಈ ಹುದ್ದೆ ನನಗೆ ಶ್ರದ್ಧೆಯಿಂದ ಗೆಲ್ಲಬೇಕಾದ ಕನಸು. ನಾನು ಹಿಂದೂ ಧರ್ಮದವನು ಆದರು ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ ಹಾಗೂ ನನ್ನ ತಂದೆ ತಾಯಿಯ ಆಶೀರ್ವಾದದಿಂದ ಮುಂದುವರಿಯುತ್ತೇನೆ.
ನಾನು ವಿವಿಧ ಸಂಘಟನೆಗಳಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡಿದ್ದೇನೆ, ಉದಾಹರಣೆಗೆ ಸಿಎಸ್ಎ, ಡಿಓಸಿ ಮತ್ತು ಎಸ್ ಡಬ್ಲ್ಯೂ ಗಳಲ್ಲಿ ನಾನು ಭಾಗವಹಿಸಿದ್ದೇನೆ. ಈ ಸೇವಾ ಕೆಲಸಗಳು ನನ್ನೊಳಗಿನ ಮಾನವೀಯ ಮೌಲ್ಯಗಳನ್ನು ಬೆಳೆಸಿದವು.
ನನಗೆ ಕ್ರಿಕೆಟ್ ಆಡುವುದು ಮತ್ತು ಜಿಮ್‌ಗೆ ಹೋಗುವುದು ತುಂಬಾ ಇಷ್ಟ. ಇದು ನನ್ನ ಮನಸ್ಸನ್ನು ವಿಶ್ರಾಂತಗೊಳಿಸುತ್ತದೆ. ನಾನು ಪ್ರತಿದಿನ ಬೆಳಿಗ್ಗೆ 5:30 ಗಂಟೆಗೆ ಎದ್ದು, ಸ್ವಲ್ಪ ವ್ಯಾಯಾಮ ಹಾಗೂ ಧ್ಯಾನ ಮಾಡುತ್ತೇನೆ. ನಂತರ ದಿನಪತ್ರಿಕೆ ಓದಿ ಕಾಲೇಜಿಗೆ ಹೋಗುತ್ತೇನೆ. ನಾನು ಸಮಯಕ್ಕೆ ತಕ್ಕಂತೆ ಊಟ ಮಾಡುತ್ತೇನೆ, ಇದು ನನ್ನ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ.
ಇಲ್ಲಿರುವ ಈ ಎಲ್ಲ ಅನುಭವಗಳು ನನ್ನನ್ನು ಸದಾ ಉತ್ತಮ ವ್ಯಕ್ತಿಯಾಗಿ ರೂಪಿಸುತ್ತದೆ. ನನ್ನ ಜೀವನದಲ್ಲಿ ಶಿಸ್ತು, ಸೇವಾ ಮನೋಭಾವ, ನಂಬಿಕೆ ಮತ್ತು ಶ್ರದ್ಧೆ ಎಂಬ ಮೌಲ್ಯಗಳು ಬಹುಮುಖ್ಯವಾಗಿವೆ. ಈ ಎಲ್ಲಾ ಅಂಶಗಳು ನನ್ನ ಗುರಿ ಸಾಧಿಸಲು ಸಹಾಯ ಮಾಡುತ್ತದೆ.
- ↑ ClearTax. "Income Tax e Filing for FY 2025-26 (AY 2026-27) | Upload Form-16 for eFiling Income Tax Returns | ITR Filing". cleartax (in ಇಂಗ್ಲಿಷ್). Retrieved 2026-02-16.