ಸದಸ್ಯ:1910475varshithasg/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನ[ಬದಲಾಯಿಸಿ]

ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಾಲಯದ ಪ್ರವೇಶದ್ವಾರದ
ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿದೇವಾಲಯದ ಪ್ರವೇಶದ್ವಾರ

ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿ ಪುಣ್ಯ ಕ್ಷೇತ್ರವು ಕೆಂಕೆರೆ ಗ್ರಾಮಕ್ಕೆ ಹೊಂದಿಕೊಂಡಂತೆ ಅದರ ಈಶಾನ್ಯಕ್ಕೆ ಪೂರ್ವಾಭಿಮುಖವಾಗಿ ಸುಮಾರು ೩೫ ಕಿಲೋಮೀಟರ್ ದೂರದ ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆಯಲ್ಲಿ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಕಂಡುಬರುತ್ತದೆ. ಈ ದೇವಾಲಯವು ನೋಡುವುದಕ್ಕೆ ದ್ವೀಪದಂತೆ ಕಾಣುತ್ತದೆ ಏಕೆಂದರೆ ಇದರ ಸುತ್ತಲೂ ಕೆರೆ ಇದ್ದು ಮಧ್ಯ ಭಾಗದಲ್ಲಿ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ದೇವಾಲಯವಿದೆ. ಕೆಂಕೆರೆ ಗ್ರಾಮದ ಸುತ್ತ ಮುತ್ತಲು ಸುಮಾರು ೧೦ ರಿಂದ ೧೫ ಗ್ರಾಮಗಳಿದ್ದು, ಅಷ್ಟು ಗ್ರಾಮಕ್ಕೂ ಪ್ರಸಿದ್ದವಾದ ದೇವಾಲಯವೆಂದರೆ ಅದುವೇ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಾಲಯ. ಈ ಸ್ವಾಮಿಯವರನು "ಬೆಂಕಿ ಬೊಮ್ಮಪ್ಪ"ನೆಂದು ಕೂಡ ಕರೆಯುತ್ತಾರೆ.

ಇತಿಹಾಸ[ಬದಲಾಯಿಸಿ]

ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನ, ಕೆಂಕೆರೆ
ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಾಲಯ

ನಮ್ಮ ದೇಶದಲ್ಲಿ ಹಲವಾರು ಧರ್ಮಗಳಿವೆ ಅದರಲ್ಲಿ ನಮ್ಮ ಹಿಂದೂ ಧರ್ಮ ಕೂಡಾ ಒಂದು, ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ಪ್ರಸಿದ್ದವಾದ ದೇವಾಲಯಗಳಿವೆ. ಅಷ್ಟು ದೇವಾಲಯಕ್ಕೂ ಒಂದೊಂದು ವಿಭಿನ್ನವಾದ ಇತಿಹಾಸವಿದೆ. ಅದರಂತೆಯೇ ಈ ದೇವಾಲಯಕ್ಕೂ ಕೂಡ ಒಂದು ಸಣ್ಣ ಇತಿಹಾಸವಿದೆ. ಬ್ರಹ್ಮಲಿಂಗೇಶ್ವರನೆಂದರೆ ಇವರೊಬ್ಬ ಋಷಿಗಳು ಮತ್ತು ಇವರೊಂದಿಗೆ ಇನ್ನು ಏಳೂ ಜನ ಸಪ್ತಋಷಿಗಳು ಇದ್ದರೆಂದು ಪೂರ್ವಿಕರ ನಂಬಿಕೆ. ಈ ದೇವಸ್ಥಾನವನ್ನು ಹದಿನೆಂಟನೇಯ ಶತಮಾನದಲ್ಲಿ ಎಂದರೆ ಸುಮಾರು ೨೨೦ ವರ್ಷಗಳ ಹಿಂದೆ ಭೈರ ನಾಯಕನೆಂಬ ಪಾಳೇಗಾರ ಕಟ್ಟಿಸಿದನೆಂಬ ಕುರುಹು ಇದೆ. ಇದು ನಾಡ ಶೈಲಿಯಿಂದ ಕೂಡಿದ ದೇವಾಯಲವಾಗಿದೆ.ಈ ಸ್ವಾಮಿಗೆ ಬ್ರಹ್ಮಲಿಂಗೇಶ್ವರನೆಂದು ಏಕೆ ಕರೆಯುತ್ತಾರೆ ಎಂಬ ಯಾವ ವಿಚಾರವು ತಿಳಿದುಬಂದಿಲ್ಲ. ಆದರೆ ವರ್ತಮಾನದಲ್ಲಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರು ಉತ್ಸವದ ದಿನ ಬೆಂಕಿ, ಬಿರುಸು, ಹಾಗು ಬಾಣಗಳ ಮದ್ಯೆ ಕುಣಿಯುವ ಕಾರಣ ಸ್ವಾಮಿಯನು ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರನೆಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇದರ ಜೊತೆಗೆ ಸ್ವಾಮಿಯವರ ಮೂರ್ತಿಯನ್ನು ಊರಿನ ಎಲ್ಲಾ ಜನರು "ಪಾಲಿಕೆ"ಎಂದು ಕರೆದು ಪೂಜಿಸುತ್ತಾರೆ.

ಮಹಿಮೆ[ಬದಲಾಯಿಸಿ]

ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ಮಹಿಮೆ ಅಪಾರವಾದದ್ದು. "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎನ್ನುವ ಗಾದೆಯೊಂದಿದೆ. ಇದರ ಅರ್ಥ ಯಾವ ವ್ಯಕ್ತಿಯನ್ನಾಗಲಿ ಅಥವಾ ವಸ್ತುವನ್ನಾಗಲಿ ಅದರ ಆಕಾರ ಅಥವಾ ಬಣ್ಣ ಇವುಗಳನ್ನೆಲ್ಲಾ ನೋಡಿ ಅದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು, ಏಕೆಂದರೆ ಆ ಚಿಕ್ಕ ವಸ್ತುವಿನ ಹಿಂದೆ ಒಂದು ದೊಡ್ಡ ಗೆಲುವು ಅಥವಾ ಗೌರವ ಅಡಗಿರಬಹುದು. ಅದೇ ರೀತಿ " ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿ"ಯು ಕೂಡ, ಸ್ವಾಮಿಯ ಗುಡಿ ಚಿಕ್ಕದಾಗಿರಬಹುದು ಆದರೆ ಇದರ ಶಕ್ತಿ ಮತ್ತು ಮಹಿಮೆ ಬಹಳ ಅಪಾರವಾದದ್ದು. ಈ ಸ್ವಾಮಿಯವರ ಉತ್ಸವ ನಡೆಯಬೇಕಾದರೆ ಆ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ಅಪ್ಪಣೆಯಾಗಬೇಕು. ಆಗ ಮಾತ್ರ ಸ್ವಾಮಿಯವರ ಉತ್ಸವ ಬಹಳ ಅದ್ಧುರಿಯಾಗಿ ನಡೆಯುತ್ತದೆ, ಇಲ್ಲವಾದರೆ ಎಷ್ಟೇ ವರ್ಷಗಳು ಕಳೆದರು ಈ ಸ್ವಾಮಿಯವರ ಉತ್ಸವ ನಡೆಯುವುದಿಲ್ಲ. ಒಂದು ವೇಳೆ ಅಪ್ಪಣೆಯಾದರೂ, ಸ್ವಾಮಿಯವರ ಉತ್ಸವ ನಡೆಯುವುದು ಸೋಮವಾರದಂದು ಮಾತ್ರ ಇನ್ನ ಯಾವ ದಿನಗಳಲ್ಲೂ ನಡೆಯುವುದಿಲ್ಲ. ಇಲ್ಲಿಯ ಅತ್ಯಂತ ಅದ್ಭುತವಾದ ಮಹಿಮೆ ಎಂದರೆ ಅಪ್ಪಣೆಯಾದ ನಂತರ ( ಎಂದರೆ ೧೫ ದಿನಗಳ ಬಳಿಕ ) ಸೋಮವಾದಂದು ಸ್ವಾಮಿಯ ಉತ್ಸವಕ್ಕೆ ಎಲ್ಲಾ ಏರ್ಪಾಡುಗಳು ಜೋರಾಗಿ ನಡೆಯುತ್ತವೆ. ಆ ದಿನ ಊರಿನ ಎಲ್ಲಾ ಭಕ್ತಾದಿಗಳು ಹಾಗೂ ಅಕ್ಕಪಕ್ಕದ ಊರಿನ ಜನರೆಲ್ಲಾ ಸ್ವಾಮಿಯವರ ದೇವಸ್ಥಾನದ ಮುಂದೆ ಬಂದು ನಿಲ್ಲುತ್ತಾರೆ, ಆ ಸಂದರ್ಭದಲ್ಲಿ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯ ಪೂಜೆಗಾಗಿ ಕೋಡಿಹಳ್ಳಿ ಎಂಬ ಊರಿನಿಂದ ಪ್ರಸಿದ್ದವಾದ ಸ್ವಾಮಿಗಳು ಬಂದು ಬೆಂಕಿ ಬೊಮ್ಮಪ್ಪನಿಗೆ ಪೂಜೆ ಸಲ್ಲಿಸುತ್ತಾರೆ, ಬಹು ನಿಷ್ಠೆಯಿಂದ ಸ್ವಾಮಿಯನು ಪೂಜಿಸುತ್ತಾರೆ. ಈ ರೀತಿ ಪೂಜೆ ಮಾಡುವಾಗ ಶ್ರೀ ಕೋಡಿಹಳ್ಳಿ ಸ್ವಾಮಿಗಳು ತಮ್ಮ ಕಣ್ಣು ಮತ್ತು ಬಾಯಿಯನ್ನು ಬಟ್ಟೆಯಿಂದ ಕಟ್ಟಿಕೊಂಡು ಪೂಜೆ ಮಾಡುತ್ತಾರೆ, ಏಕೆಂದರೆ ಸ್ವಾಮಿಗೆ ಯಾವುದೇ ರೀತಿಯಿಂದಲೂ ಅಪವಿತ್ರವಾಗಬಾರದೆಂದೂ . ಈ ಪೂಜೆಯಲ್ಲಿ ೧೦೧ ಬಿಂದಿಗೆ ನೀರಿನ ಅಭಿಷೇಕ,ಕುಂಭಾಭಿಷೇಕ ಹಾಗೂ ಪಂಚಾಮೃತ ಅಭಿಷೇಕವನ್ನು ಸ್ವಾಮಿಗೆ ಮಾಡುತ್ತಾರೆ, ಹೀಗೆ ಮಾಡುವಾಗ ೧೦೧ನೇ ಬಿಂದಿಗೆಯ ನೀರಿನ ಅಭಿಷೇಕ ಮುಗಿದ ತಕ್ಷಣವೇ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ದೇವಾಲಯದ ಬೀಗವು ತನಂತೆ ತಾನೇ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಊರಿನ ಜನರೆಲ್ಲಾ ಅಲ್ಲಿಯೇ ನಿಂತು ದೇವಾಲಯದ ಕಡೆಗೆ ಗಮನವಿಟ್ಟುರುತ್ತಾರೆ. ಅದು ತೆರೆದುಕೊಂಡ ತಕ್ಷಣ ಜನರೆಲ್ಲಾ ಓಡಿ ಹೋಗಿ ಸ್ವಾಮಿಯ ಪಾಲಿಕೆಯನು ಹೊರತರುತ್ತಾರೆ. ನಂತರ ಸ್ವಾಮಿಯವರ ಪಲ್ಲಕಿ ಉತ್ಸವ ಆರಂಭವಾಗುತ್ತದೆ. ಈಗ ಕೂಡ ವರ್ತಮಾನದಲ್ಲಿ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ಉತ್ಸವ ನಡೆದು ಇಲ್ಲಿಗೆ ಸುಮಾರು ೮ ರಿಂದ ೧೦ ವರ್ಷಗಳು ಕಳೆದಿವೆ, ಇನ್ನು ಕೂಡ ಸ್ವಾಮಿಯು ತಮ್ಮ ಜಾತ್ರೆ ನಡೆಸಲು ಅಪ್ಪಣೆ ನೀಡಿಲ್ಲ. ಇದು ಸ್ವಾಮಿಯವರ ಒಂದು ವಿಶಿಷ್ಟವಾದ ಮಹಿಮೆ.

ಉತ್ಸವದ ಸಿದ್ದತೆಗಳು[ಬದಲಾಯಿಸಿ]

ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯ ಜಾತ್ರಾಮಹೋತ್ಸವದ ಮುನ್ನ, ೩ ದಿನಗಳು ಮುಂಚಿತವಾಗಿ ಗ್ರಾಮದ ಭಕ್ತಾದಿಗಳು ಮತ್ತು ಅಕ್ಕಪಕ್ಕದ ಗ್ರಾಮದ ಜನಗಳು ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯ ಉತ್ಸವದ ಬಗ್ಗೆ ತುಂಬಾ ಕಾಳಜಿವಹಿಸುತ್ತಾರೆ, ಅದಕ್ಕಾಗಿ ಹಲವಾರು ಸಿದ್ಧತೆಗಳನ್ನು ಮಾಡಿಕೊಳುತ್ತಾರೆ. ಈ ಉತ್ಸವಕ್ಕಾಗಿ ಊರಿನ ಜನರು ಮೊದಲು ಮಾಡುವ ಕೆಲಸ ತಮ್ಮ ಮನೆಯಲ್ಲಿರುವ ಪಾದರಕ್ಷೆಗಳನ್ನು ತೆಗೆದುಕೊಂಡು ಹೋಗಿ ಊರ ಹೊರಗಿನ ತೋಟದ ಮನೆಯಲ್ಲಿ ಇರಿಸುತ್ತಾರೆ. ಉತ್ಸವಕ್ಕೆ ಬರುವಂತಹ ಭಕ್ತಾದಿಗಳಾಗಲಿ ಅಥವಾ ಅಕ್ಕಪಕ್ಕದ ಹಳ್ಳಿಯವರಾಗಲಿ ಪಾದರಕ್ಷೆಯನ್ನು ಹಾಕಿಕೊಂಡು ಊರಿನ ಒಳಗೆ ಬರುವಂತಿಲ್ಲ ಬದಲು ಅವರು ಬರಿಗಾಲಿನಲ್ಲೆ ಬರುತ್ತಾರೆ.ಇಲ್ಲಿಂದ ಹಿಡಿದು ಉತ್ಸವ ಮುಗಿಯುವ ತನಕ ತಮ್ಮ ಮನೆ ಅಥವಾ ಊರಿನಲ್ಲಿ ಯಾವುದೇ ಅಪವಿತ್ರವಾಗದಂತೆ ಅಥವಾ ಮುಟ್ಟು-ತೊಟ್ಟು ಆಗದಂತೆ ನೋಡಿಕೊಳ್ಳಬೇಕು.ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮಾಂಸವನ್ನು ತಿಂದು ಊರ ಒಳಗೆ ಬರುವಂತಿಲ್ಲ ಹಾಗೂ ಮನೆಯಲ್ಲೂ ಮಾಡುವಂತಿಲ್ಲ , ಯಾವುದೇ ಸಾವು-ನೋವು ಊರಿನಲ್ಲಿ ಸಂಭವಿಸುವಂತಿಲ್ಲ , ಯಾವ ಮಗುವೂ ಊರಿನಲ್ಲಿ ಈ ದಿನಗಳಲಿ ಜನಿಸುವಂತಿಲ್ಲ ಒಂದು ವೇಳೆ ಅಂತಹ ಸಂದರ್ಭವಿದ್ದರೆ ಅವರನ್ನು ಬೇರೆಯ ಊರಿಗೆ ಕಳಿಸುತ್ತಾರೆ. ಇನ್ನೊಂದು ಮುಖ್ಯ ವಿಚಾರವೆಂದರೆ ಕೆಳವರ್ಗದ ಜನಗಳು ಯಾವುದೇ ಕಾರಣಕ್ಕೂ ಊರ ಒಳಗೆ ಉತ್ಸವ ಮುಗಿಯುವವರೆಗೂ ಕಾಲಿಡುವಂತಿಲ್ಲ. ಈ ರೀತಿ ಯಾವ ಮುಟ್ಟು-ತೊಟ್ಟು ಆಗದಿದ್ದರೆ ಮಾತ್ರ ಈ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯು ತಮ್ಮ ಉತ್ಸವ ನಡೆಯುವುದಕ್ಕೆ ಅನುಮತಿ ನೀಡುತ್ತಾರೆ. ಸ್ವಾಮಿ ಅನುಮತಿ ಕೊಟ್ಟರೆಂದರೆ ಉತ್ಸವ ನಡೆಯುವ ದಿನಗಳಲ್ಲಿ ಯಾವ ಸಾವು-ನೋವುಗಳಾಗಲಿ, ಕಷ್ಟಗಳಾಗಲಿ ಬರುವುದಿಲ್ಲವೆಂದೆ ಅರ್ಥ. ಕೆಂಕೆರೆ ಗ್ರಾಮವು ಸುಮಾರು ೩೦೦೦ ಜನಸಂಖ್ಯೆಯುಳ್ಳ ಒಂದು ದೊಡ್ಡ ಊರು.ಗ್ರಾಮಸ್ಥರು ಸ್ವಾಮಿಯವರ ಸೇವೆಗೆ ೪ ಗುಂಪುಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅದರಲ್ಲಿ ಮೊದಲ ಗುಂಪಿನವರು ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ಉತ್ಸವಕ್ಕೆ ೨ ದಿನಗಳು ಉಪವಾಸವಿದ್ದು ಮದ್ದುಗುಂಡು ಬಿರುಸು ಬಾಣಗಳನ್ನು ತಯಾರುಮಾಡುತ್ತಾರೆ. ನಂತರ ಎರಡನೇ ಗುಂಪಿನವರನು , ದೇವರನ್ನು ಉತ್ಸವದ ದಿನದಂದು ತಮ್ಮ ಹೆಗಲ ಮೇಲೆ ಹೊತ್ತುಕುಣಿಯುವ ಕೆಲಸಕ್ಕೆ ನೇಮಿಸುತ್ತಾರೆ. ಈ ಗ್ರಾಮದಲ್ಲಿ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರನು ತಮ್ಮ ಹೆಗಲ ಮೇಲೆ ಹೊತ್ತು ಕುಣಿಯುವ ಅವಕಾಶವಿರುವುದು ಕೇವಲ ಲಿಂಗಾಯಿತ ಬುಡಕಟ್ಟು ಜನರಿಗೆ ಮಾತ್ರ, ಈ ಗುಂಪಿನವರು ೨ ದಿನಗಳು ಉಪವಾಸವಿರುತ್ತಾರೆ.ಇದಲ್ಲದೆ ಸೋಮವಾರದಂದು ಅವರ ಮಕ್ಕಳಿಗೆ ಹಾಲನ್ನು ಕುಡಿಸುವುದಿಲ್ಲ, ಮತ್ತು ತುಂಬಾ ಶುಚಿಯಾಗಿ ಇರುತ್ತಾರೆ. ನಂತರ ಸ್ವಾಮಿಯವರ ಉತ್ಸವದ ದಿನದಂದು ಮೂರನೇ ಗುಂಪಿನವರು ಗ್ರಾಮದ ಎಲ್ಲಾ ಬೀದಿಗಳನ್ನು ಸ್ವಚ್ಛಮಾಡುವುದು, ತದನಂತರ ನಾಲ್ಕನೇ ಗುಂಪಿನವರು ದೇವರ ಸೇವೆಗೆ ಬೇಕಾದ ಎಲ್ಲಾ ಸಲಕರಣೆಗಳನ್ನು ಒದಗಿಸುವುದು ಹಾಗೂ ದೇವರ ಕೆಲಸ ಕಾರ್ಯಗಳಿಗೆ ನೆರವಾಗುವುದು. ಈ ರೀತಿ ಊರಿನ ಜನರೆಲ್ಲಾ ತಮ್ಮ ತಮ್ಮ ಕೆಲಸಗಳನ್ನು ತಾವೇ ವಹಿಸಿಗೊಂಡು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.

ಜಾತ್ರಾಮಹೋತ್ಸವ[ಬದಲಾಯಿಸಿ]

ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಎಷ್ಟೋ ವರ್ಷಗಳಿಗೊಮ್ಮೆ ನಡೆಯುತ್ತದೆ. ದೇವರ ಅಪ್ಪಣೆಯಾದ ನಂತರ ಜನರೆಲ್ಲಾ ಉತ್ಸವದ ದಿನ (ಎಂದರೆ ಸೋಮವಾರ ) ದೇವಸ್ಥಾನದ ಮುಂದೆ ಬಂದು ನಿಲ್ಲುತ್ತಾರೆ ದೇವಾಲಯದ ಬೀಗ ತನಂತೆ ತಾನೇ ತೆರೆದುಕೊಳುತ್ತದೆ. ಸೋಮವಾರದಂದು ನಡೆಯುವ ಉತ್ಸವದಲ್ಲಿ ಸ್ವಾಮಿಯ ಪಲ್ಲಕ್ಕಿಯನು ಬಹಳ ಸೊಗಸಾಗಿ ಸಿಂಗರಿಸಿರುತ್ತಾರೆ. ಉತ್ಸವ ನಡೆಯುವ ದಿನ ಸ್ವಾಮಿಯ ಪಾಲಿಕೆಯನ್ನು ಹೊರ ಆವರಣಕ್ಕೆ ತಂದು ಕೂರಿಸಿ ಅಲ್ಲಿ ಪೂಜೆಗಳನ್ನು ನೆರವೇರಿಸುತ್ತಾರೆ. ಈ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯ ವಿಶೇಷವೇನೆಂದರೆ ಸ್ವಾಮಿಯನು ಋಷಿಮುನಿಗಳು ಧರಿಸುವ ಕಾವಿ ವಸ್ತ್ರದಿಂದ ಶೃಂಗರಿಸುತ್ತಾರೆ. ಅದು ಸ್ವಾಮಿಯವರಿಗೆ ತುಂಬಾ ಇಷ್ಟವಾದ ವಸ್ತ್ರವೆಂದು ಅಲ್ಲಿನ ಗ್ರಾಮದ ಜನರ ನಂಬಿಕೆ. ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ಪಲ್ಲಕ್ಕಿ ಉತ್ಸವದಲ್ಲಿ, ಸ್ವಾಮಿಯ ಪಾಲಿಕೆಯು ದೇವಾಲಯದಿಂದ ಕಾಡಿಗೆ ಹೋಗುವವರೆಗೂ ಭಕ್ತಾದಿಗಳು ದಾರಿಯುದ್ದಕ್ಕೂ ಕರ್ಪುರವನ್ನು ಹಚ್ಚಿ ಸ್ವಾಮಿಯ ಕೃಪೆಗೆ ಮತ್ತು ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಆ ದಿನದಂದು ಸ್ವಾಮಿಯವರ ಪಲ್ಲಕ್ಕಿ ಉತ್ಸವ ಊರಿನ ಹೊರ ವಲಯದಲ್ಲಿ ನಡೆಯುತ್ತದೆ. ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯನು ಕಾಡಿಗೆ ಕರೆದುಕೊಂಡು ಹೋಗುವವರೆಗೂ ಜನರು ದೇವರನ್ನು ಹಿಂಬಾಲಿಸುತ್ತಾರೆ. ಏಕೆಂದರೆ ಅಂದಿನ ದಿನ ಪಲ್ಲಕ್ಕಿ ಉತ್ಸವ ನಡೆಯುವಾಗ ಯಾವ ಕಾರಣಕ್ಕೂ ದೇವರು ಊರಿನ ಒಳಗಡೆ ಪ್ರವೇಶಮಾಡುವಂತಿಲ್ಲ, ಒಂದು ವೇಳೆ ಊರಿನ ಒಳಗಡೆ ದೇವರು ಪ್ರವೇಶ ಮಾಡಿದರೆ ಊರಿಗೆ ಬೆಂಕಿ ಬಿಳುತ್ತದೆಂದು ಗ್ರಾಮದ ಜನರ ಮತ್ತು ಭಕ್ತಾದಿಗಳ ಭೀತಿ. ಆದ್ದರಿಂದ ಸ್ವಾಮಿಯವರು ಊರಿನ ಹೊಳಗಡೆ ಪ್ರವೇಶಮಾಡಲು ಬಂದರೆ ಗ್ರಾಮದ ಜನರು ಮತ್ತು ಭಕ್ತಾದಿಗಳು ಗ್ರಾಮದ ಬೀದಿಯಲ್ಲಿ ಹಡ್ಡಲಾಗಿ ಮಲಗುತ್ತಾರೆ, ಈ ಸಂದರ್ಭದಲ್ಲಿ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರು ಹಿಂತಿರುಗಿ, ಕಾಡಿನ ಒಳಗೆ ಪ್ರವೇಶಿಸುತ್ತಾರೆ ಆಗ ಎಲ್ಲಾ ಜನರು ಊರಿಗೆ ಹಿಂದಿರುಗುತ್ತಾರೆ. ದೇವರನ್ನು ತಮ್ಮ ಹೆಗಲ ಮೇಲೆ ಹೊತ್ತವರು ಮಾತ್ರ ಕಾಡಿನಲ್ಲಿ ಮುಂದೆ ಸಾಗಿ ಅಲ್ಲಿ ಇರುವಂತಹ ಒಂದು ದೊಡ್ಡ ಆಲದಮರದ ಬಳಿ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯನು ಕುಳ್ಳಿರಿಸಿ, ಪೂಜೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಅಲ್ಲಿಯೇ ಇರಿಸಿ ಅವರು ಅಲ್ಲಿಂದ ದೂರ ಬಂದು ಬೋರಲಾಗಿ ಮಲಗುತ್ತಾರೆ. ಆಗ ಅಲ್ಲಿ ೭ ಜನ ಸಪ್ತಋಷಿಗಳು ಬಂದು ತಾವು ಮಾಡಬೇಕಾದ ಪೂಜೆಗಳನ್ನೆಲ್ಲ ಮಾಡಿ ಮುಗಿಸಿ ಅದೃಶ್ಯರಾಗುತ್ತಾರೆ. ತದನಂತರ ಅಲ್ಲಿ ಮಲಗಿರುವ ಜನಗಳಿಗೆ ಕೆಲವು ಗಂಟೆಗಳ ನಂತರ ಎರಡು ಬಾರಿ ಗಂಟೆ ಶಬ್ದ ಕೇಳಿಸುತ್ತದೆ ಆಗ ಅವರು ಹೋಗಿ ನೋಡಿದಾಗ ಅಲ್ಲಿ ಸವೆದ ವಿಭೂತಿ ಮತ್ತು ಪೂಜೆಗಳೆಲ್ಲಾ ಮಾಡಿ ಮುಗಿದಿರುತ್ತದೆ. ನಂತರ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯು ಊರಿನ ಒಳಗೆ ಪ್ರವೇಶಿಸುತ್ತಾರೆ. ಸ್ವಾಮಿಯವರು ಕಾಡಿನಿಂದ ಊರಿಗೆ ತೆರಳುವ ಮುನ್ನ ಊರಿನಲ್ಲಿ ಹತ್ತಿ ಬಸವೇಶ್ವರ ಸ್ವಾಮಿಯವರ ಉತ್ಸವ ನಡೆಯುತ್ತದೆ.ಈ ಉತ್ಸವದಲ್ಲಿ ಕಡಿಮೆ ಎಂದರು ೫೦ ಸಾವಿರ ಜನ ಭಕ್ತಾದಿಗಳು ಬಂದು ಸೇರುತ್ತಾರೆ ಹಾಗೂ ಈ ಉತ್ಸವದಲ್ಲಿ ಕೆಲವು ಪ್ರಸಿದ್ಧ ಕ್ಷೇತ್ರಗಳ ಸ್ವಾಮೀಜಿಯವರು ಉಪಸ್ಥಿತರಿರುತ್ತಾರೆ ಅದರಲ್ಲಿ ಪ್ರಮುಖವಾಗಿ ಹಿಂದೆ ನಡೆದ ಶ್ರೀ ಬೆಂಕಿ ಬೊಮ್ಮಪ್ಪನ ಉತ್ಸವದಲ್ಲಿ ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೂಡ ಭಾಗವಹಿಸಿ ಶ್ರೀ ಬೆಂಕಿ ಬೊಮ್ಮಪ್ಪನ ಕೃಪೆಗೆ ಪಾತ್ರರಾಗಿದ್ದರು, ಹೀಗೆ ನಡೆಯುವ ಜಾತ್ರಾಮಹೋತ್ಸವದಲ್ಲಿ  ಗಣ್ಯರು ಸಹ ಉಪಸ್ಥಿತರಿದ್ದು ಸ್ವಾಮಿಯ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಂತರ ಆ ರಾತ್ರಿ ಪೂರ್ತಿ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯು ಮದ್ದುಗುಂಡುಗಳ ಮತ್ತು ಬಿರುಸಿನ ಬೆಂಕಿಯಲ್ಲಿಯೇ ಕುಣಿಯುತ್ತಾರೆ. ರಾತ್ರಿಯೆಲ್ಲಾ ಬೆಂಕಿಯಲ್ಲಿ ಕುಣಿದರು ಪಲ್ಲಕ್ಕಿಗೆ ಹೊದಿಸಿರುವ ಕಾವಿ ವಸ್ತ್ರ ಮತ್ತು ಹೂವಿನ ಹಾರಗಳು ಮಾತ್ರ ಸುಡುವುದಿಲ್ಲ. ಪಲ್ಲಕ್ಕಿಯನು ಹೊತ್ತು ಕುಣಿಯುವ ಜನರು ಹಾಗೂ ವಾದ್ಯ ವೃಂದದವರು ಸಹ ಬೆಂಕಿಯಲ್ಲೇ ಕುಣಿಯುತ್ತಾರೆ, ಆದರೂ ಅವರಿಗೆ ಏನು ಆಗುವುದಿಲ್ಲ ಆ ಬೆಂಕಿ ಬ್ರಹ್ಮಲಿಂಗೇಶ್ವರನ ಆಶೀರ್ವಾದ ಸದಾ ಅವರ ಮೇಲೆ ಇರುತ್ತದೆ, ಇದು ಒಂದು ಅಚ್ಚರಿಯ ಸಂಗತಿ. ಸ್ವಾಮಿಯು ಬಹಳ ರಭಸದಿಂದ ಕುಣಿಯುವಾಗ ಭಕ್ತಾದಿಗಳು ಬಹು ಎಚ್ಚರದಿಂದ ದೂರದಲ್ಲಿ ನಿಂತು ವೀಕ್ಷಿಸಬೇಕು ಎಚ್ಚರ ತಪ್ಪಿದರೆ ತೊಂದರೆಗೊಳಗಾಗುತ್ತಾರೆ. ಆ ಪಲ್ಲಕ್ಕಿಯಲ್ಲಿ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರರ ಜೊತೆಗೆ ೭ ಜನ ಸಪ್ತ ಋಷಿಗಳು ಇದ್ದು, ಅವರು ಲೋಕದ ಆಗು ಹೋಗುಗಳ ಬಗ್ಗೆ ಚರ್ಚಿಸುತ್ತಾರೆ ಎಂಬುದು ಗ್ರಾಮದ ನಂಬಿಕೆಯಾಗಿದೆ. ಈ ಪಲ್ಲಕಿ ಉತ್ಸವ ಮುಗಿದ ನಂತರ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯನು ತೇರಿನ ಮೇಲೆ ಕೂರಿಸುತ್ತಾರೆ. ನಂತರ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ಉತ್ಸವ ರಾತ್ರಿ ೧೨ ಗಂಟೆಯಿಂದ ಪ್ರಾರಂಭವಾಗುತ್ತದೆ, ಈ ಉತ್ಸವಕ್ಕಾಗಿ ತೇರಿನೊಳಗೆ ಸ್ವಾಮಿಯವರಿಗಾಗಿ ೧೦೧ ವಿಭೂತಿ, ೧೦೧ ಬಾಳೆಹಣ್ಣು, ೧೦೧ ತಂಬಿಟ್ಟು, ಮತ್ತು ಚಿಗಣಿಯನ್ನು ಇಟ್ಟಿರುತ್ತಾರೆ, ಈ ಸ್ವಾಮಿಯ ತೇರನು ಏಳೆಯುವ ಸಂದರ್ಭದಲ್ಲಿ ತೇರಿನ ಮೇಲೆ ಜನರೆಲ್ಲರೂ ತೆಂಗಿನ ಕಾಯಿ ,ಬಾಳೆ ಹಣ್ಣು ಹಾಗೂ ವಿಧವಾದ ಅರಕೆಯ ವಸ್ತುಗಳನ್ನು ಹಾಕಿ ತಮ್ಮ ಹರಕೆಯನ್ನು ಪೂರೈಸಿ ತುಂಬಾ ಭಯ-ಭಕ್ತಿಯಿಂದ ತೇರನು ಬೆಳಿಗ್ಗೆ ೪ ಗಂಟೆಯ ತನಕ ಎಳೆಯುತ್ತಾರೆ. ನಂತರ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯು ಕೆಂಡದ ಮೇಲೆ ನಡೆಯುತ್ತಾರೆ. ಇಲ್ಲಿಗೆ ಸ್ವಾಮಿಯವರ ಉತ್ಸವ ಮುಗಿಯುತ್ತದೆ, ಇಲ್ಲಿ ಇನ್ನೊಂದು ವಿಶೇಷವೇನೆಂದರೆ ತೇರಿನೊಳಗೆ ಇಟ್ಟಿದ್ದ ೧೦೧ ಬಾಳೆಹಣ್ಣು ,ತಂಬಿಟ್ಟು ಇತರೆ ಪದಾರ್ಥಗಳು ಬೆಳಗಾಗುವುದರೊಳಗೆ ಖಾಲಿಯಾಗಿರುತ್ತದೆ. ನಂತರ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯನು ಗುಡಿ ತುಂಬಿಸುವ ವೇಳೆಗೆ ಸ್ವಾಮಿಯವರಿಗೆ ಮಹಾ ಮಂಗಳಾರತಿ ಮಾಡುತ್ತಾರೆ ನಂತರ ಸ್ವಾಮಿಯವರು ದೇವಾಲಯದೊಳಗೆ ಐಕ್ಯವಾಗುತ್ತಾರೆ ಆ ಸಂದರ್ಭದಲ್ಲಿ ತೇರಿನೊಳಗೆ ಇದ್ದ ಸ್ವಾಮಿಯವರ ಪಾಲಿಕೆಯು ಕೂಡ ಅದೃಶ್ಯವಾಗಿರುತ್ತದೆ. ನಂತರ ಕ್ಷೇತ್ರ ಕೆಂಕೆರೆಯಲ್ಲಿ ೪ ದಿನಗಳ ಕಾಲ ಗ್ರಾಮ ದೇವತೆಗಳ ಉತ್ಸವ ನಡೆಯುತ್ತದೆ. ಮಂಗಳವಾರದಂದು ಗ್ರಾಮದ ದೇವತೆ ಕಣಿವೆಯಮ್ಮನ ಉತ್ಸವ ಹಾಗೂ ಮುಂದಿನ ದಿನಗಳಲ್ಲಿ ಗುಡಿಸಲಮ್ಮ, ದೊಡಮ್ಮ, ಚಿಕ್ಕಮ್ಮ, ಕೋಟೆಕೆರೆಯಮ್ಮ, ಮತ್ತು ಇತರೆ ದೇವರುಗಳ ಉತ್ಸವ ವಿಜೃಂಬಣೆಯಿಂದ ನಡೆಯುತ್ತದೆ, ನಂತರ ಅಷ್ಟು ದೇವರುಗಳಿಗೆ ಪೂಜೆಯನ್ನು ಸಲ್ಲಿಸಿ ಗುಡಿದುಂಬಿಸುತ್ತಾರೆ. ಆ ಜಾತ್ರಾ ಮಹೋತ್ಸವದಂದು ಹಣದ ರೂಪದಲ್ಲಿ ಹಾಗೂ ದವಸ ಧಾನ್ಯಗಳನ್ನು ನೀಡುವ ಮೂಲಕ ದೇವರಿಗೆ ಅರಕೆಯನ್ನು ಅರ್ಪಿಸುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು[ಬದಲಾಯಿಸಿ]

ಈ ಉತ್ಸವ ನಡೆಯುವುದರ ಜೊತೆಗೆ ಗ್ರಾಮದಲ್ಲಿ ಕೆಲವು ಮನೋರಂಜನಾ ಕಾರ್ಯಕ್ರಮಗಳು ಇರುತ್ತವೆ. ಕೋಲಾಟ, ಡೊಳ್ಳುಕುಣಿತ, ವೀರಗಾಸೆ ಮತ್ತು ಕೀಲುಕುದುರೆ ಇವು ಮನೋರಂಜನೆಗಾದರೆ ,ಸ್ಪರ್ಧಾತ್ಮಕವಾಗಿ ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆ ಹಾಗೂ ಗಂಡಸರಿಗೆ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಿರುತ್ತಾರೆ. ಇನ್ನು ಚಿಕ್ಕ ಮಕ್ಕಳಿಗಾಗಿ ವಿಧವಾದ ಆಟ ಆಡುವಂತಹ ವಸ್ತುಗಳನ್ನು ಏರ್ಪಡಿಸುತ್ತಾರೆ. ಹೀಗೆ ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಕೊನೆಗೊಳ್ಳುತ್ತದೆ.

ಮನುಷ್ಯನ ಜೀವನದಲ್ಲಿ ಒಮ್ಮೆ ಯಾದರು ಈ ಉತ್ಸವವನ್ನು ನೋಡಲೇಬೇಕು, ನೋಡಿ ಕಣ್ಣುತುಂಬಿಕೊಳ್ಳಬೇಕು. ಸ್ವಾಮಿಯವರ ಮಹಿಮೆ ಅಪಾರವಾದದ್ದು ಅದನ್ನು ವರ್ಣಿಸಲು ಸಾಧ್ಯವಿಲ್ಲ. ಶ್ರೀ ಬೆಂಕಿ ಬ್ರಹ್ಮಲಿಂಗೇಶ್ವರ ಸ್ವಾಮಿಯ ಉತ್ಸವ ಕೇವಲ ಒಂದು ದಿನದ ಉತ್ಸವವಲ್ಲ , ಅದು ಒಂದು ವಾರದ ಹಬ್ಬ, ಸಂಭ್ರಮ ಹಾಗೂ ಸಡಗರ. ಅದನ್ನು ಒಮ್ಮೆಯಾದರೂ ನೋಡಿ ಆನಂದಿಸಬೇಕು.

ಉಲ್ಲೇಖಗಳು[ಬದಲಾಯಿಸಿ]

<r>Mahalingappa, C. M. (2020, June 6). Sri benki bramhalingeshwaraswamy temple [Telephone interview].</r>

<r>Taramani, E. (2020, June 9). Sri benkibramhalingeshwaraswamy temple kenkere [Telephone interview].</r>