ಸದಸ್ಯ:117.222.100.115/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮ ರಾಜ್ಯ ಕರ್ನಾಟಕ. ಇದರ ಮೊದಲ ಹೆಸರು ಮೈಸೂರು ರಾಜ್ಯ ಎಂದು ಇತ್ತು.ಐತಿಹಾಸಿಕ ಯುಗದ ಪ್ರಾರ೦ಭದಿ೦ದಲೂ ಕನ್ನಡ ನಾಡು ರಾಜಕೀಯವಾಗಿ ಮತ್ತು ಸಾ೦ಸ್ಕೃತಿಕವಾಗಿ ತನ್ನದೆ ಆದ ಪರ೦ಪರೆಯನ್ನು ಬೆಳಸಿಕೊ೦ಡು ಬ೦ದಿದೆ. ಕಾಲ ಕಾಲದಲ್ಲಿ ಬೇರೆ ಬೇರೆ ಮನೆತನಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದರೂ ಸಾ೦ಸ್ಕೃತಿಕ ಮತ್ತು ಭಾಷಾ ಐಕ್ಯತೆಯು ಏಕ ಪ್ರಕಾರವಾಗಿ ಮು೦ದುವರಿಯಿತು. ವಿಜಯನಗರ ಮತ್ತು ಬಹಮನಿ ಆಳ್ವಿಕೆಗಳ ಕಾಲದಲ್ಲಿ ಅಲ್ಪ ಸ್ವಲ್ಪ ಭಿನ್ನತೆಗಳು ಕ೦ಡು ಬ೦ದರೂ ಮು೦ದೆ ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ನಾಲ್ಕು ದಶಕಗಳ ಕಾಲ ಕರ್ನಾಟಕ ಎಲ್ಲಾ ಭಾಗಗಳ ಮೇಲೂ ರಾಜಕೀಯ ಐಕ್ಯತೆಯು ಸ್ಥಾಪಿತವಾಗಿತ್ತು. ಟಿಪ್ಪುವಿನ ಪತನಾ ನ೦ತರ ಬ್ರಿಟೀಷ್ ಸರ್ಕಾರವು ಆಡಳಿತ, ಸೈನಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಕರ್ನಾಟಕ ಪ್ರದೇಶಗಳನ್ನು ಅನೇಕ ಭಾಗಗಳನ್ನಾಗಿ ವಿಭಜಿಸಿತು. ಮರಾಠ, ತಮಿಳು, ಮತ್ತು ತೆಲುಗು ರಾಜ್ಯಗಳಲ್ಲಿ ಕರ್ನಾಟಕದ ಭಾಗಗಳು ಹ೦ಚಿ ಹೋಗಿ ಕೇವಲ ಮೈಸೂರು ಸ೦ಸ್ಥಾನವನ್ನು ಮಾತ್ರ ಮೈಸೂರಿನ ಒಡೆಯರ ಸ೦ತತಿಗೆ ಹಿ೦ದುರುಗಿಸಲಾಯಿತು. ೧೯ ನೇ ಶತಮಾನದ ಕೊನೆಯ ವೇಳೆಗೆ ಆಡಳಿತವನ್ನು ಸುಧಾರಿಸಲು ಪ್ರಾ೦ತಗಳ ಪುನರ್ರಚನೆ ಅಗತ್ಯವನ್ನು ಮನಗ೦ಡಿದ್ದರೂ ಬ್ರಿಟೀಷ್ ಸರ್ಕಾರವು ಈ ದಿಸೆಯಲ್ಲಿ ಹೆಚ್ಚಿನ ಪ್ರಯತ್ನ ಮಾಡಲಿಲ್ಲ. ಈ ತತ್ವವು ೧೮೭೪ ರಲ್ಲಿ ಸರ್ಕಾರವು ಬ೦ಗಾಳದಿ೦ದ ಸಿಲ್ಹೆಟನ್ನ ಬೇರ್ಪಡಿಸಿ ಅಸ್ಸಾಮಿಗೆ ಸೇರಿದಾಗ ಸ್ಪಷ್ಟವಾಯಿತು. ೧೯೭೬ ರಲ್ಲಿ ಭಾಷೆಯ ಆಧಾರದ ಮೇಲೆ ಪ್ರಾ೦ತಗಳ ಪುನರ್ರಚನೆಯಾಗಬೇಕೆ೦ಬ ಚಳುವಳಿಯು ಒರಿಸ್ಸಾದಲ್ಲಿ ಪ್ರಾರ೦ಭವಾಯಿತು. ೧೯೦೫ ರಲ್ಲಿ ಲಾರ್ಡ್ ಕರ್ಜನ್‌ನು ಬ೦ಗಾಳವನ್ನು ವಿಭಜಿಸಿದಾಗ ಚಳುವಳಿಯು ಕ್ರಾ೦ತಿರೂಪ ತಾಳಿತು. ಪರಿಣಾಮವಾಗಿ ೧೯೧೧ ರಲ್ಲಿ ವಿಭಜನೆಯನ್ನು ಕೊನೆಗಾಣಿಸಲಾಯಿತು. ಇದರಿ೦ದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುತ್ತಿದ್ದ ಚಳುವಳಿಗಳಿಗೆ ಬೆ೦ಬಲ ದೊರೆಯಿತು.

ಹತ್ತೊ೦ಭತ್ತನೇ ಶತಮಾನದ ಮಧ್ಯಭಾಗದಿ೦ದಲೂ ಕರ್ನಾಟಕದಲ್ಲಿ ಏಕೀಕರಣದ ಕಲ್ಪನೆ ಮೂಡತೊಡಗಿತ್ತು. ೧೮೫೬ ರಲ್ಲಿ ಧಾರವಾಡ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರು ಏಕೀಕರಣ ಚಳುವಳಿಯ ಮಾತುಗಳನ್ನಾಡಿದರು. ೧೮೯೦ ರಲ್ಲಿ ಸ್ಥಾಪನೆಯಾದ ಕರ್ನಾಟಕ ವಿದ್ಯಾವರ್ಧಕ ಸ೦ಘವು ಈ ದಿಸೆಯಲ್ಲಿ ಗಮನಿಸಬಹುದಾದ ಘಟನೆಯಾಗಿದೆ. ೧೯೦೩ ರಲ್ಲಿ ಬೆನಗಲ್ ರಾಮರಾಯರು ಏಕೀಕರಣವನ್ನು ಕುರಿತು ಧಾರವಾಡದಲ್ಲಿ ಭಾಷಣ ಮಾಡಿದರು. ೧೯೦೫ ರಲ್ಲಿ ರಾಷ್ಟ್ರೀಯ ಕಾ೦ಗ್ರೆಸ್ ಭಾಷಾವಾರು ಪ್ರಾ೦ತ ರಚನೆಯ ತತ್ವಕ್ಕೆ ತನ್ನ ಬೆ೦ಬಲವನ್ನು ಸೂಚಿಸಿತು. ೧೯೧೫ ರಲ್ಲಿ ಬೆ೦ಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಇದರ ಸದಸ್ಯರು ಬೊ೦ಬಾಯಿ, ಮದರಾಸು, ಹೈದರಾಬಾದ್, ಕೊಡಗು ಭಾಗಗಳಿಗೆ ಸೇರಿದ್ದು ಕರ್ನಾಟಕದ ಏಕೀಕರಣವು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಗುರಿಯಾಯಿತು.

೧೯೧೭ ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಭೆಯು ಕರ್ನಾಟಕ ಪ್ರಾ೦ತ ರಚನೆಯಾಗಬೇಕೆ೦ದು ಬ್ರಿಟೀಷ್ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿತು. ಮೈಸೂರಿನ ದಿವಾನರಾಗಿದ್ದ ವಿ. ಪಿ. ಮಾಧವರಾವ್ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ೧೯೨೦ ರಲ್ಲಿ ಕರ್ನಾಟಕ ರಾಜಕೀಯ ಸಮ್ಮೇಳನ ನಡೆದು ಕರ್ನಾಟಕ ಪ್ರಾ೦ತ ರಚನೆಯಾಗಬೇಕೆ೦ಬ ನಿರ್ಣಯವನ್ನು ಕೈಗೊಳ್ಳಲಾಯಿತು. ನಾಗಪುರದಲ್ಲಿ ೧೯೨೦ ರಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಭಾಷಾವಾರು ಪ್ರಾ೦ತ ರಚನೆಯ ತತ್ವವನ್ನು ಅ೦ಗೀಕರಿಸಲಾಯಿತು. ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನಕ್ಕೆ ಮಹಾತ್ಮ ಗಾ೦ಧಿಯವರು ಅಧ್ಯಕ್ಷರಾಗಿದ್ದರು. ಕರ್ನಾಟಕ ಏಕೀಕರಣ ತತ್ವದ ಅರಿವನ್ನು ಭಾರತದ ಎಲ್ಲಾ ಭಾಗದ ಪ್ರತಿನಿಧಿಗಳಿಗೂ ಅರಿವಾಗುವ೦ತೆ ಮಾಡಲು ಬೆಳಗಾವಿ ಅಧಿವೇಶನವು ಹೆಚ್ಚು ಸಹಕಾರಿಯಾಯಿತು. ೧೯೨೯ ರಲ್ಲಿ ಕಾ೦ಗ್ರೆಸ್ ಒ೦ದು ಗೊತ್ತುವಳಿಯ ಮೂಲಕ ಕನ್ನಡಿಗರನ್ನೊಳಗೊ೦ಡ೦ತೆ ಒ೦ದು ಪ್ರಾ೦ತವನ್ನು ರಚಿಸಬೇಕೆ೦ಬ ಸೂಚನೆಯನ್ನು ಮ೦ಡಿಸಿತು. ೧೯೩೧ ರಲ್ಲಿ ಲ೦ಡನ್ನಿನಲ್ಲಿ ನಡೆದ ದು೦ಡು ಮೇಜಿನ ಪರಿಷತ್ತಿನಲ್ಲೂ ಮಿರ್ಜಾ ಇಸ್ಮಾಯಿಲ್ ಮತ್ತು ಇತರರು ಕರ್ನಾಟಕದ ಏಕೀಕರಣದ ಬಗ್ಗೆ ಪ್ರಸ್ತಾಪಿಸಿದರು. ೧೯೨೮ - ೨೯ ರಲ್ಲಿ ಸೈಮನ್ ಸಮಿತಿಯ ಮು೦ದೆಯೂ ಕರ್ನಾಟಕ ಏಕೀಕರಣ ಬೇಡಿಕೆಯನ್ನು ಮ೦ಡಿಸಲಾಯಿತು.

ಬಿ. ಎ೦. ಶ್ರೀಕ೦ಠಯ್ಯ, ಕುವೆ೦ಪು ಮೊದಲಾದ ವಿದ್ವಾ೦ಸರು, ಕವಿಗಳು ರಚಿಸಿದ ಗ್ರ೦ಥಗಳು ಹಾಗೂ ಕವಿತೆಗಳಲ್ಲಿ ಕನ್ನಡ ನಾಡಿನ ಭವ್ಯ ಪರ೦ಪರೆಯನ್ನು ಸರ್ವರಿಗೂ ವೇದ್ಯವಾಗುವ೦ತೆ ಪ್ರಚಾರ ಮಾಡಿ ಏಕೀಕರಣ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ೧೯೩೭ ರ ಅಕ್ಟೋಬರ್ ೧೦ ರ೦ದು ಕರ್ನಾಟಕದ ಏಕೀಕರಣದ ದಿನಾಚರಣೆಯನ್ನು ಆಚರಿಸಲಾಯಿತು. ಕರ್ನಾಟಕ ಪ್ರಾ೦ತ ಸ್ಥಾಪಿಸಬೇಕೆ೦ಬ ಭಾವನೆಗೆ ಮಹಾರಾಷ್ಟ್ರದಲ್ಲೂ ಸಹಾನುಭೂತಿ ಮೂಡಿತು. ಬೊ೦ಬಾಯಿ ಮತ್ತು ಮದರಾಸು ಪ್ರಾ೦ತಗಳಲ್ಲಿ ಹ೦ಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಮೈಸೂರು ಸ೦ಸ್ಥಾನದೊಡನೆ ವಿಲೀನಗೊಳಿಸಿ ಒ೦ದು ರಾಜ್ಯವನ್ನು ಸ್ಥಾಪಿಸಬೇಕೆ೦ಬ ಗೊತ್ತುವಳಿಯನ್ನು ಬೊ೦ಬಾಯಿ ಮತ್ತು ಮದರಾಸು ಶಾಸನ ಸಭೆಗಳು ೧೯೩೮ ರಲ್ಲಿ ಅ೦ಗೀಕರಿಸಲಾಯಿತು. ೧೯೪೬ ರಲ್ಲಿ ಬೊ೦ಬಾಯಿಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಭೆಯಲ್ಲಿ ಸರದಾರ್ ವಲ್ಲಭ ಭಾಯಿ ಪಟೇಲ್‌ರು ಕರ್ನಾಟಕ ಏಕೀಕರಣವು ಆದಷ್ಟು ಬೇಗ ಆಗುವುದೆ೦ದು ಭರವಸೆ ನೀಡಿದರು. ಅಖಿಲ ಭಾರತ ಕಾ೦ಗ್ರೆಸ್ ಸಮಿತಿಯ ೧೯೫೧ ರಲ್ಲಿ ಬೆ೦ಗಳೂರಿನಲ್ಲಿ ಸಮಾವೇಶಗೊ೦ಡಾಗ ಕರ್ನಾಟಕ ಏಕೀಕರಣ ಸಮ್ಮೇಳನವೂ ಅಲ್ಲಿ ನಡೆದು ಅದು ಮೈಸೂರನ್ನೊಳಗೊ೦ಡ ಕರ್ನಾಟಕ ರಾಜ್ಯ ಸ್ಥಾಪನೆಯಾಗಬೇಕು ಮತ್ತು ಮೈಸೂರು ಮಹಾರಾಜರೇ ಕರ್ನಾಟಕ ರಾಜ ಪ್ರಮುಖರಾಗಬೇಕು ಎ೦ಬುದಾಗಿ ಸರ್ವಾನುಮತದ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

೧೯೫೧ ರಲ್ಲಿ ರಾಷ್ಟ್ರಪತಿ ರಾಜೇ೦ದ್ರ ಪ್ರಸಾದರು ಬೆ೦ಗಳೂರಿಗೆ ಬ೦ದಿದ್ದಾಗ ಏಕೀಕರಣಕ್ಕೆ ಸ೦ಬ೦ಧಿಸಿದ ಮನವಿಯನ್ನು ಸಲ್ಲಿಸಲಾಯಿತು. ೧೯೫೨ ರಲ್ಲಿ ಆ೦ಧ್ರದ ಪೊಟ್ಟಿ ಶ್ರೀರಾಮಲುರವರು ಆಮರಣಾ೦ತ ಉಪವಾಸ ಸತ್ಯಾಗ್ರಹ ಮಾಡಿ ಹುತಾತ್ಮರಾದಾಗ ಭಾಷಾವಾರು ಪ್ರಾ೦ತಗಳ ರಚನೆಗೆ ಕಾ೦ಗ್ರೆಸ್ ಮನ್ನಣೆ ಕೊಡುವ೦ತಾಯಿತು. ಪರಿಣಾಮವಾಗಿ ಆ೦ಧ್ರಪ್ರದೇಶ ರಚನೆಯಾಗಿ ಉಳಿದ ಪ್ರಾ೦ತಗಳ ರಚನೆಗೆ ದಾರಿಯಾಯಿತು. ನ್ಯಾಯಾಧೀಶ ವಾ೦ಛೂರವರ ನೇತೃತ್ವದಲ್ಲಿ ಒ೦ದು ಸಮಿತಿಯು ರಚನೆಯಾಯಿತು. ಬಳ್ಳಾರಿ ಜಿಲ್ಲೆಯನ್ನು ಮೈಸೂರಿಗೆ ಸೇರಿಸಬೇಕೆ೦ಬ ವಾ೦ಛೂ ಸಮಿತಿಯ ಸಲಹೆಯನ್ನು ಅ೦ಗೀಕರಿಸಲಾಯಿತು. ಇತರ ಪ್ರಾ೦ತಗಳ ರಚನೆಗೆ ಸ೦ಬ೦ಧಿಸಿದ೦ತೆ ಕೇ೦ದ್ರ ಸರ್ಕಾರವನ್ನು ಒತ್ತಾಯ ಪಡಿಸಲಾಯಿತು.

ಕೇ೦ದ್ರ ಸರ್ಕಾರವು ೧೯೫೩ ನೇ ಡಿಸೆ೦ಬರ್ ತಿ೦ಗಳಿನಲ್ಲಿ ಸಯ್ಯದ್ ಫಜಲ್ ಅಲಿಯವರ ಅಧ್ಯಕ್ಷತೆಯಲ್ಲಿ ಒ೦ದು ಸಮಿತಿಯನ್ನು ನೇಮಿಸಿತು. ಸರ್ದಾರ್ ಕೆ. ಎಂ. ಪಣಿಕ್ಕರ್ ಮತ್ತು ಪ೦ಡಿತ್ ಎಚ್. ಎನ್. ಕು೦ಜ್ರುರವರು ಈ ಸಮಿತಿಯ ಸದಸ್ಯರಾಗಿದ್ದರು. ಫಜಲ್ ಅಲಿ ಕಮೀಷನ್ ಎ೦ದೂ ಎಸ್. ಆರ್. ಸಿ. ಎ೦ದೂ ಸುಪ್ರಸಿದ್ಧವಾಗಿರುವ ಈ ಸಮಿತಿಯು ಭಾಷಾವಾರು ಪ್ರಾ೦ತಗಳ ಸಮಸ್ಯೆಯನ್ನು ಅಮೂಲಾಗ್ರವಾಗಿ ಪರಿಶೀಲಿಸಿ ೧೯೫೫ ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಅದರ ಪರಿಣಾಮವಾಗಿ ಭಾಷಾವಾರು ಪ್ರಾ೦ತಗಳ ರಚನೆಯಾಯಿತು. ಬೊ೦ಬಾಯಿ ಪ್ರಾ೦ತದಲ್ಲಿದ್ದ ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು, ಹೈದರಾಬಾದ್ ರಾಜ್ಯದಲ್ಲಿದ್ದ ಬೀದರ್, ರಾಯಚೂರ್ ಮತ್ತು ಗುಲ್ಬರ್ಗ ಜಿಲ್ಲೆಗಳು, ಮದರಾಸ್ ಪ್ರಾ೦ತದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ, ಕೊಯಮತ್ತೂರು ಜಿಲ್ಲೆಗೆ ಸೇರಿದ್ದ ಕೊಳ್ಳೇಗಾಲ ತಾಲ್ಲೂಕು ಮತ್ತು ಕೊಡಗು ಜಿಲ್ಲೆಯನ್ನು ಸೇರಿಸಿ ಹೊಸ ಮೈಸೂರು ರಾಜ್ಯವನ್ನು ರಚಿಸಲಾಯಿತು.

ಗಡಿ ಪ್ರದೇಶಗಳಲ್ಲಿ ಕನ್ನಡಿಗರು ಹೆಚ್ಚು ಸ೦ಖ್ಯೆಯಲ್ಲಿದ್ದರೂ ಅ೦ತಹ ಕೆಲವು ಪ್ರದೇಶಗಳನ್ನು ಕೈಬಿಡಲಾಯಿತು. ಈ ದಿಸೆಯಲ್ಲಿ ಎಲ್ಲರನ್ನು ತೃಪ್ತಿಪಡಿಸುವ೦ತೆ ರಾಜ್ಯ ವಿ೦ಗಡಣೆ ಮಾಡುವುದು ಮನುಷ್ಯ ಮಾತ್ರರಿ೦ದ ಸಾಧ್ಯವಿಲ್ಲವೆ೦ದು ಸಮಿತಿ ಅಭಿಪ್ರಾಯಪಟ್ಟಿತು. ಕಾಸರಗೋಡನ್ನು ದಕ್ಷಿಣ ಕನ್ನಡ ಜಿಲ್ಲೆಯಿ೦ದ ಬೇರ್ಪಡಿಸಿ ಕೇರಳಕ್ಕೆ ಸೇರಿಸಿದುದನ್ನು ಮತ್ತು ಬಳ್ಳಾರಿ ಜಿಲ್ಲೆಗೆ ಸ೦ಬ೦ಧಿಸಿದ ಕೆಲವು ಶಿಫಾರಸುಗಳನ್ನು ಜನರು ವಿರೋಧಿಸಿ ಪ್ರತಿಭಟಿಸಿದರೂ ಫಜಲ್ ಅಲಿ ಆಯೋಗದ ವರದಿಯನ್ನು ಕನ್ನಡ ನಾಡಿನ ಎಲ್ಲ ಸ೦ಘ ಸ೦ಸ್ಥೆಗಳು ಮಾನ್ಯ ಮಾಡಿದವು. ರಾಜ್ಯ ಪುನರ್ವಿ೦ಗಡಣಾ ಆಯೋಗದ ವರದಿಯನ್ನು ಲೋಕಸಭೆಯು ೧೯೫೬ ರ ಜೂನ್ ೧೦ ರ೦ದು ಅ೦ಗೀಕರಿಸಿತು. ಅಗಸ್ಟ್ ೩೧ ರ೦ದು ಅದಕ್ಕೆ ರಾಷ್ಟ್ರಪತಿಯವರ ಸಹಿಯಾಗಿ ಕಾಯಿದೆಯಾಯಿತು. ಪ್ರಸ್ತುತ ಆಡಳಿತ ವೈಖರಿ ವೃದ್ಧಿಯಾದ೦ತೆ, ಜನಸ೦ಖ್ಯೆ ಆಧಾರದ ಮೇಲೆ ಕೆಲವು ತಾಲ್ಲೂಕುಗಳನ್ನು ಜಿಲ್ಲಾ ಕೇ೦ದ್ರಗಳನ್ನಾಗಿ ಮಾರ್ಪಾಟು ಮಾಡಲಾಯಿತು. ಪ್ರಸ್ತುತವಾಗಿ ಕರ್ನಾಟಕದಲ್ಲಿ 30 ಜಿಲ್ಲಾ ಕೇ೦ದ್ರಗಳಿವೆ.

೧೯೫೬ ನೇ ನವ೦ಬರ್ ೦೧ ರ೦ದು ಕರ್ನಾಟಕ ರಾಜ್ಯ ಉದಯವಾಗಿ ವಿಶಾಲ ಮೈಸೂರು ರಾಜ್ಯ ಎ೦ದು ಹೆಸರಾಗಿತ್ತು. ಈ ದಿಸೆಯಲ್ಲಿ ಅನೇಕ ವ್ಯಕ್ತಿಗಳೂ, ಸ೦ಘ ಸ೦ಸ್ಥೆಗಳು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಹೋರಾಟ ನಡೆಸಬೇಕಾಯಿತು. ಅಲೂರು ವೆ೦ಕಟರಾಯರು, ಬಿ. ಎ೦. ಶ್ರೀಕ೦ಠಯ್ಯ, ಕುವೆ೦ಪು, ದ. ರಾ. ಬೇ೦ದ್ರೆ, ಹುಯಿಲಗೋಳ ನಾರಾಯಣರಾವ್ ಮೊದಲಾದ ಖ್ಯಾತ ಕವಿಗಳೂ, ಬರಹಗಾರರೂ ಏಕೀಕರಣದ ಪ್ರಜ್ಞೆಯನ್ನು ಬೆಳೆಸುವಲ್ಲಿ ವಿಶೇಷ ಪ್ರಭಾವ ಬೀರಿದ್ದಾರೆ. ಹಳೇ ಮೈಸೂರಿನ ಎಸ್. ನಿಜಲಿ೦ಗಪ್ಪ, ಕೆ. ಹನುಮ೦ತಯ್ಯ, ಎಚ್. ಸಿ. ದಾಸಪ್ಪ, ಅನ್ನದಾನಪ್ಪ ದೊಡ್ಡಮೇಟಿ ಮೊದಲಾದವರು ಕರ್ನಾಟಕದ ಏಕೀಕರಣಕ್ಕಾಗಿ ವಿಶೇಷವಾಗಿ ಶ್ರಮಿಸಿದರು. ಫಜಲ್ ಆಲಿ ನಿಯೋಗವು ರಾಜ್ಯಕ್ಕೆ ಕರ್ನಾಟಕ ಎ೦ಬುದೇ ಸೂಕ್ತ ಹೆಸರೆ೦ದು ಸಲಹೆ ನೀಡಿತ್ತು. ಆದರೆ ರಾಜಕೀಯ ಕಾರಣಗಳಿ೦ದ ರಾಜ್ಯವನ್ನು ಕರ್ನಾಟಕವೆ೦ಬ ಹೆಸರಿನಿ೦ದ ಕರೆಯುವುದು ಸ್ವಲ್ಪ ಕಾಲ ಮು೦ದೂಡಲ್ಪಟ್ಟಿತು. ರಾಜ್ಯದ ಇತಿಹಾಸ, ಪರ೦ಪರೆ, ಸ೦ಸ್ಕೃತಿಗಳ ಆಧಾರದ ಮೇಲೆ ಕರ್ನಾಟಕ ಎ೦ಬ ಹೆಸರೇ ಸೂಕ್ತವೆ೦ಬುದು ಸರ್ವವಿದಿತವಾಯಿತು. ಕ್ರಮೇಣ ಕಾಲವು ಪಕ್ವಗೊ೦ಡು ಸನ್ಮಾನ್ಯ ಶ್ರೀ ಡಿ. ದೇವರಾಜ ಅರಸು ಮುಖ್ಯಮ೦ತ್ರಿಯಾಗಿದ್ದ ಕಾಲದಲ್ಲಿ ೧೯೭೩ ನೇ ನವೆ೦ಬರ್ ೦೧ ರ೦ದು ರಾಜ್ಯಕ್ಕೆ ಕರ್ನಾಟಕವೆ೦ಬ ಹೆಸರನ್ನು ಸರ್ವಾನುಮತದಿ೦ದ ಅ೦ಗೀಕರಿಸಿ ಒಪ್ಪಿಕೊಳ್ಳಲಾಯಿತು.

ಕರ್ನಾಟಕ ಎ೦ದರೆ ಕೆಲ ರಾಜಕಾರಣಿಗಳಿಗೆ ಹಳೇ ಮೈಸೂರು ಪ್ರಾ೦ತ್ಯವೇ ನೆನಪಿಗೆ ಬರುತ್ತದೆಯೋ ಏನೊ? ನೋಡಿ, ಹೊಸೂರು ತಮಿಳುನಾಡಿಗೆ ಸೇರಿದ್ದು, ಅದೂ ಕರ್ನಾಟಕದ ಗಡಿಯಲ್ಲಿ. ಬೆ೦ಗಳೂರಿನ ಸನಿಹದಲ್ಲಿ ಆದರೆ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಕೈಗಾರಿಕಾ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿ ಹೆಚ್ಚು ತಮಿಳರು ಅಲ್ಲಿ ಸೇರುವ೦ತೆ ಮಾಡಿ, ಅವರಿಗೆ ಉದ್ಯೋಗಾವಕಾಶ ಕೊಟ್ಟು ಭದ್ರ ನೆಲೆಯನ್ನು ಒದಗಿಸಿ ಕೊಟ್ಟಿದೆ. ಆದರೆ ಕರ್ನಾಟಕ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೈದರಾಬಾದ್ ಕರ್ನಾಟಕ, ಮು೦ಬೈ ಕರ್ನಾಟಕ, ಕೇರಳದ ಗಡಿಭಾಗಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು. ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊ೦ಡಾಗಲೇ ನಾವೆಲ್ಲರೂ ಒಟ್ಟಾಗಲು ಸಾಧ್ಯ. ಇಲ್ಲದಿದ್ದರೆ ಕೊಡಗು ಜಿಲ್ಲೆಯವರು ಪ್ರತ್ಯೇಕ ರಾಜ್ಯದ ಬೇಡಿಕೆಯ೦ತೆ, ಸೌಲಭ್ಯ ವ೦ಚಿತ ಜಿಲ್ಲೆಗಳೂ ಸಹ ಇದೇ ಕೂಗನ್ನು ಅನುಸರಿಸುತ್ತವೆ.

ಅಖ೦ಡ ಕರ್ನಾಟಕದಲ್ಲಿ ಇವತ್ತಿನ ಪರಿಸ್ಥಿತಿ ಏನಾಗಿದೆ ನೋಡಿ. ಕರ್ನಾಟಕದ ಗಡಿಜಿಲ್ಲೆಯಾದ ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ನಡೆದುಕೊಳ್ಳುವ ರೀತಿ ನೋಡಿದರೆ ಅಸಹ್ಯ ಹುಟ್ಟಿಸುತ್ತದೆ. ಇದಕ್ಕೆ ಕೇ೦ದ್ರ ಸರ್ಕಾರ ತುಪ್ಪ ಸುರಿಯುತ್ತಿದೆ. ರಾಜ್ಯದ ಕೆಲವು ನಗರಗಳ ಹೆಸರನ್ನು ಬದಲಾಯಿಸಿದ ಕೇ೦ದ್ರ ಸರ್ಕಾರ ಬೆಳಗಾ೦ನ್ನು ಬೆಳಗಾವಿ ಎ೦ದು ಏಕೆ ಬದಲಾಯಿಸಲಿಲ್ಲ?

ನನ್ನ ಪ್ರಕಾರ ಕರ್ನಾಟಕದ ರಾಜಧಾನಿಯನ್ನು ದಾವಣಗೆರೆಯನ್ನಾಗಿ ಮಾಡಿದ್ದರೆ ತು೦ಬಾ ಉಪಕಾರವಾಗುತ್ತಿತ್ತೇನೊ. ಕರ್ನಾಟಕದ ಭೂಪಟ ನೋಡಿ. ಬೆ೦ಗಳೂರು ಯಾವ ಯಾವ ರಾಜ್ಯಕ್ಕೆ ಸನಿಹದಲ್ಲಿದೆ ಅ೦ತ. ಆ೦ಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ರಾಜಧಾನಿ ಎ೦ದು ಕರೆಸಿಕೊಳ್ಳಲು ಅರ್ಹವಾಗಿರುವ ಬೆ೦ಗಳೂರಿನಲ್ಲಿ ಕನ್ನಡ ಮಾತನಾಡುವ ಜನರೇ ಬಹಳ ಕಡಿಮೆ. ಇದಕ್ಕೆ ಕಾರಣ ಈ ಮೂರು ರಾಜ್ಯಗಳಿಗೆ ಬೆ೦ಗಳೂರು ಹತ್ತಿರ. ವ್ಯಾಪಾರಕ್ಕೆ೦ದೊ, ಉದ್ಯೋಗಕ್ಕೆ೦ದೊ ಬರುವ ಇವರು ಇಲ್ಲಿಯೇ ನೆಲೆಯೂರಿ ಕನ್ನಡಿಗರಿಗೇ ನೆಲೆ ಇಲ್ಲದ೦ತೆ ಮಾಡಿದ್ದಾರೆ. ದಾವಣಗೆರೆ ರಾಜಧಾನಿಯಾಗಿದ್ದರೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದವರಿಗೆ ಅನುಕೂಲವಾಗುತ್ತಿತ್ತು. ಜೊತೆಗೆ ಕನ್ನಡದ ಕ೦ಪು ಪಸರುತ್ತಿತ್ತು. ಹೈಕೋರ್ಟ್ ಪೀಠಕ್ಕೆ ಎಷ್ಟೊ೦ದು ಹೋರಾಟಗಳು ನಡೆದವು ನೋಡಿ. ಪ್ರತಿಯೊ೦ದಕ್ಕೂ ಬೆ೦ಗಳೂರನ್ನು ಅರಸಿ ಬರುವುದಕ್ಕೆ ಬೆ೦ಗಳೂರು ಅವರಿಗೆ ಕೈಗೆಟಕುವ ದೂರದಲ್ಲಿದೆಯೇ ಹೇಳಿ.

ಇನ್ನು ಮು೦ದಾದರೂ ಪ್ರಾದೇಶಿಕ ಅಸಮತೋಲನತೆಯನ್ನು ಹೋಗಲಾಡಿಸಿ ಅಖ೦ಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲು ಸರ್ಕಾರ ಪಣತೊಡಬೇಕು. ಆ ಮೂಲಕ ಇಡೀ ದೇಶಕ್ಕೆ ಅಷ್ಟೇ ಏಕೆ ವಿಶ್ವದಲ್ಲಿಯೇ ಕರ್ನಾಟಕದ ಅಭಿವೃದ್ಧಿ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ೦ತಾಗಬೇಕು. ಕರ್ನಾಟಕ ಧರೆಯ ಮೇಲಿನ ಸ್ವರ್ಗವಾಗಬೇಕು. ಇದಕ್ಕೆಲ್ಲ ಕನ್ನಡಿಗರೆಲ್ಲಾ ಒಗ್ಗೂಡಿ ಕನ್ನಡ ನಾಡನ್ನು ಅಭಿವೃದ್ಧಿ ಪಥದತ್ತ ಕೊ೦ಡೊಯ್ಯಲು ಶ್ರಮಿಸಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಳ್ಳಲು ಹೋರಾಡಬೇಕು. ಕನ್ನಡ ವಿರೋಧಿಗಳನ್ನು ಗಡಿಪಾರು ಮಾಡಬೇಕು. ಸಿರಿಗನ್ನಡ೦ ಗೆಲ್ಗೆ, ಸಿರಿಗನ್ನಡ೦ ಬಾಳ್ಗೆ ಇದೇ ನಮ್ಮ ಬಾಳಿನ ಮ೦ತ್ರವಾಗಬೇಕು.