ಸದಸ್ಯ:ವಾಜಿದ್ ಖಾನ್ ತೋವಿನ
ವಾಜಿದ್ ಖಾನ್
[ಬದಲಾಯಿಸಿ]ವಾಜಿದ್ ಖಾನ್ ತೋವಿನ ಅವರು ಮಾರ್ಚ್ 10, 1978ರಂದು ತಂದೆ: ವಹಾಬ್ ಖಾನ್ ಹಾಗೂ ತಾಯಿ ಅಖ್ತರ್ ಉನ್ನಿಸಾ ಅವರ ಮಗನಾಗಿ ಜನಿಸಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದಲ್ಲಿ ಇವರು ಜನಿಸಿದರಾದರೂ, ಇವರ ಬಾಲ್ಯ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಪಡೆದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮವನ್ನು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡು, ತಮ್ಮ 'ವಾಜಿದ್ ಖಾನ್' ಎಂಬ ಹೆಸರಿನೊಂದಿಗೆ 'ತೋವಿನ' ಎಂಬ ಉಪನಾವನ್ನೂ ಸೇರಿಸಿಕೊಂಡರು. ಪತ್ರಿಕಾರಂಗದಲ್ಲಿ ಹೋರಾಟದ ಹಾದಿ ತುಳಿದು ಕ್ರಾಂತಿಕಾರಿ ವರದಿಗಳನ್ನು ಪ್ರಕಟಿಸುವ ಮೂಲಕ ದುರಾತ್ಮರ ನಿದ್ದೆಗೆಡಿಸಿದ ದಿಟ್ಟ ಪತ್ರಕರ್ತ ಎಂಬ ಹೆಸರು ಪಡೆದಿದ್ದಾರೆ.
ಕನ್ನಡ ಪ್ರಥಮ ಭಾಷೆಯಾಗಿ ತಮ್ಮ ಶಿಕ್ಷಣ ಆರಂಭಿಸಿದ ವಾಜಿದ್ ಖಾನ್, ತೋವಿನಕೆರೆ ಗ್ರಾಮದಲ್ಲಿ 8ನೇ ತರಗತಿ ವರೆಗೆ ಓದಿದರು. ಮನೆಯ ಕಷ್ಟದ ಪರಿಸ್ಥಿತಿಯಲ್ಲಿ ಮುಂದೆ ಓದುವ ಸ್ಥಿತಿಯಲ್ಲಿಲ್ಲದ ವಾಜಿದ್ ಖಾನ್ ಅವರನ್ನು ಅವರ ದೊಡ್ಡಮ್ಮ ಚಿ.ನಾ.ಹಳ್ಳಿ ತಾಲ್ಲೂಕಿನ ಕಂದಿಕೆರೆ ಗ್ರಾಮಕ್ಕೆ ಕರೆದೊಯ್ದು, ಶಿಕ್ಷಣವನ್ನು ನೀಡಿದರು. ಅಲ್ಲಿನ ಶ್ರೀ ಸಿದ್ಧಗಂಗಾ ಗ್ರಾಮಾಂತರ ಪ್ರೌಡಶಾಲೆಯಲ್ಲಿ 10ನೇ ತರಗತಿ ಮುಗಿಸಿ, ಹತ್ತಿರದ ತಿಮ್ಮನಹಳ್ಳಿಯಲ್ಲಿ ಪಿಯುಸಿ ಮುಗಿಸಿದರು.
ಸಾಹಿತ್ಯದಲ್ಲಿ ಅತಿಯಾದ ಸೆಳೆತವಿದ್ದ ವಾಜಿದ್ ಖಾನ್, 10ನೇ ತರಗತಿಯಲ್ಲಿದ್ದಾಗಲೇ ಕವನಗಳನ್ನು ಬರೆಯುವುದು, ಪತ್ರಿಕೆಗಳಿಗೆ ಕಳಿಸುವುದು ಹವ್ಯಾಸವಾಗಿಬಿಟ್ಟಿತ್ತು. ಪಿಯುಸಿ ನಂತರ ತುಮಕೂರಿಗೆ ಬಿ.ಎ. ಓದಲು ಬಂದ ಇವರು, ತುಮಕೂರು ಜಿಲ್ಲೆಯ ಪ್ರತಿಷ್ಟಿತ 'ಗಂಗಾವಾಹಿನಿ' ದಿನಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿ, ಸಂಪಾದಕರಾದ ಕಾಮರಾಜು ಅವರ ಮನೆಯಲ್ಲೇ ಇದ್ದು ಕೊಂಡು ಪತ್ರಿಕಾರಂಗದಲ್ಲಿನ ಎಲ್ಲಾ ಹಂತಗಳಲ್ಲೂ ಕೆಲಸ ಮಾಡುತ್ತಲೇ ಬಿ.ಎ. ವಿದ್ಯಾಭ್ಯಾಸ ಮುಗಿಸಿದರು.
ಪತ್ರಿಕಾರಂಗ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಇವರ ಅತ್ಯಾಸಕ್ತಿ ಇವರನ್ನು ರಾಜ್ಯದ ನಾನಾ ಜಿಲ್ಲೆಯಗಳಿಗೆ ಕರೆದೊಯ್ಯಿತು. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿನ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಇವರು, 2003ರಲ್ಲಿ ತಮ್ಮ ಸ್ವಂತ ಸಂಪಾದಕತ್ವದಲ್ಲಿ 'ಹಾಯ್ ಸಿಟಿಜನ್' ಎಂಬ ವಾರಪತ್ರಿಕೆಯನ್ನು ಹೊರ ತಂದರು. ಕಾರಣಾಂತರಗಳಿಂದ ಸದರಿ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು.
೧೯೯೬ರಲ್ಲಿ ಮೊದಲಿಗೆ ಕಾಮರಾಜು ಅವರ ಸಂಪಾದಕತ್ವದ ಗಂಗಾವಾಹಿನಿ ದಿನಪತ್ರಿಕೆ ಮೂಲಕ ಪತ್ರಿಕಾರಂಗದ ಮೊದಲ ಹೆಜ್ಜೆ ಇಟ್ಟ ಇವರು, ಅಂದಿನಿಂದಲೂ ನಿರಂತರವಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತೀಯ ಅಲ್ಪಸಂಖ್ಯಾತ ಎಂಬ ಕಾರಣದಿಂದ ಹಲವು ಪತ್ರಿಕೆಗಳಲ್ಲಿ ಕಲಿಕೆಗೆ ಅವಕಾಶ ಸಿಗದೆ ನಿರಾಶರಾಗಿದ್ದ ವಾಜಿದ್ ಖಾನ್ ಅವರಿಗೆ ಗಂಗಾವಾಹಿನಿ ದಿನಪತ್ರಿಕೆ ಆಶ್ರಯ ನೀಡಿ ಪತ್ರಿಕಾರಂಗದ ಆರಂಭಿಕ ತರಬೇತಿ ನೀಡಿತು. ನಂತರ ದಿ|| ಚಿ.ನ.ಏಕೇಶ್ವರ್ ಅವರ ಸಂಪಾದಕತ್ವದ ಏಕೇಶ್ ಪತ್ರಿಕೆಯಲ್ಲೂ ವರದಿಗಾರನಾಗಿ ಸೇವೆ ಸಲ್ಲಿಸಿದರು.
೧೯೯೯ರಲ್ಲಿ ಅಮರ ಸಂದೇಶ ಸಂಜೆ ದಿನಪತ್ರಿಕೆಯಲ್ಲಿ ಮುಂದಿನ ಅನುಭವ ಆರಂಭ. ಸುಮಾರು ೮ ವರ್ಷಗಳ ಕಾಲ ಪತ್ರಿಕಾರಂಗದ ಹಿರಿಯರಾದ ತೊ.ಗ.ಅಡವೀಶಪ್ಪ ಅವರ ಬಳಿ ಕಲಿತದ್ದು ಅಪಾರ. ವರದಿಗಾರನಾಗಿ, ಪತ್ರಿಕಾ ವಿನ್ಯಾಸಕನಾಗಿ ಮಾಡಿದ ಕೆಲಸ ಒಳ್ಳೆಯ ಅನುಭವವನ್ನು ವಾಜಿದ್ ಖಾನ್ ಅವರಿಗೆ ನೀಡಿತ್ತು.
೨೦೦೫ ರಿಂದ ೨೦೦೭ ರವರೆಗೆ ದಾವಣಗೆರೆ, ಶಿವಮೊಗ್ಗ, ಮೈಸೂರಿನ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಣೆ ಮಾಡಿ ನಂತರ ಮತ್ತೆ ತುಮಕೂರು ಜಿಲ್ಲೆಗೆ ಬಂದು ಪತ್ರಿಕೆಗಳಲ್ಲಿ ಕೆಲಸ ಆರಂಭಿಸಿದರು. ೨೦೦೮ರಿಂದ ಕೋಲಾರ ಧ್ವನಿ ದಿನಪತ್ರಿಕೆಗೆ ತುಮಕೂರು ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಾ ಜಿಲ್ಲೆಯ ಹಲವಾರು ವಾರಪತ್ರಿಕೆಗಳು ಹಾಗೂ ಮಾಸಪತ್ರಿಕೆಗಳಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ.
ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ವರದಿಗಾರನಾಗಿ, ವಿನ್ಯಾಸಕನಾಗಿ, ಅಂಕಣಕಾರನಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದ ವಾಜಿದ್ ಖಾನ್ ಅವರು, ೨೦೧೨ರಲ್ಲಿ ಕ್ರಾಂತಿ ಸಂಪದ ವಾರಪತ್ರಿಕೆಯನ್ನು ಆರಂಭಿಸಿ ನಂತರ, ೨೦೧೩ ಜೂನ್ ೩೦ ರಂದು ಜಿಲ್ಲಾ ಮಟ್ಟದ ಕ್ರಾಂತಿ ಪ್ರಭ ದಿನಪತ್ರಿಕೆಯನ್ನೂ ಆರಂಭಿಸಿದರು. ೨೦೧೬ರಲ್ಲಿ ನೂತನವಾದ ವಿಜಯ ಕಾಲ ಎಂಬ ಹೊಸ ಸಂಜೆ ದಿನಪತ್ರಿಕೆಯೊಂದನ್ನು ಆರಂಭಿಸಿದರು.
ತುಮಕೂರು ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯದವರು ನಡೆಸುತ್ತಿರುವ ಪತ್ರಿಕೆಗಳಲ್ಲಿ ಕ್ರಾಂತಿ ಪ್ರಭ ಏಕೈಕ ದಿನಪತ್ರಿಕೆಯಾಗಿರುತ್ತದೆ. ಕಳೆದ ೨೦ ವರ್ಷಗಳಿಂದ ಪತ್ರಿಕಾರಂಗದಲ್ಲಿ ಕನ್ನಡ ಭಾಷೆಯ ಮೇಲೆ ನಂಬಿಕೆ ಇಟ್ಟುಕೊಂಡು ನಿರಂತರವಾಗಿ ದುಡಿಯುತ್ತಿರುವ ಮುಸ್ಲಿಂ ಸಮುದಾಯದ ಏಕೈಕ ಪತ್ರಿಕೋದ್ಯಮಿ ವಾಜಿದ್ ಖಾನ್ ಆಗಿರುತ್ತಾರೆ.
ಕ್ರಾಂತಿ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾದ ಒಂದು ಉತ್ತಮವಾದ ಸುದ್ದಿಯನ್ನು ಗುರುತಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ೨೦೧೨ನೇ ಸಾಲಿನ ದಿ|| ಹೆಚ್.ಆರ್.ಗುಂಡುರಾಯರ ಸ್ಮರಣಾರ್ಥ ನೀಡುವ ಮಾನವೀಯ ಮೌಲ್ಯ ವರದಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ. ಜಿಲ್ಲಾ ಸಚಿವರಾದ ಟಿ.ಬಿ.ಜಯಚಂದ್ರ ಅವರು ಹಾಗೂ ಆಗಿನ ಕೇಂದ್ರ ಸಚಿವ ವೀರಪ್ಪಮೊಯ್ಲಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.
ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಅವರು ಹಲವಾರು ಉತ್ತಮ ಕಥೆ, ಕವನಗಳಿಗೆ ಹಲವಾರು ಸಂಸ್ಥೆಗಳಲ್ಲಿ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಅವರದೇ ಸ್ವಂತದ್ದಾದ ತೋವಿನಕೆರೆ ಪ್ರಕಾಶನ ಹಾಗೂ ಅಲ್-ಅಜ್ಹರ್ ಪಬ್ಲಿಕೇಷನ್ ಟ್ರಸ್ಟ್ (ರಿ.) ಹೊಂದಿರುತ್ತಾರೆ. ಉತ್ತಮ ಸಾಹಿತ್ಯ ಕೃಷಿಯ ಹಾಗೂ ಮಕ್ಕಳಲ್ಲಿ ಉತ್ತಮ ಜ್ಞಾನಾರ್ಜನೆಗೆ ಸಹಕಾರಿಯಾಗುವಂಥಾ ಕಿರು ಹೊತ್ತಿಗೆಗಳನ್ನು ಹೊರತರುತ್ತಿರುತ್ತಾರೆ.
ರಾಜಕೀಯ ಕ್ಷೇತ್ರದಲ್ಲೂ ಮನ್ನಡೆಯುತ್ತಿರುವ ವಾಜಿದ್ ಖಾನ್ ಅವರು, 2010ರಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ತೋವಿನಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಬೇಕಾಯಿತು. ರಾಜಕೀಯದಲ್ಲಿ ದುಡ್ಡೇ ಮುಖ್ಯ ಎಂಬ ಸತ್ಯವನ್ನು ಅವರು ಅಂದು ಅರಿತರು. ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ದುಡಿಯುತ್ತಿದ್ದ ಅವರು, ಇಂದಿನ ಕೆಪಿಸಿಸಿ ಅಧ್ಯಕ್ಷರಾದ ಡಾ||ಜಿ.ಪರಮೇಶ್ವರ್ ಅವರ ಆಪ್ತವಲಯದಲ್ಲಿ ಗುರುತಾದರು. ಇಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿರುತ್ತಾರೆ.