ಸದಸ್ಯರ ಚರ್ಚೆಪುಟ:Nagaraj 84/Sand box
ವಿಷಯ ಸೇರಿಸಿಧಾರವಾಡ
[ಬದಲಾಯಿಸಿ]ಇತಿಹಾಸ
[ಬದಲಾಯಿಸಿ]೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದಿತು. ನ೦ತರ ವಿಜಯನಗರ ಸಾಮ್ರಾಜ್ಯದ ಭಾಗವಾಯಿತು. ವಿಜಯನಗರ ಸಾಮ್ರಾಜ್ಯದ ಪತನದ ನ೦ತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎ೦ಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನ೦ತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ ಮುಘಲ್ ಸಾಮ್ರಾಜ್ಯದ ಕೈಯಲ್ಲಿದ್ದು ನ೦ತರ ಅನುಕ್ರಮವಾಗಿ ಮರಾಠರು, ಹೈದರ್ ಅಲಿ ಮತ್ತು ಟೀಪು ಸುಲ್ತಾನ್ ಹಾಗೂ ಬ್ರಿಟಿಷರ ಕೈ ಸೇರಿತು. ಮುಂಬಯಿ ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ, ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಅನ್ನದಾನಯ್ಯ ಪುರಾಣಿಕ. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು.
ಹುಬ್ಬಳ್ಳಿ
[ಬದಲಾಯಿಸಿ]ಹುಬ್ಬಳ್ಳಿಯ ಇತಿಹಾಸವು ರಾಷ್ಟ್ರಕೂಟರ ಕಾಲದಷ್ಟು ಹಿಂದಿನದೆಂದು ಹೇಳಬಹುದು. ಈಗ ಹುಬ್ಬಳ್ಳಿಯೆಂದು ಕರೆಯಲ್ಪಡುವ ಪ್ರದೇಶದಲ್ಲಿ ಸುಮಾರು ಕ್ರಿ.ಶ ೮೦೦ ರ ಸಮಯದಲ್ಲಿ ಜನವಸತಿ ಇದ್ದದ್ದು ಇಲ್ಲಿ ಸಿಕ್ಕಿರುವ ಎರಡು ಶಾಸನಗಳಿಂದ ತಿಳಿದುಬರುತ್ತದೆ. ಈ ಶಾಸನಗಳಲ್ಲಿ ರಾಷ್ಟ್ರಕೂಟ ದೊರೆಗಳಾದ ಮೂರನೆಯ ಇಂದ್ರ (ಕ್ರಿ.ಶ ೯೧೫ - ೯೨೮) ಮತ್ತು ಆಮೋಘವರ್ಷ ಕರ್ಕ(ಕ್ರಿ.ಶ ೯೭೩)ರ ಉಲ್ಲೇಖವಿದೆ. ಇಲ್ಲಿನ ಭವಾನಿಶಂಕರ ಆಲಯವು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿದೆ. ಈ ಆಲಯದಲ್ಲಿ ಸಿಕ್ಕಿರುವ ಶಾಸನದಲ್ಲಿ ಚಾಲುಕ್ಯ ದೊರೆ ಎರಡನೇ ಸೋಮೇಶ್ವರನ(ಕ್ರಿ.ಶ.೧೦೬೮ - ೧೦೭೮) ಉಲ್ಲೇಖವಿದೆ.ಹುಬ್ಬಳ್ಳಿಯ ಸುತ್ತಮುತ್ತಲಿನ ಪುರಾತನ ಜಿನಾಲಯಗಳಲ್ಲಿ ಅನಂತನಾಥ ತೀರ್ಥಂಕರ, ಬ್ರಹ್ಮದೇವ, ಪದ್ಮಾವತಿಯರ ಮೂರ್ತಿಗಳಿವೆ. ಇಲ್ಲಿನ "ಪ್ಯಾಟಿ ಬಾವಿ" ಎಂದು ಕರೆಯಲ್ಪಡುವ ಬಾವಿಯ ಸುತ್ತಮುತ್ತ ಪುರಾತನ ಚಾಲುಕ್ಯ ಆಲಯವೊಂದರ ಅವಶೇಷಗಳಿವೆ. ಈ ಅವಶೇಷಗಳಲ್ಲಿ ಸಿಕ್ಕಿರುವ ಉಲ್ಲೇಖದಿಂದ ಈ ಆಲಯವು ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ ಕಾಲದ್ದೆಂದು ತಿಳಿಯುತ್ತದೆ. ಚಾಲುಕ್ಯರ ನಂತರ ಹೊಯ್ಸಳ ರಾಜವಂಶದ ಎರಡನೇ ವೀರಬಲ್ಲಾಳನು ಉತ್ತರ ಕರ್ನಾಟಕವನ್ನು ಜಯಿಸಿದಾಗ ಹುಬ್ಬಳ್ಳಿಯು ಆತನ ಅಧೀನಕ್ಕೆ ಒಳಪಟ್ಟಿತು.ನಂತರ ವಿಜಯನಗರ ಸಾಮ್ರಜ್ಯದ ಕಾಲದಲ್ಲಿ ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪ್ರಸಿದ್ಧಿ ಪಡೆಯಿತು.ಹುಬ್ಬಳ್ಳಿಯಿಂದ ಆರು ಕಿ.ಮೀ ದೂರದ ಸಿರಗುಪ್ಪಿಯೆಂಬ ಹಳ್ಳಿಯಲ್ಲಿ ದೊರೆತಿರುವ ಶಾಸನವೊಂದು ವಿಜಯನಗರ ಸಾಮ್ರಜ್ಯದ ಹೆಸರಾಂತ ಚಕ್ರವರ್ತಿ ಶ್ರೀಕೃಷ್ಣದೇವರಾಯನನ್ನು ಉಲ್ಲೇಖಿಸುತ್ತದೆ. ಈಗಲೂ ಕೆಲವೊಮ್ಮೆ ಹುಬ್ಬಳ್ಳಿಯನ್ನು "ರಾಯರ ಹುಬ್ಬಳ್ಳಿ" ಎಂದು ಜನರು ಕರೆಯುತ್ತಾರೆ. ವಿಜಯನಗರ ಸಾಮ್ರಾಜ್ಯದೊಂದಿಗೆ ವಾಣಿಜ್ಯ ವ್ಯವಹಾರಗಳನ್ನು ಹೊಂದಿದ್ದ ಪೊರ್ತುಗೀಸ್ ವ್ಯಾಪಾರಿಗಳು ಮತ್ತು ಪ್ರವಾಸಿಗರು ತಮ್ಮ ಕ್ರಿ.ಶ ೧೫೪೭ ರಲ್ಲಿ ಬರೆಯಲ್ಪಟ್ಟ ದಾಖಲೆಗಳಲ್ಲಿ ಹುಬ್ಬಳ್ಳಿಯನ್ನು "ಒಬೇಲಿ" ಎಂದು ಕರೆದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪತನಾನಂತರ ಹುಬ್ಬಳ್ಳಿಯು ಬಿಜಾಪುರದ ಆದಿಲ್ ಷಾಹಿ ದೊರೆಗಳ ವಶಕ್ಕೆ ಬಂದಿತು. ಹದಿನೇಳನೆಯ ಶತಮಾನದಲ್ಲಿ ಇಲ್ಲಿನ ವಾಣಿಜ್ಯ ವಹಿವಾಟು ಇನ್ನೂ ಬೆಳೆದು ಸಾಕಷ್ಟು ಪ್ರಸಿದ್ಧಿಯನ್ನು ಪಡೆಯಿತು. ಬಹಳಷ್ಟು ಶ್ರೀಮಂತ ವ್ಯಾಪಾರಿಗಳಿಂದ ತುಂಬಿತ್ತು. ಇದರಿಂದ ಆಕರ್ಷಿತರಾದ ಬ್ರಿಟಿಷರು ಇಲ್ಲೊಂದು ಜವಳಿ ಕಾರ್ಖಾನೆಯನ್ನು ತೆರೆದರು. ಈ ಸಮಯದಲ್ಲಿ ಹುಬ್ಬಳ್ಳಿಯ ಸಮೃದ್ಧಿ ಎಷ್ಟಿತ್ತೆಂದರೆ ಮಹಾರಾಷ್ಟ್ರದಿಂದ ಶಿವಾಜಿಯು ಕ್ರಿ.ಶ ೧೬೭೧ ದಲ್ಲಿ ಹುಬ್ಬಳ್ಳಿಯ ಮೇಲೆ ದಂಡೆತ್ತಿ ಬಂದು ಊರನ್ನು ಕೊಳ್ಳೆಹೊಡೆದನು. ಕ್ರಿ.ಶ ೧೬೭೫ ರಲ್ಲಿ ದಿಲ್ಲಿ ಸುಲ್ತಾನ್ ಔರಂಗಜೇಬನು ಹುಬ್ಬಳ್ಳಿಯನ್ನು ತನ್ನ ವಶಕ್ಕೆ ತಂದುಕೊಂಡನು. ನಂತರದ ಸ್ವಲ್ಪಕಾಲ ಹುಬ್ಬಳ್ಳಿಯು ಸವಣೂರಿನ ನವಾಬರ ಹಿಡಿತದಲ್ಲಿತ್ತು. ಕ್ರಿ.ಶ ೧೭೨೭ ರಲ್ಲಿ ಸವಣೂರು ನವಾಬರ ವಂಶಸ್ಥನಾದ ಅಬ್ದುಲ್ ಮಜೀದ್ ಖಾನ್ ಹಳೇ ಹುಬ್ಬಳ್ಳಿಯ ಪಕ್ಕದಲ್ಲಿ ಇನ್ನೊಂದು ಜನವಸತಿ ಪ್ರದೇಶವನ್ನು ಸ್ಥಾಪಿಸಿದನು. ಆತನ ನೆನಪಿಗಾಗಿ ಈಗಲೂ ಆ ಭಾಗವನ್ನು "ಮಜೀದ್ ಪುರ" ಎಂದು ಕರೆಯಲಾಗುತ್ತದೆ. ನಂತರ ಮಾಧವ ರಾವ್ ಪೇಶ್ವೆಯ ಕಾಲದಲ್ಲಿ ಹುಬ್ಬಳ್ಳಿಯು ಮರಾಠರ ವಶಕ್ಕೆ ಹೋಯಿತು. ಕ್ರಿ.ಶ ೧೮೧೮ ರಲ್ಲಿ ಆಗಿಹೋದ ಮೂರನೆಯ ಬ್ರಿಟಿಷ್-ಮರಾಠಾ ಯುದ್ಧ ದಲ್ಲಿ, ಬ್ರಿಟಿಷರು ಜನೆರಲ್ ಮನ್ರೋ ಎಂಬುವನ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲೇ ಕ್ಯಾಂಪ್ ಹಾಕಿದ್ದರು. ಆ ಸಮಯದಲ್ಲಿ ಕೆಲವು ನೂರು ಬ್ರಿಟಿಷ್ ಸೈನಿಕರು ಕಾಲರಾ ವ್ಯಾಧಿಯಿಂದ ಸತ್ತರು. ಆ ಸೈನಿಕರ ಸಮಾಧಿಗಳನ್ನು ಈಗಲೂ ಹುಬ್ಬಳ್ಳಿಯ ಅಹೋಬಲಪುರದಲ್ಲಿ ಕಾಣಬಹುದು. ಮೂರನೆಯ ಬ್ರಿಟಿಷ್-ಮರಾಠಾ ಯುಧ್ಧದಲ್ಲಿ ಮರಾಠರು ಸೋತ ಪರಿಣಾಮವಾಗಿ ಹುಬ್ಬಳ್ಳಿಯು ಬ್ರಿಟಿಷರ ವಶಕ್ಕೆ ಬಂದಿತು ಮತ್ತು ಬ್ರಿಟಿಷ್ ಇಂಡಿಯಾದ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು. ಭಾರತದ ಸ್ವಾತಂತ್ರ್ಯಾನಂತರವೂ ಬಾಂಬೆ ರಾಜ್ಯದ ಭಾಗವಾಗಿತ್ತು. ನಂತರ ೧೯೫೭ ರ ಕರ್ನಾಟಕ ಏಕೀಕರಣದ ಫಲವಾಗಿ ಕರ್ನಾಟಕ ರಾಜ್ಯದ ಭಾಗವಾಗಿ ಸೇರ್ಪಡೆಯಾಯಿತು.