ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Devendra kattimani

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶರಣರ ವಚನಗಳಲ್ಲಿ ಆರೋಗ್ಯದ ಅನುಭಾವ ಸಾರ,

[ಬದಲಾಯಿಸಿ]

ಕಷ್ಟವಾದರೂ ಸರಿ, ತಪ್ಪುಗಳಾದರೂ ಸರಿ, ಆಕಾಶದ ನಕ್ಷತ್ರಗಳು ಎಣಿಸು. ಕಾಯದ ನಡುವಿನ ಕತ್ತಲು ಅಳೆಯಬೇಡ. ಬಿತ್ತಿರುವ ಸಾಲಿನಲ್ಲಿ; ಬೀಜ ಮೊಳೆಯುವುದೇ ವಿನಹಃ ಬರಡು ಮನಕಲ್ಲ, ತಿಳಿದು ಬದುಕೆಂದ “ಬೋಧಿ”.

“ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನ

ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು

ಬಂಗಾರದ ಮುಖವ ತೊಳೇದೇನಾ”

         ಎನ್ನುವ ಜನಪದ ಸಾಹಿತ್ಯದ ನುಡಿಯನ್ನು ನೆನೆಯುತ್ತಾ. ಇಂದಿನ ಆಧುನಿಕ ಬದುಕಿನ ಅವಸರದ ವೇಗದ ಓಟದ ದಾರಿಯಲ್ಲಿ, ನಿಂತಿರುವ ನಾವುಗಳು ಉಳಿದ ದಿನಗಳ ನೆಮ್ಮದಿಯ ಬದುಕಿಗಾಗಿ, ಆರೋಗ್ಯದ ಸೂತ್ರಗಳನ್ನು ಕೂಡ ಅರಿತುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.ಈ ಸಂಧಿಗ್ಧ ಸಂದರ್ಭದಲ್ಲಿ ಭೌಚಿತವಾಗಿ, ನಮ್ಮ ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಆರೋಗ್ಯ ವೃದ್ಧಿಸಿಕೊಳ್ಳುವುದು ಕೂಡ ಅಷ್ಟೇ ಅನಿವಾರ್ಯವಾಗಿದೆ. ಆಧುನಿಕ ಯುಗದ ಬೇಲಿಯ ಮೇಲೆ ಹರಿದಾಡುವ ಸಾಮಾಜಿಕ ಮಾದ್ಯಾಮಗಳಲ್ಲಿನ  ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತಿರುವ ಟಿ.ವಿ. ಮೊಬೈಲ್, ವಿಡಿಯೋ ಗೇಮ್ ನಂತಹ ಸಾಂಕ್ರಾಮಿಕ ಸುಳಿಯಲ್ಲಿ ಸಿಕ್ಕಿರುವ ಮಕ್ಕಳ ತಾಯಿ ತನ್ನ ತಾ ಮರೆತು ಹೀಗೆ ಹೇಳುತ್ತಾಳೆ

“ಕೆಸರಲ್ಲಿ ಆಡಬೇಡ ಬಟ್ಟೆ ಕೊಳೆ ಮಾಡಬೇಡ

ಒಮ್ಮುಟ್ಟ ಅಂಗಿ ಕಳಿಬೇಡ ನನ್ನ ಮಗನೇ ಮೊಬೈಲ್ ಕೊಡುವೆ ಕಾಡಬೇಡ  

ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ತಾಯಿಯಾದವಳು ಗುರುವಾಗುವುದನ್ನು ಮರೆತು ಬದುಕಿಗೆ ಬೇಡವಾದ ರೀಲ್ಸನಲ್ಲ ಮುಳುಗಿ ಹೋಗಿದ್ದಾಳೆ.

                                        “ಕಾಯ ಕರ್ರನೇ ಕಂದಿದರೇನು, ಕಾಯ ಮಿರ್ರನೇ ಮಿಂಚಿದರೇನು,

                                ಕಾಯದಿಂದ ಬಂದ ಕಾರ್ಯ ಸೊಪ್ಪಾದರೂ ಲಿಂಗಕ್ಕೆ ಸಮಾಜಕ್ಕೆ ಅರ್ಪಿತ ಇದು”  

            ಎನ್ನುವ ಅಕ್ಕಮಹಾದೇವಿಯವರ ವಚನವನ್ನು ಅರ್ಥೈಸಿಕೊಳ್ಳುವುದು ಅನಿವಾರ್ಯವಾಗಿದೆ.ಶರೀರದಲ್ಲಿ ಎರಡು ಪ್ರಕಾರಗಳಿವೆ. 1) ಸ್ಥೂಲ ಕಾಯ  2) ಸೂಕ್ಷ್ಮ ಕಾಯ. ಎಂದು. ಸ್ಥೂಲ ಶರೀರಕ್ಕೆ ಪ್ರಮಾಣಿಕ ದುಡಿಮೆ ಹಾಗೂ ದಂಡಿಸಿವುದು ರೂಢಿಸಿಕೊಳ್ಳಬೇಕು. ಸೂಕ್ಷ್ಮ ಶರೀರಕ್ಕೆ ಆಧ್ಯಾತ್ಮಿಕ ಚಿಂತನೆ, ಲಿಂಗ ಪೂಜೆ, ವಚನಗಳ ಸಾರವೇ ಆಹಾರವಾಗಬೇಕಿದೆ. ಬರೀ ದೇಹದ ಸೌಂದರ್ಯಕ್ಕಾಗಿ ಮಾತ್ರ ಮೀಸಲಿಡದೆ ಅದರ ಸದೃಢತೆ, ಆರೋಗ್ಯದ ಪರಿಕಲ್ಪನೆ ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಹದ ಅಂಗಾಂಗಗಳು ಸದೃಢವಾಗಿರುವಂತೆ ನೋಡಿಕೊಳ್ಳಬೇಕು. ಮಾನಸಿಕವಾಗಿ, ಸಾಮಾಜಿಕ, ಆರ್ಥಿಕತೆಯ ಆರೋಗ್ಯದ ಸ್ಥಿತಿಯು ಕೂಡ ಸದೃಢವಾಗುವಂತೆ, ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಅನಿವಾರ್ಯ.

            ಶರಣರ ಸಾಮಾಜಿಕ, ಧಾರ್ಮಿಕ ಕ್ರಾಂತಿಯಿಂದ ಒಂದು ನಾಗರಿಕ ಸಂಸ್ಕೃತಿಕ ಸಾಮಾಜ ನಿರ್ಮಾಣಗೊಂಡಿತು. ಸಾಮಾಜಿಕವಾಗಿ ಆರ್ಥಿಕವಾಗಿ ಬೌದ್ಧಿಕವಾಗಿ ಶರೀರಿಕವಾಗಿ ಆರೋಗ್ಯಕರ ಸಮಾಜ ನಿರ್ಮಿಸಿದ ಬಸವಾದಿ ಪ್ರಥಮರು, ವ್ಯಕ್ತಿಯ ಸಾಧನೆ ಆತ್ಮೋದ್ದಾರ, ಮಾನಸಿಕ ನೆಮ್ಮದಿ, ಶಾಂತಿಯ ನೆಲೆಗಟ್ಟಿನಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವಲ್ಲಿ ಸಫಲರಾದರು. ಸುಚಿತ್ವ ಮತ್ತು ಸದೃಢ ಕಾರ್ಯಗಳು ಬಗ್ಗೆ ವಚನಗಳ ಮೂಲಕ ಜಾಗೃತಿಯನ್ನು ಮೂಡಿಸಿದರು.

              ಹಾಗಾದರೆ ಆರೋಗ್ಯ ಎಂದರೇನು ? ಯಾವುದೆಲ್ಲವನ್ನು ಒಳಗೊಂಡಿದರೆ ಆರೋಗ್ಯವೆಂದು ನಾವು ಕರೆಯುತ್ತೇವೆ. ಎನ್ನುವುದನ್ನು ಮೊದಲಿಗೆ ಅರ್ಥೈಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆರೋಗ್ಯದ ಬಗ್ಗೆ ವಿವಿಧ ವ್ಯಾಖ್ಯಾನಗಳಿದ್ದರೂ ಕೂಡ ವಿಶ್ವಸಂಸ್ಥೆಯು ಒಂದು ವ್ಯಾಖ್ಯಾನವನ್ನು ನೀಡಿದೆ. “ಸಂಪೂರ್ಣ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಯೋಗ ಕ್ಷೇಮದ ಸ್ಥಿತಿಯನ್ನು ಆರೋಗ್ಯ ಎನ್ನುತ್ತೇವೆ. ಅಂದರೆ ನಾವೆಲ್ಲರೂ ಕೂಡಿ ಬಾಳುವ ಈ ಸಮಾಜದಲ್ಲಿ ದೈಹಿಕವಾಗಿ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಎಲ್ಲರೂ ಸಮತೆ, ಮಮತೆ, ಸಮಾನತೆಯಿಂದ ಇರುವುದಕ್ಕೆ ಆರೋಗ್ಯ ಎಂದು ಕರೆಯುತ್ತೇವೆ ಎಂದು ಹೇಳುತ್ತದೆ. ಮಗುವಿನ ಶೈಶಾವಸ್ಥೆಯಲ್ಲಿ ಅದರ ದೇಹದ ಬೆಳವಣಿಗೆಗೆ ತಾಯಿ ಎದೆ ಹಾಲು ನಮ್ಮ ಬದುಕಿನ ಭದ್ರಬುನಾದಿಯಾಗುತ್ತದೆ ತಾಯಿಯ ಪ್ರೀತಿ ಸುತ್ತಮುತ್ತಲಿನ ಪರಿಸರ ಇವೆಲ್ಲವೂ ಅದರ ಮುಂದಿನ ಬದುಕಿಗೆ ದಾರಿದೀಪವಾಗುತ್ತವೆ. ಅದನ್ನು ವಂಚಿಸುವಂತಹ ಕಾರ್ಯ ಯಾವತ್ತಿಗೂ ಈ ಸಮಾಜದಲ್ಲಿ ನಡೆಯಬಾರದು. ಆಧುನಿಕತೆಯ ಆಡಂಬರದ ಸ್ಪರ್ಶದಿಂದಾಗಿ ಸೌಂದರ್ಯದ ಪರಿಕಲ್ಪನೆ ಹೆಚ್ಚಾಗಿನಿಂದಾಗಿ ಮಕ್ಕಳಿಗೆ ತಾಯಿ ಎದೆ ಹಾಲು ಉತ್ತಮ ರೀತಿಯಲ್ಲಿ ಸಿಗುತ್ತಿಲ್ಲ ಹಾಗೆ ವಿಷಯಯುಕ್ತ ರಾಸಾಯನಿಕ ವಸ್ತುಗಳ ಕಲಬೆರಿಕೆಯ ಫಾಸ್ಟ್ ಫುಡ್ ಹಾವಳಿ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ದುಡ್ಡು ಕೊಟ್ಟು ರೋಗ ತರಿಸಿಕೊಳ್ಳುವಂತಹ ಕಾಲ ಇದಾಗಿದೆ. ಕುರ್ಕುರೆ ಚಿಪ್ಸು ನೂಡಲ್ಸ್ ಅಪೌಷ್ಟಿಕತೆಯ ಆಹಾರಗಳ ಸೇವನೆಯಿಂದಾಗಿ


 * ಮಕ್ಕಳಲ್ಲಿ ದೈಹಿಕ ಆರೋಗ್ಯದ ಬೆಳವಣಿಗೆ ಕುಂಠಿತವಾಗುತ್ತಿದೆ. * ತೂಕ ಇಳಿಕೆಯಾಗುತ್ತಿದೆ.

 * ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿವೆ. * ಆಹಾರ ಪಚನ ಶಕ್ತಿ ಕುಂಠಿತಗೊಂಡಿದೆ        

* ಕರುಳಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. * ಹೃದಯದ ಸಂಬಂಧಿ ಕಾಯಿಲೆಗಳು

 * ಕಿಡ್ನಿ ವೈಫಲ್ಯಗಳು * ಶ್ವಾಸಕೋಶದ ರೋಗಗಳು ಗಣನೀಯವಾಗಿ ಏರಿಕೆಯಾಗುತ್ತದೆ  

ಇದಕ್ಕೆಲ್ಲ ಕಾರಣ ನಮ್ಮ ಬದುಕಿನ ಶೈಲಿ ಬದಲಾಗಿದ್ದಕ್ಕೆ ಮತ್ತು ಶರಣರ ಮಾರ್ಗ ಮರೆತುಹೋಗಿದ್ದಕ್ಕೆ. ಅದಕ್ಕೆ ಶರಣರ ವಚನದಲ್ಲಿ

“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ

ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ

ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ

ಪರುಷದ ಬಲದಿಂದ ಆಲೋಹದ ಕೇಡು ನೋಡಯ್ಯ

ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯ.

            ಮಾನವನಿಗೆ ಸತ್ಯ ಜ್ಞಾನದ ಅರಿವಾಗಬೇಕು. “ಬೇಕು ಬೇಡಗಳ ನೂಕು ನುಗ್ಗಲಿನಲ್ಲಿ” ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುವಂತಹ ವಸ್ತುಗಳು ಯಾವುವು? ನಮ್ಮ ಆರೋಗ್ಯಕರ ಆಹಾರ ಸೇವನೆಗಳು ಯಾವ್ಯಾವು ಎನ್ನುವರು ಪರಿವಿಗೆ ಬಾರದಂತಾಗಿದೆ. ವಿಜ್ಞಾನದ ಪ್ರಕಾರ ನಮ್ಮ ದೇಹಕ್ಕೆ ಬೇಕಾಗಿರುವ ಆಹಾರದ ವಿವಿಧ ಘಟಕಗಳೆಂದರೆ  * ಪ್ರೋಟಿನ್  * ವಿಟಮಿನ್ * ಕೊಬ್ಬು * ಕಾರ್ಬೋಹೈಡ್ರೇಟ್ಸ್ * ಫೈಬರ್(ನಾರು) * ನೀರು ಮತ್ತು ಲವಣದ ಅಂಶಗಳು ಇಷ್ಟು ಅವಶ್ಯಕವೆಂದು ವಿಜ್ಞಾನದ ಹೇಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಅಂಶಗಳನ್ನು ಹೊಂದಿರುವ ಆಹಾರಗಳು ಸೇವನೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಆಧುನಿಕ ವೈಭೋಗದ ಸೋಗಿನಲ್ಲಿ ನಾವಿದ್ದೇವೆ.

          "ಕೈ ಕೆಸರಾದರೆ ಬಾಯಿ ಮೊಸರು” ಎನ್ನುವ ಗಾದೆ ಮಾತಿನಂತೆ ನಾವೆಲ್ಲರೂ ದೇಹವನ್ನ ದಂಡಿಸಿ ದುಡಿಯಬೇಕು. ಆಳಾಗಿ ದುಡಿ ಅರಸನಾಗಿ ಉಣ್ಣು” ಎನ್ನುವ ಗಾದೆಯಂತೆ ದೈಹಿಕ ಶ್ರಮ, ಮಾನಸಿಕ ಸದೃಢತೆ, ನಿರಂತರ ಚಟುವಟಿಕೆಗಳಿಂದ ನಿರತರಾದರೇ.  ಅವನೇ ಆರೋಗ್ಯವಂತ ಮತ್ತು ಆತ ಮಾಡುವ ಕಾಯಕವೂ, ಶ್ರಮವು ಸತ್ಯದಿಂದ ಕೂಡಿರಬೇಕು ಎಂದು ಶರಣರು ಹೇಳುತ್ತಾರೆ. ಅದಕ್ಕೆ ಬಸವಣ್ಣನವರ ವಚನದಲ್ಲಿ “ಕಾಯಕವೇ ಕೈಲಾಸ” ಎಂದು ನುಡಿದಿದ್ದಾರೆ.

                                “ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ, ಸತ್ಯ ಶುದ್ಧ ವಿಲ್ಲದುದ್ದು ಕಾಯಕವಲ್ಲ

                                     ಆಸೆ ಎಂಬುದು ಭವದ ಬೀಜ, ನಿರಾಸೆ ಎಂಬುದು ನಿತ್ಯ ಮುಕ್ತಿ”.

     ಎಂದು ಶರಣ ಉರಿಲಿಂಗ ಪೆದ್ದಿ ಅವರು ಒಂದು ವಚನದಲ್ಲಿ ಹೇಳುತ್ತಾರೆ. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತು ಕೂಡ ಇದೇ ಅರ್ಥವನ್ನು ತಿಳಿಸುತ್ತದೆ. ಕಾಯಕವೇ ಕೈಲಾಸ ಆಗುವುದು ಯಾವಾಗ ಎಂದರೆ, * ಕಾಯಕ ಅರ್ಥಪೂರ್ಣವಾಗಿರಬೇಕು * ಕಾಯಕಕ್ಕೆ ತಕ್ಕ ಪ್ರತಿಫಲ ಇರಬೇಕು. * ಕಾಯಕದ ಪ್ರತಿಫಲ ತಕ್ಷಣ ಸಿಗಬೇಕು. ಆಗ ನೆಮ್ಮದಿಯ ಬದುಕು ನಮ್ಮದಾಗುತ್ತದೆ. ಕಾಯಕವೇ ಕೈಲಾಸ ವೆಂದರೆ ಕೆಲಸ ಮಾಡಿದವರಿಗೆ ಸ್ವರ್ಗ ಸಿಗುತ್ತದೆ ಅಂತ ಅಲ್ಲ. ಸ್ವರ್ಗ ಅಲ್ಲಿ ಇಲ್ಲಿ ಬೇರೆಲ್ಲೂ ಇಲ್ಲ. ದುಡಿಯುವ ವರ್ಗ ಆನಂದದಿಂದ ಬದುಕಿದರೆ ಅದು ಅವರಿಗೆ ಸ್ವರ್ಗ. ದುಡಿಸಿಕೊಂಡವರಿಗೆ ಸಂತುಷ್ಟತೆ ಇದ್ದರೆ ಅದು ಅವರಿಗೆ ಸ್ವರ್ಗ ಎನ್ನುವ ಅರ್ಥದಲ್ಲಿ ಅಣ್ಣ ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದರು. ಆದರೆ ಇತ್ತೀಚಿನ ದಿನಗಳಲ್ಲಿ ದುಡಿದವರಿಗೂ ಸಮಾಧಾನವಿಲ್ಲ, ದುಡಿಸಿಕೊಂಡವರಿಗೂ ಸಮಾಧಾನವಿಲ್ಲ. ಒಬ್ಬರು ಇನ್ನೊಬ್ಬರನ್ನು ಮೋಸ ಮಾಡುವುದು ಒಬ್ಬರು ಇನ್ನೊಬ್ಬರನ್ನು ವ್ಯವಹರಿಕವಾಗಿ ನೋಡುವುದು. ಶರಣ ತತ್ವಕ್ಕೆ ವಿರುದ್ದವಾದ ನಡೆಯಾಗಿದೆ. ಇಲ್ಲಿ ಪ್ರಮಾಣಿಕ ಬದಲಾವಣೆ ಕಂಡರೆ, ಮಾನಸಿಕ ಆರೋಗ್ಯಕ್ಕೆ ಸಹಕಾರಿ ಆಗಲಿದೆ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯೆದೆ ಮಾಂಬುದೇ

ಕಡೆಗೀಲು ಬಂಡಿಗಾಧಾರ, ಕಡು ದರ್ಪವೇರಿದ ಒಡಲೆಂಬ ಬಂಡಿಗೆ,

ಮೃಡ ಶರಣರ ನುಡಿಗಡಣವೇ ಕಡೆಗೀಲು ಕಾಣ ರಾಮನಾಥ.

           ಎಂದು ದೇವರ ದಾಸಿಮಯ್ಯನವರ ವಚನದಲ್ಲಿ ನಮ್ಮ ಮನಸ್ಸಿನ ಹಿಡಿತ, ನಮ್ಮ ಕೈಯಲ್ಲಿ ಇರಬೇಕೆ ವಿನಹ, ಅನ್ಯರು ಆನಂದಿಸುವ ಸುಖ ಭೋಗಗಳಿಗೆ ಸೆರೆಯಾಗಬಾರದು. ನಮ್ಮ ಮನಸ್ಸು ನಮ್ಮ ಆರೋಗ್ಯದ ಕೀಲಿ ಆಗಿದೆ. ಆರೋಗ್ಯಯುತ ಸಾರಸತ್ವ  ಬದುಕಿನ ದೃಡ ಸಂಕಲ್ಪ ನಮ್ಮಲ್ಲಿ ಇರಬೇಕು ಎಂದು ತಿಳಿಸುತ್ತಾರೆ. ಅದೇ ರೀತಿಯಾಗಿ ಸುಂಕದ ಬಂಕಣ್ಣ ಶರಣರು ತಮ್ಮ ವಚನದಲ್ಲಿ

“ಹರಿಯುವ ಮನ ತುರಗ, ಅಹಂಕಾರ ಗಜ ಮೂಡಚಿತ್ತ ಒಂಟಿಯಾಗಿ,

ಜೀವಗಳು ವ್ಯವಹಾರಿಯಾಗಿ, ಅಂಗವೆಂಬ ಭೂಮಿಯಲ್ಲಿ ವ್ಯವಹಾರ ಮಾಡಲಾಗಿ

ಚಿತ್ತವೆಂಬ ಸೂಳುಗಾರ ಒಪ್ಪದ ಚೀಟಿ ತೊರಿಯೆಂದಲ್ಲಿ,

ಸಿಕ್ಕಿದ್ದ ಜೀವವೆಂಬ ಶೆಟ್ಟಿ ಭಾವದ ತೆಕ್ಕೆಗೆ ಸೆರೆ ಸಾಲಿಯಲ್ಲಿ

ಕೆಟ್ಟಿತ್ತು ಸುಂಕ ಬಂಕೇಶ್ವರ ಲಿಂಗಕ್ಕೆ ನಷ್ಟ ಬಂದುದಲ್ಲ

      ಎಂದು ಹೇಳುತ್ತಾರೆ ಇಲ್ಲಿ ಶರೀರ ಮನಸ್ಸು ಹಾಗೂ ವಿಕಾರಗಳು ಬೇರೆ ಬೇರೆ ಪ್ರಾಣಿಗಳಿಗೆ ಹೋಲಿಸಿ ಹೇಳಿರುವ ಈ ವಚನ ನಮ್ಮ ಬದುಕಿಗೆ ಉತ್ತಮ ಸಂದೇಶ ನೀಡುತ್ತದೆ. ನಮ್ಮ ಮನಸ್ಸು ಮರ್ಕಟದಂತಿದೆ ಅದನ್ನು ಹರಿ ಬಿಡಬಾರದು ನಮ್ಮ ತಲೆಗೆ ಅಹಂಕಾರವಿರಬಾರದು, ಚಿತ್ತ ಯಾವತ್ತು ಕೂಡ ಸಮಚಿತ್ತವಾಗಿರಬೇಕು ಎಂದು ತಮ್ಮ ವಚನದಲ್ಲಿ ಸಂದೇಶವನ್ನು 12ನೇ ಶತಮಾನದಲ್ಲಿಯೇ ತಿಳಿಸಿದ್ದಾರೆ

                                 “ಹೊರನಾಳ ಎಂಟು ಕೋಟೆ, ಒಳನಾಡ ನೂರೆಂಟು, ಹೊರದ್ವಾರ ಒಂಬತ್ತು,

                                 ಒಳದ್ವಾರ ಸರ್ವಾಂಗಮಯ ಇಂತಿ ಪಂಚತತ್ವ, ಅಷ್ಟಗುಣಗಳು,

                                  ಕೂಡಿ ಗಟ್ಟಿಗೊಂಡ ಶುಕ್ಲ ಶೋನಿತ ಮಜ್ಜಿ ಮಾಂಸ ಎಲ್ಲವೂ

                                  ಚರ್ಮ ರೋಮ ಅದು ಅರೆವೆಡೆ ಅಸಾಧ್ಯ, ಸುಮ್ಮನೆ ದೃಷ್ಟಿ ನಟ್ಟು

                        ಮುಚ್ಚಿರಲಿಕ್ಕಾಗಿ ರೋಗರುಜಿ ಬಚ್ಚ ಬಯಲು ಮರುಳ ಶಂಕರ ಪ್ರಿಯ ಸಿದ್ದರಾಮಯ್ಯ.

ಎಂದು ವೈದ್ಯ ಸಂಕಣ್ಣನವರ ವಚನದಲ್ಲಿ ದೇಹದ ರಚನೆಯ ಕುರಿತಾಗಿ ಸ್ಪಷ್ಟವಾಗಿ ಚಿತ್ರಣವನ್ನು ಇಡುತ್ತದೆ. ಒಳ್ಳೆಯ ಸದೃಢ ಶರೀರದೊಂದಿಗೆ ಸದೃಢ ಮನಸ್ಸು ಹೊಂದಿರಬೇಕು ಇದರಿಂದ ಒಳ್ಳೆಯ ಫಲಿತಾಂಶವನ್ನು ಕಾಣಬಹುದು ಎಂಬುದೇ ಶರಣರ ಆಶಯ.

ಅದೇ ರೀತಿಯಾಗಿ ನಮ್ಮ ದೇಹದ ಪ್ರಕೃತಿ ಹೇಗೆ ರಚನೆಯಾಗಿದೆಯೋ ಹಾಗೆ ಈ ಸುಂದರ ಸೃಷ್ಟಿಯು ಕೂಡ ವಿವಿಧ ಅಂಶಗಳನ್ನ ಸೇರಿ ರಚನೆಗೊಂಡಿದೆ ಅದಕ್ಕೆ ದೇವರ ದಾಸಿಮಯ್ಯನವರ ಒಂದು ವಚನದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.

                                                ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ನಿಮ್ಮ ದಾನ,

                                               ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳೆಂಬೆ ರಾಮನಾಥ.

             ಎನ್ನುವುದು ನಮ್ಮ ದೇಹಕ್ಕೆ ಮತ್ತು ಪ್ರಕೃತಿಗೆ ಎಷ್ಟು ಅನನ್ಯವಾದ ಸಂಬಂಧಗಳು ಇವೆ ಎನ್ನುವುದನ್ನು ಈ ವಚನದಲ್ಲಿ ಸ್ಪಷ್ಟಪಡಿಸುತ್ತದೆ. ಇಳೆ ನಿಮ್ಮದಾನ ಅಂದರೆ ಈ ಸೃಷ್ಟಿ ಕೊಟ್ಟಿರುವ ಬಹುದೊಡ್ಡ ಸಂಪತ್ತು ಈ ಭೂಮಿ. ಅದರೊಳಗೆ ಸಸ್ಯ ಸಂಪತ್ತು ಇದೆ ಗಾಳಿ ಇದೆ, ನೀರು ಇದೆ, ಬೆಳಕು ಇದೆ, ಮಣ್ಣು ಇದೆ, ಹೀಗೆ ಹತ್ತು ಹಲವರು ಕೊಡುಗೆಗಳು ಕರುಣಿಸಿದ ಆ ಸೃಷ್ಟಿ ನಮಗೆ ಪ್ರತೇಕ್ಷ ದೇವರು, ಎಂಬುದಾಗಿ ಹೋಲಿಸಿದ್ದಾರೆ. ಸರ್ವ ಅಂಗಾಂಗಗಳು ನಿಮ್ಮ ದಾನವಯ್ಯ, “ಒಂದಂಗವಿಲ್ಲದಿರೆ ಬದುಕು ಭಂಗವೆಂದ ಬೋಧಿ” ಈ ಸೃಷ್ಟಿ ನಮಗೆ ನೀಡಿರುವ ಅಂಗಾಂಗ ಗಳಲ್ಲಿ ಒಂದು ಅಂಗ ಏನಾದರೂ ವೈಫಲ್ಯವಾದರೆ ನಮ್ಮ ಬದುಕು ನರಕ ಯಾತನೆ ಆಗುತ್ತದೆ. ಎಂದು ಈ ವಚನದಲ್ಲಿ ಉತ್ತಮವಾಗಿದೆ ತಿಳಿಸಿದ್ದಾರೆ. “ಮಾಡಿದವನ ಭಕ್ತಿ ಆ ಇರುವೆಗಿಂತ ಕರ ಕಷ್ಟ ಕಾಣಾ ರಾಮನಾಥ. ಸಣ್ಣ ಇರುವಿಗೂ ಕೂಡ ತನ್ನ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವುದಕ್ಕೆ, ಬಹಳ ಭಕ್ತಿಯಿಂದ ತನ್ನ ಶ್ರದ್ಧೆಯಿಂದ ತನ್ನ ಕಾರ್ಯವನ್ನು ಮಾಡುತ್ತದೆ. ಆದರೆ ನಾವು ಮಾನವರಾಗಿ ಅದಕ್ಕಿಂತಲೂ ಕರಕಷ್ಟವಾಗಿ ಕಾಯಕದಲ್ಲಿ ಶ್ರದ್ದೆ ಇಲ್ಲ, ಭಕ್ತಿ ಇಲ್ಲ ಎಂದು ಮನುಷ್ಯರಿಗೆ ಎಚ್ಚರಿಸುತ್ತಿದ್ದಾರೆ.

                                           ಕಣ್ಣು ಮೀಸಲು ಶಿವನ, ಕೈ ಮೀಸಲು ಶಿವನ, ಕಾಲು ಮೀಸಲು ಶಿವನ,

                                           ನಾಲಿಗೆ ಮೀಸಲು ಶಿವನ. ಕಿವಿ ಮೀಸಲು ಶಿವನ,

                                           ನಾಸಿಕ ಮೀಸಲು ತನುಮನವೆಲ್ಲ ಮೀಸಲು ಶಿವನ

                                           ಈ ಮೀಸಲು ಬೀಸರವಾಗದಂತಿರ್ದಡೆ ಆತನೇ ಜಗದೀಶ ಕಾಣ ರಾಮನಾಥ.

          ಈ ಸೃಷ್ಟಿ ನಮಗೆ ನೀಡಿದ ಎಲ್ಲಾ ಅಂಗಾಂಗಗಳು ಯಶೃಸ್ಟಿಗೆ ಮೀಸಲಿವೆ. ಶಿವನೆಂದರೆ ಸೃಷ್ಟಿ ಎನ್ನುವ ಅರ್ಥದಲ್ಲಿ ಪ್ರತಿ ಅಂಗಗಳಿಂದಲೂ ಪ್ರತಿ ದಿನ ಒಂದು ಶುಭ ಕಾರ್ಯ ನಡೆಯಲಿ. ಕಣ್ಣು, ಕಿವಿ, ಕೈ-ಕಾಲು, ಮೂಗು, ತನುಮನ ಎಲ್ಲವೂ ಶಿವನಿಗೆ ಮೀಸಲಿರುವಾಗ ಇವುಗಳಿಂದ ಕೆಡಕು ಬಗೆದರೆ, ಆ ಶಿವನಿಗೆ ಕೇಡು ಬಗೆದಂತೆ. ಸಂಸಾರಕ್ಕೂ ಮತ್ತು ಕ್ರೀಡೆಗೂ ಎರಡು ಕಡೆಯೂ ಕೂಡ ಅನ್ವಯವಾಗುವಂಥದ್ದು ಒಂದು ಕ್ರೀಡೆಯಾಡಬೇಕಾದರೆ ಕಣ್ಣು ಮುಖ್ಯ ಕಾಲು ಮುಖ್ಯ ಕಿವಿ ಮುಖ್ಯ ಒಂದು ಸಂಸಾರಕ್ಕೂ ಕೂಡ ಈ ಎಲ್ಲವೂ ಮುಖ್ಯವಾಗಿರುತ್ತವೆ. ಅದನ್ನು ರಕ್ಷಣಾತ್ಮಕವಾಗಿ ಬಹಳ ಅಚ್ಚು ಕಟ್ಟುತನದಿಂದ ನಿಭಾಯಿಸಿಕೊಂಡು ಹೋದಾಗ ಮಾತ್ರ ನಾವು ಆರೋಗ್ಯವಂತರಾಗಿ ಬದುಕುತ್ತೇವೆ. ಉತ್ತಮವಾಗಿ ನಮ್ಮ ಬದುಕು ಸಾಗುತ್ತದೆ ಎನ್ನುವ ಸಂದೇಶ ತಮ್ಮ ವಚನದಲ್ಲಿ ನೀಡಿದ್ದಾರೆ.

        ಜಗತ್ತಿನ ಆರೋಗ್ಯಕ್ಕಾಗಿ ಭಾರತದ ಬಹುದೊಡ್ಡ ಸಂದೇಶವೇನೆಂದರೆ ಬುದ್ಧ ಹೇಳಿದ ತಾಳ್ಮೆ, ಪತಂಜಲಿ ಮಹರ್ಷಿಗಳು ಹೇಳಿರುವಂತಹ ಯೋಗ ಸೂತ್ರಗಳು ಇಂಥ ಸಂದೇಶವನ್ನು ಸಾರುವಲ್ಲಿ ನಮ್ಮ ಭಾರತ ಮುಂಚುಣಿಯಲ್ಲಿದೆ.

                                ಯೋಗೇನ ಚಿತ್ತಸ್ಯ ಪದೇನ ವಾಚಾಂ । ಮಲಂ ಶರೀರಸ್ಯ ಚ ವೈದ್ಯಕೇನ್ ॥

                                  ಯೋತ್ರಪಾಕರೋತ್ತಮಂ ಪ್ರವರಂ ಮುನೀನಾಂ । ಪತಂಜಲಿಂ ಪ್ರಾಂಜಲಿರಾನತೋಯಸ್ಮಿ ॥

         ಎನ್ನುವ ಶ್ಲೋಕದಲ್ಲಿ ಉತ್ತಮ ನಡೆ ನುಡಿ ಮನಸ್ಸಿನ ಏಕಾಗ್ರತೆ, ಹೆಚ್ಚುತ್ತದೆ ಎಂದು ಪತಂಜಲಿ ಮಹರ್ಷಿಯವರು ತಮ್ಮ ಶ್ಲೋಕದಲ್ಲಿ ಹೇಳುತ್ತಾರೆ. ಚಿತ್ತ ವೃತ್ತಿ ನಿರೋಧಹ ಯೋಗ || ಕರ್ಮಸ್ಯ ಕೌಶಲ್ಯ ಯೋಗ || ಎಂದು ಯೋಗದ ಕುರಿತಾಗಿ ಹೇಳಿರುವ ಪತಂಜಲಿ ಮಹರ್ಷಿಯವರ ಯೋಗಶಾಸ್ತ್ರದಲ್ಲಿ * ಭಕ್ತಿ ಯೋಗ * ಕರ್ಮ ಯೋಗ * ಜ್ಞಾನ ಯೋಗ * ರಾಜ್ಯ ಯೋಗ ಎಂದು ನಾಲ್ಕು ಭಾಗಗಳಲ್ಲಿ ನಮ್ಮ ಆರೋಗ್ಯದ ಸೂತ್ರಕ್ಕಾಗಿ ಯೋಗವನ್ನು ಪರಿಚಯಿಸಿದ್ದಾರೆ. ಅದರಲ್ಲಿ ರಾಜ್ಯಯೋಗದಲ್ಲಿ ಅಷ್ಟಾಂಗ ಯೋಗ ಎನ್ನುವ ಎಂಟು ಹಂತಗಳನ್ನು ನಮಗೆ ತಿಳಿಸುತ್ತಾರೆ.  

              * ಯಮ * ನಿಯಮ * ಆಸನ * ಪ್ರಾಣಾಯಾಮ * ಪ್ರತ್ಯಾಹಾರ * ಧಾರಣ * ಧ್ಯಾನ * ಸಮಾಧಿ

         ಎಂಬ ಎಂಟು ಹಂತಗಳು ನಮ್ಮ ಬದುಕಿನ ಆರೋಗ್ಯಕರ ಸೂತ್ರಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವಂತಹ ವಾಕ್ಯದಂತೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗ ಕ್ಷೇಮದ ಸ್ಥಿತಿಯನ್ನು ಆರೋಗ್ಯ ಎನ್ನುತ್ತೇವೆ. ಅದರಂತೆಯೇ ಪತಂಜಲಿ ಮುನಿಗಳ ಅಷ್ಟಾಂಗ ಯೋಗ ಸೂತ್ರಗಳು ಅದರಲ್ಲಿ ಯಮದಲ್ಲಿ ನಮ್ಮ ದಿನನಿತ್ಯದ ಬದುಕಿನ ಕೃತ್ಯಗಳ ಕುರಿತಾಗಿ ಹೇಳುತ್ತದೆ * ಅಹಿಂಸೆ * ಸತ್ಯ * ಅಸ್ಥೆಯ * ಅಪರಿಗ್ರಹ * ಬ್ರಹ್ಮಚಾರ್ಯ ಈ ಪಂಚ ಸೂತ್ರಗಳು ನಾವು ದಿನನಿತ್ಯ ಬದುಕಿನಲ್ಲಿ ಪಾಲಿಸಬೇಕು ಎಂದು ಸೂಚಿಸುತ್ತದೆ. ಹಾಗೆ 12ನೇ ಶತಮಾನದ ಬಸವಣ್ಣರ ಕಾಲಕ್ಕೆ ಬಂದಾಗ ಒಂದು ವಚನ ಇದಕ್ಕೆ ಸರಿದೂಗುವಂತಿದೆ.

ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ;

ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ;

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.

ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ.

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ!

      ಎನ್ನುವ ವಚನದಲ್ಲಿ ಇಡೀ ಬದುಕಿನ ಸಾರಾಂಶವನ್ನು ತಿಳಿ ಹೇಳುತ್ತದೆ. ಹಾಗೆ ಸತ್ಯ ಎಂದರೆ ಯಾವುದು ಎನ್ನುವ ವಿಚಾರದಲ್ಲಿ                

  ದೇವಲೋಕ ಮರ್ತ್ಯ ಲೋಕ ಬೇರಿಲ್ಲ ಕಾಣಿರೋ, ಸತ್ಯವ ನುಡಿಯುವುದೇ ದೇವಲೋಕ

ಮಿತ್ಯವ ನುಡಿಯುವುದೇ ಮರ್ತ್ಯ ಲೋಕ, ಆಚಾರವೇ ಸ್ವರ್ಗ ಅನಾಚಾರವೆ ನರಕ

       ಎಂದು ಅಣ್ಣ ಬಸವಣ್ಣನವರ ವಚನದಲ್ಲಿ ಸತ್ಯ ಯಾವುದು ಎಂದರೆ ಪ್ರಸ್ತುತ ನಾವು ಈ ಜಗತ್ತಿನಲ್ಲಿ ಈಗ ನಾವು ಬದುಕುತ್ತಿರುವುದು ಮಾತ್ರ ಸತ್ಯ ಉಳಿದೆಲ್ಲವೂ ಕೂಡ ಮಿತ್ಯ ಎನ್ನುವ ವೈಚಾರಿಕತೆಯ ಪ್ರಜ್ಞೆ ಮೂಡಿಸಿರುವುದು ಬಹಳ ಆದರ್ಶಮಯವಾಗಿದೆ.

       ಅಪರಿಗ್ರಹವೆಂದರೆ, ಸ್ವಾರ್ಥಕ್ಕಾಗಿ ಅನಗತ್ಯ ಭೋಗ ಸಾಮಗ್ರಿಗಳನ್ನು ಕೂಡಿಡುವುದು ಅಪರಾಧ. ಅಗತ್ಯವಿರುವಷ್ಟು ಮಾತ್ರ ಪಡೆಯಬೇಕು ಎನ್ನುವ ಸಂದೇಶ ನಮ್ಮ ಆರೋಗ್ಯದಾಯಕವಾಗಿ ಮಾರ್ಪಾಡಾಗಬೇಕು. ಹೆಚ್ಚಿನದನ್ನು ಕೂಡಿರುವುದರಿಂದ ಮಾನಸಿಕ ಹಿಂಸೆಯಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಸೇವಿಸುವುದನ್ನು ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ. ಎನ್ನುವ ಸಂದೇಶ ಬಸವಾದಿ ಶರಣರೆಲ್ಲರೂ ತಮ್ಮ ವಚನಗಳಲ್ಲಿ ಸಾರಿದ್ದಾರೆ.

ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ

ಅಕ್ಕಿದೊಳಗೊಂದಗುಳ, ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ

ನಿಮ್ಮಾಣೆ ನಿಮ್ಮ ಪ್ರಮಥರಾಣಿ.

ನಿಮ್ಮ ಶರಣರಿಗಲ್ಲದೆ ಮತೊಂದನರಿಯೆ ಕೂಡಲಸಂಗಮದೇವಾ.

ನನಗೆ ಹೆಚ್ಚಿನ ಹೊರೆಯ ಆಸೆಗಳು ಬೇಡ. ಇಂದಿನ ಬದುಕು ಇಂದಿಗೆ ಸುಂದರ, ಸಂತುಷ್ಟವಾಗಿದ್ದರೆ ಸಾಕು ಎಂದು

ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ

ರೋಷವೆಂಬುದು ಯಮದೂತರಿಗಲ್ಲದೆ; ಅಜಾತರಿಗುಂಟೆ ಅಯ್ಯಾ

ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ

ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.

ಯಾರೆ ಆಗಲಿ ನಮ್ಮ ಬದುಕಿನ ನಿತ್ಯ ಜೀವನಕ್ಕೆ ಅಗತ್ಯವಿರುವಷ್ಡೆ ಸಂಪತ್ತು ಬಳಸಬೇಕು. ಅದಕಿಂತ ಹೆಚ್ಚಿನದನ್ನು ಸಂಗ್ರಹ ಸಲ್ಲದು ಎಂದು ಶರಣೆ ಆಯ್ದಕ್ಕಿ ಲಕ್ಕಮ್ಮ ಹೇಳುತ್ತಾರೆ. ಇಲ್ಲಿ ನಮ್ಮ ಬದುಕಿಗೆ ಅಗತ್ಯವಾಗಿರತಕ್ಕಂತಹ ಭೋಗದ ವಸ್ತುಗಳು ಮಾತ್ರ ಕೊಳ್ಳಬೇಕು ಅನಗತ್ಯ ವಸ್ತುಗಳು ಕೂಡಿಟ್ಟುಕೊಳ್ಳಬಾರದು. ಆಸೆ ಮಿತವಾಗಿರಬೇಕು ಆಗ ಆರೋಗ್ಯ ಬಹಳ ಆನಂದದಾಯಕವಾಗಿರುತ್ತದೆ ಎನ್ನುವ ಸಂದೇಶತಮ ವಚನದಲ್ಲಿ ಸಾರಿದ್ದಾರೆ.

            ನಿಯಮದಲ್ಲಿ: ದೇಹ ಬುದ್ಧಿ ಭಾವಗಳ ಸ್ವಚ್ಛತೆ ಶುಭ್ರತೆ ಇರಲೆಂದು *ಶೌಚ್ಚ *ಸಂತೋಷ * ತಪಸ್ಸು * ಸ್ವದ್ಯಾಯ * ಈಶ್ವರಿ ಪ್ರಾಣಿದಾನ ಎನ್ನುವ ಅಂಶಗಳನ್ನು ಪತಂಜಲಿ ಮಹರ್ಷಿಯವರು ನಮಗೆ ತೋರಿಸಿಕೊಟ್ಟಿದ್ದಾರೆ.

ನಡೆ ಶುಚಿ, ನುಡಿ ಶುಚಿ, ತನು ಶುಚಿ,

ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು

ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ

ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ

       ಎಂದು ವೈರಾಗ್ಯದ ಶರಣೆ ಅಕ್ಕಮಹಾದೇವಿ ಹೇಳಿದ್ದಾರೆ. ಆಸನದ ವಿಷಯಕ್ಕೆ ಬಂದಾಗ “ಸ್ಥಿರಂ ಸುಖಂ ಆಸನಂ” ಎಂದು ಹೇಳುತ್ತಾರೆ. ಏಕಾಗ್ರತೆಯಿಂದ ಸ್ಥಿರವಾಗಿ, ದೃಢ ಸಂಕಲ್ಪದ ಸುಖದಲ್ಲಿ ನಿಲ್ಲುವ ದೇಹದ ಭಂಗಿ. “ಸದೃಢ ದೇಹದೊಳಗೆ ಸದೃಢ ಮನಸ್ಸು” ಇರುತ್ತದೆ. ನಮ್ಮ ಸದೃಢ ದೇಹ ನಿರ್ಮಿಸಿಕೊಳ್ಳುಲು ಏನೆಲ್ಲ ಕಸರತ್ತುಗಳನ್ನು ಮಾಡುತ್ತೇವೆ. ಅದಕ್ಕಾಗಿ ಅಣ್ಣ ಬಸವಣ್ಣನವರು ತಮ್ಮ ವಚನದಲ್ಲಿ ಹೇಳುತ್ತಾರೆ.

ಉಳ್ಳವರು ಶಿವಾಲಯ ಮಾಡಿರುವರು, ನಾನೇನು ಮಾಡಲಿ ಬೇಡವಯ್ಯ,

ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯ

ಕೂಡಲಸಂಗಮದೇವ ಕೇಳಯ್ಯ ಸ್ಥಾವರಕಳಿವುಂಟು, ಜಂಗಮಕ್ಕಳಿವಿಲ್ಲ.

          ಎಂದು ನಮ್ಮ ದೇಹದ ಆರೋಗ್ಯ ಎಷ್ಟು ಸಂಪತ್ಭರಿತವಾಗಿರಬೇಕೆಂದರೆ ನಮ್ಮ ಕಾಲುಗಳು ಕಂಬದಂತೆ ಗಟ್ಟಿಯಾಗಬೇಕು ನಮ್ಮ ದೇಹವು ಭಕ್ತಿ ಶ್ರದ್ಧೆಯಿಂದ ಕೂಡಿದ ದೇಗುಲದಂತಿರಬೇಕು ನಮ್ಮ ಸ್ಥಿರವು ಜ್ಞಾನದ ಹೊಳಪಿನಿಂದ ಕೂಡಿರಲಿ ಎಂದು ಹೇಳುತ್ತಾರೆ.

ಅರ್ಥ ರೇಖೆ ಇದ್ದು ಫಲವೇನು ಆಯುಷ್ಯ ರೇಖೆ ಇಲ್ಲದ ನಕ್ಕ

ಹಂದೆಯ(ಹೇಡಿ) ಕೈಯಲ್ಲಿ ಚಂದ್ರಾಯೂಧವಿರ್ದು ಫಲವೇನು

ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು?

ಮರ್ಕಟಕನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?

ನಮ್ಮ ಕೂಡಲಸಂಗನ ಶರಣರ ನರಿಯದವರ ಕೈಯಲ್ಲಿ

ಲಿಂಗವಿದ್ದು ಫಲವೇನು ಶಿವ ಪಥವನ್ನ ಅರಿಯದ ನಕ್ಕ

ಪ್ರಕೃತಿದತ್ತವಾದ ಈ ನಮ್ಮ ದೇಹ ಅರಿಯದ ಮೇಲೆ, ಆರೋಗ್ಯ ಇಲ್ಲದ ಮೇಲೆ, ಐಶ್ವರ್ಯ ಅಂತಸ್ತು ಸಂಪತ್ತು ಶ್ರೀಮಂತಿಕೆ ಎಷ್ಟು ಇದ್ದರೇನಂತೆ ಎಂದು ಪ್ರಶ್ನಿಸುತ್ತಾರೆ. ಇಲ್ಲಿ ನಮ್ಮ ದೇಹ ಮತ್ತು ಅದರ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ವಿವರಿಸಿದ್ದಾರೆ.

ಎನ್ನ ಕಾಯವ ದಂಡಿಗೆಯ ಮಾಡಯ್ಯಾ, ಎನ್ನ ಶಿರವ ಸೋರೆಯ ಮಾಡಯ್ಯಾ

ಎನ್ನ ನರವ ತಂತಿಯ ಮಾಡಯ್ಯಾ, ಎನ್ನ ಬೆರಳ ಕಡ್ಡಿಯ ಮಾಡಯ್ಯಾ

ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು ಕೂಡಲಸಂಗಮದೇವಾ.

ಎಂದು ಅನೇಕ ವಚನಗಳಲ್ಲಿ ಕಾಯದ ಪರಿಕಲ್ಪನೆಯಲ್ಲಿ ಶ್ರಮದ ಸತ್ಯದ ನಾದ ಹೋರ ಬರಬೇಕಾದರೆ, ನಮ್ಮೊಳಗಿನ ನೆಮ್ಮದಿಯ ಸ್ವರ ತಿಳಿಯಾಗಬೇಕೆಂದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢತೆ ಹೊಂದಿರಬೇಕು ಎಂದು, ದೈಹಿಕ ಶರ್ಮತೆಯ ಕುರಿತು ಮಾಹಿತಿ ನೀಡುತ್ತವೆ. ಆರೋಗ್ಯಕರ ದೈಹಿಕ ಶ್ರಮ ಎನ್ನುವುದು ಕಾಯಕನಿಷ್ಠೆ ಹಾಗೂ ಪೂಜ್ಯತೆಯಿಂದ ಮಾಡಬೇಕು ಅದು ಹೇಗಿರಬೇಕೆಂದು ವಚನದಲ್ಲಿ ಹೇಗೆ ಹೇಳುತ್ತಾರೆ.

ಎನ್ನ ಚಿತ್ತವು ಅತ್ತಿಯ ಹಣ್ಣುನೋಡಯ್ಯಾ, ವಿಚಾರಿಸಿದಡೆ ಏನೂ ಹುರುಳಿಲ್ಲಯ್ಯಾ.

ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪುಮಾಡಿ ನೀವಿರಿಸಿದಿರಿ

ಕೂಡಲಸಂಗಮದೇವಾ.

            ಹೋರ ಜಗತ್ತಿಗೆ ಡಾಂಬಿಕತನದಿಂದ ಆದರ್ಶಗಳು ತೋರುವ ಮನದೊಳಗೆ ಅದೇಷ್ಟೋ ಕೊಳಕು ತುಂಬಿಕೊಂಡಿದೆ. ಅತ್ತಿಯ ಹಣ್ಣು ಹೊರಗೆ ಸುಂದರವಾಗಿ ಕಾಣುತ್ತದೆ. ಆದರೆ, ಒಡೆದು ನೋಡಿದರೆ ಹುಳುಗಳಿಂದ ತುಂಬಿಕೊಂಡಿದೆ. ಇಂತಹ ನಮ್ಮ ಮನಸ್ಸು ಉತ್ತಮ ಕಾರ್ಯಗಳಿಂದ, ಸನ್ನಡತೆಯಿಂದ ಒಳಗಿನ ಕಲ್ಮಶವ ತೊಳೆವಂತೆ ಮಾಡು, ಮನೋವಿಕಾರಗಳಿಂದ ಮುಕ್ತ ಮಾಡು ದೇವ.ಸ್ವಧ್ಯಾಯದ ಮೂಲಕ ತನ್ನನ್ನು ತಾನು ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವ ಸಂದೇಶ ಸಾರಿದ್ದಾರೆ.


ಸಕಲೇಂದ್ರಿಯಗಳಲ್ಲಿ ವಿಕರಿಸುವ ಮನವ ಸೆಳೆದು ನಿಂದಾತ ಸುಖಿ

ಪಂಚೇಂದ್ರಿಯಗಳಿಚ್ಛೆಯೋಳು ಮನಗೊಂಡು ಸುಳಿವಾತ ದುಃಖಿ

ಮನವು ಬಹಿರ್ಮುಖವಾಗಲು ಮಾಯ ಪ್ರಪಂಚಿ

ಮನವಂತರ್ಮುಖ ವಾದಡೆ ವಿರಳಜ್ಞಾನಿ, ಮನವು ಮಹದಲಿ ನಿಂದಡಾತ ಮುಕ್ತನು

ಮನೋಲಯವಾದಡೆ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅಭೇದ್ಯನು.

       ಮನಸ್ಸು ಚಂಚಲ ಮಾತ್ರವಲ್ಲ, ಪ್ರಕ್ಷುಬ್ಧ ಅಥವಾ ಪ್ರಚೋದಕ, ಬಲವಾದ ಮತ್ತು ಹಠಮಾರಿ. ಇದು ದೇಹ ಮತ್ತು ಇಂದ್ರಿಯಗಳಲ್ಲಿ ಹಿಂಸಾತ್ಮಕ ಪ್ರಚೋದನೆಯನ್ನು ಉಂಟುಮಾಡುತ್ತದೆ. ಮನಸ್ಸು ಎಲ್ಲಾ ದಿಕ್ಕುಗಳಲ್ಲಿರುವ ವಸ್ತುಗಳಿಂದ ಸೆಳೆಯಲ್ಪಟ್ಟಿದೆ. ಒಳಿತು– ಕೆಡಕುಗಳ ಮೂಲ ಇಂದ್ರಿಯಗಳು. ಅವುಗಳ ನಿಗ್ರಹಿಸಿದಾತ ಯೋಗಿ. ಯೋಗಭ್ಯಾಸದಿಂದ ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸಬಹುದು. ಏಕಾಗ್ರತೆ ಮೈಗೂಡಿಸಿಕೊಳ್ಳಬಹುದು. ಜತೆಗೆ ದೈಹಿಕ ಮತ್ತು ಮಾನಸಿಕ ಸದೃಢತೆ ಕಾಪಾಡಿಕೊಂಡು ಸಾರಸತ್ವ ಜೀವನ ನಮ್ಮದಾಗಿಸಿಕೊಳ್ಳಬಹುದು. ಹಾಗಾದರೆ ಏನು ಮಾಡುವುದು ಎಂದು ವಚನದ ಮೂಲಕ ಹೀಗೆ ಹೇಳುತ್ತಾರೆ.

ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದರೂ ಮರೆಯಬೇಕು,

ಲಿಂಗಪೂಜೆಯಾದರೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದರೂ ಹಂಗ ಹರಿಯಬೇಕು.

ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.

ನಮ್ಮ ಮನಸ್ಸು ನಮ್ಮ ಕಾರ್ಯಕ್ಷಮತೆಯ ಮೇಲೆ ಇರಬೇಕು. ಭಕ್ತ ಕುಂಬಾರ ಗುಂಡಣ್ಣನ ಆದರ್ಶಗಳು, ಸತ್ಯ ಹರಿಶ್ಚಂದ್ರರ ಕರ್ತವ್ಯ ನಿಷ್ಠೆಯ ಮೈಗೂಡಿಸಿಕೊಳ್ಳಬೇಕು. ಶರಣರ ಕಾಯಕ ತತ್ವ ಅರಿತುಕೊಳ್ಳಬೇಕು.

ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ, ತಂದೆ;

     ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ, ತಂದೆ;

                                            ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ, ತಂದೆ;

      ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲ ಸಂಗಮದೇವಾ.

ಈ ಮನಸ್ಸು ಅತ್ತ ಇತ್ತ ಹರಿಬಿಡಬೇಡ, ದುಶ್ಚಟಗಳಿಗೆ ಬಲಿಯಾಗಬೇಡ, ಇರುವ ಈ ಬದುಕೊಂದೇ ಸಾರ್ಥಕವಾಗಲಿ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಹೆಚ್ಚು ಚಿತ್ತ ಕೂಡಲಿ ಎಂದು ತಿಳಿಸುತ್ತಾರೆ. ಈ ಚಿತ್ತ ವಿಕಾರಗಳಿಂದಲೇ ಪ್ರಸ್ತುತ ಸಮಾಜದಲ್ಲಿ ಅನೈತಿಕ ಘಟನೆಗಳು, ಕೊಲೆ, ಸುಲಿಗೆ, ಮೋಸ, ವಂಚನೆಗಳು ನಡೆಯುತ್ತಿವೆ.ಎಂಬುದು ಎಲ್ಲರೂ ಅರಿತುಕೊಳ್ಳಬೇಕು.

“ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ

ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ

ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ

ಛಲಬೇಕು ಶರಣಂಗೆ ಲಿಂಗ ಜಂಗಮವನೊಂದೆಂಬ

ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ

ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ”

ಪ್ರತಿ ಕ್ಷಣವು ಬದುಕಿನ ಛಲವಾಗಬೇಕು. ನಮ್ಮ ಇಂದ್ರಿಯಗಳ ಮುಂದೆ ಸುಳಿವ ವಿಕಾರಗಳು ದೂರ ಸರಿಸಬೇಕು. ಅನಾವಶ್ಯಕ ಅತಿಭೋಗದ ಮೇಲಿನ ಆಸೆ ತೊರೆಯಬೇಕು. ಮಾನವರ ಜೀವನ ಮೌಲ್ಯಗಳನ್ನು ಹೇಗೆ ಅತ್ಯಂತ ನಿಷ್ಠೆಯಿಂದ ಅಳವಡಿಸಿಕೊಳ್ಳಬೇಕು ಎಂಬುದು ಇಲ್ಲಿ ಹೇಳಿದ್ದಾರೆ. ಸಾಧಕನ ಛಲವನ್ನೂ ಅದರ ಮೂಲವಾದ ಹಠ, ಅಹಂಕಾರಾದಿಗಳನ್ನೂ ಬಿಡಬೇಕೆಂದು ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ. ಆದರೆ ಇಲ್ಲಿ ಬಸವಣ್ಣನವರು ಶರಣನಿಗೆ ಛಲಬೇಕು ಎಂದು ಹೇಳುತ್ತಾರೆ. ಎಂತಹ ಛಲ? ಪರಧನವನೊಲ್ಲೆನೆಂಬ ಛಲ ಬೇಕು. ಪರಸತಿಯನೊಲ್ಲೆನೆಂಬ ಛಲಬೇಕು. ಪರದೈವ ವನೊಲ್ಲೆನೆಂಬ, ಲಿಂಗಜಂಗಮ ಒಂದೇ ಎಂಬ, ಪ್ರಸಾದವೇ ನಿಜವಾದ ಫಲವೆಂಬ ಛಲಬೇಕು.

           ಒಟ್ಟಾರೆಯಾಗಿ ನಾವು ನಮ್ಮ ಬದುಕು ಆದರ್ಶವಾಗಿ, ಆರೋಗ್ಯಯುತವಾಗಿ, ಮಿತವಾಗಿ, ಹಿತವಾಗಿ, ಸುಸ್ಥಿತವಾಗಿ ಶರಣರ ಆದರ್ಶಗಳ ದಾರಿಯಲ್ಲಿ ಸುಳಿದಾಡಲಿ. ಭವದ ಕ್ರೀಡಾಂಗಣದಲ್ಲಿ ಬದುಕೊಂದು ಆಟ. ಪ್ರತಿಯಬ್ಬರು ತಮ್ಮದೇ ಆದ ವಿಶೇಷ ಕೌಶಲ್ಯಗಳೊಂದಿಗೆ ಬದುಕಿನ ಕ್ರೀಡಾ ಕೌಶಲ್ಯ ಪ್ರದರ್ಶಿಸಲಿ. ಪ್ರತಿನಿತ್ಯವು ಸತ್ಯದ ಪಥದಲ್ಲಿ ಸೋಲು ಗೆಲುವುಗಳ ನಡುವೆ ಸಂಭ್ರಮದ ಬದುಕು ನಮ್ಮದಾಗಲಿ. ಡಾಂಬಿಕತನ ತೊರೆದು: ವೈಚಾರಿಕತೆಯ, ವೈಜ್ಞಾನಿಕತೆಯ, ವಾಸ್ತವತೆಯಲ್ಲಿ ಹೊಸ ಬದುಕು ಕಟ್ಟೋಣ. ಭಾರತೀಯರೆಲ್ಲರೂ ಒಂದೆಂಬ ಭಾವದಿಂದ, ಇವನಾರವ, ಇವನಾರವ, ಇವನಾರವ? ನೆಂದೆನಿಸದಿರಯ್ಯಾ. "ಇವ ನಮ್ಮವ, ಇವ ನಮ್ಮವ, ಇವ ನಮ್ಮವ" ನೆಂದೆನಿಸಯ್ಯಾ ಎನ್ನುತ ಮಾನಸಿಕ, ಸಾಮಾಜಿಕ, ಆರ್ಥಿಕ ಆರೋಗ್ಯ ಸರ್ವ ಸಮತೆಯಲ್ಲಿ ನಮ್ಮದಾಗಿಸೋಣ.


                                                  -------@-------

                                             ಸಂಪಾದನೆ :                   ದೇವೇಂಧ್ರ ಕಟ್ಟಿಮನಿ. ದೈ.ಶಿ.ಶಿ.

                                                                            ಸರ್ಕಾರಿ ಕನ್ಯಾ ಪ್ರೌಢಶಾಲೆ ಕಮಲಾಪುರ,

ಆರೋಗ್ಯದ ಕುರಿತು ಲೇಖನ
ದೇವೇಂದ್ರ ಕಟ್ಟಿಮನಿ

                                                                                        ಕಲಬುರಗಿ ಜಿಲ್ಲೆ.



  Devendra kattimani (ಚರ್ಚೆ) ೨೨:೦೯, ೨೧ ಮೇ ೨೦೨೫ (IST)Reply

ನಮಸ್ತೆ

[ಬದಲಾಯಿಸಿ]

ದೇವೇಂದ್ರರೆ ನಿಮ್ಮ ಉತ್ಸಾಹಕ್ಕೆ ನಮನ.

ವಿಕಿ ಯಾವುದೇ ಪತ್ರಿಕೆ ಅಲ್ಲ. ಅದು ಲೇಖನಗಳ ಸಂಗ್ರಹ.

ನಿಮ್ಮ ವೈಚಾರಿಕ ಮತ್ತು ಭೌಗೋಳಿಕ ಆಸಕ್ತಿ ಇವುಗಳಿಗೆ ವೇದಿಕೆ ಬಹುಷಃ ವಿಕಿ ಅಲ್ಲ.

ಮಾತನಾಡೋಣವೇ.

Mallikarjunasj (talk) ೧೦:೨೬, ೬ ಜನವರಿ ೨೦೨೬ (IST)Reply

ಏಷ್ಯನ್ ತಿಂಗಳ ನಿಮ್ಮ ಲೇಖನ ಅಳಿಸುತ್ತಿರುವೆ.

[ಬದಲಾಯಿಸಿ]

ಏಷ್ಯನ್ ತಿಂಗಳ ವಿಕಿಪೀಡಿಯ ಏಷ್ಯನ್ ತಿಂಗಳು/೨೦೨೫/ಅರ್ಹ ಸಂಪಾದಕರ ಪಟ್ಟಿ ನಿಮ್ಮ ಲೇಖನವನ್ನು ಸೂಕ್ತವಾದ ಬೇರೆ ಕಡೆ ಇಟ್ಟು, ಅಳಿಸುತ್ತಿರುವೆ.

ನೊಂದುಕೊಳ್ಳಬೇಡಿರಿ. Mallikarjunasj (talk) ೧೦:೨೭, ೬ ಜನವರಿ ೨೦೨೬ (IST)Reply