ಸದಸ್ಯರ ಚರ್ಚೆಪುಟ:ಕೃತಿಕಾ/sandbox
ವಿಷಯ ಸೇರಿಸಿಗೋಚರ
ವಿಜ್ಞಾನ ಮತ್ತು ಸಮಾಜ'
'ವಿಜ್ಞಾನದ ಯಾವುದೇ' ವಿಭಾಗ ಸಮಾಜದ ಒಳಿತಿಗಾಗಿ ನೆರವಾಗಬಲ್ಲದು. ವಿಶೇಷವಾಗಿ ರಸಾಯನಶಾಸ್ತ್ರ ಜೀವನದ ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗಿರುವುದು ಕಂಡುಬರುತ್ತದೆ. ರಾಸಾಯನಿಕ ಕ್ರಿಯೆಗಳಿಲ್ಲದ ಕಾರ್ಯಗಳೇ ಅಪರೂಪ. ವಿಜ್ಞಾನದ ಈ ವಿಭಾಗದಲ್ಲಿ ಆಳವಾದ ಸಂಶೋಧನೆಗಳು ನಡೆದು ಮನುಕುಲದ ಪ್ರಗತಿಗೆ(ಏಳಿಗೆಗೆ) ಕಾರಣೀಭೂತವಾಗಬೇಕಾಗಿದೆ.
ವಿಜ್ಞಾನಿಗಳು ತಮ್ಮ ಅಮೂಲ್ಯವಾದ ಜ್ಞಾನವನ್ನು ಸಾಮಾನ್ಯ ಜನರ ಮನೋಭಾವಗಳನ್ನು ತಿದ್ದುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದ ಸುಧಾರಣೆಗೆ ನೆರವಾಗಬೇಕು. ವಿಜ್ಞಾನಿಯ ವರ್ತನೆ, ಮನೋಭಾವ ಅವನು ದಂತಗೋಪುರದಲ್ಲಿರುವ ಅಪೂರ್ವಬುದ್ಧಿಶಾಲಿ ಎಂಬ ಭಾವನೆ ಜನರಲ್ಲಿ ಮೂಡುವಂತಿರಬಾರದು. ಸಮಾಜದ ದುಡಿಮೆಯಲ್ಲಿ ಶಿಕ್ಷಣವನ್ನು ಪಡೆದಿರುವ ವಿಜ್ಞಾನಿ, ಸಾಮಾನ್ಯ ಜನರ ಯೋಚನಾಶಕ್ತಿಯನ್ನು ಬೆಳೆಸುವಲ್ಲಿ ಶ್ರಮಿಸುವುದು ಆತನ ಕರ್ತವ್ಯವೇ ಹೊರತು ಉಪಕಾರವೇನೂ ಅಲ್ಲ. ವಿಶೇಷ ಸಂದರ್ಭಗಳಲ್ಲಿ ಜನಪ್ರಿಯ ಉಪನ್ಯಾಸಗಳನ್ನೂ, ವಿಜ್ಞಾನ ಪ್ರದರ್ಶನಗಳನ್ನೂ ಏರ್ಪಡಿಸಿದರೆ ವಿಜ್ಞಾನ ವಿಷಯದಲ್ಲಿ ಆಸಕ್ತರಾಗಿರುವ ಬಹು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಾಯವಾಗುತ್ತದೆ.
ನಮ್ಮ ದೇಶದಲ್ಲಿ ವಿಜ್ಞಾನಿಗಳು ಹಲವಾರು ಸಂದರ್ಭಗಳಲ್ಲಿ ಪರಸ್ಪರ ವೈರುಧ್ಯದ ಮನೋಭಾವವನ್ನು ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ. ಅವರು ಪ್ರಯೋಗಶಾಲೆಗಳಲ್ಲಿ ತಮ್ಮ ಹೆಚ್ಚಿನ ವಿಚಾರಶಕ್ತಿಯನ್ನೂ, ವೈಜ್ಞಾನಿಕ ಮನೋಭಾವವನ್ನೂ ಪ್ರದರ್ಶಿಸುತ್ತಾರೆ. ಆದರೆ ಅದು ನಿಜ ಜೀವನದಲ್ಲಿ ಅವರ ಯೋಚನಾಶಕ್ತಿ 'ರಜೆ' ತೆಗೆದುಕೊಂಡಿದೆಯೋ ಎಂಬಂತೆ ಅವೈಜ್ಞಾನಿಕವಾಗಿ ವರ್ತಿಸುತ್ತಾರೆ. ಒಂದೇ ಮನಸ್ಸು ಒಮ್ಮೆ ತಾರ್ಕಿಕವಾಗಿ ಚಿಂತಿಸಿದರೆ ಮತ್ತೊಮ್ಮೆ ಅತಾರ್ಕಿಕವಾಗಿ ಯೋಚಿಸುತ್ತದೆ. ಯೋಚನೆಯಲ್ಲಿ ಏಕಸೂತ್ರತೆ ಕಂಡುಬರುವುದಿಲ್ಲ.
ಅಧ್ಯಾಪಕ ತರಗತಿಯಲ್ಲಿ ಡಾರ್ವಿನ್ನನ ಸಿದ್ಧಾಂತವನ್ನು ವೈಜ್ಞಾನಿಕವಾಗಿ ಬೋಧಿಸುತ್ತಾನೆ. ಆದರೆ ಅದೇ ವ್ಯಕ್ತಿ ಚರ್ಚಿನಲ್ಲಿ ಅಥವಾ ದೇವಸ್ಥಾನದಲ್ಲಿ ಯಾವುದೇ ಸಂಕೋಚವಿಲ್ಲದೆ ವಿಜ್ಞಾನಕ್ಕೆ ಅಸಂಗತವಾದ ವಿಕಾಸವಾದವನ್ನು ನಂಬಿಕೆಯ ಮೂಲಕ ಬೋಧಿಸುತ್ತಾನೆ. ಮನುಷ್ಯ ಯಶಸ್ವಿಯಾಗಿ ಚಂದ್ರನನ್ನು ತಲುಪಿ ಬಂದಿದ್ದಾನಾದರೂ ಪ್ರಕೃತಿಯಲ್ಲಿ ಸಹಜವಾಗಿ ಘಟಿಸುವ ಗ್ರಹಣದ ಬಗ್ಗೆ ತರಗತಿಯಲ್ಲಿ ಒಂದು ವಿಧದ ಬೋಧನೆಯನ್ನು ಮಾಡಿದರೆ, ಮನೆಯಲ್ಲಿ ಮತ್ತೊಂದು ವಿಧದ ಆಚರಣೆಯನ್ನು ಅನುಸರಿಸುತ್ತಾನೆ. ಬಹುತೇಕ ವಿಜ್ಞಾನಿಗಳು ಪಾಠ ಹೇಳುತ್ತಾ ಹಸ್ತಸಾಮುದ್ರಿಕೆಯನ್ನು ನಂಬುವುದೂ ಉಂಟು.
ವಿಜ್ಞಾನಿಯೊಬ್ಬನ ವಸ್ತುಸ್ಥಿರತೆಯ ವಿಶ್ವ ನಿಯಮ ಸಮಾಜದ ಕೆಲವರಿಗೆ ಮಾತ್ರ ಅನ್ವಯಿಸುವುದಿಲ್ಲವೆಂದರೆ ಅದು ಶತಮೂರ್ಖತನ. ಕೈಗಡಿಯಾರವೊಂದು ಶೂನ್ಯದಲ್ಲಿ ಸೃಷ್ಟಿಯಾಗುತ್ತದೆ ಎನ್ನುವುದು ಮೂರ್ಖತನದ ಪರಮಾವಧಿಯಲ್ಲವೇ? ಅಶಿಕ್ಷಿತನೊಬ್ಬ ಹೀಗೆ ಹೇಳಿದರೆ ಅವನನ್ನು ಕ್ಷಮಿಸಬಹುದು. ಆದರೆ ವಿದ್ಯಾವಂತರೂ ಸಹ ಈ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಶೋಚನೀಯ. ಇದು ನಿಜವಾದರೆ, ಜಗತ್ತಿನ ವಿಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಎಲ್ಲ ಶೋಧನೆಗಳೂ ಅರ್ಥರಹಿತವಾಗುತ್ತವೆ.
ನಮ್ಮ ದೇಶದಲ್ಲಿ ಮೂಢನಂಬಿಕೆಗಳು ತುಂಬಿ ತುಳುಕುತ್ತಿವೆ. ಈ ಮೂಢನಂಬಿಕೆಗಳನ್ನು ಪ್ರತಿಪಾದಿಸುವ ವಿದ್ಯಾವಂತನು ಮೂಢನಂಬಿಕೆಯನ್ನು ಹೊಂದಿರುವ ಅವಿದ್ಯಾವಂತನಿಗಿಂತಲೂ ಹೆಚ್ಚು ಅಪಾಯಕಾರಿ. ಈ ಗುಂಪಿನಲ್ಲಿ ಪ್ರಸಿದ್ಧ ಶಿಕ್ಷಣವೇತ್ತರೂ ಇದ್ದಾರೆ ಎನ್ನುವುದು ಖಂಡನಾರ್ಹ. ಮೂಢನಂಬಿಕೆಗಳ ಬಗ್ಗೆ ತಳೆಯುವ ಉದಾಸೀನಭಾವ ಮತ್ತು ನಿಷ್ಕ್ರೀಯತೆ ಸಮಾಜಕ್ಕೆ ತುಂಬಾ ಹಾನಿಯನ್ನುಂಟುಮಾಡುತ್ತದೆ. ಈ ರೀತಿಯ ತಟಸ್ಥ ಮನೋಭಾವ, ಅರ್ಥಹೀನ ಹಾಗೂ ಅವೈಜ್ಞಾನಿಕ ವಿಚಾರಗಳಿಗೆ ಪರೋಕ್ಷವಾಗಿ ಸಮರ್ಥನೆ ಕೊಟ್ಟಂತೆ ಆಗುತ್ತದೆ. ಅಲ್ಲದೆ ಮೌನ ಸಮ್ಮತಿಯ ಲಕ್ಷಣ ಆಗಿಬಿಡಬಹುದು.
ಪ್ರಚಲಿತ ವೈಜ್ಞಾನಿಕ ನಿಯಮಗಳನ್ನು ಮೀರುವ ಪವಾಡಗಳ ಬಗ್ಗೆ ವಿಜ್ಞಾನಿಗಳು ಪ್ರಬಲವಾಗಿ ವಿರೋಧಿಸಿ ಅಂತ ಪವಾಡಗಳ ಕೆಡುಕನ್ನೂ ತಪ್ಪಿಸಬೇಕು. ಪ್ರತಿಯೊಂದು ಮೂಢನಂಬಿಕೆಯೂ ಪರಿಶೀಲನೆಯ ಮೂಲಕ ನಿರಾಕರಣವಾಗಬೇಕು. ಭಯ ಮತ್ತು ಅಜ್ಞಾನಗಳಿಂದ ರೂಪಿತವಾಗಿರುವ ಮೂಢನಂಬಿಕೆಗಳು ಆತ್ಮವಿಶ್ವಾಸವನ್ನು, ಸ್ವತಂತ್ರ ಆಲೋಚನೆಗಳನ್ನು ಮೊಟಕುಗೊಳಿಸುತ್ತವೆ. ಮಾಟಮಂತ್ರದಂತಹ ಪ್ರಗತಿ ವಿರೋಧಿ ಚಟುವಟಿಕೆಗಳು ನಮ ಸಮಾಜಕ್ಕೆ ಹೆಚ್ಚಿನ ಆಘಾತವನ್ನು ಉಂಟುಮಾಡಿವೆ.
ಪವಾಡ, ಮೂಢನಂಬಿಕೆ, ಮಾಟಮಂತ್ರ ಮುಂತಾದುವುಗಳ ಬಗ್ಗೆ ವಿಜ್ಞಾನದ ಸಭೆ, ಸಮ್ಮೇಳನಗಳಲ್ಲಿ ಚರ್ಚಿಸಬೇಕು. ಸಮಾಜದ ಮೇಲೆ ಪ್ರಭಾವ ಬೀರುತ್ತಿರುವ ಸಮಸ್ಯೆಗಳಿಂದ ವಿಜ್ಞಾನಿಗಳು ವಿಮುಖರಾಗಿರುವುದು ಸಾಧ್ಯವಿಲ್ಲ. ವಿಜ್ಞಾನಿ ತನ್ನ ಶೋಧನೆಯ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು. ಸಂಶೋಧನೆ ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗಿರದೆ ಜನರ ನಿತ್ಯಜೀವನದ ಸಮಸ್ಯೆಗಳೂ ಆತನ ಸಂಶೋಧನಾ ಕ್ಷೇತ್ರವಾಗಬೇಕು. ಹಲವಾರು ಅತಾರ್ಕಿಕವಾದ ನಡಾವಳಿಗಳಿಂದ ಸಮಾಜ ಅನ್ಯಾಯಕ್ಕೆ ಒಳಪಟ್ಟಿದ್ದು ಉಸಿರುಕಟ್ಟಿಸುವ ವಾತಾವರಣವಿದೆ. ಅದನ್ನು ಶುದ್ಧಗೊಳಿಸುವಲ್ಲಿ ವಿಜ್ಞಾನಿಗಳು ಇನ್ನೂ ಪ್ರಯತ್ನಿಸದೇ ಇರುವುದು ಸರಿಯಲ್ಲ.
ವಿಜ್ಞಾನದ ಫಲಿತಗಳ ಬಗ್ಗೆ ಹೆಚ್ಚಿನ ಆದ್ಯತೆ ಕೊಡುವುದು ವಿಜ್ಞಾನಿಗಳಲ್ಲಿ ಹಾಗೂ ಸಮಾಜದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಆದರೆ ನನ್ನ ಅಭಿಪ್ರಾಯದಲ್ಲಿ ವಿಜ್ಞಾನದ ಮೂಲ ಉದ್ದೇಶಗಳೂ ಸಹ ಅಷ್ಟೇ ಮುಖ್ಯವೆಂದು ಪರಿಗಣಿಸಬೇಕಾದುದು ಅನಿವಾರ್ಯ.ವಿಜ್ಞಾನದ ಮೇಲೆ ಅಪರಿಮಿತ ವಿಷಯಸಂಗ್ರಹ ಮತ್ತು ಅಂಶಗಳಿಗಷ್ಟೇ ಸೀಮಿತವಾಗಿರದೇ,ವೈಜ್ಞಾನಿಕ ಮನೋಧರ್ಮದ ತಳಹದಿಯ ಮೇಲೆ ನಿಲ್ಲಬೇಕು. ವೈಜ್ಞಾನಿಕ ಮನೋಧರ್ಮ, ವಿಚಾರಗಳು ಪಠ್ಯಗಳಲ್ಲಿ ಸೇರ್ಪಡೆಯಾಗಬೇಕು. ಎಲ್ಲ ವಿಜ್ಞಾನದ ಅಧ್ಯಾಪಕರೂ ವೈಜ್ಞಾನಿಕ ಮನೋಧರ್ಮವನ್ನು ಮೊದಲು ತಮ್ಮಲ್ಲಿ ರೂಢಿಸಿಕೊಳ್ಳುವುದರ ಜೊತೆಗೆ ವ್ಯಾಪಕವಾಗಿ ಪ್ರಚಾರ ಮಾಡಬೇಕು. ನಮ್ಮ ದೇಶ ನೂರಾರು ವರ್ಷಗಳಿಂದ ಎದುರಿಸುತ್ತಿರುವ ಜಟಿಲಾತಿಜಟಿಲವಾದ ಸಮಸ್ಯೆಗಳನ್ನೂ ಸಹ ವೈಜ್ಞಾನಿಕ ಮಾರ್ಗಗಳಿಂದ ಪರಿಹರಿಸಲು ಸಾಧ್ಯ. ನಮ್ಮ ಸಮಾಜ ಎದುರಿಸುತ್ತಿರುವ ಜಾತಿಯಂತಹ ಸಾಮಾಜಿಕ ಪಿಡುಗುಗಳ ಪರಿಹಾರವೂ ಸಹ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವಗಳಿಂದ ಸಾಧ್ಯ. ಆಗ ಮಾತ್ರ ಮಾನವೀಯ ಮೌಲ್ಯ ಹಾಗೂ ನೀತಿಯಾಧಾರಿತ ವಿಶ್ವಧರ್ಮ ರೂಪಿತವಾಗಬಲ್ಲುದು. ಧರ್ಮ ನೀತಿ ಸ್ವರೂಪವನ್ನು ಹೊಂದಿರುವಂತಹದು. ಈ ರೀತಿಯ ಧರ್ಮ ರಾಷ್ಟ್ರೀಯತೆಯ ಮೂಲವಾದ ಬೇಲಿಯನ್ನು ದಾಟಿ ಸ್ಥಾಪಿತವಾಗಬೇಕಾದರೆ ವಿಶ್ವಮಾನ್ಯತೆಯನ್ನು ಹೊಂದಿರುವ ವಿಜ್ಞಾನದ ತತ್ವಗಳನ್ನು ಅನ್ವಯಿಸಿಕೊಳ್ಳುವುದರಿಂದ ಮಾತ್ರ ಸಾಧ್ಯವಾಗುತ್ತದೆ.
ವಿಜ್ಞಾನ ಮತ್ತದರ ಬಳಕೆ ಹಾಗೂ ವೈಜ್ಞಾನಿಕ ಮನೋಧರ್ಮವನ್ನು ಪಡೆದು ಕಾರ್ಯಪ್ರವೃತ್ತರಾದಾಗ ಮಾತ್ರ ಬಡತನ ನಿರ್ಮೂಲನ ಮತ್ತು ಶೋಷಣೆಗಳ ನಾಶ ಸಾಧ್ಯ. ಅದು ಪ್ರಗತಿವಿರೋಧೀ ಸಿದ್ಧಾಂತಗಳನ್ನೂ ಸ್ವಹಿತಾಸಕ್ತಿಯನ್ನೂ ದೂರಮಾಡಬಲ್ಲುದು. ವಿಜ್ಞಾನಿಗಳಾದವರಿಗೆ ವಿಜ್ಞಾನ ಜೀವನೋಪಾಯಕ್ಕೆ ಮಾರ್ಗವಾಗಿರದೆ ಅದರಲ್ಲಿಯೇ ಜೀವಂತ ನಂಬಿಕೆ ಹೊಂದಬೇಕು. ಅಂತೆಯೇ ತರ್ಕಬದ್ಧವಾಗಿ, ಧೈರ್ಯದಿಂದ ವರ್ತಿಸಬೇಕು. ಹಾಗಾದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ.Start a discussion about ಸದಸ್ಯ:ಕೃತಿಕಾ/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:ಕೃತಿಕಾ/sandbox.