ಸಣ್ಣೇನಹಳ್ಳಿ

ವಿಕಿಪೀಡಿಯ ಇಂದ
Jump to navigation Jump to search

ಸಣ್ಣೇನಹಳ್ಳಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಒಂದು ಕುಗ್ರಾಮ. ಸುಮಾರು ೧೫೦ ಮನೆಗಳಿರುವ ಈ ಗ್ರಾಮದಲ್ಲಿ ಸುಮಾರು ೫೦ ಕ್ರೈಸ್ತ ಕುಟುಂಬಗಳಿವೆ. ಕ್ರಿಸ್ತಶಕ ೧೯೧೩ರಲ್ಲಿ ನಿರ್ಮಿತವಾದ ಹಳೆಯ ದೇವಾಲಯವನ್ನು ಉಳಿಸಿಕೊಂಡೇ ಅದರ ಹಿಂದೆ ಹೊಸ ದೇವಾಲಯ ಕಟ್ಟಲಾಗಿದೆ. ಮೊದಲು ಇದು ಗಾರೇನಹಳ್ಳಿ ಧರ್ಮಕೇಂದ್ರದ ಉಪಕೇಂದ್ರವಾಗಿತ್ತು. ಕ್ರಿಸ್ತಶಕ ೧೯೬೦ರಲ್ಲಿ ತಾಲೂಕುಗಳ ಮರುಹಂಚಿಕೆಯಾದಾಗ ಈ ಗ್ರಾಮವನ್ನು ತಿಪಟೂರು ತಾಲೂಕಿಗೆ ಒಳಪಡಿಸಲಾಯಿತು. ತಿಪಟೂರಿಗೂ ಇಲ್ಲಿಗೂ ಸುಮಾರು ೩೦ ಕಿಲೋಮೀಟರುಗಳ ಅಂತರ. ಕ್ರೈಸ್ತ ಜನಸಂಖ್ಯೆಯಲ್ಲಿ ತಿಪಟೂರಿಗಿಂತ ಸಣ್ಣೇನಹಳ್ಳಿಯದೇ ಮೇಲುಗೈ. ಹೀಗಾಗಿ ತಿಪಟೂರು ಧರ್ಮಕೇಂದ್ರವಾಗಿದ್ದ ಕಾಲದಲ್ಲಿ ಸ್ವಾಮಿ ನೆಲಪತಿಯವರು ಈ ಗ್ರಾಮದಲ್ಲಿಯೇ ನೆಲೆಸಿದ್ದರಲ್ಲಿ ಆಶ್ಚರ್ಯವಿಲ್ಲ, ಇಲ್ಲಿಗೆ ಕೇವಲ ಎಂಟು ಕಿಲೋಮೀಟರು ದೂರದಲ್ಲಿರುವ ಮೂಡಲದಾಸಾಪುರ ಹಾಗೂ ಐದು ಕಿಲೋಮೀಟರು ದೂರದಲ್ಲಿರುವ ನುಗ್ಗೆಹಳ್ಳಿ ಕೇಂದ್ರಗಳು ಹಾಸನ ಜಿಲ್ಲೆಗೆ ಸೇರಿ ಚಿಕ್ಕಮಗಳೂರು ಧರ್ಮಪ್ರಾಂತ್ಯದ ಅಧೀನದಲ್ಲಿದೆ.

ಗೌಡ ಹಾಗೂ ಕುರುಬ ಜನಾಂಗದವರೇ ಹೆಚ್ಚಾಗಿರುವ ಈ ಊರಿನ ಕ್ರೈಸ್ತರಲ್ಲಿ ಜಾನಪದ ಸಾಹಿತ್ಯ ಹಾಸುಹೊಕ್ಕಾಗಿದೆ. ಮದುವೆ ಸಂದರ್ಭಗಳಲ್ಲಿ ಹಾಗೂ ಸುಗ್ಗಿಯ ವೇಳೆಯಲ್ಲಿ ಸೋಬಾನೆ ಪದ, ಕೋಲಾಟ ಮುಂತಾದವು ಗರಿಗೆದರುತ್ತವೆ.