ಶ್ರೀ ಮಹಾಲಕ್ಷ್ಮೀ ದೇವಾಲಯ, ವಿಜಯಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಮಹಾಲಕ್ಷ್ಮೀ ದೇವಾಲಯವು ಕರ್ನಾಟಕ ರಾಜ್ಯದ ವಿಜಯಪುರ ನಗರದ ಹೃದಯಭಾಗದ ಮುಖ್ಯ ರಸ್ತೆಯಲ್ಲಿ ಇರುವ ಈ ದೇವಾಲಯವನ್ನು ಸುಪ್ರಸಿದ್ಧ ವಕೀಲರಾಗಿದ್ದ ಮಹಾದಾನಿ ಪಾಂಡುರಂಗರಾವ ಅನಂತರಾವ ದೇಸಾಯಿ ತಮ್ಮ ತಾಯಿಯವರ ಇಚ್ಛೆಯ ಮೇರೆಗೆ ಕಟ್ಟಿಸಿದರೆಂದು ಹೇಳಲಾಗುತ್ತದೆ. ಮೂಲತ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯವರಾಗಿದ್ದ ಇವರು ಆಗಿನ ಕಾಲದಲ್ಲಿ ಸುಪ್ರಸಿದ್ಧ ನ್ಯಾಯವಾದಿಗಳು. ಕೊಲ್ಹಾಪುರ ಮಹಾಲಕ್ಷ್ಮೀಯ ಭಕ್ತರಾಗಿದ್ದ ಇವರು, ನಗರದ ಭಕ್ತವೃಂದಕ್ಕೆ ಅನುಕೂಲಕವಾಗಲೆಂದು ಕ್ರಿ.ಶ. 1905 ರಲ್ಲಿ ಈ ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸದರೆಂದೂ, ಆದರೆ 1915ರಲ್ಲಿ ಈ ದೇವಾಲಯದ ನಿರ್ಮಾಣ ಪೂರ್ಣಗೊಂಡಿತು ಎಂದು ಹಿಂದಿನ ದಾಖಲೆಗಳಿಂದ ತಿಳಿದು ಬರುತ್ತದೆ.

ದೇವತಾ ವಿಗ್ರಹದ ಸ್ವರೂಪ[ಬದಲಾಯಿಸಿ]

ಶ್ರೀ ಮಹಾಲಕ್ಷ್ಮೀ ಪಂಚಾಯತನವೆಂದೇ ಕರೆಯುವ ಈ ದೇವಸ್ಥಾನದಲ್ಲಿ ಪ್ರಧಾನ ದೇವತೆ ಶ್ರೀ ಮಹಾಲಕ್ಷ್ಮೀ ಅಮೃತಶಿಲೆಯ ಮೂರ್ತಿ ದಕ್ಷಿಣಾಭಿಮುಖವಾಗಿದೆ. ಚತುರ್ಭುಜಳಾಗಿರುವ ಈ ದೇವಿಯ ಬಲಗೈಯಲ್ಲಿ ಮಾತುಲಿಂಗ ಹಣ್ಣು ಹಾಗೂ ಗಧೆ ಧರಿಸಿದ್ದರೆ, ಎಡಗೈಯಲ್ಲಿ ಢಾಲು ಹಾಗೂ ಪಾನಪಾತ್ರವನ್ನು ಹಿಡಿದುಕೊಂಡು ನಾಗಭೂಷಿತ ಈಶ್ವರಲಿಂಗವನ್ನು ಶಿರೋಭಾಗದಲ್ಲಿ ಕಾಣಬಹುದಾಗಿದೆ. ದೇವಿಯ ಎಡ,ಬಲಗಳಲ್ಲಿ ಅಮೃತಶಿಲೆಯ ಗಜ ಹಾಗೂ ಸಿಂಹ ಕಾಣಬಹುದು.ಈ ದೇವತಾ ವಿಗ್ರಹವನ್ನು ಜೋಧಪುರದ ಕಲಾವಿದರಿಂದ ತಯಾರಿಸಿ, ಪ್ರತಿಷ್ಠಾಪಿಸಲಾಗಿದೆ.

ದೇವಾಲಯ[ಬದಲಾಯಿಸಿ]

ಗರ್ಭಾಲಯದ ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಮೇಲ್ಭಾಗದಲ್ಲಿರುವ ಕಿಟಕಿಗಳಿಂದ ಪ್ರತಿದಿನ ಬೆಳಿಗ್ಗೆ ಹಾಗೂ ಸೂರ್ಯಾಸ್ತದ ಮೊದಲು ರವಿಕಿರಣಗಳು ದೇವಿಯ ಚರಣಗಳನ್ನು ಸ್ಪರ್ಶಿಸಿ ಹೋಗುವದು ಈ ದೇವಾಲಯದ ವೈಶಿಷ್ಟ್ಯತೆಯಾಗಿದೆ.

ಗರ್ಭಗುಡಿಯ ಹೊರಭಾಗದಲ್ಲಿ ನಾಲ್ಕು ಚಿಕ್ಕ ವಿನ್ಯಾಸಗಳಲ್ಲಿ ಉಮಾಮಹೇಶ್ವರ( ದಕ್ಷಿಣಾಭಿಮುಖಿ) ಬಲಸೊಂಡಿಯ ಗಣಪ( ಪಶ್ಚಿಮಾಭಿಮುಖಿ) ಸೂರ್ಯ(ಪೂವಾಭಿಮುಖಿ) ನಾರಾಯಣ( ದಕ್ಷಿಣಾಭಿಮುಖಿ) ಈ ರೀತಿ ಅಮೃತಶಿಲೆಯ ನಾಲ್ಕು ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ಈ ಭವ್ಯ ದೇವಾಲಯದ ಕಟ್ಟಡವನ್ನು ಗಮನಿಸಿದಾಗ ವಾಸ್ತುಶಾಸ್ತ್ರದ ವೈಶಿಷ್ಟದ ಪ್ರತೀಕವಾಗಿ ಕಲ್ಲು, ಕಬ್ಬಿಣದ ತೊಲೆ ಹಾಗೂ ಗಚ್ಚಿನಿಂದ ಕಟ್ಟಿದ್ದರಿಂದ ನೂರು ವರ್ಷಗಳು ಗತಿಸಿದರೂ ಸಹ ಯಾವುದೆ ನೈಸರ್ಗಿಕ ಪ್ರಕೋಪಗಳಿಗೆ ಹಾನಿಯಾಗದೇ ಇರುವದು ಕಂಡು ಬರುತ್ತದೆ. ಸಣ್ಣ ಹಾಗೂ ದೊಡ್ಡ ಗಾತ್ರದ ಕಬ್ಬಿಣದ ತೊಲೆಗಳನ್ನು ಬಳಸಿ ಗಚ್ಚಿನಿಂದ ಕಟ್ಟಿದ ಭವ್ಯ ಮಂದಿರವಿದಾಗಿದೆ.

ಮಹಾಮಂಟಪದ ದಕ್ಷಿಣ ಭಾಗದಲ್ಲಿ ಮೊಗಸಾಲೆ ಸಹಿತವಾದ ಉಪ್ಪರಿಗೆಯಿದೆ. ಅಲ್ಲಿ ವೈದಿಕ ಧರ್ಮಕ್ಕೆ ಸಂಬಂಧಿಸಿದ ಒಂದು ಗ್ರಂಥಾಲಯವಿದೆ. ದೇವಾಲಯವನ್ನು ನಮ್ಮ ಪೂರ್ವಜರು ಅತ್ಯಂತ ಕಾಳಜಿಪೂರ್ವಕವಾಗಿ ಬಹು ನಿಷ್ಠೆಯಿಂದ ಆಗಿನ ಕಾಲದಲ್ಲಿ ದೊರಕುವ ಶ್ರೇಷ್ಠ ಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿ ನಿರ್ಮಿಸಿದ್ದರು” ಎಂದು ಹೇಳುತ್ತಾರೆ.

ದೇವಾಲಯದ ವೈಶಿಷ್ಟತೆ[ಬದಲಾಯಿಸಿ]

ಈ ದೇವಾಲಯದ ಇನ್ನೊಂದು ವೈಶಿಷ್ಟತೆಯೆಂದರೆ, ಇದರ ಒಳಆವರಣದ ಪ್ರಾಂಗಣದಲ್ಲಿ ಸಾಕಷ್ಟು ಗಾಳಿ ಬೆಳಕು ಸ್ವಚ್ಛಂದವಾಗಿ ಬರುವದು. ಮಳೆ ಹಾಗೂ ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣ ನಿರ್ಮಿಸುತ್ತದೆ. ಹೊರಗಡೆ ಹಾಗೂ ಒಳಗಡೆ ನಾಲ್ಕು ಕಲ್ಲಿನ ಕಂಬಗಳ ಮೇಲೆ ಮೂರು ಕಮಾನುಗಳನ್ನು ಹೊತ್ತು ನಿಂತ ಅಪ್ರತಿಮ ವಿನ್ಯಾಸವನ್ನು ಈ ದೇವಾಲಯ ಹೊಂದಿದೆ. ಅಂದು ಹಾಕಿದ ಹಾಸುಗಲ್ಲಿನ ಸಭಾಮಂಟಪ ಇಂದಿಗೂಸುಸಜ್ಜಿತವಾಗಿರುವದನ್ನು ನೋಡಿದರೆ ಆಗಿನ ಕೆಲಸಗಾರರ ನೈಪುಣ್ಯತೆ, ಶಿಸ್ತುಬದ್ದ ಕೆಲಸ ಹಾಗೂ ಅವರು ಅಳವಡಿಸಿದ ತಾಂತ್ರಿಕತೆ ಇಂದಿಗೂ ಮೆಚ್ಚುವಂತಹದು.

ಸಂಕ್ರಮಣ,ಯುಗಾದಿ, ದೀಪಾವಳಿ ಮುಂತಾದ ಹಬ್ಬ ಹುಣ್ಣಿಮೆಗಳ ಹರಿದಿನಗಳಲ್ಲಿ ಅಲ್ಲದೇ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಭಕ್ತಾದಿಗಳು ಈ ಮಹಾಲಕ್ಷ್ಮೀಯ ದರ್ಶನಕ್ಕೆ ಬರುವ ಸಂಪ್ರದಾಯವಿದೆ. ನವರಾತ್ರಿಯ ಸಂದರ್ಭದಲ್ಲಿ ಮಾತ್ರ ಈ ದೇವಾಲಯಕ್ಕೆ ಜನಸಮುದಾಯವು ಕೂಡುವದಲ್ಲದೇ ಜಾತ್ರೆಯ ಸ್ವರೂಪವಾಗಿ ಕೂಡಿರುತ್ತದೆ.

ನಗರದ ಕೆಲ ಹಿರಿಯರ ನೆನಪಿನ ಪ್ರಕಾರ, ಆಗ್ಗೆ ಈ ದೇವಾಲಯವೇ ಅನೇಕ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವ ಪ್ರಮುಖ ಕೇಂದ್ರವಾಗಿತ್ತು. ಪ್ರಖ್ಯಾತ ಕೀರ್ತನಕಾರರಾಗಿದ್ದ ಭದ್ರಗಿರಿ ಅಚ್ಯುತದಾಸ, ಶ್ರೀಪಾದಶಾಸ್ತ್ರಿ ಕುರ್ತಕೋಟಿ ಮುಂತಾದವರು ತಮ್ಮ ಕಥಾಕೀರ್ತನಗಳನ್ನು ಇಲ್ಲಿಯೇ ಹತ್ತಾರು ದಿನಗಳ ಕಾಲ ನಡೆಸಿಕೊಟ್ಟದ್ದುಂಟು. ಅಲ್ಲದೇ ಅನೇಕ ಕುಟುಂಬಗಳು ತಮ್ಮ ಮನೆಯಲ್ಲಿನ ವಿವಾಹ ಇತ್ಯಾದಿ ಕಾರ್ಯಗಳಿಗೆ ಈ ದೇವಾಲಯವನ್ನೇ ಆಶ್ರಯಿಸಿದ್ದರು.

ಅರ್ಚಕ ಉಪಾಧ್ಯೆ ಮನೆತನದ ನಿರಂತರ ಸೇವೆ[ಬದಲಾಯಿಸಿ]

ಈ ದೇವಾಲಯಕ್ಕೆ ಸಂಬಂಧಪಟ್ಟಂತೆ ಗಮನಿಸಬಹುದಾದ ಇನ್ನೊಂದು ಪ್ರಮುಖ ವಿಷಯವೆಂದರೆ, ಅರ್ಚಕರಾಗಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಮೂಲದ ಉಪಾಧ್ಯೆ ಮನೆತನದವರದು. ಸರಿಸುಮಾರು 85 ವರ್ಷಗಳಿಂದಲೂ ಈ ಮನೆತನದವರೇ ಈ ದೇವಿಯ ಪೂಜಾ ಕೈಂಕರ್ಯ ವನ್ನು ಮನ್ನಡೆಸಿಕೊಂಡು ಬಂದಿರುವರು. 1930 ರಲ್ಲಿ ದೇವಾಲಯದ ಮಾಲಿಕರಾಗಿದ್ದ ದೇಸಾಯಿ ಮನೆತನದವರು ನಿಷ್ಠಾವಂತ ಅರ್ಚಕರನ್ನು ಹುಡುಕಾಡುತ್ತಿದ್ದಾಗ ಅವರ ಕಣ್ಣಿಗೆ ಬಿದ್ದವರೇ ವೇದಮೂರ್ತಿ ಗಣೇಶ ಭಡಜಿಯವರು.

ದೇವಿಯ ಅರ್ಚನೆಯನ್ನು ಯಾವುದೇ ವ್ಯತ್‍ಯವಾಗದಂತೆ ಅಂದಿನಿಂದ ಇಂದಿನ ವರೆಗೂ ಉಪಾಧ್ಯೆ ಮನೆತನದ ಮೂರು ತಲೆಮಾರಿನವರು ಅತ್ಯಂತ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿರುವದು ನಿಜಕ್ಕೂ ಹೆಗ್ಗಳಿಕೆ ಸರಿ.

ಪರಂಪರಾಗತ ಮೇಲುಸ್ತುವಾರಿ[ಬದಲಾಯಿಸಿ]

ಈಗ್ಗೆ 15 ವರ್ಷಗಳ ಹಿಂದೆ ದೇವಾಲಯದ ಶಿಖರದ ಜೀರ್ಣೋದ್ಧಾರನ್ನು ಸ್ಥಾನಿಕ ವಾಸ್ತುಶಾಸ್ತ್ರಜ್ಞ ವಿಠ್ಠಲ ಟಂಕಸಾಲಿಯವರ ಸಹಾಯದಿಂದ ತಮಿಳುನಾಡಿನ ನಿಪುಣ ಕೆಲಸಗಾರರನ್ನು ಕರೆಯಿಸಿ ಮಾಡಲಾಗಿದೆ. ಇತ್ತೀಚೆಗೆ ಯಜ್ಞಮಂಟಪದ ಮೇಲ್ಛಾವಣಿಯನ್ನು ಹೊಸದಾಗಿ ನಿರ್ಮಿಸಲಾಗಿದೆ.

ಹಿಂದಿನಿಂದಲೂ ದೇಸಾಯಿ ಮನೆತನದವರೇ ದೇವಾಲಯದ ಮೇಲುಸ್ತುವಾರಿಯನ್ನು ನೋಡಿಕೊಂಡು ಬರುತ್ತಿದ್ದು, ಪರಂಪರಾಗತವಾಗಿರುವ ಇದನ್ನು ಇಂದು ಪ್ರಖ್ಯಾತ ಪ್ರಸೂತಿ ತಜ್ಞೆ ಡಾ. ಶರಯು ದೇಸಾಯಿ ಹಾಗೂ ಹೇಮಾತಾಯಿ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಹಿರಿಯರಿಂದ ಬಂದ ಸಂಸ್ಕಾರವನ್ನು ಮೊಮ್ಮಕ್ಕಳವರೆಗಳು ಬಂದು ಇಂದಿನ ಯಾಂತ್ರಿಕ ಯುಗದಲ್ಲಿಯೂ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದರೂ ಸಹ ಉತ್ಸವಾದಿಗಳಲ್ಲಿ ಆಗಮಿಸಿ ತಮ್ಮ ಮನೆತನದ ಪರಂಪರೆಯನ್ನು ಎತ್ತಿಹಿಡಿಯುತ್ತಿರುವರು.

ಅವಿಭಕ್ತ ಕುಟುಂಬದವರು ನಿರ್ಮಿಸಿದ ಈ ದೇವಾಲಯ ಶತಮಾನಗಳಿಂದಲೂ ಸಕಲ ಜಾತಿ ಜನಾಂಗದವರ ಆರಾಧ್ಯ ಕೇಂದ್ರವಾಗಿದೆ. ಅಲ್ಪ ಸಂಖ್ಯಾತರೂ ಸೇರಿದಂತೆ ಜೈನ ಸಮುದಾಯದವರೂ ಸಹ ಈ ದೇವಾಲಯದ ಪರಮ ಭಕ್ತರಾಗಿದ್ದು, ಹಲವಾರು ವ್ಯಾಪಾರಿಗಳು ತಮ್ಮ ದೈನಂದಿನ ವ್ಯವಹಾರಗಳನ್ನು ದೇವಿಯ ದರ್ಶನದ ಬಳಿಕವೇ ಆರಂಭಿಸುವದು ಹಿಂದಿನಿಂದ ನಡೆದುಕೊಂಡು ಸಂಪ್ರದಾಯವಾಗಿದೆ.

ಒಟ್ಟಿನಲ್ಲಿ ಶತಮಾನದ ಇತಿಹಾಸ ಹೊಂದಿರುವ ಈ ಮಹಾಲಕ್ಷ್ಮೀ ದೇವಾಲಯ ಐತಿಹಾಸಿಕ ನಗರದ ಪಾರಂಪರಿಕ ಧರ್ಮಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.