ಶಾರ್ಙ್ಗದೇವ
ಶಾರ್ಙ್ಗದೇವ (1175–1247)[೧] ಸಂಗೀತ ರತ್ನಾಕರ ಎಂಬ ಶಾಸ್ತ್ರಗ್ರಂಥದ ಕರ್ತೃ.[೨] ಭಾಸ್ಕರದೇವ ಇವನ ಪಿತಾಮಹ. ಭಾಸ್ಕರದೇವನು ಸ್ವದೇಶವಾದ ಕಾಶ್ಮೀರವನ್ನು ಬಿಟ್ಟು ದಕ್ಷಿಣಕ್ಕೆ ವಲಸೆ ಬಂದು ದೇವಗಿರಿಯ ಸೇವುಣರಲ್ಲಿ ಆಶ್ರಯ ಪಡೆದಿದ್ದ.[೩] ಇವನ ಮಗ ಸೋಢಲದೇವ. ತಂದೆಯಂತೆಯೇ ಮಹಾವಿದ್ವಾಂಸನಾಗಿದ್ದು 5ನೆಯ ಭಿಲ್ಲಮನಲ್ಲಿ (1173-92), ಅನಂತರ ಅವನ ಮಗ ಒಂದನೆಯ ಜೈತುಗಿಯಲ್ಲಿ (1192-99) ಕಂದಾಯ ಮಂತ್ರಿಯಾಗಿದ್ದನೆಂದು ತಿಳಿದುಬರುತ್ತದೆ. ಇವನೇ ಶಾರ್ಙ್ಗದೇವನ ತಂದೆ. ಶಾರ್ಙ್ಗದೇವ ಸೇವುಣರಲ್ಲಿ ಅತ್ಯಂತ ಪ್ರಮುಖನಾಗಿದ್ದ ಸಿಂಘಣನಲ್ಲಿ (1199-1247) ಕಂದಾಯ ಮಂತ್ರಿಯಾಗಿದ್ದ.[೪][೫] ಈತ ತನ್ನನ್ನು ಶ್ರೀಶರಣಾಗ್ರಣಿ, ಶ್ರೀಶರಣಾಧಿಪ ಎಂದು ಮುಂತಾಗಿ ಕರೆದುಕೊಂಡಿದ್ದಾನೆ. ಸಂಗೀತ ರತ್ನಾಕರದಲ್ಲಿ ತನ್ನನ್ನು ಹರಪ್ರಿಯ, ಶಂಕರಪ್ರಿಯ ಎಂದಷ್ಟೇ ಅಲ್ಲದೆ ಮಹಾಮಾಹೇಶ್ವರ ಎಂದು ವಿಶೇಷಿಸಿಕೊಂಡಿದ್ದಾನೆ. ಇದರಿಂದ ಇವನು ಶೈವತಂತ್ರದಲ್ಲಿ ದೀಕ್ಷಿತನೂ ಸಿದ್ಧನೂ ಆಗಿದ್ದನೆಂದು ಊಹಿಸಬಹುದು.
ಈತ ಸಂಗೀತಶಾಸ್ತ್ರವೇ ಅಲ್ಲದೆ ನೃತ್ಯ, ಅಲಂಕಾರ, ಛಂದಸ್ಸು, ವ್ಯಾಕರಣ, ಆಯುರ್ವೇದ, ಯೋಗದರ್ಶನ, ವೇದ ಮುಂತಾದ ಜ್ಞಾನಕ್ಷೇತ್ರಗಳಲ್ಲಿ ಪ್ರತಿಭಾವಂತನಾದ ನೇತಾರನಾಗಿದ್ದ. ಆಯುರ್ವೇದದಲ್ಲಿ ಧನ್ವಂತರಿ, ಆತ್ರೇಯ, ಚರಕ, ಸುಶ್ರುತ, ವಾಗ್ಭಟಾದಿ ಆಚಾರ್ಯರಿಗೆ ಸಾಟಿಯೆನಿಸುವ ಪಾಂಡಿತ್ಯಾನುಭವಗಳನ್ನು ತೋರಿದ್ದಾನೆ. ಇವನು ತನ್ನನ್ನು ಅನವದ್ಯವಿದ್ಯಾವಿನೋದ, ನಿಃಶಂಕ ಎಂಬ ಬಿರುದುಗಳಿಂದಲೂ ನಿರ್ದೇಶಿಸಿಕೊಂಡಿದ್ದಾನೆ. ಈತ ಅಧ್ಯಾತ್ಮವಿವೇಕವೆಂಬ ಯೋಗಶಾಸ್ತ್ರ ಗ್ರಂಥವೊಂದನ್ನೂ ರಚಿಸಿದ್ದನೆಂದು ತಿಳಿದುಬರುತ್ತದೆ. ಇದನ್ನು ಬಂಗಾಲದ ಹಠಯೋಗ ಶಾಸ್ತ್ರಪ್ರವರ್ತಕರಲ್ಲಿ, ತಾಂತ್ರಿಕ ಸಾಧಕರಲ್ಲಿ ಮುಖ್ಯತಮನಾಗಿದ್ದ ಪೂರ್ಣಾನಂದನೂ ರಾಮೇಂದ್ರಸರಸ್ವತಿಯ ಶಿಷ್ಯನೂ ರತ್ನಾಕರನ ಪುತ್ರನೂ ಆದ ನಾರಾಯಣನು ಹಂಸೋಪನಿಷತ್ತಿಗೆ ಬರೆದ ‘ದೀಪಿಕೆ’ ಎಂಬ ತನ್ನ ಭಾಷ್ಯದಲ್ಲಿ ಸ್ಮರಿಸಿ ಉದ್ಧರಿಸಿದ್ದಾನೆ. ಈ ಗ್ರಂಥ ಹಠಯೋಗ ಮತ್ತು ತಂತ್ರಶಾಸ್ತ್ರಗಳಲ್ಲಿ ಶಾರ್ಙ್ಗದೇವನ ಸ್ವಾನುಭವ ಪಾಂಡಿತ್ಯಗಳಿಗೆ ಪ್ರತೀಕವಾಗಿದ್ದಿತೆಂದು ಊಹಿಸಬಹುದಾಗಿದೆ. ಛಂದೋವಿಚಿತಿಯೆಂಬ ಒಂದು ಗ್ರಂಥವೂ ಇವನದೇ ಎಂದು ಸಂಗೀತ ರತ್ನಾಕರದ ವ್ಯಾಖ್ಯಾನಕಾರನಾದ ಸಿಂಹಭೂಪಾಲ ಹೇಳುತ್ತಾನೆ. ಈ ಗ್ರಂಥ ಉಪಲಬ್ಧವಿಲ್ಲ.
ಸಂಗೀತ ರತ್ನಾಕರ ಗ್ರಂಥ
[ಬದಲಾಯಿಸಿ]ಸಂಗೀತ ರತ್ನಾಕರ ಸ್ವರಗತ, ರಾಗವಿವೇಕ, ಪ್ರಕೀರ್ಣಕ, ಪ್ರಬಂಧ, ತಾಲ, ವಾದ್ಯ ಮತ್ತು ನರ್ತನ ಎಂಬ ಏಳು ಅಧ್ಯಾಯಗಳನ್ನೂ ಸುಮಾರು 5,000 ಶ್ಲೋಕಗಳನ್ನೂ ಒಳಗೊಂಡಿದೆ. ಭರತಮುನಿ ಸುಮಾರು ಒಂದು ಸಹಸ್ರ ಶ್ಲೋಕಗಳಲ್ಲಿ ವಿವರಿಸಿದ ಗೀತವಾದಿತ್ರನರ್ತನ ಗಳನ್ನೇ ಇಲ್ಲಿ ಸುಮಾರು ಐದು ಸಾವಿರ ಶ್ಲೋಕಗಳಲ್ಲಿ ವಿಸ್ತರಿಸಿ ಹೇಳಲಾಗಿದೆ. ಶಾಸ್ತ್ರಕಾರ ಗ್ರಂಥರಚನೆಯಲ್ಲಿ ಸಂಕ್ಷಿಪ್ತತೆಗೆ ಪ್ರಾಧಾನ್ಯವನ್ನು ತೋರಿ ಸೂತ್ರಸದೃಶವಾದ ಮಾತುಗಳಲ್ಲಿ, ನಿಪಾತಗಳಲ್ಲಿ ಪೂರ್ವಾಪರ ಸನ್ನಿವೇಶ ಸಂಗತಿ, ನೈಕಟ್ಯ ಮೊದಲಾದ ವೈಧಾನಿಕ ತಂತ್ರಗಳಲ್ಲಿ ಅರ್ಥವನ್ನು ನಿಬಿಡವೂ ಗಾಢವೂ ಸಾರವೂ ಆಗಿರುವಂತೆ ಮಾಡಿದ್ದಾನೆ. ಅತ್ಯಂತ ಪ್ರಾಚೀನತಮವೂ ಪರಂಪರಾ ಪ್ರಾಪ್ತಕಂಠ ಮಾಧ್ಯಮಿಕವೂ ಆದ ಮಾರ್ಗ ಮತ್ತು ಗಾಂಧರ್ವಸಂಗೀತ, ಸಮಸಾಮಯಿಕವಾಗಿ ದೇಶದ ವಿವಿಧ ಭಾಗಗಳಲ್ಲಿ ಪ್ರಚಲಿತವಾಗಿದ್ದ ಸಂಗೀತ, ತತ್ಸಾಮಯಿಕ ಲಕ್ಷ್ಯಕ್ಕೂ ಪೂರ್ವಾಚಾರ್ಯ ಪ್ರಣೀತವಾದ ಶಾಸ್ತ್ರೋಕ್ತಿಗೂ ಇರುವ ವಿರೋಧದ ಸಮನ್ವಯ, ಜನಪದ ಹಾಗೂ ಶಾಸ್ತ್ರೀಯ ಸಂಗೀತಗಳಲ್ಲಿ ರಾಗ, ತಾಳ, ವಾದ್ಯ, ಪ್ರಬಂಧ, ನೃತ್ತಾದಿ ಪ್ರಕಾರಗಳನ್ನು ಏಕರೂಪವಾಗಿ ಶಾಸ್ತ್ರ ಪ್ರಮೇಯಗಳ, ವೈಧಾನಿಕ ತಂತ್ರಗಳ ಹಂದರದಲ್ಲಿ ವರ್ಣಿಸುವುದು, ತತ್ತ್ವಶಾಸ್ತ್ರ, ಮನೋವಿಜ್ಞಾನ, ನಾದವಿಜ್ಞಾನ, ಸೌಂದರ್ಯಮೀಮಾಂಸೆ, ಶರೀರವಿಜ್ಞಾನ ಮುಂತಾದ ಹತ್ತು ಹಲವು ಜ್ಞಾನಕ್ಷೇತ್ರಗಳ ಫಲಗಳನ್ನು ಸಂಗೀತನೃತ್ಯಶಾಸ್ತ್ರಗಳಿಗೆ ಅನ್ವಯಿಸಿ ಬೆಳೆಸುವುದು, ಇಡೀ ಗ್ರಂಥದಲ್ಲಿ ಏಕಸೂತ್ರತೆಯನ್ನು ಸಾಧಿಸುವುದು ಇತ್ಯಾದಿಗಳನ್ನು ಗಮನಿಸಿದರೆ ಇವನ ಸಾಮರ್ಥ್ಯ ಮೆಚ್ಚುವಂಥದ್ದು. ಈ ಗ್ರಂಥದಲ್ಲಿ ಸದಾಶಿವ, ಪಾರ್ವತಿ, ಬ್ರಹ್ಮ, ಭರತ, ಕಶ್ಯಪ, ಮತಂಗ, ಯಾಷ್ಟಿಕ, ದುರ್ಗಾಶಕ್ತಿ, ಶಾರ್ದೂಲ, ಕೋಹಲ, ವಿಶಾಖಿಲ, ದತ್ತಿಲ, ಕಂಬಲ, ಅಶ್ವತರ, ವಾಯು, ವಿಶ್ವಾವಸು, ರಂಭಾ, ಅರ್ಜುನ, ನಾರದ, ತುಂಬುರ, ಆಂಜನೇಯ, ಮಾತೃಗುಪ್ತ, ರಾವಣ, ನಂದಿಕೇಶ್ವರ, ಸ್ವಾತಿ, ಗಣ, ಬಿಂದುರಾಜ, ಕ್ಷೇತ್ರರಾಜ, ರಾಹಲ, ರುದ್ರಟ, ನಾನ್ಯಭೂಪಾಲ, ಭೋಜ, ಪರಮರ್ದೀರಾಜ, ಸೋಮೇಶ್ವರ, ಜಗದೇಕಮಲ್ಲ, ಭಾರತೀಯ ನಾಟ್ಯಶಾಸ್ತ್ರದ ವ್ಯಾಖ್ಯಾನಕಾರರಾದ ಲೊಲ್ಲಟ, ಉದ್ಭಟ, ಶಂಕುಕ, ಅಭಿನವಗುಪ್ತ, ಕೀರ್ತಿಧರ ಮೊದಲಾದ ಸಂಗೀತಶಾಸ್ತ್ರ ವಿಶಾರದರ ಗ್ರಂಥಗಳ ಉತ್ತಮಾಂಶವನ್ನೂ ಅವುಗಳ ಸಾರವನ್ನೂ ಕಾಣಬಹುದಾಗಿದೆ. ಈ ದೃಷ್ಟಿಯಿಂದ ಇಷ್ಟು ವಿಸ್ತಾರವೂ ವಿವರಪೂರ್ಣವೂ ವೈಜ್ಞಾನಿಕವೂ ಪ್ರಾಮಾಣಿಕವೂ ಆಗಿರುವ ಗ್ರಂಥ ಇಡೀ ಭಾರತೀಯ ಸಂಗೀತ ಶಾಸ್ತ್ರಗ್ರಂಥರಾಶಿಯಲ್ಲಿ ಬೇರೊಂದಿಲ್ಲ. ಹಾಗಾಗಿ ಸಂಸ್ಕೃತ ವಾಙ್ಮಯದಲ್ಲಿ ಪಾಣಿನಿಯ ಅಷ್ಟಾಧ್ಯಾಯಿಗೆ ಇರುವ ಸ್ಥಾನವೇ ಸಂಗೀತ ರತ್ನಾಕರಕ್ಕೂ ಲಭ್ಯವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Ananda Lal (2009). Theatres of India: A Concise Companion. Oxford University Press. p. 298. ISBN 978-0-19-569917-3.
- ↑ Mohan Lal (1992). Encyclopaedia of Indian Literature: Sasay to Zorgot. Sahitya Akademi. p. 3987. ISBN 978-81-260-1221-3.
- ↑ Reginald Massey; Jamila Massey (1996). The Music Of India. Abhinav Publications. pp. 41–42. ISBN 978-81-7017-332-8.
- ↑ Ramanlal Chhotalal Mehta, Musical Musings: Selected Essays, Indian Musicological Society (1996), p. 46
- ↑ T. V. Kuppuswami (1992). Carnātic Music and the Tamils. Kalinga Publications. pp. vii–viii. ISBN 978-81-85163-25-3.