ವಿಲಿಯಂ ಕೂಪರ್
ವಿಲಿಯಂ ಕೂಪರ್ | |
|---|---|
A 1792 portrait by Lemuel Francis Abbott[೧] | |
| ಹುಟ್ಟು | ೨೬ ನವೆಂಬರ್ ೧೭೩೧ Berkhamsted, Hertfordshire, England |
| ಸಾವು | 25 April 1800 (aged 68) East Dereham, Norfolk, England |
| ವಿದ್ಯಾಭ್ಯಾಸ | ವೆಸ್ಟ್‍ಮಿನಿಸ್ಟರ್ ಶಾಲೆ |
| ಉದ್ಯೋಗ | ಕವಿ |
ಜನನ ಮತ್ತು ಬಾಲ್ಯ
[ಬದಲಾಯಿಸಿ]ಬರ್ಕ್ ಹ್ಯಾಂಸ್ಟೆಡ್‍ನಲ್ಲಿ ಹುಟ್ಟಿದ. 6ನೆಯ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಈತ ತನ್ನ ಸಹಪಾಠಿಯ ಕುಚೋದ್ಯ ಹಾಗೂ ದುಂಡಾವರ್ತನೆಗೆ ತುತ್ತಾಗಿ ಧೈರ್ಯಗುಂದಿದ. ಧೃತಿಗೆಟ್ಟು ಒಮ್ಮೆ ಆತ್ಮಹತ್ಯೆಗೂ ತೊಡಗಿದ್ದ. ಅನಂತರ ಈತನನ್ನು ವೆಸ್ಟ್‍ಮಿನಿಸ್ಟರ್ ಶಾಲೆಗೆ ಕಳುಹಿಸಲಾಯಿತು. ಅಲ್ಲಿ ವಾರನ್ ಹೇಸ್ಟಿಂಗ್ಸ್ ಮತ್ತು ಪ್ರಸಿದ್ಧ ಕವಿ ಚಾಲ್ರ್ಸ್ ಚರ್ಚಿಲ್ ಈತನ ಸಹಪಾಠಿಗಳಾದರು.
ವಿದ್ಯಾಭ್ಯಾಸ
[ಬದಲಾಯಿಸಿ]ಮನೆತನಕ್ಕೆ ಬಂದ ನ್ಯಾಯಶಾಸ್ತ್ರದ ಅಭ್ಯಾಸದ ಕಡೆ ಈತನ ಒಲವು ಹರಿಯಿತು 18ನೆಯ ವಯಸ್ಸಿನಲ್ಲಿ ಸಲಹೆ ವಕೀಲನೊಬ್ಬನಲ್ಲಿ ಕೆಲಸ ಮಾಡಿ 1754ರಲ್ಲಿ ಬಾರ್ ಸೇರಿದ. ಈ ಅವಧಿ ಈತನ ಜೀವಮಾನದಲ್ಲಿ ಅತ್ಯಂತ ಸುಖದ ದಿನಗಳು ಎನ್ನಬಹುದು.
ಕೌಟುಂಬಿಕ ಜೀವನ
[ಬದಲಾಯಿಸಿ]ಅದೇ ಸಮಯದಲ್ಲಿ ತನ್ನ ಸೋದರಮಾವನ ಮಗಳೊಂದಿಗೆ ಪ್ರೇಮ ಬೆಳೆಸಿ ಮದುವೆಯಾಗಲು ಸಿದ್ಧನಾದ. ಕೂಪರನಲ್ಲಿ ವಾಸಿಯಾಗಲಾರದಂಥ ರೋಗವಿರುವುದನ್ನು ಗಮನಿಸಿದ ಇವನ ತಂದೆ ಈ ಮದುವೆಗೆ ಸಮ್ಮತಿಸಲಿಲ್ಲ. ಆನಂತರ ಒಂದೆರಡು ಕಡೆ ನೌಕರಿ ಹಿಡಿದನಾದರೂ ಬುದ್ಧಿ ಸ್ವಾಸ್ಥ್ಯ ತಪ್ಪಿ ಹುಚ್ಚಾಸ್ಪತ್ರೆಗೆ ದಾಖಲಾದ. ಅಲ್ಲಿ ಒಂದು ವರ್ಷವಿದ್ದ. ಆಸ್ಪತ್ರೆಯಿಂದ ಹೊರಬಂದಮೇಲೆ ಕೆಲಸವಿಲ್ಲದೆ ಓಡಾಡಿ ತಂದೆಯ ಆಸ್ತಿಯಿಂದ ಬರುತ್ತಿದ್ದ ಅಲ್ಪಸ್ವಲ್ಪ ಹಣ, ಸಾಲದ್ದಕ್ಕೆ ಸ್ನೇಹಿತರಿಂದ ಒದಗುತ್ತಿದ್ದ ಸಹಾಯದಿಂದ ಜೀವನವನ್ನು ಮುಂದುವರಿಸಿದ. ಕಷ್ಟದ ಜೀವನ ಇವನದು.
ಸಾಹಿತ್ಯಿಕ ಜೀವನ
[ಬದಲಾಯಿಸಿ]ಜಾನ್ ನ್ಯೂಟನ್ ಎನ್ನುವನೊಡನೆ "ಆಲ್‍ನ್ ಹಿಮ್‍ಸ್" ಎನ್ನುವ ಕವನ ಸಂಕಲನವನ್ನು ಪ್ರಕಟಿಸಿದ. ದಿ ಪ್ರೋಗ್ರೆಸ್ ಆಫ್ ಎರರ್, ಟ್ರೂತ್, ಟೇಬಲ್ ಟಾಕ್, ಎಕ್ಸ್‍ಪಾಸ್ಚ್ಯುಲೇಷನ್, ಹೋಪ್, ಚ್ಯಾರಿಟಿ, ಕಾನ್ವರ್ಸೇಷನ್, ರಿಟೈರ್‍ಮೆಂಟ್ ಎಂಬ ಎಂಟು ವಿಡಂಬನೆಗಳನ್ನು ಒಂದೇ ಸಂಪುಟದಲ್ಲಿ ಸೇರಿಸಿ ಪ್ರಕಟಿಸಿದ (1782). ಈ ಪುಸ್ತಕ ಕೂಪರ್‍ಗೆ ಹೆಚ್ಚಿನ ಖ್ಯಾತಿ ತಂದಿತು. ಇದರಲ್ಲಿನ ಭಾಷೆ ಮತ್ತು ವಸ್ತುವಿನ ಹೊಸತನವನ್ನು ಜನತೆ ಸ್ವಾಗತಿಸಿತು. ಕೂಪರನ ಆರೋಗ್ಯವೂ ಸುಧಾರಿಸತೊಡಗಿತು. ದಿ ಟಾಸ್ಕ್ (1785) 6 ಪುಸ್ತಕಗಳಲ್ಲಿ ಹೊರಬಂದಿತು. 1784ರಲ್ಲಿಯೇ ಆರಂಭಿಸಿದ ಹೋಮರನ ಅನುವಾದ 1791ರಲ್ಲಿ ಹೊರಬಂದಿತಾದರೂ ಜನತೆ ಅದನ್ನು ಅಷ್ಟಾಗಿ ಸ್ವಾಗತಿಸಲಿಲ್ಲ.
ಅಂತ್ಯಕಾಲ
[ಬದಲಾಯಿಸಿ]ಇವನನ್ನು ನೋಡಿಕೊಳ್ಳುತ್ತಿದ್ದ ಶ್ರೀಮತಿ ಅನ್ವಿನ್ನಳು 1796ರಲ್ಲಿ ನಿಧನಳಾದಳು. ಈಕೆ ಕಾಲವಾದ ಮೇಲೆ ದಿಕ್ಕುಗೆಟ್ಟಂತಾದ ಕೂಪರ್ 1800ರಲ್ಲಿ ನಿಧನನಾದ.
ಸಾಹಿತ್ಯಿಕ ಪ್ರಭಾವ
[ಬದಲಾಯಿಸಿ]ಇಂಗ್ಲಿಷ್ ಕಾವ್ಯದ ಚರಿತ್ರೆಯಲ್ಲಿ ಕೂಪರನಿಗೆ ಗಣ್ಯ ಸ್ಥಾನವಿದೆ. ನಿಯೊಕ್ಲಾಸಿಕಲ್ ಯುಗದಲ್ಲಿ ಕಾಣದ ಮಾನವತಾವಾದ (ಹ್ಯುಮಾನಿಟೇರಿಯೆನಿಸಂ) ಇವನ ಕಾವ್ಯದಲ್ಲಿ ಕಾಣುತ್ತದೆ. ಇವನ ಆನ್ ದ ರಸೀತ್ ಆಫ್ ಮೈ ಮದರ್ಸ್ ಪಿಕ್ಚರ್ ಭಾವಾತಿರೇಕವಿಲ್ಲದೆ ಗಾಢವಾದ ವಿಷಾದವನ್ನು ಅಭಿವ್ಯಕ್ತಿ ಮಾಡುತ್ತದೆ. ಮಗನಿಗೆ ತಾಯಿಯಲ್ಲಿರುವ ಪ್ರೇಮ ಸಹಜವಾಗಿ ನಮ್ಮ ಹೃದಯವನ್ನು ಮುಟ್ಟುತ್ತದೆ. ಇವನು ಭಕ್ತಿಗೀತೆಗಳನ್ನು ಬರೆದ. ದ ಬ್ಯಾಲಡ್ ಆಫ್ ಜಾನ್ ಗಿಲ್ಟನ್ ಇಂದು ಓದಿದರೂ ಖುಷಿ ಕೊಡುವ ಹಾಸ್ಯ ಕಥನ ಕವನ. ಇವನು ಆಪ್ತರಿಗೆ ಬರೆದ ಪತ್ರಗಳಿಗೆ ಇಂಗ್ಲಿಷ್ ಭಾಷೆಯ ಪತ್ರದ ಸಾಹಿತ್ಯದಲ್ಲಿ ಹಿರಿಯ ಸ್ಥಾನವಿದೆ.
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |

- ↑ Abbott, Lemuel Francis (1792), Cowper (portrait)