ವಿಭೂತಿಯೋಗಃ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಭಗವದ್ಗೀತೆ

Aum
ಅಧ್ಯಾಯಗಳು
 1. ಅರ್ಜುನ ವಿಷಾದ ಯೋಗ
 2. ಸಾಂಖ್ಯಯೋಗಃ
 3. ಕರ್ಮಯೋಗಃ
 4. ಜ್ಞಾನಯೋಗಃ
 5. ಸಂನ್ಯಾಸಯೋಗಃ
 6. ಧ್ಯಾನಯೋಗಃ
 7. ಜ್ಞಾನವಿಜ್ಞಾನಯೋಗಃ
 8. ಅಕ್ಷರಬ್ರಹ್ಮಯೋಗಃ
 9. ರಾಜವಿದ್ಯಾರಾಜಗುಹ್ಯಯೋಗಃ
 10. ವಿಭೂತಿಯೋಗಃ
 11. ವಿಶ್ವರೂಪದರ್ಶನಯೋಗಃ
 12. ಭಕ್ತಿಯೋಗಃ
 13. ಕ್ಷೇತ್ರಕ್ಷೇತ್ರಜ್ಞಯೋಗಃ
 14. ಗುಣತ್ರಯವಿಭಾಗಯೋಗಃ
 15. ಪುರುಷೋತ್ತಮಯೋಗಃ
 16. ದೈವಾಸುರಸಂಪದ್ವಿಭಾಗಯೋಗಃ
 17. ಶ್ರದ್ಧಾತ್ರಯವಿಭಾಗಯೋಗಃ
 18. ಮೋಕ್ಷಸಂನ್ಯಾಸಯೋಗಃ

ಶ್ರೀಭಗವಾನುವಾಚ:
ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ ।
ಯತ್ತೇsಹಂ ಪ್ರಿಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ ।।೧।।

ಶ್ರೀ ಭಗವಂತನು ಹೀಗೆಂದನು: ಮಹಾಬಾಹು, ನನ್ನ ಈ ಉತ್ಕೃಷ್ಟವಾದ ನುಡಿಯನ್ನು ಇನ್ನೂ ಕೇಳು. ನನ್ನ ಮಾತಿನಿಂದ ಸಂಪ್ರೀತನಾಗುವ ನಿನಗೆ ನಿನ್ನ ಹಿತಕಾಮನೆಯಿಂದ ಹೇಳುತ್ತಿದ್ದೇನೆ.

ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ ।
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ।।೨।।

ನನ್ನ ಉತ್ಪತ್ತಿಯ ವಿಷಯವನ್ನು ದೇವಗಣಗಳೂ ತಿಳಿದಿಲ್ಲ. ಮಹರ್ಷಿಗಳೂ ತಿಳಿದಿಲ್ಲ. ಏಕೆಂದರೆ, ಈ ದೇವತೆಗಳಿಗೂ ಮಹರ್ಷಿಗಳಿಗೂ ಸರ್ವಪ್ರಕಾರದಲ್ಲಿಯೂ ನಾನೇ ಆದಿಯಾಗಿದ್ದೇನೆ.

ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ ।
ಅಸಂಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ ।।೩।।

ಯಾವಾತನು ನನ್ನನ್ನು ಅನಾದಿಯೆಂದೂ ಆದ್ದರಿಂದಲೇ ಜನ್ಮರಹಿತನೆಂದೂ ಲೋಕಗಳಿಗೆ ಮಹೇಶ್ವರನೆಂದೂ ತಿಳಿಯುತ್ತಾನೋ ಅವನು ಮಾನವರಲ್ಲಿ ಮೋಹರಹಿತನಾದವನು. ಆತನು ಸಕಲಪಾಪಗಳಿಂದಲೂ ಬಿಡುಗಡೆ ಹೊಂದುತ್ತಾನೆ.

ಬುದ್ದಿರ್ಜ್ಞಾನಮಸಂಮೋಹಃ ಕ್ಷಮಾ ಸತ್ಯಂ ದಮಃ ಶಮಃ ।
ಸುಖಂ ದುಃಖಂ ಭವೋsಭಾವೋ ಭಯಂ ಚಾಭಯಮೇವ ಚ ।।೪।।
ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋsಯಶಃ ।
ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ವಿಧಾಃ ।।೫।।

ಬುದ್ಧಿ (ಸೂಕ್ಷ್ಮ ವಿಷಯವನ್ನರಿಯುವ ಸಾಮರ್ಥ್ಯ), ಜ್ಞಾನ (ಆತ್ಮಾದಿ ವಿಷಯಗಳ ತಿಳಿವಳಿಕೆ) ಯುಕ್ತಾಯುಕ್ತವಿವೇಚನೆ, ತಾಳ್ಮೆ, ಸತ್ಯ, ಹುಟ್ಟದಿರುವುದು, ಭಯ, ಅಭಯ - ಇವುಗಳಲ್ಲದೆ ಅಹಿಂಸೆ, ಸಮತೆ (ಚಿತ್ತವನ್ನು ಏರುಪೇರಿಲ್ಲದೆ ಇಟ್ಟುಕೊಳ್ಳುವುದು), ದೊರಕಿದ್ದರಲ್ಲಿ ತೃಪ್ತಿ, ತಪಸ್ಸು (ಇಂದ್ರಿಯಗಳನ್ನು ಬಿಗಿಹಿಡಿದು ದೇಹವನ್ನು ದಂಡಿಸುವುದು), ದಾನ, ಕೀರ್ತಿ, ಅಪಕೀರ್ತಿ - ಈ ಪ್ರಕಾರವಾದ ಬುದ್ದಿಯೇ ಮೊದಲಾದ ಭಾವಗಳು ಸಕಲಪ್ರಾಣಿಗಳಿಗೆ ನನ್ನಿಂದಲೇ (ಅವರವರ ಕರ್ಮಾನುಸಾರವಾಗಿ) ನಾನಾ ಪ್ರಕಾರಗಳಾಗಿ ದೊರೆಯುತ್ತವೆ.

ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ ।
ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ ।।೬।।

ಪ್ರಾಚೀನರಾದ ಭೃಗು ಮೊದಲಾದ ಏಳು ಮಹರ್ಷಿಗಳು ಮತ್ತು ಸಾವರ್ಣರೆಂಬ ನಾಲ್ವರು ಮನುಗಳು - ಇವರೆಲ್ಲರೂ ನನ್ನ ಮನಸ್ಸಿನಿಂದ ಹುಟ್ಟಿದವರು. ನನ್ನಲ್ಲಿಯೇ ಇಟ್ಟ ಭಾವನೆಯುಳ್ಳವರು. ಲೋಕದಲ್ಲಿರುವ ಈ ಪ್ರಜೆಗಳೆಲ್ಲರೂ ಇವರಿಂದ ಜನಿಸಿದರು.

ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ ।
ಸೋsವಿಕಂಪೇನ ಯೋಗೇನೆ ಯುಜ್ಯತೇ ನಾತ್ರ ಸಂಶಯಃ ।।೭।।

ನನ್ನ ಈ ವಿಭೂತಿಯನ್ನೂ (ಮಹಾತ್ಮ್ಯದ ವಿಸ್ತಾರವನ್ನೂ) ಯೋಗವನ್ನೂ ಎಂದರೆ ನಾನು ಮಾಡಿರುವ ಘಟನೆಯನ್ನೂ ಅಥವಾ ಯೋಗಸಾಮರ್ಥ್ಯವನ್ನೂ ಯಾವಾತನು ಇದ್ದಂತೆ ಯಥಾರ್ಥವಾಗಿ ತಿಳಿದುಕೊಳ್ಳುತ್ಟಾನೋ ಅವನು ಚಿತ್ತಸ್ಥೈರ್ಯದಿಂದ ಕೂಡಿದವನಾಗುತ್ತಾನೆ. ಈ ವಿಷಯದಲ್ಲಿ ಸಂದೇಹವಿಲ್ಲ.

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ ।।೮।।

ನಾನು ಈ ಸಮಸ್ತ ಜಗತ್ತಿನ ಜನ್ಮಸ್ಥಾನವೆಂದೂ ಸ್ಥಿತಿ, ನಾಶ, ಭೋಗ ಮೊದಲಾದದ್ದೆಲ್ಲವೂ ನನ್ನಿಂದ ನಡೆಯುತ್ತದೆ ಎಂದೂ ತಿಳಿದುಕೊಂಡಿರುವ ತತ್ತ್ವವಿದರು ಪರಮಾರ್ಥದಲ್ಲಿ ಅಭಿನಿವೇಶವೆಂಬ ಭಾವದಿಂದ ಕೂಡಿದವರಾಗಿ ನನ್ನನ್ನು ಭಜಿಸುತ್ತಾರೆ.

ಮಚ್ಚಿತ್ತಾ ಮದ್ಗತಪ್ರಾಣಾಃ ಬೋಧಯಂತಃ ಪರಸ್ಪರಮ್ ।
ಕಥಯಂತಶ್ಚ ಮಾ ನಿತ್ಯಂ ತುಷ್ಯಂತಿ ಚ ರಮಂತಿ ಚ ।।೯।।

ಆ ಜನರು ನನ್ನಲ್ಲಿಯೇ ಚಿತ್ತವನ್ನಿಟ್ಟು, ನನ್ನಲ್ಲಿಯೇ ಪ್ರಾಣವನ್ನಿಟ್ಟು ಎಂದರೆ, ನನಗಾಗಿಯೇ ಬಾಳತಕ್ಕವರಾಗಿ, ಪರಸ್ಪರರಲ್ಲಿ ನನ್ನ ವಿಷಯವನ್ನು ತಿಳಿಸುತ್ತಾ, ನನ್ನ ವಿಚಾರವನ್ನು ಸದಾ ಹೇಳುತ್ತಾ ತೃಪ್ತರಾಗಿ ಆನಂದಿಸುತ್ತಾರೆ.


ತೇಷಾಂ ಸತತಯುಕ್ತಾನಾಂ ಭಜತಂ ಪ್ರೀತಪೂರ್ವಕಮ್ ।
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ ।।೧೦।।

ಹೀಗೆ ಸರ್ವದಾ ನನ್ನಲ್ಲಿ ಆಸಕ್ತರಾಗಿ ಕೇವಲ ಪ್ರೇಮದಿಂದಲೇ ನನ್ನನ್ನು ಸೇವಿಸುವವರಿಗೆ ನಾನು ಬುದ್ದಿಯೋಗವನ್ನು ಎಂದರೆ ಸಮ್ಯಗ್ದರ್ಶನ ಯೋಗವನ್ನು ನೀಡುತ್ತೇನೆ. ಆ ಸಮ್ಯಗ್ದರ್ಶನದಿಂದ ಅವರು ನನ್ನನ್ನು ಸೇರಿಕೊಳ್ಳುತ್ತಾರೆ.

ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ ।
ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ ।।೧೧।।

ನಾನು ಆ ಭಕ್ತಜನರ ಮೇಲಿರುವ ಕನಿಕರದಿಂದ, ಅವರ ಅಂತಃಕರಣದಲ್ಲಿಯೇ ಇದ್ದುಕೊಂಡು ಅವಿವೇಕಜನ್ಯವಾದ ತಪ್ಪು ತಿಳುವಳಿಕೆಯೆಂಬ ಕತ್ತಲೆಯನ್ನು ಪ್ರಕಾಶಮಾನವಾದ ಜ್ಞಾನದೀಪದಿಂದ ನಾಶ ಮಾಡುವೆನು.

ಅರ್ಜುನ ಉವಾಚ:
ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ ।
ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್ ।।೧೨।।
ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ ।
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ।।೧೩।।

ಅರ್ಜುನನು ಹೀಗೆಂದನು: ನೀನು ಪರಮಾತ್ಮ, ಪರಮತೇಜಸ್ಸು, ಪರಮ ಪಾವನ. ನೀನು ಶಾಶ್ವತನಾದ ಪುರುಷನೆಂದೂ ಸ್ವರ್ಗದಲ್ಲಿರುವ ಆದಿದೇವನೆಂದೂ ಜನ್ಮರಹಿತನೆಂದೂ ಸರ್ವವ್ಯಾಪ್ತನಾದ ವಿಭುವೆಂದೂ ಋಷಿಗಳೆಲ್ಲರೂ ಹೇಳುತ್ತಾರೆ. ದೇವರ್ಷಿಯಾದ ನಾರದನೂ ಅಸಿತದೇವಲನೂ ವ್ಯಾಸಮುನಿಯೂ ಹಾಗೆಯೇ ಹೇಳುತ್ತಾರೆ. ಅಲ್ಲದೆ ಸ್ವತಃ ನೀನೇ ಹಾಗೆಂದು ನನಗೆ ಹೇಳುತ್ತಿದ್ದೀಯೆ.

ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ ।
ನ ಹಿ ತೇ ಭಗವನ್ ವ್ಯಕ್ತಿಂ ವಿದುರ್ದೇವಾ ನ ದಾನವಾಃ ।।೧೪।।

ಹೇ ಕೇಶವ, ಇದೆಲ್ಲವೂ - ಋಷಿಗಳು ಹೇಳುವುದೂ - ನೀನು ಹೇಳುವುದೂ ಸತ್ಯವೆಂದೇ ನಾನು ನಂಬುತ್ತೇನೆ. ಹೇ ಭಗವನ್, ನಿನ್ನ ಅಭಿವ್ಯಕ್ತಿಯ ಮೂಲವೇನೆಂಬುದು ದೇವತೆಗಳಿಗೂ ಗೊತ್ತಿಲ್ಲ. ದಾನವರಿಗೂ ಗೊತ್ತಿಲ್ಲ.


ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ ।
ಭೂತಭಾವನ ಭೂತೇಶ ದೇವ ದೇವ ಜಗತ್ಪತೇ ।।೧೫।।

ಹೇ ಪುರುಷೋತ್ತಮ, ಭೂತಭಾವನ, ಭೂತೇಶ, ದೇವದೇವ, ಜಗದೇಶ್ವರ - ನೀನೇ ನಿನ್ನನ್ನು ನಿನ್ನಿಂದ ಅರಿತುಕೊಂಡಿದ್ದೀಯೆ.

ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ ।
ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ ।।೧೬।।

ಯಾವ ವಿಭೂತಿಗಳಿಂದ ನೀನು ಸಮಸ್ತ ಲೋಕಗಳನ್ನು ವ್ಯಾಪಿಸಿಕೊಂಡಿರುವೆಯೋ ಆ ವಿಭೂತಿಗಳು ದಿವ್ಯವಾದವುಗಳೇ ಸರಿ. ಅವನ್ನು ಒಂದೂ ಬಿಡದಂತೆ ಪೂರ್ತಿಯಾಗಿ ನೀನು ಹೇಳಬೇಕು.

ಕಥಂ ವಿದ್ಯಾಮಹಂ ಯೋಗಿನ್ ತ್ವಾಂ ಸದಾ ಪರಿಚಿಂತಯನ್ ।
ಕೇಷು ಕೇಷು ಚ ಭಾವೇಷು ಚಿಂತ್ಯೋsಸಿ ಭಗವನ್ಮಯಾ ।।೧೭।।

ಎಲೈ ಯೋಗಿಯೇ, ನಿನ್ನನ್ನು ನಾನು ಸದಾ ಧ್ಯಾನಿಸುತ್ತಿದ್ದರೆ, ನಿನ್ನನ್ನು ಅರಿತುಕೊಳ್ಳುವುದು ಹೇಗೆ? ಯಾವಯಾವ ಭಾವಗಳಲ್ಲಿ - ಪದಾರ್ಥಗಳಲ್ಲಿ, ಹೇ ಭಗವಂತ ನಿನ್ನನ್ನು ಕುರಿತು ಚಿಂತಿಸಬೇಕು?

ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ ।
ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿಮೇsಮೃತಮ್ ।।೧೮।।

ಜನಾರ್ದನ, ನಿನ್ನ ಯೋಗಸಾಮರ್ಥ್ಯವನ್ನೂ ಮಹಾತ್ಮ್ಯದ ವಿಸ್ತಾರವನ್ನೂ ಇನ್ನೂ ಹೇಳು. ನಿನ್ನ ವಾಕ್ಯಾಮೃತವನ್ನು ಎಷ್ಟು ಕೇಳಿದರೂ ನನಗೆ ತೃಪ್ತಿಯಾಗುವುದಿಲ್ಲ.

ಶ್ರೀ ಭಗವಾನುವಾಚ
ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ ।
ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ ।।೧೯।।

ಆಗ ಭಗವಂತನೆಂದನು - ಆಹಾ! ಆಗಲಪ್ಪ ಅರ್ಜುನ, ದಿವ್ಯವಾದ ನನ್ನ ಆತ್ಮವಿಭೂತಿಗಳಿವೆಯಲ್ಲ, ಇವುಗಳಲ್ಲಿ ಮುಖ್ಯವಾದವನ್ನು ಆರಿಸಿ ನಿನಗೆ ಹೇಳುವೆನು. ಅವುಗಳ ವಿಸ್ತಾರಕ್ಕೆ ಕೊನೆಯಿಲ್ಲ.

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ ।
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ।।೨೦।।

ಎಲೈ ಗುಡಾಕೇಶ, ನಾನು ಸರ್ವಪ್ರಾಣಿಗಳ ಹೃದಯದಲ್ಲಿರುವ ಪ್ರತ್ಯಗಾತ್ಮನಾಗಿದ್ದೇನೆ. ಸಕಲ ಭೂತಗಳಿಗೂ ನಾನೇ ಆದಿಯಾದ ಉತ್ಪತ್ತಿ, ಮಧ್ಯದ ಸ್ಥಿತಿ, ಅಂತ್ಯದ ಪ್ರಳಯವೂ ಆಗಿದ್ದೇನೆ.

ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್ ।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ।।೨೧।।

ದ್ವಾದಶಾದಿತ್ಯರಲ್ಲಿ ನಾನು ವಿಷ್ಣುವೆಂಬ ಆದಿತ್ಯನಾಗಿದ್ದೇನೆ. ಬೆಳಗುವ ಜ್ಯೋತಿಗಳಲ್ಲಿ ಪ್ರಶಸ್ತಕಿರಣಗಳುಳ್ಳ ರವಿಯಾಗಿದ್ದೇನೆ. ಮರುತ್ತುಗಳಲ್ಲಿ ಮರೀಚಿ ನಾನು. ನಕ್ಷತ್ರಗಳಿಗೆ ಪತಿಯಾದ ಚಂದ್ರ ನಾನು.

ವೇದಾನಾಂ ಸಾಮವೇದೋsಸ್ಮಿ ದೇವಾನಾಮಸ್ಮಿ ವಾಸವಃ ।
ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ।।೨೨।।

ವೇದಗಳಲ್ಲಿ ಸಾಮವೇದವಾಗಿದ್ದೇನೆ. ದೇವತೆಗಳಲ್ಲಿ ಇಂದ್ರನೇ ನಾನು. ಇಂದ್ರಿಯಗಳಲ್ಲಿ ಮನಸ್ಸಾಗಿದ್ದೇನೆ. ದೇಹೇಂದ್ರಿಯಗಳಿಂದ ಕೂಡಿದ ಪ್ರಾಣದೇಹಗಳಲ್ಲಿ ಬುದ್ಧಿಯೆಂಬ ಅಂತಃಕರಣವೃತ್ತಿ (ಚೇತನ)ನಾನು.

ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್ ।
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ ।।೨೩।।

ಏಕಾದಶರುದ್ರರಿಗೆ ಒಡೆಯನಾದ ಶಂಕರನಾಗಿದ್ದೇನೆ. ಯಕ್ಷರಾಕ್ಷಸರಲ್ಲಿ ಕುಬೇರನಾಗಿದ್ದೇನೆ. ಅಷ್ಟವಸುಗಳಲ್ಲಿ ಅನಲ ಎಂಬ ಹೆಸರಿನ ಪಾವಕನು (ಅಗ್ನಿ) ನಾನು. ಪರ್ವತಗಳಲ್ಲಿ ಮೇರುವಾಗಿದ್ದೇನೆ.

ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ ।
ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ।।೨೪।।

ಪಾರ್ಥ, ರಾಜಪುರೋಹಿತರಲ್ಲಿ ಮುಖ್ಯನಾದ ಬೃಹಸ್ಪತಿಯೇ ನಾನೆಂದು ತಿಳಿ. ಸೇನಾಪತಿಗಳಲ್ಲಿ ಷಣ್ಮುಖನು ನಾನು. ಜಲಾಶಯಗಳಲ್ಲಿ ಸಾಗರ ನಾನು.

ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್ ।
ಯಜ್ಞಾನಾಂ ಜಪಯಜ್ಞೋsಸ್ಮಿ ಸ್ಥಾವರಾಣಾಂ ಹಿಮಾಲಯಃ ।।೨೫।।

ಮಹರ್ಷಿಗಳಲ್ಲಿ ನಾನು ಭೃಗುವಾಗಿದ್ದೇನೆ. ವಾಕ್ಕುಗಳಲ್ಲಿ ಏಕಾಕ್ಷರವಾದ ಓಂಕಾರವಾಗಿದ್ದೇನೆ. ಯಜ್ಞಗಳಲ್ಲಿ ಜಪಯಜ್ಞವಾಗಿದ್ದೇನೆ. ಸ್ಥಾವರಗಳಲ್ಲಿ ಹಿಮಾಲಯ ಪರ್ವತವೇ ನಾನು.

ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ ।
ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ ।।೨೬।।

ವೃಕ್ಷಗಳಲ್ಲಿ ಅಶ್ವತ್ಥವೃಕ್ಷವಾಗಿದ್ದೇನೆ. ದೇವರ್ಷಿಗಳಲ್ಲಿ ನಾರದನಾಗಿದ್ದೇನೆ. ಗಂಧರ್ವರಲ್ಲಿ ಚಿತ್ರರಥನು ಅಗಿದ್ದೇನೆ. ಸಿದ್ಧಪುರುಷರಲ್ಲಿ (ಜ್ಞಾನ, ವೈರಾಗ್ಯ, ಅಣಿಮಾದಿ ಸಿದ್ಧಿಗಳನ್ನು ಪಡೆದವರಲ್ಲಿ) ಕಪಿಲಮುನಿ ನಾನು.

ಉಚ್ಚೈಃಶ್ರವಸಮಶ್ವಾನಾಂ ವಿದ್ದಿ ಮಾಮಮೃತೋದ್ಭವಮ್ ।
ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್ ।।೨೭।।

ಕುದುರೆಗಳಲ್ಲಿ, ಅಮೃತಕ್ಕಾಗಿ ಸಮುದ್ರವನ್ನು ಕಡೆದ ನಿಮಿತ್ತದಿಂದ ಹುಟ್ಟಿದ ಉಚ್ಚೈಃಶ್ರವಸ್ಸೆಂಬ ಅಶ್ವರಾಜನೇ ನಾನೆಂದು ತಿಳಿ. ಆನೆಗಳಲ್ಲಿ ಐರಾವತವೆಂದೂ ಮನುಷ್ಯರಲ್ಲಿ ಅರಸನೆಂದೂ ತಿಳಿ.

ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ ।
ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ।।೨೮।।

ಆಯುಧಗಳಲ್ಲಿ ನಾನು ವಜ್ರಾಯುಧ, ಧೇನುಗಳಲ್ಲಿ ಕಾಮಧೇನು. ಪ್ರಜೋತ್ಪತ್ತಿಗೆ ಕಾರಣರಾಗುವವರಲ್ಲಿ ಮನ್ಮಥನು ನಾನು. ಸರ್ಪಗಳಲ್ಲಿ ವಾಸುಕಿಯು ನಾನು.

ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್ ।
ಪಿತೃಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ।।೨೯।।

ನಾಗಗಳಲ್ಲಿ ನಾನು ನಾಗರಾಜನಾದ ಅನಂತನು. ಜಲವಾಸಿಗಳಲ್ಲಿ ನಾನು ವರುಣ. ಪಿತೃಗಳಲ್ಲಿ ನಾನು ಅರ್ಯಮನೆಂಬ ಪಿತೃವಾಗಿದ್ದೇನೆ. ನಿಯಾಮಕರಲ್ಲಿ ನಾನು ಯಮನಾಗಿದ್ದೇನೆ.

ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್ ।
ಮೃಗಾಣಾಂ ಚ ಮೃಗೇಂದ್ರೋsಹಂ ವೈನತೇಯಶ್ಚ ಪಕ್ಷಿಣಾಮ್ ।।೩೦।।

ದೈತ್ಯರಲ್ಲಿ ನಾನು ಪ್ರಹ್ಲಾದನೂ ಗಣನೆಮಾಡತಕ್ಕವರಲ್ಲಿ ಕಾಲನೂ ಆಗಿದ್ದೇನೆ. ಮೃಗಗಳಲ್ಲಿ ಸಿಂಹ ನಾನು. ಪಕ್ಷಿಗಳಲ್ಲಿ ನಾನು ಗರುಡನಾಗಿದ್ದೇನೆ (ವೈನತೇಯ: ವಿನೆತೆಯ ಮಗನಾದ ಗರುಡನು).

ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ ।
ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ ।।೩೧।।

ಪಾವನಮಾಡತಕ್ಕವರಲ್ಲಿ ವಾಯು ನಾನು. ಶಸ್ತ್ರಧಾರಿಗಳಲ್ಲಿ ಶ್ರೀರಾಮ ನಾನು. ಜಲಜಂತುಗಳಲ್ಲಿ ಮಕರವೇ ನಾನು. ನದಿಗಳಲ್ಲಿ ಗಂಗಾನದಿಯಾಗಿದ್ದೇನೆ.

ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ ।
ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ ।।೩೨।।

ಎಲ್ಲ ಸೃಷ್ಟಿಗಳಿಗೂ ಆದಿ, ಮಧ್ಯ, ಅಂತಗಳೂ ನಾನೇ. ಅರ್ಜುನ, ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆಯಾಗಿದ್ದೇನೆ. ವಾದ ಮಾಡುವವರಲ್ಲಿರುವ ವಾದವೇ ನಾನು.

ಅಕ್ಷರಾಣಾಮಕಾರೋsಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।
ಅಹಮೇವಾಕ್ಷಯಃ ಕಾಲೋ ಧಾತಾsಹಂ ವಿಶ್ವತೋಮುಖಃ ।।೩೩।।

ಅಕ್ಷರಗಳಲ್ಲಿ ನಾನು ಅಕಾರವಾಗಿದ್ದೇನೆ. ಸಮಾಸಗಳ ಸಮೂಹದಲ್ಲಿ ನಾನು ದ್ವಂದ್ವಸಮಾಸ, ನಾನೇ ಎಂದಿಗೂ ಕ್ಷಯಿಸದಿರುವ ಕಾಲವಾಗಿದ್ದೇನೆ. ಸಕಲರಿಗೂ ಕರ್ಮಫಲಗಳನ್ನು ನೀಡುವ ವಿಶ್ವತೋಮುಖನು ನಾನು.

ಮೃತ್ಯುಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ ।
ಕೀರ್ತಿಃ ಶ್ರೀವಾಕ್ ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ।।೩೪।।

ಸರ್ವಸ್ವವನ್ನೂ ಸರ್ವಜಗತ್ತನ್ನೂ ನಾಶಮಾಡಿಬಿಡಬಲ್ಲ ಮೃತ್ಯು ನಾನು. ಭವಿಷ್ಯತ್ತಿನಲ್ಲಿ ಯಾರಿಗೆ ಕಲ್ಯಾಣವಾಗಲಿದೆಯೋ ಅವರಿಗೆ ಅಭ್ಯುದಯ ಕಾರಣನು ನಾನು. ಸ್ತ್ರೀವರ್ಗದಲ್ಲಿ ಕೀರ್ತಿ, ಶ್ರೀ, ವಾಕ್, ಸ್ಮೃತಿ, ಮೇಧಾ, ಧೃತಿ, ಕ್ಷಮೆಗಳು ನಾನು.

ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್ ।
ಮಾಸಾನಾಂ ಮಾರ್ಗಶೀರ್ಷೋಹಮೃತೂನಾಂ ಕುಸುಮಾಕರಃ ।।೩೫।।

ಸಾಮಗಳಲ್ಲಿ ಪ್ರಧಾನವಾದ ಬೃಹತ್ಸಾಮವು ನಾನು. ಛಂದಸ್ಸುಗಳಲ್ಲಿ ನಾನು ಗಾಯತ್ರಿಛಂದಸ್ಸು. ಮಾಸಗಳಲ್ಲಿ ಮಾರ್ಗಶೀರ್ಷ ಮಾಸವೂ ಋತುಗಳಲ್ಲಿ ವಸಂತಋತುವೂ ಆಗಿದ್ದೇನೆ.

ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।
ಜಯೋsಸ್ಮಿ ವ್ಯವಸಾಯೋsಸ್ಮಿ ಸತ್ತ್ವಂ ಸತ್ತ್ವವತಾಮಹಮ್ ।।೩೬।।

ವಂಚಕರಲ್ಲಿ ನಾನು ಜೂಜಾಗಿದ್ದೇನೆ. ತೇಜಸ್ವಿಗಳ ತೇಜಸ್ಸು ನಾನು. ಜಯಶಾಲಿಗಳಿಗೆ ಜಯವೂ ನಿಶ್ಚಯಿಸತಕ್ಕವರ ನಿಶ್ಚಯವೂ ಸಾತ್ವಿಕರಲ್ಲಿ ಸತ್ತ್ವವೂ ನಾನೇ ಆಗಿದ್ದೇನೆ.

ವೃಷ್ಣೀನಾಂ ವಾಸುದೇವೋsಸ್ಮಿ ಪಾಂಡವಾನಾಂ ಧನಂಜಯಃ ।
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ।।೩೭।।

ಯಾದವರಲ್ಲಿ ವಸುದೇವನ ಮಗನಾದ ವಾಸುದೇವನು ನಾನು. ಪಾಂಡವರಲ್ಲಿ ಅರ್ಜುನನು ನಾನು. ಜ್ಞಾನಿಗಳಾದ ಮುನಿಗಳಲ್ಲಿ ನಾನು ವ್ಯಾಸ ಮಹರ್ಷಿ. ಕ್ರಾಂತದರ್ಶಿಗಳಲ್ಲಿ ಉಶನನೆಂಬ ಕವಿ ನಾನು.

ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ ।
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ।।೩೮।।

ದಮನಮಾಡುವರಲ್ಲಿ ದಮನಸಾಧನವಾದ ದಂಡವು ನಾನು. ಜಯೇಚ್ಛುಗಳ ಕಾರ್ಯನೀತಿಯೇ ನಾನು. ಗೋಪ್ಯವಿಷಯಗಳ ಮುಖ್ಯಕಾರಣವಾದ ಮೌನವೇ ನಾನು. ಜ್ಞಾನಿಗಳ ಜ್ಞಾನವು ನಾನು.

ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ ।
ನ ತದಸ್ತಿ ವಿನಾ ಯತ್ ಸ್ಯಾನ್ ಮಯಾ ಭೂತಂ ಚರಾಚರಮ್ ।।೩೯।।

ಅರ್ಜುನ, ಸರ್ವಭೂತಗಳೂ ಹುಟ್ಟುವುದಕ್ಕೆ ಕಾರಣವಾದ ಬೀಜ ಯಾವಿದೋ ಆ ಬೀಜವೇ ನಾನು. ನಾನಿಲ್ಲದೆ ಇರಬುದಾದ ಯಾವುದೇ ಒಂದು ಚರಾಚರವಸ್ತುವೂ ಇಲ್ಲ.

ನಾಂತೋಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ ।
ಏಷ ತೋದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ।।೪೦।।

ಪರಂತಪ, ನನ್ನ ದಿವ್ಯ-ವಿಭೂತಿಗಳಿಗೆ ಕೊನೆಯೆಂಬುದೇ ಇಲ್ಲ. ನನ್ನ ವಿಭೂತಿಯ ವಿಸ್ತರವನ್ನು ಕೇವಲ ಒಂದು ಅಂಶವಾಗಿ ನಿನಗೆ ಹೇಳಿದ್ದೇನೆ.

ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ ।
ತತ್ತದೇವಾವಗಚ್ಛ ತ್ವಂ ಮಮ ತೇಜೋsಂಶಸಂಭವಮ್ ।।೪೧।।

ಲೋಕದಲ್ಲಿ ಯಾವ ಸತ್ತ್ವವು ವೈಭವೋಪೇತವಾಗಿದೆಯೋ ಸಂಪದ್ಯುಕ್ತವಾಗಿ ಇದೆಯೋ ಅಥವಾ ಉತ್ಸಾಹಶಕ್ತಿಯುಕ್ತವಾಗಿದೆಯೋ ಅದೆಲ್ಲವೂ ನನ್ನ ತೇಜಸ್ಸಿನ ಒಂದು ಅಂಶದಿಂದಾಗಿದೆಯೆಂದು ತಿಳಿದುಕೋ.

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ ।
ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ ।।೪೨।।

ಅಥವಾ ಇಷ್ಟೊಂದು ಬಹಳವಾಗಿ ತಿಳಿದಿದ್ದರಿಂದ ನಿನಗೆ ಆಗುವುದೇನು, ಅರ್ಜುನ? ಈ ಇಡೀ ಜಗತ್ತನ್ನೂ ಏಕಾಂಶದಿಂದ ಹಿಡಿದಿಟ್ಟುಕೊಂಡೀದ್ದೇನೆ.