ವಿನ್ಸ್ಟನ್ ಚರ್ಚಿಲ್ (ಕಾದಂಬರಿಕಾರ)

ವಿನ್ಸ್ಟನ್ ಚರ್ಚಿಲ್ (1871-1947) ಅಮೆರಿಕದ ಒಬ್ಬ ಕಾದಂಬರಿಕಾರ.
ಜೀವನ, ಕೃತಿಗಳು
[ಬದಲಾಯಿಸಿ]ಸೇಂಟ್ ಲೂಯಿಯಲ್ಲಿ ಜನಿಸಿ ಅಲ್ಲಿನ ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿ, ಅನ್ನಪಾಲಿಸ್‌ನ ನೌಕಾ ಅಕಾಡೆಮಿಯಲ್ಲಿ ಪದವಿ ಪಡೆದ (1894). ಕೆಲವು ಕಾಲ ಆರ್ಮಿ ಅಂಡ್ ನೇವಿ ಜರ್ನಲ್‌ನಲ್ಲಿ ಲೇಖಕನಾಗಿಯೂ, ಅನಂತರ ಕಾಸ್ಮೊಪಾಲಿಟನ್ ಮ್ಯಾಗಜೀನಿನ ಕಾರ್ಯನಿರ್ವಾಹಕ ಸಂಪಾದಕನಾಗಿಯೂ ಕೆಲಸ ಮಾಡಿದ. 1900-1905ರ ಅವಧಿಯಲ್ಲಿ ನ್ಯೂ ಹ್ಯಾಂಪ್‌ಷೈರ್‌ನ ಗೌರ್ನರ್ ಪದವಿಗೆ ಪ್ರಗತಿಶೀಲ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ.
ಜೀವನಕ್ಕೆ ಬೇಕಾದ ಅನುಕೂಲಗಳಿದ್ದುದರಿಂದ ಚರ್ಚಿಲ್ ಬರವಣಿಗೆಯನ್ನೇ ವೃತ್ತಿಯಾಗಿ ಕೈಗೊಂಡು ಅನೇಕ ಕಾದಂಬರಿಗಳನ್ನು ಬರೆದ. ಮೊದಲ ಕಾದಂಬರಿಯಾದ ದ ಸೆಲೆಬ್ರಿಟಿ 1898ರಲ್ಲಿ ಪ್ರಕಟವಾಯಿತು. ರಿಚರ್ಡ್ ಕಾರ್‌ವಾಲ್ (1899) ಕ್ರಾಂತಿಗೊಳಗಾದ ಮೇರಿಲ್ಯಾಂಡನ್ನು ಕುರಿತದ್ದು. ಸುಮಾರು ಹತ್ತು ಲಕ್ಷ ಪ್ರತಿಗಳು ಖರ್ಚಾದುದು ಇದರ ಜನಪ್ರಿಯತೆಗೆ ಗುರುತು. ಮುಂದೆ ಪ್ರಕಟವಾದ ದ ಕ್ರೈಸಿಸ್ (1901), ದ ಕ್ರಾಸಿಂಗ್ (1904) ಮೊದಲಾದವು ಅಮೆರಿಕ ದೇಶದ ಅಂತರ್ಯುದ್ಧದ ಹಿನ್ನೆಲೆಯನ್ನು ವಸ್ತುವನ್ನಾಗುಳ್ಳ, ಕೆಂಟಕಿ ಸಾಹಸಗಳನ್ನು ನಿರೂಪಿಸುವ ಕಥೆಗಳು.[೧] ಕ್ರೈಸಿಸ್ ಪ್ರಕಟವಾದೊಡನೆ ಚರ್ಚಿಲ್ ಅಮೆರಿಕದ ಮುಖ್ಯ ಕಾದಂಬರಿಕಾರರಲ್ಲಿ ಒಬ್ಬನೆಂಬ ಖ್ಯಾತಿಯನ್ನು ಗಳಿಸಿದ. ಕಾನಿಸ್ಟನ್ (1906), ಮಿಸ್ಟರ್ ಕ್ರೂಯಿಸ್ ಕೆರಿಯರ್ (1908) ರಾಜಕೀಯ ಸಮಸ್ಯೆಗಳನ್ನು ಉಳ್ಳಂಥವು. ದಿ ಇನ್‌ಸೈಡ್ ಆಫ್ ದಿ ಕಪ್ (1913), ಎ ಫಾರ್ ಕಂಟ್ರಿ (1915) ಧಾರ್ಮಿಕ ಅಥವಾ ಸಾಮಾಜಿಕ ಪ್ರಶ್ನೆಗಳನ್ನು ವಿಶ್ಲೇಷಿಸುವ ಕಾದಂಬರಿಗಳು. ೧೯೧೩ ರ ವರೆಗೆ ಆ ವರ್ಷಗಳಲ್ಲಿ ಅತಿ ಹೆಚ್ಚು ಮಾರಾಟವಾದ ಅಮೇರಿಕನ್ ಕಾದಂಬರಿಗಳ ಪಟ್ಟಿಯಲ್ಲಿ ಇವು ಮೊದಲ ಸ್ಥಾನ ಪಡೆದವು.[೨] ಎ ಮಾಡರ್ನ್ ಕ್ರಾನಿಕಲ್ (1910), ದ ಡ್ವೆಲ್ಲಿಂಗ್ ಪ್ಲೇಸ್ ಆಫ್ ಲೈಟ್ (1917) ದಿ ಅನ್‌ಚಾರ್ಟೆಡ್ ವೇ (1941) ಎಂಬುವು ಇವನ ಇತರ ಕೃತಿಗಳು. ಅಮೆರಿಕದ ಗತಕಾಲದ ಚಿತ್ರಗಳ ಮೂಲಕ ತನ್ನ ನಾಡಿನ ರೋಮಾಂಚಕಾರಿ ಇತಿಹಾಸವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾದ ಕೆಲವೇ ಲೇಖಕರಲ್ಲಿ ಇವನೂ ಒಬ್ಬ.
ಉಲ್ಲೇಖಗಳು
[ಬದಲಾಯಿಸಿ]- ↑ Corbin, John (May 28, 1904). "The Crossing." A New Historical American Novel by the Author of "Richard Carvel.", The New York Times
- ↑ Alice Hackett's 70 Years of Best Sellers, pp 95-110
ಹೊರಗಿನ ಕೊಂಡಿಗಳು
[ಬದಲಾಯಿಸಿ]- The Churchill Society
- Works by ವಿನ್ಸ್ಟನ್ ಚರ್ಚಿಲ್ (ಕಾದಂಬರಿಕಾರ) at Project Gutenberg
- Works by or about ವಿನ್ಸ್ಟನ್ ಚರ್ಚಿಲ್ at Internet Archive
