ವಿಷಯಕ್ಕೆ ಹೋಗು

ಎ ಜೀವಸತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಟಮಿನ್ ಎ ಇಂದ ಪುನರ್ನಿರ್ದೇಶಿತ)

ಎ ಜೀವಸತ್ವ (ವಿಟಮಿನ್ ಎ) ಅಪರ್ಯಾಪ್ತ ಪೌಷ್ಟಿಕ ಸಾವಯವ ಸಂಯುಕ್ತಗಳ ಒಂದು ಗುಂಪು. ಇದರಲ್ಲಿ ರೆಟಿನಾಲ್, ರೆಟ್‍ನ್ಯಾಲ್, ರೆಟಿನೋಯಿಕ್ ಆಮ್ಲ, ಮತ್ತು ಹಲವಾರು ಪ್ರೋವಿಟಮಿನ್ ಎ ಕ್ಯಾರೋಟಿನಾಯ್ಡ್‌ಗಳು ಸೇರಿವೆ.[] ಎ ಜೀವಸತ್ವ ಅನೇಕ ಕಾರ್ಯಗಳನ್ನು ಹೊಂದಿದೆ: ಅದು ಬೆಳವಣಿಗೆ ಮತ್ತು ಅಭಿವೃದ್ಧಿಗೆ, ಪ್ರತಿರಕ್ಷಾ ವ್ಯವಸ್ಥೆಯ ನಿರ್ವಹಣೆಗೆ ಮತ್ತು ಉತ್ತಮ ದೃಷ್ಟಿಗೆ ಮುಖ್ಯವಾಗಿದೆ.[] ಎ ಜೀವಸತ್ವ ರೆಟ್‍ನ್ಯಾಲ್‍ನ ರೂಪದಲ್ಲಿ ಕಣ್ಣಿನ ಅಕ್ಷಿಪಟಲಕ್ಕೆ ಅಗತ್ಯವಾಗಿದೆ. ರೆಟ್‍ನ್ಯಾಲ್ ಆಪ್ಸಿನ್ ಪ್ರೋಟೀನಿನೊಂದಿಗೆ ಸಂಯೋಜನೆಗೊಂಡು ರೋಡಾಪ್ಸಿನ್ ಅನ್ನು ರಚಿಸುತ್ತದೆ. ರೋಡಾಪ್ಸಿನ್ ಬೆಳಕನ್ನು ಹೀರುವ ಅಣು ಮತ್ತು ಕಡಿಮೆ ಬೆಳಕಿನ ಮತ್ತು ವರ್ಣ ದೃಷ್ಟಿಗಾಗಿ ಅಗತ್ಯವಾಗಿದೆ.[] ಎ ಜೀವಸತ್ವವು ರೆಟಿನೋಯಿಕ್ ಆಮ್ಲವಾಗಿ ಬಹಳ ವಿಭಿನ್ನ ಪಾತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಎಪಿತೀಲಿಯಲ್ ಮತ್ತು ಇತರ ಜೀವಕೋಶಗಳಿಗೆ ಒಂದು ಮುಖ್ಯ ಹಾರ್ಮೋನಿನಂತಹ ಬೆಳವಣಿಗೆ ಸಹಾಯಕ ವಸ್ತುವಾಗಿದೆ.

ದೃಶ್ಯ ಕ್ರೋಮೋಫ಼ೋರ್ ಆಗಿ ರೆಟ್‍ನ್ಯಾಲ್‍ನ ವಿಶಿಷ್ಟ ಕಾರ್ಯದ ಕಾರಣ, ದುರ್ಬಲ ದೃಷ್ಟಿ ಸಾಮರ್ಥ್ಯವು, ವಿಶೇಷವಾಗಿ ಕಡಿಮೆ ಬೆಳಕಿನಲ್ಲಿ (ಇರುಳು ಕುರುಡು), ಎ ಜೀವಸತ್ವದ ಕೊರತೆಯ ಅತ್ಯಂತ ಮುಂಚಿನ ಮತ್ತು ನಿರ್ದಿಷ್ಟ ಅಭಿವ್ಯಕ್ತಿಯಾಗಿದೆ. ಇತರ ಬದಲಾವಣೆಗಳಲ್ಲಿ ದುರ್ಬಲ ಪ್ರತಿರೋಧಕ ಶಕ್ತಿ (ಕಿವಿ ಸೋಂಕುಗಳ ಹೆಚ್ಚಿದ ಅಪಾಯ, ಮೂತ್ರನಾಳ ಸೋಂಕುಗಳು), ಹೈಪರ್‍ಕೆರಟೋಸಿಸ್ (ಕೂದಲು ಕೋಶಕಗಳ ಸ್ಥಳದಲ್ಲಿ ಬಿಳಿ ಗಡ್ಡೆಗಳು) ಸೇರಿವೆ. ದಂತಗಳಿಗೆ ಸಂಬಂಧಿಸಿದಂತೆ, ಎ ಜೀವಸತ್ವದ ಕೊರತೆಯಿಂದ ದಂತಕವಚದ ಅಪೂರ್ಣ ಬೆಳವಣಿಗೆಯಾಗಬಹುದು.

ಅತಿಯಾದ ಎ ಜೀವಸತ್ವದ ಸೇವನೆಯಿಂದ ವಾಕರಿಕೆ, ಕಿರಿಕಿರಿ, ಕ್ಷೀಣಿಸಿದ ಹಸಿವು, ವಾಂತಿ, ಮಸುಕಾದ ದೃಷ್ಟಿ ಸಾಮರ್ಥ್ಯ, ತಲೆನೋವು, ಕೂದಲು ಉದುರುವಿಕೆ, ಸ್ನಾಯು ಮತ್ತು ಹೊಟ್ಟೆ ನೋವು/ದುರ್ಬಲತೆ, ತೂಕಡಿಕೆ ಮತ್ತು ಬದಲಾದ ಮಾನಸಿಕ ಸ್ಥಿತಿ ಉಂಟಾಗಬಹುದು. ದೀರ್ಘಕಾಲದ ರೋಗಸ್ಥಿತಿಗಳಲ್ಲಿ, ಕೂದಲು ಉದುರುವಿಕೆ, ಒಣ ಚರ್ಮ, ಲೋಳೆ ಪೊರೆ ಒಣಗುವುದು, ಜ್ವರ, ನಿದ್ರಾರಾಹಿತ್ಯ, ತೂಕ ಇಳಿತ, ಮೂಳೆ ಮುರಿತಗಳು, ರಕ್ತಹೀನತೆ ಮತ್ತು ಅತಿಸಾರ ಉಂಟಾಗಬಹುದು.

ಎ ಜೀವಸತ್ವವಿರುವ ಆಹಾರಗಳು: ಗಜ್ಜರಿ, ಕಾಡ್ ಲಿವರ್ ಎಣ್ಣೆ, ಕೆಂಪು ದೊಣ್ಣೆ ಮೆಣಸಿನಕಾಯಿ, ಗೆಣಸು, ಬೆಣ್ಣೆ, ಪಾಲಕ್, ಕುಂಬಳಕಾಯಿ, ಮೊಟ್ಟೆ, ಪಪಾಯಾ, ಟೊಮೇಟೊ, ಮಾವು, ಹಾಲು, ಇತ್ಯಾದಿ.

ಉಲ್ಲೇಖಗಳು

[ಬದಲಾಯಿಸಿ]
  1. Fennema, Owen (2008). Fennema's Food Chemistry. CRC Press Taylor & Francis. pp. 454–455. ISBN 9780849392726.
  2. Tanumihardjo SA (2011). "Vitamin A: biomarkers of nutrition for development". The American Journal of Clinical Nutrition. 94 (2): 658S–665S. doi:10.3945/ajcn.110.005777. PMC 3142734. PMID 21715511.
  3. "Vitamin A". Office of Dietary Supplements, US National Institutes of Health. 31 August 2016.