ವರ್ಣನಾತ್ಮಕ ಭಾಷಾವಿಜ್ಞಾನ
ವರ್ಣನಾತ್ಮಕ ಭಾಷಾವಿಜ್ಞಾನ - ಸಾಮಾನ್ಯ ಭಾಷಾವಿಜ್ಞಾನದ ಪ್ರಮುಖ ಶಾಖೆಗಳ ಪೈಕಿ ಒಂದು(ಡಿಸ್ಕ್ರಿಪ್ಟಿವ್ ಲಿಂಗ್ವಿಸ್ಟಿಕ್ಸ್).[೧] ಇದಕ್ಕೆ ವಿವರಣಾತ್ಮಕ ಭಾಷಾವಿಜ್ಞಾನ ಎಂದೂ ಹೆಸರಿದೆ. ಇದು ಭಾಷೆಗಳ ಒಳರಚನೆಗೆ ಸಂಬಂಧಿಸಿದ ವಿಚಾರಗಳನ್ನು ಪೂರ್ಣವಾಗಿಯೂ ಸ್ಪಷ್ಟ ವಾಗಿಯೂ ತಿಳಿಯಲು ಸಹಾಯ ಮಾಡುತ್ತದೆ. ಇದರಲ್ಲಿ ಒಂದು ಭಾಷೆಯ ಧ್ವನಿ, ಪದ, ವಾಕ್ಯ, ಅರ್ಥ ಮುಂತಾದ ವಿಚಾರಗಳನ್ನು ಆ ಭಾಷೆಯಲ್ಲಿರುವ ಸ್ಥಿತಿಯಲ್ಲಿಯೇ ವಿವರಿಸಿ ತೋರಿಸಲಾಗುತ್ತದೆ. ವರ್ಣನಾತ್ಮಕ ಭಾಷಾವಿಜ್ಞಾನದಲ್ಲಿ ಯಾವುದಾದರೊಂದು ಕಾಲದ ಭಾಷೆಯನ್ನೋ ಯಾವುದಾದರೊಂದು ಸ್ಥಳದ ಭಾಷೆಯನ್ನೋ ಪ್ರತ್ಯೇಕವಾಗಿ ವಿವೇಚಿಸಬಹುದು. ಹೀಗೆ ಭಾಷೆಯ ಅಧ್ಯಯನ ಒಂದು ಕಾಲಕ್ಕೆ, ಒಂದು ಪ್ರದೇಶಕ್ಕೆ ಸೀಮಿತವಾದುದನ್ನು ವರ್ಣನಾತ್ಮಕ ಪದ್ಧತಿ ಎನ್ನಲಾಗುತ್ತದೆ.
ಭಾಷಾವಿಜ್ಞಾನ ಕ್ಷೇತ್ರದಲ್ಲಿ ವರ್ಣನಾತ್ಮಕ ಭಾಷಾವಿಜ್ಞಾನ ಮಹತ್ತ್ವವಾದುದು. ಭಾಷೆಯ ಅಧ್ಯಯನಕ್ಕೆ ಇದರ ಜ್ಞಾನ ಅನಿವಾರ್ಯ. ವರ್ಣನಾತ್ಮಕ ಭಾಷಾವಿಜ್ಞಾನದ ಮೂಲತತ್ತ್ವಗಳನ್ನು ಅರಿಯದೆ ಭಾಷೆಯ ಐತಿಹಾಸಿಕ ಅಧ್ಯಯನವನ್ನಾಗಲೀ ತೌಲನಿಕ ಅಧ್ಯಯನವನ್ನಾಗಲೀ ಮಾಡಲು ಸಾಧ್ಯವಾಗುವುದಿಲ್ಲ.
ಭಾಷೆಯ ರಚನೆಗೆ ಸಂಬಂಧಿಸಿದ ಅಂಶಗಳನ್ನು ಅರಿಯುವುದು, ವರ್ಣಿಸುವುದು ಅಥವಾ ವಿವರಿಸುವುದು ವರ್ಣನಾತ್ಮಕ ಭಾಷಾವಿಜ್ಞಾನದ ಉದ್ದೇಶ. ಭಾಷೆಯ ಘಟಕಗಳಾದ ಅಕ್ಷರ, ಆಕೃತಿ, ಪದ, ಪದಪುಂಜ ಹಾಗೂ ಸಂಪೂರ್ಣ ವಾಕ್ಯದ ವರೆಗಿನ ಅಧ್ಯಯನ ವ್ಯವಸ್ಥಿತ ರೀತಿಯಲ್ಲಿ ವರ್ಣನಾತ್ಮಕ ಭಾಷಾವಿಜ್ಞಾನದಲ್ಲಿ ನಡೆಯುತ್ತದೆ. ಭಾಷೆ ಬದಲಾವಣೆ ಯುಳ್ಳದ್ದಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಒಂದು ಕಾಲದ, ಪ್ರದೇಶದ ಭಾಷಾ ರಚನೆಯ ಸ್ವರೂಪವನ್ನು ವಿವರಿಸಿ ನಿರೂಪಿಸುವುದು ಈ ಅಧ್ಯಯನದ ವಿಧಾನ.
ಧ್ವನಿರೂಪ ಮತ್ತು ಅರ್ಥ ಎಂಬ ಎರಡು ಅಂಶಗಳನ್ನು ಭಾಷೆ ಒಳಗೊಂಡಿದೆ. ಒಂದು ಬಾಹ್ಯ ಮತ್ತೊಂದು ಆಂತರಿಕ. ಭಾಷೆ ಧ್ವನಿಗಳನ್ನು ಹೊಂದಿ ಬಾಹ್ಯ ಸ್ವರೂಪವನ್ನು ಸಂಪಾದಿಸಿಕೊಂಡಂತೆ ಅರ್ಥವನ್ನು ಹೊಂದಿ ಅಂತಃಸ್ವರೂಪವನ್ನು ಪಡೆಯುತ್ತದೆ. ಯಾವುದೇ ಒಂದು ಭಾಷೆ ಬಾಹ್ಯ ಸ್ವರೂಪಗಳಾದ ಧ್ವನಿ, ಧ್ವನಿಮಾ ಹಾಗೂ ಅಕ್ಷರಗಳೇ ಅಲ್ಲದೆ ಆಕೃತಿಮಾ, ಪದ, ಪದಪುಂಜ, ವಾಕ್ಯದಂಥ ದೊಡ್ಡ ರಚನೆ ಗಳನ್ನು ಹೊಂದಿ ಬೇರೆ ಬೇರೆ ರೂಪಗಳನ್ನು ಪಡೆದಿರುತ್ತದೆ. ಈ ರೂಪಗಳು ಬಿಂಬಿಸುವ ಅರ್ಥವೇ ಅಂತಃಸ್ವರೂಪ. ಇವುಗಳನ್ನು ವಿವರಿಸುವ ಕಾರ್ಯ ಈ ಅಧ್ಯಯನದಲ್ಲಿ ನಡೆಯುತ್ತದೆ[೨]</ref>. ಇದನ್ನು ಈ ಕೆಳಗಿನಂತೆ ಸ್ಪಷ್ಟವಾಗಿ ತೋರಿಸಬಹುದು:
- ಧ್ವನಿ - ಧ್ವನಿ ವಿಜ್ಞಾನ
- ಧ್ವನಿಮಾ (ಅಕ್ಷರ) - ಧ್ವನಿಮಾ ವಿಜ್ಞಾನ
- ಆಕೃತಿ (ಪದ) - ಆಕೃತಿಮಾ ವಿಜ್ಞಾನ
- ಪದಪುಂಜ (ವಾಕ್ಯ) - ವಾಕ್ಯ ವಿಜ್ಞಾನ
- ಆಕೃತಿಮಾದ ಅರ್ಥ - ಅರ್ಥ ವಿಜ್ಞಾನ(ಪದದ ಅರ್ಥ, ವಾಕ್ಯಾರ್ಥ)
ಉಚ್ಚರಿತ ಧ್ವನಿಯನ್ನು ಕುರಿತಾದ ಅಧ್ಯಯನ. ಧ್ವನಿಗಳ ಹುಟ್ಟು, ಸಾಗುವಿಕೆ, ಗ್ರಹಿಸುವ ರೀತಿ ಹಾಗೂ ಉತ್ಪತ್ತಿಯಾದ ಧ್ವನಿಯ ಲಕ್ಷಣಗಳನ್ನು ಮೂರು ಶಾಖೆಗಳಲ್ಲಿ ಅಧ್ಯಯನ ಮಾಡಲಾಗುತ್ತದೆ.
- ಉಚ್ಚಾರಣಾತ್ಮಕ ಧ್ವನಿವಿಜ್ಞಾನ: ಧನ್ಯಂಗಗಳು ಮತ್ತು ಅವುಗಳ ಕಾರ್ಯ, ಧ್ವನಿಗಳ ವಿವರಣೆ ಮತ್ತು ವರ್ಗೀಕರಣ, ಸಂಯುಕ್ತತೆ ಮೊದಲಾದ ವಿಚಾರಗಳನ್ನು ಈ ಅಧ್ಯಯನದಲ್ಲಿ ತಿಳಿಯಬಹುದು.
- ತರಂಗಾತ್ಮಕ ಧ್ವನಿವಿಜ್ಞಾನ: ಧ್ವನಿಗಳ ಭೌತಿಕ ಲಕ್ಷಣಗಳನ್ನು ಗುರುತಿಸುವ ಕಾರ್ಯ ಈ ಶಾಖೆಯಲ್ಲಿ ನಡೆಯುತ್ತದೆ.
- ಶ್ರವ್ಯಾತ್ಮಕ ಧ್ವನಿವಿಜ್ಞಾನ: ಶಬ್ದಗಳನ್ನು ಕಿವಿಯ ಮೂಲಕ ಗ್ರಹಿಸಿ ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗಳನ್ನು ಅರಿಯಲು ಇದು ಸಹಾಯಕ.
ಧ್ವನಿಮಾ ವಿಜ್ಞಾನ
[ಬದಲಾಯಿಸಿ]ಅರ್ಥಭೇದಕ ಶಕ್ತಿಯುಳ್ಳ ಧ್ವನಿ ಪ್ರಸಾರಗಳ ಸಾಧ್ಯತೆ ಹಾಗೂ ಭಿನ್ನತೆಗೆ ಕಾರಣವಾದ ಧ್ವನಿಗಳನ್ನು, ಅವುಗಳ ಪರಿಸರವನ್ನು ಕುರಿತ ಅಧ್ಯಯನ.
ಆಕೃತಿಮಾ ವಿಜ್ಞಾನ
[ಬದಲಾಯಿಸಿ]ಧ್ವನಿ ಹಾಗೂ ಧ್ವನಿಮಾಗಳ ಅರ್ಥವತ್ತಾದ ರಚನೆ ಮತ್ತು ಅವುಗಳಿಂದಾಗುವ ಪದ ರಚನೆ ಕುರಿತ ಅಧ್ಯಯನ. ವಿಭಜನೆ ಮತ್ತು ಸಂಯೋಜನೆಗಳು ಆಕೃತಿಮಾ ಸ್ಥಾನವನ್ನು ಗುರುತಿಸುವ ಎರಡು ಪರಸ್ಪರ ಪೂರಕ ತಂತ್ರಗಳು. ಒಂದು ವಾಕ್ಯದಲ್ಲಿ ಅರ್ಥವತ್ತಾದ ಘಟಕಗಳನ್ನು ಗುರುತಿಸುತ್ತ ರಚನೆಗಳನ್ನು ಒಡೆಯುತ್ತ ಹೋಗುವ ರೀತಿಯೇ ವಿಭಜನೆ. ಇಂಥ ಘಟಕಗಳಲ್ಲಿ ಅರ್ಥಸಂಬಂಧ ಹೊಂದಿದವುಗ ಳನ್ನು ಒಂದೆಡೆ ತಂದು ಅವುಗಳ ಆಕೃತಿಮಾ ಸ್ಥಾನ ಗುರುತಿಸುವುದೇ ಸಂಯೋಜನೆ. ಹೀಗೆ ಅರ್ಥಸಂಬಂಧ ಹೊಂದಿದ ರೂಪಗಳನ್ನು ಒಂದೇ ಆಕೃತಿಮಾದ ಉಪ ಅಂಗಗಳೋ ಬೇರೆ ಆಕೃತಿಮಾಗಳೋ ಎಂಬುದನ್ನು ಆಕೃತಿಮಾ ವಿಜ್ಞಾನ ತಿಳಿಸುತ್ತದೆ.
ವಾಕ್ಯ ವಿಜ್ಞಾನ
[ಬದಲಾಯಿಸಿ]ವಾಕ್ಯ ಸ್ವರೂಪದ ಅಧ್ಯಯನ. ಇಲ್ಲಿ ವಾಕ್ಯಗಳಲ್ಲಿ ಬರುವ ನಿಕಟತಮ ಘಟಕಗಳನ್ನು ಗುರುತಿಸುವುದು, ಅವುಗಳ ಮೂಲಕ ವಾಕ್ಯದ ರಚನೆಯನ್ನು ತಿಳಿಯುವುದು, ವಾಕ್ಯ ಸಂಯೋಜಕಗಳ ಮತ್ತು ಪದಪುಂಜ ರಚನಾ ನಿಯಮಗಳ ಮೂಲಕ ಅವುಗಳ ವಿವಿಧ ರಚನಾ ವಿಧಾನಗಳನ್ನು ಅರಿಯುವುದು. ರೂಪಾಂತರ ನಿಯಮಗಳ ರೀತ್ಯಾ ವಿವಿಧ ವಾಕ್ಯಗಳ ಉತ್ಪಾದನಾ ಸಾಧ್ಯತೆಗಳನ್ನು ತಿಳಿಯುವುದು ಮೊದಲಾದ ವಿಚಾರಗಳು ಇಲ್ಲಿ ಮುಖ್ಯವಾಗುತ್ತವೆ.
ಅರ್ಥ ವಿಜ್ಞಾನ
[ಬದಲಾಯಿಸಿ]ಒಂದು ಶಬ್ದದ ಅರ್ಥವನ್ನು, ಉತ್ಪಾದನಾ ವ್ಯಾಕರಣ ನೀಡಿದ ಕೊಡುಗೆಯಾದ ವಿಭಾಗೀಯ ವಿಶ್ಲೇಷಣೆಯ ಸಹಾಯದಿಂದ ತಿಳಿಯುವುದು. ಇದರಿಂದ ಒಂದು ಭಾಷಾರೂಪದ ಅರ್ಥವನ್ನು ವ್ಯಾಖ್ಯಾನಿಸಲು ಮತ್ತು ಅದರ ವಿಶ್ಲೇಷಣೆಯನ್ನು ವೈಜ್ಞಾನಿಕವಾಗಿ ನಿರೂಪಿಸಲು ಸಾಧ್ಯ. ಐತಿಹಾಸಿಕ ಅರ್ಥವಿಜ್ಞಾನದಲ್ಲಿ ಅರ್ಥಪರಿವ ರ್ತನೆಯನ್ನು ಗುರುತಿಸುವ ಕಾರ್ಯನಡೆಯುತ್ತದೆ. ಸಂರಚನಾತ್ಮಕ ಅರ್ಥವಿಜ್ಞಾನ ವಿಭಾಗದಲ್ಲಿ ಸಮಾನಾರ್ಥ, ವಿರುದ್ಧಾರ್ಥ, ಭಿನ್ನಾರ್ಥ, ಅನೇಕಾರ್ಥ, ಸಮೂಹಾರ್ಥ ಮೊದಲಾದ ವಿಚಾರಗಳನ್ನು ತಿಳಿಯಬಹುದು.
ಸಂಕೀರ್ಣ ವ್ಯವಸ್ಥೆಯಿಂದ ಕೂಡಿದ ಭಾಷೆಯ ರಚನೆಯನ್ನು ವಿವರಿಸುವುದು ಕಷ್ಟದ ಕೆಲಸ. ಆದರೆ ಭಾಷೆಯನ್ನು ಒಂದೇ ಕಾಲಘಟ್ಟಕ್ಕೆ ಸೀಮಿತವಾದಂತೆ ಒಂದೇ ಪ್ರದೇಶಕ್ಕೆ ಸಂಬಂಧಿಸಿದಂತೆ ವರ್ಣಿಸುವುದು ವರ್ಣನಾತ್ಮಕ ಭಾಷಾವಿಜ್ಞಾನದಿಂದ ಸಾಧ್ಯವಾಗಿದೆ.
ಉಲ್ಲೇಖ
[ಬದಲಾಯಿಸಿ]- ↑ https://www.researchgate.net/publication/255565813_Descriptive_linguistics_and_theoretical_linguistics_some_new_thoughts_on_a_still_uneasy_relationship
- ↑ cite book|last=Kordić |first=Snježana |authorlink=Snježana Kordić |year=2010 |language=Serbo-Croatian |title=Jezik i nacionalizam |trans-title=Language and Nationalism |url=http://bib.irb.hr/datoteka/475567.Jezik_i_nacionalizam.pdf%7Cseries=Rotulus Universitas |location=Zagreb |publisher=Durieux |page=60 |isbn=978-953-188-311-5 |lccn=2011520778 |oclc=729837512 |ol=15270636W |id=COBISS|13436977 |archivedate= 8 July 2012 |archiveurl=https://www.webcitation.org/690BiBe4T?url= |accessdate=11 August 2015 |df=