ವರಮಹಾಲಕ್ಷ್ಮಿ ವ್ರತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶ್ರಾವಣಮಾಸದ ಪ್ರಸಿದ್ಧಹಿಂದೂಪರ್ವ(ಹಬ್ಬ)ಗಳಲ್ಲಿವರಮಹಾಲಕ್ಷ್ಮೀವ್ರತವೂ ಒಂದು.[೧]

ಲಕ್ಷ್ಮೀದೇವಿ[ಬದಲಾಯಿಸಿ]

ವರಲಕ್ಷ್ಮಿ ವ್ರತ ಪೂಜೆ ಒಂದು ವಿಶಿಷ್ಟ ನೋಟ

ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ. ಒಮ್ಮೆ ದುರ್ವಾಸಮಹರ್ಷಿಗಳ ಶಾಪದಿಂದ ಇಂದ್ರನು ರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು. ಆಗ ಪರಮದು:ಖಾಕ್ರಾಂತರಾದ ದೇವತೆಗಳೆಲ್ಲರೂ ಚತುರ್ಮುಖಬ್ರಹ್ಮನನ್ನು ಮುಂದಿಟ್ಟುಕೊಂಡು(ಪುರಸ್ಕರಿಸಿ), ವೈಕುಂಠದಲ್ಲಿ ಪರಮಾತ್ಮನನ್ನು ಶರಣುಹೊಂದಿದರು. ಪರಮದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು, ಮಹೇಂದ್ರನ ಸಂಪತ್ಸ್ವರೂಪಿಣಿಯಾದ ಮಹಾಲಕ್ಷ್ಮಿಯು ಅಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುವಿನ ಪಾಣಿಗ್ರಹಣ ಮಾಡಿದಳು(ವಿವಾಹವಾದಳು).

ನಿತ್ಯ ಶುದ್ಧ-ಬುದ್ಧ-ಮುಕ್ತಸ್ವರೂಪಳೂ,ನಿತ್ಯಸಿದ್ಧಳೂ ಆದ ಈ ಮಂಗಲದೇವತೆಯ ಮಹಿಮೆಯನ್ನು ವರ್ಣಿಸುವ ಶಾಸ್ತ್ರಗಳಲ್ಲೇ ಆಕೆಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಯಜ್ಞಕುಂಡದಲ್ಲಿ ಉದ್ಭವವಾದವಳು, ಕಮಲದಲ್ಲಿ ಆವಿರ್ಭವಿಸಿದವಳು-ಇತ್ಯಾದಿ ಅಭಿಪ್ರಾಯಗಳನ್ನು ಕಾಣುತ್ತೇವೆ.

ವ್ರತ[ಬದಲಾಯಿಸಿ]

"ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾಂತ್ಯಭಾಗವೇ| ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿಪ್ರದಾಯಕಮ್(ಸರ್ವಮಾಂಗಲ್ಯಸಿದ್ಧಯೇ)||"

ನಿಜಶ್ರಾವಣ ಶುಕ್ಲಪೂರ್ಣಿಮೆ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ, ಅಥವಾ ಶುಕ್ಲಪೂರ್ಣಿಮೆಯ ಅತಿಹತ್ತಿರದ ಶುಕ್ರವಾರದಂದು, ವರಲಕ್ಷ್ಮೀ ಆರಾಧನೆ ಮಾಡಬೇಕು ಎಂಬ ಶಾಸ್ತ್ರವಿಧಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು ನವರಾತ್ರಿಯ ಶುಕ್ರವಾರದಂದು ಮಾಡಬಹುದು.


ವ್ರತ ಆಚರಿಸುವ ವಿಧಾನ[ಬದಲಾಯಿಸಿ]

  • ಶುಕ್ರವಾರದ ದಿನ, ಸಾಯಂಕಾಲದವರೆವಿಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸುವರು. ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ,ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸುವರು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ.
  • ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಲಾಗುತ್ತದೆ. ಈ ಪೂಜೆಯಲ್ಲಿ ವಿಶೇಷವಾದ ದಾರಗಳಿಗೆ ಪೂಜೆಯನ್ನು ಸಲ್ಲಿಸುವರು. ಈ ದಾರವನ್ನು ದೋರವೆಂದು ಕರೆವರು. ಹೊಸದಾದ ೧೨ ದಾರಗಳಿಗೆ ೧೨ ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವರು.
  • ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವರು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶನಾಮಾವಳಿಯೆಂದು ಪೂಜಿಸುವರು. ಆ ನಾಮಾವಳಿಗಳು ಹೀಗಿವೆ -ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ. ಈ ದಾರಕ್ಕಾಗಿ ವಿಶೇಷವಾದ ನೈವೇದ್ಯವಾದ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀಸೂಕ್ತವನ್ನು ಪಠಿಸುವುದೂ ಒಳ್ಳೆಯದು.
  • ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ,ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಕೊಡುವರು. ಈ ಸಮಯದಲ್ಲಿ ಹೇಳುವ ಶ್ಲೋಕ ಹೀಗಿದೆ.[೨]

"ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ:
ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ"


ಲಕ್ಷ್ಮಿಯ ಕುರಿತಾದ ಸ್ತೋತ್ರಗಳು[ಬದಲಾಯಿಸಿ]

"ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ| ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಾಮ್|| ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾಂ| ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್||"


ಕ್ಷೀರಸಮುದ್ರರಾಜನ ಮಗಳಾದ, ಶ್ರೀರಂಗಧಾಮದ ಒಡೆಯಳಾದ, ಸಮಸ್ತ ದೇವತಾಸ್ತ್ರೀಯರಿಂದ ಸೇವಿಸಲ್ಪಡುವ, ಜಗತ್ತಿಗೇ ದಾರಿದೀಪವಾದ, ಬ್ರಹ್ಮ-ಇಂದ್ರ-ಶಂಕರಾದಿಗಳಿಗೆ ತನ್ನ ಕೃಪಾಕಟಾಕ್ಷದಿಂದಲೇ ಸಕಲವೈಭವಗಳನ್ನಿತ್ತ, ಮೂರುಲೋಕಗಳಿಗೂ ಮಾತೆಯಾದ, ಕಮಲಜೆ ಹಾಗೂ ಪದ್ಮಾಸನೆಯಾದ, ಶ್ರೀಹರಿಪ್ರಿಯೆಯಾದ ಹೇ ಮಹಾಲಕ್ಷ್ಮಿಯೇ! ನಿನ್ನನ್ನು ವಂದಿಸುತ್ತೇನೆ.

"ನಮಸ್ತೇsಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ| ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ! ನಮೋsಸ್ತು ತೇ||"

ಹೇ ಮಹಾಮಾಯೇ! ಶ್ರೀಪೀಠದಲ್ಲಿ ದೇವತೆಗಳಿಂದಲೂ ಪೂಜಿತಳಾದವಳೇ! ಶಂಖ-ಚಕ್ರ-ಗದೆಗಳನ್ನು ಕೈಗಳಲ್ಲಿ ಧರಿಸಿದವಳೇ! ಹೇ ಮಹಾಲಕ್ಷ್ಮಿಯೇ! ನಿನಗೆ ನಮಸ್ಕಾರವಿರಲಿ.


" ಯಾ ರಕ್ತಾಂಬುಜವಾಸಿನೀ ವಿಲಸಿನೀ ಚಂಡಾಶು ತೇಜಸ್ವಿನೀ|
      ಆರಕ್ತಾ ರುಧಿರಾಂಬರಾ ಹರಿಸಖೀ ಯಾ ಶ್ರೀ ಮನೋಹ್ಲಾದಿನೀ||
  ಯಾ ರತ್ನಾಕರಮಂಥನಾತ್ಪ್ರಘಟಿತಾ ವಿಷ್ಣೋಶ್ಚ ಯಾ ಗೇಹಿನೀ|
               ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾಲಯಾ|| "

ಭಾವಾರ್ಥ- ಯಾವ ವರಲಕ್ಷ್ಮಿಯು ಕೆಂದಾವರೆಯಲ್ಲಿ ಕುಳಿತು ಕೋಟಿಸೂರ್ಯಸಮಪ್ರಭಳೋ, ಕೆಂಪುವಸ್ತ್ರವನ್ನುಟ್ಟು ಶ್ರೀಹರಿಯ ಹೃದಯವಲ್ಲಭೆಯೋ, ಯಾವಳು ಸಮುದ್ರಮಥನದಲ್ಲಿ ಉದ್ಭವಿಸಿ ಭಗವಾನ್ ಮಹಾವಿಷ್ಣುವಿನ ಪತ್ನಿಯಾದಳೋ, ಅಂತಹ ಮನಸ್ಸಿಗೆ ಮುದನೀಡುವ, ಪದ್ಮವನ್ನೇ ಆಲಯವನ್ನಾಗಿಸಿಕೊಂಡ, ಭಗವತೀ ಲಕ್ಷ್ಮಿಯು ನನ್ನನ್ನು ರಕ್ಷಿಸಲಿ.

ಉಲ್ಲೇಖಗಳು[ಬದಲಾಯಿಸಿ]