ವಿಷಯಕ್ಕೆ ಹೋಗು

ವರದಾಮೂಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವರದಮೂಲ ಇಂದ ಪುನರ್ನಿರ್ದೇಶಿತ)
ವರದಾನದಿಯ ಮೂಲಸ್ಥಾನ

ವರದಾಮೂಲ ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ವರದಾ ನದಿಯ ಉಗಮ ಸ್ಥಳ. ಇಲ್ಲಿ ವರದಾಂಬಿಕಾ ದೇವಿಯ ದೇವಸ್ಥಾನವೂ ಇದೆ.ವರದಾ ನದಿಯ ಮೂಲವು ಸಾಗರ ನಗರದಿಂದ 6 ಕಿ.ಮೀ ದೂರ ಇದ್ದು ಮಲೆನಾಡಿನ ಒಂದು ಸುಂದರ ಸ್ಥಳವಾಗಿದೆ. ಈ ಕ್ಷೇತ್ರದಲ್ಲಿ ಶ್ರೀ ವರದಾಂಬಾ ದೇವಸ್ಥಾನ ಇದೆ. ಈ ಕ್ಷೇತ್ರವು ಸಾಗರದಿಂದ ಶೆಡ್ತೀಕೆರೆ ಮಾರ್ಗದಲ್ಲಿ ಇದೆ. ಇದು ಕರ್ನಾಟಕದ ಒಂದು ಪ್ರಮುಖ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ.

ವರದಾಮೂಲದಲ್ಲಿ ನೋಡಬಹುದಾದಂತಹ ದೇಗುಲಗಳು/ವಿಗ್ರಹಗಳು[ಬದಲಾಯಿಸಿ]

ಲಕ್ಷ್ಮೀ ತೀರ್ಥ ಮತ್ತು ಸರ್ವತೀರ್ಥ[ಬದಲಾಯಿಸಿ]

ವರದಾಮೂಲ ಎನ್ನುವುದು ಹೆಸರೇ ಹೇಳುವಂತೆ ವರದಾನದಿಯ ಉಗಮಸ್ಥಾನ. ಇಲ್ಲಿ ವರದಾನದಿಯು ಲಕ್ಷ್ಮೀದೇವಿಯ ಪಾದದಡಿಯಿಂದ ಉದ್ಭವಿಸಿ ಲಕ್ಷ್ಮೀತೀರ್ಥವೆಂದು ಕರೆಯಲ್ಪಡುವ ಮೊದಲ ಕಲ್ಯಾಣಿಯನ್ನು ಸೇರುತ್ತಾಳೆಂಬ ಪ್ರತೀತಿಯಿದೆ. ವರ್ಷವಿಡೀ ತುಂಬಿರೋ ಈ ಕಲ್ಯಾಣಿಯಿಂದ ಸರ್ವತೀರ್ಥ ಎಂದು ಕರೆಯಲ್ಪಡುವ ಹೊರಗಿನ ದೊಡ್ಡ ಕಲ್ಯಾಣಿಗೆ ವರದೆ ಹರಿಯುತ್ತಾಳೆ. ಹೊರಗಿನ ಕೊಳದಲ್ಲಿ ಪ್ರತೀ ಎರಡು ಮೂರು ಅಡಿಗಳಿಗೊಂದರಂತೆ ಒಟ್ಟು ೨೪ ತೀರ್ಥಗಳು ಉಗಮಿಸುತ್ತವೆಂದೂ ಅದಕ್ಕೇ ಅದಕ್ಕೆ ಸರ್ವತೀರ್ಥವೆಂದು ಕರೆಯುತ್ತಾರೆಂದು ಸ್ಥಳೀಯರು ತಿಳಿಸುತ್ತಾರೆ.

ಕಾಲಭೈರವ, ತ್ರಿಲೋಚನ, ಪ್ರಸನ್ನಗಣಪತಿ ದೇಗುಲ[ಬದಲಾಯಿಸಿ]

ವರದಾ ಮೂಲಕ್ಕೆ ಬಂದವರಿಗೆ ಮೊದಲು ಎದುರಾಗುವುದು ಸರ್ವತೀರ್ಥ. ಅದಕ್ಕೆ ಇಳಿಯುವ ಜಾಗದಲ್ಲಿ ಬಲಬದಿಯಲ್ಲಿ ಕಾಲಭೈರವನ ವಿಗ್ರಹವಿದೆ. ಹೊಯ್ಸಳರ ದೇಗುಲಗಳಲ್ಲಿ ಅತೀ ಸಾಮಾನ್ಯವೆನಿಸುವ ಸ್ಮಶಾನಭೈರವಿಯ ಶಿಲ್ಪವನ್ನು ಈ ಶಿಲ್ಪ ನೆನಪಿಸಿದರೆ ಅಚ್ಚರಿಯಿಲ್ಲ. ದೇವಿಯ ಕೈಯಲ್ಲಿರೋ ರುಂಡಕ್ಕೆ ಬಾಯಿ ಹಾಕುತ್ತಿರುವ ನಾಯಿಯವರೆಗಿನ ಚಿತ್ರಣ ಇಲ್ಲೂ ಇದ್ದರೂ ಸ್ಮಶಾನ ಭೈರವಿಯ ಶಿಲ್ಪದಲ್ಲಿರುವ ಪ್ರೇತಗಣಗಳು, ಅದರಲ್ಲೊಂದರ ಕೈಯಲ್ಲಿರೋ ಮಗು ಮುಂತಾದ ಕೆತ್ತನೆಗಳು ಇಲ್ಲಿಲ್ಲ. ಅದರಿಂದ ಹಾಗೇ ಮುಂದೆ ಬಂದರೆ ತ್ರಿಲೋಚನ ಎಂದು ಕರೆಯಲ್ಪಡುವ ಶಿವಲಿಂಗ ಮತ್ತು ಪ್ರಸನ್ನಗಣಪತಿಯ ದೇಗುಲಗಳಿವೆ.

ಸದಾಶಿವದೇಗುಲ[ಬದಲಾಯಿಸಿ]

ಸರ್ವತೀರ್ಥದಿಂದ ಮೇಲಕ್ಕೆ ಹತ್ತಲಿರೋ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದರೆ ಎದುರಾಗುವುದು ಲಕ್ಷ್ಮೀ ತೀರ್ಥ ಮತ್ತು ಅದಕ್ಕಿಳಿಯಲಿರುವ ಮೆಟ್ಟಿಲುಗಳು. ಅದರೆದುರಿಗಿರುವುದೇ ಸದಾಶಿವದೇಗುಲ. ಕೆಳದಿಯರಸ ಶಿವಪ್ಪನಾಯಕನ ಚಿಕ್ಕಪ್ಪ ಸದಾಶಿವನಾಯಕ ಈ ದೇಗುಲಕ್ಕೆ ಉಂಬುಳಿ ಕೊಟ್ಟಿದ್ದ ಕಾರಣ ಈ ದೇಗುಲಕ್ಕೆ ಸದಾಶಿವದೇಗುಲವೆಂದು ಹೆಸರಾಯಿತೆಂದು ಕೆಲವರ ಅಭಿಪ್ರಾಯ. ಈ ದೇಗುಲದ ದ್ವಾರದಲ್ಲಿರೋ ಗಜಲಕ್ಷ್ಮಿ ಸಾಮಾನ್ಯವಾಗಿ ವಿಷ್ಣುವಿನ ದೇಗುಲಗಳಲ್ಲಿ ಕಂಡುಬರುವ ರಚನೆ. ಹಾಗಾಗಿ ಮೂಲದಲ್ಲಿ ಇದು ವಿಷ್ಣು ದೇಗುಲವಾಗಿದ್ದು ತದನಂತರದಲ್ಲಿ ಶೈವ ದೇಗುಲವಾಗಿ ಬದಲಾಗಿರಬಹುದೆಂಬ ಊಹಾಪೋಹಗಳಿದ್ದರೂ ಅದಕ್ಕೆ ತಕ್ಕ ಆಧಾರಗಳಿಲ್ಲ. ಇದರೆದುರು ಇರುವ ಧ್ವಜಸ್ಥಂಭದೆದುರು ಹಿಂದಿನ ಕಾಲದಲ್ಲಿ ಹೋಮಕ್ಕೆ ತುಪ್ಪ ಹಾಕಲು ಬಳಸುತ್ತಿದ್ದ ಸೃಕ್ ಸೃವ ಎಂಬ ಭಾರೀ ಗಾತ್ರದ ಹುಟ್ಟನ್ನು ನೋಡಬಹುದು. ಕಲ್ಲುವೀಣೆ ಎಂದೂ ಕೆಲವರು ಕರೆಯೋ ಇದು ತನ್ನ ಗಾತ್ರ ಮತ್ತು ರಚನೆಯಿಂದ ಇಲ್ಲಿಗೆ ಬರುವವರ ಗಮನ ಸೆಳೆಯುತ್ತೆ. ಈ ದೇಗುಲದ ಬಾಗಿಲಲ್ಲಿ "ಜೋಯಿಸರ ತಿಂಮಣನ ನಮಸ್ಕಾರ" ಎಂಬ ಕೆತ್ತನೆಯಿರುವುದನ್ನು ಕಾಣಬಹುದು. ಇಕ್ಕೇರಿಯಲ್ಲಿರೋ ಹನುಮದೇವಸ್ಥಾನದಲ್ಲೂ ಇದೇ ಬರಹವಿರುವ ಕಾರಣದಿಂದ ಎರಡೂ ದೇವಸ್ಥಾನಗಳು ಸರಿಸುಮಾರು ಒಂದೇ ಸಮಯದಲ್ಲಿ ನಿರ್ಮಾಣವನ್ನೋ ಜೀರ್ಣೋದ್ದಾರವನ್ನೋ ಕಂಡಿರಬಹುದೆಂದು ಊಹಿಸಬಹುದು.

ಸಪ್ತ ಮಾತೃಕೆಯರು ಮತ್ತು ಕೂಗಲೇಶ್ವರ[ಬದಲಾಯಿಸಿ]

ಸದಾಶಿವದೇಗುಲದ ಪಕ್ಕದಲ್ಲಿರೋ ಒಂದು ಸಣ್ಣ ಗೇಟನ್ನು ದಾಟಿದರೆ ಸಪ್ತಮಾತೃಕೆ [೧] ಯರ ಕಲ್ಲೊಂದು ಕಾಣುತ್ತದೆ. ಇಲ್ಲಿ ಸಪ್ತ ಮಾತೃಕೆಯರ ಜೊತೆಗೆ ಎಡಬಲಗಳಲ್ಲಿ ಇನ್ನೆರೆಡು ಮೂರ್ತಿಗಳಿರೋದು ವಿಶೇಷ.
"ಬ್ರಾಹ್ಮೀ ಮಾಹೇಶ್ವರಿ ಚೈವ ಕೌಮಾರಿ ವೈಷ್ಣವೀ ತಥಾ
ವಾರಾಹೀ ನಾರಸಿಂಹೀ ಚ ಭೈಮಾಭೈರವಿ ನಂದಿನಿ"
ಎಂಬ ಶ್ಲೋಕ ಅಥವಾ
ಬ್ರಾಹ್ಮೀ ಮಾಹೇಶ್ವರಿ ಚ ಇಂದ್ರಿ ಕೌಮಾರಿ ವೈಷ್ಣವೀ ತಥಾ
ಚಾಮುಂಡ ಚೈವ ವಾರಾಹಿ ಲಕ್ಷ್ಮೀಶ್ಚ ಪುರುಶಾಕೃತಿಃ
ಎಂಬ ದುರ್ಗಾ ಅಷ್ಟೋತ್ತರ ಸ್ತೋತ್ರದ ಎಂಟನೇ ಚರಣ
ಅಥವಾ
ಬ್ರಾಹ್ಮೀ ಮಾಹೇಶ್ವರಿ ಚೈವ ಕೌಮಾರೀ ವೈಷ್ಣವೀ ಯದಾ
ವಾರಾಹಿ ಚ ತದೇಂದ್ರಾಣಿ ಚಾಮುಂಡ ಸಪ್ತ ಮಾತಾರಃ
ಎಂಬ ಮತ್ತೊಂದು ನಿತ್ಯ ಶ್ಲೋಕದ ಮೂಲಕ ಇಲ್ಲಿರುವ ಸಪ್ತಮಾತೃಕೆ [೨] ಯರನ್ನು ಅವರ ವಾಹನಗಳದೊಂದಿಗೆ ಗುರುತಿಸಬಹುದು. ಅವರನ್ನು ಅವರ ವಾಹನಗಳೊಂದಿಗೆ ಗುರುತಿಸುವುದಾದರೆ
ಬ್ರಾಹ್ಮೀ(ವಾಹನ:ಕೋಣ), ಮಾಹೇಶ್ವರಿ(ವಾಹನ=ಮೊಸಳೆ/ಮಕರ), ಕೌಮಾರಿ(ಹಂಸ), ವೈಷ್ಣವಿ(ಮಾನವ), ವಾರಾಹಿ ನಾರಸಿಂಹಿ(ವಾಹನ=ವೃಷಭ/ಎತ್ತು), ಇಂದ್ರಾಣಿ(ವಾಹನ=ಆನೆ), ಚಾಮುಂಡಿ(ವಾಹನ=ವರಾಹ/ಹಂದಿ).[೩] ಇವರ ಬಲಭಾಗದಲ್ಲಿ ಗಣಪತಿಯಿದ್ದರೆ ಎಡಭಾಗದಲ್ಲಿ ರುದ್ರವೀಣೆಯನ್ನು ಹಿಡಿದ ನಂದಿವಾಹನನಾದ ಶಿವನಿದ್ದಾನೆ. ಇವನಿಗೆ ಕೂಗಲೇಶ್ವರ ಎಂಬ ಹೆಸರಂತೆ. ಇದಕ್ಕೆ ಕೂಗಲೇಶ್ವರ ಎಂದು ಹೆಸರು ಬಂದುದರ ಹಿಂದೂ ಒಂದು ಕಥೆಯಿದೆ. ಹಿಂದೆಲ್ಲಾ ಈ ಭಾಗದಲ್ಲಿ ಮಕ್ಕಳು ತುಂಬಾ ಅಳುತ್ತಿದ್ದರೆ , ನಾಲ್ಕೈದು ವರ್ಷಗಳಾದರೂ ಮಾತು ಬರದಿದ್ದರೆ ಅದರ ಶಮನಕ್ಕೆಂದು ಈ ದೇವನಿಗೆ ಹರಕೆ ಹೊರುತ್ತಿದ್ದರಂತೆ. ಆ ಆಚರಣೆ ಈಗ ಕಡಿಮೆಯಾಗಿದೆಯಾದರೂ ದೇವನ ಹೆಸರಂತೂ ಹಾಗೇ ಉಳಿದಿದೆ

ಇತರ ದೇಗುಲಗಳು[ಬದಲಾಯಿಸಿ]

ಅದರ ಪಕ್ಕದಲ್ಲಿರುವ ಗುಡಿಗಳೆಲ್ಲಾ ಕಾಲಾನಂತರದಲ್ಲಿ ಈ ಕ್ಷೇತ್ರಕ್ಕೆ ಬಂದು ಹರಕೆ ಹೊತ್ತವರು ಕಟ್ಟಿಸಿಕೊಟ್ಟ ದೇಗುಲಗಳಂತೆ. ಉದಾಹರಣೆಗೆ ಸದಾಶಿವ ದೇಗುಲದ ಪಕ್ಕದಲ್ಲಿ ದ್ವಾರದಲ್ಲಿ ಕಡಲೇಕಾಳು ಗಣೇಶ ಮತ್ತು ಅನ್ನಪೂರ್ಣೇಶ್ವರಿ ವಿಗ್ರಹಗಳಿರುವ ಶಂಭುಲಿಂಗೇಶ್ವರ ದೇಗುಲವಿದೆ. ಅದರ ಪಕ್ಕದಲ್ಲಿ ಮಣಿಕರ್ಣಿಕೇಶ್ವರ ಮತ್ತು ರಾಮೇಶ್ವರ ದೇಗುಲಗಳಿವೆ. ಇವುಗಳ ಬಗ್ಗೆಯೂ ಒಂದೊಂದು ಕತೆಗಳಿವೆ. ಕೆಲ ಸ್ಥಳಗಳಲ್ಲಿರೋ ಕಲ್ಲನ್ನು ಎತ್ತಿದರೆ ತಮ್ಮ ಕೆಲಸವಾಗುತ್ತದೆ ಎಂಬ ನಂಬಿಕೆಯಿರುವಂತೆಯೇ ಮಣಿಕರ್ಣಿಕೇಶ್ವರನ ಎದುರಿಗಿರೋ ನಂದಿಯನ್ನು ಎತ್ತಿದರೆ ಕೆಲಸವಾಗುತ್ತದೆ ಎಂಬ ನಂಬಿಕೆಯಿತ್ತಂತೆ ! ಅದೆಲ್ಲಾ ಮೂಡನಂಬಿಕೆ ಎಂದು ನಂದಿಯನ್ನು ಅಷ್ಟಬಂಧ ಮಾಡಿ ಕೂರಿಸಲಾಗಿದೆಯೀಗ. ವರದಾಮೂಲವೆಂಬುದು ವಿಂಧ್ಯಪರ್ವತದ ಮೂಲ. ಹಾಗಾಗಿ ರಾಮ ಇಲ್ಲಿಂದಲೇ ವನವಾಸವನ್ನು ಪ್ರಾರಂಭಿಸಿದ ಎನ್ನೋ ಪ್ರತೀತಿ ರಾಮೇಶ್ವರ ದೇಗುಲದ ಬಗೆಗಿದೆ. ಆ ದೇಗುಲದ ಎಡಬಲಗಳಲ್ಲಿ ಗಣೇಶ, ಸುಬ್ರಹ್ಮಣ್ಯರ ವಿಗ್ರಹಗಳಿವೆ.

ಸೂರ್ಯನಾರಾಯಣ[ಬದಲಾಯಿಸಿ]

ಇವನ್ನೆಲ್ಲಾ ದಾಟಿ ಒಳಗೆ ಸಾಗಿದರೆ ೭ ಕುದುರೆಗಳಿಂದ ಕೂಡಿದ ರಥವೇರಿದ ಸೂರ್ಯನಾರಾಯಣನ ವಿಗ್ರಹವಿದೆ. ರಥದ ಚಕ್ರಗಳು ಈ ಮುರಿದು ಹೋಗಿದ್ದು ಅದರ ಬಲಭಾಗದಲ್ಲಿ ವರದಾದೇವಿಯ ಗರ್ಭಗೃಹವಿದೆ. ಇದರ ಪುರಾಣವನ್ನು ಕೇಳುವುದಾದರೆ ತನ್ನಿಂದಲೇ ಸೃಷ್ಠಿಯಾದ ಶತರೂಪೆಯನ್ನು ಮೋಹಿಸುತ್ತಿದ್ದ ಬ್ರಹ್ಮನ ಐದನೇ ತಲೆಯನ್ನು ಶಿವ ಕಡಿದು ಕಪಾಲವನ್ನಾಗಿ ಬಳಸುತ್ತಾನೆ. ಆದರೆ ಇದರ ಪಾಪ ಶಿವನನ್ನ ಕಾಡತೊಡಗಿ ಆತ ಚತುಶೃಂಗಗಳ ಮಧ್ಯೆ ತಪಸ್ಸಿಗೆ ಕೂರುತ್ತಾನೆ. ಶಿವನ ಪಾಪ ಪರಿಹಾರಕ್ಕಾಗಿ ವಿಷ್ಣುವು ತನ್ನ ಶಂಖದಿಂದ ಗಂಗೆಯಲ್ಲಿ ಶಿವನಿಗೆ ಅಭಿಷೇಕ ಮಾಡುತ್ತಾನೆ. ಆ ನಂತರದಲ್ಲಿ ಉಳಿದ ನೀರೇ ವರದಾತೀರ್ಥವಾಯಿತೆಂದು ಪ್ರತೀತಿಯಿದೆ. ಮೇಲಿನ ಪ್ರತೀತಿಗಳಿಗನುಗುಣವಾಗಿ ವರದಾಮೂಲದ ಸುತ್ತಲೇ ಕವಲಗೋಡು, ಓತುಗೋಡು,ಕುಂಟುಗೋಡು,ತೆಂಕೋಡು ಎಂಬ ನಾಲ್ಕು ಊರುಗಳಿರುವುದು ವಿಶೇಷ.

ವರದಾಂಬಿಕೆ ದೇವಿಯ ಬಗ್ಗೆ[ಬದಲಾಯಿಸಿ]

ವರದಾಂಬಿಕಾದೇವಿ

ಗಾಯಿತ್ರಿ,ಸಾವಿತ್ರಿ, ಸರಸ್ವತಿ ದೇವಿಯರ ಸಂಗಮರೂಪವೆಂದು ನಂಬಲಾಗುವ ವರದೆಯು ಎಡಗೈಯಲ್ಲಿ ವರದಹಸ್ತೆ. ಎರಡೂ ಕಡೆ ವರ ಕೊಡೋದ್ರಿಂದ ವರದಾಂಬಿಕೆಯೆಂಬ ನಂಬಿಕೆಯಿದೆಯೆಂದೂ ಪ್ರತೀತಿಯೆದೆ. ಈ ಕ್ಷೇತ್ರಕ್ಕೆ ಮುಂಚೆ ತೀರ್ಥರಾಜಪುರ ಎಂಬ ಹೆಸರೂ ಇತ್ತಂತೆ. ಅದರ ಬಗೆಗಿನ ಉಲ್ಲೇಖಗಳ ನೋಡೋದಾದರೆ ಮಹಾರಾಜ ಸಗರನು ನೀರಿಗಾಗಿ ಯಜ್ಞವೊಂದನ್ನು ಕೈಗೊಳ್ಳಲು ತಾಯಿ ವರದೆ ಪ್ರತ್ಯಕ್ಷಳಾಗಿ ನೀನು ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಬರುತ್ತೇನೆಂದೂ ಆದರೆ ಹಿಂದಿರುಗಿ ನೋಡಬೇಡವೆಂದೂ ಹೇಳುತ್ತಾಳಂತೆ. ಆತ ಸಾಗರವೆಂಬ ಪ್ರದೇಶದಲ್ಲಿ ಹಿಂತಿರುಗಿ ನೋಡುತ್ತಾನಂತೆ. ಅಲ್ಲಿಗೆ ನದಿಯ ಹರಿಯುವಿಕೆ ನಿಂತು ಆಕೆ ಬೃಹದಾಕಾರವಾಗಿ ಶೇಖರಗೊಳ್ಳುತ್ತಾಳಂತೆ. ಅದೇ ಈಗಿನ ಸಾಗರವೆಂಬ ಊರೆಂದು ಪ್ರತೀತಿ ! ಈ ಕಥೆ ಭಗೀರಥನು ಭೂಮಿಗೆ ಗಂಗೆಯನ್ನು ತಂದ ಪ್ರಸಂಗವನ್ನು ಹೋಲುತ್ತದಾದರೂ ಸಾಗರವೆಂದು ಬರೋ ಉಲ್ಲೇಖ ನಿಜವಾದ ಸಮುದ್ರದ ಪರಿಕಲ್ಪನೆಯೂ ಆಗಿರಬಹುದು ! ಈ ನದಿ ಉತ್ತರಕ್ಕೆ ಹರಿಯುತ್ತದೆ. ಬಂಕಸಾಣ ಎಂಬ ಊರಿನಲ್ಲಿ ದಂಡಾವತಿಯನ್ನು ಸೇರುತ್ತದೆ.

ಅಗ್ನಿ ತೀರ್ಥ[ಬದಲಾಯಿಸಿ]

ಈ ದೇಗುಲದ ಪಕ್ಕದಲ್ಲೇ ಗೋಪಾಲ ಮೊದಲಾದ ದೇಗುಲಗಳಿವೆ. ಇಲ್ಲೊಂದು ಸಣ್ಣ ಕೊಳವಿದ್ದು ಅದಕ್ಕೆ ಅಗ್ನಿತೀರ್ಥವೆಂದು ಹೆಸರು. ಪಕ್ಕದಲ್ಲೇ ಇದ್ದರೂ ಲವಣಗಳಿಂದ ತುಂಬಿರೋ ಈ ನೀರಿನ ರುಚಿ ಸರ್ವತೀರ್ಥದ ನೀರ ರುಚಿಗಿಂತ ಭಿನ್ನವಾಗಿರುವುದು ವಿಶೇಷ.

ತಲುಪುವ ಬಗೆ[ಬದಲಾಯಿಸಿ]

ವರದಾಮೂಲಕ್ಕೆ ಸಾಗರದಿಂದ ೬ ಕಿ.ಮೀ. ಸಾಗರದಿಂದ ಇಕ್ಕೇರಿ/ಸಿಗಂದೂರು ಮಾರ್ಗದಲ್ಲಿ ೩ಕಿ.ಮೀ ಸಾಗಿದರೆ ಇಕ್ಕೇರಿ ಸರ್ಕಲ್ ಅಥವಾ ಅಘೋರೇಶ್ವರ ಸರ್ಕಲ್ ಅಂತ ಸಿಗುತ್ತದೆ. ಅದರಲ್ಲಿ ಎಡಕ್ಕೆ ಸಾಗಿದರೆ ೩.ಕಿ.ಮೀ ಕ್ರಮಿಸುವಷ್ಟರಲ್ಲಿ ವರದಾಮೂಲ ಸಿಗುತ್ತದೆ. ಬಲಕ್ಕೆ ಸಾಗಿದರೆ ಒಂದು ಕಿ.ಮೀನಲ್ಲಿ ಇಕ್ಕೇರಿ. ಹಾಗಾಗಿ ಮತ್ತೊಂದು ಪ್ರೇಕ್ಷಣೀಯ ಸ್ಥಳ ಇಕ್ಕೇರಿಯಿಂದ ವರದಾಮೂಲಕ್ಕೆ ೪ ಕಿ.ಮೀ ದೂರ.

ಸುತ್ತಲಿನ ಪ್ರವಾಸೀ ತಾಣಗಳು[ಬದಲಾಯಿಸಿ]

ವರದಾಮೂಲಕ್ಕೆ ಭೇಟಿ ಕೊಟ್ಟವರು ಸುತ್ತಲಿನ ಪ್ರವಾಸೀ ತಾಣಗಳಾದ ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ, ಇಕ್ಕೇರಿಯ ಹನುಮಂತ, ಕಾಳೀಗುಡಿ, ಹಳೆ ಇಕ್ಕೇರಿ ಕೋಟೆ, ವರದಹಳ್ಳಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು

ಇವುಗಳನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ವರದಾಮೂಲ&oldid=1119839" ಇಂದ ಪಡೆಯಲ್ಪಟ್ಟಿದೆ