ವಿಷಯಕ್ಕೆ ಹೋಗು

ಲಿಯಾನ್ ಗ್ಯಾಂಬೆಟಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಟಿಯೆನ್ ಕಾರ್ಜಾಟ್ ತೆಗೆದ ಗ್ಯಾಂಬೆಟಾನ ಭಾವಚಿತ್ರ

ಲಿಯಾನ್ ಗ್ಯಾಂಬೆಟಾ (1838 - 1882) ಒಬ್ಬ ಫ್ರೆಂಚ್ ರಾಜಕಾರಣಿ; ತೃತೀಯ ಗಣರಾಜ್ಯದ ಪ್ರಜಾಪ್ರಭುತ್ವದ ಸ್ಥಾಪಕರಲ್ಲೊಬ್ಬ.

ಆರಂಭಿಕ ಜೀವನ

[ಬದಲಾಯಿಸಿ]

ಜನನ 1838ರ ಏಪ್ರಿಲ್ 2ರಂದು, ಕೇಆರ್‌ನಲ್ಲಿ. ತಂದೆ ಜೋಸೆಫ್ ಗ್ಯಾಂಬೆಟ, ತಾಯಿ ಒರಾಸಿ ಮ್ಯಾಸಾಬಿ.[] ಪ್ಯಾರಿಸಿನಲ್ಲಿ ನ್ಯಾಯಶಾಸ್ತ್ರ ವ್ಯಾಸಂಗ ಮಾಡಿ ಅಲ್ಲೇ ನ್ಯಾಯವಾದಿ ವೃತ್ತಿ ಅವಲಂಬಿಸಿದ.[] 3ನೆಯ ನೆಪೋಲಿಯನನ ನೀತಿಗಳಿಗೆ ಆಗ (1860) ಪ್ರಬಲವಾದ ವಿರೋಧವಿತ್ತು. ಈ ವಿರೋಧ ಪ್ಯಾರಿಸಿನಲ್ಲಿ ಅತ್ಯಂತ ತೀವ್ರವಾಗಿತ್ತು. ಗ್ಯಾಂಬೆಟಾನಿಗೆ ರಾಜಕೀಯ ಪತ್ರಿಕೋದ್ಯಮದಲ್ಲೂ, ರಿಪಬ್ಲಿಕನ್ ಪಕ್ಷದ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಯಿತು.

ನಂತರದ ಜೀವನ, ರಾಜಕಾರಣಿಯಾಗಿ

[ಬದಲಾಯಿಸಿ]

ಸರ್ಕಾರ ವಿರೋಧಿ ಚಟುವಟಿಕೆಯ ಆಪಾದನೆ ಹೊರಿಸಿ ವಿಚಾರಣೆಗೆ ಗುರಿಪಡಿಸಲಾಗುತ್ತಿದ್ದ ರಿಪಬ್ಲಿಕನ್ ರಾಜಕಾರಣಿಗಳ ಪರವಾಗಿ ವಾದಿಸುತ್ತಿದ್ದ ತರುಣ ನ್ಯಾಯವಾದಿಗಳಲ್ಲಿ ಗ್ಯಾಂಬೆಟಾನೂ ಒಬ್ಬನಾಗಿದ್ದ. ಆ ಸಮಯದಲ್ಲಿ ಸರ್ಕಾರವನ್ನು ಬಾಯಿತುಂಬ ಟೀಕಿಸಲು ಅವಕಾಶ ದೊರಕುತ್ತಿತ್ತು. 1851ರ ಡಿಸೆಂಬರಿನ ಕ್ಷಿಪ್ರಾಕ್ರಮಣವನ್ನು ವಿರೋಧಿಸಿ ಹುತಾತ್ಮನಾದವನೊಬ್ಬನ ಸ್ಮಾರಕ ನಿರ್ಮಿಸಲೆತ್ನಿಸಿದ ಪತ್ರಿಕೋದ್ಯಮಿಗಳ ವಿರುದ್ಧ ಹೂಡಲಾದ ಮೊಕದ್ದಮೆಯಲ್ಲಿ ಆಪಾದಿತರ ಪರವಾಗಿ ವಾದಿಸಿದವರಲ್ಲಿ ಗ್ಯಾಂಬೆಟಾನೂ ಸೇರಿದ್ದ. ಗ್ಯಾಂಬೆಟಾ ಮಾಡಿದ, ನಿಂದೆ ತುಂಬಿದ ಚಿಕ್ಕ ಹರಿತ ಭಾಷಣ ಪತ್ರಿಕೆಗಳಲ್ಲಿ ಪ್ರಕಟವಾದಾಗ ಈತ ತುಂಬ ಪ್ರಸಿದ್ಧನಾದ. 1869ರ ಚುನಾವಣೆಗಳಲ್ಲಿ ಇವನು ಪ್ಯಾರಿಸ್, ಮಾರ್ಸೇಲ್ಸ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಗೆದ್ದ. ಇವನು ಮಾರ್ಸೇಲ್ಸ್ ಪ್ರತಿನಿಧಿಯಾಗಿರಲು ತೀರ್ಮಾನಿಸಿದನಾದರೂ ಪ್ಯಾರಿಸಿನ ಕಾರ್ಮಿಕ ಕ್ಷೇತ್ರದ ಶಾಶ್ವತ ಪ್ರೀತಿಯನ್ನೂ ಗಳಿಸಿಕೊಂಡ.

ವಿಧಾನ ಸಭೆಯ ಪ್ರತಿನಿಧಿಯಾಗಿರಲು ಗ್ಯಾಂಬೆಟಾ ತೀವ್ರಗಾಮಿ ತತ್ತ್ವಗಳನ್ನು ಪ್ರತಿಪಾದಿಸಿದ. ದ್ವಿತೀಯ ಚಕ್ರಾಧಿಪತ್ಯದ ರೀತಿನೀತಿಗಳನ್ನು ವಿರೋಧಿಸುವವರ ನಾಯಕನಾದ. 1870 ರಲ್ಲಿ ಅವನ ತೀವ್ರ ವಿರೋಧವಿತ್ತು. ಯುದ್ಧವಂತೂ ಆರಂಭವಾಗಿರುವುದರಿಂದ ಅದನ್ನು ಯಶಸ್ವಿಯಾಗಿ ಕೊನೆಗೊಳಿಸಬೇಕೆಂಬುದು ಅವನ ವಾದವಾಗಿತ್ತು. ಆದರೆ ಯುದ್ಧದಲ್ಲಿ ಫ್ರಾನ್ಸ್ ಪರಾಜಯದ ಹಾದಿ ಹಿಡಿದಿದ್ದ ವಾರ್ತೆ ಪ್ಯಾರಿಸ್‌ನ್ನು ತಲುಪಿತು. ಪ್ಯಾರಿಸಿನ ರಕ್ಷಣೆಗಾಗಿ ಫ್ರೆಂಚ್ ಪ್ರಾಂತಗಳ ಜನರನ್ನು ಹುರಿದುಂಬಿಸಿ, ಜರ್ಮನ್ ಆಕ್ರಮಣದಿಂದ ದೂರವಾಗಿದ್ದ ಸ್ಥಳಗಳಲ್ಲಿ ಹೊಸ ಸೇನೆ ರೂಪಿಸುವುದಕ್ಕೆ ಅವನು ಪ್ರಯತ್ನಿಸಿದ. ಫ್ರಾನ್ಸಿನ ರಾಜಧಾನಿಯನ್ನು ಜರ್ಮನ್ ಸೇನೆ ಮುತ್ತಿದಾಗ ಗ್ಯಾಂಬೆಟಾ ಬಲೂನೊಂದರಲ್ಲಿ ಕುಳಿತು ಜರ್ಮನ್ ಸೈನ್ಯಸಾಲಿನ ಮೇಲೆ ತೇಲಿಹೋಗಿ ಏಮಿಯೆನ್ಸ್ ತಲಪಿ, ಅಲ್ಲಿಂದ ಟೂರ್ ಸೇರಿ, ಅನಾಕ್ರಮಿತ ಫ್ರಾನ್ಸಿನ ಆಡಳಿತದ ನಾಯಕತ್ವ ವಹಿಸಿ ಕೊನೆಯವರೆಗೂ ಹೋರಾಟ ಮುಂದುವರಿಸಲು ಬದ್ಧಕಂಕಣನಾದ. ಆದರೂ 1871 ರಲ್ಲಿ ಜನವರಿ 28 ರಂದು ಶಾಂತಿ ಕೌಲಿಗೆ ಸಹಿ ಬಿತ್ತು. ಅದಕ್ಕೆ ಒಪ್ಪಿಗೆ ನೀಡಬೇಕಾಗಿದ್ದ ಹೊಸ ರಾಷ್ಟ್ರೀಯ ಸಭೆಗೆ ನಡೆದ ಚುನಾವಣೆಯಲ್ಲಿ ಗ್ಯಾಂಬೆಟಾ ಒಂಬತ್ತು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದ. ಸಭೆಯಲ್ಲಿ ಬಹುಮತೀಯರಾಗಿದ್ದ ರಾಜತ್ವವಾದಿಗಳು ಕೌಲಿಗೆ ಒಪ್ಪಿಗೆ ನೀಡಿದರು. ಕೌಲಿನ ಪ್ರಕಾರ ಆಲ್ಸ್ಯಾಸ್-ಲರೇನ್ ಜರ್ಮನಿಗೆ ಸೇರಿದ್ದರಿಂದ ಆಲ್ಸ್ಯಾಸ್ ವಿಭಾಗದ ಕ್ಷೇತ್ರದ ಪ್ರಾತಿನಿಧ್ಯ ಉಳಿಸಿಕೊಂಡಿದ್ದ ಗ್ಯಾಂಬೆಟಾನಿಗೆ ಸದಸ್ಯತ್ವ ಹೋಯಿತು. ಅನಂತರ ನಡೆದ ಉಪಚುನಾವಣೆಗಳಲ್ಲಿ ಗ್ಯಾಂಬೆಟಾ ಮತ್ತೆ ಗೆದ್ದ. ಅವನ ಕೀರ್ತಿ ಪ್ರತಿಷ್ಠೆಗಳು ಹೆಚ್ಚಿದವು.

ಮೂರನೆಯ ಗಣರಾಜ್ಯದ ಸ್ಥಾಪನೆಗಾಗಿ ಗ್ಯಾಂಬೆಟಾ ಬಹುವಾಗಿ ಶ್ರಮಿಸಿದ. ಅವನ ಪ್ರಯತ್ನಗಳಿಂದಾಗಿ ಪ್ರಜಾಪ್ರಭುತ್ವ ಸಂಸ್ಥೆಗಳು ಪುಷ್ಟಿಗೊಂಡವು. ರಿಪಬ್ಲಿಕನ್ ಒಕ್ಕೂಟ ಪ್ರಬಲವಾಯಿತು. 1876ರಲ್ಲಿ ಚುನಾವಣೆಗಳಲ್ಲಿ ರಿಪಬ್ಲಿಕನ್‌ರ ಕೈ ಮೇಲಾಯಿತು. ಆದರೂ 1879ರಲ್ಲಿ ನಡೆದ ಚುನಾವಣೆಗಳಲ್ಲಿ ಗ್ಯಾಂಬೆಟಾನ ಸರಿಗಟ್ಟುವ ಬೇರೆ ಪಕ್ಷ ಇರಲಿಲ್ಲ. ರಿಪಬ್ಲಿಕನ್ ಗಣರಾಜ್ಯ ಸರ್ಕಾರ ಸ್ಥಾಪಿತವಾಯಿತು. ಗ್ಯಾಂಬೆಟಾ ಪ್ರತಿನಿಧಿಗಳ ಸಭೆಯ (ಚೇಂಬರ್ ಆಫ್ ಡೆಪ್ಯೂಟೀಸ್) ಅಧ್ಯಕ್ಷನಾದ. 1881 ರಲ್ಲಿ ಸರ್ಕಾರ ರಚಿಸುವ ಅವಕಾಶ ಅವನಿಗೆ ಒದಗಿ ಬಂತು. ಆದರೆ ಗ್ಯಾಂಬೆಟಾ ಹಿಂದೆ ಬಯಸಿದ್ದಂಥ ಬಲಿಷ್ಠ ಸರ್ಕಾರ ಅದಾಗಲಿಲ್ಲ. ಸಂವಿಧಾನ ಪರಿಷ್ಕರಣ ಕಾರ್ಯದಲ್ಲಿ ಅದು ಅತಿಯಾಗಿ ನಿರತವಾಯಿತು. ಅವನು ಆಶಿಸಿದ್ದ ಸುಧಾರಣೆಗಳು ಪೂರೈಸಲಿಲ್ಲ. 1882 ರಲ್ಲಿ ಆ ಸರ್ಕಾರ ಪತನ ಹೊಂದಿತು. ಆ ವರ್ಷದ ಡಿಸೆಂಬರ್ 31 ರಂದು ಕರುಳು ಅಥವಾ ಉದರ ಕ್ಯಾನ್ಸರ್‌ನಿಂದ ಗ್ಯಾಂಬೆಟಾ ತೀರಿಕೊಂಡ.[]

ಗ್ಯಾಂಬೆಟಾನ ಹೃದಯವಿರುವ ಕಲ್ಲಿನ ಚಿತಾಭಸ್ಮದ ಕಲಶವನ್ನು ಪ್ಯಾರಿಸ್‌ನಲ್ಲಿನ ಪ್ಯಾಂಥಿಯಾನ್‍ನ ನೆಲಮನೆಗೆ ಸಾಗುವ ಸಮಾಧಿ ಮೆಟ್ಟಲು ಸಾಲಿನಲ್ಲಿ ೧೯೨೦ರಲ್ಲಿ ಇರಿಸಲಾಯಿತು. ಚಿತಾಭಸ್ಮದ ಕಲಶಕ್ಕೆ ಬಳಸಲಾದ ರಷ್ಯನ್ ಕೆಂಪು ಕ್ವಾರ್ಟ್ಸೈಟ್ ಕಲ್ಲು ಲೆಸ್ ಇನ್‍ವ್ಯಾಲಿಡೇಸ್‍ನಲ್ಲಿನ ನೆಪೋಲಿಯನ್‍ನ ಸಮಾಧಿಗೆ ಬಳಸಲಾದ ಅದೇ ರವಾನೆ ಸರಕಿನ ಭಾಗವಾಗಿತ್ತು.[]

ಉಪಸಂಹಾರ

[ಬದಲಾಯಿಸಿ]

ಗ್ಯಾಂಬೆಟಾ ಅಧಿಕಾರದಲ್ಲಿದ್ದಾಗಿಗಿಂತ ವಿರೋಧ ಶಿಬಿರದಲ್ಲಿದ್ದಾಗಲೇ ಹೆಚ್ಚು ಯಶಸ್ವಿಯಾಗಿದ್ದನೆಂದು ಭಾವಿಸಲಾಗಿದೆ. ಪಕ್ಷ ಸಿದ್ಧಾಂತಗಳಿಗಿಂತ ರಾಷ್ಟ್ರೈಕ್ಯಕ್ಕೆ ಹೆಚ್ಚಿನ ಬೆಲೆ ಕೊಟ್ಟು ಗ್ಯಾಂಬೆಟಾ ತನ್ನ ವಿರೋಧಿಗಳ ಒತ್ತಡಕ್ಕೆ ಹಲವು ಸಾರಿ ಮಣಿದ. ಇದರಿಂದ ಇವನನ್ನು ಸಮಯಸಾಧಕನೆಂದು ಹಲವರು ತಪ್ಪಾಗಿ ತಿಳಿದುಕೊಂಡಿದ್ದರು. ಇವನ ಯಶಸ್ಸಿನ ಫಲವೆಂದರೆ ಫ್ರಾನ್ಸಿನ ಸಂಸದೀಯ ಪ್ರಜಾಪ್ರಭುತ್ವ. ದುರ್ಬಲ ಪಕ್ಷ ವ್ಯವಸ್ಥೆ ಗ್ಯಾಂಬೆಟಾನ ಸೋಲಿನ ಪರಿಣಾಮ.

ಉಲ್ಲೇಖಗಳು

[ಬದಲಾಯಿಸಿ]
  1. Laborde, Jean Baptiste Vincent (1898). Léon Gambetta, Biographie psychologique: le cerveau, la parole, la fonction et l'organo. Histoire authentique de la maladie et de la mort. Paris: Schleicher frères. p. 11.
  2. "Léon Gambetta". Larousse (in ಫ್ರೆಂಚ್). Retrieved 29 May 2021.
  3. Lannelongue, Blessure et maladie de M. Gambetta, G. Masson, Paris, 1883
  4. Jacques Touret; Andrey Bulakh (2016), "The Russian contribution to the edification of the Napoleon tombstone in Paris" (PDF), Vestnik of St Petersburg University, Series 15, archived from the original (PDF) on 22 March 2023, retrieved 23 May 2021
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: