ಲಿಂಗಾಯತ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂದಿಗೆ ಎಂಟು ಶತಮಾನಗಳ ಹಿಂದೆ ಭಾರತ ದೇಶದಲ್ಲಿ ವೈದಿಕಶಾಹಿ ಅತ್ಯಂತ ಪ್ರಬಲ ಶಾಲಿಯಾಗಿದ್ದ ಕಾಲವದು. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರರೆಂಬ ಚತುರ್ವಣಗಳನ್ನು ಮಾಡಿಕೊಂಡು, ಈ ನಾಲ್ಕೂ ವರ್ಣದಿಂದ ಹೊರಗಿರುವವರನ್ನು ಅಸ್ಪೃಶ್ಯರೆಂದು ಕರೆದು, ಅವರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು. ಅಂದು ಇಲ್ಲಿ ಅನೇಕ ಮೂಢನಂಬಿಕೆಗಳು, ಬರಡು ಸಂಪ್ರದಾಯಗಳು ಬಹುದೇವತೋಪಾಸನೆ, ಸ್ತ್ರೀಶೋಷಣೆ, ಅನ್ಯಾಯಗಳಂತಹ, ಅನೇಕ ಸಂಪ್ರದಾಯಗಳು ರುದ್ರ ತಾಂಡವಾಡುತ್ತಿದ್ದ ಕಾಲವದು. ದೀನ, ದಲಿತರ ಶೋಷಣೆಯಂತೂ ಅಂದು ಅತಿರೇಕದ ವರ್ತನೆಯಾಗಿತ್ತು. ಸ್ತ್ರೀಯನ್ನು ಕೇವಲ ಭೋಗದ ಗೊಂಬೆಯನ್ನಾಗಿ ಮಾಡಿಕೊಂಡು, ಅವಳಿಗೆ ಯಾವುದೇ ಧರ್ಮ ಸಂಸ್ಕಾರವಿಲ್ಲದೆ ವಿಧವೆಯಾದವರನ್ನು ಅಮಾನುಷವಾಗಿ ಹಿಂಸಿಸುತ್ತಿದ್ದ ಕಾಲವದು.

ದೀನರೂ, ದಲಿತರು, ಬಡವರು, ಶೋಷಿತರು, ನೊಂದವರು, ಸ್ತ್ರೀಯರು ಒಕ್ಕೂರಲಿನಿಂದ ತಮ್ಮನ್ನುದ್ಧರಿಸುವ ಮಹಾಪುರುಷನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಕಾಲದಲ್ಲಿ, ನೊಂದವರ ನಂದಾ ದೀಪವಾಗಿ, ಬಡವರ ಬಂಧುವಾಗಿ, ಶೋಷಿತರ ಸಂಜೀವಿನಿಯಾಗಿ, ಸ್ತ್ರೀಕುಲೋದ್ಧಾರಕರಾಗಿ, ಮಾನವತೆಯ ಸಾಕಾರ ಮೂರ್ತಿಯಾದ ದಿವ್ಯ ಜ್ಯೋತಿಯೊಂದರ ಉದಯವಾಯಿತು. ಈ ದಿವ್ಯ ಜ್ಯೋತಿಯೇ ಗುರು ಬಸವಣ್ಣನವರು (Guru Basavanna).

ಇಂದಿನ ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಕ್ರಿ.ಶ. 1134ರ ಏಪ್ರಿಲ್ 30ರಂದು ಶೈವ ಬ್ರಾಹ್ಮಣ ಕುಟುಂಬದ `ಮಾದರಸ' ಮತ್ತು `ಮಾದಲಾಂಬಿಕೆ'ಯರ ಪುಣ್ಯ ಗರ್ಭದಲ್ಲಿ ಜನಿಸಿದರು. ಬಸವಣ್ಣನವರು ಕೇವಲ ಬಾಗೇವಾಡಿಯ ಮಾದರಸ ಮಾದಲಾಂಬಿಕೆಯರ ಮನೆಯ ಜ್ಯೋತಿಯಾಗಿ ಬರಲಿಲ್ಲ. ಕನ್ನಡ ನಾಡಿನ, ಬೆಳಕಾಗಿ ಬರಲಿಲ್ಲ, ಕೇವಲ ಭಾರತ ಭೂಮಿಯ ಜ್ಯೋತಿಯಾಗಿ ಬರದೇ ಇಡೀ ವಿಶ್ವವನ್ನು ಬೆಳಗಲು ಬರುವ ರವಿಯಂತೆ ವಿಶ್ವ ವಿನೂತನ ಪರಂಜ್ಯೋತಿಯಾಗಿ ಉದಿಸಿ ಬಂದರು.

ಗುರು ಬಸವಣ್ಣನವರು ಜನಿಸಿದ ತಕ್ಷಣ ಎಲ್ಲಾ ಮಕ್ಕಳಂತೆ ಅಳಲಿಲ್ಲ. ಕಣ್ಣು ತೆರೆಯದೆ, ಬಾಯಿ ತೆರೆಯದೆ ಜಡವಾದ ಬೊಂಬೆಯಂತೆ ಮಲಗಿದ್ದರು. ಮಾದರಸರು ಕಳವಳದಿಂದ ಹಲವಾರು ಮಂತ್ರ ತಂತ್ರಗಳನ್ನು ಮಾಡಿಸುತ್ತಾರೆ. ಅಷ್ಟರಲ್ಲಿ ಕೂಡಲ ಸಂಗಮದ ಜಾತವೇದ ಮುನಿಗಳು ಮಾದರಸರ ಮನೆಗೆ ಬರುತ್ತಾರೆ. ``ಶಿವನ ಚಿತ್ಕಳೆಯೊಂದು ಇಳಗೆ ಇಳಿದ ಸೂಚನೆಯಾಯಿತು ಆ ದಿಕ್ಕನ್ನು ಅರಸಿ ನಾನು ಬಂದಿದ್ದೇನೆ, ನನ್ನ ನಿನ್ನ ಮಾತ್ರವಲ್ಲ ಲೋಕದ ಅಶೋತ್ತರಗಳನ್ನು ಪೂರೈಸಲು ಬಂದ ಶಿವನ ಶಿಶು ಇವನು" ಎಂದು ನುಡಿಯುತ್ತಾರೆ. ಮಗುವಿನ ಹಣೆಗೆ ವಿಭೂತಿಯನ್ನು ಧರಿಸಿ `ಓಂ ನಮಃ ಶಿವಾಯ' ಎಂಬ ಮಂತ್ರವನ್ನು ಉಚ್ಛರಿಸುತ್ತಾರೆ. ಆಗ ಆ ನಿರ್ಮಲಾತ್ಮಕ ಶಿಶುವು ಕಣ್ಣನ್ನು ತೆರೆದು ಗುರು ದರ್ಶನ ಪಡೆದು ಎಲ್ಲರಿಗೂ ಹರ್ಷವನ್ನುಂಟು ಮಾಡಿತು.

ಬಾಲಕ ಗುರು ಬಸವಣ್ಣನವರು ಸಂಸ್ಕøತ ವಿದ್ಯಾಭ್ಯಾಸ ಮಾಡಲು ತೊಡಗುತ್ತಾರೆ. ಗುರುಗಳು ಹೇಳಿಕೊಟ್ಟಿರುವುದನ್ನು ಮರೆಯುವುದೇ ಇಲ್ಲ. ಗುರುಬಸವಣ್ಣನವರ ವಿದ್ಯಾರ್ಜನೆಯ ವೇಗವನ್ನು ನೋಡಿ ಗುರುಗಳಿಗೆ ಆಶ್ಚರ್ಯವಾಗುತ್ತದೆ. ವೇದ ಶಾಸ್ತ್ರ, ಆಗಮ ಪುರಾಣ, ಛಂದಸ್ಸು ಎಲ್ಲವನ್ನೂ ಬಲು ಬೇಗನೆ ಗ್ರಹಿಸುತ್ತಾರೆ. ಇತರ ಮಕ್ಕಳಂತೆ ಲೌಕಿಕ ಆಟದಲ್ಲಿ ಆಸಕ್ತಿ ಇರುವುದಿಲ್ಲ. ಶಿವನ ಪೂಜೆ ಮಾಡುವ ಆಟ ಆಡುತ್ತಿದ್ದರು.

ಬಿಳಿಯ ಕರಿಕೆ ಕಣಗಿಲೆಲೆಯ

ತೊರೆಯ ತಡಿಲ ಮಳಲ ತಂದು

ಗೌರಿಯ ನೋನುವ ಬನ್ನಿರೆ

ಚಿಕ್ಕ ಚಿಕ್ಕ ಮಕ್ಕಳೆಲ್ಲರೂ ನೆರೆದು

ಅನುಪದಾನಿ ಕೂಡಲ ಸಂಗಮದೇವ ಗಂಡನಾಗಬೇಕೆಂದು

ಎಂದು ತಮ್ಮ ಓರಗೆಯ ಮಕ್ಕಳನ್ನೆಲ್ಲ ಕರೆದುಕೊಂಡು, ಹಿರಿಯರು ಪೂಜೆ ಮಾಡಿದಂತೆ ಇವರು ಆಟ ಆಡುತ್ತಿದ್ದರು. ಬಾಲ್ಯದಲ್ಲಿಯೇ ಅನೇಕ ದೈವೀ ಗುಣಗಳನ್ನು ಪ್ರದರ್ಶಿಸುತ್ತಿದ್ದರು. ಒಮ್ಮೆ ಬಸವಣ್ಣನವರ ತಂದೆ ಯಜ್ಞ ನಡೆಯುವ ಜಾಗಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಹೋತವನ್ನು ಬಲಿ ಕೊಡಲು ಕಟ್ಟಿದ್ದಾರೆ ಅದು ಅಳುತ್ತಿದೆ. ಅದನ್ನು ನೋಡಿ ಗುರು ಬಸವಣ್ಣನವರೂ ಅಳುತ್ತಾರೆ. ಗುರು ಬಸವಣ್ಣನವರಿಗೆ ಮೂಕ ಪ್ರಾಣಿಗಳ ಮೇಲೆ ಅಪಾರವಾದ ದಯೆ.

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು

ಎಲೆ ಹೋತೆ ಅಳು ಕಂಡಾ

ವೇದವ ನೋದುವವರ ಮುಂದೆ ಅಳು ಕಂಡಾ

ಶಾಸ್ತ್ರವ ಕೇಳುವವರ ಮುಂದೆ ಅಳು ಕಂಡಾ

ನೀನತ್ತುದಕ್ಕೆ ತಕ್ಕುದ ಮಾಡುವ ನಮ್ಮ ಕೂಡಲ ಸಂಗಮದೇವಾ

ಎಂದು ಹೋತವನ್ನು ಸಾಂತ್ವನಿಸುತ್ತಾರೆ. ಬಾಲಕ ಬಸವರಸ, ರೂಢಿಯಲ್ಲಿದ್ದ ಅನೇಕ ಆಚರಣೆಗಳನ್ನು ಪ್ರಶ್ನಿಸುತ್ತಿದ್ದರು. ದೇವರ ಹೆಸರಿನಲ್ಲಿ ಪ್ರಾಣಿ ಬಲಿಕೊಡುವುದನ್ನು ಕಂಡು ನೊಂದರು. ಅಗ್ನಿಯ ಮೂಲಕ ದೇವರಿಗೆ ಅರ್ಪಿಸುತ್ತೇವೆ ಎಂದು, ಅಗ್ನಿಯಲ್ಲಿ ತುಪ್ಪ ಪೀತಾಂಬರಗಳನ್ನು ಹಾಕಿ ಸುಡುವುದನ್ನು ಕಂಡು ಮಮ್ಮಲ ಮರುಗಿದರು.

ಸಂಪ್ರದಾಯದ ಪ್ರಕಾರ ಉಪನಯನವನ್ನು ಮಾಡಿಸಿಕೊಳ್ಳಬೇಕಾಗಿ ಬಂದಾಗ, ಅನೇಕ ಪ್ರಶ್ನೆಗಳನ್ನು ಹೆತ್ತವರ ಮುಂದಿಡುತ್ತಾರೆ. ಅಂದು ಹೆಣ್ಣನ್ನು ಶೂದ್ರಳನ್ನಾಗಿ ಮಾಡಿ ಅವಳನ್ನು ಧರ್ಮ ಸಂಸ್ಕಾರದಿಂದ ವಂಚಿಸಲಾಗಿತ್ತು. ಇದೆಲ್ಲವನ್ನು ಕಂಡು ಬಸವಣ್ಣನವರು ಬಹಳ ನೊಂದಿದ್ದರು. ಗುರುಬಸವಣ್ಣನವರಿಗೆ 8ನೇ ವಯಸ್ಸಿಗೆ ಉಪನಯನ ಸಂಸ್ಕಾರ ಕೊಡಲು ತಂದೆ ಮಾದರಸ ಸಿದ್ಧತೆ ನಡೆಸುತ್ತಾರೆ. ಉಪನಯನ ದಿನದಂದು ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದಾರೆ. ಬಂಧು ಬಳಗದವರೆಲ್ಲರೂ ಈ ಒಂದು ಸಂತೋಷ ಕೂಟದಲ್ಲಿ ಭಾಗವಹಿಸಿದ್ದಾರೆ. ಬಸವಣ್ಣನವರ ಅಕ್ಕ ನಾಗಲಾಂಬಿಕೆಯವರು ಕೂಡ ಪತಿಯೊಡನೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ತನ್ನ ಪ್ರೀತಿಯ ತಮ್ಮನಿಗೆ ಹೊಸ ಬಟ್ಟೆಯನ್ನು ತೊಡಿಸಿ ಉಪನಯನ ಸಂಸ್ಕಾರಕ್ಕಾಗಿ ಕಳುಹಿಸಿ ಕೊಡುತ್ತಾರೆ. ಅದಕ್ಕೂ ಮುಂಚೆ ಬಾಲಕ ಬಸವಣ್ಣವರಿಗೆ ``ನೀನು ಗಂಡಾಗಿರುವುದರಿಂದ ನಿನಗೆ ಧರ್ಮ ಸಂಸ್ಕಾರ ಮತ್ತು ದೇವರ ಪೂಜೆಯ ಹಕ್ಕು, ನಾನು ಹೆಣ್ಣಾಗಿರುವುದರಿಂದ ನನಗೆ ಇದೆಲ್ಲ ಇಲ್ಲ" ಎಂದು ದುಃಖ ತುಂಬಿದ ಕಂಠದಿಂದ ನುಡಿದಾಗ ಎಳೆಯ ಬಾಲಕನ ಮೃದುಹೃದಯ ತತ್ತರಿಸುತ್ತದೆ. ಅದೇ ಕ್ಷಣದಲ್ಲೇ ಬಸವಣ್ಣನವರು ಸ್ತ್ರೀಯರ, ಉದ್ಧಾರಕ್ಕಾಗಿ ಅವರನ್ನು ಈ ಜಡ ಸಂಪ್ರದಾಯದ ರಾಕ್ಷಸೀ ಬಾಹುಗಳಿಂದ ಬಿಡುಗಡೆಗೊಳಿಸಲು ಸಂಕಲ್ಪ ಮಾಡುತ್ತಾರೆ. ಮಾದರಸರು ಸಮಯಕ್ಕೆ ಸರಿಯಾಗಿ ಮಗನನ್ನು ಉಪನಯನ ಸಂಸ್ಕಾರಕ್ಕಾಗಿ ಕರೆಯುತ್ತಿದ್ದಾರೆ. ``ಬಸವಣ್ಣಾ ಸಮಯವಾಗುತ್ತಿದೆ ಬಾ, ಈಗ ನಿನಗೆ ಜನಿವಾರದ ಧಾರಣೆಯಾಗುತ್ತದೆ."ಆಗ ಬಾಲಕ ಬಸವಣ್ಣ ``ನಾನು, ಏನಾದರೂ ತಿಂಡಿ ತಿಂದರೆ ಅಕ್ಕನಿಗೆ ಕೊಟ್ಟೇ ತಿನ್ನುವೆ, ಹೊಸ ಬಟ್ಟೆ ಧರಿಸುವುದಾದರೂ ಅಕ್ಕ ಹೊಸ ಬಟ್ಟೆ ಧರಿಸಿದ ಮೇಲೆಯೇ ಧರಿಸುತ್ತೇನೆ. ಅದಕ್ಕಾಗಿ ಈ ಉಪನಯನ ಸಂಸ್ಕಾರವೂ ಕೂಡ ಅಕ್ಕನಿಗೆ ಮೊದಲು ಸಿಗಬೇಕು" ಎನ್ನುತ್ತಾರೆ. ಮಾದರಸರು ``ಹೆಣ್ಣು ಮಕ್ಕಳಿಗೆ ಧರ್ಮ ಸಂಸ್ಕಾರ ಕೊಡಲಿಕ್ಕೆ ಬರದು, ಬಹಿಷ್ಠೆಯಾಗುವ ಹೆಣ್ಣು ಶೂದ್ರಳು" ಎನ್ನುತ್ತಾರೆ. ``ಬಹಿಷ್ಠೆಯನ್ನು ತಡೆದು ಹುಟ್ಟುವ ಪುರುಷ ಹೇಗೆ ತಾನೆ ಶ್ರೇಷ್ಠನಾಗುವನು? ಅಕ್ಕನಿಗೆ ಉಪನಯನ ಮಾಡಿಸಿದರೆ ಮಾತ್ರ ನಾನು ಕೂಡ ಮಾಡಿಸಿಕೊಳ್ಳುತ್ತೇನೆ" ಎಂದು ಛಲ ತೊಟ್ಟಾಗ, ಮಾದರಸರು ``ಸಂಪ್ರದಾಯಕ್ಕೆ ವಿರುದ್ಧವಾದುದನ್ನು ನಾನು ಮಾಡುವುದಿಲ್ಲ, ಸಂಪ್ರದಾಯದಂತೆ ನಡೆಯದಿದ್ದರೆ ನಿನಗೆ ನನ್ನ ಮನೆಯಲ್ಲಿ ಸ್ಥಳವಿಲ್ಲ" ಎಂದು ನುಡಿದರು. ಆಗ ಬಸವಣ್ಣನವರು ಜನಿವಾರವನ್ನು ತಿರಸ್ಕರಿಸಿ ಸತ್ಯಾನ್ವೇಶಕನಾಗಿ ಕೂಡಲ ಸಂಗಮಕ್ಕೆ ಬಂದು ಅಲ್ಲಿ ಜಾತವೇದ ಮುನಿಗಳ ಸನ್ನಿಧಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಾರೆ.

ಗುರು ಬಸವಣ್ಣನವರು ಕೂಡಲ ಸಂಗಮದಲ್ಲಿ ಜಾತವೇದ ಮುನಿಗಳ ಸನ್ನಿಧಿಯಲ್ಲಿ ವಿದ್ಯಾರ್ಜನೆ ಮಾಡುತ್ತ, ಸಂಗಮೇಶ್ವರನನ್ನು ಅರ್ಚಿಸುತ್ತಾ ಭಕ್ತಿಯೋಗಿಯಾಗಿ ದಿನ ಕಳೆಯುತ್ತಾರೆ. ಬಡವರು ಹಾಗೂ ನೊಂದವರ ಬಗ್ಗೆ ಅವರಿಗೆ ಬಹಾಳ ಅನುಕಂಪ ಬೇರೆ ಪೂಜಾರಿಗಳು ಬಡವರನ್ನು ಹತ್ತಿರ ಸೇರಿಸಿಕೊಳ್ಳದೇ ಹೋದಾಗ ಗುರು ಬಸವಣ್ಣನವರು ಅಂಥವರನ್ನು ಕರೆದು ತಾವು ಪೂಜೆ ಮಾಡಿಸುತ್ತಿದ್ದರು. ಬಾಲ್ಯದಲ್ಲಿ ಅತ್ಯಂತ ಪ್ರೌಢವಾದ ವಿಚಾರದೊಂದಿಗೆ ಬೆಳೆಯುತ್ತಿದ್ದರು. ಯಾವುದೇ ಮೂಢ ಭಕ್ತಿಯಾಗಲೀ ಅಥವಾ ಉನ್ಮಾದದ ಭಕ್ತಿ ಮಾಡದೇ ಅತ್ಯಂತ ವೈಜಾರಿಕವಾದ ಭಕ್ತಿಯನ್ನು ಮಾಡುತ್ತಿದ್ದರು. ಬಾಲಕರಿರುವಾಗಲೇ ದೇವರು ಮತ್ತು ಭಕ್ತನ ನಡುವೆ ಪೂಜಾರಿ ಏಕೆ ಬೇಕು? ಎಂದು ಯೋಚಿಸುತ್ತಿದ್ದರು.

ಒಮ್ಮೆ ಒಬ್ಬ ಬಡವನು ಸಂಗಮೇಶ್ವರನ ಜಾತ್ರೆಗೆ ಬರುವಾಗ ಅವನ ಬಂಡಿಯ ಚಕ್ರಕ್ಕೆ ಬೆಕ್ಕೊಂದು ಅಡ್ಡ ಬಂದು ಸತ್ತಿತು. ಪೂಜಾರಿಗಳ ಹತ್ತಿರ ಬಂದು ಈ ವಿಷಯ ಹೇಳಿದಾಗ ನೀನು ಬಂಗಾರ ಅಥವಾ ಬೆಳ್ಳಿಯ ಬೆಕ್ಕನ್ನಾದರೂ ಮಾಡಿಸಿ ನನಗೆ ದಾನ ಕೊಡು ಎಂದರು. ಅವನು ಬಡವನಾಗಿರುವುದರಿಂದ ಅದನ್ನು ಮಾಡಿಸಲಿಕ್ಕಾಗದೆಂದು ಅಳುತ್ತಾ ಕುಳಿತನು. ಇದನ್ನು ನೋಡಿದ ಬಾಲಕ ಬಸವರಸ, ಅವನನ್ನು ಕರೆದು ಸಂಗಮೇಶ್ವರನ ಪೂಜೆ ಮಾಡಲು ದೇವಸ್ಥಾನದ ಗರ್ಭಗುಡಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಆಗ ಇವರು ಮಂತ್ರ ಹೇಳುತ್ತಾ ಆ ವ್ಯಕ್ತಿಗೆ ಪೂಜೆ ಮಾಡಲು ಹೇಳುತ್ತಾರೆ. ಅವನು ತುಂಬಾ ಸಂತೋಷ ಪಟ್ಟ. ಇದನ್ನು ನೋಡಿದ ಇತರ ಪೂಜಾರಿಗಳು, ``ನೇರವಾಗಿ ಭಕ್ತನನ್ನೇ ಕರೆದು ಪೂಜೆ ಮಾಡಿಸಿದರೆ ನಮ್ಮ ಹೊಟ್ಟೆ ಹೇಗೆ ತುಂಬಬೇಕು" ಎಂದು ವಾದ ಮಾಡುತ್ತ ಬಾಲಕ ಬಸವರಸರಿಗೆ ಹೊಡೆಯಲು ಮುಂದಾದಾಗ ಸಂಗಮೇಶ್ವರನ ಗರ್ಭಗುಡಿಯಿಂದ ``ನೀವು ಮಾಡಿದ ಪೂಜೆ ಹುಸಿ ಬಸವರಸ ಮಾಡಿದ ಪೂಜೆಯೇ ನನಗೆ ದಿಟ" ಎನ್ನುವ ಶಬ್ದ ಬರುತ್ತದೆ. ಇದನ್ನು ಕೇಳಿ ಬಸವಣ್ಣನವರಿಗೆ ಹೊಡೆಯಲು ಹೋದವರೆಲ್ಲ ಅವರ ಕ್ಷಮೆ ಕೇಳುತ್ತಾರೆ. ಹೀಗೆ ಸಂಗಮೇಶ್ವರನ ಅರ್ಚನೆ ಮಾಡುತ್ತ ವೇದ ಶಾಸ್ತ್ರ ಆಗಮ ಪುರಾಣ ಎಲ್ಲವನ್ನೂ ಅಧ್ಯಯನ ಮಾಡಿ ಪಾಂಡಿತ್ಯಪೂರ್ಣವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಅವರು 21 ವರ್ಷ ವಯಸ್ಸಿಗೆ ಕಾಲಿಡುತ್ತಾರೆ. ಈ ಹೊತ್ತಿಗೆ ಅವರ ಮನದಲ್ಲಿ ಒಂದು ಸ್ವತಂತ್ರ ಧರ್ಮದ ರೂಪರೇಷೆ ಮೂಡಿ ನಿಂತಿದೆ ಕೂಡಲ ಸಂಗಮದ ಘಟಿಕೋತ್ಸವ ಸಮಾರಂಭದಲ್ಲಿ ಒಂದು ಅದ್ಭುತವಾದ ಭಾಷಣವನ್ನು ಮಾಡುತ್ತಾರೆ. ಸಮಾಜದಲ್ಲಿ ರೂಢಿಯಲ್ಲಿದ್ದ ಅನೇಕ ಆಚಾರ ವಿಚಾರಗಳನ್ನು ತಿರಸ್ಕರಿಸುತ್ತಾರೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಲೆಕ್ಕವಿಲ್ಲದಷ್ಟು ಅನ್ಯಾಯಗಳ ಬಗ್ಗೆ ಬಿಡಿಸಿ ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಅವರ ಭಾಷಣದಿಂದ ಜಾತವೇದ ಮುನಿಗಳಿಗೆ ಬಹಳಷ್ಟು ಆನಂದವಾಗುತ್ತದೆ. ಮನೆದೇವರಾದ ಸಂಗಮೇಶ್ವರನ ದರ್ಶನಕ್ಕೆ, ಬಿಜ್ಜಳ ರಾಜನ ಪ್ರಧಾನ ಮಂತ್ರಿಯಾದ ಬಲದೇವರಸರು ಬಂದಿದ್ದರು. ತರುಣ ಬಸವಣ್ಣನವರ ಭಾಷಣ ಕೇಳಿ ಪ್ರಭಾವಿತರಾಗಿ ತಮ್ಮ ಮಗಳನ್ನು ಬಸವಣ್ಣನವರಿಗೆ ಮದುವೆ ಮಾಡಿ ಕೊಡುವ ವಿಚಾರವನ್ನು ಗುರುಗಳ ಮುಂದೆ ಪ್ರಸ್ತಾಪಿಸುತ್ತಾರೆ. ಗುರುಗಳು ಇದಕ್ಕೆ ಒಪ್ಪಿಗೆ ನೀಡುತ್ತಾರೆ. ಬಸವಣ್ಣನವರು ಬಲದೇವರಸರ ಅಕ್ಕನ ಮಗ ಎಂಬುದನ್ನು ಅರಿತು ಬಲದೇವರಸರು ಇನ್ನೂ ಹೆಚ್ಚಿನ ಸಂತೋಷದಿಂದ ಮದುವೆ ಮಾಡಿಕೊಡಲು ಮುಂದಾಗುತ್ತಾರೆ. ಸ್ವತಂತ್ರವಾದ ಜೀವಿಯಾಗಬಯಸಿದ ಬಸವಣ್ಣನವರು, ಸಂಸಾರದ ಕೆಸರಿನಲ್ಲಿ ಇಳಿಯಬಯಸದೆ ದುಃಖಿತರಾಗಿ, ಅಂದು ಸಾಯಂಕಾಲದ ಸಮಯದಲ್ಲಿ ಸಂಗಮೇಶ್ವರನ ದೇವಸ್ಥಾನದಲ್ಲಿ ಬಂದು ಪರಮಾತ್ಮನಲ್ಲಿ ಬೇಡಿಕೊಳ್ಳುತ್ತಾರೆ

ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಟಿದ ಬೆಂಡು;

ತೇಲಲೀಯದು ಗುಂಡು, ಮುಳಗಲೀಯದು ಬೆಂಡು;

ಇಂತಪ್ಪ ಸಂಸಾರ ಶರಧಿಯ ದಾಂಟಿಸಿ,

ಕಾಲಾಂತಕನೇ ಕಾಯೋ ಕೂಡಲ ಸಂಗಮ ದೇವಾ.

ಎಂದು ದೇವರಲ್ಲಿ ಮೊರೆಯಿಡುತ್ತಾರೆ.

ಬಸವಣ್ಣನವರು ಹಾಗೆಯೇ ದುಃಖಿತರಾಗಿ ಧ್ಯಾನ ಮಗ್ನರಾಗಿ ಕುಳಿತಿದ್ದಾರೆ. ಆಗ ಒಂದು ಮಧುರವಾದ ವಾಣಿ ಕೇಳಿ ಬರುತ್ತದೆ ``ಎಲೆ ಮಗನೆ, ಬಸವಣ್ಣ ಬಸವ ದೇವಾ ನಿನ್ನಂ ಮಹೀತದೊಳು ಮೆರೆದಪೆವು. ನೀನು ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಹೋಗು" ಎಂದು. ಬಸವಣ್ಣನವರು ಇನ್ನಷ್ಟು ದುಃಖಿತರಾಗಿ ``ತಂದೆ ನೀನು ಕ್ರೂರಿಯಾಗಬೇಡ ಹಾಲನ್ನು ಕೇಳುವ ಮಗುವಿಗೆ ಯಾರಾದರೂ ವಿಷವನ್ನು ಕೊಡುವರೇ? ನಿನ್ನ ಕಾರುಣ್ಯದ ಹಾಲನ್ನು ಕೇಳುವ ನನಗೆ ಸಂಸಾರ ಸುಖದ ವಿಷವನ್ನು ಕುಡಿಸುವೆಯಾ? ಬೇಡ" ಎನ್ನುತ್ತಾರೆ. ಲಿಂಗದೇವನು ಆಶ್ವಾಸನೆ ನೀಡುತ್ತಾ ``ಸದಾ ನಾನು ನಿನ್ನ ಬೆನ್ನಿಗೆ ಇರುತ್ತೇನೆ, ನಾಳೆ ನೀನು ಶುದ್ದಾಂಗವಾಗಿ ಬಂದು ಕುಳ್ಳಿರು ನಿನ್ನಲ್ಲಿ ನನ್ನ ಅನುಗ್ರಹವನ್ನು ತುಂಬುತ್ತೇನೆ" ಎಂದು ಆಶ್ವಾಸನೆ ನೀಡಿದನು. ಆ ಪ್ರಸಂಗವನ್ನು ಹರಿಹರ ಮಹಾಕವಿ ಈ ರೀತಿ ಹೇಳಿದ್ದಾರೆ.

ಬೇಡೆನ್ನ ಕಂದ ನಿನ್ನೊಡನೆ ಬಪ್ಪೆಂ ಬಸವ...

ನೋಡು ನಿನ್ನಾಣೆ ನಿನ್ನೊಡನೆ ಬಪ್ಪೆಂ ಬಸವ...

ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೇ

ಹಿಂದು ಗೊಂಡೇ ಬಪ್ಪೆನೆನ್ನ ಸುಕೃತದ ಸುಧೆಯೇ!

ನೆನೆಯೇ ಮುಂದಿರ್ಪಪೆಂ ಕರೆದೊಡೆ ಓ ಎಂದಪೆಂ

ಮನದೊಳಗೆ ಕರದೊಳಗೆ ತನುವಿನೊಳಗಿರ್ದಪೆಂ!

ನಿಂದಲ್ಲಿ ನಿಂದಪೆಂ ನಡೆದಲ್ಲಿ ನಡೆದಪೆಂ

ಬಂದಲ್ಲಿ ಬಂದಪೆಂ ನುಡಿದಲ್ಲಿ ನುಡಿದಪೆಂ

ನಡೆಯಯ್ಯಾ ನಡೆ ಮಗನೆ ನಡೆ ಕಂದಾ ಬಸವಣ್ಣ

ಪೆÇಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ.

ಎಂದು ದೇವರು ಗುರುಬಸವಣ್ಣನವರಿಗೆ ಹೇಳುತ್ತಾನೆ. ಅಂದು ದಿನಾಂಕ : 14-01-1155 ಬಸವಣ್ಣನವರು ಧ್ಯಾನಮಗ್ನರಾಗಿ ಚಿಂತನೆಯನ್ನು ಮಾಡುತ್ತಿದ್ದಾರೆ. ಜನರಲ್ಲಿ ಪೂಜೆಗೆ ಬಳಕೆಯಲ್ಲಿದ್ದ ವಸ್ತುಗಳು ವಿಚಿತ್ರ ವಿಲಕ್ಷಣ ಆಕಾರವಾಗಿದ್ದವು. ಅವು ದೇವರ ಸ್ವರೂಪವನ್ನು ಸಂಕೇತಿಸುತ್ತಿರಲಿಲ್ಲ. ಹೀಗಿರುವಾಗ ಬಸವಣ್ಣನವರಿಗೆ, ಇಷ್ಟಲಿಂಗದ ಕಲ್ಪನೆಯಾಗಿ, ಬ್ರಹ್ಮಾಂಡದಲ್ಲಿ ಪಿಂಡಾಂಡವಿದೆ ಎನ್ನುವ ಸಂಕೇತವಾಗಿ ಇಷ್ಟಲಿಂಗವನ್ನು ರೂಪಿಸಿ ಅದನ್ನು ತಮ್ಮ ಕರಕಮಲದಲ್ಲಿ ಹಿಡಿದು ದೇವನ ಅನುಗ್ರಹಕ್ಕಾಗಿ ಕಾದು ಕುಳಿತಿದ್ದಾರೆ. ಆಗ ಮೇಲಿನಿಂದ ಒಂದು ಬೃಹತ್ ಬೆಳಕಿನ ಪ್ರವಾಹವು ಧಾರೈಸುವದು. ಪರಮಾತ್ಮನ ಅನುಗ್ರಹವಾಗುವುದು. ಸೃಷ್ಟಿಕರ್ತ ಲಿಂಗದೇವನು `ಕಾರುಣ್ಯಮಂ ನೀಡಿ ಸಾಮಥ್ರ್ಯಮಂ' ಹೇರುವರು. ಆಗ ದೇವನನ್ನು ಕುರಿತು ಬಸವಣ್ಣನವರು. ಹೀಗೆ ಕೊಂಡಾಡುವರು.

ಎನ್ನ ಗುರು ಪರಮಗುರು ನೀನೆ ಕಂಡಯ್ಯಾ

ಎನ್ನ ಗತಿ ಮತಿ ನೀನೆ ಕಂಡಯ್ಯಾ

ಎನ್ನ ಅಂತರಂಗದ ಜ್ಯೋತಿ ನೀನೆ ಕಂಡಯ್ಯಾ

ಲಿಂಗದೇವಾ ನೀನೆ ಎನಗೆ ಗುರು ನಾನೇ ನಿಮ್ಮ ಶಿಷ್ಯ.

ಈ ಘಟನೆ ಬಸವಣ್ಣನವರ ಜೀವನದಲ್ಲಿ ಬಹು ಮಹತ್ವದ ಘಟನೆ. ಬಸವಣ್ಣನವರನ್ನು `ಸಂಗನ ಬಸವಣ್ಣ'ನವರಾಗಿ `ಬಸವಲಿಂಗ'ರನ್ನಾಗಿ ಮಾಡಿತು. ದೇವಾನುಗ್ರಹವನ್ನು ಪಡೆದು, ಇಷ್ಟಲಿಂಗವನ್ನು ಧರಿಸಿದ ವಿಶ್ವದ ಪ್ರಥಮ ಲಿಂಗಾಯತರನ್ನಾಗಿ ಮತ್ತು ಲಿಂಗಾಯತ ಧರ್ಮದ ಧರ್ಮಗುರುವನ್ನಾಗಿ ಮಾಡಿತು. ದೇವರ ಕರುಣೆಯ ಕಂದ, ದೇವರ ಪ್ರತಿನಿಧಿಯಾದರು.

ಗುರು ಬಸವಣ್ಣನವರು ದೇವಾನುಗ್ರಹದ ನಂತರ ಮೊದಲು ಮಂಗಳವೇಡೆಗೆ ಬಂದರು. ಅವರು ಅಲ್ಲಿ ಬಲದೇವರಸರ ಮಗಳಾದ ನೀಲಗಗಂಳ ಜೊತೆ ವಿವಾಹವಾದರು. ಮಾವನವರಾದ ಬಲದೇವರಸರ ಬಳಿಗೆ ಬಂದು `ನಾನೊಂದು ಕಾಯಕ ಮಾಡಬೇಕು' ಎಂದರು. ಆಗ ಬಲದೇವರಸರು ``ನೀವು ದುಡಿಯುವ ಅವಶ್ಯಕತೆಯೇ ಇಲ್ಲ. ನನಗಿರುವವಳು ಒಬ್ಬಳೇ ಮಗಳು, ಎಲ್ಲಾ ಆಸ್ತಿ ನಿಮ್ಮದೇ" ಎಂದರು. ಆಗ ಗುರು ಬಸವಣ್ಣನವರು `ತಾನು ಗಳಿಸಿ ತಿನ್ನುವುದು ಶ್ರೇಷ್ಠ, ತಂದೆ ಗಳಿಸಿರುವುದನ್ನು ತಿನ್ನುವುದು ಮಧ್ಯಮ, ಹೆಂಡತಿ ಕಡೆಯಿಂದ ಬರುವ ಸಂಪತ್ತು ಕನಿಷ್ಠವಾದುದು. ಅದಕ್ಕಾಗಿ ನಾನು ದುಡಿದೇ ನನ್ನ ಜೀವನ ನಿರ್ವಹಣೆ ಮಾಡಬೇಕು' ಎಂದರು. ನಂತರ ಬಿಜ್ಜಳನ ಅರಮನೆಯಲ್ಲಿ ಕರಣಿಕ ಕಾಯಕವನ್ನು ಕೈಗೊಂಡರು. ತಮ್ಮ ಪ್ರಾಮಾಣಿಕತೆಯಿಂದ ದಿನದಿಂದ ದಿನಕ್ಕೆ ಮೇಲೆರುತ್ತಾ ಪ್ರಧಾನ ಮಂತ್ರಿಯಾದರು. ನೀಲಗಂಗಳಲ್ಲಿ ಬಾಲಸಂಗಯ್ಯ ಎಂಬ ಮಗನನ್ನು ಪಡೆದರು. ಕೆಲ ಕಾಲದಲ್ಲಿಯೇ ಅವರು ಸಂಪೂರ್ಣವಾಗಿ ವಿರಕ್ತ ಜೀವನಕ್ಕೆ ಕಾಲಿಟ್ಟು ಪತ್ನಿಯನ್ನೂ ಆ ಸ್ತರಕ್ಕೆ ಏರಿಸಿದರು.

ಗುರು ಬಸವಣ್ಣನವರು ತಮ್ಮ ಸಂದೇಶಗಳನ್ನು ವಚನಗಳ ರೂಪದಲ್ಲಿ ಬರೆದಿದ್ದಾರೆ. ಅದರಲ್ಲಿ ಅವರು ಪರಮಾತ್ಮನನ್ನು ``ಲಿಂಗದೇವಾ" ಎಂದು ಕರೆದು ಅವನ ಸ್ವರೂಪದ ವರ್ಣನೆಯನ್ನು ಮಾಡುತ್ತಾರೆ.

ಎತ್ತೆತ್ತ ನೋಡಿದತ್ತತ್ತ ನೀನೆ ದೇವಾ

ಸಕಲ ವಿಸ್ತಾರದ ರೂಹು ನೀನೆ ದೇವಾ

`ವಿಶ್ವತಸ್'ಚಕ್ಷು ನೀನೆ ದೇವಾ

`ವಿಶ್ವತೋಮುಖ' ನೀನೆ ದೇವಾ

`ವಿಶ್ವತೋ ಬಾಹು' ನೀನೆ ದೇವಾ

`ವಿಶ್ವತಃ ಪಾದ' ನೀನೆ ದೇವಾ ಲಿಂಗದೇವಾ.

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು

ಆದಿಮಧ್ಯಾವಸಾಗಳಿಲ್ಲದ ಸ್ವತಂತ್ರ ಲಿಂಗವು

ನಿತ್ಯ ನಿರ್ಮಳ ಲಿಂಗವು, ಅಯೋನಿ ಸಂಭವನಯ್ಯಾ

ನಮ್ಮ ಲಿಂಗದೇವರು.

   ಗುರುಬಸವಣ್ಣನವರು ಕಲ್ಯಾಣದಲ್ಲಿ ಅಂದು ಸಂಪೂರ್ಣವಾಗಿ ವೇಶ್ಯಾವಾಟಿಕೆಯನ್ನು ನಿಲ್ಲಿಸಿದರು. ತಮ್ಮ ಅನುಯಾಯಿ ಧರ್ಮ ಪ್ರಚಾರಕರನ್ನು ಅಲ್ಲಿಗೆ ಕಳಿಸಿ ವೇಶ್ಯೆಯರ ಮನ ಪರಿವರ್ತನೆ ಮಾಡಿರುವುದನ್ನು ಕಾಣುತ್ತೇವೆ. ಮಾಯಾದೇವಿ ಎನ್ನುವವಳು ರಾಜ ನರ್ತಕಿಯಾಗಿದ್ದು, ಬಹುದೊಡ್ಡ ಶ್ರೀಮಂತ ವೇಶ್ಯೆಯಾಗಿದ್ದಳು. ಅವಳನ್ನು ಪರಿವರ್ತನೆ ಮಾಡಲು ಜಂಗಮರು ಹೋದಾಗ ಅವಳು ಬಸವಣ್ಣನವರ ಪತ್ನಿ ನೀಲಾಂಬಿಕೆ ತಾಯಿಯವರ ತವರು ಮನೆಯವರು ನೀಡಿದ ಧಾರೆಯ ಸೀರೆಯನ್ನು ಕೇಳುತ್ತಾಳೆ. ಜಂಗಮರು ಬಂದು ಗುರುಬಸವಣ್ಣನವರಿಗೆ ಈ ವಿಷಯ ತಿಳಿಸುತ್ತಾರೆ. ಆಗ ಬಸವಣ್ಣನವರು ``ನಿನ್ನ ಮಗಳು ಉದ್ಧಾರವಾಗಲೆಂದು ಹರಸಿ ಕೊಡು" ಎಂದು ತಮ್ಮ ಪತ್ನಿ ನೀಲಾಂಬಿಕೆಯವರಿಗೆ ಹೇಳುತ್ತಾರೆ. ಜಂಗಮರು ಸೀರೆಯನ್ನು ತಂದು ಮಾಯಾದೇವಿಗೆ ಕೊಟ್ಟರು. ಆ ಸೀರೆಯನ್ನು ತೆಗೆದುಕೊಂಡು ಉಟ್ಟ ತಕ್ಷಣವೇ ಮಾಯಾದೇವಿಯು ಸಂಪೂರ್ಣವಾಗಿ ಪರಿವರ್ತನೆಗೊಂಡಳು. ಜಂಗಮರ ಪಾದಕ್ಕೆ ಶರಣಾರ್ಥಿಗಳನ್ನು ಸಲ್ಲಿಸಿ ವೇಶ್ಯಾ ವೃತಿಯನ್ನು ಬಿಟ್ಟು ಬಿಟ್ಟಳು.ಬಸವ ಧರ್ಮದ ಅನುಯಾಯಿಯಾಗಿ ಅನುಭಾವಮಂಟಪದ ಶರಣೆಯಾಗಿ ವಚನಗಳನ್ನು ಬರೆದಿದ್ದಾಳೆ. ಈ ರೀತಿ ಪರಿವರ್ತನೆಗೊಂಡು, ವಚನ ರಚನೆ ಮಾಡಿರುವವರಲ್ಲಿ ಸೂಳೆ ಸಂಕವ್ವೆ ಎನ್ನುವ ಶರಣೆ ಕೂಡ ಇದ್ದಾಳೆ.
   ಗುರು ಬಸವಣ್ಣನವರು ತಮ್ಮ ಜೀವಿತಾವಧಿಯಲ್ಲಿ 88 ಪವಾಡಗಳನ್ನು ಜಗದ್ಹಿತಾರ್ಥವಾಗಿ ಮಾಡಿದ್ದಾರೆ. ಇದು ಹರಿಹರನ ಬಸವರಾಜದೇವರ ರಗಳೆಯಲ್ಲಿ ಪ್ರಸ್ತಾವನೆಯಾಗಿದೆ ಮತ್ತು ಸ್ವತಃ ಗುರುಬಸವಣ್ಣನವರೇ ತಮ್ಮ ವಚನಗಳಲ್ಲಿ 88 ಪವಾಡಗಳನ್ನು ಮಾಡಿರುವ ಬಗ್ಗೆ ಹೇಳುತ್ತಾರೆ.
  ಮಹಾದೇವ ಭೂಪಾಲನೆಂಬ ಅರಸನು ಕಾಶ್ಮೀರ ರಾಜ್ಯವನ್ನು ಆಳುತ್ತಿದ್ದನು. ಅವನು ಅಪ್ರತಿಮ ಶಿವಭಕ್ತ. ದಿನ ನಿತ್ಯವೂ 12000 ಜಂಗಮರಿಗೆ ಊಟ ಮಾಡಿಸಿಯೇ ತಾನು ಊಟ ಮಾಡುವ ನಿಯಮವನ್ನು ಹಾಕಿಕೊಂಡಿದ್ದ. ದಿನ ನಿತ್ಯ 12000 ಜಂಗಮರನ್ನು ಎಲ್ಲಿಂದ ಹುಡುಕಿ ತರುವುದು? ಅದಕ್ಕಾಗಿ ಅವರೆಲ್ಲರನ್ನು ಒಂದೇ ಕಡೆ ಅರಮನೆಯ ಒಂದು ಭಾಗದಲ್ಲಿ ಇರಿಸಿಕೊಂಡಿದ್ದ. ಅವರು 3 ಹೊತ್ತು ಊಟ ಮಾಡಬೇಕು, ಉಳಿದ ಸಮಯದಲ್ಲಿ ಪೂಜೆ, ಭಜನೆಗಳನ್ನು ಮಾಡಬೇಕಾಗಿತ್ತು. ಅವರಿಗೆ ಯಾವುದೇ ಕೆಲಸವಿರಲಿಲ್ಲ. ಗುರುಬಸವಣ್ಣನವರು ಒಮ್ಮೆ ದೇಶ ಸಂಚಾರ ಕೈಗೊಂಡಿರುತ್ತಾರೆ. ಕಾಶ್ಮೀರಕ್ಕೆ ಹೋದಾಗ ಈ ವಿಷಯ ಗೊತ್ತಾಯಿತು ಅಲ್ಲಿ 12000 ಜಂಗಮರಿಗೆ ಕಾಯಕದ ಮಹತ್ವವನ್ನು ತಿಳಿಸಿ ಅವರ ಹೃದಯ ಪರಿವರ್ತನೆ ಮಾಡಿದರು. ಆಗ 12000 ಜಂಗಮರೆಲ್ಲರೂ ಗುರುಬಸವಣ್ಣನವರ ಜೊತೆಯಲ್ಲಿ ಕಲ್ಯಾಣಕ್ಕೆ ಬಂದು ಕಾಯಕ ನಿರತರಾದರು. ಈ ರೀತಿ ಅರಮನೆಯ ಬಂಧನದಲ್ಲಿರುವವರನ್ನು ಗುರು ಮನೆಗೆ ಕರೆತಂದರು. ಇದು 12000 ಜಂಗಮರನ್ನು ಒಂದು ಚೀಲದಲ್ಲಿ ಹಿಡಿದು ತಂದ ಪವಾಡ ಎಂದು ಪ್ರಸಿದ್ಧವಾಗಿದೆ. ಇಲ್ಲಿ ಚೀಲವೆಂದರೆ ಗುರುಬಸವಣ್ಣನವರ ಹೃದಯದ ಚೀಲ ಎಂದು ತಿಳಿದುಕೊಳ್ಳಬೇಕು.ಆಗ ಮಹಾದೇವ ಭೂಪಾಲನಿಗೆ ಈ ವಿಷಯ ತಿಳಿದು. ತನ್ನ ದೂತನನ್ನು ಕಲ್ಯಾಣಕ್ಕೆ ಕಳುಹಿಸಿ 12000 ಜಂಗಮರನ್ನು ಕರೆದುಕೊಂಡು ಬರಲು ಹೇಳುತ್ತಾನೆ. ಆ ದೂತನು ಇಲ್ಲಿಗೆ ಬಂದ ಮೇಲೆ ಗುರುಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ, ಕಲ್ಯಾಣದಲ್ಲಿಯೇ ಉಳಿದು ಬಿಡುತ್ತಾನೆ. ತನ್ನ ದೂತ ಬರದೇ ಇರುವುದನ್ನು ನೋಡಿ ``ಬಸವಣ್ಣನವರಲ್ಲಿ ಯಾವ ಶಕ್ತಿ ಇರಬಹುದು? ಜನರು ಯಾಕೆ ಅವರ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾರೆ?" ಎಂದು ಆಲೋಚಿಸಿದ. ನಂತರ ತನ್ನ ಅರಸೊತ್ತಿಗೆಯನ್ನು ಮಗನಿಗೆ ವಹಿಸಿಕೊಟ್ಟು ಪತ್ನಿ ಮಹಾದೇವಿಯೊಂದಿಗೆ ಕಲ್ಯಾಣಕ್ಕೆ ಆಗಮಿಸುತ್ತಾನೆ. ಗುರುಬಸವಣ್ಣನವರ ತತ್ವಗಳಿಗೆ ಮಾರು ಹೋಗಿ ಕಲ್ಯಾಣದಲ್ಲಿಯೇ ಉಳಿದು ಕಟ್ಟಿಗೆ ಒಡೆದು ಮಾರುವ ಕಾಯಕ ಮಾಡುತ್ತ ಶರಣರ ಸಂಗದಲ್ಲಿ ಬೆರೆಯುತ್ತಾ ಜೀವನ ನಡೆಸುತ್ತಾರೆ.

ಗುರುಬಸವಣ್ಣನವರು ತೀರ್ಥ ಕ್ಷೇತ್ರಗಳನ್ನು ತಿರಸ್ಕರಿಸಿದರು ಮಾತ್ರವಲ್ಲದೆ ಶಿವಭಕ್ತನಿರುವ ಠಾವನ್ನು ಕೈಲಾಸವನ್ನಾಗಿ, ಭಕ್ತನ ಅಂಗಳವನ್ನೇ ವಾರಣಾಸಿಯನ್ನಾಗಿ ಮಾಡಿದ ದಿವ್ಯ ಪುರುಷರು. ನೀನು ಹುಡುಕಿಕೊಂಡು ಹೋಗುವ ಕ್ಷೇತ್ರ, ಗುಡಿ ಗುಂಡಾರಗಳಿಗೆ ನಾಶವಿದೆ. ಅದಕ್ಕಾಗಿ ಜಂಗಮ ದೇವಾಲಯನ್ನು ನೀನು ಕಟ್ಟು ಎಂದು ತಿಳಿಸಿ ದೇಹವನ್ನು ದೇವಾಲಯವನ್ನಾಗಿಸುವ ಇಷ್ಟಲಿಂಗವನ್ನು ದಯಪಾಲಿಸಿದರು.

ಗುರು ಬಸವಣ್ಣನವರು

ಸಂಸಾರವೆಂಬುದೊಂದು ಗಾಳಿಯಸೊಡರು,

ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ;

ಇದನೆಚ್ಚಿ ಕೆಡಬೇಡ, ಸಿರಿಯೆಂಬುದ

ಮರೆಯದೇ ಪೂಜಿಸು ನಮ್ಮ ಲಿಂಗದೇವನ.

ಎಂದು ಹೇಳಿ ಅನೇಕರನ್ನು ಪರಿವರ್ತನೆ ಮಾಡಿರುವುದನ್ನು ಕಾಣುತ್ತೇವೆ. ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಅನೇಕ ಜನ ಶ್ರೀಮಂತರೂ, ಬಡವರೂ, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ, ಅಫಘಾನಿಸ್ಥಾನದಿಂದ ಒರಿಸ್ಸಾವರೆಗಿನ ಭೂಭಾಗದಿಂದೆಲ್ಲ ಜನ ಬಂದು ಪರಿವರ್ತನೆಯಾಗಿ ಲಿಂಗಾಯತ ಧರ್ಮದ ಅನುಯಾಯಿಯಾಗಿ ಬಸವ ಕಲ್ಯಾಣದಲ್ಲಿ ನೆಲೆಸಿರುವುದನ್ನು ಕಾಣುತ್ತೇವೆ.

ಗುರು ಬಸವಣ್ಣನವರು ತಾವು ಸ್ವತಃ ಕಾಯಕ ಜೀವಿಯಾಗಿ ಕಲ್ಯಾಣದಲ್ಲಿ ನೆಲೆನಿಂತರು. ಬಸವಣ್ಣನವರು ತಮ್ಮ ತತ್ತ್ವ ಪ್ರಚಾರಕ್ಕಾಗಿ ಹೆಚ್ಚು ಸಂಚರಿಸಿರುವುದು ಕಂಡು ಬರುವುದಿಲ್ಲ. ಬದಲಾಗಿ ಅವರ ತತ್ತ್ವ ಮತ್ತು ವ್ಯಕ್ತಿತ್ವಗಳಿಗೆ ಮಾರುಹೋಗಿ ಅನೇಕ ಜನ ಸಾಧಕರು ಸಿದ್ಧಪುರುಷರು, ಅಲ್ಲಮ ಪ್ರಭುದೇವರು, ಸಿದ್ಧರಾಮೇಶ್ವರಂತಹ ದಿಗ್ಗಜರು ಅಕ್ಕಮಹಾದೇವಿಯಂತಹ ವೀರ ವೀರಾಗಿಣಿ ದೇವಕೋಗಿಲೆ ಮತ್ತು ಭಾರತದ ಭೂಭಾಗದಿಂದೆಲ್ಲ ಜನ ತಂಡೋಪತಂಡವಾಗಿ ಬಸವ ಕಲ್ಯಾಣಕ್ಕೆ ಹರಿದು ಬಂದಿರುವುದನ್ನು ಕಾಣುತ್ತೇವೆ.

ಗುರು ಬಸವಣ್ಣನವರು ತಾವು ಜೀವಿಸಿದ ಕಾಲದಲ್ಲಿಯೇ ದೇವರ ಹೆಸರಿನಿಂದ ಕರೆಯಲ್ಪಡುವ ``ಲಿಂಗಾಯತ" ಎನ್ನುವ ಪರಿಪೂರ್ಣ ಧರ್ಮವನ್ನು ಕೊಟ್ಟು ತಾವು ಧರ್ಮ ಗುರುವಾದರು, ಧರ್ಮಪಿತರಾದರು. ತಾವು ಸ್ಥಾಪಿಸಿದ ಈ ಧರ್ಮ ನಿರಂತರವಾಗಿ ಜಗತ್ತನ್ನು ಬೆಳಗಬೇಕು ಎನ್ನುವ ಉದ್ದೇಶದಿಂದ, ಬಸವ ಕಲ್ಯಾಣದಲ್ಲಿ ಅನುಭವ ಮಂಟಪದಲ್ಲಿ `ಶೂನ್ಯಪೀಠ'ವೆಂಬ ಲಿಂಗಾಯತ ಧರ್ಮದ ಪ್ರಥಮ ಧರ್ಮಪೀಠವನ್ನು ನಿರ್ಮಿಸಿದರು. ಅದಕ್ಕೆ ತಾವೇ ಪೀಠಾಧಿಕಾರಿಯಾಗಲಿಲ್ಲ. ಸರ್ವಸಮಾನತೆಯ ತತ್ತ್ವವನ್ನು ಪ್ರಾಯೋಗಿಕವಾಗಿ ಸಾರಲು, ಪ್ರಚಲಿತವಿದ್ದ ಜಾತಿಯತೆಯ ವರ್ಣ ವ್ಯವಸ್ಥೆಯಲ್ಲಿ, ಅತ್ಯಂತ ಕೆಳಸ್ತರದಿಂದ ಬಂದ e್ಞÁನಿಯಾದ ವಿರಾಗಿಯಾದ ಅಲ್ಲಮಪ್ರಭುದೇವರನ್ನು ಪ್ರಥಮ ಶೂನ್ಯ ಪೀಠಾಧಿಕಾರಿಯನ್ನಾಗಿ ನೇಮಿಸಿ ತಮ್ಮ ಘನವ್ಯಕ್ತಿತ್ವವನ್ನು ಮೆರೆದರು. ಪರಿಪೂರ್ಣ ಧರ್ಮದ ರೂಪರೇಷೆಗಳನ್ನು ಕೊಟ್ಟು ಧರ್ಮಸಂಹಿತೆಯಾಗಿ ವಚನ ಸಾಹಿತ್ಯವನ್ನು ಕೊಟ್ಟು ಪ್ರಚಲಿತವಿದ್ದ ಎಲ್ಲಾ ಮೂಢ ಆಚರಣೆಗಳನ್ನು ತಿರಸ್ಕರಿಸಿ ಹೊಸ ಪಥವನ್ನು ಕೊಟ್ಟರು. ಮಿಗಿಲಾಗಿ ವರ್ಣಾಂತರ ವಿವಾಹವನ್ನು ಮಾಡಿ ಎಲ್ಲ ರೀತಿಯಲ್ಲಿ ಸಮಾನತೆಯನ್ನು ಸಾಧಿಸಿ ಗುರು ಬಸವಣ್ಣನವರು ಅಂದು ಒಂದು ಪರಿಪೂರ್ಣವಾದ ಧರ್ಮವನ್ನು ಕೊಟ್ಟು ಕಲ್ಯಾಣ ರಾಜ್ಯವನ್ನು ಕಟ್ಟಿ ತೋರಿಸಿದರು. ಅನುಭಾವ ಮಂಟಪದಂಥ ಸಂಸ್ಥೆಯನ್ನು ಗುರುಬಸವಣ್ಣನವರೊಬ್ಬರು ಬಿಟ್ಟರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಪ್ರವಾದಿಯಾಗಲೀ, ಮಹಾತ್ಮರಾಗಲೀ ಕಟ್ಟಿರುವುದನ್ನು ನಾವು ಕಾಣುವುದಿಲ್ಲ. ಅನುಭವ ಮಂಟಪವು ಕೇವಲ e್ಞÁನಪಾಂಡಿತ್ಯಗಳಿಂದ ಕೂಡಿದ ಪಂಡಿತರ ವಾದದ ಸಂತೆಯಾಗಿರಲಿಲ್ಲ ಅಥವಾ ಕೇವಲ ಸನ್ಯಾಸಿಯಾದವರು ಇರುವ ಒಂದು ಮಠವಾಗಿರಲಿಲ್ಲ. ಅದು ಸಾಧಕರ ತರಬೇತಿ ಶಾಲೆಯಾಗಿತ್ತು. ಕಾಯಕ ಜೀವಿಗಳ ಪರಮ ಕೂಟವಾಗಿತ್ತು. ಸಂಸಾರಯೋಗಿಗಳ ಸಂಗಮವಾಗಿತ್ತು.

ಗುರುಬಸವಣ್ಣನವರು ಅನುಭಾವ ಮಂಟಪದಲ್ಲಿ ಶೂನ್ಯ ಪೀಠವನ್ನು ಸ್ಥಾಪನೆ ಮಾಡಿ ಅಲ್ಲಿ ದಿನನಿತ್ಯವೂ 3 ಸಲ ಅನುಭಾವ ಗೋಷ್ಠಿಯನ್ನು ಏರ್ಪಡಿಸುತ್ತಿದ್ದರು. ವ್ಯಕ್ತಿ ಮತ್ತು ಸಮಾಜದ ಓರೆಕೋರೆಗಳನ್ನು ತಿದ್ದಲು ಅಲ್ಲಿ ಪ್ರಯೋಗಗಳು ನಡೆಯುತ್ತಿದ್ದವು. ಯಾವುದೇ ಜಾತಿ ಮತ ಪಂಗಡಗಳ ಬೇಧವಿಲ್ಲದೆ ಜನರು ಅಲ್ಲಿಗೆ ಬರುತ್ತಿದ್ದರು. ಅನುಭಾವ ಮಂಟಪವು ಆಧ್ಯಾತ್ಮಿಕ ವಿಶ್ವವಿದ್ಯಾಲಯವಾಗಿತ್ತು. ಅನುಭಾವ ಮಂಟಪದ ಮುಖಾಂತರವೇ ಗುರುಬಸವಣ್ಣನವರು ಅನೇಕ ಸಮಾಜ ಸುಧಾರಣೆಯ ಕಾರ್ಯಗಳನ್ನು ಮಾಡಿದರು.

ವರ್ಣಾಂತರ ವಿವಾಹ ನೆರವೇರಿಸಿದ್ದಕ್ಕಾಗಿ ಸಂಪ್ರದಾಯ- ವಾದಿಗಳಿಂದ ಪ್ರಚೋದಿತನಾದ ಅರಸ ಬಿಜ್ಜಳನಿಂದ ಗಡಿಪಾರು ಶಿಕ್ಷೆಯನ್ನು ಗುರು ಬಸವಣ್ಣನವರು ಸ್ವೀಕರಿಸಿದರು.

ಕರೆದು ಆಶೀರ್ವದಿಸಿ | ಹರಸಿ ಒಪ್ಪಿಸಿ ಬಸವ

ವರಚೆನ್ನ ಬಸವ ಶರಣರಿಗೆ | ಕಂಟಕವು

ಹುರಿಯಾಳು ಕಾಯೋ ಹೊಸ ಮತವ ||

ಎಂದು ಧರ್ಮದ ಕಾರ್ಯ ಕಲಾಪಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಚೆನ್ನಬಸವಣ್ಣನವರಿಗೆ ಒಪ್ಪಿಸಿ ಕೂಡಲ ಸಂಗಮ ಸುಕ್ಷೇತ್ರಕ್ಕೆ ಬರುತ್ತಾರೆ. ಅಲ್ಲಿ ಕೆಲಕಾಲ ನೆಲೆಸುತ್ತಾರೆ. ಲಿಂಗಾಂಗ ಯೋಗದಲ್ಲಿ ತಲ್ಲೀನರಾಗಿ ದಿನ ನಿತ್ಯವೂ ತಮ್ಮ ಕಲ್ಲಿನ ಗವಿಯಲ್ಲಿ ಇಷ್ಟಲಿಂಗ ಪೂಜೆ, ತ್ರಾಟಕ ಯೋಗದಲ್ಲಿ ತಲ್ಲೀನರಾಗಿ, ಅಂಗ ಲಿಂಗವೆಂಬ ಸೀಮೆಯನ್ನು ದಾಟಿ ಲಿಂಗವೇ ತಾವಾಗಿದ್ದಾರೆ, ಆಗ ಅವರ ಮನ ವಚನವೊಂದನ್ನು ನುಡಿಯುತ್ತಿದೆ.

``ಅರಿವನ್ನಕ್ಕರ ಅರ್ಚಿಸದೆ, ಅರಿವನ್ನಕ್ಕರ ಪೂಜಿಸಿದೆ

ಅರಿವನ್ನಕ್ಕರ ಹಾಡಿ ಹೊಗಳಿದೆ, ಅರಿವುಗೆಟ್ಟು ಮರುಹು ನಷ್ಟವಾಗಿ

ಭಾವ ನಿರ್ಭಾವವಾಗಿ ನಿಜವೊಳಕೊಂಡಿತ್ತಾಗಿ

ಲಿಂಗದೇವರಲ್ಲಿ ಸರ್ವನಿವಾಸಿಯಾಗಿರ್ದೆನು"

ಎಂದು ಆನಂದ ಭಾವದಲ್ಲಿದ್ದಾರೆ. ಹೀಗೆಯೇ ಕೆಲವು ದಿನ ಕಳೆದ ಮೇಲೆ, ಒಂದು ದಿನ ಲಿಂಗಪೂಜೆಯಲ್ಲಿ ನಿರತರಾಗಿರುವಾಗ ಅವರಿಗೊಂದು ದಿವ್ಯವಾಣಿ ಕೇಳಿಬರುತ್ತದೆ. ``ಬಸವಣ್ಣಾ ನೀನು ಮತ್ರ್ಯಕ್ಕೆ ಬಂದ ಮಣಿಹ ಪೂರೈಸಿತು. ಇನ್ನು ನೀನು ನನ್ನಲ್ಲಿ ಒಂದಾಗು" ಈ ವಾಣಿಯನ್ನು ಕೇಳಿ ಅತ್ಯಂತ ಹರ್ಷಿತರಾಗಿ ತಮ್ಮ ಬದುಕಿನ ಸಿಂಹಾವಲೋಕನವನ್ನು ಮಾಡಿಕೊಂಡಾಗ ಸಂತೃಪ್ತಿಯ ಅಲೆ ಮುಖದ ಮೇಲೆ ಹಾಯುತ್ತದೆ. ಆಗ ಅವರು ತಮ್ಮ ಬಾಳೀಗ ನಿಷ್ಪತ್ತಿಯ ಹಣ್ಣು. ದೇವನಿಗೆ ಸಲ್ಲಬೇಕಾದುದು ಎನ್ನುತ್ತಾ ವಚನವೊಂದನ್ನು ನುಡಿಯುತ್ತಾರೆ.

ಭಕ್ತಿಯೆಂಬ ಪೃಥ್ವಿಯ ಮೇಲೆ

ಗುರುವೆಂಬ ಬೀಜವಂಕುರಿಸಿ

ಲಿಂಗವೆಂಬ ಎಲೆಯಾಯಿತ್ತು,

ವಿಚಾರವೆಂಬ ಹೂವಾಯಿತ್ತು

ಆಚಾರವೆಂಬ ಕಾಯಾಯಿತ್ತು ;

ನಿಷ್ಪತ್ತಿಯೆಂಬ ಹಣ್ಣಾಯಿತ್ತು

ನಿಷ್ಪತ್ತಿಯೆಂಬ ಹಣ್ಣು ತಾನು ತೊಟ್ಟು

ಕಳಚಿ ಬೀಳುವಲ್ಲಿ ಲಿಂಗದೇವ ತನಗೆ ಬೇಕೆಂದು ಎತ್ತಿಕೊಂಡ.

ಎಂದು ಪ್ರಸನ್ನ ಭಾವದಿಂದ ಹಾಡುತ್ತಾ 1196ನೇ ಜುಲೈ 30ರಂದು ಗುರು ಬಸವಣ್ಣನವರು ಇಚ್ಛಾಮರಣಿಯಾಗಿ ತಮ್ಮ ದೇಹವನ್ನು ತ್ಯಜಿಸಿದರು. ಉರಿಯುಂಡ ಕರ್ಪೂರದಂತೆ, ಸಮುದ್ರವನ್ನು

ಬೆರತ ನದಿಯಂತೆ, ಪರಮಾತ್ಮನೊಡನೆ ಒಡವೆರೆದು ಒಂದಾದರು. ಅಂದಿನಿಂದ ಆ ದಿನ `ಬಸವ ಪಂಚಮಿ'ಯೆಂದು ಖ್ಯಾತಿವೆತ್ತಿದೆ. ನಿರಂತರವಾಗಿ ಗುರುಬಸವಣ್ಣನವರ ಲಿಂಗೈಕ್ಯ ದಿನವನ್ನು ಅಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.

-ಸಚ್ಚಿದಾನಂದ ಚಟ್ನಳ್ಳಿ