ವಿಷಯಕ್ಕೆ ಹೋಗು

ಲಾಲ್ ಮೋಹನ್ ಘೋಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾಲ್ ಮೋಹನ್ ಘೋಷ್ (1849-1909) ಒಬ್ಬ ವಾಕ್ಚತುರ, ದೇಶಪ್ರೇಮಿ, ಹೋರಾಟಗಾರ. 1903ರಲ್ಲಿ ಮದರಾಸಿನಲ್ಲಿ ಸೇರಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ.[]

ಆರಂಭಿಕ ಜೀವನ

[ಬದಲಾಯಿಸಿ]

ಜನನ 1849ರಲ್ಲಿ, ಕೃಷ್ಣಗರ್‌ನಲ್ಲಿ. ತಂದೆ ರಾಮಲೋಚನ ಘೋಷ್ ಬಂಗಾಳ ಸರ್ಕಾರದ ನ್ಯಾಯಿಕ ಅಧಿಕಾರಿಯಾಗಿದ್ದರು. ಅವರು ಉದಾರವಾದಿ, ಪ್ರಗತಿಪರ. ಕಲ್ಕತ್ತ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣರಾಗಿ ಇಂಗ್ಲೆಂಡಿಗೆ ಹೋಗಿ (1869) ಬ್ಯಾರಿಸ್ಟರ್ ಪದವಿ ಗಳಿಸಿ ಭಾರತಕ್ಕೆ ಮರಳಿ 1873ರಲ್ಲಿ ಕಲ್ಕತ್ತದಲ್ಲಿ ವಕೀಲರಾದರು.[]

ನಂತರದ ಜೀವನ

[ಬದಲಾಯಿಸಿ]

ಆ ಕಾಲದಲ್ಲಿ ಲೋಕಸೇವಾ ಪರೀಕ್ಷೆಯ ಪ್ರಶ್ನೆ ಮುಖ್ಯವಾಗಿತ್ತು. ಆ ಪರೀಕ್ಷೆಯ ಅರ್ಹತೆಯ ವಯಸ್ಸನ್ನು 21ರಿಂದ 19ಕ್ಕೆ ಇಳಿಸಿದ್ದುದು ಭಾರತೀಯರು ಆ ಪರೀಕ್ಷೆಗೆ ಕುಳಿತುಕೊಳ್ಳುವುದಕ್ಕೆ ಅಡ್ಡಿಯಾಗಿತ್ತು. ಅಲ್ಲದೆ ಇಂಗ್ಲೆಂಡಿನಲ್ಲಿ ಮಾತ್ರವೇ ಈ ಪರೀಕ್ಷೆಯನ್ನು ನಡೆಸುತ್ತಿದ್ದುದು ಮತ್ತೊಂದು ಅಡಚಣೆಯಾಗಿತ್ತು. ಇದರ ಬಗ್ಗೆ ಒಂದು ಮನವಿಯನ್ನು ಕಾಮನ್ಸ್ ಸಭೆಗೆ ಕಳುಹಿಸಲು ಇಂಡಿಯ ಅಸೋಸಿಯೇಷನ್ ಮತ್ತು ಪುಣೆಯ ಸಾರ್ವಜನಿಕ ಸಭೆ ಸಂಯುಕ್ತವಾಗಿ ನಿರ್ಧರಿಸಿ, ಅದನ್ನು ಕಾಮನ್ಸ್ ಸಭೆಯಲ್ಲಿ ಮಂಡಿಸಲು ಲಾಲ್ ಮೋಹನರನ್ನು ತನ್ನ ಪ್ರತಿನಿಧಿಯಾಗಿ ಚುನಾಯಿಸಿತು. 1879ರಲ್ಲಿ ಲಾಲ್ ಮೋಹನ್ ಇಂಗ್ಲೆಂಡಿಗೆ ಹೋಗಿ ಲಂಡನ್ನಿನಲ್ಲಿ ಜಾನ್ ಬ್ರೈಟನ ಅಧ್ಯಕ್ಷತೆಯಲ್ಲಿ ಈ ಸಮಸ್ಯೆಯ ಬಗ್ಗೆ ಭಾಷಣ ಮಾಡಿದರು. ಅವರ ಭಾಷಣ ಎಲ್ಲ ಸಭಿಕರ ಮೆಚ್ಚುಗೆ ಪಡೆಯಿತು. ಇದರ ಪರಿಣಾಮವಾಗಿ, ಈ ಸಭೆಯಾದ 24 ಗಂಟೆಗಳಲ್ಲೇ ಲೋಕಸೇವಾ ಹುದ್ದೆಗೆ ಸಂಬಂಧಿಸಿದ ನಿಬಂಧನೆಗಳನ್ನು ಕಾಮನ್ಸ್ ಸಭೆಯಲ್ಲಿ ಇಡಲಾಯಿತು.

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

ಭಾರತಕ್ಕೆ ಹಿಂದಿರುಗಿದ ಮೇಲೆ ಲಾಲ್ ಮೋಹನ್ ದೇಶದ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿವಹಿಸಿದರು. 1880ರಲ್ಲಿ ಹತ್ತಿ ಸುಂಕದ ರದ್ದಿನ ಬಗ್ಗೆ ಇಂಡಿಯನ್ ಅಸೋಸಿಯೇಷನ್‍ನ ಮನವಿ ಸಲ್ಲಿಸಲು ಇಂಗ್ಲೆಂಡಿಗೆ ಹೋದರು. ಬ್ರಿಟಿಷ್ ಉದಾರವಾದಿ ನಾಯಕರು ಲಾಲ್ ಮೋಹನರನ್ನು 1884ರಲ್ಲಿ ಡೆಪ್ಟ್‌ಫರ್ಡ್ ಕ್ಷೇತ್ರದಿಂದ ತಮ್ಮ ಪಕ್ಷದ ಉಮೇದುವಾರರನ್ನಾಗಿ ಕಾಮನ್ಸ್ ಸಭೆಗೆ ನಿಲ್ಲಿಸಿದರು. ಚುನಾವಣಾ ಪ್ರಚಾರಕ್ಕಾಗಿ ಬಂಗಾಳದ ಜನ ಸುಮಾರು 11 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿಕೊಟ್ಟರು. ಲಾಲ್ ಮೋಹನ್ ಚುನಾವಣೆಯಲ್ಲಿ ಪರಾಭವ ಹೊಂದಿದರಾದರೂ ಬ್ರಿಟಿಷ್ ಕಾಮನ್ಸ್ ಸಭೆಗೆ ಚುನಾವಣೆಗೆ ನಿಂತ ಪ್ರಥಮ ಭಾರತೀಯರಿವರು.[]

ಭಾರತಕ್ಕೆ ಹಿಂದಿರುಗಿದ ಮೇಲೆ ಲಾಲ್ ಮೋಹನ್ 1890ರಲ್ಲಿ ಕಲ್ಕತ್ತದಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ, ಭಾರತ ಸರ್ಕಾರದ ಸುಧಾರಣೆಗಳ ದೋಷಗಳನ್ನು ಕುರಿತು ಮಾತನಾಡಿದರು.

1903ರಲ್ಲಿ ಮದ್ರಾಸಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಚುನಾಯಿತರಾದರು. ಅವರ ಅಧ್ಯಕ್ಷ ಭಾಷಣ ಕಾಂಗ್ರೆಸ್ ವೇದಿಕೆಯ ಮೇಲೆ ಮಾಡಿದ ಅತ್ಯಂತ ಪರಿಣಾಮಕಾರಿಯಾದ ಭಾಷಣಗಳಲ್ಲೊಂದು ಎಂದು ಪಟ್ಟಾಭಿ ಸೀತಾರಾಮಯ್ಯನವರು ಹೇಳಿದ್ದಾರೆ. ಕಾಂಗ್ರೆಸ್ಸಿನಲ್ಲಿ ನಿರಂಕುಶಾಧಿಕಾರ ಪ್ರವೃತ್ತಿಯನ್ನು ಅಧ್ಯಕ್ಷ ಭಾಷಣದಲ್ಲಿ ಖಂಡಿಸಿದವರಲ್ಲಿ ಇವರೇ ಮೊದಲಿಗರು. ತಮ್ಮ ಭಾಷಣದಲ್ಲಿ ದೇಶದ ಬಡತನ ಮತ್ತು ಕ್ಷಾಮ ಪರಿಸ್ಥಿತಿಯನ್ನು ವಿವರಿಸಿ, ಅದೇ ಸಮಯದಲ್ಲಿ ಬ್ರಿಟಿಷರು ಆಚರಿಸಿದ ಆಡಂಬರಯುತವಾದ ದರ್ಬಾರಿನ ಔಚಿತ್ಯವನ್ನು ಪ್ರಶ್ನಿಸಿದರು.

ಲಾಲ್ ಮೋಹನ್ 1909ರ ಅಕ್ಟೋಬರ್ 18 ರಂದು ಮರಣ ಹೊಂದಿದರು.

ಉಲ್ಲೇಖಗಳು

[ಬದಲಾಯಿಸಿ]
  1. Sengupta, S. Subodh and Basu, Anjali, Vol I (2002). Sansad Bengali Charitavidhan (Bengali). Kolkata: Sahitya Sansad. p. 501. ISBN 81-85626-65-0.{{cite book}}: CS1 maint: multiple names: authors list (link)
  2. Sturgess, H.A.C. (1949). Register of Admissions to the Honourable Society of the Middle Temple, Vol. 2, p. 572.
  3. Bose, K. (1991). 'Lalmohan Ghosh and the Emergence of Indian Nationalism' in Proceedings of the Indian History Congress. Vol. 52, p.553.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: