ವಿಷಯಕ್ಕೆ ಹೋಗು

ರಾಷ್ ಬಿಹಾರಿ ಘೋಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ ಬಿಹಾರಿ ಘೋಷ್ (1845-1921) ಬಂಗಾಳದ ಪ್ರಸಿದ್ಧ ವಕೀಲ, ವಿದ್ವಾಂಸ, ಸಮಾಜಸುಧಾರಕ, ಶಾಸನಕರ್ತ. ಎರಡು ಬಾರಿ ಭಾರತ ರಾಷ್ಟ್ರೀಯ ಕಾಂಗ್ರೇಸ್ಸಿನ ಅಧ್ಯಕ್ಷರಾಗಿದ್ದರು.

ಆರಂಭಿಕ ಜೀವನ

[ಬದಲಾಯಿಸಿ]

ಜನನ 1845ರ ಡಿಸೆಂಬರ್ 23ರಂದು. ಬರ್ದ್ವಾನ್ ಜಿಲ್ಲೆಯ ತೋರಕೋನ ಗ್ರಾಮದಲ್ಲಿ ಹುಟ್ಟಿದರಂದು ಹೇಳಲಾಗಿದೆ. ಅವರ ಮಲತಮ್ಮನ ಹೇಳಿಕೆಯ ಪ್ರಕಾರ ಅವರು ಹುಟ್ಟಿದ್ದು ಖಾಂದಘೋಷ್‌ನಲ್ಲಿ. ತೋರಕೋನ ಅವರ ಹಿರಿಯರ ಸ್ಥಳ. ರಾಷ್ ಬಿಹಾರಿ ಘೋಷರು ಜಗಬಂಧು ಘೋಷರ ಮೊದಲನೆಯ ಹೆಂಡತಿಯ ಮಗ. ಇವರದು ಮಧ್ಯಮ ವರ್ಗದ ಕಾಯಸ್ಥ ವಂಶ. ಸ್ಥಳೀಯ ಪಾಠಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಇವರು ಬರ್ದ್ವಾನ್ ರಾಜ್ ಕೊಲೆಜಿಯೆಟ್ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸಿದರು. ಬಂಕುರದಿಂದ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜ್ ಸೇರಿದರು. ಎಫ್.ಎ.ಯಲ್ಲಿ (1862) ಪ್ರಥಮ ಸ್ಥಾನವನ್ನೂ, ಬಿ.ಎ.ಯಲ್ಲಿ (1865) ಎರಡನೆಯ ಸ್ಥಾನವನ್ನೂ ಗಳಿಸಿದ ಇವರು ಇಂಗ್ಲಿಷ್ ಎಂ.ಎ.ಯಲ್ಲಿ ಪ್ರಥಮ ಶ್ರೇಣಿಯನ್ನೂ, ಚಿನ್ನದ ಪದಕವನ್ನೂ ಸಂಪಾದಿಸಿದರು (1867). 1871ರಲ್ಲಿ ನ್ಯಾಯಶಾಸ್ತ್ರದ ಆನರ್ಸ್-ಇನ್-ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರಿಗೆ 1884ರಲ್ಲಿ ಡಾಕ್ಟರ್ ಆಫ್ ಲಾಸ್ ಪದವಿ ದೊರಕಿತು.[] ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯಬೇಕೆಂಬುದು ಇವರ ಅಭಿಲಾಷೆಯಾಗಿತ್ತು. ಆದರೆ ಇವರು ಅಲ್ಲಿಗೆ ಹೋಗಲು ಇವರ ಬಂಧುಗಳು ಒಪ್ಪಲಿಲ್ಲ.

ನಂತರದ ಜೀವನ

[ಬದಲಾಯಿಸಿ]

ಕಲ್ಕತ್ತದಲ್ಲಿ ವಕೀಲರಾಗಿ ಇವರು ಚೆನ್ನಾಗಿ ಹಣ ಸಂಪಾದಿಸಿದರು.

ರಾಷ್ ಬಿಹಾರಿ ಘೋಷರಿಗೆ ಸಾಹಿತ್ಯದಲ್ಲಿ ವಿಶೇಷವಾದ ಅಭಿರುಚಿಯಿತ್ತು. ಕಲ್ಕತ್ತ ವಿಶ್ವವಿದ್ಯಾಲಯದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡ ಘೋಷರು 1879ರಲ್ಲಿ ಅದರ ಫೆಲೊ ಆದರು. 1893-1895ರಲ್ಲಿ ನ್ಯಾಯ ವಿಭಾಗದ ಅಧ್ಯಕ್ಷರೂ 1887-1899ರಲ್ಲಿ ಸಿಂಡಿಕೇಟ್ ಸದಸ್ಯರೂ ಆಗಿದ್ದರು. ಗೋಖಲೆಯವರು ಪ್ರತಿಪಾದಿಸಿದ ಕಡ್ಡಾಯ ಶಿಕ್ಷಣ ಯೋಜನೆಯನ್ನು ಇವರೂ ಅನುಮೋದಿಸಿದರು. ಸ್ವದೇಶಿ ಚಳವಳಿಯ ಕಾಲದಲ್ಲಿ ಇವರು ರಾಷ್ಟ್ರೀಯ ಶಿಕ್ಷಣ ಚಳವಳಿಗೆ ಬೆಂಬಲ ಸೂಚಿಸಿದರು. 1906-1921ರಲ್ಲಿ ಇವರು ರಾಷ್ಟ್ರೀಯ ಶಿಕ್ಷಣ ಮಂಡಲಿಯ ಅಧ್ಯಕ್ಷರಾಗಿದ್ದರು. ಸ್ತ್ರೀ ವಿದ್ಯಾಭ್ಯಾಸವನ್ನು ಇವರು ವಿಶೇಷವಾಗಿ ಪ್ರೋತ್ಸಾಹಿಸಿದರು.

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

1905ರ ವರೆಗೂ ರಾಷ್ ಬಿಹಾರಿ ಘೋಷರು ನೇರವಾಗಿ ರಾಜಕೀಯವನ್ನು ಪ್ರವೇಶಿಸಲಿಲ್ಲ. ಅವರು ಆ ವರ್ಷ ಕಲ್ಕತ್ತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವೈಸ್‍ರಾಯ್ ಲಾರ್ಡ್ ಕರ್ಜನ್ ಮಾಡಿದ ಕೆಲವು ಟೀಕೆಗಳನ್ನು ಪ್ರತಿಭಟಿಸಲು ಸೇರಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. 1906ರ ಅಂತ್ಯಭಾಗದಲ್ಲಿ ಕಲ್ಕತ್ತೆಯಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಬಂಗಾಳದ ವಿಭಜನೆಯ ಹಿನ್ನೆಲೆಯಲ್ಲಿ ಸೇರಿದ ಸಭೆ ಸಂಪ್ರದಾಯದ ಸಮಾವೇಶಗಳಂತಿರಲಿಲ್ಲ. ಕಾಂಗ್ರೆಸ್ಸಿನ ಸದಸ್ಯರಲ್ಲಿ ಆ ಸಂಸ್ಥೆಯ ಧ್ಯೇಯದ ಬಗ್ಗೆ ಮತ್ತು ಅದನ್ನು ಸಾಧಿಸುವ ಮಾರ್ಗದ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಮಿತವಾದಿಗಳು ಸೌಮ್ಯ ಮಾರ್ಗಗಳನ್ನು ಅನುಸರಿಸಬೇಕೆಂದೂ, ಉಗ್ರಪಂಥಿಗಳು ಕ್ರಾಂತಿಕಾರಕ ದಾರಿಯನ್ನು ಹಿಡಿಯಬೇಕೆಂದೂ ಮಹಾಸಭೆಯನ್ನು ಒತ್ತಾಯಪಡಿಸಿದರು. ಹೀಗೆ ವಿಭಿನ್ನವಾದ ಅಭಿಪ್ರಾಯಗಳು ಕಲ್ಕತ್ತೆಯ ಅಧಿವೇಶನದಲ್ಲಿ ವ್ಯಕ್ತವಾದರೂ ಅಲ್ಲಿ ಮಿತವಾದಿ ಮತ್ತು ತೀವ್ರಗಾಮಿಗಳ ನಡುವೆ ಒಂದು ಒಡಂಬಡಿಕೆ ಆಯಿತು. ಈ ಒಪ್ಪಂದದ ಪರಿಣಾಮವಾಗಿ ಕಾಂಗ್ರೆಸ್ ತನ್ನ ಏಕತೆಯನ್ನು ಕಳೆದುಕೊಳ್ಳಲಿಲ್ಲ. ಮಿತವಾದಿಗಳ ವಾದವನ್ನು ಪ್ರತಿಬಿಂಬಿಸುವ ಸ್ವಾಗತ ಭಾಷಣವನ್ನು ರಾಷ್ ಬಿಹಾರಿ ಘೋಷ್ ಮಾಡಿದರು. ಅವರ ಭಾಷಣ ಮುಖ್ಯವಾಗಿ ಬಂಗಾಳದ ವಿಭಜನೆ, ಸ್ವದೇಶಿ, ರಾಷ್ಟ್ರೀಯ ವಿದ್ಯಾಭ್ಯಾಸ ಮತ್ತು ಬಹಿಷ್ಕಾರವನ್ನು ಕುರಿತದ್ದಾಗಿತ್ತು.

1907ರಲ್ಲಿ ಸೂರತ್ತಿನಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ರಾಷ್ ಬಿಹಾರಿ ಘೋಷ್ ಅಧ್ಯಕ್ಷರಾಗಿದ್ದರು. ತೀವ್ರಗಾಮಿಗಳು ಮತ್ತು ಮಿತಗಾಮಿಗಳ ನಡುವಣ ಭಿನ್ನತೆಯಿಂದಾಗಿ ಆ ಅಧಿವೇಶನಲ್ಲಿ ಗೊಂದಲವುಂಟಾಗಿ ಅದು ನಡುವೆಯೇ ಕೊನೆಗೊಂಡಿತು. ಮರುವರ್ಷ ಮದ್ರಾಸಿನ ಅಧಿವೇಶನಕ್ಕೆ ಅವರು ಅಧ್ಯಕ್ಷರಾಗಿದ್ದರು.

ರಾಷ್ ಬಿಹಾರಿ ಘೋಷ್ ಮಿತಗಾಮಿಗಳಾಗಿದ್ದರು. ಸ್ವದೇಶಿ ಚಳವಳಿಯಲ್ಲಿ ಅವರಿಗೆ ತುಂಬ ನಂಬಿಕೆಯಿತ್ತು. ವಿದೇಶಿಯರ ದ್ವೇಷವಿಲ್ಲದ, ಸ್ವದೇಶದ ಅಭಿಮಾನದಿಂದ ಕೂಡಿದ, ಸ್ವದೇಶಿ ಚಳವಳಿಯನ್ನು ಅವರು ಪ್ರತಿಪಾದಿಸುತ್ತಿದ್ದು, ಸಂವಿಧಾನಬದ್ಧ ಕ್ರಮಗಳಿಂದಲೇ ಇದನ್ನು ಸಾಧಿಸಬಹುದೆಂಬುದು ಅವರ ನಂಬಿಕೆಯಾಗಿತ್ತು. ಭಾರತದಲ್ಲಿ ಬ್ರಿಟಿಷ್ ಆಡಳಿತ ಒಂದು ವರವೆಂದೇ ಅವರು ಭಾವಿಸಿದ್ದರು. ಬ್ರಿಟಿಷರು ಭಾರತಕ್ಕೆ ವಿಜೇತರಾಗಿ ಬರಲಿಲ್ಲ; ಅನಾಯಕತ್ವವನ್ನು ತೊಡೆದು ಸುವ್ಯವಸ್ಥೆ ಸ್ಥಾಪಿಸಲು ಬಂದರು. ಅದು ಈಗ ಸಾಧಿತವಾಗಿರುವುದರಿಂದ ಅವರು ಭಾರತಕ್ಕೆ ಸ್ವಯಮಾಡಳಿತ ಕೊಟ್ಟೇ ಕೊಡುತ್ತಾರೆ. ಬ್ರಿಟಿಷ್ ಸಾಮ್ರಾಜ್ಯದೊಳಗೆ ಸ್ವಯಮಾಡಳಿತ ಸ್ಥಾಪಿಸುವುದೇ ನಮ್ಮ ಗುರಿ-ಎಂಬುದು ಅವರ ಭಾವನೆಯಾಗಿತ್ತು.

ಬ್ರಿಟಿಷ್ ಸರ್ಕಾರ ಮುಕ್ತವ್ಯಾಪಾರ ತತ್ತ್ವಗಳನ್ನು ಅನುಸರಿಸುತ್ತಿರುವುದರಿಂದ ಅದು ಭಾರತದ ಕೈಗಾರಿಕೆಗಳಿಗೆ ರಕ್ಷಣೆ ದೊರಕಿಸಿಕೊಡಲಿಲ್ಲವೆಂದು ಅವರು ಭಾವಿಸಿದ್ದರು. ಆದ್ದರಿಂದ ಅವರು ಸ್ವದೇಶಿ ಚಳವಳಿಯ ಮೂಲಕ ಭಾರತದ ಆರ್ಥಿಕ ಹಿತಗಳನ್ನು ರಕ್ಷಿಸಲು ಯತ್ನಿಸಿದರು. ಬ್ರಿಟಷ್ ವಸ್ತುಗಳನ್ನು ಬಹಿಷ್ಕರಿಸುವುದರಿಂದ ಇದನ್ನು ಸಾಧಿಸಿದಂತಾಗುವುದಿಲ್ಲ. ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದರಿಂದ ಇದು ಸಾಧ್ಯ. ಭಾರತೀಯ ಕೈಗಾರಿಕೆಗಳಲ್ಲಿ ಬಂಡವಾಳವನ್ನು ತೊಡಗಿಸಬೇಕೆಂದು ಅವರು ಹೇಳಿದರಲ್ಲದೆ, ಅವರೇ ಒಂದು ಕೈಗಾರಿಕೆಗೆ ಧನಪೋಷಣೆ ಮಾಡಿದರು.

ರಾಷ್ ಬಿಹಾರಿ ಘೋಷರು 1891-1896 ಮತ್ತು 1906-1907ರಲ್ಲಿ ಭಾರತ ವಿಧಾನಮಂಡಲಿಯ ಸದಸ್ಯರಾಗಿದ್ದರು. ಹಿಂದೂ ಮುಸ್ಲಿಂ ಕುಟುಂಬಗಳ ಪಾಲು, ಋಣಿಗಳು ತಮ್ಮ ಸ್ವತ್ತನ್ನು ಮತ್ತೆ ಕೊಳ್ಳುವ ಹಕ್ಕು ಮುಂತಾದ ಹಲವು ವಿಧೇಯಕಗಳನ್ನು ಕುರಿತ ಚರ್ಚೆಗಳಲ್ಲಿ ಅವರು ಭಾಗವಹಿಸಿದರು. ಸಿವಿಲ್ ಪ್ರಕ್ರಿಯಾ ಸಂಹಿತೆಯ ವಿಧೇಯಕದ ರಚನೆಯಲ್ಲಿ ಅವರು ವಹಿಸಿದ ಪಾತ್ರ ಪ್ರಮುಖವಾಗಿತ್ತು.

ರಾಷ್ ಬಿಹಾರಿ ಘೋಷರು ಬ್ರಿಟಿಷ್ ಸರ್ಕಾರದಲ್ಲಿ ನಂಬಿಕೆಯಿಟ್ಟಿದ್ದರೂ ಅದು ತಪ್ಪು ಹಾದಿಯಲ್ಲಿ ಹೋದಾಗ ಅದನ್ನು ಖಂಡಿಸದೆ ಇರಲಿಲ್ಲ. ಸರ್ಕಾರ 1907ರ ರಾಜದ್ರೋಹ ಅಧಿನಿಯಮವನ್ನು ಜಾರಿಗೆ ತಂದಾಗ ಅದರಿಂದ ಭಾರತದ ರಾಜಕೀಯ ಜೀವನವೇ ನಾಶವಾಗುವುದೆಂದು ಹೇಳಿ ಅವರು ಆ ಅಧಿನಿಯಮವನ್ನು ಬಲವಾಗಿ ವಿರೋಧಿಸಿದರು.

1909ರ ಅನಂತರ ರಾಷ್ ಬಿಹಾರಿ ಘೋಷರು ರಾಜಕೀಯದಿಂದ ನಿವೃತ್ತಿ ಹೊಂದಿದರೆಂದು ಹೇಳಬಹುದು.

ಅನಂತರ ಅವರು ರಾಷ್ಟ್ರೀಯ ವಿದ್ಯಾಭ್ಯಾಸದ ಕಡೆಗೆ ವಿಶೇಷ ಗಮನ ಹರಿಸಿದರು. ಅದನ್ನು ಜನರಲ್ಲಿ ಬೇರೂರಿಸಲು ದೇಶಾದ್ಯಂತ ಪ್ರವಾಸ ಕೈಗೊಂಡು ತಮ್ಮ ಉದ್ದೇಶದಲ್ಲಿ ಬಹಳಮಟ್ಟಿಗೆ ಯಶಸ್ವಿಯಾದರು.

ರಾಷ್ ಬಿಹಾರಿ ಘೋಷರು ತಮ್ಮ ಹಳ್ಳಿಯಾದ ತೋರಕೋನದ ಅಭಿವೃದ್ಧಿಗಾಗಿಯೂ, ಹಲವಾರು ಶಿಕ್ಷಣ ಸಂಸ್ಥೆಗಳಿಗೂ ಒಟ್ಟು ಸುಮಾರು ಐವತ್ತು ಲಕ್ಷ ರೂ. ಗಳಷ್ಟು ದಾನ ಮಾಡಿದರು.

ಪ್ರಶಸ್ತಿಗಳು, ನಿಧನ

[ಬದಲಾಯಿಸಿ]

೧೮೯೬ರ ಹೊಸ ವರ್ಷದ ಪ್ರಶಸ್ತಿ ಸಮಾರಂಭದಲ್ಲಿ ಅವರನ್ನು ಆರ್ಡರ್ ಆಫ಼್ ದ ಇಂಡಿಯನ್ ಎಂಪೈರ್‌ನ ಕಂಪ್ಯಾನಿಯನ್ ಆಗಿ ನೇಮಿಸಲಾಯಿತು. ೧೯೦೯ರ ಜನ್ಮದಿನದ ಪ್ರಶಸ್ತಿ ಸಮಾರಂಭದಲ್ಲಿ ಅವರನ್ನು ಆರ್ಡರ್ ಆಫ಼್ ದ ಸ್ಟಾರ್ ಆಫ಼್ ಇಂಡಿಯಾದ ಕಂಪ್ಯಾನಿಯನ್ ಆಗಿ ನೇಮಿಸಲಾಯಿತು.[][] ಅವರು 1921ರಲ್ಲಿ ತೀರಿಕೊಂಡರು.

  1. Sinha, D P. "Past Presidents — Rashbehari Ghose". Article. All India Congress Committee. Archived from the original on 23 ಡಿಸೆಂಬರ್ 2019. Retrieved 18 March 2013.
  2. You must specify issue=, startpage=, and date= when using {{London Gazette}}. Available parameters:

    {{London Gazette
    |issue= 
    |date=
    |startpage= 
    |endpage=
    |supp=
    |city=
    |accessdate=
    |nolink=
    |separator=
    |ps=
    }}
  3. You must specify issue=, startpage=, and date= when using {{London Gazette}}. Available parameters:

    {{London Gazette
    |issue= 
    |date=
    |startpage= 
    |endpage=
    |supp=
    |city=
    |accessdate=
    |nolink=
    |separator=
    |ps=
    }}
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: