ವಿಷಯಕ್ಕೆ ಹೋಗು

ರಾಬರ್ಟ್ ವಿಲಿಯಂ ಚಾಪ್‍ಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಬರ್ಟ್ ವಿಲಿಯಂ ಚಾಪ್‍ಮನ್ (1881-1960) ಒಬ್ಬ ಆಧುನಿಕ ಇಂಗ್ಲಿಷ್ ಸಾಹಿತ್ಯ ವಿದ್ವಾಂಸ; ಗ್ರಂಥಸಂಪಾದಕನಾಗಿ ಹೆಸರಾದವ.[][]

ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗಮಾಡಿ ಆನರ್ಸ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ. ಆಕ್ಸ್‌ಫರ್ಡಿನ ಓರಿಯಲ್ ಕಾಲೇಜಿನಲ್ಲಿ ಸಾಹಿತ್ಯ, ಸಾಂಸ್ಕೃತಿಕಶಾಸ್ತ್ರಗಳನ್ನು ಆರಿಸಿಕೊಂಡು ಅಲ್ಲಿಯೂ ಪ್ರಥಮಶ್ರೇಣಿಯ ಪದವಿಯನ್ನು ಸಂಪಾದಿಸಿದ. 1915ರಿಂದ 1919ರವರೆಗೆ ರಾಯಲ್ ರಕ್ಷಣಾಸೇನೆಯ ಫಿರಂಗಿದಳದಲ್ಲಿ ಹಂಗಾಮಿ ದ್ವಿತೀಯ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿದ. ಈ ಅವಧಿಯ ಕೊನೆಯ ಮೂರು ವರ್ಷ ಸಲೋನಿಕಾದ ಕ್ಯಾಪ್ಟನ್ ಸಹ ಆಗಿದ್ದ. 1920ರಿಂದ 1942ರವರೆಗೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ಸಿನ ನಿಯೋಗವೊಂದರ ಕಾರ್ಯದರ್ಶಿಯಾಗಿದ್ದ. ಈ ಅವಧಿಯಲ್ಲಿ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು ಪ್ರಕಟಗೊಂಡಿತು. ಈ ನಡುವೆ 1931-47ರ ಅವಧಿಯಲ್ಲಿ ಆಕ್ಸ್‌ಫರ್ಡಿನ ಮ್ಯಾಗ್ಡಲಿನ್ ಕಾಲೇಜಿನಲ್ಲಿ ಫೆಲೊ ಆಗಿದ್ದು 1948ರಲ್ಲಿ ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನಲ್ಲಿ ಕ್ಲಾರ್ಕ್ ದತ್ತಿ ಸ್ಥಾನದಲ್ಲಿ ಅಧ್ಯಾಪಕನಾಗಿ, ಅನಂತರ 1950ರಲ್ಲಿ ಯೇಲ್ ವಿಶ್ವವಿದ್ಯಾನಿಲಯದ ಲೇ ಮಾಂಟ್ ದತ್ತಿಸ್ಥಾನದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ. ಬೋಡ್ಲಿಯನ್ ಮಿತ್ರಬಳಗದ (Friends of the Bodleian) ಹಾಗೂ ಆಕ್ಸ್‌ಫರ್ಡ್ ಗ್ರಂಥಸೂಚಿ ಸಂಪಾದಕ ಮಂಡಲಿಯ ಸದಸ್ಯನಾಗಿಯೂ ಕೆಲಸ ಮಾಡಿದ.

ಕೃತಿಗಳು, ಗೌರವಗಳು

[ಬದಲಾಯಿಸಿ]

ಇಂಗ್ಲಿಷ್ ಸಾಹಿತ್ಯ ಭಂಡಾರಕ್ಕೆ ಈತನ ಅವಿಸ್ಮರಣೀಯ ಕಾಣಿಕೆಗಳಿಂದರೆ: ಡಾಕ್ಟರ್ ಸ್ಯಾಮ್ಯುಯೆಲ್ ಜಾನ್ಸನ್ನನ ಜೀವನ ಮತ್ತು ಸಾಹಿತ್ಯಗಳಿಗೆ ಸಂಬಂಧಿಸಿದ ಅಮೂಲ್ಯ ಸಂಗತಿಗಳನ್ನು ಆಯ್ದು, ಸಂಪಾದನೆಯ ಪರಿಷ್ಕಾರ ಕೊಟ್ಟು, ಪ್ರಕಟಿಸಿದುದು; ಜೇನ್ ಆಸ್ಟಿನ್‌ಳ ಕಾದಂಬರಿಗಳನ್ನೂ, ಪತ್ರಗಳನ್ನೂ ಸಂಪಾದಿಸಿ, ಪ್ರಕಟಿಸಿದುದು.[]

ಟೈಮ್ಸ್ ಲಿಟರರಿ ಸಪ್ಲಿಮೆಂಟ್ ಎಂಬ ಪ್ರಸಿದ್ಧವಾದ ಇಂಗ್ಲಿಷ್ ಸಾಹಿತ್ಯ ಪತ್ರಿಕೆಗೆ ನಿಯತವಾಗಿ ನೋಟ್ಸ್ ಅಂಡ್ ಕ್ವೆರೀಸ್ ಇತ್ಯಾದಿ ಸಾಹಿತ್ಯ ವಿಮರ್ಶನ ಟಿಪ್ಪಣಿಗಳನ್ನೂ, ಅವಲೋಕನಗಳನ್ನೂ ಈತ ಬರೆಯುತ್ತಿದ್ದ. ಈತನಿಗೆ ಸೇಂಟ್ ಆಂಡ್ರ್ಯೂಸ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಗಳು ಡಾಕ್ಟರೇಟ್ ಪದವಿಗಳನ್ನು ನೀಡಿದವು. ಅಲ್ಲದೆ ಈತ ಬ್ರಿಟಿಷ್ ಅಕೆಡಮಿಯ ಸದಸ್ಯನಾಗಿದ್ದ. 1955ರಲ್ಲಿ ಈತನಿಗೆ ಸಿ.ಬಿ.ಇ. ಪದವಿ ಲಭಿಸಿತು.

ಈತನ ಕೃತಿಗಳು: ದ ಪೋರ್ಟ್ರೇಟ್ ಆಫ್ ಎ ಸ್ಕಾಲರ್ (1920); ಜೇನ್ ಆಸ್ಟಿನ್ಸ್ ನಾವೆಲ್ಸ್ (ಸಂಪಾದಿತ-1923); ಜೇನ್ ಆಸ್ಟಿನ್ಸ್ ಲೆಟರ್ಸ್ (1932, 1952); ಜಾನ್ಸನ್ಸ್ ಅಂಡ್ ಬಾಸ್ವೆಲ್ಸ್ ಟ್ಯೂರ್ ಟು ದಿ ಹೆಬ್ರಿಡಿಸ್ (1924); ಕ್ಯಾನ್ಸೆಲ್ಸ್ (1930); ಸೊಸೈಟಿ ಫಾರ್ ಪ್ಯೂರ್ ಇಂಗ್ಲಿಷ್, ಟ್ರ್ಯಾಕ್ಟ್ಸ್ ಆನ್ ಆಕ್ಸ್ಫರ್ಡ್ ಇಂಗ್ಲಿಷ್ (1932); ನೇಮ್ಸ್ ಅಂಡ್ ಡೆಸಿಗ್ನೇಷನ್ಸ್ (1936); ಅಡ್ಜೆಕ್ಟಿವ್ಸ್ ಫ್ರಂ ಪ್ರಾಪರ್ ನೇಮ್ಸ್ (1939); ರಿಟ್ರಾಸ್ಪೆಕ್ಟ್ (1948); ಜೇನ್ ಆಸ್ಟಿನ್: ಫ್ಯಾಕ್ಟ್ಸ್ ಅಂಡ್ ಪ್ರಾಬ್ಲಮ್; ಜಾನ್ಸನ್ಸ್ ಲೆಟರ್ಸ್ (1952); ಜಾನ್ಸೋನಿಯನ್ ಅಂಡ್ ಅದರ್ ಎಸ್ಸೇಸ್ (1953); ಜೇನ್ ಆಸ್ಟಿನ್-ಎ ಕ್ರಿಟಿಕಲ್ ಬಿಬ್ಲಿಯೋಗ್ರಫಿ (1953).

ಉಲ್ಲೇಖಗಳು

[ಬದಲಾಯಿಸಿ]
  1. https://www.thebritishacademy.ac.uk/documents/4721/47p361.pdf
  2. https://oed.hertford.ox.ac.uk/whos-who/chapman-r-w/
  3. Naiman, Sandra (1999), "R. W. Chapman", in Baker, William; Womack, Kenneth (eds.), Twentieth-Century British Book Collectors and Bibliographers, First Series, Dictionary of Literary Biography, vol. 201, Detroit: Gale Research, pp. 40–48, ISBN 0-7876-3072-1

ಹೊರಗಿನ ಕೊಂಡಿಗಳು

[ಬದಲಾಯಿಸಿ]