ರಾಜಶೇಖರ ಕೋಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜಶೇಖರ ಕೋಟಿ
ಜನನ೬-೭-೧೯೪೭
ಗದಗ ಜಿಲ್ಲೆ ಹುಯಿಲಗೋಳ, ಕರ್ನಾಟಕ, ಭಾರತ
ವೃತ್ತಿಪತ್ರಿಕೋದ್ಯಮಿ, ಸಾಹಿತ್ಯ ವಿಮರ್ಶಕ, ವೈಚಾರಿಕ ಚಿಂತಕ, ಆಂದೋಲನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ
ರಾಷ್ಟ್ರೀಯತೆಭಾರತೀಯ
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಹೆಚ್ ಕೆ ವೀರಣ್ಣಗೌಡ ಪತ್ರಿಕೋಧ್ಯಮ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ರೋಟರಿ ಸುಪ್ರೀಂ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಜನಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ

ರಾಜಶೇಖರ ಕೋಟಿ [೧][೨][೩]ಸುಮಾರು ಐವತ್ತು ವರ್ಷಗಳ ಸುಧೀರ್ಘ ಕಾಲ ಪತ್ರಿಕೋದ್ಯಮಿಯಾಗಿ, ಸಮಾಜವಾದಿಯಾಗಿ, ಶೋಷಿತರ ದನಿಯಾಗಿ, ಕನ್ನಡಪರ ಹೋರಾಟಗಾರರಾಗಿ, ಮಾನವ ಪ್ರೇಮಿಯಾಗಿ ಅವರ ಕೊಡುಗೆ ಅಪಾರ. ಸೌಲಭ್ಯ ಮತ್ತು ಹಣಕಾಸಿನ ಕೊರತೆಯ ನಡುವೆಯೂ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ, ಸ್ಥಳೀಯ ಸುದ್ದಿಗಳನ್ನು ನೀಡಿ, ಜನರಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ ಅವರು ನಿಜವಾಗಿಯೂ 'ಜನರ ಪತ್ರಕರ್ತರು'! 1972ರಲ್ಲಿ ಆಂದೋಲನ ಪತ್ರಿಕೆ ಆರಂಭಿಸಿದ್ದರು.

ಇತಿವೃತ್ತ[ಬದಲಾಯಿಸಿ]

  • ಆಂದೋಲನ ಎಂದರೆ ಅದು ಪತ್ರಕರ್ತರನ್ನು ತಯಾರು ಮಾಡುವ ಸಮಾಜವಾದಿ ಸಂಸ್ಥೆ. 70ರ ದಶಕದಲ್ಲಿ ನಾಡಿನ ಉತ್ತರ ಭಾಗದ ಸಾಂಸ್ಕೃತಿಕ ರಾಜಧಾನಿ ಧಾರವಾಡದಲ್ಲಿ ವಾರಪತ್ರಿಕೆಯಾಗಿ ಆರಂಭಗೊಂಡ ಆಂದೋಲನವನ್ನು ಮೈಸೂರಿಗೆ ತೆಗೆದುಕೊಂಡು ಹೋಗಬೇಕು ಎಂದು ನಿರ್ಧರಿಸಿದರು ರಾಜಶೇಖರಕೋಟಿ[೪]. ಗಟ್ಟಿ ದನಿಯ ಪತ್ರಕರ್ತ ಪಾಟೀಲ ಪುಟ್ಟಪ್ಪರ ಗರಡಿಯಲ್ಲಿ ಬೆಳೆದ ಕೋಟಿ ಅವರಿಗೆ ಮೈಸೂರು ನಿಜಕ್ಕೂ ಆಶ್ರಯ ನೀಡಿತು. ಮೈಸೂರು ಜಿಲ್ಲೆಯಲ್ಲಿ ಹಲವಾರು ಉದಯೋನ್ಮುಖ ಪತ್ರಕರ್ತರಿಗೆ ಅವಕಾಶ, ಪ್ರೋತ್ಸಾಹ ನೀಡಿ ಬೆಳೆಸಿದವರು.
  • ಮೈಸೂರು ಮಿತ್ರದಲ್ಲಿ ಕೆಲಸ ಮಾಡುತ್ತಲೇ ಕೋಟಿಯವರು ತಮ್ಮ ಆಂದೋಲನ ಪತ್ರಿಕೆಯನ್ನು ವಾರಪತ್ರಿಕೆ ರೂಪದಲ್ಲಿ ಹೊರ ತಂದು ನಂತರ ದಿನಪತ್ರಿಕೆಗೆ ಪರಿವರ್ತಿಸಿದರು. 80-90ರ ದಶಕದಲ್ಲಿ ಪತ್ರಿಕಾ ವಲಯದ ಉತ್ತುಂಗ. ಆಗ ಇನ್ನೂ ಉದ್ಯಮ ಸ್ವರೂಪ ಬಂದಿರಲಿಲ್ಲ. ಚಳವಳಿ. ಹೋರಾಟ ಎನ್ನವುದು ಪತ್ರಿಕೆ, ಪತ್ರಕರ್ತನ ಭಾಗ ಎನ್ನುವಂತಿದ್ದ ಕಾಲದಲ್ಲಿ ಆಂದೋಲನ ಪತ್ರಿಕೆಗೆ ಸೇರಿಕೊಳ್ಳುವುದೇ ಒಂದು ಪ್ರತಿಷ್ಠೆ ಎನ್ನುವಂತಿತ್ತು.
  • ಯಾವುದೇ ಸಾಮಾಜಿಕ ಹಿನ್ನೆಲೆ, ಗಾಡ್‍ಫಾದರ್‍ಳಿಲ್ಲದೇ, ಭಿನ್ನ ಪ್ರದೇಶಗಳಿಂದ ಉತ್ಸಾಹದ ದೊಡ್ಡ ಮೂಟೆಯೊಂದನ್ನೇ ಬೆನ್ನಿಗಿಟ್ಟುಕೊಂಡು ಪತ್ರಕರ್ತರಾಗಬೇಕೆಂದು ಬಂದ ನೂರಾರು ಯುವಕರನ್ನು ಪಳಗಿಸಿದ ಹಿರಿಮೆ ಆಂದೋಲನದ್ದು. ಅದರ ಹಿಂದೆ ಇದ್ದ ಚಿಂತನೆ ರಾಜಶೇಖರಕೋಟಿ[೫] ಅವರೇ. ರಾಜಶೇಖರ ಕೋಟಿ ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಮೊದಲಾದ ಮುತ್ಸದ್ಧಿಗಳ ಬದುಕು ಮತ್ತು ಹೋರಾಟಗಳಿಂದ ಪ್ರಭಾವಿತರಾಗಿದ್ದರು.
  • ಧಾರವಾಡದಿಂದ ಚಳವಳಿ, ಹೋರಾಟವನ್ನು ಧ್ಯೇಯವಾಗಿಟ್ಟುಕೊಂಡು ಮೈಸೂರಿಗೆ ಬಂದ `ಆಂದೋಲನ' ಕ್ಕೆ ಬೆನ್ನೆಲುಬಾಗಿ ನಿಂತವರು ದೇವನೂರ ಮಹಾದೇವ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪ್ರೊ.ಕೆ. ರಾಮದಾಸ್, ಪಿ.ಲಂಕೇಶ್, ಬಿ.ಎನ್.ಶ್ರೀರಾಮ್ ಅವರಂತಹ ದಿಗ್ಗಜರು ಎನ್ನುವುದು ವಿಶೇಷ. ಆಂದೋಲನ ದಿನಪತ್ರಿಕೆ ಹುಟ್ಟು ಹಾಕಿ ಸುಮಾರು 45 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದ ರಾಜಶೇಖರ ಕೋಟಿ, ಅಭಿಮಾನಿ ಬಳಗ ಮತ್ತು ಶಿಷ್ಯ ಗಣ, ಅಪಾರ ಓದುಗರನ್ನು ಹೊಂದಿದ್ದರು.

ಜನನ/ಜೀವನ[ಬದಲಾಯಿಸಿ]

  • ದಿನಾಂಕ;೬-೭-೧೯೪೭ರಲ್ಲಿ ಜನನ. ರಾಜಶೇಖರ ಕೋಟಿ ಮೂಲತಃ ಗದಗ್ ಜಿಲ್ಲೆ ಹುಯಿಲಗೋಳದವರು. ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ಗದಗ್‍ನಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಅಚ್ಚು ಮೊಳೆ ಸಹಾಯಕರಾಗಿ ಕೆಲಸ ಆರಂಭಿಸುತ್ತಾರೆ. ಶಾಲಾ ದಿನದಿಂದಲೇ ಪತ್ರಿಕೆ ಬಗ್ಗೆ ಆಸಕ್ತಿ ಹೊಂದಿದ್ದ ರಾಜಶೇಖರ್ ಕೋಟಿ ಅವರು ತಮ್ಮ ೧೩ನೇ ವಯಸ್ಸಿನಲ್ಲಿ ಪಾಟೀಲಪುಟ್ಟಪ್ಪ ಅವರಿಂದ ಪ್ರಭಾವಿತರಾಗಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.
  • ಪಾಟೀಲ್ ಪುಟ್ಟಪ್ಪ ಅವರ ವಿಶ್ವವಾಣಿ ಪತ್ರಿಕೆಗೆ ವರದಿಗಾರರಾಗಿ, ನಂತರ ೨ ವರ್ಷ 'ಪ್ರಪಂಚ' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಧಾರವಾಡಕ್ಕೆ ಬರುತ್ತಿದ್ದ ಸಮಾಜವಾದಿಗಳಿಂದ ಪ್ರಭಾವಿತರಾಗಿದ್ದ ಕೋಟಿ ಅವರು ಸಮಾಜವಾದಿ ಚಳುವಳಿಯಿಂದ ಪ್ರಭಾವಿತ ರಾಗಿ ೧೯೭೨ ರಲ್ಲಿ ಆಂದೋಲನ ಪತ್ರಿಕೆ ಆರಂಭಿಸುತ್ತಾರೆ.
  • ಸಾಹಿತಿ ಪೂರ್ಣ ಚಂದ್ರ ತೇಜಸ್ವಿ , ಶಾಂತವೇರಿ ಗೋಪಾಲಕೃಷ್ಣ ಜೆ.ಎಚ್. ಪಟೇಲ್, ಪ್ರೊ. ಎಂ.ಡಿ ನಂಜುಂಡಸ್ವಾಮಿ, ಎಂ.ಡಿ ಸುಂದರೇಶ್ ಪ್ರೊ ರಾಮದಾಸ್, ಕಡಿದಾಳ ಶಾಮಣ್ಣ ಅವರಿಂದ ಕೋಟಿ ಅವರು ಪ್ರಭಾವಿತರಾಗಿ ಪತ್ರಿಕೆ ಆರಂಭಿಸುತ್ತಾರೆ. ಎಂ ಆರ್ ಶಿವಣ್ಣ, ಅವರ ಜೊತೆ ಹುಬ್ಬಳ್ಳಿಯಿಂದ ಬಂದು ಜೊತೆಯಾಗಿ ಆಂದೋಲನ ನಡೆಸಿದವರು. ಮೈಸೂರಿನ ಅನೇಕ ಪತ್ರಕರ್ತರು ಆಂದೋಲನದೊಂದಿಗೇ ತಮ್ಮ ವೃತ್ತಿ ಜೀವನ ಆರಂಭಿಸಿದವರು.

ಆಂದೋಲನ ದಿನಪತ್ರಿಕೆ[ಬದಲಾಯಿಸಿ]

  • ರಾಜ್ಯ ಮಟ್ಟದ ಪತ್ರಿಕೆಗಳ ಪ್ರಭಲ ಹೋರಾಟದ ಮಧ್ಯೆಯೂ ಸ್ಥಳೀಯ ಪತ್ರಿಕೆಯ ಪ್ರಸಾರವನ್ನು 40 ಸಾವಿರಕ್ಕೂ ಹೆಚ್ಚು ತಲುಪಿಸಿದ ದಾಖಲೆ ರಾಜಶೇಖರ ಕೋಟಿಯವರದ್ದು.
  • ಆಂದೋಲನ ರೂಪುಗೊಳ್ಳುವಲ್ಲಿ ಸಾಮಾಜಿಕ ಬದ್ದತೆ ಜತೆಯಲ್ಲಿ ಕಾಡುಗಳ್ಳ ವೀರಪ್ಪನ್ ಕುರಿತಾದ ವೃತ್ತಿಪರ ಸುದ್ದಿಗಳು ಕಾರಣ. ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಎರಡು ದಶಕದ ಹಿಂದೆ ವೀರಪ್ಪನ್ ಗದ್ದಲ ಜೋರಾಗಿತ್ತು. ಆಗ ವೀರಪ್ಪನ್ ಕುರಿತಾದ ಚಟುವಟಿಕೆಗಳ ನಿಖರ ವರದಿ ಆಂದೋಲನದಲ್ಲಿ ಪ್ರಕಟವಾಗುತ್ತಿತ್ತು. ಗಡಿ ಭಾಗದ ಐದಾರು ವರದಿಗಾರರ ಜತೆಗೆ ಮೈಸೂರಿನಿಂದಲೂ ಇದನ್ನು ವಿಶೇಷವಾಗಿ ಗಮನಿಸುತ್ತಿದ್ದ ವರದಿಗಾರರಿದ್ದರು.
  • ಪೊಲೀಸ್ ಹಾಗೂ ಅರಣ್ಯ ಕಚೇರಿಗಳ ಮೇಲೆ ದಾಳಿ, ಡಾ.ರಾಜಕುಮಾರ್ ಹಾಗೂ ಮಾಜಿ ಸಚಿವ ಎಚ್.ನಾಗಪ್ಪ ಅವರ ಅಪಹರಣ, ಡಿಸಿಎಫ್ ಅವರ ಶಿರಚ್ಛೇದಂಥ ಪ್ರಕರಣ. ಕೊನೆಗೆ ವೀರಪ್ಪನ್ ಹತನಾಗುವವರೆಗೂ ಬಂದ ವಿಭಿನ್ನ ವರದಿಗಳು ವಸ್ತುನಿಷ್ಠ ಎನ್ನುವ ಕಾರಣಕ್ಕೆ ಆಂದೋಲನ ಜನರಿಗೆ ಹತ್ತಿರವಾಯಿತು.
  • ದೃಶ್ಯ ಮಾಧ್ಯಮದ ಪ್ರಭಾವವಿಲ್ಲದ ಆಗ ಬೆಳಗಿನ ಜನರ ಸಂಗಾತಿಯಾಗಿದ್ದು ಆಂದೋಲನವೇ. ಇದೊಂದೇ ಅಲ್ಲ ಗುಂಡ್ಲುಪೇಟೆಯ ಸತ್ಯನಾರಾಯಣ ಕೊಲೆ, ನಾಗರಹೊಳೆ. ಬಂಡೀಪುರದ ಮರ ಹನನ, ಡಿಸಿಎಫ್ ಸೋಮಶೇಖರ್ ಪ್ರಕರಣದಲ್ಲೂ ಕೋಟಿ ಅವರ ದಿಟ್ಟತನ, ವೃತ್ತಿ ನೈಪುಣ್ಯತೆ, ಬದ್ದತೆಗಳಿದ್ದವು.
  • ಆಂದೋಲನದ ಬಂಡಲ್ ಗಳನ್ನು ಸೈಕಲ್ ನಲ್ಲಿ ಹೇರಿಕೊಂಡು ಮಾರಿ ಪತ್ರಿಕೆ ಬೆಳೆಸಿದ ನಿಜವಾದ ಧೀಮಂತ ಪತ್ರಕರ್ತ. ಅವರನ್ನು ಪತ್ರಿಕೋದ್ಯಮಿ ಎಂದು ಕರೆಯುವುದು ಸರಿಯಲ್ಲ. ಯಾಕೆಂದರೆ ಅವರು ಪತ್ರಿಕೆಯನ್ನು ಎಂದೂ ಉದ್ಯಮದಂತೆ ಕಂಡವರಲ್ಲ. ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿಯಲ್ಲಿ ಪತ್ರಿಕೆಯ ಶಾಖಾ ಕಚೇರಿಗಳನ್ನು ಹೊಂದಿರುವ ಕೋಟಿಯವರು 80 ಕ್ಕೂ ಹೆಚ್ಚು ಸಿಬ್ಬಂದಿಗೆ ನೇರವಾಗಿ ಉದ್ಯೋಗ ಒದಗಿಸಿದ್ದಾರೆ.
  • ಜಪಾನ್, ಸಿಂಗಾಪೂರ್, ಹಾಂಕಾಂಗ್ , ಥೈಲ್ಯಾಂಡ್, ಮಲೇಷಿಯಾ, ನೇಪಾಳ್, ದುಬೈ ಅಬುದಾಬಿ ಹಾಗೂ ಶ್ರೀಲಂಕಾ ದೇಶಗಳಿಗೆ ಭೇಟಿ ಕೊಟ್ಟು ಅಲ್ಲಲ್ಲಿನ ಪತ್ರಿಕೆಗಳ ಕಾರ್ಯ ವಿಧಾನವನ್ನು ಸ್ಪತಃ ವೀಕ್ಷಿಸಿ ಅನುಭವ ಪಡೆದು ಬಂದವರಾಗಿ ದ್ದಾರೆ. ತಮ್ಮ "ಇದ್ದದ್ದು ಇದ್ಹಾಂಗೆ" ಅಂಕಣದ ಮೂಲಕ ನೇರ ಸತ್ಯ ನಿಷ್ಠೂರ ಬರಹಗಳಿಗೆ ಹೆಸರಾಗಿರುವ ಕೋಟೆಯವರು ಬರವಣಿಗೆಯಂತೆಯೇ ಜನರಲ್ಲಿ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸುವಂತಹ ಭಾಷಣಗಳಿಗೂ ಖ್ಯಾತರಾಗಿದ್ದಾರೆ.

ಪತ್ರಕರ್ತರಾಗಿ ರೂಪುಗೊಂಡವರು[ಬದಲಾಯಿಸಿ]

  • ರಾಜ್ಯ, ರಾಷ್ಟ್ರಮಟ್ಟದ ಪತ್ರಿಕಾ ಸಂಸ್ಥೆಗಳಲ್ಲಿ ಇಂದಿಗೂ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸಮಾಡುತ್ತಿರುವ ಪತ್ರಕರ್ತರು `ಆಂದೋಲನ' ಎಂಬ ಈ ಪತ್ರಿಕೋದ್ಯಮ ಗಿರಣಿಯಲ್ಲಿ ತರಬೇತಿ ಪಡೆದು ಹೋದವರೆ. ಬಹುಶಃ ರಾಜ್ಯದ ಯಾವುದೇ ಜಿಲ್ಲೆಯ ಪತ್ರಿಕೆಯೊಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪತ್ರಕರ್ತರನ್ನು ತಯಾರುಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಿದ ಉದಾಹರಣೆಗಳಿಲ್ಲ.
  • ಅವರು ಜಾಗತೀಕರಣ ಮತ್ತು ಉದಾರೀಕರಣಗಳ ಸುಳಿಗೆ ಸಿಲುಕದಂತೆ ಆಂದೋಲನ ಪತ್ರಿಕೆಯನ್ನು ಕ್ರಿಯಾಶೀಲ ಮತ್ತು ರಚನಾತ್ಮಕ ಪತ್ರಿಕೆಯನ್ನಾಗಿ ಬೆಳೆಸಿ ತಾವೊಬ್ಬ ಅಪರೂಪದ ಸಂಪಾದಕರೆಂಬ ಜನಮನ್ನಣೆ ಹೊಂದಿದ್ದಾರೆ. ಅವರು ಬದುಕಿ ನುದ್ದಕ್ಕೂ ಮೌಲ್ಯಾಧಾರಿತ ಪತ್ರಿಕೋದ್ಯಮ ಕೃಷಿಯನ್ನು ನಿರ್ವಹಿಸಿರುವುದರ ಜೊತೆಗೆ ಪ್ರಗತಿಪರ ಚಳುವಳಿಗಳ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ.
  • ಔಟ್ ಲುಕ್ ಪತ್ರಿಕೆಯ ಸಂಪಾದಕರಾಗಿದ್ದ ಕೃಷ್ಣ ಪ್ರಸಾದ್, ಅಂಶಿ ಪ್ರಸನ್ನಕುಮಾರ್, ಬಿ.ಎಸ್.ಹರೀಶ್, ಇಂಡಿಯನ್ ಎಕ್ಸ್ ಪ್ರೆಸ್ ನ ಕೆ.ಶಿವಕುಮಾರ್, ರೇಣುಕ ಪ್ರಸಾದ್ ಹಾಡ್ಯ, ಉ.ಮ.ಮಹೇಶ, ಜಾನ್‍ ಕೊಳಂದೈ, ನಾಗಮಂಗಲದ ಎಲ್.ಪ್ರಕಾಶ್, ಸುದೇಶ್ ದೊಡ್ಡಪಾಳ್ಯ, ಮಮ್ತಾಜ್ ಅಲೀಂ, ಪಿ.ಓಂಕಾರ್, ಮಂಜುನಾಥ್ ವಡ್ಡಿನಕೊಪ್ಪ, ಬನಶಂಕರ ಆರಾಧ್ಯ, ಕುಂದೂರು ಉಮೇಶ್ ಭಟ್ಟ, ಬಿ.ವಿನೋದ್ ಕುಮಾರ್ ಬಿ.ನಾಯ್ಕ್, ಬಿಸ್ಲಳ್ಳಿ ವೀರಭದ್ರಪ್ಪ, ಚಿನ್ನಸ್ವಾಮಿ ವಡ್ಡಗೆರೆ, ಬಾಲಕೃಷ್ಣ ಸಿಬಾರ್ಲ, ಕೇಶವ ಪ್ರಸಾದ್ ಬಿ.ಕಿದೂರು, ವಿಕ್ರಂ ಕಾಂತಿಕೆರೆ, ಆದರ್ಶ, ಮನು ಅಯ್ಯಪ್ಪ, ಅರವಿಂದ, ಆರ್.ಟಿ.ವಿಠಲಮೂರ್ತಿ, ಪತ್ರಿಕಾ ಛಾಯಾಗ್ರಾಹಕರಾದ ಸಾಗ್ಗೆರೆ ರಾಮಸ್ವಾಮಿ, ನೇತ್ರರಾಜು ಹೀಗೆ ನಾನೂ ಸೇರಿದಂತೆ ನೂರಾರು ಜನರಿಗೆ ಪತ್ರಿಕೋದ್ಯಮದಲ್ಲಿ ಒಂದು ಅಸ್ಮಿತೆ (ಐಡೆಂಟಿಟಿ)ಯನ್ನು ತಂದು ಕೊಟ್ಟದ್ದು `ಆಂದೋಲನ' ದಿನಪತ್ರಿಕೆ.

ಬಹುಮುಖ ಸಮಾಜ ಸೇವೆ[ಬದಲಾಯಿಸಿ]

  • ಅವರು ಸಾರ್ವಜನಿಕ ಹಿತಾಸಕ್ತಿ ರಕ್ಷಣೆಯ ಪ್ರಧಾನ ವಕೀಲರಾಗಿ ಮಹಿಳೆಯರು ಮತ್ತು ದುರ್ಬಲವರ್ಗಗಳ ಪ್ರಗತಿಗಾಗಿ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವರು ಪತ್ರಿಕೋದ್ಯಮಕ್ಕೆ ಮಾತ್ರ ಸೀಮಿತವಾಗದೆ ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಕ್ರೀಡೆ, ಸಹಕಾರ, ಪ್ರಗತಿಪರ ಚಳುವಳಿ ಮೊದಲಾದ ಕ್ಷೇತ್ರಗಳಿಗೆ ಸರ್ವರೀತಿಯಲ್ಲಿಯೂ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ.
  • ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ, ಅಪಘಾತಗಳು ಜರುಗಿದಾಗ ಪತ್ರಿಕೆಯ ಓದುಗರಿಂದ ನಿಧಿ ಸಂಗ್ರಹಿಸಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವುದು ಕೋಟಿ ಅವರ ಪತ್ರಿಕಾ ಸಮೂಹದ ಅವಿಭಾಜ್ಯ ಅಂಗವಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭ ದಲ್ಲಿ 26 ಲಕ್ಷ 35 ಸಾವಿರ ರೂಪಾಯಿಗಳಷ್ಟು ಹಣ ಸಂಗ್ರಹಿಸಿ ಕೊಡಮಾಡಿದ ಹೆಗ್ಗಳಿಕೆ ಅವರದು. ಗುಜರಾತ್ ಭೂಕಂಪ ಸಂತ್ರಸ್ತರಿಗಾಗಿ 11 ಲಕ್ಷ ರೂಪಾಯಿಗಳಷ್ಟು ಹಣ ಸಂಗ್ರಹಿಸಿದ ಹೃದಯವಂತರು.
  • ಇತ್ತೀಚೆಗೆ ಸುನಾಮಿ ಸಂತ್ರಸ್ತರಿಗಾಗಿ 12 ಲಕ್ಷ ರೂಪಾಯಿಗಳಷ್ಟು ನಿಧಿ ಸಂಗ್ರಹಿಸಿ ಕಡಲೂರು ಬಳಿ ಮೈಸೂರು ಕಾಲೋನಿ ನಿರ್ಮಿಸುವ ಮೈಸೂರಿಗರ ಪ್ರಯತ್ನದಲ್ಲಿ ಪಾಲ್ಗೊಂಡಿದ್ದಾರೆ. ಪ್ರಸ್ತುತ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಆಸರೆಗಾಗಿ 20 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ತಮ್ಮ ಪತ್ರಿಕೆಯ ಆದಾಯದಲ್ಲಿ ಬಹುಪಾಲನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿರುವ ಹಿರಿಮೆ ಕೋಟೆಯವರದಾಗಿದೆ.
  • ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ 21 ಬಸ್ ಪ್ರಯಾಣಿಕರ ತಂಗುದಾಣಗಳನ್ನು ಕಟ್ಟಿಸಿರುವ ಇವರು, ಗ್ರಾಮಾಂತರ ಪ್ರದೇಶದ ಹಲವಾರು ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಒದಗಿಸಿದ್ದಾರೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರಾಯೋಜಿಸುತ್ತಿದ್ದಾರೆ. ಮೈಸೂರಿನ ರೋಟರಿ ಪಶ್ಚಿಮ ಹಾಗೂ ಲಯನ್ಸ್ ಐಕಾನ್ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಗೌರವ ಸದಸ್ಯರಾಗಿ ಸೇವಾ ಕಾರ್ಯಗಳಲ್ಲಿ ಅವುಗಳೊಂದಿಗೆ ಸಹಕರಿಸುತ್ತಿದ್ದಾರೆ.
  • ಮೈಸೂರಿನ ಎಂಜಿ ರಸ್ತೆಯ ತರಕಾರಿ ಬೆಳೆಯುವ ಸಣ್ಣ ರೈತರು ಹಾಗೂ ಮಾರುವವರಿಗಾಗಿ ನೀರಿನ ಸೌಲಭ್ಯ ಒದಗಿಸಿರುವುದಲ್ಲದೆ ಅವರ ಶಾಶ್ವತ ನೆಲೆಗಾಗಿ ಶ್ರಮಿಸುತ್ತಿದ್ದಾರೆ.ಕ್ರೀಡಾ ಚಟುವಟಿಕೆಗಳಿಗೂ ವಿಶೇಷ್ ಪ್ರಾಶಸ್ತ್ಯ ನೀಡುತ್ತಿರುವ ಕೋಟಿಯವರು, ಮೈಸೂರಿನಲ್ಲಿ ಪ್ರತಿ ವರ್ಷವೂ ರಾಜ್ಯ ಮಟ್ಟದ ಕಿರಿಯರ ಟೆನಿಸ್ ಪಂದ್ಯಾವಳಿಯನ್ನೂ , ಗಾಲ್ಫ್ ಪಂದ್ಯಾವಳಿಯನ್ನೂ ಪ್ರಾಯೋಜಿಸುತ್ತಾ ಬಂದಿದ್ದಾರೆ.
  • ಕಳೆದ ಹದಿಮೂರು ವರ್ಷಗಳಿಂದ ಮೈಸೂರು ವಿವಿಯ ಕ್ರೀಡಾ ವಿಭಾಗದವರ ಜೊತೆಗೂಡಿ ಧ್ಯಾನಚಂದ್ ಅವರ ನೆನಪಿನಲ್ಲಿ ಆಂದೋಲನ್ ಕಪ್ ಹಾಕಿ ಪಂದ್ಯಾವಳಿಯನ್ನೂ ಪ್ರಾಯೋಜಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಒಂದು ದಿನದ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಪಂದ್ಯದ ಪ್ರಾಯೋಜಕರಲ್ಲಿ ಕೋಟಿಯವರೂ ಒಬ್ಬರಾಗಿದ್ದರು.

ನಿರ್ವಹಿಸಿರುವ ಸ್ಥಾನ-ಮಾನಗಳು[ಬದಲಾಯಿಸಿ]

  1. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸತತ ಎರಡು ಅವಧಿಗಳಲ್ಲಿ ಕಾರ್ಯ ನಿರ್ವಹಿಸಿರುವ ಕೋಟಿಯವರು ಮೈಸೂರು ಕಾರ್ಯ ಪಡೆಯ ಸದಸ್ಯರಾಗಿ ಮೈಸೂರಿನ ವ್ಯವಸ್ಥಿತ ಬೆಳವಣಿಗೆಗೆ ನೆರವಾಗಿದ್ದಾರೆ.
  2. ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ನಾಲ್ಕು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಾಧ್ಯಮ ಅಕಾಡೆಮಿಯ ನಾಮನಿರ್ದೇಶನ ಸದಸ್ಯರಾಗಿದ್ದರು.
  3. ಕರ್ನಾಟಕ ಸರ್ಕಾರದ ಪತ್ರಕರ್ತರ ಮಾನ್ಯತಾ ಸಮಿತಿಯಲ್ಲಿ ಎರಡು ಅವಧಿಗೆ ಸದಸ್ಯರಾಗಿ ಕೋಟಿಯವರು ಕಾರ್ಯನಿರ್ವಹಿಸಿದ್ದಾರೆ.

ಪ್ರಶಸ್ತಿ/ಗೌರವಗಳು[ಬದಲಾಯಿಸಿ]

ಪತ್ರಿಕೋದ್ಯಮದಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಕೋಟಿಯವರಿಗೆ

  1. ಕರ್ನಾಟಕ ಮಾಧ್ಯಮ ಅಕಾಡೆಮಿ[೬] ಪ್ರಶಸ್ತಿ,
  2. ಹೆಚ್ ಕೆ ವೀರಣ್ಣಗೌಡ ಪತ್ರಿಕೋಧ್ಯಮ ಪ್ರಶಸ್ತಿ,
  3. ಸತ್ಯಕಾಮ ಪ್ರಶಸ್ತಿ,
  4. ರೋಟರಿ ಸುಪ್ರೀಂ ಪ್ರಶಸ್ತಿ[೭],
  5. ಮುರುಘಾಶ್ರೀ ಪ್ರಶಸ್ತಿ,
  6. ಜನಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,
  7. ಟಿಎಸ್ ಆರ್ ಪ್ರಶಸ್ತಿ, ಹಾಗೂ ಈ ಪ್ರಶಸ್ತಿಗಳಲ್ಲದೆ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ
  8. ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ,
  9. ಅಭ್ಯುದಯ ಪತ್ರಿಕೋದ್ಯಮ ಪ್ರೋತ್ಸಾಹಕ ಪ್ರಶಸ್ತಿ ಸೇರಿದಂತೆ ಬಂದಿರುವ ಪ್ರಶಸ್ತಿಗಳು ನೂರಾರು.

ನಿಧನ[ಬದಲಾಯಿಸಿ]

ದಿನಾಂಕ:೨೩-೧೧-೨೦೧೭ರಂದು ಶ್ರೀಯುತ ರಾಜಶೇಖರ ಕೋಟಿಯವರು ಹೃದಯಾಘಾತದಿಂದ ನಿಧನರಾದರು[೮][೯][೧೦][೧೧]. ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಂಜೆ ಬಳಿಕ ಆಂದೋಲನ ಕಚೇರಿ ಎದುರು ಸರ್ಕಾರಿ ಗೌರವ ಸಲ್ಲಿಸಲಾಯಿತು. ಮೃತರಿಗೆ ಪತ್ನಿ ನಿರ್ಮಲಾ ಕೋಟಿ, ಪುತ್ರ ರವಿ ಕೋಟಿ, ಪುತ್ರಿಯರಾದ ರಶ್ಮಿ ಕೌಜಲಗಿ, ರಮ್ಯಾ ಕೋಟಿ ಇದ್ದಾರೆ. ಅವರ ಅಂತ್ಯ ಕ್ರಿಯೆಯನ್ನು ಯಾವುದೇ ಪೂಜಾ ವಿಧಿವಿಧಾನಗಳಿಲ್ಲದೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಹರಿಶ್ಚಂದ್ರ ಅನಿಲ ಚಿತಾಗಾರದಲ್ಲಿ ಸಂಜೆ ೬-೩೦ರಲ್ಲಿ ಸರಳವಾಗಿ ನೆರವೇರಿಸಲಾಯಿತು.

ಗಣ್ಯರ ಕಂಬನಿ[ಬದಲಾಯಿಸಿ]

  • ಸಚಿವ ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್, ಸುತ್ತೂರುಶ್ರೀ, ನಟರಾಜ ಮಠದ ಚಿದಾನಂದ ಸ್ವಾಮೀಜಿ, 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಸೇರಿ ಹಲವು ರಾಜಕೀಯ ಮುಖಂಡರು, ಅಭಿಮಾನಿಗಳು, ಪತ್ರಕರ್ತರು ರಾಜಶೇಖರ ಕೋಟಿಯವರ ಅಂತಿಮ ದರ್ಶನ ಪಡೆದರು.
  • ಮಾಜಿ ಸಚಿವ ಎಸ್.ಎ.ರಾಮದಾಸ್, ಮಾಜಿ ಸ್ಪೀಕರ್ ಕೆ.ಕೃಷ್ಣ, ಪ್ರೊ.ಕೆ.ಎಸ್.ರಂಗಪ್ಪ, ಕಾ.ಪು.ಸಿದ್ದಲಿಂಗಸ್ವಾಮಿ, ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ಮಾಜಿ ಮೇಯರ್ ಗಳಾದ ಪುರುಷೋತ್ತಮ್, ಬಿ.ಎಲ್ ಭೈರಪ್ಪ, ಆರ್.ಲಿಂಗಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್, ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಮಾಜಿ ಸಂಸದ ಹೆಚ್.ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಹೊಸ ಮಠದ ಶಿವಾನಂದ ಸ್ವಾಮೀಜಿ, ಪಾಲಿಕೆ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.
  • ರಾಜಶೇಖರ ಕೋಟಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಸಂತಾಪ ಸಂದೇಶದ ಮೂಲಕ ತಿಳಿಸಿದ್ದಾರೆ.
  • ಅಲ್ಲದೆ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಮುಖಂಡರು ಹಾಗೂ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ‌. ಸ್ಥಳೀಯ ಪತ್ರಿಕೆಗೆ ಹೊಸ ಆಯಾಮ ನೀಡಿದ್ದ ಕೋಟಿ ಅವರ ನಿಧನ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಬಿಎಸ್‌‌ವೈ ಸಂತಾಪ ಸೂಚಿಸಿದ್ದಾರೆ.
  • ಕೋಟಿ ಅವರ ನಿಧನ ಇಡೀ ರಾಜ್ಯದ ಮಾಧ್ಯಮ ವಲಯಕ್ಕೆ ತೀವ್ರ ಆಘಾತವನ್ನುಂಟುಮಾಡಿದೆ. ಮಾಧ್ಯಮ ಕ್ಷೇತ್ರ ಓರ್ವ ಧೀಮಂತ, ಸಹೃದಯಿ ಪತ್ರಕರ್ತನನ್ನು ಕಳೆದುಕೊಂಡಿದ್ದು ದುರಂತ. ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ತಿಸುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌ಡಿಕೆ ಕಂಬನಿ ಮಿಡಿದಿದ್ದಾರೆ.
  • ಹಿರಿಯ ಪತ್ರಕರ್ತ ಮೈಸೂರಿನ ಆಂದೋಲನ ಪತ್ರಿಕೆಯ ಸಂಪಾದಕ ಶ್ರೀ ರಾಜಶೇಖರ ಕೋಟಿಯವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು, ಪತ್ರಿಕೋದ್ಯಮದಲ್ಲಿ ಉನ್ನತ ಆದರ್ಶವನ್ನು ಪಾಲಿಸಿಕೊಂಡು ಬಂದ ಶ್ರೀಯುತರು ಯುವ ಪತ್ರಕರ್ತ ರಿಗೆ ಉನ್ನತ ಪಂಕ್ತಿ ಹಾಕಿಕೊಡುವಲ್ಲಿ ಶ್ರಮ ವಹಿಸಿದ್ದರು ಅಗಲಿದ ಆತ್ಮಕ್ಕೆ ಚಿರ ಶಾಂತಿ ದೊರಕಲೆಂದು ಈಶ್ವರನಲ್ಲಿ ಪ್ರಾರ್ಥನೆ-ಡಿ.ವಿ.ಸದಾನಂದಗೌಡ.

ಉಲ್ಲೇಖಗಳು[ಬದಲಾಯಿಸಿ]

  1. http://m.varthabharati.in/article/2017_11_23/105341
  2. http://m.varthabharati.in/article/2017_11_23/105244
  3. http://kannada.eenaduindia.com/State/Mysore/MysoreState/MysoreCity/2017/11/23131053/Senior-journalist-Rajashekar-Kotis-flashback-of-his.vpf[ಶಾಶ್ವತವಾಗಿ ಮಡಿದ ಕೊಂಡಿ]
  4. http://avadhimag.com/?p=188616
  5. "ಆರ್ಕೈವ್ ನಕಲು". Archived from the original on 2017-12-06. Retrieved 2017-11-27.
  6. http://suddimoola.com/Desha_Videsha_Detail.aspx?Sl_no=3650[ಶಾಶ್ವತವಾಗಿ ಮಡಿದ ಕೊಂಡಿ]
  7. http://mysorematters.com/2017/03/16/%E0%B2%9C%E0%B2%B5%E0%B2%BE%E0%B2%AC%E0%B3%8D%E0%B2%A6%E0%B2%BE%E0%B2%B0%E0%B2%BF%E0%B2%AF%E2%80%8C-%E0%B2%B8%E0%B2%82%E0%B2%95%E0%B3%87%E0%B2%A4%E0%B2%B5%E0%B3%86%E2%80%8C-%E0%B2%AA%E0%B3%8D/[ಶಾಶ್ವತವಾಗಿ ಮಡಿದ ಕೊಂಡಿ]
  8. https://citytoday.news/senior-journalist-rajashekar-koti-dead/[ಶಾಶ್ವತವಾಗಿ ಮಡಿದ ಕೊಂಡಿ]
  9. https://kannada.oneindia.com/news/mysore/senior-journalist-andolana-editor-rajashekar-koti-passes-away-129668.html
  10. http://www.kannadaprabha.com/karnataka/senior-journalist-rajashekar-koti-is-no-more/305798.html[ಶಾಶ್ವತವಾಗಿ ಮಡಿದ ಕೊಂಡಿ]
  11. http://vijayavani.net/%E0%B2%AA%E0%B2%A4%E0%B3%8D%E0%B2%B0%E0%B2%95%E0%B2%B0%E0%B3%8D%E0%B2%A4-%E0%B2%B0%E0%B2%BE%E0%B2%9C%E0%B2%B6%E0%B3%87%E0%B2%96%E0%B2%B0-%E0%B2%95%E0%B3%8A%E0%B3%95%E0%B2%9F%E0%B2%BF-%E0%B2%A8/[ಶಾಶ್ವತವಾಗಿ ಮಡಿದ ಕೊಂಡಿ]