ರಮಾನಂದ ಚಟರ್ಜಿ

ರಮಾನಂದ ಚಟರ್ಜಿ (1865-1943) ಬಂಗಾಳದ ಪ್ರಖ್ಯಾತ ಪತ್ರಿಕೋದ್ಯಮಿ, ವಿದ್ವಾಂಸ; ಪ್ರಬಾಸಿ, ಮಾಡರ್ನ್ ರಿವ್ಯೂ ಪತ್ರಿಕೆಗಳ ಸಂಸ್ಥಾಪಕ ಸಂಪಾದಕ.[೧][೨][೩]
ಆರಂಭಿಕ ಜೀವನ
[ಬದಲಾಯಿಸಿ]ಬಂಕುರಾ ಪಟ್ಟಣದಲ್ಲಿ ಸಂಸ್ಕೃತ ವಿದ್ವಾಂಸರ ಮನೆತನದಲ್ಲಿ ಜನನ. ತಂದೆ ಶ್ರೀನಾಥ್. ರಮಾನಂದರು ಬಂಕುರಾದ ಶಾಲೆಗಳಲ್ಲಿ ಆರಂಭಿಕ ಶಿಕ್ಷಣ ಪಡೆದರು. ಅಲ್ಲಿಯ ಪ್ರೌಢ ಇಂಗ್ಲಿಷ್ ಶಾಲೆಯಲ್ಲಿದ್ದಾಗ ಕೇದಾರನಾಥ ಕುಲವಿಯೆಂಬ ಗಣಿತ ಅಧ್ಯಾಪಕರ ಸಂಪರ್ಕದಿಂದ ಬ್ರಹ್ಮಸಮಾಜದೊಂದಿಗೆ ರಮಾನಂದರ ಸಂಬಂಧ ಬೆಳೆಯಿತು. ಇವರು ಕೇಶಬ್ ಚಂದ್ರ ಸೇನರು ಕಲ್ಕತ್ತದಿಂದ ಹೊರಡಿಸುತ್ತಿದ್ದ ಸುಲಭ ಸಮಾಚಾರ ಎಂಬ ವಾರಪತ್ರಿಕೆಯ ಓದುಗರಾದರು. ರಮಾನಂದರು ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ನಾಲ್ಕನೆಯವರಾಗಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನ ಪಡೆದು ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿದರು. ಅಲ್ಲಿ ಪ್ರಾಧ್ಯಾಪಕರಾಗಿದ್ದ ಜಗದೀಶಚಂದ್ರ ಬೋಸರ ಪರಿಚಯವಾಯಿತು. ಇದು ಆಜೀವ ಸ್ನೇಹವಾಗಿ ಪರಿಣಮಿಸಿತು. ರಮಾನಂದರಿಗೆ ಬರುತ್ತಿದ್ದ ವಿದ್ಯಾರ್ಥಿವೇತನವನ್ನು ಅಕ್ರಮವಾಗಿ ನಿಲ್ಲಿಸಿದಾಗ ಇವರು ಆ ಕಾಲೇಜನ್ನು ಬಿಟ್ಟು ಸೇಂಟ್ ಕ್ಸೇವಿಯರ್ ಕಾಲೇಜು ಸೇರಿದರು. 1885ರಲ್ಲಿ ಎಫ್.ಎ. ಪರೀಕ್ಷೆಯಲ್ಲಿ ನಾಲ್ಕನೆಯ ಸ್ಥಾನಗಳಿಸಿದರು. ಮತ್ತೆ ಇವರಿಗೆ ವಿದ್ಯಾರ್ಥಿವೇತನ ದೊರಕಿತು. ಮುಂದೆ ವಿಜ್ಞಾನಾನಂದರಾಗಿ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಹರಿಪ್ರಸನ್ನ ಚಟರ್ಜಿಯವರ ಸ್ನೇಹ ರಮಾನಂದರಿಗೆ ಆದದ್ದು ಇವರು ಆ ಕಾಲೇಜಿನಲ್ಲಿದ್ದಾಗಲೇ. ಅನಂತರ ಇವರು ಸಿಟಿ ಕಾಲೇಜನ್ನು ಸೇರಿ 1888ರಲ್ಲಿ ಬಿ.ಎ. ಯಲ್ಲೂ 1890ರಲ್ಲಿ ಇಂಗ್ಲಿಷ್ ಎಂ.ಎ.ಯಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. 1886ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ, ರಮಾನಂದರಿಗೆ ಮನೋರಮಾ ದೇವಿಯೊಂದಿಗೆ ವಿವಾಹವಾಯಿತು. ರಮಾನಂದ ಚಟರ್ಜಿಯವರು ವಿದ್ಯಾರ್ಥಿಯಾಗಿದ್ದಾಗ ವ್ಯಾಸಂಗೇತರ ವಿಚಾರಗಳಲ್ಲೂ ವಿಶೇಷ ಆಸಕ್ತಿ ತಳೆದಿದ್ದರು. ಬ್ರಹ್ಮಸಮಾಜದ ಚಟುವಟಿಕೆಗಳಲ್ಲಿ ಇವರೂ ಭಾಗವಹಿಸುತ್ತಿದ್ದರು. ಸಿಟಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಹೇರಂಬ ಚಂದ್ರ ಮೈತ್ರರು ಸಂಪಾದಿಸಿ ಪ್ರಕಟಿಸುತ್ತಿದ್ದ ದಿ ಇಂಡಿಯನ್ ಮೆಸೆಂಜರ್ ಪತ್ರಿಕೆಯ ಕಾರ್ಯದಲ್ಲಿ ಇವರು ನೆರವು ನೀಡಬೇಕಾಗಿತ್ತಲ್ಲದೆ ಅದಕ್ಕೆ ನಿಯತವಾಗಿ ಲೇಖನ ಬರೆಯಬೇಕಾಗಿತ್ತು. ಪ್ರಖ್ಯಾತ ಬಂಗಾಳಿ ವಾರಪತ್ರಿಕೆ ಸಂಜೀವನಿಗೂ ಇವರು ಲೇಖನ ಬರೆಯುತ್ತಿದ್ದರು. ಅದನ್ನು ಸಾಧಾರಣ ಬ್ರಹ್ಮ ಸಮಾಜದ ಪ್ರಮುಖರಲ್ಲೊಬ್ಬರು ಹೊರಡಿಸುತ್ತಿದ್ದರು. ರಮಾನಂದರ ಸಾಮಾರ್ಥ್ಯವೂ, ಪ್ರಗತಿಪರ ವಿಚಾರಗಳೂ ದಾಸಾಶ್ರಮದ ಕಾರ್ಯಕರ್ತರ ಗಮನಸೆಳೆದುವು. ಸಮಾಜಸೇವೆ ಆ ಸಂಸ್ಥೆಯ ಉದ್ದೇಶ. ರಮಾನಂದರು ಆ ಸಂಸ್ಥೆಯ ಚಟುವಟಿಕೆಗಳಲ್ಲೂ ಆಸಕ್ತಿ ತಳೆದರು. ಅದರ ಅಧ್ಯಕ್ಷರಾಗಿ ಆಯ್ಕೆಯಾರು. ಇವರ ಸಲಹೆಯಂತೆ ಆರಂಭವಾದ ದಾಸಿ ಎಂಬ ಪತ್ರಿಕೆಗೆ ಇವರೇ ಸಂಪಾದಕರಾಗಬೇಕಾಯಿತು. ಆ ಕಾಲದಲ್ಲೇ ಇವರು ಕುರುಡರಿಗಾಗಿ ಬಂಗಾಲಿಯಲ್ಲಿ ಬ್ರೇಲ್ ಲಿಪಿಯನ್ನು ರೂಪಿಸಿದ್ದು.
ವೃತ್ತಿಜೀವನ
[ಬದಲಾಯಿಸಿ]ಎಂ.ಎ. ಪದವಿ ಗಳಿಸಿದ ಮೇಲೆ ರಮಾನಂದರು ಸಿಟಿ ಕಾಲೇಜನ್ನು ಸೇರಿದರು. ಮೊದಲ ಎರಡು ವರ್ಷ ಇವರು ಸಂಬಳವಿಲ್ಲದೆಯೆ ಗೌರವ ಅಧ್ಯಾಪಕರಾಗಿ ದುಡಿದರು.
ಬ್ರಹ್ಮಸಮಾಜದವರ ಪೈಕಿ ರಮಾನಂದರ ಮೇಲೆ ತುಂಬ ಪ್ರಭಾವ ಬೀರಿದ ವ್ಯಕ್ತಿ ಶಿವನಾಥ ಶಾಸ್ತ್ರಿ. ಅವರ ವಿದ್ವತ್ತೂ, ಶೀಲವೂ ರಮಾನಂದರ ಮೆಚ್ಚುಗೆ ಗಳಿಸಿದುವು. ಸರ್ಕಾರಿ ನಿಯಂತ್ರಣಕ್ಕೆ ಒಳಪಡೆನೆಂದು ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಹುದ್ದೆಗೆ ರಾಜೀನಾಮೆ ನೀಡಿದ್ದ ಶಿವನಾಥ ಶಾಸ್ತ್ರಿಯವರ ಮೇಲ್ಪಂಕ್ತಿಯನ್ನೇ ಅನುಸರಿಸಿ ರಮಾನಂದರು ಬ್ರಿಟಿಷ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಓದಲು ಬಂದಿದ್ದ ಸರ್ಕಾರಿ ವ್ಯಾಸಂಗವೇತನವನ್ನು ತಿರಸ್ಕರಿಸಿದರು. ಶಿವನಾಥ ಶಾಸ್ತ್ರಿಯವರು ಮುಕುಲ್ ಎಂಬ ಮಕ್ಕಳ ಮಾಸಪತ್ರಿಕೆ ಆರಂಭಿಸುವಂತೆ ಇವರನ್ನು ಒಪ್ಪಿಸಿ, ಇವರಿಗೆ ಆ ಕೆಲಸದಲ್ಲಿ ನೆರವಾದವರು. ಸಿಟಿ ಕಾಲೇಜಿನ ಹುದ್ದೆ ತ್ಯಜಿಸಿ ಅಲಹಾಬಾದಿನ ಕಾಯಸ್ಥ ಕಾಲೇಜಿನ ಪ್ರಿನ್ಸಿಪಾಲ್ ಆದ ರಮಾನಂದ ಚಟರ್ಜಿಯವರು ಪ್ರದೀಪ್ ಎಂಬ ಬಂಗಾಳಿ ಸಾಂಸ್ಕೃತಿಕ ಸಾಹಿತ್ಯಕ ಮಾಸಿಕೆಯ ಸಂಪಾದಕರೂ ಆದರು. ಸ್ವಲ್ಪ ಕಾಲ ಪ್ರದೀಪ್ ಪತ್ರಿಕೆ ನಡೆಸಿ ಅದರ ಸಂಪಾದಕತ್ವಕ್ಕೆ ಇವರು ರಾಜೀನಾಮೆ ನೀಡಿದಾಗ ಸ್ವಂತ ಪತ್ರಿಕೆಯೊಂದನ್ನು ಪ್ರಾರಂಭಿಸುವ ಯೋಚನೆ ಮಾಡಿದರು. ಆರ್ಥಿಕವಾಗಿ ಇದರಿಂದ ಬಹಳ ಕಷ್ಟನಷ್ಟಗಳುಂಟಾಗುವೆಂಬುದನ್ನರಿತೂ ಪ್ರಬಾಸಿ ಎಂಬ ಬಂಗಾಳಿ ಪತ್ರಿಕೆಯನ್ನಾರಂಭಿಸಿದರು. ಕಾಯಸ್ಥ ಕಾಲೇಜಿನ ಆಡಳಿತವರ್ಗದೊಂದಿಗೆ ಭಿನ್ನಾಭಿಪ್ರಾಯ ಬಂದ ಫಲವಾಗಿ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಪ್ರಬಾಸಿಯ ಕೆಲಸ ಮುಂದುವರಿಯಿತು. ಅದು ಅತ್ಯಂತ ಜನಪ್ರಿಯವಾಯಿತು. ಪ್ರಬಾಸಿ ತರಿಸದ ಮನೆ ಸಂಪೂರ್ಣವಲ್ಲವೆಂದು ಸುಸಂಸ್ಕೃತ ಜನ ಪರಿಭಾವಿಸುವ ಮಟ್ಟಿಗೆ ಅದು ಯಶಸ್ಸು ಗಳಿಸಿತು. ಸ್ವಲ್ಪ ಕಾಲಾನಂತರ ಇವರು ಮಾಡರ್ನ್ ರಿವ್ಯೂ ಎಂಬ ಇಂಗ್ಲಿಷ್ ಮಾಸಪತ್ರಿಕೆಯನ್ನಾರಂಭಿಸಿದರು (1906). ಅದು ಬಹುಬೇಗ ಪ್ರಸಿದ್ಧವಾಯಿತು; ಪ್ರತಿಭೆಯ ಸೆಲೆಯಾಯಿತು. ರೆವರೆಂಡ್ ಸಿ. ಎಫ್. ಆಂಡ್ರ್ಯೂಸ್, ಸೋದರಿ ನಿವೇದಿತಾ, ರೆವರೆಂಡ್ ಜೆ.ಟಿ. ಸಂಡರ್ಲೆಂಡ್ ಮುಂತಾದ ರಾಷ್ಟ್ರೀಯ, ಅಂತರರಾಷ್ಟ್ರೀಯ ಖ್ಯಾತಿಯ ಲೇಖಕರು ಅದಕ್ಕಾಗಿ ಬರೆಯುತ್ತಿದ್ದರು. ರವೀಂದ್ರರ ಕವನಗಳು ಪ್ರಬಾಸಿಯಲ್ಲಿ, ಅವುಗಳ ಇಂಗ್ಲಿಷ್ ಅನುವಾದಗಳು ಮಾಡರ್ನ್ ರಿವ್ಯೂ ಪತ್ರಿಕೆಯಲ್ಲಿ ಅಚ್ಚು ಮಾಡಿಸುವ ಸಂಪ್ರದಾಯವನ್ನು ಇವರು ಇಟ್ಟುಕೊಂಡಿದ್ದರು. ಇವರು ಬರೆಯುತ್ತಿದ್ದ ಸಂಪಾದಕೀಯ ಟಿಪ್ಪಣಿಗಳು ಅತ್ಯಂತ ಅಮೂಲ್ಯವೆಂದು ನಾಡಿನ ವಿಚಾರವಂತರೂ, ವಿದ್ವಾಂಸರೂ ಪರಿಗಣಿಸುತ್ತಿದ್ದರು.
1926ರಲ್ಲಿ ಲೀಗ್ ಆಫ್ ನೇಷನ್ಸ್ ಆಮಂತ್ರಣದ ಮೇರೆಗೆ ರಮಾನಂದರು ಜಿನೀವಕ್ಕೆ ಹೋಗಿ ಅಲ್ಲಿ ಆ ಸಂಸ್ಥೆ ಕೆಲಸ ಮಾಡುವ ಬಗೆಯನ್ನು ವೀಕ್ಷಿಸಿದರು. ಐರೋಪ್ಯ ದೇಶಗಳಲ್ಲಿ ಸಂಚರಿಸಿ ಬಂದರು. ಮರುವರ್ಷ ರಷ್ಯಕ್ಕೆ ಭೇಟಿ ಕೊಡಬೇಕೆಂದು ಇವರಿಗೆ ಆಹ್ವಾನ ಬಂತು. ಆದರೆ ಅಲ್ಲಿ ವ್ಯಕ್ತಿಸ್ವಾತಂತ್ರ್ಯವಿಲ್ಲವೆಂಬ ಕಾರಣದಿಂದ ಇವರು ಅಲ್ಲಿಗೆ ಹೋಗಲಿಲ್ಲ. ಮೊದಲು ರಾಷ್ಟ್ರೀಯ ಕಾಂಗ್ರೆಸಿನಲ್ಲಿದ್ದ ರಮಾನಂದರು ಸೂರತ್ ಅಧಿವೇಶನದ ಅನಂತರ ಅದನ್ನು ತ್ಯಜಿಸಿ ಹಿಂದೂ ಮಹಾಸಭೆಯನ್ನು ಸೇರಿದರು. ಇದಕ್ಕಾಗಿ ಹಲವರು ಇವರನ್ನು ಟೀಕಿಸಿದರು. ಪ್ರಬಾಸಿ, ಮಾಡರ್ನ್ ರಿವ್ಯೂ ಪತ್ರಿಕೆಗಳ ಸೋದರ ಪತ್ರಿಕೆಯಾಗಿ ಇವರು ಆರಂಭಿಸಿದ್ದ ಹಿಂದಿ ಮಾಸಪತ್ರಿಕೆಯಾದ ವಿಶಾಲ ಭಾರತದ[೪] ಸಂಪಾದಕರಾಗಿದ್ದ ಪಂಡಿತ್ ಚತುರ್ವೇದಿಯವರು ರಮಾನಂದರನ್ನು ಟೀಕಿಸಿ ಸಂಪಾದಕೀಯವನ್ನು ಬರೆದು, ಅದನ್ನೂ, ಅದರೊಂದಿಗೆ ತಮ್ಮ ರಾಜೀನಾಮೆಯನ್ನೂ ರಮಾನಂದರಿಗೆ ಕಳಿಸಿದರು. ಇವರು ಪತ್ರಿಕೆಯ ಮಾಲೀಕರಾದ್ದರಿಂದ ತಮ್ಮ ಈ ಸಂಪಾದಕೀಯವನ್ನು ತಡೆಹಿಡಿಯಲು ಇವರಿಗೆ ಹಕ್ಕುಂಟೆಂದೂ, ಹಾಗೆ ಮಾಡುವುದಾದಲ್ಲಿ ತಮ್ಮ ರಾಜೀನಾಮೆಯನ್ನು ಸ್ವೀಕರಿಸಬೇಕೆಂದೂ ಪತ್ರ ಬರೆದರು. ರಮಾನಂದರು ಇವೆರಡನ್ನೂ ಹಿಂದಿರುಗಿಸಿದರು. ಸಂಪಾದಕರಾಗಿ ಚತುರ್ವೇದಿಯವರಿಗೆ ತಮ್ಮನ್ನು ಟೀಕಿಸುವ ಸ್ವಾತಂತ್ರ್ಯವುಂಟೆಂದೂ, ತಾವು ಅಡ್ಡ ಬರುವುದಿಲ್ಲವೆಂದೂ ಹೇಳಿದರು.
ರಮಾನಂದ ಚಟರ್ಜಿಯವರು ಹಿಂದೂ ಮಹಾಸಭೆಯ ಸೂರತ್ ಅಧಿವೇಶನ, ಪ್ರಬಾಸಿ ವಂಗಸಾಹಿತ್ಯ ಸಮ್ಮೇಳನದ ರಂಗೂನ್ ಅಧಿವೇಶನ, ವಂಗೀಯ ಸಾಹಿತ್ಯ ಸಮ್ಮೇಳನದ ವಾರ್ಷಿಕ ಅಧಿವೇಶನ ಇವುಗಳ ಅಧ್ಯಕ್ಷರಾಗಿದ್ದರು. ಬ್ರಿಟಿಷ್ ಆಳ್ವಿಕೆಯ ಅಕ್ರಮಗಳನ್ನು ಕುರಿತ ಅಧಿಕೃತ ಗ್ರಂಥವನ್ನು ಅಲಹಾಬಾದಿನ ಮೇಜರ್ ಬಿ.ಡಿ. ಬಸು ಅವರಿಂದ ಬರೆಯಿಸಿದರಲ್ಲದೆ, ತಾವು ಟುವರ್ಡ್ಸ್ ಹೋಮ್ ರೂಲ್ ಎಂಬ ಗ್ರಂಥವನ್ನು ರಚಿಸಿದರು. ಇವರ ಸಾಹಿತ್ಯ ಕೃತಿಗಳಲ್ಲಿ ಕೃತ್ತಿವಾಸ ರಾಮಾಯಣದ ಬಂಗಾಲಿ ರೂಪ, ಅರೇಬಿಯನ್ ನೈಟ್ಸ್‌ನ ಅನುವಾದ (ಅರಬ್ಯ ಉಪನ್ಯಾಸ್), ಕಾಶೀರಾಮ ದಾಸನ ಮಹಾಭಾರತದ[೫] ಬಂಗಾಲಿ ಅವತರಣ ಮುಖ್ಯವಾದವು. ರಮಾನಂದ ಚಟರ್ಜಿಯವರ ವ್ಯಕ್ತಿತ್ವದ ವೈಶಿಷ್ಟ್ಯವೆಂದರೆ ಇವರಿಗಿದ್ದ ಆತ್ಮವಿಶ್ವಾಸ, ತಮ್ಮ ನಿಲುವಿನಲ್ಲಿ ದೃಢನಂಬಿಕೆ. ಜೆ.ಟಿ.ಸಂಡರ್‌ಲೆಂಡರ ಇಂಡಿಯ ಇನ್ ಬಾಂಡೇಜ್ ಎಂಬ ಇಂಗ್ಲಿಷ್ ಗ್ರಂಥವನ್ನು ಧೈರ್ಯವಾಗಿ ಪ್ರಕಟಿಸಿದರು. ಕೂಡಲೇ ಪೋಲೀಸರು ಅದರ ಪ್ರತಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು, ಇವರನ್ನು ಜೈಲು ಶಿಕ್ಷೆಗೆ ಗುರಿಪಡಿಸಿದರು. ಇವರು ಬಹಳ ಭಾರಿ ದಂಡವನ್ನೂ ತೆರಬೇಕಾಯಿತು. ಆದರೂ ಇವರು ತಮ್ಮ ಪ್ರಸನ್ನಚಿತ್ತವನ್ನು ಕಳೆದುಕೊಳ್ಳಲಿಲ್ಲ. ರಮಾನಂದ ಚಟರ್ಜಿಯವರು 1943ರಲ್ಲಿ ತೀರಿಕೊಂಡರು.
ಉಲ್ಲೇಖಗಳು
[ಬದಲಾಯಿಸಿ]- ↑ Chaudhuri, Indrajit (2012). "Prabasi". In Islam, Sirajul; Jamal, Ahmed A. (eds.). Banglapedia: National Encyclopedia of Bangladesh (Second ed.). Asiatic Society of Bangladesh. ('Chattopadhyay' is the original Bengali surname anglicized by the British to 'Chatterjee')
- ↑ https://www.peepultree.world/livehistoryindia/story/people/ramananda-chatterjee?srsltid=AfmBOora4m-K2Y90m90hccY5r4i8Hg7dMC2OSm3XExw0tuD4TKAp51lb
- ↑ https://www.livemint.com/Leisure/omtPFl5U9OcQqtb4gviUMI/The-star-of-intellectual-journalism.html
- ↑ Kalyan Chatterjee, Media and Nation Building in Twentieth-Century India: Life and Times of Ramananda Chatterjee (Abingdon: Routledge, 2020).
- ↑ Mohammad Daniul Huq; Aminur Rahman (2012). "Bangla Literature". In Sirajul Islam; Jamal, Ahmed A. (eds.). Banglapedia: National Encyclopedia of Bangladesh (Second ed.). Asiatic Society of Bangladesh.