ವಿಷಯಕ್ಕೆ ಹೋಗು

ರಂಗನಾಥ ಕಂಟನಕುಂಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ರಂಗನಾಥ ಕಂಟನಕುಂಟೆ
ಜನನಜನವರಿ ೫,೧೯೭೪
ಉದ್ಯೋಗಕವಿ,ಲೇಖಕ,ಪ್ರಾಧ್ಯಾಪಕ,ಚಿಂತಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ವಿದ್ಯಾನಿಲಯಬೆಂಗಳೂರು ವಿಶ್ವವಿದ್ಯಾಲಯ,ಕನ್ನಡ ವಿಶ್ವವಿದ್ಯಾಲಯ
ಶೈಲಿಕವಿತೆ,ವಿಮರ್ಶೆ,ಸಂಶೋಧನೆ

ಕನ್ನಡದ ಹೊಸ ತಲೆಮಾರಿನ ಲೇಖಕರಲ್ಲಿ ಡಾ.ರಂಗನಾಥ ಕಂಟನಕುಂಟೆಯವರು ಪ್ರಮುಖರು.ಕವಿತೆ, ವಿಮರ್ಶೆ,ಸಂಶೋಧನೆ ಹೀಗೆ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.ಭಾಷಾ ವಿಜ್ಞಾನ ಇವರ ನೆಚ್ಚಿನ ವಿಷಯವಾಗಿದ್ದು ಜನಭಾಷೆ ಮತ್ತು ಗ್ರಾಂಥಿಕ ಭಾಷೆಗಳ ಬಿಕ್ಕಟ್ಟುಗಳ ಕುರಿತು ವಿಚಾರ ಪೂರ್ಣವಾದ ಲೇಖನಗಳನ್ನು ಬರೆದಿದ್ದಾರೆ.

ಜನನ ಮತ್ತು ಆರಂಭಿಕ ಶಿಕ್ಷಣ

[ಬದಲಾಯಿಸಿ]

ರಂಗನಾಥರವರು ೧೯೭೪ ಜನವರಿ ೫ರಂದು ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜನಿಸಿದರು.ತಂದೆ ರಂಗಸ್ವಾಮಿ ತಾಯಿ ದೊಡ್ಡರಂಗಮ್ಮ. ಇವರು ಕಂಟನಕುಂಟೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು.ನಂತರ ಡೊಡ್ಡಬಳ್ಳಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿ.ಯು.ಸಿ ಪೂರ್ಣಗೊಳಿಸಿದರು.

ಉನ್ನತ ವ್ಯಾಸಂಗ

[ಬದಲಾಯಿಸಿ]

ಡೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ೨೦೦೮ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ " ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು" ಎಂಬ ವಿಷಯದಡಿ ಪ್ರೊ.ಕಿ. ರಂ. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ.

ವೃತ್ತಿ ಜೀವನ

[ಬದಲಾಯಿಸಿ]

೨೫ ವರ್ಷಗಳ ಬೋಧನಾನುಭವ ಹೊಂದಿರುವ ರಂಗನಾಥ ಕಂಟನಕುಂಟೆಯವರು ೨೦೦೦ನೇ ಇಸವಿಯಲ್ಲಿ ಎನ್.ಇ.ಟಿ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ೨೦೦೧ ರಿಂದ ಕನ್ನಡ ಸಹಾಯಕ ‌ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿದ್ಯಾ ವಾಹಿನಿ ಕಾಲೇಜಿನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಏಳು ವರ್ಷ ಸಹಾಯಕ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರ, ಶೇಷಾದ್ರಿಪುರಂ ಕಾಲೇಜಿನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಎರಡು ವರ್ಷ, ಬೆಂಗಳೂರಿನ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಕಾವ್ಯ ಮಂಡಲ ಸಂಶೋಧನಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ.೨೦೧೭ರಲ್ಲಿ ಕರ್ನಾಟಕ ಸರ್ಕಾರದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರಿನ ವಿಜಯನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪ್ರಸ್ತುತ ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಹಿತ್ಯ ಕೃಷಿ

[ಬದಲಾಯಿಸಿ]

ನಿರಂತರ ಓದು ಮತ್ತು ಬರಹಗಳಲ್ಲಿ ತೊಡಗಿರುವ ರಂಗನಾಥರವರು ಕವಿತೆ, ಲೇಖನ, ಸಂಶೋಧನೆ, ಸಂಪಾದನೆ ಹಾಗೂ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ೨೦೦೪ರಲ್ಲಿ ಉದಯವಾಣಿಯಲ್ಲಿ ಅವರ ಮೊದಲ ಲೇಖನ ಪ್ರಕಟವಾಯಿತು. ಸೋರೆ ದೋಣಿಯ ಗೀತ ಇವರ ಮೊದಲ ಕವನ ಸಂಕಲನ. ಓದಿನ ಜಾಡು ಇವರ ಸಾಹಿತ್ಯ ಸಂಸ್ಕೃತಿಯ ಬರಹಗಳ ಸಂಗ್ರಹವಾಗಿದೆ. ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು ಮತ್ತು ಅರಿವಿನ ಅಡಿಗೆ ಇವರ ಸಂಪಾದನ ಕೃತಿಗಳು. ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ ಇವರ ಸಂಶೋಧನಾ ಪ್ರಬಂಧವಾಗಿದೆ. ಆರು ಕವನ ಸಂಕಲನಗಳನ್ನು ಒಳಗೊಂಡಂತೆ ಒಟ್ಟು ೧೫ ಕೃತಿಗಳನ್ನು ಇವರು ರಚಿಸಿದ್ದಾರೆ. ಅದಲ್ಲದೆ ಕನ್ನಡದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ವಿಜಯವಾಣಿ ಹಾಗೂ ಮಾಸಪತ್ರಿಕೆಗಳಾದ ಹೊಸತು ಅನಿಕೇತನ ಸಂವಾದ ಗಳಲ್ಲಿ ವಿಚಾರ ಪೂರ್ಣ ಲೇಖನಗಳು ಇವರ ಲೇಖನಗಳು ಪ್ರಕಟಗೊಂಡಿದೆ. ೧೭ ಸಂಪಾದನಾ ಕೃತಿಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ೧೮ ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣ, ೧೧ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಏಳು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಿದ್ದಾರೆ.

ಕೃತಿಗಳು

[ಬದಲಾಯಿಸಿ]
  1. ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ (2009)
  2. ಜನರ ವ್ಯಾಕರಣ(2011)
  3. ರಹಮತ್ ತರೀಕೆರೆ (ಲೇಖಕರೊಬ್ಬರ ಸಮಗ್ರ ಬರೆಹಗಳ ವಿಮರ್ಶೆಯ ಪುಸ್ತಕ,2012)
  4. ಸೇನೆಯಿಲ್ಲದ ಕದನ (2014)
  5. ಓದಿನ ಜಾಡು (ಸಾಹಿತ್ಯ ಸಂಸ್ಕೃತಿಯ ಬರೆಹಗಳು) (2016)
  6. ಅರಿವಿನ ಅಡಿಗೆ (ಸಂಪಾದಿತ ಕೃತಿ)
  7. ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು (2017)
  8. ಕೊಲುವೆನೆಂಬ ಭಾಷೆ (2021)
  9. ಓದಿನ ಒಕ್ಕಲು(2023)

ಕವನ ಸ೦ಕಲನಗಳು

[ಬದಲಾಯಿಸಿ]
  1. ಸೋರೆ ದೋಣಿಯ ಗೀತ, (2007)
  2. ನದಿಯ ತೀರದ ನಡಿಗೆ (2008 )
  3. ಗೋಡೆಯ ಚಿತ್ರ (2011)
  4. ದೇವನೇಗಿಲು (2016)
  5. ಹೂವಿನ ಬೇಟೆ (2018)
  6. ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ (2023)

ಹೆಚ್ಚಿನ ಓದು

[ಬದಲಾಯಿಸಿ]
  1. https://www.bookbrahma.com/author/ranganatha-kantanakunte