ಯೂಪಸ್ತಂಭ

ವಿಕಿಪೀಡಿಯ ಇಂದ
Jump to navigation Jump to search

ಯೂಪಸ್ತಂಭ -ಯಾಗದಲ್ಲಿ ಬಲಿಕೊಡುತ್ತಿದ್ದ ಪಶುಗಳನ್ನು ಕಟ್ಟಿಹಾಕುವುದಕ್ಕಾಗಿ ನಿಲ್ಲಿಸುತ್ತಿದ್ದ ಕಂಬ.

ರಚನೆ[ಬದಲಾಯಿಸಿ]

ಇದನ್ನು ಪಲಾಶ, ಖದಿರ, ಬಿಲ್ವ ಅಥವಾ ರೌಹಿತಕ ವೃಕ್ಷದಿಂದ ಮಾಡಿರಬೇಕಿತ್ತು ಇದರ ಎತ್ತರ ಸುಮಾರು ಒಂದೂವರೆ ಅಡಿಯಿಂದ ಐವತ್ತು ಅಡಿಯವರೆಗಿರಬಹುದು.

ಯೂಪದಲ್ಲಿ ಮೂರು ಭಾಗಗಳಿರುತ್ತಿದ್ದವು. ನೆಲದಲ್ಲಿ ಹೂಳುವ ಭಾಗವೇ ಉಪರ. ಇದನ್ನು ಕೆತ್ತಬಾರದು. ನೆಲದ ಮೇಲಿನ ಭಾಗ ಯೂಪ. ಇದನ್ನು ಕೆಳಗಿನಿಂದ ಮೇಲಕ್ಕೆ ಕ್ರಮೇಣ ಸಣ್ಣದಾಗುತ್ತ ಹೋಗುವಂತೆ, ಅಷ್ಟಕೋನಾಕಾರವಾಗಿ ಕೆತ್ತಬೇಕು. ಯೂಪದ ತುದಿಯೇ ಚಷಾಲ. ಇದು ಕಂಬದ ತುದಿಯಲ್ಲಿ ಶಿರೋವೇಷ್ಟನದಂತೆ ಇರುತ್ತದೆ.

ಪುರಾಣಗಳಲ್ಲಿ, ಸಂಸ್ಕøತ, ಕನ್ನಡ ಕಾವ್ಯಗಳಲ್ಲಿ ಯೂಪಸ್ತಂಭಗಳ ವರ್ಣನೆ ಅನೇಕ ಕಡೆ ಬರುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಬಂದಿರುವ ಕೆಳಗಿನ ವರ್ಣನೆ ಗಮನಾರ್ಹವಾದುದು:

ಪ್ರಾಪ್ತೇ ಯೂಪೋಚ್ಛ್ರಯೇ ತಸ್ಮಿನ್‍ಷಡ್ಬೈಲ್ವಾಃ ಖಾದಿರಾಸ್ತಥಾ |
ತಾವಂತೋ ವಿಲ್ವಸಹಿತಾಃ ಪರ್ಣಿನಶ್ಚ ತಥಾಪರೆ||
ಶ್ಲೇಷ್ಮಾತಕಮಯೋ ದಿಷ್ಟೋ ದೇವದಾರುಮಯಾಸ್ತಥಾ |
ದ್ವಾವೇವ ತತ್ರವಿಹಿತೌ ಬಾಹುವ್ಯಸ್ತಪರಿಗ್ರಹೌ ||
ಕಾರಿತಾಃ ಸರ್ವ ಏವೈತೇ ಶಾಸ್ತ್ರಜ್ಞೈರ್ಯಜ್ಞಕೋವಿದೈಃ |
ಶೋಭಾರ್ಥಂ ತಸ್ಯ ಯಜ್ಞಸ್ಯ ಕಾಂಚನಾಲಂಕೃತಾ ಭವನ್ ||
ವಿನ್ಯಸ್ತಾ ವಿಧಿವತ್ ಸರ್ವೇ ಶಿಲ್ಪಿಭಿಃ ಸುಕೃತಾ ದೃಢಾಃ |
ಅಷ್ಟಾಶ್ರಯಃ ಸರ್ವ ಏವ ಶ್ಲಕ್ಷ್ಣರೂಪ ಸಮನ್ವಿತಾಃ||


ಈ ವರ್ಣನೆಯಲ್ಲಿ ಯಾವ ಯಾವ ಜಾತಿಯ ಮರದಿಂದ ಯೂಪಗಳನ್ನು ಶಿಲ್ಪಿಗಳು ಮಾಡುತ್ತಿದ್ದರು ಎಂಬ ವಿವರಗಳಿವೆ. ಯೂಪಗಳು ಎಂಟು ಮೂಲೆಯುಳ್ಳಂಥವು ಎಂಬ ಸಂಗತಿ ಸಹ ವ್ಯಕ್ತವಾಗಿವೆ.

ಶ್ರೌತಸೂತ್ರಗಳಲ್ಲಿ ಯೂಪಗಳನ್ನು ಮರದಲ್ಲಿಯೇ ಮಾಡಬೇಕೆಂಬ ನಿಯಮಗಳಿದ್ದರೂ ಮುಂದೆ ಆ ನಿಯಮ ಸಡಿಲವಾಗಿ ಕಲ್ಲಿನಲ್ಲಿಯೂ ಮಾಡಿ ನಿಲ್ಲಿಸುವ ಪದ್ಧತಿ ಬಂದಂತೆ ಕಾಣುತ್ತದೆ.

ಯೂಪಸ್ತಂಭಗಳು[ಬದಲಾಯಿಸಿ]

  • ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಸ್ತಂಭವು ಕಲ್ಲಿನ ಯೂಪವೇ ಆಗಿದೆ. ಅದರ ಮೇಲಿರುವ ಭಿನ್ನ ಶಾಸನದಲ್ಲಿ ಅಶ್ವಯೂಪ ಎಂಬ ಅಕ್ಷರಗಳನ್ನು ಗುರುತಿಸಬಹುದು.
  • 5 ನೆಯ ಶತಮಾನದ ಶಾಸನಗಳಿರುವ ಯೂಪಗಳು ಬೋರ್ನಿಯೋ-ಸುಮಾತ್ರಗಳಲ್ಲಿ ದೊರತಿವೆ.
  • ಮಥುರಾನಗರದ ವಸ್ತುಸಂಗ್ರಹಾಲಯದಲ್ಲಿ ಎರಡು ಬಲು ಸುಂದರವಾದ ಯೂಪಗಳಿವೆ. ಅವುಗಳಲ್ಲಿ ಶಾಸನವಿರುವ ಯೂಪ ಬಲು ಸುಂದರವಾದ ಯೂಪ ಸುಮಾರು ಇಪ್ಪತ್ತು ಅಡಿ ಎತ್ತರವಿದೆ. ಅಷ್ಟಕೋನಾಕಾರದ ಈ ಕಂಬದ ಮಧ್ಯ ಪ್ರದೇಶದಲ್ಲಿ ಎರಡು ಸುತ್ತು ಇರುವ ಹಗ್ಗವನ್ನೂ ಅದರ ತುದಿಯಲ್ಲಿ ಕುಣಿಕೆಯನ್ನೂ ಕೆತ್ತಲಾಗಿದೆ. ಪಶುವಿನ ಕೊರಳ ಹಗ್ಗವನ್ನು ಕಟ್ಟಿಹಾಕುತ್ತಿದ್ದ ಪ್ರದೇಶವನ್ನು ಅದು ತೋರಿಸುತ್ತದೆ. ಕಂಬದ ಕೆಳಭಾಗ ಚೌಕವಾಗಿದ್ದು ಅದು ಉಪಾರವನ್ನೂ ಅದರ ಮೇಲ್ಭಾಗ ಎಂಟು ಮೂಲೆಯದಾಗಿದ್ದು ಯೂಪವನ್ನೂ ತುದಿಯ ಬಾಗಿದ ಭಾಗವು ಚಷಾಲವನ್ನೂ ಸೂಚಿಸುತ್ತದೆ. ಒಂದನೆಯ ಶತಮಾನದ ಒಂದು ಸಂಸ್ಕೃತ ಶಾಸನ ದ್ರೋಣಲ ಎಂಬ ಬ್ರಾಹ್ಮಣ ಹನ್ನೆರಡು ರಾತ್ರಿಗಳು ಮಾಡಿದ ಯಾಗದ ಸಂದರ್ಭದಲ್ಲಿ ಆ ಯೂಪವನ್ನು ನಿಲ್ಲಿಸಲಾಯಿತೆಂದು ತಿಳಿಸುತ್ತದೆ ( "..........ರುದ್ರಿಲಪುತ್ರೇಣ ದ್ರೋಣಲೇನ ಬ್ರಾಹ್ಮಣೇನ ದ್ವಾರಶರಾತ್ರೇಣ ಯೂಪಃ ಪ್ರತಿಷ್ಠಾಪಿತಃ.........."). ಇಂಥ ಇನ್ನೂ ಅನೇಕ ಶಾಸನ ಸಮೇತ ಯೂಪಸ್ತಂಭಗಳು ಭಾರತದಲ್ಲಿ ದೊರಕಿವೆ.


Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: