ಮೈಸೂರು ವಾಸುದೇವಾಚಾರ್ಯರು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಸಂಸ್ಕೃತ ಪಂಡಿತರಾದ ಸುಬ್ರಹ್ಮಣ್ಯಾಚಾರ್ಯ ಹಾಗೂ ಕೃಷ್ಣಾಬಾಯಿಯವರ ಏಕೈಕ ಪುತ್ರ ವಾಸು. ಇವರು ಮೈಸೂರಿನಲ್ಲಿ ೧೮.೦೫.೧೮೬೫ರಲ್ಲಿ ಜನಿಸಿದರು. ಪಂಡಿತರು ಮುಮ್ಮಡಿ ಕೃಷ್ಣಭೂಪಾಲರ ಆಳ್ವಿಕೆಯ ಕಾಲದಲ್ಲಿ ಇದ್ದವರು. ಇವರು ಸಂಗೀತದಲ್ಲಿ ಕೂಡ ಉತ್ತಮ ಪರಿಶ್ರಮ ಹೊಂದಿದ್ದರು. ಕಂಚಿನಂತಹ ಶಾರೀರದ ಜೊತೆಗೆ ಪುರಾಣ ಪ್ರವಚನ ವೃತ್ತಿಯನ್ನೂ ಅನುಸರಿಸುತ್ತಿದ್ದರು. ಇವರ ಹುಟ್ಟೂರು ಕೊಯಮತ್ತೂರು ಜಿಲ್ಲೆಗೆ ಸೇರಿದ್ದ ಚೇವೂರು ಎಂಬ ಪ್ರದೇಶ. ಆಚಾರ್ಯರ ಹೆಸರು ಸುತ್ತಮುತ್ತಲ ಪ್ರಾಂತಗಳಲ್ಲೆಲ್ಲಾ ವಿಪುಲವಾಗಿ ಹರಡಿತ್ತು. ಆದರೆ ಆಚಾರ್ಯರಿಗೆ ಮೈಸೂರಿಗೆ ಬಂದು ಅರಮನೆಯಲ್ಲಿ ಮಹಾರಾಜರ ಸಮ್ಮುಖದಲ್ಲಿ ಪುರಾಣ ಪ್ರವಚನ ಮಾಡಿ ಸನ್ಮಾನಿತರಾಗಬೇಕೆಂಬ ಹೆಬ್ಬಯಕೆ. ಅವರ ಬಯಕೆಯಂತೆಯೇ ಅವರಿಗೆ ಮಹಾರಾಜರ ಸಮ್ಮುಖದಲ್ಲಿ ನಾಲ್ಕಾರು ಬಾರಿ ಪ್ರವಚನಗಳನ್ನು ಮಾಡುವ ಅವಕಾಶ ಲಭಿಸಿತು. ಹಾಗೇ ಅರಮನೆಯ ವಿದ್ವತ್ ಶ್ರೇಣಿಗೂ ಸೇರಿಸಲ್ಪಟ್ಟರು. ಪ್ರತಿದಿನವೂ ಮಹಾರಾಜನು ಮಧ್ಯಾಹ್ನದ ಸಮಯದಲ್ಲಿ ಆಚಾರ್ಯರ ಪುರಾಣ ಕೇಳುವ ಪದ್ಧತಿ ಪ್ರಾರಂಭವಾಯಿತು.
ಒಮ್ಮೆ ಆಚಾರ್ಯರು ತಮ್ಮ ಜೊತೆ ತಮ್ಮ ಏಕೈಕ ಪುತ್ರ ವಾಸುವನ್ನೂ ಅರಮನೆಗೆ ಕರೆದುಕೊಂಡು ಹೋಗಿದ್ದರು. ಮಹಾರಾಜರು ಮಗುವನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ಗುಂಗುರುಕೂದಲ ಜೊತೆ ಆಟವಾಡುತ್ತಾ 'ಕೀರ್ತಿವಂತನಾಗು' ಎಂದು ಹರಸಿದರು. ದುರಾದೃಷ್ಟದಿಂದ ಆಚಾರ್ಯರು ಮಡಾದಿಯನ್ನೂ ಚಿಕ್ಕ ಮಗು ವಾಸುವನ್ನೂ ತೊರೆದು ವಿಧಿವಶರಾದರು. ವಾಸುವಿನ ತಾಯಿ ಕೃಷ್ಣಾಬಾಯಿಯವರ ತಂದೆ ಗೋಪಾಲಾಚಾರ್ಯರು ವಾಸುವಿನ ಲಾಲನೆ ಪಾಲನೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ವಾಸು ಪೆರಿಯಾಸ್ವಾಮಿ ತಿರುಮಲಾಚಾರ್ಯರೆಂಬ ಆಚಾರ್ಯರಲ್ಲಿ ಸಂಸೃತ ಪಾಠ ಸ್ವಲ್ಪ ಕಾಲ ಕಲಿತನಂತರ ಮಹಾರಾಜ ಸಂಸೃತ ಪಾಠಶಾಲೆಯಲ್ಲಿ ವ್ಯಾಸಂಗ ಮುಂದುವರೆಸುವನು. ಓದಿನಲ್ಲಿ ಆಸಕ್ತಿಯಿಲ್ಲದ ವಾಸುವಿಗೆ ಸಂಗೀತದಲ್ಲಿ ಒಲವು. ಆದರೆ ಸಂಗೀತ, ನೃತ್ಯಗಳು ಮರ್ಯಾದಸ್ಥರಿಗಲ್ಲವೆಂಬ ಭಾವನೆ ಇದ್ದ ಕಾಲವಾದ್ದರಿಂದ ಮನೆಯಲ್ಲಿ ತನ್ನ ಸಂಗೀತ ಕಲಿಯುವ ಆಸೆಯನ್ನು ತಾತನಲ್ಲಿ ಹೇಳಲು ಭಯ ಪಟ್ಟು ಸುಮ್ಮನಿದ್ದ ವಾಸು. ತನ್ನ ಸೋದರಮಾವ ಪದ್ಮನಾಭಾಚಾರ್ಯರಲ್ಲಿ ಸಂಸೃತ ಶ್ಲೋಕಗಳನ್ನಾದರೂ ರಾಗವಾಗಿ ಹಾಡುವಷ್ಟು ಸಂಗೀತ ಕಲಿಯುವ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡ. ಪಕ್ಕದ ಮನೆಯಲ್ಲೇ ಇದ್ದ ಸಂಗೀತ ವಿದ್ವಾನ್ ಸುಬ್ಬರಾಯರು, ವಾಸುವನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಸಂಗೀತ ಕಲಿಯುತ್ತಾ ಕಲಿಯುತ್ತಾ ಅದರ ಗೀಳು ವಾಸುವಿನ ಮನಸ್ಸಿನಲ್ಲಿ ಆಳವಾಗಿ ಬೇರೂರಿಯೇ ಬಿಟ್ಟಿತು. ತಾತನವರ ಕಣ್ಣು ತಪ್ಪಿಸಿ ಕಛೇರಿಗಳಿಗೆ ಹೋಗಿ ಬರುತ್ತಿದ್ದ. ಸಂಸೃತ ಪಾಠದಲ್ಲಿ ಸಂಪೂರ್ಣ ಆಸಕ್ತಿ ಕುಂದಿಹೋಯಿತು. ಕಳ್ಳತನದಲ್ಲಿ ನಡೆಯುತ್ತಿದ್ದ ಸಂಗೀತಾಭ್ಯಾಸದ ಸುಳಿವು ತಾತನವರಿಗೆ ಸಿಕ್ಕ ಕೂಡಲೆ ಅವರು ಮನೆಯನ್ನೇ ಬದಲಾಯಿಸಿದರು. ಅಲ್ಲಿಗೆ ವಾಸು ಹಾಗೂ ಸುಬ್ಬರಾಯರ ಸಂಗೀತ ಬಾಂಧವ್ಯ ಮುಗಿಯಿತು.
ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ನಿಯಮಗಳ ಬದಲಾವಣೆಯ ಕುರುಹಾಗಿ ಪ್ರತಿ ವಿದ್ಯಾರ್ಥಿಯೂ ಎರಡೆರಡು ಶಾಸ್ತ್ರಗಳನ್ನು ಅಭ್ಯಾಸ ಮಾಡಬೇಕಾಗಿದ್ದಿತು. ಆ ಎರ ಡು ಶಾಸ್ತ್ರಗಳು ಯಾವ್ಯಾವುದು ಎಂಬುದನ್ನು ಪಾಠಶಾಲೆಯ ಇಷ್ಟದೈವ ವಿನಾಯಕನೇ ನಿರ್ಣಯಿಸಬೇಕಾಗಿತ್ತು. ವಿನಾಯಕನ ಮುಂದೆ ಎರಡು ಕಾಗದದ ಸುರುಳಿಗಳ ಗುಡ್ಡೆಗಳನ್ನು ಹಾಕಲಾಗುತ್ತಿತ್ತು. ಒಂದರಲ್ಲಿ ವಿದ್ಯಾರ್ಥಿಗಳ ಹೆಸರುಗಳು, ಇನ್ನೊಂದರಲ್ಲಿ ಪಠ್ಯ ವಿಷಯಗಳನ್ನು ಸೂಚಿಸುವ ಸುರುಳಿಗಳು. ಯಾವುದಾದರೊಂದು ಪುಟ್ಟ ಮಗು ಮೊದಲ ಗುಡ್ಡೆಯಿಂದ ಒಂದು ಸುರುಳಿ ಎತ್ತಿ ಕೊಟ್ಟು ವಿದ್ಯಾರ್ಥಿಯ ಹೆಸರು ಕೂಗಿದೊಡನೆ, ಎರಡನೆಯ ಗುಡ್ಡೆಯಲ್ಲಿರುವ ಒಂದು ಸುರುಳಿಯನ್ನು ಎತ್ತಿಕೊಟ್ಟು, ಆ ವಿದ್ಯಾರ್ಥಿ ಓದಬೇಕಾಗಿದ್ದ ಶಾಸ್ತ್ರಗಳನ್ನು ತಿಳಿಸಬೇಕಿತ್ತು. ಈ ಪ್ರಕ್ರಿಯೆ ನಡೆಯುತ್ತಿದ್ದಾಗ ಪುಟ್ಟ ಬಾಲಕ ವಾಸು ಆತಂಕದಿಂದ ತನ್ನ ಸರತಿಗಾಗಿ ಕಾಯುತ್ತಿದ್ದ. ಕೊನೆಗೆ ವಾಸುದೇವ ಎಂಬ ಹೆಸರು ಕೂಗಿದೊಡನೆ, ಇನ್ನೊಂದು ಸುರುಳಿಯಿಂದ ಉಪಾಧ್ಯಾಯರ ಬಾಯಿಯಿಂದ 'ಸಂಗೀತ-ಸಾಹಿತ್ಯ' ಎಂಬ ಉದ್ಘೋಷ ಕೇಳಿಸಿದೊಡನೆ ವಾಸು ಹರ್ಷದಿಂದ ಕುಣಿದೆದ್ದ. ಈಗ ಯಾರ ಅಡ್ಡಿ ಆತಂಕಗಳೂ ಇಲ್ಲದೆ ವಾಸುದೇವ ನಿರ್ಭಯವಾಗಿ ಸಂಗೀತ ಕಲಿಯುವ ಬಂಗಾರದ ಅವಕಾಶವನ್ನು ಇಷ್ಟದೈವ ವಿನಾಯಕ ಒದಗಿಸಿಕೊಟ್ಟಿದ್ದ. ವಾಸು ಮರೆಯದೇ ಮನಸ್ಸಿನಲ್ಲಿಯೇ ಕೋಟಿ ನಮಸ್ಕಾರ ಮಾಡಿದ. ಹೀಗೆ ವೀಣೆ ಪದ್ಮನಾಭಯ್ಯ ವಾಸುವಿಗೆ ಸಂಗೀತನ ಎರಡನೆಯ ಗುರುಗಳಾದರು.