ಮೂಳೆ ಮುರಿತ(Bone fracture)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bone fracture
Classification and external resources
Internal and external views of an arm with a compound fracture, both before and after surgery.
ICD-10Sx2 (where x=0-9 depending on the location of the fracture)
ICD-9829
DiseasesDB4939
MeSHD050723

ಮೂಳೆ ಮುರಿತ (FRX ಅಥವಾ Fx , Fx , ಅಥವಾ # ಎಂದು ಸಂಕ್ಷಿಪ್ತಗೊಳಿಸಲಾಗಿದೆ) ಎಂಬುದು, 'ಮೂಳೆಯ ಸತತ ಜೋಡಣೆಯಲ್ಲಿ ಉಂಟಾಗುವ ಮುರಿತ ಎನ್ನಲಾದ ವೈದ್ಯಕೀಯ ಸ್ಥಿತಿ. ಬಹಳ ಬಲವಾದ ಏಟು ಅಥವಾ ಒತ್ತಡದಿಂದ ಮೂಳೆ ಮುರಿಯಬಹುದು. ಅಲ್ಲದೆ, ಅಸ್ಥಿರಂಧ್ರತೆ (osteoporosis), ಮೂಳೆಯ ಕ್ಯಾನ್ಸರ್ (cancer) ಅಥವಾ ಅಪೂರ್ಣ ಅಸ್ಥಿಸೃಷ್ಟಿ (osteogenesis imperfecta) ಮುಂತಾದ ಮೂಳೆಗಳನ್ನು ದುರ್ಬಲಗೊಳಿಸುವ ವೈದ್ಯಕೀಯ ಸ್ಥಿತಿಗಳ ಫಲವಾಗಿ ಸಣ್ಣ ಗಾಯದಿಂದ ಮೂಳೆ ಮುರಿಯಬಹುದು. ಇಂತಹ ಸ್ಥಿತಿಗಳನ್ನು ರೋಗಶಾಸ್ತ್ರೀಯ ಮೂಳೆ ಮುರಿತ ಎಂದು ಸೂಕ್ತವಾಗಿ ಹೇಳಬಹುದು.

ಇಂಗ್ಲಿಷ್‌ ಭಾಷೆಯಲ್ಲಿ broken bone' ಅಥವಾ bone break ಎರಡೂ ಸಹ ಮೂಳೆ ಮುರಿತಕ್ಕೆ ಸಮಾನ ಆಡುಮಾತಾಗಿದ್ದರೂ, ಮುರಿತ (break) ' ಎಂಬುದು ವಿಧ್ಯುಕ್ತ ಅಸ್ಥಿಚಿಕಿತ್ಸೆಯ ಉಕ್ತಿಯಲ್ಲ.

ವರ್ಗೀಕರಣ[ಬದಲಾಯಿಸಿ]

ಅಸ್ಥಿಚಿಕಿತ್ಸೆ[ಬದಲಾಯಿಸಿ]

ಅಸ್ಥಿಚಿಕಿತ್ಸೆ ವೈದ್ಯಕೀಯ ಶಾಸ್ತ್ರದಲ್ಲಿ, ಮೂಳೆ ಮುರಿತಗಳನ್ನು ವಿಭಿನ್ನ ರೀತಿಗಳಲ್ಲಿ ವರ್ಗೀಕರಿಸಲಾಗಿದೆ. ಐತಿಹಾಸಿಕವಾಗಿ, ಮೂಳೆ ಮುರಿತ ಸ್ಥಿತಿಗಳನ್ನು ಮೊದಲ ಬಾರಿಗೆ ವಿವರಿಸಿದ ವೈದ್ಯರ ಹೆಸರನ್ನು ಇಡಲಾಗಿದೆ. ಆದರೂ, ಇಂದು ಇನ್ನಷ್ಟು ವ್ಯವಸ್ಥಿತ ವರ್ಗೀಕರಣಗಳಿವೆ.

ಎಲ್ಲಾ ಮೂಳೆ ಮುರಿತಗಳನ್ನು ಕೆಳಕಂಡಂತೆ ಸ್ಥೂಲವಾಗಿ ವಿವರಿಸಬಹುದು:

 • ಒಳಭಾಗದ (ಸರಳ) ಮೂಳೆ ಮುರಿತ (Closed (simple) fractures) ಗಳಲ್ಲಿ ಚರ್ಮವು ಶಿಥಿಲವಾಗಿರುವುದಿಲ್ಲ. ತೆರೆದ (ಸಂಯುಕ್ತ) ಮೂಳೆ ಮುರಿತ (open (compound) fractures) ಗಳಲ್ಲಿ ಮುರಿದ ಮೂಳೆಯನ್ನು ಶ್ರುತಪಡಿಸುವ ಗಾಯವನ್ನು ಒಳಗೊಂಡಿರುತ್ತದೆ. ಅಥವಾ ಮೂಳೆಮುರಿತದ ಹೆಮಾಟೊಮಾ

(ರಕ್ತದಿಂದ ತುಂಬಿದ ಊತ) ಗಾಳಿಗೆ ಒಡ್ಡಿ, ಮೂಳೆಯು ಸೋಂಕಿಗೀಡಾಗಬಹುದು. ತೆರೆದ ಗಾಯಗಳು ಸೋಂಕಿಗೀಡಾಗುವ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ. ಮೂಳೆ ಮುರಿತದ ಆರೈಕೆಯಲ್ಲಿ ಮೂಳೆ ಸ್ಥಳಾಂತರಣ (fracture gap) ಹಾಗೂ ಮೂಳೆ ಮುರಿತದ ಕೋನೀಯ ಸ್ಥಿತಿಯನ್ನು(angulation) ಪರಿಗಣನೆಗೆ ತೆಗೆದುಕೊಳ್ಳಬೇಕು. ಮೂಳೆ ಮುರಿತದ ಕೋನೀಯ ಸ್ಥಿತಿ ಅಥವಾ ಸ್ಥಳಾಂತರಣದ ಪ್ರಮಾಣ ಬಹಳ ಹೆಚ್ಚಾಗಿದ್ದಲ್ಲಿ, ಮೂಳೆಯ ಸರಿಜೋಡಣೆ( ಕೈಯ ಪರಿಣತ ಬಳಕೆ)ಅಗತ್ಯವಿದೆ. ವಯಸ್ಕರಲ್ಲಿ, ಆಗಾಗ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಾಗಬಹುದು. ಸ್ಥಳಾಂತರಣ ಅಥವಾ ಕೋನೀಯ ಸ್ಥಿತಿಯ ಮೂಳೆಮುರಿತಗಳಿಗೆ ಹೋಲಿಸಿದರೆ, ಈ ಗಾಯಗಳು ಗುಣವಾಗಲು ಬಹಳ ಸಮಯ ಹಿಡಿಯುತ್ತದೆ.

ಸಂಕೋಚನ ಮೂಳೆ ಮುರಿತ ವು ಇನ್ನೊಂದು ವಿಧದ ಮೂಳೆ ಮುರಿತವಾಗಿದೆ. ಇದು ಸಾಮಾನ್ಯವಾಗಿ ಬೆನ್ನು ಮೂಳೆಯಲ್ಲಿ ಸಂಭವಿಸುತ್ತದೆ. ಉದಾಹರಣೆಗೆ, ಬೆನ್ನುಹುರಿಯ ಮೂಳೆಯ ಮುಂಭಾಗವು ಅಸ್ಥಿರಂಧ್ರತೆಯ ಕಾರಣ ಕುಸಿದಾಗ ಸಂಕೋಚನ ಮೂಳೆ ಮುರಿತ ಸಂಭವಿಸುವುದು (ಅಸ್ಥಿರಂಧ್ರತೆಯೆಂದರೆ ಮೂಳೆಗಳು ದುರ್ಬಲಗೊಂಡು, ನೋವು ಸಹಿತ ಅಥವಾ ನೋವಿಲ್ಲದೆ ಮುರಿತಕ್ಕೆ ಒಡ್ಡಿಕೊಳ್ಳುವ ಒಂದು ವೈದ್ಯಕೀಯ ಸ್ಥಿತಿ).

ಮೂಳೆ ಮುರಿತಗಳಲ್ಲಿ ಇತರೆ ರೀತಿಗಳು ಕಳಕಂಡಂತಿವೆ:

 • ಸಂಪೂರ್ಣ ಮೂಳೆ ಮುರಿತ: ಇದರಲ್ಲಿ ಮೂಳೆಯ ಭಾಗಗಳು ಸಂಪೂರ್ಣ ಪ್ರತ್ಯೇಕಗೊಳ್ಳುತ್ತದೆ.
 • ಅಪೂರ್ಣ ಮೂಳೆ ಮುರಿತ: ಇದರಲ್ಲಿ ಮೂಳೆ ಭಾಗಗಳು ಆಂಶಿಕವಾಗಿ ಇನ್ನೂ ಕೂಡಿಕೊಂಡಿರುತ್ತವೆ.
 • ರೇಖೀಯ ಮೂಳೆ ಮುರಿತ: ಇದು ಮೂಳೆಯ ಉದ್ದನೆಯ ಅಕ್ಷಕ್ಕೆ ಸಮಾನಾಂತರವಾಗಿ ಸಂಭವಿಸುವ ಮೂಳೆ ಮುರಿತ.
 • ಅಡ್ಡವಾದ ಮೂಳೆ ಮುರಿತ: ಇದು ಮೂಳೆಯ ಉದ್ದನೆಯ ಅಕ್ಷಕ್ಕೆ ಅಡ್ಡಲಾಗಿ ಸಂಭವಿಸುವ ಮೂಳೆ ಮುರಿತ.
 • ಓರೆಯಾದ ಮೂಳೆ ಮುರಿತ: ಇದು ಮೂಳೆಯ ಉದ್ದನೆಯ ಅಕ್ಷಕ್ಕೆ ಓರೆಯಾಗಿ ಸಂಭವಿಸುವ ಮೂಳೆ ಮುರಿತ.
 • ಸುರುಳಿಯಾಕಾರದ ಮೂಳೆ ಮುರಿತ: ಇಲ್ಲಿ ಮುರಿದ ಮೂಳೆಯ ಒಂದು ಭಾಗದಲ್ಲಿ ತಿರುಚಿಹೋಗಿರುತ್ತದೆ.
 • ತ್ರುಟಿತ ಅಸ್ಥಿಭಂಗ: ಇದು ಮೂಳೆಯು ಹಲವು ಚೂರುಗಳಾಗಿ ಒಡೆದುಹೋಗುವ ಮೂಳೆ ಮುರಿತ.
 • ಪರಸ್ಪರ ಒತ್ತಿದ ಮೂಳೆ ಮುರಿತ: ಇದು ಮೂಳೆಗಳ ಭಾಗಗಳು ಒಂದಕ್ಕೊಂದು ಒತ್ತಿಕೊಂಡಾಗ ಸಂಭವಿಸುವ ಮೂಳೆ ಮುರಿತ.

OTA ವರ್ಗೀಕರಣ[ಬದಲಾಯಿಸಿ]

'ಅಸ್ಥಿಶಾಸ್ತ್ರೀಯ ಅಘಾತ ಚಿಕಿತ್ಸಾ ಒಕ್ಕೂಟ' ಎಂಬ ಮೂಳೆ ಶಸ್ತ್ರಚಿಕಿತ್ಸಾ ತಜ್ಞರ ಒಕ್ಕೂಟವು ಮುಲ್ಲರ್‌ ಮತ್ತು ಎಓ ಪ್ರತಿಷ್ಠಾನದ ವರ್ಗೀಕರಣವನ್ನು ಅಳವಡಿಸಿಕೊಂಡು ನಂತರ ಅದನ್ನು ವಿಸ್ತರಿಸಿತು.[೧] ಗಾಯವನ್ನು ನಿಖರವಾಗಿ ವಿವರಿಸಿ ಚಿಕಿತ್ಸೆಗೆ ಮಾರ್ಗದರ್ಶನ ನೀಡಲು ('ದಿ ಕಾಂಪ್ರಹೆನ್ಸಿವ್ ಕ್ಲ್ಯಾಸಿಫೀಕೇಷನ್‌ ಆಫ್‌ ದಿ ಲಾಂಗ್‌ ಬೋನ್ಸ್'‌) ಎಂಬ ವಿಸ್ತಾರವಾದ ವರ್ಗೀಕರಣ ವ್ಯವಸ್ಥೆಯನ್ನು ಬಳಸಲಾಗಿದೆ.[೨][೩] ಈ ಸಂಹಿತೆಯಲ್ಲಿ ಐದು ಭಾಗಗಳಿವೆ:

 • ಮೂಳೆ: ಸಂಬಂಧಿತ ಮೂಳೆಯ ಸಂಕೇತೀಕರಣದಿಂದ ಮೂಳೆ ಮುರಿತದ ವಿವರಣವು ಆರಂಭವಾಗುವುದು:

(1) ಹೆಗಲಮೂಳೆ‌ (Humerus), (2) ಮುಂದೋಳಿನಲ್ಲಿ ಕಡಿಮೆ ಉದ್ದದ ದಪ್ಪ ಮೂಳೆ‌ (Radius)/ಮುಂದೋಳಿನ ಒಳಪಾರ್ಶ್ವದ ಎಲುಬು (Ulna), (3) ತೊಡೆಯೆಲುಬು (Femur), (4) ಮೊಳಕಾಲು ಮೂಳೆ (Tibia)/ಮೊಳಕಾಲಿನ ಕೆಳಗಿರುವ ಎರಡು ಮೂಳೆಗಳಲ್ಲಿ ತೆಳುವಾದ ಮೂಳೆ (Fibula), (5) ಬೆನ್ನೆಲುಬು (Spine), (6) ಶ್ರೋಣಿ ಕುಹರ (Pelvis), (24) ಮಣಿಕಟ್ಟು (Carpus), (25) ಹಸ್ತಮಧ್ಯದ ಮೂಳೆಗಳು (Metacarpals), (26) ಕೈಬೆರಳೆಲುಬು (Phalanx - Hand), (72) ಮೊಣಕಾಲು ಮೂಳೆಗೆ ಆಧಾರವಾಗಿರುವ ಕಾಲಿನ ಹರಡೆಲುಬು (Talus), (73) ಕ್ಯಾಕೆನಿಯಸ್‌ (Calcaneus), (74) ಅಂಗೈ ಅಥವಾ ಅಂಗಾಲಿನ ದೋಣಿಯಾಕಾರದ ಮೂಳೆ (Navicular), (75) ಬೆಣೆಯಾಕಾರದ ಮೂಳೆ (Cuneiform), (76) ಘನಾಭ ಮೂಳೆ (Cuboid), (80) ಲಿಸ್‌ಫ್ರ್ಯಾಂಕ್‌ (LisFranc), (81) ಪಾದಪಂಚಾಸ್ಥಿಗಳು (Metatarsals), (82) ಕಾಲ್ಬೆರಳೆಲುಬು (Phalanx - Foot), (45) ಮಂಡಿಚಿಪ್ಪು (Patella), (06) ಕೊರಳೆಲುಬು (Clavicle), (09) ಸ್ಕಂಧಾಸ್ಥಿ (Scapula)

 • ಮೂಳೆಗಳಿರುವ ಸ್ಥಳ: ಸಂಬಂಧಿತ ಮೂಳೆಯ ಭಾಗದ ಒಂದು ಸಂಕೇತ (ಉದಾಹರಣೆಗೆ ತೊಡೆಯೆಲುಬಿನ ತಿರುಳು: ಸಮೀಪಸ್ಥ (proximal)=1, ಡಯಾಫಿಸಿಯಲ್‌ (diaphyseal)=2, ಕೊನೆಯಲ್ಲಿರುವ (distal)=3 (ಮುಂಚಿನಿಂದಲೇ ಚಾಲ್ತಿಯಲ್ಲಿರುವ ವೆಬರ್‌ ವರ್ಗೀಕರಣದ ಕಾರಣ, ಕಣಕಾಲಿನಲ್ಲಿ 'ಮ್ಯಾಲಿಯೊಲರ್'‌ ಭಾಗವನ್ನು ಪ್ರತ್ಯೇಕವಾಗಿ ಪರಿಗಣಿಸಿ, 4[೪] ಎಂದು ಸಂಕೇತ ನೀಡಲಾಗಿದೆ).[೪] ತೊಡೆಯೆಲುಬಿನ ಸಮೀಪದ ಭಾಗವನ್ನು ಹೊರತುಪಡಿಸಿ, ಮೂಳೆಯ ಕೊನೆಯಲ್ಲಿರುವ ಮತ್ತು ಸಮೀಪದ ಭಾಗಗಳನ್ನು ಮೂಳೆಗೂಜಿನ ನಡುವಿನ ಅಂತರದಷ್ಟಿರುವ ಚೌಕದಿಂದ ವ್ಯಾಖ್ಯಾನಿಸಲಾಗಿದೆ. ಇವೆರಡೂ ಚೌಕಗಳ ನಡುವಿನ ಮೂಳೆಯ ಭಾಗವನ್ನು ಡಯಾಫಿಸಿಸ್‌ ಎನ್ನಲಾಗಿದೆ.
 • ವಿಧ: ಮೂಳೆಯು ಸರಳ ಮುರಿತವೇ ಅಥವಾ ಹಲವು ಚೂರುಗಳ ಮುರಿತವೇ ಹಾಗೂ ಅದು ಮುಚ್ಚಿರುವುದೇ ಅಥವಾ ತೆರೆದಿರುವುದೇ ಎಂಬುದನ್ನು ನಿರ್ಣಯಿಸುವುದು ಬಹಳ ಮುಖ್ಯ: A=ಸರಳ ಮೂಳೆ ಮುರಿತ, B=ಸಂಕೋಚನ ಮೂಳೆ ಮುರಿತ, C=ಸಂಕೀರ್ಣ ಮೂಳೆ ಮುರಿತ
 • ಗುಂಪು: ಮೂಳೆ ಮುರಿತದ ರೇಖಾಚಿತ್ರಣವನ್ನು ಅಡ್ಡಲಾದ, ಓರೆಯಾದ, ಸುರುಳಿಯಾಕಾರದ ಅಥವಾ ತುಂಡುಗಳಾದ ಮುರಿತವನ್ನು ಉಲ್ಲೇಖಿಸಲಾಗುತ್ತದೆ.
 • ಉಪಗುಂಪು: ಮುರಿತದ ಇತರೆ ಲಕ್ಷಣಗಳನ್ನು ಸ್ಥಳಾಂತರಣ, ಬಾಗುವಿಕೆ ಮತ್ತು ಕುಗ್ಗಿಸುವಿಕೆಯ ದೃಷ್ಟಿಯಿಂದ ವಿವರಿಸಲಾಗುತ್ತದೆ. ಮೂಳೆಯು ಉತ್ತಮ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದು ವಾಸಿಯಾಗುತ್ತಿದ್ದಲ್ಲಿ ಇದನ್ನು 'ಸ್ಥಿರ ಮೂಳೆ ಮುರಿತ' ಎನ್ನಲಾಗುತ್ತದೆ. ಮುರಿದುಹೋದ ಸ್ಥಳದಲ್ಲಿ ಮೂಳೆಯು ಬಾಗಿದ್ದಲ್ಲಿ, ಕುಗ್ಗಿದ್ದಲ್ಲಿ ಅಥವಾ ತಿರುಚಿಹೋಗಿದ್ದಲ್ಲಿ, ದೀರ್ಘಾವ ಧಿಯಲ್ಲಿ ಕಳಪೆ ಕಾರ್ಯನಿರ್ವಹಣೆಗೆ ದಾರಿಕಲ್ಪಿಸಿದರೆ ಇದನ್ನು 'ಅಸ್ಥಿರ ಮೂಳೆ ಮುರಿತ' ಎನ್ನಲಾಗುತ್ತದೆ.

ಇತರೆ ವರ್ಗೀಕರಣ ವ್ಯವಸ್ಥೆಗಳು[ಬದಲಾಯಿಸಿ]

ಮೂಳೆ ಮುರಿತಗಳ ವಿವಿಧ ರೀತಿಗಳನ್ನು ವರ್ಗೀಕರಿಸಲು ಇತರೆ ವ್ಯವಸ್ಥೆಗಳಿವೆ:

 • "ಡೆನಿಸ್‌ ವರ್ಗೀಕರಣ": ಬೆನ್ನುಹುರಿ[೫]
 • "ಫ್ರೈಕ್ಮೆನ್‌ ವರ್ಗೀಕರಣ": ಮನುಷ್ಯನ ಮುಂದೋಳಿನ ದಪ್ಪ ಮೂಳೆ
 • "ಗಸ್ಟಿಲೋ ತೆರೆದ ಮೂಳೆ ಮುರಿತದ ವರ್ಗೀಕರಣ"[೬]
 • "ಲೆಟೂರ್ನೆಲ್‌ ಮತ್ತು ಜುಡೆಟ್ ವರ್ಗೀಕರಣ": ಅಸಿಟ್ಯಾಬುಲರ್‌ ಮೂಳೆ ಮುರಿತಗಳು[೭]
 • "ನೀರ್‌ ವರ್ಗೀಕರಣ": ಹೆಗಲಮೂಳೆ[೮][೯]
 • "ಸೇನ್ಸ್‌ಹೇಮರ್ಸ್‌ ವರ್ಗೀಕರಣ": ತೊಡೆಮೂಳೆ[೧೦]

ಚಿಹ್ನೆಗಳು ಹಾಗೂ ರೋಗ ಲಕ್ಷಣಗಳು[ಬದಲಾಯಿಸಿ]

ಮೂಳೆಯಲ್ಲಿನ ಅಂಗಾಂಶಗಳು ಯಾವುದೇ ಸಂವೇದನಾ ಗ್ರಾಹಕ (ನೊಸಿಸೆಪ್ಟರ್)‌ ಹೊಂದಿರದಿದ್ದರೂ, ಹಲವು ಕಾರಣಗಳಿಂದಾಗಿ ಮೂಳೆ ಮುರಿತವು ಯಾತನಾಮಯವಾಗಿದೆ:[೧೧]

 • ಪರ್ಯಸ್ಥಿ ನಿರಂತರತೆಯಲ್ಲಿ ಸೀಳಿಕೊಂಡು, ಒಳ-ಅಸ್ಥಿಯು ಮುರಿದಿರಬಹುದು ಅಥವಾ ಮುರಿಯದೆ ಇರಬಹುದು; ಇವೆರಡೂ ಸಹ ಬಹಳಷ್ಟು ಸಂವೇದನಾ ಗ್ರಾಹಕಗಳನ್ನು ಹೊಂದಿರುತ್ತವೆ.
 • ಪರ್ಯಸ್ಥಿ ರಕ್ತ ನಾಳಗಳು ಹರಿದು ರಕ್ತ ಸ್ರಾವದಿಂದ, ಉಂಟಾಗುವ ಮೃದುವಾದ ಅಂಗಾಂಶಗಳಲ್ಲಿ ದ್ರವಶೋಥ(ಇಡೀಮ-ನೀರಿನಂತ ದೃವ ತುಂಬಿ ಊದುವುದು) ಸಂಭವಿಸಿ ಒತ್ತಡದ ನೋವುಂಟಾಗಬಹುದು.
 • ಮೂಳೆ ಭಾಗಗಳನ್ನು ಸ್ಥಾನದಲ್ಲಿ ಹಿಡಿದಿಟ್ಟುಕೊಳ್ಳಲು ಯತ್ನಿಸಿ ಸ್ನಾಯು ಸೆಳೆತ ಸಂಭವಿಸಬಹುದು.

ರೋಗಶರೀರಶಾಸ್ತ್ರ[ಬದಲಾಯಿಸಿ]

ಪೆಟ್ಟಾದ ಮೂಳೆ ಮತ್ತು ಸುತ್ತಮುತ್ತಲ ಅಂಗಾಂಶಗಳಲ್ಲಿ ರಕ್ತಸ್ರಾವವಾಗಿ, ಮೂಳೆ ಮುರಿತದ ಸ್ಥಳದಲ್ಲಿ ರಕ್ತ ತುಂಬಿದ ಊತ ವುಂಟಾದಾಗ ಮೂಳೆ ಮುರಿತ ಗುಣವಾಗುವ ಸಹಜ ಪ್ರಕ್ರಿಯೆ ಆರಂಭವಾಗುತ್ತದೆ. ರಕ್ತವು ಹೆಪ್ಪುಗಟ್ಟಿ, ಮೂಳೆ ಮುರಿದ ಭಾಗಗಳ ನಡುವೆ ಗೆಡ್ಡೆ ಕಟ್ಟುವುದು. ಕೆಲವು ದಿನಗಳೊಳಗೆ, ಆ ರಕ್ತ ಗೆಡ್ಡೆಯ ಲೋಳೆಯಂತಹ ಜೈವಿಕ ಪದಾರ್ಥದೊಳಗೆ ರಕ್ತ ನಾಳಗಳು ಬೆಳೆದುಕೊಳ್ಳುತ್ತವೆ. ಹೊಸ ರಕ್ತ ನಾಳಗಳು ಈ ಸ್ಥಳಕ್ಕೆ ಭಕ್ಷಕ ಕೋಶಗಳನ್ನು ತರುತ್ತವೆ. ಇವು ಅನಗತ್ಯ ವಸ್ತುಗಳನ್ನು ಕ್ರಮೇಣ ತೆಗೆದುಬಿಡುತ್ತವೆ. ರಕ್ತ ನಾಳಗಳು ನಾಳಗಳ ಒಳಗೋಡೆಗಳಲ್ಲಿ ಫೈಬ್ರೊಬ್ಲಾಸ್ಟ್ ಜೀವಕೋಶಗಳನ್ನು ಗ‌ಳನ್ನು ತರುತ್ತವೆ. ಇವು ಸಂಖ್ಯೆಗಳಲ್ಲಿ ಹೆಚ್ಚಾಗಿ ಕಾಲಜನ್ ಪ್ರೊಟೀನ್‌ ನಾರುಗಳು ರಚನೆಯಾಗುತ್ತವೆ. ಈ ರೀತಿ, ರಕ್ತ ಹೆಪ್ಪುಗಟ್ಟುವಿಕೆಯ ಸ್ಥಳದಲ್ಲಿ ಕಲಾಜನ್ ಪ್ರೋಟೀನ್ ಮ್ಯಾಟ್ರಿಕ್‌ನಿಂದ ಬದಲಾಗುತ್ತದೆ. ಕಲಾಜನ್‌(ಅಂಟುಜನಕ) ರಬ್ಬರಿನಂತಿರುವ ಸ್ಥಾಯಿತ್ವದಿಂದಾಗಿ, ಬಲ ಪ್ರಯೋಗಿಸದಿದ್ದಲ್ಲಿ, ಮೂಳೆಯ ಭಾಗಗಳು ಸ್ಚಲ್ಪಮಟ್ಟಕ್ಕೆ ಮಾತ್ರ ಕದಲಲು ಅವಕಾಶ ನೀಡುತ್ತವೆ.

ಈ ಹಂತದಲ್ಲಿ, ಕೆಲವೊ ಫೈಬ್ರೊಬ್ಲಾಸ್ಟ್‌ಗಳು ಕರಗಿಸಲಾಗದ ಹರಳುಗಳ ರೂಪದಲ್ಲಿ ಮೂಳೆಯ ದ್ರವ್ಯ (ಕ್ಯಾಲ್ಸಿಯಮ್‌ ಹೈಡ್ರಾಕ್ಸಿಅಪೆಟೈಟ್‌) ಅಳವಡಿಸುತ್ತವೆ. ಕಲಾಜನ್(ಅಂಟುಜನಕ) ದ್ರವ್ಯದ ಖನಿಜೀಕರಣವು ಇದನ್ನು ದೃಢಗೊಳಿಸಿ, ಮೂಳೆಯನ್ನಾಗಿ ರೂಪಾಂತರಗೊಳಿಸುತ್ತದೆ. ವಾಸ್ತವವಾಗಿ, ಮೂಳೆಯು ನಿಜಕ್ಕೂ ಖನಿಜೀಕರಿಸಲಾದ ಕಲಾಜನ್ ದ್ರವ್ಯವಾಗಿದೆ. ಮೂಳೆಯಿಂದ ಖನಿಜವನ್ನು ಕರಗಿಸಿದ್ದಲ್ಲಿ, ಅದು ರಬ್ಬರಿನಂತಾಗುತ್ತದೆ. ಗುಣವಾಗುತ್ತಿರುವ ಮೂಳೆಯ ಗಂಟುಮೂಳೆಯು ಕ್ಷ-ಕಿರಣಗಳಲ್ಲಿ ಎದ್ದುಕಾಣುವಂತಾಗಲು, ವಯಸ್ಕರಲ್ಲಿ ಸರಾಸರಿಯಾಗಿ ಆರು ವಾರಗಳು ಹಾಗೂ ಮಕ್ಕಳಲ್ಲಿ ಇನ್ನೂ ಕಡಿಮೆ ಸಮಯದಲ್ಲಿ ಸರಾಸರಿ ಸಾಕಷ್ಟು ಖನಿಜೀಕರಣಗೊಳ್ಳುತ್ತದೆ. ಈ ಆರಂಭಿಕ 'ಹೆಣೆಯಲಾದ' ಮೂಳೆಯು, ಪರಿಪಕ್ವಮೂಳೆಯ ದೃಢ ಯಾಂತ್ರಿಕ ಗುಣಗಳನ್ನು ಹೊಂದಿರುವುದಿಲ್ಲ. ಹೊಸರೂಪ ನೀಡುವ ವಿಧಾನದ ಮೂಲಕ ಹೆಣೆಯಲಾದ ಮೂಳೆಯ ಸ್ಥಳದಲ್ಲಿ ಪರಿಪೂರ್ಣ ತೆಳುಪೊರೆಗಳಾಗಿ ಜೋಡಿಸಿದ ಮೂಳೆಯು ಬದಲಾಗುತ್ತದೆ.

ಈ ಇಡೀ ಪ್ರಕ್ರಿಯೆಗೆ ಸುಮಾರು 18 ತಿಂಗಳುಗಳಾಗಬಹುದು. ಆದರೆ ವಯಸ್ಕರಲ್ಲಿ, ಮೂಳೆ ಮುರಿತದ ಮೂರು ತಿಂಗಳುಗಳ ನಂತರ, ಗುಣವಾಗುತ್ತಿರುವ ಮೂಳೆಯ ಬಲವು ಸಹಜ ಮಟ್ಟದ 80%ರಷ್ಟಿರುತ್ತದೆ.

ಹಲವು ಕಾರಣಗಳು ಮೂಳೆ ಗುಣವಾಗುವ ಪ್ರಕ್ರಿಯೆಗೆ ನೆರವಾಗಬಹುದು ಅಥವಾ ಅಡ್ಡಿಯಾಗಬಹುದು. ಉದಾಹರಣೆಗೆ, ನಿಕೊಟಿನ್‌ನ ಯಾವುದೇ ರೂಪವು ಮೂಳೆ ಗುಣವಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಕ್ಯಾಲ್ಸಿಯಮ್‌ ಹಾಗೂ ತಕ್ಕಮಟ್ಟದ ಪೌಷ್ಟಿಕ ಆಹಾರ ಸೇವಿಸುವಿಕೆಯಿಂದ ಮೂಳೆ ಗುಣವಾಗುವುದನ್ನು ತ್ವರಿತಗೊಳಿಸಬಹುದು. ಮೂಳೆಯು ಬಾರವನ್ನು ಸಹಿಸಿಕೊಳ್ಳುವುದಕ್ಕೆ ಸಾಕಷ್ಟು ಗುಣವಾದ ನಂತರ ಅದರ ಮೇಲೆ ಭಾರ ಬಿಡುವಂತಹ ಒತ್ತಡಗಳು ಸಹ ಮೂಳೆಯ ಬಲವನ್ನು ಹೆಚ್ಚಿಸುತ್ತದೆ. ಮೂಳೆಯ ಚೂರುಗಳು ಸ್ನಾಯುಗಳಲ್ಲಿ ಹುದುಗಿಕೊಂಡು ಬಹಳಷ್ಟು ನೋವು ಉಂಟಾಗಬಹುದು. ಉರಿಯೂತ ರೋಧಕ ಔಷಧಗಳು (NSAID) ಮೂಳೆ ಗುಣವಾಗುವ ವೇಗವನ್ನು ನಿಧಾನಿಸುತ್ತವೆ ಎಂಬ ಸೈದ್ಧಾಂತಿಕ ತಳಮಳ ವ್ಯಕ್ತವಾದರೂ, ಸರಳ ಮೂಳೆ ಮುರಿತಗಳಲ್ಲಿ ಇಂತಹ ನೋವಳಿಕೆಯ ಮದ್ದುಗಳನ್ನು ಬಳಸದಿರಲು ಯಾವುದೇ ಕಾರಣವಿಲ್ಲ.[೧೨]

ರೋಗನಿರ್ಣಯ[ಬದಲಾಯಿಸಿ]

ಮೂಳೆಮುರಿತದ ಇತಿಹಾಸ ಮತ್ತು ಮೂಳೆ ಮುರಿದಿರುವ ಭಾಗದ ದೈಹಿಕ ಪರೀಕ್ಷೆಗಳ ಆಧಾರದ ಮೂಳೆಮುರಿತವನ್ನು ವೈದ್ಯಶಾಸ್ತ್ರೀಯವಾಗಿ ರೋಗನಿರ್ಣಯ ಮಾಡಬಹುದು.

ಕ್ಷ-ಕಿರಣವೊಂದೇ ಸಾಲದು ಎಂಬ ಪರಿಸ್ಥಿತಿಗಳಲ್ಲಿ ಕಂಪ್ಯೂಟೆಡ್‌‌ ತಲಲೇಖನ (ಸಿಟಿ ಸ್ಕ್ಯಾನ್) ನಡೆಸಬಹುದಾಗಿದೆ.

ಚಿಕಿತ್ಸೆ[ಬದಲಾಯಿಸಿ]

ಮೆಡುಲದೊಳಗಿನ ದಂಡದೊಂದಿಗೆ ಮುರಿದ ಜಂಘಾಸ್ಥಿ(ಮೊಳಕಾಲು ಮೂಳೆ) ಸಮೀಪದ ನೋಟ ತೋರಿಸುತ್ತಿರುವ ಕ್ಷಕಿರಣ ಚಿತ್ರ.

ನೋವು ನಿವಾರಣೆ[ಬದಲಾಯಿಸಿ]

ಮಕ್ಕಳ ತೋಳು ಮೂಳೆ ಮುರಿತಗಳಲ್ಲಿ, ಅಸಿಟಮಿನೊಫೆನ್‌ ಮತ್ತು ಕೊಡೀನ್‌ ಸಂಯುಕ್ತದಷ್ಟೇ, ಐಬ್ಯುಪ್ರೊಫೆನ್‌ ಸಹ ಪರಿಣಾಮಕಾರಿ ಎಂದು ತಿಳಿದುಬಂದಿದೆ.[೧೩]

ನಿಶ್ಚಲತೆ[ಬದಲಾಯಿಸಿ]

ಮೂಳೆ ಗುಣವಾಗುವಿಕೆಯು ಆಗಾಗ್ಗೆ ಸಂಭವಿಸುವ ಸಹಜ ಪ್ರಕ್ರಿಯೆಯಾಗಿರುವುದರಿಂದ, ಮೂಳೆ ಮುರಿತದ ಚಿಕಿತ್ಸೆಯು ಮೂಳೆ ಗುಣವಾದ ಮೇಲೆ, ಅದರ ಪರಿಪೂರ್ಣ ಬಳಕೆ ಯನ್ನು ಖಾತರಿಪಡಿಸುವ ಗುರಿ ಹೊಂದಿರುತ್ತದೆ . ಸಾಮಾನ್ಯವಾಗಿ, ಮುರಿದ ಮೂಳೆ ಚೂರುಗಳನ್ನು (ಅಗತ್ಯವಿದ್ದಲ್ಲಿ) ತಮ್ಮ ಸಹಜ ಸ್ಥಾನಗಳಲ್ಲಿ ಮರುಸ್ಥಾಪಿಸಿ, ಮೂಳೆ ಗುಣವಾಗುವವರೆಗೂ ಅದೇ ಸ್ಥಾನಗಳನ್ನು ಕಾಯ್ದುಕೊಳ್ಳುವ ಮೂಲಕ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಆಗಾಗ್ಗೆ, ಮೂಳೆಯನ್ನು ಸರಿಯಾದ ಸ್ಥಾನದಲ್ಲಿ ಜೋಡಿಸುವುದನ್ನು 'ಮರುಹೊಂದಿಸುವಿಕೆ' ಎನ್ನಲಾಗಿದೆ. ಸುಧಾರಿತ ಜೋಡಣೆಯನ್ನು ಪರಿಶೀಲಿಸಲು ಕೇವಲ ಕ್ಷ-ಕಿರಣದ ಅಗತ್ಯ ಮಾತ್ರವಿರುತ್ತದೆ. ಈ ಪ್ರಕ್ರಿಯೆಯು ಅರಿವಳಿಕೆಯಿಲ್ಲದೆ, ಮೂಳೆ ಮುರಿತದಷ್ಟೇ ಯಾತನಾಮಯವಾಗಿದೆ. ಇದಕ್ಕಾಗಿಯೇ, ಮುರಿದ ಮೂಳೆಯ ಅಂಗವನ್ನು ಪ್ಲ್ಯಾಸ್ಟರ್‌ ಅಥವಾ ಫೈಬರ್ಗ್ಲಾಸ್‌ ಕವಚ ಬಳಸಿ ಕದಲದಂತೆ ನಿಶ್ಚಲಗೊಳಿಸಲಾಗುವುದು. ಇದು ಮೂಳೆಯನ್ನು ಸಹಜ ಸ್ಥಾನದಲ್ಲಿರಿಸಿ, ಮೂಳೆ ಮುರಿತ ಸ್ಥಳದ ಅಕ್ಕಪಕ್ಕದ ಕೀಲುಗಳನ್ನು ನಿಶ್ಚಲಗೊಳಿಸುತ್ತದೆ. ಮೂಳೆ ಮುರಿತ ನಂತರದ ಆರಂಭಿಕ ದ್ರವಶೋಥ ಅಥವಾ ಊತ ಕಡಿಮೆಯಾದಾಗ, ಮುರಿದ ಮೂಳೆಯನ್ನು ತೆಗೆಯಬಹುದಾದ ಬಂಧನಿ(ಪಟ್ಟಿ) ಅಥವಾ ಆರ್ಥೊಸಿಸ್‌(ಮೂಳೆಚಿಕಿತ್ಸೆಯ ಉಪಕರಣ)ನಲ್ಲಿ ಇರಿಸಬಹುದು. ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆಯ ನೀಡಿದಲ್ಲಿ, ಮುರಿದ ಮೂಳೆಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು ಶಸ್ತ್ರಚಿಕಿತ್ಸಾ ಮೊಳೆಗಳು, ತಿರುಪು ಮೊಳೆಗಳು, ಬಿಲ್ಲೆಗಳು ಮತ್ತು ತಂತಿಗಳನ್ನು ಬಳಸಲಾಗುತ್ತದೆ. ಪರ್ಯಾಯವಾಗಿ, ಮುರಿದ ಮೂಳೆಗಳನ್ನು 'ಇಲಿಜರೊವ್‌ ಪದ್ದತಿ'ಯ ಮೂಲಕ, ಬಾಹ್ಯ ಬಂಧನಿ ಅಳವಡಿಸುವ ಮೂಲಕ ಗುಣಪಡಿಸಬಹುದು.

ಆಗಾಗ್ಗೆ, ಕಾಲ್ಬೆರಳು ಮತ್ತು ಕೈಬೆರಳುಗಳ ಸಣ್ಣ ಮೂಳೆಗಳಿಗೆ ಬಂಧನಿಯಿಲ್ಲದೆ ಚಿಕಿತ್ಸೆ ನೀಡಲಾಗುತ್ತದೆ. ಚೆನ್ನಾಗಿರುವ ಪಕ್ಕದ ಬೆರಳಿನೊಂದಿಗೆ ಪಟ್ಟಿ ಕಟ್ಟಲಾಗುತ್ತದೆ.. ಇದು ದೃಢ ಬಂಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಕೇವಲ ಸೀಮಿತ ಚಲನವಲನಕ್ಕೆ ಅವಕಾಶ ನೀಡುವ ಮೂಲಕ ಸ್ಥಿರೀಕರಣವು ಅಂಗರಚನಾಶಾಸ್ತ್ರೀಯ ಜೋಡಣೆಯನ್ನು ರಕ್ಷಿಸಲು ನೆರವಾಗುತ್ತದೆ, ಗಂಟುಮೂಳೆ ರಚನೆಯನ್ನು ಸಕ್ರಿಯಗೊಳಿಸಿ, ಮೂಳೆ ಜೋಡಣೆಯಾಗಲು ನೆರವಾಗುತ್ತದೆ.

ಶಸ್ತ್ರಚಿಕಿತ್ಸೆ[ಬದಲಾಯಿಸಿ]

ಮೂಳೆ ಮುರಿತ ಸರಿಪಡಿಸಲು ನಡೆಸಲಾಗುವ ಶಸ್ತ್ರಚಿಕಿತ್ಸಾ ವಿಧಾನಗಳು ತಮ್ಮದೇ ಆದ ಪ್ರತಿಕೂಲ ಸ್ಥಿತಿಗಳು ಮತ್ತು ಅನುಕೂಲಗಳಿರುತ್ತವೆ. ಆದರೆ ಸಾಮಾನ್ಯವಾಗಿ, ಸಾಂಪ್ರದಾಯಿಕ ಚಿಕಿತ್ಸೆಗಳು ವಿಫಲವಾಗುವ ಸಾಧ್ಯತೆಯಿದ್ದಲ್ಲಿ ಅಥವಾ ವಿಫಲವಾದಲ್ಲಿ ಮಾತ್ರ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಸಾಮಾನ್ಯವಾಗಿ ಅಸ್ಥಿರಂಧ್ರತೆಗಳು ಅಥವಾ ಅಪೂರ್ಣ ಅಸ್ಥಿಸೃಷ್ಟಿಯಿಂದ ಸಂಭವಿಸುವ ಸೊಂಟದ ಮೂಳೆ ಮುರಿತದಂತಹ ಮೂಳೆ ಮುರಿತಗಳಿಗೆ ಶಸ್ತ್ರ ಚಿಕಿತ್ಸೆಗಳನ್ನು ಶಿಫಾರಸು ಮಾಡಲಾಗುತ್ತದೆ; ಏಕೆಂದರೆ, ಶಸ್ತ್ರಚಿಕಿತ್ಸೆರಹಿತ ಚಿಕಿತ್ಸೆಯಿಂದ ಸಿರೆಯ ತೀವ್ರ ಹೆಪ್ಪುಗಟ್ಟುವಿಕೆ (ಡಿವಿಟಿ) ಹಾಗೂ ಶ್ವಾಸಕೋಶದ ಧಮನಿಬಂಧದಂತಹ ವೈದ್ಯಕೀಯ ತೊಡಕುಗಳು ಸಂಭವಿಸಬಹುದು. ಇವು ಶಸ್ತ್ರಚಿಕಿತ್ಸೆಗಿಂಗಲೂ ಬಹಳಷ್ಟು ಅಪಾಯಕಾರಿ. ಮೂಳೆ ಮುರಿತದಿಂದ ಕೀಲೊಂದರ ಮೇಲ್ಮೈಗೆ ಹಾನಿಯಾದಲ್ಲಿ, ನಿಖರವಾದ ಅಂಗರಚನಶಾಸ್ತ್ರೀಯ ರೀತ್ಯಾ ಜೋಡಣೆಗೆ ಹಾಗೂ ಕೀಲಿನ ನುಣುಪನ್ನು ಮರುಸ್ಥಾಪಿಸಲು, ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ರಕ್ತದ ಹರಿವು ಸೀಮಿತವಾಗಿರುವುದರಿಂದ ಮೂಳೆಗಳಿಗೆ ಸೋಂಕು ತಗುಲಿದ್ದಲ್ಲಿ ಬಹಳ ಅಪಾಯಕಾರಿಯಾಗುವುದು. ಮೂಳೆಯ ಅಂಗಾಂಶವು ಸಾಮಾನ್ಯವಾಗಿ ಜೀವಿತ ಕೋಶಗಳಿಗಿಂತಲೂ ಹೆಚ್ಚಾಗಿ ಜೀವಕೋಶೇತರ ದ್ರವಗಳಾಗಿವೆ. ಕಡಿಮೆ ಮಟ್ಟದ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಲು ಅಗತ್ಯವಾದ ಕೆಲವು ರಕ್ತ ನಾಳಗಳು, ಸೋಂಕನ್ನು ತಡೆಗಟ್ಟಲು ಗಾಯದ ಸ್ಥಳಕ್ಕೆ ಪ್ರತಿರೋಧಕ ಜೀವಕೋಶಗಳನ್ನು ಸೀಮಿತ ಸಂಖ್ಯೆಯಲ್ಲಿ ತರಲು ಮಾತ್ರ ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿ, ತೆರೆದ ಮೂಳೆ ಮುರಿತಗಳು ಮತ್ತು ಅಸ್ಥಿಭೇದನಗಳಿಗೆ ಬಹಳ ಕೂಲಂಕಷವಾದ ನಂಜುನಿರೋಧಕ ವಿಧಾನಗಳು ಮತ್ತು ರೋಗನಿರೋಧಕ ಪ್ರತಿಜೀವಕಗಳ ಅಗತ್ಯವಿದೆ.

ಆಗಾಗ್ಗೆ, ಮೂಳೆ ಮುರಿತದ ಚಿಕಿತ್ಸೆಗೆ ಮೂಳೆ ಕಸಿ ಮಾಡಲಾಗುವುದು.

ಕೆಲವೊಮ್ಮೆ, ಮೂಳೆಗಳಿಗೆ ಲೋಹ ಅಳವಡಿಸಿ ಬಲಪಡಿಸಲಾಗುವುದು. ಈ ಅಂತರ್ನಿವೇಶನ(ಇಂಪ್ಲಾಂಟ್)ಗಳನ್ನು ಬಹಳ ಎಚ್ಚರಿಕೆಯಿಂದ ವಿನ್ಯಾಸಿಸಿ ಅಳವಡಿಸಬೇಕು. ಬಿಲ್ಲೆಗಳು ಅಥವಾ ತಿರುಪುಮೊಳೆಗಳು ಮೂಳೆಯ ಭಾರವನ್ನು ಅಗತ್ಯಕ್ಕೂ ಮೀರಿ ವಹಿಸಿದಲ್ಲಿ, ಮೂಳೆಯ ಸಾಂದ್ರತೆ ಕಡಿಮೆಯಾಗುವುದು . ಇದರಿಂದಾಗಿ ಮೂಳೆಯು ಕ್ಷೀಣವಾಗುವುದು. ಟೈಟೇನಿಯಮ್‌ ಮತ್ತು ಅದರ ಬೆರಕೆಯ ಲೋಹ ಸೇರಿದಂತೆ ಕಡಿಮೆ ಮಾಡ್ಯುಲಸ್‌ ಮೌಲ್ಯದ ವಸ್ತುಗಳ ಬಳಕೆಯಿಂದ ಈ ಸಮಸ್ಯೆಯನ್ನು ಕಡಿಮೆಗೊಳಿಸಬಹುದೇ ಹೊರತು ನಿವಾರಿಸಲಾಗದು. ಇಂತಹ ಅಳವಡಿಸಿದ ವಸ್ತುವಿನ ಉಜ್ಜುವಿಕೆಯಿಂದ ಉಂಟಾಗುವ ಶಾಖದಿಂದಾಗಿ ಮೂಳೆಯ ಅಂಗಾಂಶಗಳಿಗೆ ಹಾನಿಯಾಗಿ, ಕೀಲುಗಳ ಶಕ್ತಿಯನ್ನು ಕುಗ್ಗಿಸುತ್ತವೆ. ಬೇರೆ-ಬೇರೆ ಲೋಹಗಳನ್ನು ಪರಸ್ಪರ ಒತ್ತಿಕೊಂಡಂತೆ ಅಳವಡಿಸಿದಲ್ಲಿ (ಉದಾಹರಣೆಗೆ: ಟೈಟೆನಿಯಮ್‌ ಬಿಲ್ಲೆ ಹಾಗೂ ಕೊಬಾಲ್ಟ್‌-ಕ್ರೊಮಿಯಮ್‌ ಬೆರಕೆ ಅಥವಾ ಸ್ಟೇನ್ಲೆಸ್‌ ಸ್ಟೀಲ್‌ ತಿರುಪುಮೊಳೆಗಳು) ವಿದ್ಯುತ್ ಸಂಚಾರದಂತಹ ಸವೆತ ಸಂಭವಿಸಬಹುದು. ಲೋಹದ ಅಯಾನುಗಳು ಮೂಳೆಯನ್ನು ಸ್ಥಳೀಯವಾಗಿ ಹಾನಿಗೊಳಿಸಿ, ದೇಹದ ಮೇಲೆ ಪರಿಣಾಮ ಬೀರಬಹುದು.

ಮೂಳೆಯನ್ನು ಗುಣಮುಖವಾಗಿಸಲು ಅಥವಾ ತೀವ್ರಗೊಳಿಸಲು, ವಿದ್ಯುತ್‌‌ನಿಂದ ಮೂಳೆ ಬೆಳವಣಿಗೆಯ ಉತ್ತೇಜನ ಅಥವಾ ಮೂಳೆ ಉತ್ತೇಜನ(ಆಸ್ಟಿಯೊಸ್ಟಿಮ್ಯುಲೇಶನ್) ವಿಧಾನವನ್ನು ಯತ್ನಿಸಲಾಗಿದೆ. ಆದಾಗ್ಯೂ ಫಲಿತಾಂಶಗಳು ಅದರ ಪರಿಣಾಮಕಾರತ್ವವನ್ನು ಬೆಂಬಲಿಸಿಲ್ಲ.[೧೪]

ತೊಡಕುಗಳು[ಬದಲಾಯಿಸಿ]

ಮೂಳೆ ಭಾಗಗಳನ್ನು ಒಟ್ಟಿಗೆ ಕೂಡಿಸಲಾಗದ ಹಳೆಯ ಮೂಳೆ ಮುರಿತ

ಕೆಲವು ಮೂಳೆ ಮುರಿತಗಳಿಂದ ಕಂಪಾರ್ಟ್‌ಮೆಂಟ್ ಸಿಂಡ್ರೋಮ್ (ಸ್ನಾಯುಗಳು ಮತ್ತು ರಕ್ತನಾಳಗಳು ಸೀಮಿತ ಸ್ಥಳದಲ್ಲಿಯೇ ಒಂದಕ್ಕೊಂದು ಒತ್ತಿಕೊಳ್ಳುವುದು) ಎಂದು ಹೆಸರಾದ ತೀವ್ರ ತೊಡಕುಗಳು ಉಂಟಾಗಬಹುದು. ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ, ತೊಡಕಿಗೀಡಾದ ಅಂಗವನ್ನು ವೈದ್ಯಕೀಯವಾಗಿ ಕತ್ತರಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಇತರೆ ತೊಡಕುಗಳಲ್ಲಿ, ಮುರಿದ ಮೂಳೆಗಳು ಜೋಡಣೆಯಾಗದಿರುವುದು, ಮುರಿದ ಮೂಳೆಯು ಗುಣವಾಗಲು ವಿಫಲವಾಗುವುದು ಅಥವಾ ಅಸಮರ್ಪಕವಾಗಿ ಸೇರಬಹುದು.ಅದರಲ್ಲಿ ಮುರಿದ ಮೂಳೆಗಳು ವಿಕೃತ ರೀತಿಯಲ್ಲಿ ಗುಣವಾಗಬಹುದು.

ಮಕ್ಕಳಲ್ಲಿ[ಬದಲಾಯಿಸಿ]

ಮೂಳೆಗಳು ಇನ್ನೂ ಬೆಳೆಯುತ್ತಿರುವ ಮಕ್ಕಳಲ್ಲಿ, ಬೆಳವಣಿಗೆ ಪ್ಲೇಟ್‌ಗಳ(ಬಿಲ್ಲೆ) ಗಾಯ ಅಥವಾ ಮೃದುವಾದ ಮೂಳೆಯು ಬಾಗಿ ಆಂಶಿಕವಾಗಿ ಮುರಿಯಬಹುದು.

 • ಮೂಳೆಯ ಕೊನೆಯ ಬದಿಯಲ್ಲಿ ಯಾಂತ್ರಿಕ ವೈಫಲ್ಯವುಂಟಾಗಿ ಮೃದು ಮೂಳೆ ಬಾಗಿ ಆಂಶಿಕ ಮುರಿತವು ಸಂಭವಿಸಬಹುದು. ಅಂದರೆ, ವಯಸ್ಕರ ಮೂಳೆಗಳಂತೆ ಮಕ್ಕಳ ಮೂಳೆಯು ದೃಢವಲ್ಲದ ಕಾರಣ, ಅವು ಸಂಪೂರ್ಣವಾಗಿ ಮುರಿದುಹೋಗುವುದಿಲ್ಲ, ಬದಲಿಗೆ, ಏಟು ಬಿದ್ದ ಮೂಳೆಯ ಮೇಲ್ಬಾಗದಲ್ಲಿ ಮೂಳೆಯ ಹೊರಪದರಕ್ಕೆ ಪೂರ್ಣ ಅಡ್ಡಿಯಾಗದೇ ಬಾಗಿರುತ್ತದೆ.
 • 'ಸಾಲ್ಟರ್‌-ಹ್ಯಾರಿಸ್'‌ ಮೂಳೆ ಮುರಿತಗಳು ರೀತಿಯಲ್ಲಿ ಮೂಳೆ ಬೆಳವಣಿಗೆ ಪ್ಲೇಟ್‌ಗಳಿಗೆ ಉಂಟಾಗುವ ಗಾಯಗಳಿಗೆ, ಮೂಳೆಸಹಜವಾಗಿ ಬೆಳೆಯುವಂತೆ ಖಾತರಿಪಡಿಸಲು ಬಹಳ ಎಚ್ಚರಿಕೆಯಚಿಕಿತ್ಸೆ ಮತ್ತು ನಿಖರವಾದ ಜೋಡಣೆ ಅಗತ್ಯವಿರುತ್ತದೆ.
 • ಮೂಳೆಯ ಪ್ಲ್ಯಾಸ್ಟಿಕ್‌ ರೂಪವಿಕೃತಿ - ಇದರಲ್ಲಿ ಮೂಳೆಯು ಕಾಯಂ ಆಗಿ ಬಾಗಿರುತ್ತದೆ ಆದರೆ ಮುರಿಯದಿರುವುದು ಮಕ್ಕಳಿಗೆ ಸಂಭವಿಸಲು ಸಾಧ್ಯ. ಮೂಳೆಯು ಸ್ಥಿರವಾಗಿದ್ದು ಸರಳ ವಿಧಾನಗಳ ಮೂಲಕ ಪುನಃ ಜೋಡಿಸಲಾಗದಿದ್ದಲ್ಲಿ, ಇಂತಹ ಗಾಯಗಳಿಗೆ ಅಸ್ಥಿಭೇದನ (ಮೂಳೆ ಕುಯ್ತ) ಚಿಕಿತ್ಸೆಯ ಮೂಲಕ ಮೂಳೆಯನ್ನು ಪುನಃ ಜೋಡಿಸಬಹುದು.
 • ಕತ್ತಿನಮೂಳೆ ಮುರಿತ ಹಾಗೂ ತೋಳೆಲುಬಿನ ಆಸ್ಥಿಕಂತುಕದ ಮೇಲ್ಭಾಗದ ಮೂಳೆ ಮುರಿತ ಸೇರಿದಂತೆ, ಕೆಲವು ಮೂಳೆ ಮುರಿತಗಳು ಮುಖ್ಯವಾಗಿ ಮಕ್ಕಳ ವಯಸ್ಸಿನಲ್ಲಿ ಸಂಭವಿಸುತ್ತವೆ.

ಇವನ್ನೂ ನೋಡಿ[ಬದಲಾಯಿಸಿ]

 • ಡಿಸ್ಟ್ರಾಕ್ಷನ್ ಆಸ್ಟಿಯೊಜೆನೆಸಿಸ್(ಮೂಳೆಯ ವೈಕಲ್ಯ ಸರಿಪಡಿಸುವ ಪ್ರಕ್ರಿಯೆ)
 • ಮೆತು ಮೂಳೆರೋಗ
 • ಕ್ಯಾಟಾಗ್ಮ್ಯಾಟಿಕ್‌

ಉಲ್ಲೇಖಗಳು[ಬದಲಾಯಿಸಿ]

 1. "ಆರ್ಕೈವ್ ನಕಲು" (PDF). Archived from the original (PDF) on 2011-06-15. Retrieved 2010-11-17.
 2. "Fracture and dislocation compendium. Orthopaedic Trauma Association Committee for Coding and Classification" (PDF). J Orthop Trauma. 10 Suppl 1: v–ix, 1–154. 1996. PMID 8814583. Archived from the original (pdf) on 2007-09-28. Retrieved 2007-11-28.
 3. "Orthopaedic Trauma Association/ Committee for Coding and Classification: Fracture and Dislocation Compendium". Orthopaedic Trauma Association. Archived from the original on 2011-07-28. Retrieved 2007-11-28.
 4. ೪.೦ ೪.೧ "Proximal forearm - AO Surgery Reference". Archived from the original on 2013-11-05. Retrieved 2021-08-29.
 5. 1590689797 at GPnotebook
 6. Rüedi, etc. all (2007). AO principles of fracture management, Volume 1. Thieme. p. Page 96. ISBN 3131174420. {{cite book}}: Unknown parameter |coauthors= ignored (|author= suggested) (help)
 7. "Fractures of the Acetabulum".
 8. Mourad L (1997). "Neer classification of fractures of the proximal humerus". Orthop Nurs. 16 (2): 76. PMID 9155417.
 9. "eMedicine - Proximal Humerus Fractures: Article by Mark Frankle, MD". Retrieved 2007-12-15.
 10. "Seinsheimer's Classification of Subtrochanteric Frxs - Wheeless' Textbook of Orthopaedics". Retrieved 2007-12-15.
 11. ಮೆಡಿಸಿನ್‌ನೆಟ್‌ - ಫ್ರ್ಯಾಕ್ಚರ್‌ ವೈದ್ಯಕೀಯ ಲೇಖಕರು: ಬೆಂಜಾಮಿನ್‌ ಸಿ. ವೆಡ್ರೊ, ಎಂ.ಡಿ., FAAEM.
 12. "BestBets: Do non-steroidal anti-inflammatory drugs cause a delay in fracture healing?".
 13. Drendel AL, Gorelick MH, Weisman SJ, Lyon R, Brousseau DC, Kim MK (2009). "A randomized clinical trial of ibuprofen versus acetaminophen with codeine for acute pediatric arm fracture pain". Ann Emerg Med. 54 (4): 553–60. doi:10.1016/j.annemergmed.2009.06.005. PMID 19692147. {{cite journal}}: Unknown parameter |month= ignored (help)CS1 maint: multiple names: authors list (link)
 14. Mollon B, da Silva V, Busse JW, Einhorn TA, Bhandari M (2008). "Electrical stimulation for long-bone fracture-healing: a meta-analysis of randomized controlled trials". J Bone Joint Surg Am. 90 (11): 2322–30. doi:10.2106/JBJS.H.00111. PMID 18978400. {{cite journal}}: Unknown parameter |month= ignored (help)CS1 maint: multiple names: authors list (link)

ಬಾಹ್ಯ ಕೊಂಡಿಗಳು[ಬದಲಾಯಿಸಿ]