ಮಾಯಿದ ಪುರುಷೆ
ಮಾಯಿದ ಪುರುಷೆ ಎಂಬುದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಮಾತ್ರ ಕಂಡುಬರುವ ಒಂದು ವಿಶಿಷ್ಟ ಕುಣಿತ ಪ್ರಕಾರವಾಗಿದೆ. ಹೆಸರೇ ಸೂಚಿಸುವಂತೆ, ಮಾಯಿ ಹುಣ್ಣಿಮೆಯಿಂದ ಪ್ರಾರಂಭವಾಗಿ ಹದಿನೈದು ದಿನಗಳವರೆಗೆ ಈ ಕುಣಿತ ನಡೆಯುತ್ತದೆ. [೧][೨] [೩]
ವೇಷಧಾರಿಗಳು
[ಬದಲಾಯಿಸಿ]ಈ ಕುಣಿತವನ್ನು ಕೆಳಜಾತಿಯವರಾದ ನಲಿಕೆ ಜನಾಂಗದವರು ನಡೆಸುತ್ತಾರೆ. ಮಾಯಿದ ಪುರುಷೆ ಎಂದರೆ ಏಳು ಜನ ಅಣ್ಣ-ತಮ್ಮಂದಿರು. ಇವರನ್ನು ಏಳ್ವರೆ ಪುರುಶೆರ್ ಎಂದು ಕರೆಯುತ್ತಾರೆ ಮತ್ತು ತಂಡದಲ್ಲಿ ಒಟ್ಟು ಹತ್ತು ಜನರಿದ್ದಾರೆ. ಒಂದು ಸ್ತ್ರೀವೇಷ, ಒಬ್ಬಳು ಅಡುಗೂಲಜ್ಜಿ, ಏಳು ಜನ ಪುರುಷರು, ಮತ್ತು ಒಬ್ಬ ತೆಂಬರೆಯವ.
ವೇಷ ಭೂಷಣಗಳು
[ಬದಲಾಯಿಸಿ]ಪುರುಷರು ಕಚ್ಚೆಪಂಚೆ, ಉದ್ದತೋಳಿನ ಅಂಗಿ, ಹೆಗಲಿಗೆ ಶಾಲು, ತಲೆಗೆ ಬಿಳಿ, ಕೆಂಪು ಅಥವಾ ಹಳದಿ ಬಣ್ಣದ ರುಮಾಲು ಇರುತ್ತದೆ. ಮುಖಕ್ಕೆ ಸಪೇತ ಹಚ್ಚಿ ಕೆಂಪು-ಕಪ್ಪು ಬಣ್ಣಗಳಿಂದ ಅಲಂಕರಿಸಿಕೊಂಡಿರುತ್ತಾರೆ. ಕುತ್ತಿಗೆಯಲ್ಲಿ ಹೂವಿನ ಹಾರವನ್ನು ಧರಿಸುತ್ತಾರೆ. ಸ್ತ್ರೀ ವೇಷವನ್ನು ಹಾಕುವ ಗಂಡಸರು ಹಳ್ಳಿಯ ಹೆಂಗಸರಂತೆ ಸೀರೆ, ರವಕೆ ಉಟ್ಟು, ಜಡೆ ಹಾಕಿ, ಹೂ ಮುಡಿದು, ಮುಖಕ್ಕೆ ಕಾಡಿಗೆ ಮತ್ತು ಬೊಟ್ಟಿಟ್ಟು, ಕೈಗೆ ಬಳೆ, ಕಾಲಿಗೆ ಗೆಜ್ಜೆ ಧರಿಸುತ್ತಾರೆ. ಅಡುಗೂಲಜ್ಜಿಯ ವೇಷಧಾರಿ ಸೀರೆ ರವಿಕೆ, ತೊಟ್ಟಿರುತ್ತಾರೆ. ಮತ್ತು ದಡ್ಡಾಳು ಮರದ ನಾರಿನಿಂದ ಮಾಡಿದ ಬಿಳಿ ಟೋಫನ್ ಅನ್ನು ಧರಿಸುತ್ತಾರೆ. ಉದ್ದ ಹಲ್ಲುಗಳು ಎದ್ದು ಕಾಣುವಂತೆ ಮೇಲ್ತುಟಿಯ ಅಡಿಗೆ ಅಡಿಕೆ ಹಾಳೆ ತುಂಡಿನಿಂದ ಮಾಡಿದ ಹಲ್ಲಿನಂತಹ ರಚನೆಯನ್ನು ಇಟ್ಟುಕೊಳ್ಳುತ್ತಾನೆ. ಬೆನ್ನು ಬಾಗಿದಂತೆ ಕಾಣಲು ಹಿಂಬದಿಗೆ ಬಟ್ಟೆಯ ಸಿಂಬೆಯನ್ನು ಕಟ್ಟಿಕೊಳ್ಳುತ್ತಾನೆ. ಬಾಗಿಕೊಂಡು ದಂಟೆ ಊರುತ್ತಾ ನಡೆಯುತ್ತಾನೆ.
ಕುಣಿತದ ಶೈಲಿ
[ಬದಲಾಯಿಸಿ]
ಈ ವೇಷಧಾರಿಗಳು ಮನೆಮನೆಗೆ ಹೋಗಿ ಕುಣಿತ ಮಾಡುತ್ತಾರೆ. ಈ ಕಲೆಯ ಸಾಹಿತ್ಯವು ತುಳುವಿನಲ್ಲಿ ಪಾಡ್ದನದ ರೂಪದಲ್ಲಿದೆ. ಪ್ರಾರಂಭದಲ್ಲಿ ತೆಂಬರೆ ಬಡಿಯುತ್ತಾ ಹಾಡು ಹೇಳಲಾಗುತ್ತದೆ. ಕುಣಿತದವರು ಪಾದದ ಮುಂಭಾಗ ಒತ್ತಿ ಜಾರಿಸಿ, ಹಿಂಭಾಗ ಊರಿ ಹೆಜ್ಜೆ ಹಾಕುತ್ತಾರೆ. ಸಣ್ಣ ಸಣ್ಣ ಹೆಜ್ಜೆಯಿಟ್ಟು ಹೆಣ್ಣು ವೇಷದವರು ಹಸ್ತಮುದ್ರಿಕೆ ಪ್ರದರ್ಶಿಸುತ್ತಾ ಕುಣಿಯುತ್ತಾರೆ. ತಂಡದ ಮಧ್ಯದಲ್ಲಿ ಅಡಗೂಲಜ್ಜಿ ದಂಟೆ ಊರುತ್ತಾ ಕೆಮ್ಮಿಕೊಂಡು ನಡಗಿಕೊಂಡು ಅಡ್ಡ ಹಾದುಹೋಗುತ್ತಾಳೆ.[೪]
ಮಾಯಿದ ಪುರುಷೆ ಪುರಾಣ
[ಬದಲಾಯಿಸಿ]ಏಳು ಜನ ಸಹೋದರರು ತಂಗಿಯನ್ನು ನೋಡಿಕೊಳ್ಳುವಂತೆ ಹೆಂಡತಿಯರಿಗೆ ಹೇಳುತ್ತಾರೆ. ಸಹೋದರರು ಯುದ್ಧಕ್ಕೆ ಹೋದ ಕೆಲವೇ ದಿನಗಳಲ್ಲಿ ತಂಗಿ ಋತಮತಿಯಾಗುತ್ತಾಳೆ. ಒಬ್ಬಳು ಋತುಮತಿಯಾದ ಹುಡುಗಿಗೆ ಆಕೆಯ ಅತ್ತಿಗೆಯರು ಸೀಗೆ ತಿಳಿ ಕೊಟ್ಟು, ಹೊಳೆಗೆ ಹೋಗಿ ಸ್ನಾನ ಮಾಡಿ, ನಂತರ ಕತ್ತಿ ಹಿಡಿದು ಕಾಡಿಗೆ ಹೋಗಿ ಸೊಪ್ಪು ತರುವಂತೆ ಮತ್ತು ಕೊಡವನ್ನು ಹಿಡಿದು ನೀರು ತರುವಂತೆ ಹೇಳುತ್ತಾರೆ. ನಂತರ 'ಇರ್ಪೆ'(ಒಂದು ಜಾತಿಯ ಮರ) ಹೂವು ಬಿಡುವ ಕಾಲ ಬಂದಾಗ, ಆ ಅತ್ತಿಗೆಯರು ಆ ಹುಡುಗಿಯನ್ನು ಹೂವು ಕೊಯ್ಯಲು ಕಾಡಿಗೆ ಕರೆದುಕೊಂಡು ಹೋಗುತ್ತಾರೆ. ಮರಕ್ಕೆ ಏಣಿ ಇಟ್ಟು ಮರ ಹತ್ತಿಸಿ, ಆಕೆ ಏಳು ಜನರಿಗೆ ಬೇಕಾಗುವಷ್ಟು ಹೂವು ಕೊಯ್ದು ತನಗಾಗಿ ಹೂವು ಕೊಯ್ಯಲು ಮೇಲೆ ಹೋದಾಗ. ಅತ್ತಿಗೆಯರು ಏಣಿಯನ್ನು ತೆಗೆದುಬಿಡುತ್ತಾರೆ. ಹುಡುಗಿ ಮರದಲ್ಲಿ ಸಿಕ್ಕಿಹಾಕಿಕೊಂಡು ಅಳುತ್ತಾಳೆ. ಮಧ್ಯರಾತ್ರಿ ಹೊತ್ತಿಗೆ ಅಲ್ಲಿಗೆ ಜೋಡಿ ಹುಲಿಗಳು ಬಂದು, ಮರದಿಂದ ಬೀಳುವ ಕಣ್ಣೀರನ್ನು ಕಂಡು, ಮೇಲೆ ನೋಡಿದಾಗ ಹುಡುಗಿ ಕಾಣಿಸುತ್ತಾಳೆ. ಹುಲಿಗಳು ಮರ ಹತ್ತಿ ಹುಡುಗಿಯನ್ನು ಕೊಂದು ತಿಂದು ಹೋಗುತ್ತವೆ. ಆಕೆಯ ಬಲಗೈಯ ಕಿರುಬೆರಳೊಂದು ಮಾತ್ರ ಉಳಿಯುತ್ತದೆ.[೫]
ಅಡುಗೂಲಜ್ಜಿ ಪಾತ್ರ
[ಬದಲಾಯಿಸಿ]ಆ ಕಡೆಯಿಂದ ಅಡುಗೂಲಜ್ಜಿ ನಾಲ್ಕು ಮನೆಗಳಲ್ಲಿ ಬೇಡಿಕೊಂಡು ಬರುತ್ತಿರುತ್ತಾಳೆ. ಆಕೆ ಬೆರಳಿನ ತುಂಡನ್ನು ನೋಡಿ ಅದು ಅರಿಶಿಣವೆಂದು ಭಾವಿಸಿ ಜೋಳಿಗೆಯಲ್ಲಿ ಹಾಕಿಕೊಂಡು ಮನೆಗೆ ತಂದು ಹೊಸ ಮಡಿಕೆಯಲ್ಲಿ ಇಡುತ್ತಾಳೆ. ದಂಡಿಗೆ ಹೋದ ಅಣ್ಣಂದಿರು ಹಿಂತಿರುಗಿ ಬಂದು ಹೆಂಡತಿಯರಲ್ಲಿ ತಂಗಿಯ ಬಗ್ಗೆ ವಿಚಾರಿಸಿದಾಗ, "ಕಪ್ಪೆ ಸೊಕ್ಕಿದರೆ ಹಳ್ಳದಲ್ಲಿ ನಿಲ್ಲದು, ಹೆಣ್ಣು ಸೊಕ್ಕಿದರೆ ಮನೆಯಲ್ಲಿ ಕುಳ್ಳಿರಲಾರಳು; ನಿಮ್ಮ ತಂಗಿಯನ್ನು ಹುಲಿ ತಿಂದಿತು" ಎಂದು ಹೆಂಡತಿಯರು ಹೇಳುತ್ತಾರೆ. ಏಳು ಸಹೋದರರು ತಂಗಿಯನ್ನು ಹುಡುಕಲು ಏಳು ಕಡೆಗೆ ಹೋಗುತ್ತಾರೆ. ಅಡುಗೂಲಜ್ಜಿಯ ಮನೆಗೆ ಬಂದಾಗ, ಬೆರಳಿನ ರೂಪದಲ್ಲಿದ್ದ ಹುಡುಗಿ ಜೀವ ತಳೆದು ಅಣ್ಣಂದಿರೆದುರು ಬರುತ್ತಾಳೆ. ಅವರು ಆಕೆಯನ್ನು ಮನೆಗೆ ಕರೆತರುತ್ತಾರೆ. ತಮ್ಮ ಹೆಂಡತಿಯರಿದ್ದ ಮನೆಗೆ ಬೆಂಕಿ ಕೊಟ್ಟು ಅವರನ್ನು ಭಸ್ಮ ಮಾಡುತ್ತಾರೆ. ನಂತರ ತಾವು ತಂಗಿಯ ಜೊತೆಗೆ ಕದ್ರಿಗೆ ಹೋಗುತ್ತಾರೆ. ಕದ್ರಿಯಲ್ಲಿ ಪುರಾಣದ ಪುನರಭಿನಯವೆಂಬಂತೆ ಒಂದು ಕುಣಿತ ನಡೆಯುತ್ತದೆ. ಅದಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ. ಕುಣಿತ ನಡೆಯುವಾಗ ಮನೆಯ ಮಂದಿ ಮಾತ್ರ ಪ್ರೇಕ್ಷಕರಾಗಿರುತ್ತಾರೆ. ಕಲಾವಿದರಿಗೆ ಪ್ರತಿ ಮನೆಯಲ್ಲಿ ಅಕ್ಕಿ, ತೆಂಗಿನಕಾಯಿ ಮತ್ತು ಹಣ ಸಂಭಾವನೆಯಾಗಿ ದೊರೆಯುತ್ತದೆ.[೬][೭]
ಉಲ್ಲೇಖಗಳು
[ಬದಲಾಯಿಸಿ]- ↑ ಗೋ.ರು.ಚನ್ನಬಸಪ್ಪ ಕರ್ನಾಟಕ ಜನಪದ ಕಲೆಗಳು,ಕನ್ನಡ ಸಾಹಿತ್ಯ ಪರಿಷತ್ತು,೧೯೭೭.
- ↑ ಹಿ.ಚಿ.ಬೋರಲಿಂಗಯ್ಯ,ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ,೧೯೯೬.
- ↑ https://vijaykarnataka.com/lavalavk/languages/tulu/-/articleshow/30953876.cms
- ↑ https://mainamedia.wordpress.com/2019/10/02/%E0%B2%97%E0%B2%BE%E0%B2%82%E0%B2%A7%E0%B2%BF-%E0%B2%8E%E0%B2%82%E0%B2%AC-%E0%B2%B8%E0%B3%8B%E0%B2%AA%E0%B3%81/
- ↑ https://publicstory.in/%E0%B2%87%E0%B2%A8%E0%B3%8D%E0%B2%A8%E0%B2%BF%E0%B2%A8%E0%B2%BF%E0%B2%B8%E0%B3%81-%E0%B2%A6%E0%B2%BF%E0%B2%A8-%E0%B2%AE%E0%B2%B9%E0%B2%BE%E0%B2%A4%E0%B3%8D%E0%B2%AE-%E0%B2%A8%E0%B3%80-%E0%B2%AC//
- ↑ https://avadhimag.in/one-gandhi-please/
- ↑ https://zenodo.org/records/11525845