ವಿಷಯಕ್ಕೆ ಹೋಗು

ಮಾಖನ್ಲಾಲ್ ಚತುರ್ವೇದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಖನ್‍ಲಾಲ್ ಚತುರ್ವೇದಿ (1889-1968) ಆಧುನಿಕ ಯುಗದ ಪ್ರಮುಖ ಹಿಂದೀ ಕವಿ. ಅಗ್ರಗಣ್ಯ ಗಾಂಧೀವಾದಿಗಳು, ಭಾರತ ಸ್ವಾತಂತ್ರ್ಯ ಸಮರದ ಯೋಧರು. ಪತ್ರಿಕೋದ್ಯಮದ ಆಚಾರ್ಯರು, ಕುಶಲ ರಾಜಕಾರಣಿಗಳು, ಒಳ್ಳೆಯ ವಾಗ್ಮಿಗಳು.

ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಬಾಬಈ ಗ್ರಾಮದಲ್ಲಿ ಹುಟ್ಟಿದರು. ನಾರ್ಮಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಧ್ಯಾಪಕ ವೃತ್ತಿಯನ್ನು ಅವಲಂಬಿಸಿ ಬಾಳನ್ನು ಪ್ರಾರಂಭಿಸಿದರು.[][][] ಮೊದಲು ಗಣೇಶ ಶಂಕರ ವಿದ್ಯಾರ್ಥಿ ಅವರೊಡನೆ ಪ್ರತಾಪ್ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಭಾ ಮತ್ತು ಕರ್ಮವೀರದ ಸಂಪಾದಕರಾಗಿದ್ದರು.[] ತರುಣರಾಗಿದ್ದಾಗ ಕ್ರಾಂತಿಕಾರಿಗಳಲ್ಲಿ ಮುಖ್ಯರೆನಿಸಿಕೊಂಡಿದ್ದರು. ಲೋಕಮಾನ್ಯ ತಿಲಕ್ ಮತ್ತು ಹಿಂದೂ ಮುಸ್ಲಿಮರ ಏಕತೆಗಾಗಿ ಪ್ರಾಣವನ್ನೇ ತೆತ್ತ ಗಣೇಶ ಶಂಕರ ವಿದ್ಯಾರ್ಥಿ ಅವರಿಂದ ಪ್ರಭಾವಿತರಾಗಿ 1913ರಲ್ಲಿ ಪ್ರಮುಖ ಗಾಂಧೀವಾದಿಗಳಲ್ಲಿ ಒಬ್ಬರಾದರು. ಏಕ್ ಭಾರತೀಯ ಆತ್ಮ ಎನ್ನುವ ಹೆಸರಿನಲ್ಲಿ ಕವನಗಳನ್ನು ಬರೆದರು. ಮಧ್ಯಪ್ರದೇಶದ ಅನೇಕ ಕವಿಗಳು ಇವರಿಂದ ಸ್ಫೂರ್ತಿಪಡೆದವರು ಇಲ್ಲವೆ ಇವರ ನೇರ ಶಿಷ್ಯರು. ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ್ದರಿಂದ ಇವರು ಎಷ್ಟೋ ಬಾರಿ ಜೈಲಿಗೆ ಹೋದುದೂ ಉಂಟು. ಹಿಂದಿಯಲ್ಲಿ ಇವರೇ ಮೊದಲ ಗಾಂಧಿವಾದಿ ಕವಿ.

ಪ್ರಶಸ್ತಿ-ಗೌರವಗಳು

[ಬದಲಾಯಿಸಿ]

ಇವರ ಸಾಹಿತ್ಯಸೇವೆ ಮತ್ತು ಪಾಂಡಿತ್ಯಕ್ಕೆ ಮೆಚ್ಚಿ ಸಾಗರ ವಿಶ್ವವಿದ್ಯಾಲಯ ಇವರಿಗೆ ಡಿ.ಲಿಟ್. ಪದವಿ ಕೊಟ್ಟಿತು. ಭಾರತ ಸರ್ಕಾರ ಪದ್ಮಭೂಷಣ ಬಿರುದನ್ನು ಕೊಟ್ಟು ಗೌರವಿಸಿತು.[]

ಕೃತಿಗಳು

[ಬದಲಾಯಿಸಿ]

ಇವರ ಕೃತಿಗಳಲ್ಲಿ ಬಹುಭಾಗ ಜೈಲಿನಲ್ಲೇ ರಚಿತವಾದುದು. ಇವರ ಮೊದಲ ಕವನಸಂಗ್ರಹ ಹಿಮಕಿರೀಟಿನೀ (1942). ಇದಕ್ಕೆ ದೇವ ಪುರಸ್ಕಾರ ದೊರೆತಿದೆ. ಇದರಲ್ಲಿ 1913-1940ರ ನಡುವೆ ಇವರು ಬರೆದ ಕವನಗಳಿವೆ. ಇವರ ಮೊದಲ ಕವನ ಗಾಂಧಿಯ ಮೇಲೆ ಬರೆದುದು-'ನಿಃಶಸ್ತ್ರ್ ಸೇನಾನಿ'- ಗಾಂಧಿಯ ಸತ್ತ್ವವನ್ನು, ಮಹಾತ್ಮ್ಯವನ್ನು ಸೂಕ್ಷ್ಮವಾಗಿ ಬಣ್ಣಿಸುತ್ತದೆ. ಪ್ರಪಂಚವೇ ಬೇಕಾದರೆ ಹಿಮ್ಮೆಟ್ಟಲಿ, ಈ ಕೈಗಳಲ್ಲಿ ಕತ್ತಿಯನ್ನು ಮುಟ್ಟುವುದಿಲ್ಲ; ಪ್ರೀತಿ?-ಆ ಬೇಡಿಗಳ ಮೇಲೆ, ಮತ್ತು ಕೃಷ್ಣನ ಜನ್ಮಸ್ಥಳದ ಮೇಲೆ ಪ್ರೀತಿ; ಹಾರ!- ಭುಜಗಳನ್ನು ಚುಚ್ಚುವ, ವಿಚಿತ್ರ ಸರಪಣಿಯೇ ಹಾರ-ಇಲ್ಲಿನ ಇಂಥ ಭಾವಪೂರ್ಣ ವಾಕ್ಯಗಳು ಓದುಗರ ಮನಸ್ಸನ್ನು ಸೆಳೆಯುತ್ತವೆ. ಸಾಹಿತ್ಯ ಅಕಾಡಮಿಯ ಬಹುಮಾನ ಪಡೆದ ಇವರ ಕೃತಿ ಹಿಮತರಂಗಿನೀ (1947), ಸ್ವಾತಂತ್ರ್ಯೋತ್ತರ ಹಿಂದಿ ಕೃತಿಗಳಲ್ಲಿ ಶ್ರೇಷ್ಠವಾದುದು.[] ಮಾತಾ (1951), ಯುಗ್ ಚರಣ್ (1956), ಸಮರ್ಪಣ್ (1956), ವೇಣು ಲೋ ಗೂಂಜೇಧರಾ (1960), ಆಧುನಿಕ ಕವಿ, ಭಾಗ 6 (1961) ಮತ್ತು ಮರಣ್ ಜ್ವಾರ್ (1963) ಇವರ ಇತರ ಕವನ ಸಂಗ್ರಹಗಳು. ಇವರ ನಾಟಕ ಕೃಷ್ಣಾರ್ಜುನ ಯುದ್ಧ ನೂತನ ಭಾಗಗಳಿಂದ ಕೂಡಿದ ಉತ್ತಮ ಕೃತಿ. ಇವರ ಕವನಗಳಲ್ಲಿ ಕೈದಿ ಔರ್ ಕೋಕಿಲ್, ಯುಗ್‌ಪುರುಷ್, ಘರ್ ಮೇರಾ ಹೈ, ನಿಃಶಸ್ತ್ರ್ ಸೇನಾನಿ, ಪುಷ್ಪ್ ಕೀ ಅಭಿಲಾಷಾ, ಸೌದಾ-ಇವು ಬಹು ಪ್ರಸಿದ್ಧವಾದುವು.[] ಓಜಸ್ಸಿನಿಂದ ಕೂಡಿದ ಇವರ ಶೈಲಿ ಓದುಗರ ಮನಸ್ಸಿನ ಮೆಲೆ ಗಂಭೀರ ಪರಿಣಾಮವನ್ನುಂಟು ಮಾಡಬಲ್ಲದು. ಇವರ ವೈಚಾರಿಕ ಗದ್ಯಶೈಲಿಗೆ ಶಕ್ತಿಪೂಜಾ ಎಂಬ ಪ್ರಬಂಧ ಒಂದು ಉತ್ತಮ ನಿದರ್ಶನ.

ಉಲ್ಲೇಖಗಳು

[ಬದಲಾಯಿಸಿ]
  1. Personalities Of District PANDIT MAKHANLAL CHATURVEDI at Official website of Khandwa district.
  2. Profilewww.shayeri.net. Archived 15 October 2007 ವೇಬ್ಯಾಕ್ ಮೆಷಿನ್ ನಲ್ಲಿ.
  3. शर्मा, कृष्णदेव (1979). माखनलाल चतुर्वेदी: व्यक्तित्व एवं कृतित्व (in ಹಿಂದಿ). Vinoda Pustaka Mandira.
  4. About Pt. Makhanlal Chaturvedi Archived 11 October 2007 ವೇಬ್ಯಾಕ್ ಮೆಷಿನ್ ನಲ್ಲಿ. Official website of Makhanlal Chaturvedi National University of Journalism.
  5. "Padma Awards" (PDF). Ministry of Home Affairs, Government of India. 2015. Archived from the original (PDF) on 15 October 2015. Retrieved 21 July 2015.
  6. Sahitya Akademi Awards 1955–2007 Archived 4 July 2007 ವೇಬ್ಯಾಕ್ ಮೆಷಿನ್ ನಲ್ಲಿ. Sahitya Akademi Award Official website.
  7. "Poems by Makhanlal". Archived from the original on 2 July 2010. Retrieved 21 April 2008.


ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: