ಮಲ್ಲೇಶ್ವರ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು

ಮಲ್ಲೇಶ್ವರಂ ಬೆಂಗಳೂರಿನ ವಾಯುವ್ಯ ಭಾಗದಲ್ಲಿರುವ ಪ್ರದೇಶವಾಗಿದ್ದು, ನಗರದ ಅತ್ಯಂತ ಹಳೆಯ ಯೋಜಿತ ಪ್ರದೇಶಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ೧೮೯೮ರಲ್ಲಿ ಪ್ಲೇಗ್ ಸಾಂಕ್ರಾಮಿಕದ [೧] [೨] ಅನಂತರ ಮಲ್ಲೇಶ್ವರವನ್ನು ಹೊಸ ವಸತಿ ಪ್ರದೇಶವಾಗಿ ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಯಿತು. ಆದರೆ ಶಾಸನಗಳು ಮತ್ತು ವೀರಗಲ್ಲು ಸೇರಿದಂತೆ ಐತಿಹಾಸಿಕ ಪುರಾವೆಗಳು ಈ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಇನ್ನೂ ಹಿಂದಿನ ಇತಿಹಾಸವಿರುವನ್ನು ಸೂಚಿಸುತ್ತವೆ. ಈ ಕೃತಿಗಳು ಬೆಂಗಳೂರಿನ ಶ್ರೀಮಂತ ಶಿಲಾಶಾಸನ ಪರಂಪರೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ನಗರದಲ್ಲಿ ಇಂತಹ ೧೭೫ಕ್ಕೂ ಹೆಚ್ಚು ದಾಖಲಿತ ಶಾಸನ ಕಲ್ಲುಗಳಿವೆ.
ಈ ಪ್ರದೇಶವು ಎರಡು ಮಹತ್ವದ ಕನ್ನಡ ಶಾಸನಗಳನ್ನು ಹಾಗೂ ಒಂದು ಗಮನಾರ್ಹವಾದ ವೀರಗಲ್ಲನ್ನು ಒಳಗೊಂಡಿದೆ. ಸಾ.ಶ. ೧೬೬೯ರ ಪ್ರಮುಖ ಶಾಸನವು ಮರಾಠಾ ರಾಜ ಏಕೋಜಿ ೧ ಮಲ್ಲಪುರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮೇದಾರನಿಂಗನಹಳ್ಳಿ ಗ್ರಾಮವನ್ನು ದಾನ ಮಾಡಿದ್ದನ್ನು ದಾಖಲಿಸುತ್ತದೆ. ಜಕ್ಕರಾಯನಕೆರೆಯಲ್ಲಿ ಮತ್ತೊಂದು ತುಣುಕು ಶಾಸನ ಕಂಡುಬಂದಿದೆ. [೩]
ಜೊತೆಗೆ, ಮೇದಾರನಿಂಗನಹಳ್ಳಿಗೆ ಸೇರಿದ್ದ ಭೂಮಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಆವರಣದಲ್ಲಿ ಹುಲಿಬೇಟೆಯ ನೆನಪಿಗಾಗಿ ೧೦ನೇ ಶತಮಾನದ ವೀರಗಲ್ಲು ಪತ್ತೆಯಾಗಿದೆ. [೪] [೫] .
ಮಲ್ಲೇಶ್ವರದ ಐತಿಹಾಸಿಕ 'ಮಲ್ಲಪುರ' ಎಂಬ ಹೆಸರು ಬಹುಶಃ 'ಮಲೆ' ಅಥವಾ 'ಮಲೈ' (ಬೆಟ್ಟ) ಮತ್ತು 'ಪುರ' (ಪಟ್ಟಣ) ಎಂಬ ಕನ್ನಡ ಪದಗಳಿಂದ ಹುಟ್ಟಿಕೊಂಡಿರಬಹುದು. ಇದರ ಅರ್ಥ 'ಬೆಟ್ಟದ ಮೇಲಿನ ಪಟ್ಟಣ'. ಕಾಲಕ್ರಮೇಣ, ಇದು ಮಲ್ಲೇಶ್ವರ ಆಗಿ ವಿಕಸನಗೊಂಡಿತು. ಆರಂಭಿಕ ಅಧಿಕೃತ ಪತ್ರವ್ಯವಹಾರಗಳಲ್ಲಿ, ಈ ಪ್ರದೇಶವನ್ನು ಅಧಿಕಾರಿಗಳು ಮತ್ತು ನಿವಾಸಿಗಳು ಮಲ್ಲೇಶ್ವರಂ, ಮಲ್ಲೇಸ್ವರಂ, ಮಲ್ಲೇಶ್ವರ ಮತ್ತು ಮಲ್ಲೇಶ್ವರಿಂ ಎಂದು ವಿಭಿನ್ನವಾಗಿ ಉಚ್ಚರಿಸುತ್ತಿದ್ದರು. ಈ ಲೇಖನದಲ್ಲಿ ಇಂದು ಸಾಮಾನ್ಯವಾಗಿ ಬಳಕೆಯಲ್ಲಿರುವ ಮಲ್ಲೇಶ್ವರ/ಮಲ್ಲೇಶ್ವರಂ ಎಂಬ ಹೆಸರನ್ನು ಬಳಸಲಾಗಿದೆ.

ಐತಿಹಾಸಿಕ ಸಂದರ್ಭ: ಬೆಂಗಳೂರಿನಲ್ಲಿ ಮರಾಠರ ಆಳ್ವಿಕೆ
[ಬದಲಾಯಿಸಿ]ಬೆಂಗಳೂರಿನಲ್ಲಿ ಮರಾಠರ ಉಪಸ್ಥಿತಿಯು ೧ನೇ ಏಕೋಜಿಯ ಕಾಲಕ್ಕಿಂತ ಹಿಂದಿನದು. ಏಕೋಜಿಯ ತಂದೆ ಶಹಾಜಿ ಬಿಜಾಪುರ ಸುಲ್ತಾನರಲ್ಲಿ ಪ್ರಮುಖ ಮರಾಠಾ ಜನರಲ್ ಸೇವೆ ಸಲ್ಲಿಸುತ್ತಿದ್ದಾಗ ಆಗಿದ್ದ ಬೆಂಗಳೂರನ್ನು ಜಾಗೀರ್ (ಭೂ ದತ್ತಿ) ಆಗಿ ನೀಡಲಾಯಿತು. [೬] ಶಹಾಜಿ ಹಲವು ವರ್ಷಗಳ ಕಾಲ ಬೆಂಗಳೂರನ್ನು ತನ್ನ ನೆಲೆಯಾಗಿ ಬಳಸುತ್ತಿದ್ದರು ಮತ್ತು ಮರಾಠಾ ಸಾಮ್ರಾಜ್ಯದ ಸ್ಥಾಪಕ ಶಿವಾಜಿ ಕೂಡ ತಮ್ಮ ಆರಂಭಿಕ ಕೆಲವು ವರ್ಷಗಳನ್ನು ತಮ್ಮ ತಾಯಿ ಜೀಜಾಬಾಯಿ ಅವರೊಂದಿಗೆ ನಗರದಲ್ಲಿ ಕಳೆದರು. [೭] [೮] ೧೬೬೪ ರಲ್ಲಿ ಶಹಾಜಿಯವರ ಮರಣದ ನಂತರ, ಅವರ ಜಾಗೀರನ್ನು ಅವರ ಪುತ್ರರ ನಡುವೆ ಹಂಚಲಾಯಿತು. ಶಿವಾಜಿ ಪಶ್ಚಿಮ ಭಾಗವನ್ನು ಆನುವಂಶಿಕವಾಗಿ ಪಡೆದು ಅಲ್ಲಿನ ಮರಾಠಾ ಪ್ರದೇಶಗಳನ್ನು ಏಕೀಕರಿಸಿದನು. ಆದರೆ ವೆಂಕೋಜಿ ಎಂದೂ ಕರೆಯಲ್ಪಡುವ ಏಕೋಜಿ ೧ ಬೆಂಗಳೂರು ಮತ್ತು ತಂಜಾವೂರು ಸೇರಿದಂತೆ ದಕ್ಷಿಣ ಜಾಗೀರನ್ನು ಆನುವಂಶಿಕವಾಗಿ ಪಡೆದನು. [೯] ಏಕೋಜಿ ಮತ್ತು ಶಿವಾಜಿ ಮಲಸಹೋದರರಾಗಿದ್ದು ಬೇರೆ ಬೇರೆ ತಾಯಂದಿರನ್ನು ಹೊಂದಿದ್ದರು ಮತ್ತು ಹೆಚ್ಚಾಗಿ ಪ್ರತ್ಯೇಕ ಪ್ರಭಾವದ ಕ್ಷೇತ್ರಗಳಲ್ಲಿ ಬೆಳೆದರು. ಶಿವಾಜಿ ಪಶ್ಚಿಮ ಡೆಕ್ಕನ್‌ನಲ್ಲಿ ಸ್ವತಂತ್ರ ಮರಾಠಾ ರಾಜ್ಯವನ್ನು ನಿರ್ಮಿಸುವತ್ತ ಗಮನಹರಿಸಿದರೆ, ಏಕೋಜಿ ದಕ್ಷಿಣದಲ್ಲಿ ತನ್ನ ಅಧಿಕಾರವನ್ನು ಬಲಪಡಿಸಿಕೊಂಡನು. ಅವರ ಭೌಗೋಳಿಕ ಅಂತರ ಮತ್ತು ವಿಭಿನ್ನ ರಾಜಕೀಯ ಮಹತ್ವಾಕಾಂಕ್ಷೆಗಳ ಹೊರತಾಗಿಯೂ, ಅವರು ಸಂಪರ್ಕವನ್ನು ಉಳಿಸಿಕೊಂಡರು ಮತ್ತು ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಆದಾಗ್ಯೂ, ಅವರ ಸಂಬಂಧವು ವಿಶೇಷವಾಗಿ ಅವರ ತಂದೆಯ ಪ್ರದೇಶಗಳು ಮತ್ತು ಸಂಪನ್ಮೂಲಗಳ ವಿಭಜನೆಗೆ ಸಂಬಂಧಿಸಿದಂತೆ ಸಂಕೀರ್ಣವಾಗಿತ್ತು ಮತ್ತು ಕೆಲವೊಮ್ಮೆ ಪೈಪೋಟಿಯಿಂದ ಕೂಡಿತ್ತು.[೧೦] ಏಕೋಜಿ ಅಂತಿಮವಾಗಿ ತಂಜಾವೂರಿನಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿದರೂ, ಬೆಂಗಳೂರು ಮರಾಠರ ನಿಯಂತ್ರಣದಲ್ಲಿಯೇ ಉಳಿಯಿತು. ೧೯೯೬ರ ಈ ಶಾಸನವು ಮರಾಠರ ಆಡಳಿತ ಮತ್ತು ಈ ಪ್ರದೇಶದಲ್ಲಿ ಅವರ ತೊಡಗಿಸಿಕೊಳ್ಳುವಿಕೆಯ ಪುರಾವೆಗಳನ್ನು ಒದಗಿಸುತ್ತದೆ.
ಮಲ್ಲೇಶ್ವರ ಸಾ.ಶ. ೧೯೯೬ ಏಕೋಜಿಯ ಮಲ್ಲಪುರ ಮಲ್ಲಿಕಾರ್ಜುನ ದೇವಸ್ಥಾನದ ದೇಣಿಗೆ ಶಾಸನ
[ಬದಲಾಯಿಸಿ]ಈ ಶಾಸನವು ೧೭ನೇ ಶತಮಾನದಲ್ಲಿ ಬೆಂಗಳೂರಿನಲ್ಲಿ ಮರಾಠಾ ಆಡಳಿತಕ್ಕೆ ಮಹತ್ವದ ಪುರಾವೆಗಳನ್ನು ಒದಗಿಸುತ್ತದೆ ಮತ್ತು ಆ ಸಮಯದಲ್ಲಿ ಮಲ್ಲಪುರದ (ಮಲ್ಲೇಶ್ವರ) ಅಸ್ತಿತ್ವವನ್ನು ದೃಢಪಡಿಸುತ್ತದೆ. ಈ ಕನ್ನಡ ಶಾಸನವು ಮೇದಾರನಿಂಗನಹಳ್ಳಿ ಗ್ರಾಮವನ್ನು ಮಲ್ಲಪುರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಏಕೋಜಿ ೧ ದಾನ ಮಾಡಿದ್ದನ್ನು ದಾಖಲಿಸುತ್ತದೆ. ಈ ಅನುದಾನವನ್ನು "ಬೆಂಗಳೂರ ಮಹಾನಾಡು" (ಬೆಂಗಳೂರಿನ ಜನರು ಅಥವಾ ಸಭೆ) ಕೋರಿಕೆಯ ಮೇರೆಗೆ ನೀಡಲಾಯಿತು. ಇದು "ಬೆಂಗಳೂರು" ಎಂಬ ಹೆಸರಿನ ಆರಂಭಿಕ ಉಲ್ಲೇಖವನ್ನೂ ಒದಗಿಸುತ್ತದೆ. ಈ ಶಾಸನವು ರಾಜಶಾಸನವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತು. ಮೇದಾರನಿಂಗನಹಳ್ಳಿಯಿಂದ ತೆರಿಗೆ ಆದಾಯವನ್ನು ರಾಜನ ಖಜಾನೆಯ ಬದಲು ದೇವಾಲಯಕ್ಕೆ ನಿರ್ದೇಶಿಸಿತು. ಮಲ್ಲಪುರ ಮಲ್ಲಿಕಾರ್ಜುನ ದೇವಾಲಯದ ಉಲ್ಲೇಖವು ಮಲ್ಲೇಶ್ವರದ ಹಿಂದಿನ ಹೆಸರು 'ಮಲ್ಲಪುರ' ಎಂದು ಸೂಚಿಸುತ್ತದೆ.
ಶಾಸನದ ಭೌತಿಕ ಗುಣಲಕ್ಷಣಗಳು
[ಬದಲಾಯಿಸಿ]
ಈ ಶಾಸನವನ್ನು ಒಂದು ಬಂಡೆಯ ಮೇಲೆ ಕೆತ್ತಲಾಗಿದ್ದು, ಕೆತ್ತಲಾದ ಜಾಗವು ಸುಮಾರು 115 ಸೆಂ.ಮೀ ಎತ್ತರ ಮತ್ತು 392 ಸೆಂ.ಮೀ ಅಗಲವಿದೆ. ಕನ್ನಡ ಅಕ್ಷರಗಳು ಸರಿಸುಮಾರು 8.3 ಸೆಂ.ಮೀ ಎತ್ತರ, 6.5 ಸೆಂ.ಮೀ ಅಗಲ ಮತ್ತು 0.45 ಸೆಂ.ಮೀ ಆಳವನ್ನು ಹೊಂದಿವೆ. ಇದು ಸೂರ್ಯ, ಚಂದ್ರ ಮತ್ತು 'ಲಿಂಗದ' (ಹಿಂದೂ ದೇವತೆ ಶಿವನ ಅಮೂರ್ತರೂಪ ಚಿಹ್ನೆ) ಸಾಂಕೇತಿಕ ಕೆತ್ತನೆಗಳನ್ನು ಒಳಗೊಂಡಿದೆ [೧೧] . ಸೂರ್ಯ ಮತ್ತು ಚಂದ್ರರು ಸಾಮಾನ್ಯವಾಗಿ ದಾನದ ಉದ್ದೇಶಿತ ಶಾಶ್ವತತೆಯನ್ನು ಸೂಚಿಸುತ್ತಾರೆ ("ಸೂರ್ಯ ಮತ್ತು ಚಂದ್ರರು ಇರುವವರೆಗೆ" [೧೨] ಎಂಬರ್ಥದಲ್ಲಿ). ಆದರೆ ಲಿಂಗವು ಶೈವ ಧಾರ್ಮಿಕ ಸಂದರ್ಭ ಅಥವಾ ಅಧಿಕಾರವನ್ನು ಸೂಚಿಸುತ್ತದೆ.
ಅನ್ವೇಷಣೆ ಮತ್ತು ಕಾಲನಿರ್ಣಯ
[ಬದಲಾಯಿಸಿ]ಈ ಶಾಸನವನ್ನು ಮೊದಲು ಬಿ. ಎಲ್. ರೈಸ್ ಅವರು ೧೯೨೮ರಲ್ಲಿ ಪ್ರಕಟವಾದಎಪಿಗ್ರಾಫಿಯಾ ಕಾರ್ನಾಟಿಕಾ ಸಂಪುಟ ೯ರ ಪುರವಣಿಯಲ್ಲಿ ದಾಖಲಿಸಿದ್ದಾರೆ.[೧೩] ಶಾಸನವು ಅದರ ದಿನಾಂಕವನ್ನು "ಸೌಮ್ಯ ಸಂವತ್ಸರದ ಮಾರ್ಗಶಿರ ಶುದ್ಧ ಲೂ" ಎಂದು ಉಲ್ಲೇಖಿಸುತ್ತದೆ. ಇದು ಸೋಮವಾರ, ೨೫ ನವೆಂಬರ್ ೧೬೬೯ ತಾರೀಖಿಗೆ ತಾಳೆಯಾಗುತ್ತದೆ.
ಲಿಪ್ಯಂತರ ಮತ್ತು ಅನುವಾದ
[ಬದಲಾಯಿಸಿ]ಶಾಸನವು ಏಳು ಸಾಲುಗಳನ್ನು ಒಳಗೊಂಡಿದೆ. ಕನ್ನಡ ಮತ್ತು IAST ಲಿಪ್ಯಂತರವು, ಇಂಗ್ಲಿಷ್ ಅನುವಾದದೊಂದಿಗೆ ಈ ಕೆಳಗಿನಂತಿದೆ.
| Line | Kannada | IAST | English Translation |
|---|---|---|---|
| 1 | ಸೌಮ್ಯ ಸಂವತ್ಸರದ ಮಾರ್ಗಶಿರ ಶುದ್ಧ ಲೂ | saumya saṃvatsarada mārgaśira śuddha lū | In the Saumya year, on the auspicious day of Margashira |
| 2 | ಶ್ರೀಮತು ಮಲ್ಲಪುರದ ಮಲ್ಲಿಕಾರ್ಜುನ ದೇವರ ದೇವಮಾನ್ಯಕ್ಕೆ ಯೆಕೋಜಿರಾಯನ ಬೆಂಗಳೂರ | śrīmatu mallapurada mallikārjuna devara devamānyakkĕ yĕkojirāyana bĕṃgaḷūra | The honorable Ekojiraya of Bengaluru, for the divine service of the revered Mallikarjuna of Mallapura, |
| 3 | ಮಹನಾಡು ಕೇಳಲಿಕಾಗಿ ಮೆದರನಿಂಗನಹಳಿಯ ಧರ್ಮಕ್ಕೆ ಕೊಟ್ಟನು ಕೋಟಿ ಚಂದ್ರಸೂರ್ಯರು | mahanāḍu keḷalikāgi mĕdaraninganahaḷiya dharmakkĕ koṭṭanu koṭi candrasūryaru | at the request of the people of Bengaluru, grants the village of Medaraninganahalli as a charitable offering, for as long as the sun and moon exist. |
| 4 | ಉಳಕಾಲಉ ಧರ್ಮಕ್ಕೆ ಕೊಟನು ಯೀ ಧರ್ಮಕ್ಕೆ ವಕ್ರ ಮಾಡಿದವರು ಕತ್ತಿಯ ಕಾಗಿಯ ಚಂಡಾಲರ ಜಲ್ಮ | ulakālaü dharmakkĕ koṭanu yī dharmakkĕ vakra māḍidavaru kattiya kāgiya caṃḍālara jalma | This charitable grant is made for perpetuity. Those who obstruct this charity will be reborn as donkeys, crows, or Chandalas. |
| 5 | ದಲಿ ಹುಟ್ಟುವರು | dali huṭṭuvaru | (They will be born into these low forms). |
| 6 | ಮುಸಾಲಮಾನರಾದವರು ಮಕೆಯಲಿ ಹಂದಿ ತಿಂದ ಬ್ರಾಹ್ಮಣ ಚೆತ್ರಿ ವೈಶ್ಯ ಸೂದ್ರ ಕಾಸಿಯಲಿ ಗೋವ | musālamānarādavaru makĕyali handi tinda brāhmaṇa cĕtri vaiśya sūdra kāsiyali gova | Muslims who dishonor this (grant) will bear the same sin as one who consumes pork in Mecca. Brahmanas, Kshatriyas, Vaishyas, and Shudras, in Kashi, who kill a cow |
| 7 | ಕೊಂದ ಪಾಪಕ್ಕೆ ಹೋಗುವ | konda pāpakke hoguva | will incur the same sin. |
ಶಾಪಾಶಯ
[ಬದಲಾಯಿಸಿ]ಅನುದಾನಗಳಿಗೆ ಸಾಮಾನ್ಯ ಪದ್ಧತಿಯನ್ನು ಅನುಸರಿಸಿ, ಶಾಸನವು ಶಾಪಾಶಯವನ್ನು ಒಳಗೊಂಡಿದೆ. ಇದು ದಾನದ ನಿಯಮಗಳನ್ನು ಉಲ್ಲಂಘಿಸುವುದರ ವಿರುದ್ಧ ಎಚ್ಚರಿಕೆ ನೀಡುವ ಒಂದು ಪಂಕ್ತಿಯಾಗಿದೆ. ಸಾಮಾಜಿಕ ವರ್ಗ (ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ) ಯಾವುದೇ ಆಗಿರಲಿ, ಉಲ್ಲಂಘಿಸುವವರು ಕಾಶಿಯಲ್ಲಿ (ವಾರಣಾಸಿ) ಹಸುವನ್ನು ಕೊಂದ ಪಾಪವನ್ನು ಹೊಂದುವಂತಹ ಅಥವಾ ಕತ್ತೆ, ಕಾಗೆ ಅಥವಾ ಚಂಡಾಲ (ಐತಿಹಾಸಿಕವಾಗಿ ಕೆಳವರ್ಗದ ಸಾಮಾಜಿಕ ಗುಂಪು) ಆಗಿ ಪುನರ್ಜನ್ಮ ತಾಳುವಂತಹ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅದು ಹೇಳುತ್ತದೆ. ಇದು ಮುಸ್ಲಿಮರನ್ನು ಕೂಡ ಎಚ್ಚರಿಸುತ್ತದೆ. ಅವರು ಮೆಕ್ಕಾದಲ್ಲಿ ಹಂದಿಮಾಂಸ ಸೇವಿಸುವಷ್ಟು ಪಾಪವನ್ನು ಅನುಭವಿಸುತ್ತಾರೆ ಎಂದು ಹೇಳುತ್ತದೆ. ಇದು ಬೆಂಗಳೂರು ಪ್ರದೇಶದಲ್ಲಿ ಇಸ್ಲಾಂ ಮತ್ತು ಅದರ ಅನುಯಾಯಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಅತ್ಯಂತ ಆರಂಭಿಕ ಶಾಸನ ಎಂದು ಗುರುತಿಸಲಾಗಿದೆ.
ಸಂರಕ್ಷಣೆ
[ಬದಲಾಯಿಸಿ]ಭೌತಿಕ ಸಂರಕ್ಷಣೆ:
[ಬದಲಾಯಿಸಿ]
ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಶಾಸನ ಶಿಲೆಯು, ನಿರ್ಮಾಣ ಕಾರ್ಯವೊಂದರ ಸಮಯದಲ್ಲಿ ಸಿಮೆಂಟ್ ಮತ್ತು ಬಣ್ಣವು ಬಿದ್ದು ಹಾನಿಗೊಳಗಾಯಿತು. ಮಾರ್ಚ್ ೨೦೨೧ರಲ್ಲಿ, 'ಜೀರ್ಣೋದ್ದಾರ್ ಕನ್ಸರ್ವೇಟರ್ಸ್'ನ ಸಂರಕ್ಷಣಾ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ಮತ್ತು ನಿಲೇಶ್ ಎಂ ಥಕ್ಕರ್, 'ಬೆಂಗಳೂರು ಇನ್‌ಸ್ಕ್ರಿಪ್ಷನ್ ಸ್ಟೋನ್ಸ್' ಸಹಯೋಗದೊಂದಿಗೆ, ಇದರ ಶುಚಿಗೊಳಿಸುವಿಕೆ ಮತ್ತು ಪುನಃಸ್ಥಾಪನೆಯನ್ನು ಕೈಗೊಂಡರು. [೧೪]
ಡಿಜಿಟಲ್ ಸಂರಕ್ಷಣೆ
[ಬದಲಾಯಿಸಿ]
ಭೌತಿಕ ಪುನಃಸ್ಥಾಪನೆಯ ನಂತರ, ಮಿಥಿಕ್ ಸೊಸೈಟಿಯ ಬೆಂಗಳೂರು ಇನ್‌ಸ್ಕ್ರಿಪ್ಶನ್ಸ್ 3D ಡಿಜಿಟಲ್ ಕನ್ಸರ್ವೇಶನ್ ಪ್ರಾಜೆಕ್ಟ್ ೨೦೨೧ರಲ್ಲಿ ಶಾಸನದ 3D ಸ್ಕ್ಯಾನ್ ಅನ್ನು ರಚಿಸಿತು. ಅದರ ಡಿಜಿಟಲ್ ಸಂರಕ್ಷಣೆ ಮಾಡಿ ಎಲ್ಲರಿಗೂ ಸಿಗುವಂತಹ ಅವಕಾಶ ಕಲ್ಪಿಸಿತು. [೧೫]
ಕಳೆದುಹೋದ ಮೇದಾರನಿಂಗನಹಳ್ಳಿ ಗ್ರಾಮ
[ಬದಲಾಯಿಸಿ]
ಈ ಶಾಸನವು ಮೇದಾರನಿಂಗನಹಳ್ಳಿ ಗ್ರಾಮದ ದಾನವನ್ನು ದಾಖಲಿಸುತ್ತದೆ. ಆದಾಗ್ಯೂ, ಈ ಗ್ರಾಮವು ಈಗ ಅಸ್ತಿತ್ವದಲ್ಲಿಲ್ಲ, ಏಕೆಂದರೆ ಈ ಗ್ರಾಮದ ಭೂಮಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐ ಐ ಎಸ್ ಸಿ) ಕ್ಯಾಂಪಸ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. [೧೬] ೧೮೫೪ರ ಬೆಂಗಳೂರಿನ ನಕ್ಷೆಯು ಮೇದಾರನಿಂಗನಹಳ್ಳಿಯು ಐಐಎಸ್ಸಿ ಕ್ಯಾಂಪಸ್‌ನ ಪೂರ್ವ ಭಾಗ, ಸಿಪಿಆರ್‌ಐನ ಸಿಬ್ಬಂದಿ ಕಾಲೋನಿ ಮತ್ತು ನ್ಯೂ ಬಿಇಎಲ್ ರಸ್ತೆಯ ಆಚೆಗೆ ಸಿಪಿಆರ್‌ಐವರೆಗೆ Archived 2025-05-09 ವೇಬ್ಯಾಕ್ ಮೆಷಿನ್ ನಲ್ಲಿ. ವ್ಯಾಪಿಸಿತ್ತು ಎಂದು ಸೂಚಿಸುತ್ತದೆ.
'ಮೇದಾರನಿಂಗನಹಳ್ಳಿ' ಎಂಬ ಹೆಸರು ಮೂರು ಕನ್ನಡ ಪದಗಳಿಂದ ಬಂದಿದೆ:
- 'ಮೇದಾರ': ಬಿದಿರು ನೇಕಾರರ ಜಾತಿಯ ಹೆಸರು. [೧೭]
- 'ನಿಂಗ"': ಬಹುಶಃ ವೈಯಕ್ತಿಕ ಹೆಸರಾಗಿರಬಹುದು.
- 'ಹಳ್ಳಿ': 'ಗ್ರಾಮ' ಎಂದರ್ಥ.
ಮೇದಾರ ಸಮುದಾಯವು ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಅವರು ನುರಿತ ಕುಶಲಕರ್ಮಿಗಳಾಗಿದ್ದು, ಸಾಂಪ್ರದಾಯಿಕವಾಗಿ ಬಿದಿರಿನಿಂದ ಚಾಪೆಗಳು, ಬುಟ್ಟಿಗಳು, ಏಣಿಗಳು ಮತ್ತು ಶೇಖರಣಾ ಪಾತ್ರೆಗಳನ್ನು ತಯಾರಿಸುತ್ತಾರೆ. [೧೮] ಈ ಅಗತ್ಯ ವಸ್ತುಗಳನ್ನು ರಚಿಸಲು ಅವರು ಹತ್ತಿರದ ಕಾಡುಗಳಿಂದ ಬಿದಿರನ್ನು ಸಂಗ್ರಹಿಸುತ್ತಿದ್ದಿರಬಹುದು.
ಮೇದಾರನಿಂಗನಹಳ್ಳಿಯ ಕಣ್ಮರೆಯು ಭೂದೃಶ್ಯಗಳ ನಿರಂತರ ವಿಕಾಸ ಹಾಗೂ ಸಾಂಪ್ರದಾಯಿಕ ಸಮುದಾಯಗಳು ಮತ್ತು ನೆಲೆಗಳ ಮೇಲೆ ನಗರೀಕರಣದ ಪ್ರಭಾವವನ್ನು ತೋರಿಸುತ್ತದೆ.
ಜಕ್ಕರಾಯನಕೆರೆ ಶಾಸನ
[ಬದಲಾಯಿಸಿ]ಮಲ್ಲೇಶ್ವರ ಪ್ರದೇಶವು ಮತ್ತೊಂದು ಶಾಸನಕ್ಕೂ ನೆಲೆಯಾಗಿದೆ. ಇದನ್ನು 'ಜಕ್ಕರಾಯನಕೆರೆ ಶಾಸನ' ಎಂದು ಕರೆಯಲಾಗುತ್ತದೆ. ದಿನಾಂಕವಿಲ್ಲದ ಈ ಕನ್ನಡ ಶಾಸನ ದುರದೃಷ್ಟವಶಾತ್ ಅಪೂರ್ಣವಾಗಿದ್ದು, ಅದರ ಪೂರ್ಣ ಅರ್ಥ ಮತ್ತು ಸಂದರ್ಭವನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಆದಾಗ್ಯೂ, ಉಳಿದಿರುವ ಪಠ್ಯವು ಅದು ದೇಣಿಗೆ ಅಥವಾ ಅನುದಾನವನ್ನು ದಾಖಲಿಸಿರಬಹುದು ಎಂದು ಸೂಚಿಸುತ್ತದೆ.
ಶಾಸನವು 'ಯಲಹಂಕ ನಾಡ'ನ್ನು ಉಲ್ಲೇಖಿಸುತ್ತದೆ. ಇದು ಉತ್ತರ ಬೆಂಗಳೂರಿನ ಇಂದಿನ ಯಲಹಂಕಕ್ಕೆ ಅನುಗುಣವಾದ ಐತಿಹಾಸಿಕ ಆಡಳಿತ ವಿಭಾಗವಾಗಿದೆ. ಇದು ಶಾಸನಕ್ಕೆ ಅಮೂಲ್ಯವಾದ ಭೌಗೋಳಿಕ ಸಂದರ್ಭವನ್ನು ಒದಗಿಸುತ್ತದೆ. ಇದನ್ನು ಮೊದಲು ಎಪಿಗ್ರಾಫಿಯಾ ಕರ್ನಾಟಿಕಾ ಸಂಪುಟ ೯ರಲ್ಲಿ ದಾಖಲಿಸಲಾಗಿದೆ. ಅಲ್ಲಿ ಈ ಶಾಸನವು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಕೃಷ್ಣ ಹಿಟ್ಟಿನ ಗಿರಣಿಯ ಸುತ್ತಮುತ್ತಲಿನ ಪ್ರದೇಶವಾದ ಜಕ್ಕರಾಯನಕೆರೆಯಲ್ಲಿ ಕಂಡುಬಂದಿದೆ ಎಂದು ಗಮನಿಸಲಾಗಿದೆ. [೧೩] ದುರದೃಷ್ಟವಶಾತ್, ಶಾಸನದ ಪ್ರಸ್ತುತ ಸ್ಥಳ ಮತ್ತು ಭೌತಿಕ ಸ್ಥಿತಿ ತಿಳಿದಿಲ್ಲ.
ಜಕ್ಕರಾಯನಕೆರೆ ಶಾಸನದ ಲಿಪ್ಯಂತರ
[ಬದಲಾಯಿಸಿ]ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ ಪ್ರಕಟವಾದ ಉಳಿದಿರುವ ಪಠ್ಯದ ಲಿಪ್ಯಂತರವು ಈ ಕೆಳಗಿನಂತಿದೆ.
| ಸಾಲಿನ ಸಂಖ್ಯೆ | ಕನ್ನಡ | ಐ.ಎ.ಎಸ್.ಟಿ. |
|---|---|---|
| 1 | ಶ್ರೀಮತುವಿಕಾರಿಸ | śrīmatuvikārisa |
| 2 | ಓವತ್ಸರದಜೇಷ್ಟಬ ೧ | O vatsarada jēṣṭha ba 1 |
| 3 | ಸೋಯಾಲಹಂಕನಾಡ | sōyālahankanāḍa |
| 4 | ಪ್ರಜಾ . . . . . . | prajā . . . . . . |
| 5 | ಗೌಡುತನದಮುಂ | gauḍutanadamuṃ |
| 6 | ವೀರ . . . ಬಮ | vīra . . .bama |
| 7 | ಚಾಕಲಕನಲುಸಂಗ | cākalakanalusaṅga |
| 8 | ನಕೊಡಗಿಮಾನ್ಯಮ್ಮ | nakoḍagimānyamma |
| 9 | ಡಿಐಐ . . . ಲುಸು | ḍiyi . . .lusu |
| 10 | ಡು ಬೆಂಡ್ಯರ | ḍu beṇḍyara |
| 11 | ಯಾವ . ತಮ್ಮನಾ | yāva . tammanā |
| 12 | ಆಚಾರಿಕಾಮುಂಜಕ. | ācārikāmuṃjaka |
| 13 | ಚನ್ನಪಾಂಡ . . . | canapāṇḍa . . . |
ಅಪೂರ್ಣ ಸ್ವರೂಪದ ಹೊರತಾಗಿಯೂ, ಜಕ್ಕರಾಯನಕೆರೆ ಶಾಸನವು ಮಲ್ಲೇಶ್ವರದ ಐತಿಹಾಸಿಕ ಭೂದೃಶ್ಯದ ಒಂದು ನೋಟವನ್ನು ಒದಗಿಸುತ್ತದೆ ಮತ್ತು ಪಠ್ಯದಲ್ಲಿ ಉಲ್ಲೇಖಿಸಲಾದ ಚಟುವಟಿಕೆಗಳು ಮತ್ತು ವ್ಯಕ್ತಿಗಳ ಬಗ್ಗೆ ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹೆಚ್ಚಿನ ಸಂಶೋಧನೆ ಮತ್ತು ಸಂಪೂರ್ಣ ಶಾಸನದ ಮರುಶೋಧನೆಯು ಬೆಂಗಳೂರಿನ ಇತಿಹಾಸದ ಈ ಭಾಗದ ಮೇಲೆ ಹೆಚ್ಚಿನ ಬೆಳಕು ಚೆಲ್ಲಬಹುದು.
ಮೇದಾರನಿಂಗನಹಳ್ಳಿ ವೀರಗಲ್ಲು (ಐಐಎಸ್ಸಿ ಕ್ಯಾಂಪಸ್)
[ಬದಲಾಯಿಸಿ]
೧೯೭೦ರ ದಶಕದ ಉತ್ತರಾರ್ಧದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಆವರಣದಲ್ಲಿ ೧೦ನೇ ಶತಮಾನದ ಒಂದು ಗಮನಾರ್ಹ ವೀರಗಲ್ಲು ಪತ್ತೆಯಾಗಿದೆ. ಈ ಸ್ಥಳವು ೧೬೬೯ರ ಏಕೋಜಿ ೧ ಶಾಸನದಲ್ಲಿ ಉಲ್ಲೇಖಿಸಲಾದ ಹಿಂದಿನ ಮೇದಾರನಿಂಗನಹಳ್ಳಿ ಗ್ರಾಮದ ಪ್ರದೇಶಕ್ಕೆ ತಾಳೆಯಾಗುತ್ತದೆ. [೪]
ಆ ಕಲ್ಲು ಒಂದು 'ಹುಲಿಬೇಟೆ ವೀರಗಲ್ಲು' ಆಗಿದ್ದು, ಇದು ಹುಲಿಯ ವಿರುದ್ಧ ಹೋರಾಡಿ ಮಡಿದ ವೀರನ ಸ್ಮರಣಾರ್ಥವಾಗಿದೆ. ಭಾಗಶಃ ಹಾನಿಗೊಳಗಾಗಿದ್ದು ಯಾವುದೇ ಬರಹಗಳಿಲ್ಲದಿದ್ದರೂ, ಈ ಶಿಲ್ಪವು ಹುತಾತ್ಮನು ಬಿಲ್ಲನ್ನು ಹಿಡಿದು ಆಕ್ರಮಣಕಾರಿ ಹುಲಿಯ ಮೇಲೆ ಬಾಣ ಬಿಡಲು ಹೊರಟಿರುವುದನ್ನು ಚಿತ್ರಿಸುತ್ತದೆ. ತಜ್ಞರು ಇದನ್ನು ೧೦ನೇ ಶತಮಾನದ, ಬೆಂಗಳೂರು ಪ್ರದೇಶದಲ್ಲಿ ಬಹುಶಃ ಪಶ್ಚಿಮ ಗಂಗ ರಾಜವಂಶದ ಆಳ್ವಿಕೆಯ ಸಮಯದ್ದು ಎಂದು ನಿರ್ಧರಿಸುತ್ತಾರೆ.
ಈ ವೀರಗಲ್ಲು ಬೆಂಗಳೂರಿನಲ್ಲಿ ಕಂಡುಬರುವ ಕೇವಲ ಮೂರು ಹುಲಿಬೇಟೆ ಕಲ್ಲುಗಳಲ್ಲಿ ಒಂದಾಗಿದೆ. ಇದು ಈ ಪ್ರದೇಶದ ಐತಿಹಾಸಿಕ ಪ್ರಾಣಿ ಸಂಪತ್ತು ಮತ್ತು ವಿಶೇಷವಾಗಿ ಅಪಾಯಕಾರಿ ವನ್ಯಜೀವಿಗಳ ವಿರುದ್ಧ ಶೌರ್ಯಕೃತ್ಯಗಳನ್ನು ಗೌರವಿಸುವ ಸಾಮಾಜಿಕ ಪದ್ಧತಿಯ ಅಮೂಲ್ಯ ಪುರಾವೆಗಳನ್ನು ಒದಗಿಸುತ್ತದೆ. ಅಂತಹ ಕಲ್ಲುಗಳ ಇರುವಿಕೆಯು ನಿವಾಸಿಗಳು ಎದುರಿಸುತ್ತಿದ್ದ ಅಪಾಯಗಳನ್ನು ಮತ್ತು ಸಮುದಾಯದಿಂದ ಗೌರವಿಸಲ್ಪಡುತ್ತಿದ್ದ ಧೈರ್ಯತನದ ಬಗ್ಗೆ ತಿಳಿಸುತ್ತದೆ.
ಮಲ್ಲೇಶ್ವರದ ಐತಿಹಾಸಿಕ ಕೃತಿಗಳ ಮಹತ್ವ
[ಬದಲಾಯಿಸಿ]ಮಲ್ಲೇಶ್ವರದ ಶಾಸನಗಳು, ವಿಶೇಷವಾಗಿ ೧೬೬೯ರ ಎಕೋಜಿ ೧ರ ಶಾಸನವು, ಬೆಂಗಳೂರಿನ ಇತಿಹಾಸದ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಅಭಿವೃದ್ಧಿಯನ್ನು ತಿಳಿದುಕೊಳ್ಳಲು ಗಮನಾರ್ಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದೆ. ಈ ಶಾಸನಗಳು ಈ ಕೆಳಗಿನವುಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತವೆ:
- ಮಲ್ಲೇಶ್ವರದ ಆರಂಭಿಕ ಇತಿಹಾಸ: ೧೭ನೇ ಶತಮಾನದಷ್ಟು ಹಿಂದೆಯೇ ಮಲ್ಲಪುರ ಎಂದು ಕರೆಯಲಾಗುತ್ತಿದ್ದ ಮಲ್ಲೇಶ್ವರದ ಅಸ್ತಿತ್ವವನ್ನು ಶಾಸನಗಳು ದೃಢಪಡಿಸುತ್ತವೆ. ಅವು ಆ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆಡಳಿತಾತ್ಮಕ ಪದ್ಧತಿಗಳ ಬಗ್ಗೆ ಒಂದು ನೋಟವನ್ನು ನೀಡುತ್ತವೆ.
- ಬೆಂಗಳೂರಿನಲ್ಲಿ ಮರಾಠರ ಉಪಸ್ಥಿತಿ: ೧೭ನೇ ಶತಮಾನದಲ್ಲಿ ಬೆಂಗಳೂರಿನಲ್ಲಿ ಮರಾಠರ ಆಡಳಿತ ಮತ್ತು ಅವರ ಪ್ರಭಾವದ ಬಗ್ಗೆ ಏಕೋಜಿ ೧ ಶಾಸನವು ದೃಢವಾದ ಪುರಾವೆಗಳನ್ನು ಒದಗಿಸುತ್ತದೆ. ಇದು ಸ್ಥಳೀಯ ಆಡಳಿತ, ಧಾರ್ಮಿಕ ಪ್ರೋತ್ಸಾಹ ಮತ್ತು ಭೂ ಮಂಜೂರಾತಿಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಎತ್ತಿ ತೋರಿಸುತ್ತದೆ.
- ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು: ಶಾಸನಗಳು ಆ ಕಾಲದ ಧಾರ್ಮಿಕ ವಾತಾವರಣದ ಮೇಲೆ ಬೆಳಕು ಚೆಲ್ಲುತ್ತವೆ. ವಿಭಿನ್ನ ನಂಬಿಕೆಗಳ ಸಹಬಾಳ್ವೆ ಮತ್ತು ಧಾರ್ಮಿಕ ಸಂಸ್ಥೆಗಳನ್ನು ಬೆಂಬಲಿಸುವಲ್ಲಿ ದೇವಾಲಯ ದೇಣಿಗೆ ಮತ್ತು ಭೂದಾನಗಳ ಮಹತ್ವವನ್ನು ತೋರಿಸುತ್ತವೆ. ಸೂರ್ಯ, ಚಂದ್ರ ಮತ್ತು ಲಿಂಗದ ಸಾಂಕೇತಿಕ ಕೆತ್ತನೆಗಳು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಒಳನೋಟಗಳನ್ನು ನೀಡುತ್ತವೆ.
- ಭಾಷೆಯ ವಿಕಾಸ: ಶಾಸನದಲ್ಲಿ ಕನ್ನಡ ಭಾಷೆ ಮತ್ತು ಲಿಪಿಯ ಬಳಕೆಯು ಭಾಷೆಯ ವಿಕಾಸ ಮತ್ತು ಅಧಿಕೃತ ದಾಖಲೆಗಳಲ್ಲಿ ಅದರ ಬಳಕೆಯನ್ನು ಅರ್ಥಮಾಡಿಕೊಳ್ಳಲು ಅಮೂಲ್ಯವಾದ ದತ್ತಾಂಶವನ್ನು ಒದಗಿಸುತ್ತದೆ.
- ನಗರಾಭಿವೃದ್ಧಿ: ಏಕೋಜಿ ೧ ಶಾಸನದಲ್ಲಿ ಉಲ್ಲೇಖಿಸಲಾದ ಮೇದಾರನಿಂಗನಹಳ್ಳಿ ಗ್ರಾಮವು ಕಣ್ಮರೆಯಾಗಿರುವುದು, ಕಾಲಾನಂತರದಲ್ಲಿ ಬೆಂಗಳೂರಿನ ನಗರೀಕರಣ ಮತ್ತು ಬದಲಾಗುತ್ತಿರುವ ಭೂದೃಶ್ಯದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.
ಬೆಂಗಳೂರಿನಲ್ಲಿ ಕಂಡುಬರುವ ಇತರ ಶಿಲಾಶಾಸನ ಕಲ್ಲುಗಳೊಂದಿಗೆ ಮಲ್ಲೇಶ್ವರ ಶಾಸನಗಳು ನಗರದ ಶ್ರೀಮಂತ ಮತ್ತು ಸಂಕೀರ್ಣವಾದ ಇತಿಹಾಸದ ಆಳವಾದ ತಿಳುವಳಿಕೆಗೆ ಕೊಡುಗೆ ನೀಡುವ ನಿರ್ಣಾಯಕ ಐತಿಹಾಸಿಕ ದಾಖಲೆಗಳಾಗಿವೆ. ಅವು ಹಿಂದಿನ ಕಾಲದೊಂದಿಗೆ ಸ್ಪಷ್ಟವಾದ ಸಂಪರ್ಕವನ್ನು ನೀಡುತ್ತವೆ. ಇದು ಪ್ರದೇಶದ ವಿಕಾಸವನ್ನು ಪತ್ತೆಹಚ್ಚಲು ಮತ್ತು ಶತಮಾನಗಳಿಂದ ಬಂದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪದ್ಧತಿಗಳ ನಿರಂತರತೆಯನ್ನು ತಿಳಿದುಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ.
ಇದನ್ನೂ ನೋಡಿ
[ಬದಲಾಯಿಸಿ]- ಬೆಂಗಳೂರಿನ ಶಾಸನ ಕಲ್ಲುಗಳ ಸಮಗ್ರ ಪಟ್ಟಿ ಮತ್ತು ಸಂವಾದಾತ್ಮಕ ನಕ್ಷೆಗಾಗಿ, ದಯವಿಟ್ಟು ಬೆಂಗಳೂರಿನ ಶಾಸನ ಕಲ್ಲುಗಳ ಗೂಗಲ್ ನಕ್ಷೆಗೆ ಭೇಟಿ ನೀಡಿ.
- ಬೆಂಗಳೂರಿನ ಶಾಸನ ಕಲ್ಲುಗಳು
ಹೊರ ಸಂಪರ್ಕಕೊಂಡಿಗಳು
[ಬದಲಾಯಿಸಿ]ಶಾಸನ ಮತ್ತು ಅದರ ಪ್ರತ್ಯೇಕ ಅಕ್ಷರಗಳ ಡಿಜಿಟಲ್ ಚಿತ್ರಗಳು, ಸಾರಾಂಶ ಮತ್ತು ಇತರ ಮಾಹಿತಿಯೊಂದಿಗೆ, ಅಕ್ಷರ ಭಂಡಾರ ಸಾಫ್ಟ್‌ವೇರ್ ಮೂಲಕ ಲಭ್ಯವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Kumari, Krittika (2021-06-16). "How the Plague Outbreak Led to a New Township in Bengaluru". MAP (in ಅಮೆರಿಕನ್ ಇಂಗ್ಲಿಷ್). Retrieved 2024-01-09.
- ↑ Dasharathi, Poornima. "The plague that shook Bangalore". Deccan Herald (in ಇಂಗ್ಲಿಷ್). Retrieved 2024-01-09.
- ↑ Rice, B. Lewis (1905). "Epigraphia Carnatica: Volume IX: Inscriptions in the Bangalore District". Epigraphia Carnatica. 9. Mysore Government Central Press: 80–81.
- ↑ ೪.೦ ೪.೧ "The Land on Which We Stand". Connect. Retrieved 2024-10-27.
- ↑ "A Veeragallu on IISc campus" (PDF). Voices, IISc Newsletter. September 2009. Retrieved 27 April 2025.
- ↑ Chopra, P.N. (2003). History of South India (Ancient, Medieval and Modern) Part II: Medieval Period. S. Chand & Company. pp. 467–468. ISBN 81-219-0153-7.
- ↑ Sastri, K.A. Nilakanta (1955). A History of South India from Prehistoric Times to the Fall of Vijayanagar. Oxford University Press. pp. 253–254.
- ↑ "Chhatrapati Shivaji's Bengaluru days". The Times of India. 19 February 2017. Retrieved 2024-10-26.
- ↑ Govind Sakharam, Sardesai (1946). New History of the Marathas: Shivaji and his line (1600-1707). Vol. 1. Phoenix Publications. pp. 210–212.
- ↑ "On the history trail: The Grand Meeting of Chhatrapati Shivaji Maharaj with Ekoji I (Vyankoji Bhonsle)". sahasa.in. 17 September 2021. Retrieved 2024-10-26.
- ↑ "Inscription Stones of Bengaluru". Wikipedia. Retrieved 2024-10-26.
- ↑ "A hunt for Bengaluru's forgotten inscription stones is tracing the history of Kannada and the city". Scroll.in. 30 April 2018. Retrieved 2024-10-26.
- ↑ ೧೩.೦ ೧೩.೧ B. Lewis Rice. Epigraphia Carnatica Vol. 9 Supplement.
- ↑ "Inscription Stones of Bengaluru". Facebook. Retrieved 2024-10-27.
- ↑ "Inscription Stones of Bengaluru". Facebook. Retrieved 2024-10-27.
- ↑ "Wikimaps Warper: Viewing Map 1996". warper.wmflabs.org. Retrieved 2024-01-09.
- ↑ H.v. Nanjundayya (1944). The Mysore Tribes And Castes Volume 4.
- ↑ Bathuku Chitram | Special story on Medari (Mahendra) community | V6 News (18-06-2015) (in ಇಂಗ್ಲಿಷ್), 17 June 2015, retrieved 2023-12-17