ವಿಷಯಕ್ಕೆ ಹೋಗು

ಮಧ್ಯಯುಗದ ಗ್ರೀಕ್ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಧ್ಯಯುಗದ ಗ್ರೀಕ್ ಸಾಹಿತ್ಯವು ಬೈಜ಼್ಯಾಂಟೈನ್ ಸಾಹಿತ್ಯವಾಗಿತ್ತು. ಆಗ ಗ್ರೀಸ್ ಬೈಜ಼ಂಟೀನ್ ಸಾಮ್ರಾಜ್ಯದ ಭಾಗವಾಗಿತ್ತು. ಬೈಜ಼ಂಟೀನ್ ಸಾಹಿತ್ಯವು ಆ್ಯಟಿಕ್ ಗ್ರೀಕ್, ಮಧ್ಯಯುಗದ ಗ್ರೀಕ್ ಮತ್ತು ಆಧುನಿಕ ಗ್ರೀಕ್ ಉಪಭಾಷೆಗಳಲ್ಲಿ ಬರೆಯಲಾದ ಬೈಜ಼ಂಟೀನ್ ಸಾಮ್ರಾಜ್ಯದ ಸಾಹಿತ್ಯವನ್ನು ಸೂಚಿಸುತ್ತದೆ.

ಕ್ರಿ.ಶ 323ರಲ್ಲಿ ಕಾನ್‌ಸ್ಟಾಂಟೈನನ ಆಳ್ವಿಕೆ ಪ್ರಾರಂಭವಾಯಿತು. ಅಲ್ಲಿಂದ 1453ರಲ್ಲಿ ಪೂರ್ವ ಸಾಮ್ರಾಜ್ಯವು ಕುಸಿಯುವವರೆಗೆ[] ಗ್ರೀಕ್ ಸಾಹಿತ್ಯದ ಮೇಲೆ ಲ್ಯಾಟಿನ್ ಸಾಹಿತ್ಯ ಮತ್ತು ಪೂರ್ವ ದೇಶಗಳ ಸಾಹಿತ್ಯಗಳು ಪ್ರಭಾವ ಬೀರಿದವು. ಈ ಕಾಲದ ಬರಹಗಳು ಬಹುಮಟ್ಟಿಗೆ ಧಾರ್ಮಿಕ. ಧಾರ್ಮಿಕ ಅಭಿಪ್ರಾಯಗಳ ವಾದ ವಿವಾದಗಳು ಪ್ರಮುಖವಾದವು. ರಚಿತವಾದ ಕವನಗಳೂ ಬಹುಮಟ್ಟಿಗೆ ಸ್ತೋತ್ರಗಳೇ.

ಕ್ರಿ.ಶ. 5ನೆಯ ಶತಮಾನದಿಂದ 11ನೆಯ ಶತಮಾನದವರೆಗೆ ತಾತ್ತ್ವಿಕ ಜಿಜ್ಞಾಸೆ ಹಾಗೂ ಧಾರ್ಮಿಕ ಪ್ರವಚನಗಳನ್ನುಳ್ಳ ವ್ಯಾಖ್ಯಾನಗಳೂ, ಉಪನ್ಯಾಸಗಳೂ ರಚಿತವಾಗುತ್ತಲೇ ಇದ್ದವು. ಬಿಜಾ಼ಂಟಿಯನ್ ತಾತ್ತ್ವಿಕರಲ್ಲಿ 11ನೆಯ ಶತಮಾನದ ಸಿಮಿಯನ್[] ಎಂಬಾತ ತನ್ನ ಪ್ರವಚನಗಳಲ್ಲಿ 15 ಮಾತ್ರಾಗಣದ ಕಾವ್ಯ ಛಂದಸ್ಸನ್ನು ಅತ್ಯಂತ ಪರಿಣಾಮಯುತವಾಗಿ ಪ್ರಯೋಗಿಸಿದ್ದಾನೆ. ಕ್ರೈಸ್ತ ಪ್ರಾರ್ಥನಾ ವಿಧಿಗೆ ಸಂಬಂಧಿಸಿದ ಉತ್ತಮ ಗೀತೆಗಳ ಪ್ರವಚನಗಳ ರಚನೆಯನ್ನು ಅಭಿಜಾತ ಯುಗದ ಗ್ರೀಕರ ಧರ್ಮಶ್ರದ್ಧೆ ಹಾಗೂ ಕಲಾವಂತಿಕೆಗಳೇ ನೇರವಾಗಿ ನಿರ್ದೇಶಿಸಿದುವು. ಬಿಜಾ಼ಂಟಿಯನ್ ಪ್ರಾರ್ಥನಾ ಗೀತೆಗಳಲ್ಲಂತೂ ಉತ್ತಮ ಶಬ್ದಸಂಯೋಜನೆಯಿಂದ ಹೇಗೆ ಸಂಗೀತಮಯ ಕಾವ್ಯ ನಿರ್ಮಾಣವಾಯಿತೆಂದು ನೋಡಬಹುದು. ಬಿಜಾ಼ಂಟಿಯನ್ ಚರ್ಚಿನ ಲೇಖಕರು ಸಾಮಾನ್ಯ ಜನರಿಗೆ ಧರ್ಮಬೋಧೆ ಮಾಡಲು ನೀತಿಕಥೆ (moral story) ಮುಂತಾದ ಮನೋರಂಜನೆಯ ಸಾಧನೆಗಳನ್ನು ಬಳಸಿಕೊಂಡರು. ಆ ದೃಷ್ಟಿಯಿಂದಲೇ ಹಲವಾರು ಸಂತರ ಜೀವನಚರಿತ್ರೆಗಳನ್ನು ಬರೆದರು. ಇವುಗಳಲ್ಲಿ 4ನೆಯ ಶತಮಾನದಲ್ಲಿ ಜೀವಿಸಿದ್ದ ಈಜಿಪ್ಟಿನ ಸೇಂಟ್ ಆಂಟೊನಿಯನ್ನು ಕುರಿತ ಜೀವನ ಚರಿತ್ರೆ ತುಂಬ ಪ್ರಖ್ಯಾತವಾದುದು.[][]

ಎಲ್ಲಕ್ಕಿಂತ ಹೆಚ್ಚಾಗಿ ಮಧ್ಯಯುಗದ ಜನರ ಆಸಕ್ತಿಯನ್ನು ಸೆಳೆದ ಸಾಹಿತ್ಯ ಪ್ರಕಾರವೆಂದರೆ ಚರಿತ್ರೆ. ಲಿಯೋ, ಮೈಕಲ್ ಸೆಲ್ಲಸ್, ಅನಾ ಕಾಮ್‍ನೀನಾ ಮುಂತಾದ ಬಿಜಾ಼ಂಟಿಯನ್ ಇತಿಹಾಸಕಾರರು ಪುರಾತನ ಗ್ರೀಸಿನ ತುಸಿಡಿಡೀಸ್ ಮುಂತಾದವರಿಂದಲೇ ಸ್ಫೂರ್ತಿ ಪಡೆದು[] ಕ್ರಾನಿಕಲ್ಸ್ ಎಂಬ ಒಂದು ವಿಶಿಷ್ಟ ರೀತಿಯ ಐತಿಹಾಸಿಕ ವೃತ್ತಾಂತಗಳನ್ನು ಬರೆದರು. ಸುಶಿಕ್ಷಿತ ಸಮುದಾಯದ ಸಲುವಾಗಿ ಬರೆದ ಈ ಶಾಸ್ತ್ರೀಯ ಆಕರಗ್ರಂಥಗಳು ಹೆಚ್ಚು ಮಾನ್ಯತೆ ಪಡೆದುವು. ಮಧ್ಯಯುಗದ ಬಿಜಾ಼ಂಟಿಯನ್ ಸಾಹಿತ್ಯದಲ್ಲಿ ಡೈಜೀನಸ್ ಆಕ್ರಿಟಾಸ್ ಎಂಬ ಕಥನಕವನ ತುಂಬ ಜನಪ್ರಿಯವಾಯಿತು. ಎಪಿಗ್ರಾಮ್ ಎಂಬ ವಿಶಿಷ್ಟರೀತಿಯ ಕಾವ್ಯರಚನೆ ಆ ಯುಗದ ಲೌಕಿಕ ಸಾಹಿತ್ಯದ ಕೊಡುಗೆ. ಇವು ಗ್ರೀಕ್ ಅಭಿಜಾತ ಛಂದಸ್ಸಿನಲ್ಲಿ ರಚಿತವಾದ ಭಾವಗೀತಾತ್ಮಕ ಪ್ರೇಮಕವನಗಳು. 10ನೆಯ ಶತಮಾನದ ಜಾನ್ ಜಿಯೋಮಿಟ್ರಸ್‌ನ ರಚನೆಗಳು ಇದಕ್ಕೆ ಉತ್ತಮ ನಿದರ್ಶನವಾಗಿವೆ.[][] ಬಿಜಾ಼ಂಟಿಯನ್ ಯುಗದ ರಾಜ್ಯಾಡಳಿತಕ್ಕೆ ಸಂಬಂಧಿಸಿದ ದಸ್ತಾವೇಜುಗಳು ಆ ಕಾಲದಲ್ಲಿ ಗದ್ಯಶೈಲಿ ಹೇಗೆ ವಿಕಾಸವಾಯಿತೆಂಬುದಕ್ಕೆ ಮುಖ್ಯ ನಿದರ್ಶನವಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Reinert 2002, pp. 280–283; Laiou 2008, pp. 292–293; Kaldellis 2023, pp. 910–914.
  2. Antonie Pietrobelli (2016), Qui est Syméon Seth ? Le Projet Syméon Seth.
  3. Clifford, Cornelius, Catholic Encyclopedia 1930, Volume 2, pp. 35–40 "Athanasius".
  4. "Athanasius of Alexandria: Vita S. Antoni [Life of St. Antony] (written bwtween 356 and 362)". Fordham University. Retrieved 14 July 2016.
  5. EB (1911).
  6. Kazhdan (1991), p. 1059
  7. Vasiliev (1958), p. 365


ಗ್ರಂಥಸೂಚಿ

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: