ಮಂಜಿನನಾರು
ಮಂಜಿನನಾರು ಲಲಿಯೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ (ಬೋಸ್ಟ್ರಿಂಗ್ ಹೆಂಪ್). ಸ್ಯಾನ್ಸ್‌ವಿಯರಿಯ ರಾಕ್ಸ್‌ಬರ್ಗಿಯಾನ ಇದರ ವೈಜ್ಞಾನಿಕ ನಾಮ.[೧][೨]
ವಿವರಣೆ
[ಬದಲಾಯಿಸಿ]ಇದು ಶುಷ್ಕ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯುವ ಸಸ್ಯ. ಕಾಂಡ ನೆಲದಲ್ಲಿ ಹುದುಗಿರುವಂಥ ಗುಪ್ತ ಬಗೆಯದು. ನೆಲಮಟ್ಟದಿಂದ ಗುಂಪಾಗಿ ಎಲೆಗಳು ಹುಟ್ಟುತ್ತವೆ. ಎಲೆಗಳು ರಸಭರಿತ, ಮಾಂಸಲ, ಚಪ್ಪಟೆ ಹಾಗೂ ಮಂದ. ತುದಿ ಮೊನಚಾಗಿ ಭರ್ಜಿಯ ಮೊನೆಯಂತಿದೆ. ಎಲೆಗುಚ್ಛದ ಕೇಂದ್ರದಿಂದ ಹೂದಿಂಡು (ಸ್ಕೇಪ್) ಮೂಡಿ ರೆಸೀಮ್ ಮಾದರಿಯಲ್ಲಿ ಹೂಗಳು ಅರಳುತ್ತವೆ. ಪ್ರತಿ ಹೂವಿನಲ್ಲಿ 6 ಪೆರಿಯಾಂತ್ ಹಾಲೆಗಳು, 6 ಕೇಸರಗಳು ಮತ್ತು ಮೂರು ಕಾರ್ಪೆಲುಗಳಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಇದೆ. ಫಲ ಸಂಪುಟ ಮಾದರಿಯದು. ಒಳಗೆ 1-3 ಬೀಜಗಳುಂಟು.
ಉಪಯೋಗಗಳು
[ಬದಲಾಯಿಸಿ]ಇದರ ಎಲೆಗಳಿಂದ ದೊರೆಯುವ ನಾರು ರೇಷ್ಮೆಯಂತೆ ಮೃದುವಾಗಿದ್ದು ಸ್ಥಿತಿಸ್ಥಾಪಕ ಗುಣ ಪಡೆದಿದೆ. ದೃಢ ಮತ್ತು ಉಪಯುಕ್ತ ಆಗಿರುವ ಇದನ್ನು ಹಗ್ಗ, ಹುರಿ, ಟ್ವೈನ್ ದಾರಗಳ ತಯಾರಿಕೆಗೆ ಬಳಸಲಾಗುತ್ತದೆ. ಮೀನಿನ ಬಲೆಗಳಿಗೂ ಇದರ ಉಪಯೋಗ ಉಂಟು. ಬಿಲ್ಲಿನ ಹೆದೆಗೆ ಅತ್ಯುತ್ತಮವೆನ್ನಲಾಗಿದೆ.
ಮಂಜಿನನಾರಿನಿಂದ ಪಡೆಯಲಾಗುವ ಸ್ಯಾನ್ಸ್‌ವಿರೈನ್ ಎಂಬ ಸಸ್ಯ ಕ್ಷಾರವನ್ನು ಹೃದ್ರೋಗ, ತುರಿಕೆ, ಕುಷ್ಠ, ಕಜ್ಜಿ, ಜ್ವರ, ವಾತ, ಗ್ರಂಥಿಗಳ ಬಾವು ಮುಂತಾದವುಗಳ ಚಿಕಿತ್ಸೆಗೆ ಬಳಸಲಾಗುವುದು. ಗಿಡದ ಬೇರು ಕೆಮ್ಮಿಗೆ ಮದ್ದೆನಿಸಿದೆ.