ಮಂಜಮ್ಮ ಜೋಗತಿ

ವಿಕಿಪೀಡಿಯ ಇಂದ
Jump to navigation Jump to search

ಬಿ. ಮಂಜಮ್ಮ ಜೋಗತಿ ಮಂಗಳಮುಖಿಯರಲ್ಲಿ ಬಹಳ ಪ್ರಮುಖ ಹೆಸರು. ಈಕೆ ತೃತೀಯಲಿಂಗವಾಗಿ ರೂಪಾಂತರ ಗೊಳ್ಳುವ ಸಂದರ್ಭದಲ್ಲಿ, ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗಿ, ನಂತರ ತಮ್ಮ ಬದುಕನ್ನು ಕಟ್ಟಿಕೊಂಡ ಮಾದರಿ ಮನನನೀಯವಾದುದು. ಅವರು ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗುವ ವೇಳೆಗಾಗಲೇ ಸ್ವೀಕರಿಸಿದ್ದ 'ಜೋಗತಿ' ವೃತ್ತಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡು, ತಮ್ಮ ೧೮ನೇ ವಯಸ್ಸಿನಿಂದ ಕಲಾಸೇವೆ ಮಾಡುತ್ತಾ, ಜನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ, ಸಂತೆ, ವೇದಿಕೆ ಮುಂತಾದ ಸ್ಥಳಗಳಲ್ಲಿ ಈವರೆಗೆ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ.

ಜನನ-ಜೀವನ[ಬದಲಾಯಿಸಿ]

 • ಈಕೆ ಬಳ್ಳಾರಿ ಜಿಲ್ಲೆಯ ಕಲ್ಲುಕಂಬದವರು. 'ತಗ್ಗಿನ ಮಠ' ಎಂಬ ಊರಿನಲ್ಲಿ ಓಣಿಯಲ್ಲಿ ಹುಟ್ಟಿದರು. ಜನ್ಮನಾಮ ಮಂಜುನಾಥ. ಶಾಲಾ ದಾಖಲಾತಿಗಳಲ್ಲಿ ಕುಮಾರ ಬಿ. ಮಂಜುನಾಥಶೆಟ್ಟಿ ಎಂದು ದಾಖಲಾಗಿದೆ. ಜನ್ಮ ದಿನಾಂಕ ೧೮-೦೪-೧೯೬೪. ವಿದ್ಯಾ ಅರ್ಹತೆ ಎಸ್.ಎಸ್.ಎಲ್.ಸಿ. ತಂದೆ ಶ್ರೀ ಹನುಮಂತಯ್ಯ ಶೆಟ್ಟಿ, ತಾಯಿ ಶ್ರೀಮತಿ ಜಯಲಕ್ಷ್ಮೀ.
 • ಅವರನ್ನು ಶಾಲೆಗೆ ಸೇರಿಸುವ ದಿನ ಕೃಷ್ಣ ವೇಷ ಹಾಕಿ, ಜುಟ್ಟು ಕಟ್ಟಿ, ಕೊರಳಿಗೆ ಮಂಡಕ್ಕಿ ಸರ, ಕಲ್ಲಂಗಡಿ ಬೀಜ ಮತ್ತು ಕರಬೂಜ ಹಣ್ಣಿನ ಬೀಜದ ಮಾಲೆ ಹಾಕಿ, ಶಾಲೆಯಲ್ಲಿ ಪೂಜೆ ಮಾಡಿ, ತೆಂಗಿನ ಕಾಯಿ, ಕೊಬ್ರಿ, ಬೆಲ್ಲ, ಮಂಡಕ್ಕಿ ಮಿಶ್ರಣ ಮಾಡಿ ಮಕ್ಕಳಿಗೆಲ್ಲ ಹಂಚಿದ್ರು. ಅಂದು ಒಂದು ಮಗು ಶಾಲೆ ಸೇರುತ್ತದೆ ಎಂದರೆ ಸಂಭ್ರಮ, ಖುಷಿ ಇತ್ತು.
 • ಮಂಜಮ್ಮ ಏಳನೇ ತರಗತಿ ಓದುವಾಗಲೇ ತನ್ನ ಶರೀರದಲ್ಲಿ ಏನೋ ಬದಲಾವಣೆಯಾಗುತ್ತಿರುವಂತೆ ಭಾಸವಾಗಿ, ಯಾರ ಮುಂದೆಯು ಹೇಳಿಕೊಳ್ಳಲು ಆಗದಂತಹ ನೋವು, ಸಂಕಟ ಸಂಗತಿಗಳು ಇರುವಂತೆ ಭಾಸವಾಯಿತು. ಇತ್ತ ಹುಡುಗರೊಂದಿಗೂ ಹೊಂದಿಕೊಳ್ಳಲಾಗುತ್ತಿರಲಿಲ್ಲ, ಅತ್ತ ಹುಡುಗಿಯರೊಂದಿಗೂ ಹೊಂದಿ ಕೊಳ್ಳಲಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಹಾಗೆ ಇರಬೇಕು, ಬದುಕ ಬೇಕು ಎಂಬ ಭಾವನೆಗಳನ್ನು ಹತ್ತಿಕ್ಕಿ ಕೊಳ್ಳಲಾರದೆ, ಶಾಲೆಯ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು.
 • ಹತ್ತನೆ ತರಗತಿ ಓದುವಷ್ಟರ ಹೊತ್ತಿಗೆ ಎಲ್ಲರಿಗೂ ಕಾಣುವಂತೆ ಶರೀರದಲ್ಲಿ ಹಲವಾರು ಮಾರ್ಪಾಡುಗಳಾದುವು. ಮಂಜುನಾಥಶೆಟ್ಟಿಯ ಇಡೀ ನಡವಳಿಕೆ ಹೆಣ್ಣಿನಂತೆ ಆಗಿಬಿಟ್ಟಿತು. ಹಾಗಾಗಿ ಅವರ ತಂದೆ ಹನುಮಂತಯ್ಯ ಶೆಟ್ಟಿ ಶಾಲೆ ಬಿಡಿಸಿ ಮಗನನ್ನು ಪಿಗ್ಮಿ ಸಂಗ್ರಹಿಸಲು ಕಳುಹಿಸ ತೊಡಗಿದರು. ಹುಡುಗಿಯಂತಾಡಿದರೆ ಬಡಿಗೆಯಿಂದ ಬಡಿಯ ತೊಡಗಿದರು.
 • ಏಕೆಂದರೆ ಇವರ ಕುಟುಂಬದಲ್ಲಿಯ ಒಬ್ಬರು ಈಗಾಗಲೇ ಈ ರೀತಿಯೇ ಆಗಿದ್ದರು. ಅವರು ಮಂಜುನಾಥಶೆಟ್ಟಿಗೆ ಮಾವನಾಗಬೇಕು. ಇವರ ತೌರಿನವರು ಅವರನ್ನು ಆ ಮಾವನ ಮನೆಯಲ್ಲಿಯೂ ಸ್ವಲ್ಪ ದಿನ ಬಿಟ್ಟಿರುತ್ತಾರೆ. ಅವರ ಮಾವ ಮಂಜುನಾಥಶೆಟ್ಟಿಯನ್ನು ಸಂತೈಸುವ ಮೊದಲು, ಅವನಿಗೆ ದಿನ ಹೊಡೆದು ಆ ಮನಃಸ್ಥಿತಿಯಿಂದ ದೂರವಿಡಲು ಪ್ರಯತ್ನಿಸಿ ಸೋಲುತ್ತಾರೆ.
 • ಮಂಜುನಾಥಶೆಟ್ಟಿಯ ಮೈಮೇಲೆ ಹುಲಿಗೆಮ್ಮ ಬರುತ್ತಾಳೆಂಬ ಪುಕಾರನ್ನು ಆ ಊರಿನ ಜನರು ಮನೆಯವರಿಗೆ ತಿಳಿಸಿ, ನಂತರ ಮನೆಯವರು ತಮ್ಮ ಮನೆತನದ ಮಾನ ಮರ್ಯಾದೆ ಉಳಿಸಿಕೊಳ್ಳಲು ಮಂಜುನಾಥಶೆಟ್ಟಿಯನ್ನು ಹುಲಿಗೆಮ್ಮ ದೇವತೆಗೆ ಮುಡಿಪಾಗಿಡಲು ನಿರ್ಧರಿಸುವರು.
 • ಹೊಸಪೇಟೆ ತಾಲೂಕು ಹುಲಿಗಿ ಗ್ರಾಮದ ಸುಪ್ರಸಿದ್ಧ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ದೀಕ್ಷೆ ಕೊಡಿಸುತ್ತಾರೆ. ಏಕೆಂದರೆ ದೈವಿ ಸ್ವರೂಪದ ಜೋಗತಿಯರು ಅನೈತಿಕ ಕೆಲಸಗಳನ್ನು ಮಾಡುವುದು ಕಡಿಮೆ ಎಂಬ ನಂಬಿಕೆ. ಮುತ್ತು ಕಟ್ಟಿಸಿಕೊಂಡ ಮೇಲೆ ಮನೆಯವರ ಅನಾದರಣೆಯನ್ನು ಸಹಿಸಲಾರದೆ ಸಾಯುವ ತೀರ್ಮಾನ ಕೈಗೊಂಡು, ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಮನೆಯವರು ಚಿಗಟೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಟ್ಟವರು ತಿಂಗಳಾದರೂ ಮಗಳನ್ನು ತಿರುಗಿ ನೋಡುವುದಿಲ್ಲ.
 • ಆಗ ಮಂಜಮ್ಮ ಮನದಲ್ಲೇ ಬದುವ ನಿರ್ಧಾರ ಕೈಗೊಂಡು ಒಬ್ಬೊಂಟಿಯಾಗಿ, ಸಮಾಜಮುಖಿಯಾಗುತ್ತಾರೆ. ಅವರಿಗೆ ಗುರುವಾಗಿ, ತಾಯಿಯಾಗಿ ಕಾಳಮ್ಮ ಜೋಗತಿ ಸಿಗುತ್ತಾರೆ. ಅವರು ಮಂಜಮ್ಮಜೋಗತಿಯನ್ನು ತಮ್ಮ ಮನೆ ಮಗಳಾಗಿ ಕಂಡು, ಅವಳಿಗೆ ತಾವು ಕಲಿತಿದ್ದ ಸಕಲ ವಿದ್ಯೆಯನ್ನು ಧಾರೆ ಎರೆಯುತ್ತಾರೆ. ಸಾಯುವವರೆವಿಗೂ ಅವಳನ್ನು ತಮ್ಮ ಕಲಾ ತಂಡದೊಂದಿಗೆ ಇಟ್ಟು ಕೊಂಡಿರುತ್ತಾರೆ.

ಕಲಾ ಪ್ರದರ್ಶನ[ಬದಲಾಯಿಸಿ]

ಮಂಜಮ್ಮ ಜೋಗತಿ ಗಂಡು ಜೋಗತಿಯರ ತಂಡವನ್ನು ಕಟ್ಟಿಕೊಂಡು ಜೋಗತಿ ಕಲೆ ಪ್ರದರ್ಶನ ಮಾಡುವುದರೊಂದಿಗೆ, ನಾಟಕ ಪ್ರದರ್ಶನ, ನಾಟಕ ನಿರ್ದೇಶನ, ಹಾಡು, ಕುಣಿತ ಮುಂತಾದ ಮನೋರಂಜಕ ಕಲೆಗಳನ್ನು ರೂಢಿಸಿಕೊಂಡಿದ್ದಾರೆ. ಅಂತಹ ಕೆಲವು ಪ್ರದರ್ಶನಗಳ ಮಾಹಿತಿ ಇಂತಿವೆ.

 • ೧೯೮೬ : ಅಖಿಲ ಕರ್ನಾಟಕ ಮಹಿಳಾ ಜನಪದ ಸಮ್ಮೇಳನ - ತುಮಕೂರು.
 • ೧೯೯೨ : ಜಾನಪದ ಕಲಾ ಮಹೋತ್ಸವ, ರವೀಂದ್ರ ಕಲಾಕ್ಷೇತ್ರ - ಬೆಂಗಳೂರು.
 • ೧೯೯೫ : ಬುಡಕಟ್ಟು ಉತ್ಸವ ಕನ್ನಡ ವಿಶ್ವವಿದ್ಯಾನಿಲಯ - ಹಂಪಿ ಹಾಗೂ ಕರ್ನಾಟಕ ಬುಡಕಟ್ಟು ಮತ್ತು ಜನಪದನೃತ್ಯೋತ್ಸವ - ಕನ್ನಡ ವಿಶ್ವವಿದ್ಯಾನಿಲಯ - ಹಂಪಿ
 • ೧೯೯೫ : ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ - ಬಳ್ಳಾರಿ
 • ೧೯೯೫ : ರಾಜ್ಯ ಮಟ್ಟದ ಜಾನಪದ ಸಮಾವೇಶ - ಹೂವಿನ ಹಡಗಲಿ, ಬಳ್ಳಾರಿ ಜಿಲ್ಲೆ
 • ೧೯೯೮ : ಅಖಿಲ ಕರ್ನಾಟಕ ಜಾನಪದ ಸಮ್ಮೇಳನ
 • ೧೯೯೯ : ಜಾನಪದ ಉತ್ಸವ - ಅಥಣಿ, ಬೆಳಗಾವಿ ಜಿಲ್ಲೆ
 • ೨೦೦೦ : ಜಾನಪದ ರಂಗ ಮಹೋತ್ಸವ - ರವೀಂದ್ರ ಕಲಾಕ್ಷೇತ್ರ - ಬೆಂಗಳೂರು.
 • ೨೦೦೨ : ಪ್ರಸಾರ ಭಾರತಿ ಆಕಾಶವಾಣಿ, ದಶಮಾನೋತ್ಸವ ಕಾರ್ಯಕ್ರಮ - ಹೊಸಪೇಟೆ
 • ೨೦೦೩ : ರಾಜ್ಯ ಮಟ್ಟದ ಚೌಡಕಿಮೇಳ - ಸವದತ್ತಿ, ಧಾರವಾಡ ಜಿಲ್ಲೆ
 • ೨೦೦೪ : ಸೊಂಡೂರು ತಾಲೂಕು ಸಾಹಿತ್ಯ ಸಮ್ಮೇಳನ - ಸೊಂಡೂರು
 • ೨೦೦೪ : ಕರ್ನಾಟಕ ಖಾದಿ ಉತ್ಸವ - ಬಳ್ಳಾರಿ
 • ೨೦೦೪ : ರಂಗಾಯಣ ಕಾರ್ಯಕ್ರಮ ಮತ್ತು ಜನಪದ ಉತ್ಸವ - ಮೈಸೂರು
 • ೨೦೦೪ : ಜಿಂದಾಲ್ ನವರಾತ್ರಿ ಉತ್ಸವ - ತೋರಣಗಲ್ಲು, ಬಳ್ಳಾರಿ ಜಿಲ್ಲೆ
 • ೨೦೦೫ : ನವರಸ ಉತ್ಸವ - ಬಿಜಾಪುರ
 • ೨೦೦೫ : ತಿಂಗಳ ಸೊಬಗು ಕಾರ್ಯಕ್ರಮ - ಮೈಸೂರು ಮತ್ತು ಬಿಜಾಪುರ
 • ೨೦೦೬ : ರಾಜ್ಯ ಜಾನಪದ ಕಲಾಸಾಗರ- ರಾಮದುರ್ಗ, ಬೆಳಗಾವಿ ಜಿಲ್ಲೆ
 • ೨೦೦೬ : ಆಳ್ವಾರ್ ನುಡಿಸಿರಿ ಕಾರ್ಯಕ್ರಮ - ಮೂಡಬಿದರೆ
 • ೨೦೦೬ : ದಸರಾ ನಾಡಹಬ್ಬ - ರಾಯಚೂರು
 • ೨೦೦೬ : ಸುವರ್ಣ ಕರ್ನಾಟಕ ಸಾಂಸ್ಕ್ರತಿಕ ಕಾರ್ಯಕ್ರಮ - ಬಳ್ಳಾರಿ
 • ೨೦೦೬ : ರಾಜ್ಯೋತ್ಸವ ಕಾರ್ಯಕ್ರಮ ಚಿನ್ನಸ್ವಾಮಿ ಕ್ರೀಡಾಂಗಣ - ಬೆಂಗಳೂರು.
 • ೨೦೦೬ : ಜಾನಪದ ಜಾತ್ರೆ- ಮಂಡ್ಯ - ಧಾರವಾಡ - ಬಳ್ಳಾರಿ - ಬೀದರ್ - ಚಾಮರಾಜನಗರ - ಬೆಂಗಳೂರು -ಮುಂತಾದುವು.

ಪ್ರಶಸ್ತಿ-ಪುರಸ್ಕಾರ[ಬದಲಾಯಿಸಿ]

 • ೨೦೦೬ : ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
 • ೨೦೦೭ : ಜಾನಪದ ಜಾನ ಪ್ರಶಸ್ತಿ
 • ೨೦೦೮ : ಜಾನಪದ ಲೋಕ ಪ್ರಶಸ್ತಿ
 • ೨೦೧೦ : ಕನ್ನಡ ರಾಜ್ಯೋತ್ಸವ ಪ್ರಶಸ್ತಿ
 • ೨೦೧೨ : ಶ್ರೀ ತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ
 • ೨೦೧೪ : ಸಮಾಜ ಸಖಿ ಪ್ರಶಸ್ತಿ

ಖಾಯಂ ವಿಳಾಸ[ಬದಲಾಯಿಸಿ]

 • ಬಿ. ಮಂಜಮ್ಮ ಜೋಗತಿ
 • ಜೋಗತಿ ನೃತ್ಯ ಕಲಾವಿದೆ
 • ಗೊಲ್ಲರ ಹಳ್ಳಿ ಗ್ರಾಮ
 • ಡಣಾಯಕನ ಕೆರೆ ಅಂಚೆ
 • ಹೊಸಪೇಟೆ ತಾಲೂಕು ಬಳ್ಳಾರಿ ಜಿಲ್ಲೆ
 • ಪಿನ್ ಕೋಡ್ -೫೮೩ ೨೨೨
 • ಮೊಬೈಲ್ ಸಂಖ್ಯೆ -೯೪೪೯೪೬೪೦೭೫

ಗ್ರಂಥ ನೆರವು[ಬದಲಾಯಿಸಿ]

 • ಮಂಜಮ್ಮ ಜೋಗತಿ - ಡಾ.ಚಂದ್ರಪ್ಪ ಸೊಬಟಿ

ಉಲ್ಲೇಖ[ಬದಲಾಯಿಸಿ]

[೧][೨] [೩][೪] [೫][೬] [೭][೮] [೯][೧೦] [೧೧][೧೨]

ಬಾಹ್ಯಕೊಂಡಿಗಳು[ಬದಲಾಯಿಸಿ]

 1. ಜೋಗತಿ ಕಲೆಗೆ ಹೊಸ ಮೆರಗು ತಂದ ಮಂಜಮ್ಮ ಜೋಗತಿ
 2. http://kannadajaanapada.blogspot.in/2010/10/blog-post_11.html
 3. ಸರ್ಕಾರದ ಅವ್ಯವಸ್ಥೆ ವಿರುದ್ಧ ದ್ವನಿ ಎತ್ತಿದ ಮಂಜಮ್ಮ ಜೋಗತಿ
 4. http://kannadajaanapada.blogspot.in/2011/02/blog-post.html
 5. ಬಳ್ಳಾರಿ ಮಂಗಳಮುಖಿಯರ ರಂಗಮಾದರಿ
 6. http://www.planetkannada.com/node/9643
 7. ಹಿಜಡಾಗಳ ಬಳ್ಳಾರಿ ಮಾದರಿ
 8. http://www.prajavani.net/article/%E0%B2%B9%E0%B2%BF%E0%B2%9C%E0%B2%A1%E0%B2%BE%E0%B2%97%E0%B2%B3-%E0%B2%AC%E0%B2%B3%E0%B3%8D%E0%B2%B3%E0%B2%BE%E0%B2%B0%E0%B2%BF-%E0%B2%AE%E0%B2%BE%E0%B2%A6%E0%B2%B0%E0%B2%BF
 9. ವಿಶ್ವನುಡಿಸಿರಿ ಅಂಗಳದಲ್ಲಿ ಜೋಗತಿ ನೃತ್ಯ
 10. http://www.icarelive.com/bedra/index.php?action=coverage&type=1130
 11. ಸಮಾಜ ನಮ್ಮನ್ನು ನಿರ್ಲಕ್ಷಿಸದಿರಲಿ: ಮಂಜಮ್ಮ
 12. http://vijaykarnataka.indiatimes.com/district/haveri/shiggavi/articleshow/26801671.cms