ಭಾರತ ಸಂವಿಧಾನದ ಪೀಠಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತ ಸಂವಿಧಾನದ - ಪೀಠಿಕೆ

ಭಾರತದ ಸಂವಿಧಾನದ ಪೀಠಿಕೆಯು ಈ ಕೆಳಗಿನಂತಿದೆ:

ಭಾರತದ ನಾಗರಿಕರಾದ ನಾವು, ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ (೧೯೭೬ರಲ್ಲಿ ಇಂದಿರಾಗಾಂಧಿಯವರಿಂದ ಸೇರಿಸಲ್ಪಟ್ಟದ್ದು) ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತಾ ದೃಢಮನಸ್ಸಿನಿಂದ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ನಾಗರಿಕರಿಗೆ ಈ ಕೆಳಗಿನ ಹಕ್ಕುಗಳನ್ನು ಖಾತರಿಪಡಿಸಲಾಗುತ್ತದೆ:
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ, ಮತ್ತು ಅದನ್ನು ಎಲ್ಲರಿಗೂ ಹಂಚುವುದು;
ಗಳನ್ನು ದೊರಕಿಸಿ,
ವೈಯುಕ್ತಿಕ ಘನತೆ ಮತ್ತು ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಎಲ್ಲರಲ್ಲೂ ಸಹೋದರತ್ವ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಅಳವಡಿಸಿಕೊಂಡು, ಜಾರಿಗೊಳಿಸಿ, ನಾವಾಗಿಯೇ ವಿಧಿಸಿಕೊಳ್ಳುತ್ತೇವೆ.

[೧][೨][೩]

ಸಾಂವಿಧಾನಿಕ ಸ್ಥಾನಮಾನ[ಬದಲಾಯಿಸಿ]

ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಸರ್ವೋಚ್ಛ ನ್ಯಾಯಾಲಯವು ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ. ಇದಕ್ಕೆ ಉದಾಹರಣೆ, 'ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ' ಪ್ರಕರಣ. ಅದಾಗ್ಯೂ, ಪೀಠಿಕೆಯನ್ನು ಸಂವಿಧಾನದ ಲೇಖನದಲ್ಲಿ ದ್ವಂದ್ವ ಇದ್ದಾಗ ಮಾತ್ರ, ಮತ್ತಷ್ಟು ಅರ್ಥವತ್ತಾಗಿಸುವ ಸಾಧನವನ್ನಾಗಿ ಬಳಸಬಹುದೇ ಹೊರತು, ಹಕ್ಕು ಸಾಧಿಸುವ ಸಂವಿಧಾನದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗದು.

ಪೀಠಿಕೆಯ ಮೂಲಪ್ರತಿಯಲ್ಲಿ "ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ" ಎಂದಿತ್ತು. ಎರಡು ಹೆಚ್ಚಿನ ಪದಗಳಾದ "ಸಮಾಜವಾದಿ" ಮತ್ತು "ಜಾತ್ಯಾತೀತ" ಪದಗಳನ್ನು ೧೯೭೬ರಲ್ಲಿ ಸಂವಿಧಾನದ ೪೨ನೆ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೆ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ, ಸರ್ದಾರ್ ಸ್ವರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು.

ಪೀಠಿಕೆಯ ಮಹತ್ವ[ಬದಲಾಯಿಸಿ]

ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗು ತಿದ್ದುಪಡಿ ಮಾಡಲು ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಪೀಠಿಕೆಯು ಸಂವಿಧಾನದ ಒಂದು ಭಾಗವಾದರೂ ಅದನ್ನು ಅಥವಾ ಅದರ ಯಾವುದೇ ಅಂಶವನ್ನು ಕಾನೂನಿಗನುಸಾರವಾಗಿ ಜಾರಿ(ಹೇರು) ಮಾಡುವಂತಿಲ್ಲ.

ಪೀಠಿಕೆಯ ಮೊದಲ ಪದಗಳು - "ನಾವು, ಜನಗಳು " - ಭಾರತಲ್ಲಿ ಅಧಿಕಾರ ಜನಗಳ ಕೈನಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೂಬ್ಬ ನಾಗರೀಕ ಹಾಗು ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ - ನವೆಂಬರ್ ೨೬ ೧೯೪೯ ಎಂದು ಹೇಳುತ್ತದೆ.

ಪೀಠಿಕೆಯ ಕೆಲವು ಪದಗಳ ನಿರೂಪಣೆ[ಬದಲಾಯಿಸಿ]

ಸಾರ್ವಭೌಮ[ಬದಲಾಯಿಸಿ]

ಸಾರ್ವಭೌಮ ಎಂಬ ಪದದ ಅರ್ಥ ಪರಮಾಧಿಕಾರ ಅಥವಾ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ.

ಭಾರತ ಕಾಮನ್ವೆಲ್ತ್ ರಾಷ್ಟ್ರಗಳ ಒಕ್ಕೂಟದಲ್ಲಿ ಸದಸ್ಯ ಸ್ಥಾನ ಪಡೆದಿದೆ. ಹಾಗಂತ ಬ್ರಿಟೀಷರ ಅಡಿಯಾಳಲ್ಲ. ವಿಶ್ವದಲ್ಲಿ ಉತ್ತಮವಾದ ಸ್ಥಾನಮಾನ ಪಡೆಯಲು ಇದು ಅವಶ್ಯಕ. ಅಂತರರಾಷ್ಟ್ರೀಯ ವ್ಯಾಪಾರವನ್ನು ಕೈಗೊಂಡು ದೇಶದ ಆರ್ಥಿಕ ಭದ್ರತೆಗೆ ಈ ರೀತಿಯ ಸದಸ್ಯತ್ವ ಅವಶ್ಯಕವಾಗಿದೆ.

ಸಮಾಜವಾದಿ[ಬದಲಾಯಿಸಿ]

ಸಮಾಜವಾದಿ ಪದವು ಪೀಠಿಕೆಗೆ ೧೯೭೬ರಲ್ಲಿ ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ.

ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ.

ಜಾತ್ಯತೀತ[ಬದಲಾಯಿಸಿ]

ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ.

ಪ್ರಜಾಸತ್ತಾತ್ಮಕ[ಬದಲಾಯಿಸಿ]

ಪ್ರಜಾಸತ್ತಾತ್ಮಕವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

ಗಣತಂತ್ರ[ಬದಲಾಯಿಸಿ]

ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದ ಗಣತಂತ್ರದಲ್ಲಿ, ಆ ರಾಜ್ಯದ ಮುಖ್ಯಸ್ತನನ್ನು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಆರಿಸಲಾಗುವುದು. ರಾಷ್ಟ್ರಪತಿಯನ್ನು ೫ ವರ್ಷಗಳ ಒಂದು ನಿರ್ಧಿಷ್ಟ ಅವಧಿಗೆ ಚುನಾಯಿಸಲಾಗುವುದು.[೪] [೫]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "Socialist Polity : Interpreting the Preamble". The Liar (in ಬ್ರಿಟಿಷ್ ಇಂಗ್ಲಿಷ್). 2020-05-23. Retrieved 2020-05-26.
  2. "Democratic Dictates : Interpreting the Preamble". The Liar (in ಬ್ರಿಟಿಷ್ ಇಂಗ್ಲಿಷ್). 2020-05-10. Retrieved 2020-05-26.
  3. "Vox Populi : Interpreting the Preamble". The Liar (in ಬ್ರಿಟಿಷ್ ಇಂಗ್ಲಿಷ್). 2020-04-25. Retrieved 2020-05-26.
  4. Baruah, Aparijita (2007). Preamble of the Constitution of India: An Insight and Comparison with Other Constitutions. New Delhi: Deep & Deep. p. 177. ISBN 978-81-7629-996-1. Retrieved 12 November 2015.
  5. M Laxmikanth (2013). "4". Indian Polity (4th ed.). McGraw Hill Education. p. 4.5. ISBN 978-1-25-906412-8.