ಭಾರತೀಯ ಪನೋರಮಾ

ವಿಕಿಪೀಡಿಯ ಇಂದ
Jump to navigation Jump to search

ಭಾರತದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪರಂಪರೆ ಆರಂಭವಾಗಿದ್ದು 1952ರಲ್ಲಿ. ಬಾಲಿವುಡ್‌ ಕೇಂದ್ರ ಸ್ಥಾನವಾದ ಮುಂಬೈನಲ್ಲಿ ಮೊದಲಿಟ್ಟ ಚಲನಚಿತ್ರೋತ್ಸವ ದೇಶದ ಪ್ರಮುಖ ನಗರಗಳಲ್ಲಿ ಜರುಗುವ ‘ಫಿಲಿಮೋತ್ಸವ’ಗಳಿಂದ ಮುಂದುವರೆಯಿತು. ಅಂತಹ ಫಿಲಿಮೋತ್ಸವ ತಿರುಗಾಟ ಆಗಿನ ಮದ್ರಾಸ್‌ (ಚೆನ್ನೈ)ಗೆ 1978ರಲ್ಲಿ ಬಂದಾಗ ಹುಟ್ಟಿಕೊಂಡಿದ್ದೇ ಭಾರತೀಯ ಪನೋರಮಾ ಚಿತ್ರಪ್ರದರ್ಶನ.

ಸಾಮಾನ್ಯವಾಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಚಲನಚಿತ್ರ ಆಸಕ್ತರಿಗೆ, ಚಿತ್ರೋದ್ಯಮದವರಿಗೆ ಹಾಗೂ ಮಾಧ್ಯಮದವರಿಗೆ ಏರ್ಪಾಟಾಗಿರುತ್ತವೆ. ಚಿತ್ರಾಸಕ್ತ ಸಾರ್ವಜನಿಕರಿಗೂ ಆಯಾ ವರ್ಷದ ಭಾರತದ ಉತ್ತಮ ಚಿತ್ರಗಳನ್ನು ನೋಡುವ ‘ಕಿಟಕಿ’ಯೊಂದು ‘ಪನೋರಮಾ’ ಮೂಲಕ ಮೊದಲಾಯಿತು.

ಆರಂಭದ ವರ್ಷಗಳಲ್ಲಿ ಕನ್ನಡ ಚಲನಚಿತ್ರಗಳಿಗೂ ಭಾರತೀಯ ಪನೋರಮಾಕ್ಕೂ ಬಹು ನಂಟು. 1970ರ ದಶಕದಲ್ಲಿ ಭಾರತೀಯ ಚಿತ್ರ ನಕಾಶೆಯಲ್ಲಿ ಮಿಂಚುವ ಕನ್ನಡ ಚಿತ್ರಗಳು ಸಾಕಷ್ಟಿರುತ್ತಿದ್ದವು.

ಹೀಗಾಗಿ ಸಹಜವಾಗಿ ಭಾರತೀಯ ಪನೋರಮಾಕ್ಕೆ ಆಯ್ಕೆಯಾಗುವ ಕನ್ನಡ ಚಿತ್ರಗಳು ಹೆಚ್ಚಾಗಿರುತ್ತಿದ್ದವು. ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಮೃಣಾಲ್‌ ಸೇನ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯಿಂದ 1978ರ (ಮದ್ರಾಸ್‌) ಭಾರತೀಯ ಪನೋರಮಾ ವಿಭಾಗಕ್ಕೆ ಎಂಟು ಕನ್ನಡ ಚಿತ್ರಗಳು ಆಯ್ಕೆಯಾಗಿದ್ದವು!

ಜಿ.ವಿ. ಅಯ್ಯರ್‌ ಅವರ ‘ಹಂಸಗೀತೆ’, ಪಟ್ಟಾಭಿರಾಮರೆಡ್ಡಿ ಅವರ ‘ಚಂಡ ಮಾರುತ’, ಪಿ. ಲಂಕೇಶ್‌ ಅವರ ‘ಪಲ್ಲವಿ’, ಗಿರೀಶ ಕಾಸರವಳ್ಳಿ ಅವರ ‘ಘಟಶ್ರಾದ್ಧ’, ಶ್ರೀಧರ ಕ್ಷೀರ ಸಾಗರ ಅವರ ‘ಕನಕಾಂಬರ’, ವಿ.ಆರ್‌.ಕೆ. ಪ್ರಸಾದ್‌ ಅವರ ‘ಋಷ್ಯ ಶೃಂಗ’, ಸಿ.ಆರ್‌. ಸಿಂಹ ಅವರ ‘ಕಾಕನ ಕೋಟೆ’, ಬಾಲೂ ಮಹೇಂದ್ರ ಅವರ ‘ಕೋಕಿಲಾ’ ಸಿ. ಚಂದ್ರಶೇಖರ್‌ ಅವರ ‘ಹುಲಿ ಬಂತು ಹುಲಿ’, ಟಿ.ಎಸ್‌. ರಂಗಾ ಅವರ ‘ಗೀಜಗನ ಗೂಡು’ ಇವೇ ಪ್ರಥಮ ಭಾರತೀಯ ಪನೋರಮಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕನ್ನಡ ಚಿತ್ರಗಳು.

ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಚಲನಚಿತ್ರೋತ್ಸವ ನಿರ್ದೇಶನಾಲಯ 1979ರ ನಂತರದ ವರ್ಷಗಳಲ್ಲಿ ಆಯಾ ವರ್ಷದ ಭಾರತೀಯ ಪನೋರಮಾ ವಿಭಾಗಕ್ಕೆ ಆಯಾ ವರ್ಷದ ಚಿತ್ರಗಳಲ್ಲೇ ಆರಿಸಿ ಪ್ರದರ್ಶಿಸುವ ಪರಿಪಾಠ ಶುರು ಮಾಡಿತು. ಅದಕ್ಕೆಂದೇ ಪ್ರತ್ಯೇಕ ಆಯ್ಕೆ ಸಲಹಾ ಸಮಿತಿಯನ್ನು ಗಣ್ಯ ಚಿತ್ರೋದ್ಯಮಿಗಳ ನೇತೃತ್ವದಲ್ಲಿ ರಚಿಸುವ ಕ್ರಮ ಆರಂಭಗೊಂಡಿತು.

ಮೊದಮೊದಲು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಗೊಳ್ಳುವ ಕನ್ನಡ ಚಿತ್ರಗಳು ಬೇರೆ ಪ್ರಾದೇಶಿಕ ಭಾಷಾ ಚಿತ್ರಗಳಿಗಿಂತ ಹೆಚ್ಚೇ ಇರುತ್ತಿದ್ದವು. ಉತ್ತಮ ಗುಣಮಟ್ಟದ ಕನ್ನಡ ಚಿತ್ರಗಳು ಹೆಚ್ಚಾಗಿ ತಯಾರಾಗುತ್ತಿದ್ದ ಕಾಲಘಟ್ಟ ಅದು. ಪ್ರತಿಭಾವಂತರು ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಆ ಸಮಯದಲ್ಲಿ ‘ಒಂದಾನೊಂದು ಕಾಲದಲ್ಲಿ’ (ಗಿರೀಶ ಕಾರ್ನಾಡ), ‘ಚಿತೆಗೂ ಚಿಂತೆ’ (ಎಂ.ಎಸ್‌. ಸತ್ಯು), ‘ಕಾಡು ಕುದುರೆ’ (ಚಂದ್ರಶೇಖರ ಕಂಬಾರ), ‘ಆಕ್ರಮಣ’ (ಗಿರೀಶ್‌ ಕಾಸರವಳ್ಳಿ), ‘ಗ್ರಹಣ’ (ಟಿ.ಎಸ್‌. ನಾಗಾಭರಣ), ‘ಸಾವಿತ್ರಿ’ (ಟಿ.ಎಸ್‌. ರಂಗಾ), ‘ಫಣಿಯಮ್ಮ’ (ಪ್ರೇಮಾ ಕಾರಂತ್‌), ‘ಆಕ್ಸಿಡೆಂಟ್‌’ (ಶಂಕರ್‌ನಾಗ್‌), ‘ಬೆಟ್ಟದ ಹೂವು (ಎನ್‌. ಲಕ್ಷ್ಮೀನಾರಾಯಣ), ‘ಕಾಡಿಗೆ ಹೋದವರು’ (ವೇಮಗಲ್‌ ಜಗನ್ನಾಥ್‌) ‘ಅವಸ್ಥೆ’ (ಕೃಷ್ಣ ಮಾಸಡಿ), ‘ಕುಬಿ ಮತ್ತು ಇಯಾಲ’ (ಸದಾನಂದ ಸುವರ್ಣ), ‘ಪುಷ್ಪಕ ವಿಮಾನ’ (ಸಿಂಗೀತಂ ಶ್ರೀನಿವಾಸರಾವ್‌), ‘ಸಂಗ್ಯಾ ಬಾಳ್ಯಾ’ (ಸುಂದರಕೃಷ್ಣ ಅರಸ್‌), ಮೊದಲಾದ ಚಿತ್ರಗಳು ಪರೋರಮಾಕ್ಕೆ ಆಯ್ಕೆಯಾಗಿದ್ದವು. ಪ್ರತಿವರ್ಷ ಎರಡು ಅಥವಾ ಅದಕ್ಕಿಂತ ಹೆಚ್ಚು ಕನ್ನಡ ಚಿತ್ರಗಳು ಪನೋರಮಾಕ್ಕೆ ಆಯ್ಕೆಯಾಗುವುದು ಸಾಮಾನ್ಯವಾಗಿತ್ತು. ಗುಣಮಟ್ಟದ ದೃಷ್ಟಿಯಿಂದ ಬೇರೆ ಭಾಷಾ ಚಿತ್ರಗಳೊಂದಿಗೆ ಕನ್ನಡ ಚಿತ್ರಗಳು ತೀವ್ರ ಸ್ಪರ್ಧೆ ಒಡ್ಡುತ್ತಿದ್ದವು.

ಸಾಮಾಜಿಕ ಕಾಳಜಿಯ ಹಾಗೂ ರಾಜಕೀಯ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಕನ್ನಡ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುತ್ತಿದ್ದವು. ನಂತರದ ವರ್ಷಗಳಲ್ಲಿ ಪನೋರಮಾ ವಿಭಾಗಕ್ಕೆ ಆಯ್ಕೆಗೊಳ್ಳುವ ಕನ್ನಡ ಚಿತ್ರಗಳು ಇಳಿಮುಖ ಆಗತೊಡಗಿದವು. ಗಿರೀಶ ಕಾಸರವಳ್ಳಿ, ಟಿ.ಎಸ್‌. ನಾಗಾಭರಣ ಅವರಂತಹ ನಿರ್ದೇಶಕರನ್ನು ಪನೋರಮಾ ವೀರರೆಂದು ಕರೆಯುತ್ತಿದ್ದ ಕಾಲವೊಂದಿತ್ತು. ಇವರ ಚಿತ್ರಗಳು ಸಾಮಾನ್ಯವಾಗಿ ಪನೋರಮಾ ಪಟ್ಟಿಯಲ್ಲಿ ಕಾಣಸಿಗುತ್ತಿದ್ದವು. ಇವರ ನಿರ್ದೇಶನದ ನಾಲ್ಕೈದು ಚಿತ್ರಗಳು ಪನೋರಮಾಕ್ಕೆ ಆಯ್ಕೆಯಾದದ್ದೊಂದು ಹೆಗ್ಗಳಿಕೆ.

ಸಾಹಿತ್ಯ ಕೃತಿಗಳು, ನೈಜ ಘಟನೆಗಳು, ಸಮಕಾಲೀನ ಆಗುಹೋಗುಗಳನ್ನು ಆಧರಿಸಿದ ಭಿನ್ನದಾಟಿಯ ಚಿತ್ರಗಳೇ ‘ಪನೋರಮಾ’ ವಿಭಾಗಕ್ಕೆ ಹೆಚ್ಚಾಗಿ ಆಯ್ಕೆ ಗೊಳ್ಳುತ್ತಿದ್ದವು. ಅಂತಹ ಚಿಕ್ಕ ಬಜೆಟ್‌ನ ಹಾಗೂ ಸಾರ್ವಜನಿಕ ಪ್ರದರ್ಶನಗಳಿಗೆ ಕಡಿಮೆ ಅವಕಾಶವಿರುವ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ದೂರದರ್ಶನ ಪ್ರದರ್ಶನ ಸ್ವಾಮ್ಯ ತೆಗೆದುಕೊಳ್ಳುವುದರಲ್ಲಿ ಆದ್ಯತೆ ನೀಡುತ್ತಿತ್ತು.

ಕರ್ನಾಟಕ ಸರ್ಕಾರ ಕೂಡ ‘ಪನೋರಮಾ’ದಲ್ಲಿ ಪ್ರದರ್ಶನಗೊಳ್ಳುವ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಗರಿಷ್ಠ ಸಹಾಯಧನ ನೀಡುವುದಕ್ಕೆ ಕ್ರಮ ಕೈಗೊಂಡಿತು. ಪ್ರಸಾರ ಭಾರತಿ ಸ್ವಾಯತ್ತ ಸಂಸ್ಥೆಯಾದ ನಂತರ ಪನೋರಮಾದಲ್ಲಿ ಪ್ರದರ್ಶನಗೊಂಡ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದೆ. ಕರ್ನಾಟಕ ಸರ್ಕಾರವಂತೂ ಪನೋರಮಾ ಚಿತ್ರಗಳಿಗೆ ಉಳಿದ ಚಿತ್ರಗಳಿಗಿಂತ ಹೆಚ್ಚಿನ ಸಹಾಯಧನವನ್ನು ಈಗಲೂ ನೀಡುತ್ತಿದೆ.

ಕೇಂದ್ರ ಸರ್ಕಾರದ ಚಿತ್ರೋತ್ಸವ ನಿರ್ದೇಶನಾಲಯ ಪ್ರತಿವರ್ಷ ವ್ಯವಸ್ಥೆ ಮಾಡುವ ಅಂತರರಾಷ್ಟ್ರೀಯ ಚಿತ್ರೋತ್ಸವದೊಂದಿಗೆ ‘ಪನೋರಮಾ’ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸುತ್ತಿದೆ. ಹಿಂದೆ ಬೇರೆ ಬೇರೆ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿತ್ತು. ಕಳೆದೊಂದು ದಶಕದಿಂದ ಇದು ‘ಗೋವಾ’ಕ್ಕೆ ಸೀಮಿತವಾಗಿದೆ. ಆರಂಭದಲ್ಲಿ ಎರಡು ಮೂರು ಕನ್ನಡ ಚಿತ್ರಗಳು ಪನೋರಮಾಕ್ಕೆ ಸಲೀಸಾಗಿ ಪ್ರವೇಶ ಪಡೆಯುತ್ತಿದ್ದವು. ಈಗ ಒಂದು ಚಿತ್ರ ಆಯ್ಕೆಯಾಗಲು ಕೂಡ ಏದುಸಿರು ಬಿಡುವಂತಹ ಪರಿಸ್ಥಿತಿ. ಕೆಲವೊಮ್ಮೆ ಒಂದು ಕನ್ನಡ ಚಿತ್ರವೂ ಪನೋರಮಾಕ್ಕೆ ಆಯ್ಕೆಯಾಗಿಲ್ಲ.

ಪನೋರಮಾಕ್ಕೆ ಆಯ್ಕೆಯಾದರೆ, ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಚಿತ್ರಗಳಿಗೆ ಗರಿಷ್ಠ ಸಹಾಯ ಧನ ಸಿಗುವ ಹಿನ್ನೆಲೆಯಲ್ಲಿ ಪೈಪೋಟಿ ಹೆಚ್ಚಾಗಿದ್ದರೂ ಉತ್ತಮ ಗುಣಮಟ್ಟದ ಹಾಗೂ ಒಳ್ಳೆಯ ವಿಷಯಗಳನ್ನು ಒಳಗೊಳ್ಳುವ ಚಿತ್ರಗಳೇ ತಯಾರಾಗುತ್ತಿರುವುದು ಈ ವಿಭಾಗದಲ್ಲಿ ಕನ್ನಡದ ಕೊರತೆಯನ್ನು ಎತ್ತಿ ತೋರಿಸುತ್ತಿದೆ. [೧]

ಭಾರತೀಯ ಪನೋರಮಾದಲ್ಲಿ ಈವರೆಗೂ ಪ್ರದರ್ಶಿತವಾದ ಕನ್ನಡ ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಿತ್ರ(ಗಳು) ನಿರ್ಮಾಣ ನಿರ್ದೇಶನ
1977-78 ಚಂಡಮಾರುತ ಪಟ್ಟಾಭಿರಾಮ ರೆಡ್ಡಿ ಪಟ್ಟಾಭಿರಾಮ ರೆಡ್ಡಿ
ಪಲ್ಲವಿ ಪಿ. ಲಂಕೇಶ್ ಪಿ. ಲಂಕೇಶ್
ಘಟಶ್ರಾದ್ಧ ಸದಾನಂದ ಸುವರ್ಣ ಗಿರೀಶ್ ಕಾಸರವಳ್ಳಿ
ಕನಕಾಂಬರ ಶ್ರೀಧರ್ ಕ್ಷೀರಸಾಗರ
ಕೋಕಿಲ ಬಾಲು ಮಹೇಂದ್ರ
ಕಾಕನ ಕೋಟೆ ಸಿ. ಆರ್. ಸಿಂಹ
ಋಷ್ಯಶೃಂಗ ವಿ. ಆರ್. ಕೆ. ಪ್ರಸಾದ್
ಕುದುರೆ ಮೊಟ್ಟೆ ಜಿ. ವಿ. ಅಯ್ಯರ್
1978-79 ಒಂದಾನೊಂದು ಕಾಲದಲ್ಲಿ  • ಜಿ. ಎನ್. ಲಕ್ಷ್ಮೀಪತಿ
 • ಕೆ. ಎನ್. ನಾರಾಯಣ್
ಗಿರೀಶ್ ಕಾರ್ನಾಡ್
ಚಿತೆಗೂ ಚಿಂತೆ ಎಂ. ಎಸ್. ಸತ್ಯು
ಕಾಡು ಕುದುರೆ ಚಂದ್ರಶೇಖರ ಕಂಬಾರ
1979-80 ಆಕ್ರಮಣ ಗಿರೀಶ್ ಕಾಸರವಳ್ಳಿ
ಗ್ರಹಣ ಟಿ. ಎಸ್. ನಾಗಾಭರಣ
ಸಾವಿತ್ರಿ ಟಿ. ಎಸ್. ರಂಗಾ
1980-81 ಕಾಡಿಗೆ ಹೋದವರು ವೇಮಗಲ್ ಜಗನ್ನಾಥ್
1985 ಆಕ್ಸಿಡೆಂಟ್ ಶಂಕರ್ ನಾಗ್ ಶಂಕರ್ ನಾಗ್
ಬೆಟ್ಟದ ಹೂವು ಪಾರ್ವತಮ್ಮ ರಾಜ್‌ಕುಮಾರ್ ಎನ್. ಲಕ್ಷ್ಮೀನಾರಾಯಣ್
1986 ಮಧ್ವಾಚಾರ್ಯ ಜಿ. ವಿ. ಅಯ್ಯರ್ ಜಿ. ವಿ. ಅಯ್ಯರ್
1988 ಪುಷ್ಪಕ ವಿಮಾನ ಶೃಂಗಾರ್ ನಾಗರಾಜ್ ಸಿಂಗೀತಂ ಶ್ರೀನಿವಾಸರಾವ್
1989 ಕುಬಿ ಮತ್ತು ಇಯಾಲ ಸದಾನಂದ ಸುವರ್ಣ ಸದಾನಂದ ಸುವರ್ಣ
1991 ಮನೆ ಗಿರೀಶ್ ಕಾಸರವಳ್ಳಿ ಗಿರೀಶ್ ಕಾಸರವಳ್ಳಿ