ವಿಷಯಕ್ಕೆ ಹೋಗು

ಭಾರತದ ಗುಹಾ ಶಾಸನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಮೂಲೆಗಳಲ್ಲಿ ಅನೇಕ ಇತಿಹಾಸಪ್ರಸಿದ್ಧವಾದ ಶಾಸನಗಳು ಲಭಿಸಿವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಮೌರ್ಯರ ಶಾಸನಗಳು

[ಬದಲಾಯಿಸಿ]

ಬಿಹಾರ್ ರಾಜ್ಯ ಗಯಾ ಜಿಲ್ಲೆಯ ಬರಾಬರ್ ಬೆಟ್ಟಗಳಲ್ಲಿಯ ಗುಹೆಯೊಂದರಲ್ಲಿ ಮೌರ್ಯ ಅಶೋಕನ 3 ಶಾಸನಗಳಿವೆ.[] ಇವು ಬ್ರಾಹ್ಮಿ ಲಿಪಿಯಲ್ಲಿ ಕೊರೆಯಲ್ಪಟ್ಟು ಪ್ರಾಕೃತ ಭಾಷೆಯಲ್ಲಿವೆ. ಈ ಗುಹೆಗಳನ್ನು ಅಜೀವಕರ ವಾಸಕ್ಕಾಗಿ ಅರಸನಾದ ಪ್ರಿಯದರ್ಶಿ ದಾನ ಮಾಡಿದನೆಂಬುದು ಇವುಗಳಲ್ಲಿ ಉಕ್ತವಾದ ವಿಷಯ.[] ಮೊದಲ 2 ಶಾಸನಗಳು ಅರಸನ ಆಳ್ವಿಕೆಯ 12ನೆಯ ವರ್ಷಕ್ಕೆ ಸೇರಿದವು. ಮೂರನೆಯದು 21ನೆಯ ವರ್ಷದಲ್ಲಿ ಹುಟ್ಟಿತು. ಮೊದಲನೆಯ ಶಾಸನದಲ್ಲಿ ಗುಹೆಯನ್ನು ನ್ಯಗ್ರೋದ ಗುಹೆ ಎಂದು ಕರೆಯಲಾಗಿದೆ. 2 ಮತ್ತು 3ನೆಯ ಶಾಸನಗಳಲ್ಲಿ ಈ ಗುಹೆ ಖಲತಿಕ ಪರ್ವತದಲ್ಲಿತ್ತೆಂದು ಹೇಳಿದೆ.[] ಇದು ಬರಾಬರ್ ಬೆಟ್ಟಗಳಿಗೆ ಅಂದು ಪ್ರಚಲಿತವಿದ್ದ ಹೆಸರು. ಈ ಗುಹೆ ಸುಪ್ರಿಯವಾಗಿತ್ತೆಂದು ಇದನ್ನು ವರ್ಷಕಾಲದಲ್ಲಿ ಅಜೀವಕರ ವಾಸಕ್ಕೆಂದು ದಾನ ಮಾಡಲಾಯಿತೆಂದು 3ನೆಯ ಶಾಸನ ಹೇಳುತ್ತದೆ.

ಇದೇ ಜಿಲ್ಲೆಯ ನಾಗಾರ್ಜುನಿ ಬೆಟ್ಟದ ಗುಹೆಯಲ್ಲಿ ಅಶೋಕನ ಮೊಮ್ಮಗನಾದ ದಶರಥನ ಇಂಥವೇ ಶಾಸನಗಳಿವೆ. ವಹಿಯಕ, ಗೋಪಿಕ ಮತ್ತು ವಡಧಿಕ ಎಂಬ ಮೂರು ಗುಹೆಗಳನ್ನು ದಶರಥ ಪಟ್ಟಾಭಿಷಿಕ್ತನಾದ ವರ್ಷದಲ್ಲಿ ಅಜೀವಕರು ಮಳೆಗಾಲದಲ್ಲಿ ವಾಸಿಸಲು ದಾನ ಮಾಡಿದನೆಂದು ಈ ಶಾಸನಗಳು ತಿಳಿಸಿವೆ.

ಪಭೋಸ ಗುಹಾ ಶಾಸನಗಳು

[ಬದಲಾಯಿಸಿ]

ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯಲ್ಲಿ ಕೌಶಾಂಬಿ ಸಮೀಪದಲ್ಲಿರುವ ಪಭೋಸ ಗುಹೆಯಲ್ಲಿ ಪ್ರಾಕೃತ ಮಿಶ್ರಿತ ಸಂಸ್ಕೃತ ಭಾಷೆಯಲ್ಲಿ ಬ್ರಾಹ್ಮಿ ಲಿಪಿಯ ಎರಡು ಶಾಸನಗಳಿವೆ. ಬಹಸತಿಮಿತನ, ಮಾತುಲನೂ, ವೈದೇಹಿಧರೀಪುತ್ರನೂ ಆದ ಆಷಾಡ ಸೇನ ಈ ಲಯನಗಳನ್ನು ಅಂದರೆ ಗುಹಾವಾಸನಗಳನ್ನು ಅರ್ಹಂತರಿಗಾಗಿ ಮಾಡಿಸಿದನೆಂದು ಗುಹೆಯ ಹೊರಗಿನ ಬಂಡೆಯ ಮೇಲಿನ ಶಾಸನ ತಿಳಿಸುತ್ತದೆ. ಗುಹೆಯ ಒಳಗಿರುವ ಶಾಸನ ಈತನನ್ನು ಆಹಿಚ್ಛತ್ರದ ಅರಸನೆಂದು ಕರೆದಿದೆ. ಮೊದಲ ಶಾಸನ ಉದಕನ ಆಳ್ವಿಕೆಯ 10ನೆಯ ವರ್ಷದ್ದು. ಈ ಅರಸ ಆ ಪ್ರಾಂತ್ಯದ ಅರಸನಾಗಿದ್ದಿರಬಹುದು. ಇವನಾರೆಂಬುದು ಖಚಿತವಾಗಿ ತಿಳಿದಿಲ್ಲ. ಈ ಬಹಸತಿಮಿತನು ಹಾಥಿಗುಂಫಾ ಶಾಸನದಲ್ಲಿ ಹೆಸರಿಸಲಾದ ಅದೇ ಹೆಸರಿನ ಮಗಧ ರಾಜ್ಯದ ಅರಸನು ಒಬ್ಬನೇ ಆಗಿರಬಹುದು. ಈ ಎರಡೂ ಶಾಸನಗಳ ಕಾಲ ಕ್ರಿ.ಪೂ. ಸು. 1ನೆಯ ಶತಮಾನ.

ಮಹಾರಾಷ್ಟ್ರದ ಗುಹಾ ಶಾಸನಗಳು

[ಬದಲಾಯಿಸಿ]

ಕ್ಷಹರಾತವಂಶದ ನಹಪಾಣನ ಶಾಸನಗಳು ಮಹಾರಾಷ್ಟ್ರದಲ್ಲಿ ನಾಸಿಕದ ಗುಹೆಗಳಲ್ಲಿವೆ. ಆತನ ಆಳ್ವಿಕೆಯ 42ನೇ ವರ್ಷದಲ್ಲಿ ಆತನ ಜಾಮಾತ್ರನಾದ ಋಷಭದತ್ತ ಸರ್ವದೇಶೀಯ ಭಿಕ್ಷುಗಳಿಗೆ ವಾಸಕ್ಕಾಗಿ ಈ ಗುಹೆಯನ್ನು ಸಜ್ಜುಗೊಳಿಸಿ, ಅಲ್ಲಿ ಅವರ ಅಶನಾಚ್ಛಾದನಗಳಿಗೂ ತಕ್ಕ ವ್ಯವಸ್ಥೆ ಮಾಡಿದ.[] ಈತ ಫಾರಾದ, ದಮನ, ತಾಟ ಮುಂತಾದ ನದೀತೀರಗಳಲ್ಲಿ ವಿಶ್ರಾಮಾಗಾರಗಳನ್ನು ಪರಿವ್ರಾಜಕರ ವಾಸಕ್ಕಾಗಿ ಕಟ್ಟಿಸಿ ಅವರ ಊಟೋಪಚಾರಗಳಿಗೂ ಸೂಕ್ತವಾದ ಏರ್ಪಾಡನ್ನು ಮಾಡಿದನೆಂದು ಇನ್ನೊಂದು ಶಾಸನದಲ್ಲಿ ಹೇಳಿದೆ.[] ಇಂಥದೇ ಶಾಸನ ಕಾರ್ಲಾದ ಗುಹೆಯಲ್ಲೂ ಉಂಟು. ಪುಣೆ ಜಿಲ್ಲೆಯ ಜುನ್ನಾರ್ ಗುಹೆ ನಹಪಾಣನ ಅಮಾತ್ಯನಾದ ವತ್ಸಗೋತ್ರದ ಆರ್ಯಮನ ಧರ್ಮ. ಈ ಎಲ್ಲ ಶಾಸನಗಳ ಕಾಲ ಕ್ರಿ.ಶ. 2ನೆಯ ಶತಮಾನ. ನಾಸಿಕದ ಗುಹೆಗಳಲ್ಲಿಯೇ ಶಾತವಾಹನರ ಅರಸರಾದ ಕೃಷ್ಣ, ಗೌತಮೀಪುತ್ರ ಶಾತಕರ್ಣಿ ಮತ್ತು ವಾಸಿಷ್ಠೀಪುತ್ರ ಪುಳುಮಾವಿಯರ ಶಾಸನಗಳು ಇವೆ. ಕ್ರಿ.ಪೂ. 1ನೆಯ ಶತಮಾನಕ್ಕೆ ಸೇರಿದ 19ನೆಯ ಗುಹೆಯಲ್ಲಿಯ ಶಾಸನ, ಆ ಲಯನವನ್ನು ಶಾತವಾಹನಕುಲದ ಕೃಷ್ಣ ಆಳುತ್ತಿದ್ದಾಗ ನಾಸಿಕ ನಗರದಲ್ಲಿದ್ದ ಭಿಕ್ಷುಗಳ ವಾಸಕ್ಕಾಗಿ ಮಹಾಮಾತ್ರನೊಬ್ಬ ಮಾಡಿಸಿದನೆಂದು ಹೇಳುತ್ತದೆ.[][]ಮಹಾಮಾತ್ರ ನಾಸಿಕ ನಗರದಲ್ಲಿದ್ದ ಶ್ರಮಣರ ಹಿತಾಹಿತಗಳನ್ನು ನೋಡಿಕೊಳ್ಳುವ ಅಧಿಕಾರಿಯೆಂದು ಕೆಲವರು ಅರ್ಥೈಸಿದ್ದಾರೆ.

ಇಲ್ಲಿಯ ಗುಹೆಗಳಲ್ಲಿ ವಾಸಿಸುವ ಪ್ರವ್ರಾಜಿಕರ ಸೌಕರ್ಯಕ್ಕಾಗಿ ಹಿಂದೆ ತಮ್ಮ ಪೂರ್ವಿಕರು ದತ್ತಿಯಾಗಿ ಬಿಟ್ಟಿದ್ದ ಗ್ರಾಮವನ್ನು ಪುನರ್ದತ್ತಿ ಮಾಡಿ, ಅದರ ಜೊತೆಗೆ ಇನ್ನೂ ಸ್ವಲ್ಪ ಭೂಮಿಯನ್ನು ಸೇರಿಸಿ ದಾನ ಮಾಡಿದ್ದನ್ನು ಗೌತಮೀಪುತ್ರನ ಕ್ರಿ.ಶ. 130ರ ಶಾಸನ ತಿಳಿಸುತ್ತದೆ. ನಾಸಿಕದ 3ನೆಯ ಗುಹೆಯಲ್ಲಿಯ ಶಾಸನ ಕ್ರಿ.ಶ. 149ರಲ್ಲಿ ಹುಟ್ಟಿದ ವಾಸಿಷ್ಠೀಪುತ್ರ ಪುಳುಮಾವಿಯದು. ಈ ಲಯನವನ್ನು ಮಹಾರಾಜನ ಪತ್ನಿಯೂ, ರಾಜನ ಮಾತೆಯೂ ಭದ್ರಾಯಣೀಯ ನಿಕಾಯದ ಭಿಕ್ಷು ಸಂಘಕ್ಕೆ ಬಿಟ್ಟುಕೊಟ್ಟಳು.[] ಮೂರು ವರ್ಷಗಳ ಬಳಿಕ ಇದೇ ಅರಸ ಈ ಗುಹೆಯನ್ನು ಪ್ರತಿಸಂಸ್ಕಾರಗೊಳಿಸಿ ಅದೇ ಭಿಕ್ಷು ಸಂಘಕ್ಕೆ ಬಿಟ್ಟುಕೊಟ್ಟ.

ಇಪ್ಪತ್ತನೆಯ ಗುಹೆಯಲ್ಲಿ ಯಜ್ಞಶಾತಕರ್ಣಿಯ ಕ್ರಿ.ಶ. 181ರ ಶಾಸನವೊಂದಿದೆ. ಕೌಶಿಕಗೋತ್ರದ ಮಹಾಸೇನಾಪತಿ ಭವಗೋಪನ ಪತ್ನಿ ಬಹು ವರ್ಷಗಳಿಂದ ಸಂಪೂರ್ಣಗೊಳಿಸದೆ ಇದ್ದ ಗುಹೆಯನ್ನು ಪರಿಪೂರ್ಣಗೊಳಿಸಿ ಭಿಕ್ಷುಸಂಘದ ವಸತಿಗಾಗಿ ದಾನ ಮಾಡಿದಳೆಂದು ಅದರಲ್ಲಿ ಹೇಳಿದೆ.[][]

ಕಾರ್ಲಾ ಗುಹೆಯಲ್ಲಿಯ ವಾಸಿಷ್ಠೀಪುತ್ರ ಪುಳುಮಾವಿಯ ಕ್ರಿ.ಶ. ಸು. 137ರ ಶಾಸನದಲ್ಲಿ ಆತನ ಅಧೀನಾಧಿಕಾರಿಯಾದ ಮಹಾರಥಿ ಸೋಮದೇವ ತನ್ನ ಅನುಭವಣೆಗೆ ಸೇರಿದ ಗ್ರಾಮಗಳಲ್ಲಿ ಒಂದನ್ನು ಅಲ್ಲಿಯ ಗುಹೆಯಲ್ಲಿ ವಾಸಿಸುತ್ತಿದ್ದ ವಲೂರಕ ಸಂಘಕ್ಕೆ ಸೇರಿದ ಭಿಕ್ಷುಗಳಿಗಾಗಿ ದಾನ ಮಾಡಿದನೆಂದು ಹೇಳಿದೆ.[೧೦][೧೧] ವಲೂರಕ ಎಂಬುದು ಎಲ್ಲೋರದ ಇನ್ನೊಂದು ಹೆಸರೆಂದು ಕೆಲವರು ಭಾವಿಸಿರುವರಾದರೂ ಅದು ಕಾರ್ಲೆಯ ಸುತ್ತಲಿನ ಪ್ರದೇಶಕ್ಕೆ ಅಂದು ಪ್ರಚಲಿತವಿದ್ದ ಹೆಸರೆಂಬ ಊಹೆ ಹೆಚ್ಚು ಸಂಭವವೆನಿಸುತ್ತದೆ. ಇದೇ ಗುಹೆಯಲ್ಲಿಯ ಇದೇ ಅರಸನ, ಕ್ರಿ.ಶ. ಸು. 154ರ ಇನ್ನೊಂದು ಶಾಸನ ಹೊಸದಾಗಿ ಕೊರೆಯಲಾದ ಮಂಟಪವನ್ನು ಮಹಾಸಾಂಘಿಕರಿಗೆ ಬಿಟ್ಟುಕೊಟ್ಟ ವಿಷಯವನ್ನು ತಿಳಿಸುತ್ತದೆ.

ಒರಿಸ್ಸಾ ಮತ್ತು ಮಧ್ಯ ಪ್ರದೇಶದ ಗುಹಾ ಶಾಸನಗಳು

[ಬದಲಾಯಿಸಿ]

ಒರಿಸ್ಸದ ಭುವನೇಶ್ವರದ ಸಮೀಪದ ಉದಯಗಿರಿ ಬೆಟ್ಟಗಳಲ್ಲಿರುವ ಹಾಥಿಗುಂಫಾ ಮತ್ತು ಮಂಚಪುರೀ ಗುಹೆಗಳಲ್ಲಿಯ ಶಾಸನಗಳು ಜೈನ ಸಂನ್ಯಾಸಿಗಳಿಗಾಗಿ ಅಲ್ಲಿ ಅನುಕೂಲಗಳನ್ನು ಕಲ್ಪಿಸಿದ್ದನ್ನು ತಿಳಿಸುತ್ತದೆ. ಮಧ್ಯ ಪ್ರದೇಶದ ವಿದಿಶಾ ನಗರದ ಸಮೀಪದಲ್ಲಿ ಉದಯಗಿರಿ ಬೆಟ್ಟಗಳಲ್ಲಿಯ ಗುಹೆಯೊಂದರಲ್ಲಿ ಗುಪ್ತವಂಶದ ಇಮ್ಮಡಿ ಚಂದ್ರಗುಪ್ತನ ಎರಡು ಶಾಸನಗಳುಂಟು. ಮೊದಲನೆಯದು ಕ್ರಿ.ಶ. 401ರದು.[೧೨] ಸಂಸ್ಕೃತ ಭಾಷೆಯ ಈ ಶಾಸನ ಬಹುಶಃ ಆ ಗುಹೆಯನ್ನು ಚಂದ್ರಗುಪ್ತನ ಮಾಂಡಲಿಕನಾದ ಸನಕಾನೀಕ ಮಹಾರಾಜ ಮಾಡಿಸಿದುದಾಗಿ ತಿಳಿಸುತ್ತದೆ. ಇನ್ನೊಂದು ಶಾಸನದಲ್ಲಿ ಆ ಗುಹೆಯನ್ನು ಶಂಭುವಿನ ಗುಹೆ ಎಂದು ಕರೆಯಲಾಗಿದೆ.[೧೩]

ತಮಿಳುನಾಡಿನ ಗುಹಾ ಶಾಸನಗಳು

[ಬದಲಾಯಿಸಿ]

ತಮಿಳುನಾಡಿನಲ್ಲೂ ಇಂಥ ಪ್ರಾಚೀನ ಗುಹೆಗಳೂ ಗವಿಗಳೂ ಕಂಡುಬಂದಿವೆ. ಇವುಗಳಲ್ಲಿ ತಪಸ್ವಿಗಳು ಮಲಗಲು ಅನುಕೂಲವಾಗುವಂತೆ ಕಲ್ಲುಮಂಚಗಳನ್ನು ಕೊರೆಯಲಾಗಿದೆ. ಕೆಲವು ಗುಹೆಗಳ ಬಳಿ ಬ್ರಾಹ್ಮೀ ಶಾಸನಗಳುಂಟು. ತಮಿಳು ನಾಡಿನ ಅತ್ಯಂತ ಪ್ರಾಚೀನ ಶಾಸನಗಳು ಇವು. ಆದರೆ ಇವುಗಳ ಭಾಷೆ, ಅರ್ಥ ಮುಂತಾದವನ್ನು ಕುರತು ವಿವಾದಗಳುಂಟು. ಇವು ಬೌದ್ಧ ಭಿಕ್ಷುಗಳಿಗೆ ಸಂಬಂಧಿಸಿದವೆಂದು ಹಲವರೂ, ಜೈನರಿಗೆ ಸಂಬಂಧಿಸಿದವೆಂದು ಇತರರೂ ವಾದಿಸಿದ್ದಾರೆ. ಆದರೆ ಇವುಗಳ ಸಮೀಪದಲ್ಲಿ ಅಲ್ಲಲ್ಲಿ ಕೊರೆಯಲಾದ ತೀರ್ಥಂಕರರಂಥ ಮೂರ್ತಿಗಳನ್ನು ಗಮನಿಸಿದರೆ ಇವು ಜೈನರ ಗುಹೆಗಳಾಗಿದ್ದಿರಬಹುದೆನಿಸುತ್ತದೆ. ಮಧುರೈ ಜಿಲ್ಲೆಯ ಅನೈಮಲೈ, ತಿರುಪ್ಪರುಕ್ಕುನ್ರಮ್, ಅಳಗರ್‌ಮಲೈ, ವರಿಚ್ಚಿಯಾರ್, ಕೊಂಗರ್ಪ್ಪುಳಿಯಂಗುಳಂ, ಸಿದ್ದರ್‌ಮಲೈ, ತಿರುನೆಲ್ವೇಲಿ ಜಿಲ್ಲೆಯ ಮರುಗಾಲ್ತಲೈ, ಕಬುಗುಮಲೈ, ವೀರಶೀಖಾಮಣಿ, ಪುದುಕೋಟೆ ಸಮೀಪದ ಶಿತ್ತನ್ನವಾಶಲ್, ನಾರ್ತಾಮಲೈ ಈ ಸ್ಥಳಗಳಲ್ಲಿ ಇಂಥ ಗುಹೆಗಳೂ ಗುಹಾಶಾಸನಗಳೂ ಕಂಡುಬಂದಿವೆ.

ಇಂಥ ಗುಹೆಗಳು ಸಾಮಾನ್ಯವಾಗಿ ಧಾರ್ಮಿಕ ಸಂಬಂಧಗಳನ್ನು ಹೊಂದಿದ್ದು, ಸಂಸಾರವನ್ನು ತ್ಯಜಿಸಿದ ಭಿಕ್ಷುಗಳ, ಸಂನ್ಯಾಸಿಗಳ ಆವಾಸಸ್ಥಾನಗಳಾಗಿದ್ದುವೆಂಬುದು ಶಾಸನಗಳಿಂದಲೂ ಖಚಿತವಾಗುತ್ತದೆ ಎನ್ನಬಹುದು. ಅಲ್ಲದೆ ಇವು ಹೆಚ್ಚಾಗಿ ಬೌದ್ಧ ಅಥವಾ ಜೈನ ಧರ್ಮಗಳಿಗೆ ಸಂಬಂಧಿಸಿದವು. ಮೇಲೆ ಹೇಳಿದ ಶಂಭುವಿನ ಗುಹೆಯಂಥ ಕೆಲವು ಗುಹೆಗಳು ಮಾತ್ರ ಈ ಸಾಮಾನ್ಯ ನಿಯಮಕ್ಕೆ ಹೊರತಾಗಿವೆಯೆನ್ನಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Sir Alexander Cunningham (1871). Four Reports Made During the Years, 1862-63-64-65. Government Central Press. pp. 43–52.
  2. Le, Huu Phuoc (2010). Buddhist Architecture (in ಇಂಗ್ಲಿಷ್). Grafikol. p. 104. ISBN 9780984404308.
  3. Le, Huu Phuoc (2010). Buddhist Architecture (in ಇಂಗ್ಲಿಷ್). Grafikol. p. 102. ISBN 9780984404308.
  4. Senart 1906, p. 82-83.
  5. Andrew Ollett 2017, p. 39.
  6. D. S. Naidu (1970). Andhra Satavahanas: Origins, Chronology, and History of the Early Rulers of the Dynasty. Bharath. p. 80.
  7. ೭.೦ ೭.೧ Epigraphia Indica p.93 Inscription No.22
  8. Epigraphia Indica p.60ff
  9. Burgess, Jas (1883). Archaeological Survey Of Western India. p. 114.
  10. Royal patronage of Buddhism in ancient India, by Kanai Lal Hazra - 1984 - Page 176
  11. Senart, E. EPIGRAPHIA INDICA VOL 7 (in ಪೋರ್ಚುಗೀಸ್). MANAGER OF PUBLICATIONS, DELHI. pp. 61–62.
  12. Sara L. Schastok (1985). The Śāmalājī Sculptures and 6th Century Art in Western India. BRILL Academic. pp. 36–37. ISBN 90-04-06941-0.
  13. Cunningham 1880, pp. 51–52.


ಗ್ರಂಥಸೂಚಿ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: