ಬ್ಲಾಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ಲಾಗ್ (ವೆಬ್ಲಾಗ್ ಎಂಬುದರ ಹ್ರಸ್ವ ರೂಪ)[೧]ಅಂತರ್ಜಾಲದ ಒಂದು ವಿಧವಾಗಿದ್ದು, ಸಾಮಾನ್ಯವಾಗಿ ಪ್ರತ್ಯೇಕ ಖಾಸಗಿ ವ್ಯಕ್ತಿಗಳಿಂದ ನಿರ್ವಹಿಸಲ್ಪಡುವ ತಾಣವಾಗಿರುತ್ತದೆ. ಇದರಲ್ಲಿ ಪ್ರತಿಕ್ರಿಯಾತ್ಮಕ ಲೇಖನಗಳು, ಕಾರ್ಯಕ್ರಮಗಳ ವಿವರಣೆ, ಗ್ರಾಫಿಕ್ಸ್, ವಿಡಿಯೋ ಮೊದಲಾದವುಗಳನ್ನು ನಿರಂತರವಾಗಿ ದಾಖಲಿಸಲಾಗುತ್ತದೆ. ಹೀಗೆ ದಾಖಲಿಸಲಾಗುವ ಲೇಖನಗಳು ಸಾಮಾನ್ಯವಾಗಿ ಹಿಮ್ಮುಖ ಕ್ರಮಾಂಕದಲ್ಲಿ ಪ್ರದರ್ಶನಗೊಳ್ಳುತ್ತವೆ. “ಬ್ಲಾಗ್" ಎಂಬ ಪದವನ್ನು ಕ್ರಿಯಾಪದವಾಗಿ ಬಳಸುವುದು ಕೂಡ ಈಗ ಚಾಲ್ತಿಯಲ್ಲಿದ್ದು, ಬ್ಲಾಗ್ ಗೆ ಲೇಖನವನ್ನು ಸೇರಿಸುವುದು ಅಥವಾ ನಿರ್ವಹಿಸುವುದು ಎಂಬ ಅರ್ಥವನ್ನು ಅದು ನೀಡುತ್ತದೆ.

ಬಹುತೇಕ ಬ್ಲಾಗ್‌ಗಳು ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ವ್ಯಾಖ್ಯಾನ ಅಥವಾ ಮಾಹಿತಿ ನೀಡುವವಾಗಿದ್ದರೆ, ಮತ್ತೆ ಕೆಲವು ಖಾಸಗಿ ಸಂಗತಿಗಳನ್ನು ಹಂಚಿಕೊಳ್ಳಲು ತೆರೆಯಲ್ಪಟ್ಟವಾಗಿದ್ದು, ಜಾಲತಾಣದ ದಿನಚರಿಗಳಂತೆ ಇರುತ್ತವೆ.ಒಂದು ಪರಿಪೂರ್ಣ ಬ್ಲಾಗ್‌ನಲ್ಲಿ ಪಠ್ಯ, ಚಿತ್ರಗಳು ಹಾಗೂ ತನ್ನ ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಇತರ ಬ್ಲಾಗ್‌ಗಳ, ಜಾಲಪುಟಗಳ ಮತ್ತು ಮಾಧ್ಯಮಗಳ ಸಂಪರ್ಕ ಕೊಂಡಿಗಳು ಸಂಯೋಜನೆಗೊಂಡಿರುತ್ತವೆ.ಓದುಗರೊಂದಿಗೆ ಚರ್ಚೆ ಸಾಧ್ಯವಾಗುವಂತೆ ರೂಪಿಸಲ್ಪಟ್ಟ ಪ್ರತಿಕ್ರಿಯಿಸುವ ಅವಕಾಶವನ್ನು ಕಮೆಂಟ್ ಬಾಕ್ಸ್ ಮೂಲಕ ಕಲ್ಪಿಸಲಾಗಿದ್ದು, ಬಹುತೇಕ ಬ್ಲಾಗ್‌ಗಳಿಗೆ ಇದು ಅತಿ ಪ್ರಮುಖ ಅಂಗವಾಗಿರುತ್ತದೆ. ಬಹುತೇಕ ಬ್ಲಾಗ್‌ಗಳು ಲೇಖನಗಳಿಗೆ ಸೀಮಿತವಾಗಿದ್ದರೂ ಕಲೆಗೆ ತೆರೆದುಕೊಂಡ ಆರ್ಟ್‌ಲಾಗ್, ಛಾಯಾಚಿತ್ರಗಳನ್ನು ಮುಖ್ಯ ವಸ್ತುವಾಗುಳ್ಳ ಫೋಟೋಬ್ಲಾಗ್, ರೇಖಾಚಿತ್ರಗಳ ಸ್ಕೆಚ್‌ಬ್ಲಾಗ್, ವಿಡಿಯೋಗಳನ್ನು ಪ್ರದರ್ಶಿಸುವ ವ್ಲಾಗ್ ಅಥವಾ ವಿಲಾಗ್, ಸಂಗೀತದ MP3 ಬ್ಲಾಗ್, ಮತ್ತು ವಿವಿಧ ಧ್ವನಿ ಮುದ್ರಣಗಳ ಪೋಡ್ ಕ್ಯಾಸ್ಟ್ ಎಂಬ ವಿಧಗಳೂ ಬ್ಲಾಗ್ ವ್ಯಾಪ್ತಿಯಲ್ಲಿವೆ.ಮೈಕ್ರೋಬ್ಲಾಗಿಂಗ್, ಬ್ಲಾಗಿಂಗ್ ನ ಮತ್ತೊಂದು ವಿಧವಾಗಿದ್ದು, ಅತಿ ಚಿಕ್ಕ ಲೇಖನ(ಪೋಸ್ಟ್)ಗಳಿಂದ ಕೂಡಿರುತ್ತದೆ.

ಡಿಸೆಂಬರ್ 2007ರಂತೆ ಬ್ಲಾಗ್ ಸರ್ಚ್ ಎಂಜಿನ್ Technorati 112 ಮಿಲಿಯನ್‌ಗೂ ಹೆಚ್ಚು ಬ್ಲಾಗ್‌‍ಗಳನ್ನು ಪತ್ತೆ ಮಾಡಿದೆ.[೨]

ವಿಧಗಳು[ಬದಲಾಯಿಸಿ]

ಬ್ಲಾಗ್‌ಗಳಲ್ಲಿ ಹಲವು ವಿಧಗಳಿದ್ದು, ಈ ವೈವಿಧ್ಯವು ಕೇವಲ ವಸ್ತುವಿಷಯಗಳ ಮೇಲೆ ನಿರ್ಧರಿತವಾಗಿರದೆ, ಅದರ ನಿರೂಪಣಾ ಶೈಲಿ ಅಥವಾ ಬರಹ ವಿಧಾನದ ಮೇಲೆಯೂ ಅವಲಂಬಿತವಾಗಿರುತ್ತದೆ.

ಖಾಸಗಿ ಬ್ಲಾಗ್‌ಗಳು
ಖಾಸಗಿ ಬ್ಲಾಗ್‌ಗಳು ಹೆಸರೇ ಸೂಚಿಸುವಂತೆ ಆಯಾ ವ್ಯಕ್ತಿಗಳ ಸ್ವಂತದ ಅಭಿಪ್ರಾಯಗಳಿಂದ ಕೂಡಿದ್ದು, ಖಾಸಗಿ ದಿನಚರಿಯಂತಿರುತ್ತವೆ. ಇದು ಅತಿ ಸಾಮಾನ್ಯವಾದ ಬ್ಲಾಗ್ ಬಗೆ. ಸಾಮಾನ್ಯವಾಗಿ ಖಾಸಗಿ ಬ್ಲಾಗಿಗರು ತಮ್ಮ ಬ್ಲಾಗ್‌ಗಳಲ್ಲಿ, ತಾವಲ್ಲದೆ ಇತರ ಓದುಗರು ಇರದ ಹೊರತಾಗಿಯೂ ತಮ್ಮನ್ನೇ ಕೇಂದ್ರವಾಗಿರಿಸಿಕೊಂಡ ಲೇಖನಗಳನ್ನು ಹಾಕುತ್ತಾರೆ.ಬಹಳ ಬಾರಿ ಬ್ಲಾಗ್‌ಗಳು ಕೇವಲ ಸಂವಹನ ಮಾಧ್ಯಮಕ್ಕಿಂತ ಹೆಚ್ಚಾಗಿ ಬದುಕನ್ನು ಅಥವಾ ಕಲೆಯನ್ನು ಪ್ರತಿಬಿಂಬಿಸುವ ಕೈಗನ್ನಡಿಯಾಗಿ ವರ್ತಿಸುತ್ತವೆ.ಬ್ಲಾಗಿಸುವಿಕೆಯು ಭಾವನಾತ್ಮಕ ಗುಣವನ್ನು ಕೂಡ ಹೊಂದಿರಬಹುದು.ಕೆಲವು ಖಾಸಗಿ ಬ್ಲಾಗ್‌ಗಳು ಪ್ರಖ್ಯಾತಿ ಪಡೆದು ಮುಖ್ಯವಾಹಿನಿಗೆ ತೆರೆದುಕೊಂಡರೆ, ಮತ್ತೆ ಕೆಲವು ಖಾಸಗಿ ಬ್ಲಾಗ್‌ಗಳು ವ್ಯಾಪಕ ಓದುಗ ವರ್ಗವನ್ನು ಶೀಘ್ರವಾಗಿ ಗಳಿಸಿಕೊಂಡಿರುತ್ತವೆ.ಮೈಕ್ರೋಬ್ಲಾಗಿಂಗ್ ಎಂಬ ಖಾಸಗಿ ಬ್ಲಾಗ್ ವಿಧಾನವು ಅತ್ಯಂತ ಸಂಕ್ಷಿಪ್ತವಾಗಿದ್ದು, ಕಾಲದಲ್ಲಿ ಒಂದು ಕ್ಷಣವನ್ನು ಹಿಡಿದಿಡುವಂತಿರುತ್ತದೆ. Twitter ನಂತಹ ಜಾಲತಾಣಗಳು, ಬ್ಲಾಗಿಗರು ತಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದೊಂದಿಗೆ ಆಲೋಚನೆಗಳನ್ನು ಹಾಗೂ ಭಾವನೆಗಳನ್ನು ಇಮೇಲ್ ಅಥವಾ ಬರಹಕ್ಕಿಂತಲೂ ಅತ್ಯಂತ ಶೀಘ್ರವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿವೆ.
ಸಾಂಸ್ಥಿಕ ಬ್ಲಾಗ್‌ಗಳು
ಇದು ಖಾಸಗಿಯಾಗಿರಬಹುದಾದ, ಬಹುತೇಕ ವ್ಯಾವಹಾರಿಕ ಉದ್ದೇಶಕ್ಕೆ ಬಳಸಲ್ಪಡುವ ಬ್ಲಾಗ್.ಸಂಸ್ಥೆಯ ಒಳಗಿನ ಸಂವಹನ ಹಾಗೂ ಸಂಸ್ಕೃತಿ ವರ್ಧನೆಗೆ ಅಥವಾ ಸಂಸ್ಥೆಯ ಹೊರಗೆ ಮಾರುಕಟ್ಟೆ, ಉದ್ಯಮದ ಛಾಪು ಮೂಡಿಸಲು ಅಥವಾ ಸಾರ್ವಜನಿಕ ಸಂಪರ್ಕವೃದ್ಧಿಯ ಉದ್ದೇಶಗಳಿಗಾಗಿ ಬಳಸಲ್ಪಡುವ ಬ್ಲಾಗ್‌ಗಳನ್ನು ಸಾಂಸ್ಥಿಕ ಬ್ಲಾಗ್ ಗಳೆಂದು ಕರೆಯಲಾಗುತ್ತದೆ.
ವಿಷಯಾಧಾರಿತ
ಕೆಲವು ಬ್ಲಾಗ್‌ಗಳು ನಿರ್ದಿಷ್ಟ ವಿಷಯದ ಮೇಲೆ ಕೇಂದ್ರೀಕೃತವಾಗಿರುತ್ತವೆ. ಉದಾಹರಣೆಗೆ- ರಾಜಕೀಯದ ಬ್ಲಾಗ್, ಪ್ರವಾಸೀ ಬ್ಲಾಗ್,[೩] ಗೃಹೋಪಯೋಗಿ ಬ್ಲಾಗ್,[೪] ಫ್ಯಾಶನ್ ಬ್ಲಾಗ್, ಯೋಜನಾ ಬ್ಲಾಗ್, ಶೈಕ್ಷಣಿಕ ಬ್ಲಾಗ್, ನಿರ್ದಿಷ್ಟವ್ಯಾಪಾರದ ಬ್ಲಾಗ್(ನೀಚ್ ಬ್ಲಾಗ್), ಶಾಸ್ತ್ರೀಯ ಸಂಗೀತದ ಬ್ಲಾಗ್, ರಸಪ್ರಶ್ನೆಗಳ ಬ್ಲಾಗ್, ಕಾನೂನು ಬ್ಲಾಗ್ (ಸಾಮಾನ್ಯವಾಗಿ blawgs ಎಂದು ಕರೆಯಲ್ಪಡುತ್ತವೆ) ಮತ್ತು ಡ್ರೀಮ್‌ಲಾಗ್‌ಗಳು. ವಿಷಯಾಧಾರಿತ ಬ್ಲಾಗ್‌ಗಳ ಎರಡು ಸಾಮಾನ್ಯ ವಿಧಗಳೆಂದರೆ ಕಲಾ ಬ್ಲಾಗ್ ಹಾಗೂ ಸಂಗೀತ ಬ್ಲಾಗ್‌ಗಳು ವಿಶೇಷತಃ ಮನೆ, ಕುಟುಂಬ ಇವುಗಳ ವಿಷಯಗಳನ್ನೊಳಗೊಂಡ ಬ್ಲಾಗ್‌ಗಳನ್ನು ಅಸಮಾನ್ಯವೇನೂ ಅಲ್ಲದ ರೀತಿಯಲ್ಲಿ ಮಾಮ್ ಬ್ಲಾಗ್ ಎಂದು ಕರೆಯಲಾಗುತ್ತದೆ.[೫][೬][೭][೮][೯] ನ್ಯಾಯಬದ್ಧವಲ್ಲದ, ಹಾದಿ ತಪ್ಪಿಸುವ ಬರಹಗಳನ್ನೇ ಏಕೈಕ ಉದ್ದೇಶವಾಗಿರಿಸಿಕೊಂಡ ಬ್ಲಾಗ್‌ಗಳನ್ನು ಸ್ಪ್ಲಾಗ್ (Splog) ಎಂದು ಕರೆಯಲಾಗುತ್ತದೆ.
ಮಾಧ್ಯಮ ಆಧಾರಿತ
ವಿಡಿಯೋಗಳನ್ನು ಪ್ರದರ್ಶಿಸುವ ಬ್ಲಾಗ್‌ಗಳನ್ನು ವ್ಲಾಗ್(vlog)ಗಳೆಂದೂ, ಇತರ ತಾಣಗಳಿಗೆ ಸಂಪರ್ಕ ಕೊಂಡಿ ಕಲ್ಪಿಸಿಕೊಡುವಂತಹವುಗಳನ್ನು ಲಿಂಕ್‌ಲಾಗ್‌(linklog)ಗಳೆಂದೂ ಚಿತ್ರಸಂಪುಟಗಳನ್ನು ಸ್ಕೆಚ್ ಬ್ಲಾಗ್‌ಗಳೆಂದೂ ಛಾಯಾಚಿತ್ರಗಳನ್ನೊಳಗೊಂಡ ಬ್ಲಾಗ್‌ಗಳನ್ನು ಫೋಟೋ ಬ್ಲಾಗ್‌ಗಳೆಂದೂ ಕರೆಯಲಾಗುತ್ತದೆ.[೧೦] ಕಿರುಲೇಖನಗಳು ಹಾಗೂ ಮಿಶ್ರ ಮಾಧ್ಯಮಗಳಿಂದ ಕೂಡಿದ ಬ್ಲಾಗ್ ಗಳನ್ನು ಟಂಬಲ್ ಲಾಗ್ ಗಳೆಂದು ಕರೆಯಲಾಗುತ್ತದೆ. ಬೆರಳಚ್ಚು ಯಂತ್ರದ ಮೂಲಕ ಸಿದ್ಧಪಡಿಸಿದ ಬರಹವನ್ನು ಸ್ಕ್ಯಾನ್ ಮಾಡಿ ರೂಪಿಸುವ ಬ್ಲಾಗ್‌ಗಳನ್ನು ಟೈಪ್ ಕ್ಯಾಸ್ಟ್ ಅಥವಾ ಟೈಪ್ ಕ್ಯಾಸ್ಟ್ ಬ್ಲಾಗ್‌ಗಳೆಂದು ಕರೆಯಲಾಗುತ್ತದೆ; ನೋಡಿ ಟೈಪ್ ಕ್ಯಾಸ್ಟಿಂಗ್ (ಬ್ಲಾಗಿಂಗ್).
ಗೋಫರ್ ಪ್ರೋಟೊಕಾಲ್ ಮೂಲಕ ನಿರ್ವಹಿಸಲ್ಪಡುವ ಅಪರೂಪದ ಬಗೆಯ ಬ್ಲಾಗ್‌ ಅನ್ನು ಫ್ಲಾಗ್ ಎಂದು ಕರೆಯಲಾಗುತ್ತದೆ.
ಸಾಧನೆ ಆಧಾರಿತ
ಅಕ್ಷರ ಸಂಯೋಜನೆಗೆ ಬಳಸಲಾಗುವ ಸಲಕರಣೆಯ ಆಧಾರದ ಮೇಲೆ ಕೂಡ ಬ್ಲಾಗ್ ವಿಧಾನವನ್ನು ಪ್ರತ್ಯೇಕವಾಗಿ ಗುರುತಿಸಬಹುದು. ಸಂಚಾರಿ ಸಾಧನವಾದ ಮೊಬೈಲ್ ಫೋನ್ ಅಥವಾ PDA ಯಲ್ಲಿ ಅಕ್ಷರ ಸಂಯೋಜನೆ ಮಾಡಿ ರೂಪಿಸುವ ಬ್ಲಾಗ್ ವಿಧಾನವನ್ನು ಮೊಬ್ಲಾಗ್ ಎನ್ನಲಾಗುತ್ತದೆ.[೧೧] ಆರಂಭಿಕ ದಿನಗಳ ಒಂದು ಬ್ಲಾಗ್ ವಿಧ ವೇರೆಬಲ್ ವೈರ್ ಲೆಸ್ ವೆಬ್ ಕ್ಯಾಮ್, ವ್ಯಕ್ತಿಯೊಬ್ಬನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿವರಗಳಿಂದ ಕೂಡಿದ ಆನ್ ಲೈನ್ ದಿನಚರಿಯಂತಿದ್ದು, ಪಠ್ಯ, ವಿಡಿಯೋ ದೃಶ್ಯಗಳು ಹಾಗೂ ನೇರವಾಗಿ ವೇರೆಬಲ್ ಕಂಪ್ಯೂಟರ್ ಹಾಗೂ EyeTap ಸಾಧನಗಳಿಂದ ಜಾಲತಾಣಕ್ಕೆ ವರ್ಗಾಯಿಸಲ್ಪಟ್ಟ ಚಿತ್ರಗಳ ಸಂಯೋಜನೆಯಾಗಿತ್ತು.

ನೇರ ವಿಡಿಯೋ ಹಾಗೂ ಪಠ್ಯಗಳ ಸಂಯೋಜನೆಯ ಸೆಮಿ ಆಟೊಮೋಟೆಡ್ ಬ್ಲಾಗಿಂಗ್‌ನ ಈ ರೂಢಿಯು ಸೌಸ್‌ವಿಲ್ಲೆನ್ಸ್ (sousveillance) ಎಂದು ಗುರುತಿಸಲ್ಪಡುತ್ತಿತ್ತು. ಇಂತಹ ದಾಖಲೆಗಳು ಸಾಮಾನ್ಯವಾಗಿ ಕಾನೂನು ಪ್ರಕ್ರಿಯೆಗಳಲ್ಲಿ ಸಾಕ್ಷಿಗಳಾಗಿ ಬಳಸಲ್ಪಡುತ್ತಿದ್ದವು.[ಸಾಕ್ಷ್ಯಾಧಾರ ಬೇಕಾಗಿದೆ]

ಸಮುದಾಯ ಮತ್ತು ಸೂಚಿ ತಯಾರಿಕೆ[ಬದಲಾಯಿಸಿ]

ಬ್ಲಾಗೋಸ್ಪಿಯರ್
ಎಲ್ಲ ಬ್ಲಾಗ್‌ಗಳ ಒಟ್ಟು ಸಮುದಾಯವನ್ನು ಬ್ಲಾಗೋಸ್ಪಿಯರ್ ಎನ್ನಲಾಗುತ್ತದೆ.

ಅಂತರ್ಜಾಲದ ಎಲ್ಲ ಬ್ಲಾಗ್‌ಗಳೂ ಪರಸ್ಪರ ಸಂಪರ್ಕ ಹೊಂದಿದ್ದು ಸಾಮಾನ್ಯವಾಗಿ ಬ್ಲಾಗ್ ರೋಲ್, ಪ್ರತಿಕ್ರಿಯೆಗಳು, ಲಿಂಕ್ ಬ್ಯಾಕ್‌ಗಳು (ರೆಫ್ ಬ್ಯಾಕ್ಸ್, ಟ್ರ್ಯಾಕ್ ಬ್ಯಾಕ್ಸ್ ಅಥವಾ ಪಿಂಗ್ ಬ್ಯಾಕ್ಸ್), ಮತ್ತು ಬ್ಯಾಕ್ ಲಿಂಕ್ ಗಳ ಮೂಲಕ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ವಿವಿಧ ಸಂಗತಿಗಳ ಕುರಿತು ಜನಾಭಿಪ್ರಾಯವನ್ನು ಅಳೆಯಲು ಸಂವಹನ ಮಾಧ್ಯಮವು ಬ್ಲಾಗೋ‌ಸ್ಪಿಯರ್ ನಲ್ಲಿ ನಡೆಯುವ ಚರ್ಚೆಗಳನ್ನು ಮಾಪಕವಾಗಿ ಬಳಸುತ್ತದೆ.

ಸರ್ಚ್ ಎಂಜಿನ್ನುಗಳ ಪಟ್ಟಿ- ಬ್ಲಾಗ್ ಸರ್ಚ್ ಎಂಜಿನ್ನುಗಳು
ಬ್ಲಾಗ್ ವಸ್ತುವಿಷಯಗಳನ್ನು ಪತ್ತೆ ಮಾಡಲು ಹಲವಾರು ಬ್ಲಾಗ್ ಸರ್ಚ್ ಎಂಜಿನ್ನುಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ Bloglines, BlogScope, Technorati ಮೊದಲಾದವು.

ಇವುಗಳಲ್ಲಿ Technorati ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್ ಆಗಿದ್ದು, ಜನಪ್ರಿಯ ವಿಷಯಗಳು ಹಾಗೂ [೧೨] ಬ್ಲಾಗ್ ಲೇಖನಗಳನ್ನು ವಿಭಾಗೀಕರಿಸಲು ಬಳಸುವ ಜನಪ್ರಿಯ ಟ್ಯಾಗ್‌ಗಳ ಪ್ರಚಲಿತ ಮಾಹಿತಿಯನ್ನು ಕೂಡ ನೀಡುತ್ತದೆ. ಸರಳವಾದ ಸಂಕ್ಷಿಪ್ತ ಪದಗಳ ಮೂಲಕ ಅಪೇಕ್ಷಿತ ವಿಷಯದ ಲೇಖನಗಳ ಅರಸುವಿಕೆ ಸುಗಮವಾಗಿಸಲು ಸಂಶೋಧಕ ಸಮುದಾಯವು ಕಾರ್ಯನಿರ್ವಹಿಸುತಿದ್ದು, ಬ್ಲಾಗೋಸ್ಪಿಯರ್ ನಲ್ಲಿ ಅಡಕವಾಗಿರುವ ಅಗಾಧ ಮಾಹಿತಿಗಳ ರಾಶಿಯಿಂದ ಅದನ್ನು ಹೆಕ್ಕಿ ತೆಗೆಯಲು BlogScope ನಂತಹ ಪ್ರಯೋಗಾತ್ಮಕ ಯೋಜನೆಗಳನ್ನು ಹಾಗೂ ಹೊಸ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುತ್ತದೆ.[[[Wikipedia:[ಸಾಕ್ಷ್ಯಾಧಾರ ಬೇಕಾಗಿದೆ]|<span title="Wikipedia:[ಸಾಕ್ಷ್ಯಾಧಾರ ಬೇಕಾಗಿದೆ] ">[ಸಾಕ್ಷ್ಯಾಧಾರ ಬೇಕಾಗಿದೆ]]]]

ಬ್ಲಾಗಿಂಗ್ ಸಮುದಾಯಗಳು ಹಾಗೂ ಕೈಪಿಡಿಗಳು
ಜನರನ್ನು ಬ್ಲಾಗ್ ಗಳೊಂದಿಗೆ ಬೆಸೆಯುವ ಹಾಗೂ ಬ್ಲಾಗರ್ ಗಳನ್ನು ಪರಸ್ಪರ ಸಂಪರ್ಕದಲ್ಲಿರಿಸುವ ಹಲವಾರು ಆನ್ ಲೈನ್ ಸಮುದಾಯಗಳಿದ್ದು, BlogCatalog ಮತ್ತು MyBlogLog ಗಳು ಕೂಡ ಇದರಲ್ಲಿ ಸೇರಿವೆ.[೧೩]
ಬ್ಲಾಗಿಂಗ್ ಮತ್ತು ಜಾಹೀರಾತು

ಆರ್ಥಿಕ ಲಾಭಕ್ಕಾಗಿ ಇಲ್ಲವೇ ಬ್ಲಾಗರ್ ಗಳ ನೆಚ್ಚಿನ ವಸ್ತು ಅಥವಾ ವಿಷಯವನ್ನು ಜನಪ್ರಿಯಗೊಳಿಸಲಿಕ್ಕಾಗಿ ಬ್ಲಾಗ್‌ಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವುದು ಸರ್ವೇಸಾಮಾನ್ಯ. ಬ್ಲಾಗ್ ಗಳ ಜನಪ್ರಿಯತೆಯು ನಕಲಿ ಬ್ಲಾಗ್ ಗಳ ಹುಟ್ಟಿಗೆ ಕೂಡ ಕಾರಣವಾಗಿದ್ದು, ಅದರಲ್ಲಿ ಯಾವುದಾದರೊಂದು ಸಂಸ್ಥೆಯು ಕಾಲ್ಪನಿಕ ಬ್ಲಾಗ್ ಅನ್ನು ಸೃಷ್ಟಿಸಿ ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು[೧೪] ಮಾರುಕಟ್ಟೆಯ ಸಾಧನವನ್ನಾಗಿ ಬಳಸಿಕೊಳ್ಳುತ್ತದೆ.

ಜನಪ್ರಿಯತೆ[ಬದಲಾಯಿಸಿ]

ಸಂಶೋಧಕರು ಬ್ಲಾಗ್‌ಗಳ ಜನಪ್ರಿಯತೆಯ ಆಯಾಮಗಳನ್ನು ವಿಶ್ಲೇಷಿಸಿರುವರು. ಇದರಲ್ಲಿ ಎರಡು ಮುಖ್ಯ ಮಾಪನಗಳಿವೆ: ಎಲ್ಲೆಡೆ ನಮೂದಾಗುವ ಮೂಲಕ ಜನಪ್ರಿಯತೆ, ಹಾಗೆಯೇ ಇತರ ಬ್ಲಾಗ್ ಲಿಂಕ್‌ಗಳನ್ನು ತನ್ನ ಬ್ಲಾಗ್‌ನಲ್ಲಿ ಸ್ವೀಕರಿಸುವ ಮೂಲಕ ಜನಪ್ರಿಯತೆ ಪಡೆಯುವುದು, ಉದಾ: ಬ್ಲಾಗ್ ರೋಲ್. ಬ್ಲಾಗ್ ಸಂರಚನೆಯ ಕುರಿತ ಅಧ್ಯಯನಗಳಿಂದ ನಿರ್ಧರಿಸಲಾಗಿರುವ ಪ್ರಕಾರ- ಬ್ಲಾಗ್‌ರೋಲ್‌ಗಳ ಮೂಲಕ ಬ್ಲಾಗ್ ಜನಪ್ರಿಯತೆ ಗಳಿಸಲು ಕೊಂಚ ಕಾಲ ಹಿಡಿದರೆ, ಪರ್ಮಾಲಿಂಕ್ ಗಳು ಬ್ಲಾಗ್‌ಗಳ ಜನಪ್ರಿಯತೆಯನ್ನು ಹೆಚ್ಚು ಶೀಘ್ರವಾಗಿ ವರ್ಧಿಸುತ್ತವೆ. ಜನರು ಬ್ಲಾಗ್ ಗಳನ್ನು ಓದುವ ಮತ್ತು ಅವನ್ನು ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಅಮೂಲ್ಯವಾಗಿ ಹಾಗೂ ಗಂಭೀರವಾಗಿ ಪರಿಗಣಿಸುವುದನ್ನು ಅದು ಎತ್ತಿತೋರಿಸುವುದರಿಂದ ಅವು ಬ್ಲಾಗ್‌ರೋಲ್‌ಗಳಿಗಿಂತ ಮಿಗಿಲಾಗಿ ಹೆಚ್ಚು ಜನಪ್ರಿಯವೂ ಅಧಿಕೃತವೂ ಆಗಿ ಪರಿಗಣಿತವಾಗುತ್ತವೆ.[೧೫]

ಬ್ಲಾಗ್‌ಗಳ ಸಾಮಾಜಿಕ ಲಕ್ಷಣಗಳನ್ನು ಅನ್ವೇಷಿಸುವ ಸಲುವಾಗಿ, ಅಂತರ್ಜಾಲದ ಒಳಹೊಕ್ಕು ಸಾವಿರಾರು ಬ್ಲಾಗ್‌ಗಳಿಂದ ದತ್ತ ಸಂಚಯ ಮಾಡುವುದಕ್ಕಾಗಿ ಸಂಶೋಧಕರು MIT ಮೀಡಿಯಾ ಲ್ಯಾಬ್ ನಲ್ಲಿ blogdex ಯೋಜನೆಯನ್ನು ಆರಂಭಿಸಿದರು ಅದು ಈ ಮಾಹಿತಿಯನ್ನು ಸುಮಾರು 4 ವರ್ಷಗಳ ಕಾಲ ಒದಗಿಸಿತು ಮತ್ತು ಸ್ವತಂತ್ರವಾಗಿ ಬ್ಲಾಗ್ ಸಮುದಾಯದಲ್ಲಿ ಹರಡುವ ಸಾಂಕ್ರಾಮಿಕ ಮಾಹಿತಿಗಳನ್ನು ಪತ್ತೆ ಮಾಡಿ, ಅವುಗಳ ನಾವೀನ್ಯತೆ ಹಾಗೂ ಜನಪ್ರಿಯತೆಗೆ ತಕ್ಕಂತೆ ಶ್ರೇಣೀಕರಿಸಿತು. ಈ ಕಾರಣದಿಂದಾಗಿ ಇದನ್ನು ಮೆಮೆಟ್ರ್ಯಾಕರ್ ನ ಪ್ರಥಮ ನಿದರ್ಶನವೆಂದು ಪರಿಗಣಿಸಬಹುದು. ಈ ಯೋಜನೆಯೀಗ ಸಕ್ರಿಯವಾಗಿಲ್ಲದಿದ್ದರೂ ಇದಕ್ಕೆ ಸಮನಾದ ಕಾರ್ಯಾಚರಣೆಯನ್ನು tailrank.com ನಡೆಸುತ್ತಿದೆ.

ಬ್ಲಾಗ್ ಗಳಿಗೆ Technoratiಯಿಂದ ಶ್ರೇಣಿಯನ್ನು ನೀಡಲ್ಪಡುವುದಾಗಿದ್ದು, ಇದಕ್ಕೆ ಒಳಬರುವ ಸಂಪರ್ಕ ಕೊಂಡಿಗಳ ಸಂಖ್ಯೆ ಹಾಗೂ ಅಲೆಕ್ಸಾ ಟೂಲ್‌ಬಾರ್ ಅನ್ನು ಬಳಸುವ ಬಳಕೆದಾರರು ಪಡೆಯುವ ಹಿಟ್ಸ್ (ಓದುಗರ ಸಂಖ್ಯೆ) ಅನ್ನು ಆಧರಿಸಿದ ಅಲೆಕ್ಸಾ ಇಂಟರ್ನೆಟ್ ಮಾನದಂಡವಾಗಿರುತ್ತವೆ.2006ನೇ ಇಸವಿಯ ಅಗಸ್ಟ್ ತಿಂಗಳಲ್ಲಿ Technoratiಯು, ಅಂತರ್ಜಾಲ ತಾಣದಲ್ಲಿ ಅತಿ ಹೆಚ್ಚು ಕಡೆ ಸಂಪರ್ಕ ಕೊಂಡಿಯನ್ನು ನೀಡಲ್ಪಟ್ಟಿದ್ದ ಬ್ಲಾಗ್ ಎಂದು ಚೀನಾದ ನಟಿ ಕ್ಸು ಜಿಂಗ್ಲೀ ಅವರ ಬ್ಲಾಗ್ ಅನ್ನು ಗುರುತಿಸಿತ್ತು.[೧೬] ಈ ಬ್ಲಾಗ್ 50 ಮಿಲಿಯಕ್ಕೂ ಹೆಚ್ಚು ಪುಟ ವೀಕ್ಷಣೆಯನ್ನು ಪಡೆದಿದ್ದು, ಜಗತ್ತಿನಲ್ಲೇ ಅತ್ಯಂತ ಜನಪ್ರಿಯ ಬ್ಲಾಗ್ ಆಗಿರುವುದೆಂದು ಚೀನಾದ ಮಾಧ್ಯಮ ಕ್ಸಿನ್ ಹುಆ ವರದಿ ಮಾಡಿತ್ತು.[೧೭] ಬೋಯಿಂಗ್ ಬೋಯಿಂಗ್ ಅನ್ನು ಅತಿ ಹೆಚ್ಚು ಓದುಗರುಳ್ಳ ಸಮೂಹ ಬ್ಲಾಗ್ ಎಂದು Technorati ಮಾನ್ಯ ಮಾಡಿದೆ.[೧೬]

ಸಮೂಹ ಮಾಧ್ಯಮದೊಡನೆ ಮಸುಕಾಗುವಿಕೆ[ಬದಲಾಯಿಸಿ]

ಕೆಲವು ಬ್ಲಾಗಿಗರು, ನಿರ್ದಿಷ್ಟವಾಗಿ ಸಕ್ರಿಯ ಪತ್ರಿಕೋದ್ಯಮದಲ್ಲಿರುವವರು ತಮ್ಮನ್ನು ತಾವು ಮಾಧ್ಯಮದ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿಸಿಕೊಂಡರೆ, ಮತ್ತೆ ಕೆಲವರು ಆ ಮಾಧ್ಯಮದ ಸದಸ್ಯರಾಗಿದ್ದು, ಪ್ರತ್ಯೇಕ ವಾಹಿನಿಯ ಮೂಲಕ ಕೆಲಸ ಮಾಡುವವರಾಗಿರುತ್ತಾರೆ. ಕೆಲವು ಸಂಸ್ಥೆಗಳು ಬ್ಲಾಗಿಂಗ್ ಅನ್ನು “ತಡೆರಹಿತ ಮಾಹಿತಿ ನೀಡಿಕೆ"ಯ ಮತ್ತು ನೇರವಾಗಿ ಸಂದೇಶಗಳನ್ನು ಜನರತ್ತ ತಳ್ಳುವ ಮಾಧ್ಯಮವಾಗಿ ಪರಿಗಣಿಸುತ್ತವೆ. ಬ್ಲಾಗಿಗರು ಹಕ್ಕು ಸ್ವಾಮ್ಯದ ಬಗೆಗಾಗಲೀ, ವಿಶ್ವಾಸಾರ್ಹ ಸುದ್ದಿ ನೀಡಿಕೆಯೊಂದಿಗೆ ಸಮಾಜ ನಿರೂಪಣೆಯಲ್ಲಿ ಸಮೂಹ ಮಾಧ್ಯಮದ ಪಾತ್ರದ ಬಗೆಗಾಗಲೀ ಗೌರವ ಹೊಂದಿಲ್ಲವೆಂಬುದು ಕೆಲವು ವಿಮರ್ಶಕರ ಆತಂಕಕ್ಕೆ ಕಾರಣವಾಗಿದೆ. 2006ರಲ್ಲಿ ಟೈಮ್ ಮ್ಯಾಗಜಿನ್ ವರ್ಷದ ವ್ಯಕ್ತಿ “ನೀವು" ಎಂದು ಗುರುತಿಸಿದ್ದ ಹಿನ್ನೆಲೆಯಲ್ಲಿ ಬ್ಲಾಗರ್ ಗಳು ಹಾಗೂ ಬಳಕೆದಾರರಿಂದ ವ್ಯುತ್ಪನ್ನಗೊಂಡ ವಸ್ತು ವಿಷಯಗಳ ಕೊಡುಗೆದಾರರು ಪಾತ್ರ ವಹಿಸಿದ್ದರು.

ಇದೇ ವೇಳೆ ಸಾಕಷ್ಟು ಮುಖ್ಯವಾಹಿನಿಯ ಪತ್ರಕರ್ತರು ತಮ್ಮದೇ ಬ್ಲಾಗ್ ಅನ್ನು ಹೊದಿದ್ದಾರೆ. cyber journalist.net ನ ಜೆ-ಬ್ಲಾಗ್ ಪಟ್ಟಿಯು ಸೂಚಿಸುವಂತೆ ಈ ಸಂಖ್ಯೆ 300ಕ್ಕೂ ಹೆಚ್ಚಿದೆ. ಈವರೆಗೆ ತಿಳಿಯಲಾಗಿರುವಂತೆ, 1998ರಲ್ಲಿ ಮೊದಲಬಾರಿಗೆ ಸುದ್ದಿತಾಣದಲ್ಲಿ ಬ್ಲಾಗ್ ಅನ್ನು ಬಳಸಿದ್ದು, ಶಾರ್ಲೊಟ್ ಅಬ್ಸರ್ವರ್ಜೊನಾಥನ್ ಡ್ಯೂಬ್ ಬೋನ್ನೀ ಚಂಡಮಾರುತದ ಕುರಿತು ಕಾಲಾನುಕ್ರಮ ವಿವರ ಪ್ರಕಟಿಸಿದ್ದರು.[೧೮]


ಕೆಲವು ಬ್ಲಾಗರ್ ಗಳು ಬೇರೆ ಮಾಧ್ಯಮಗಳತ್ತ ಮುನ್ನಡೆದರು. ಈ ಕೆಳಗಿನ ಬ್ಲಾಗಿಗರು (ಮತ್ತೆ ಕೆಲವರು) ರೇಡಿಯೋ ಹಾಗೂ ದೂರದರ್ಶನಗಳಲ್ಲಿ ಕಾಣಿಸಿಕೊಂಡರು: ಡಂಕನ್ ಬ್ಲ್ಯಾಕ್ ( ತಮ್ಮ ಮಿಥ್ಯನಾಮ ಏಟ್ರಿಯೋಸ್ ಎಂಬ ಹೆಸರಿನಿಂದ ವ್ಯಾಪಕವಾಗಿ ಗುರುತಿಸಲ್ಪಡುತ್ತಾರೆ), ಗ್ಲೆನ್ ರೆನಾಲ್ಡ್ಸ್(ಇನ್ಸ್ಟಾ ಪಂಡಿತ್), ಮಾರ್ಕೋಸ್ ಮೌಲಿಟ್ಸಾಸ್ ಜುನಿಗ (ಡೈಲಿ ಕೋಸ್), ಅಲೆಕ್ಸ್ ಸ್ಟೀಫನ್ (Worldchanging) ಮತ್ತು ಆನಾ ಮೇರಿ ಕಾಕ್ಸ್ (ವಾಂಕೆಟ್). ಇದಕ್ಕೆ ಪ್ರತಿಯಾಗಿ ಹಗ್ ಹೆವಿಟ್, ಸಮೂಹ ಮಾಧ್ಯಮದ ವ್ಯಕ್ತಿಯೊಬ್ಬರು ಪ್ರಭಾವಶಾಲಿ ಬ್ಲಾಗಿಗರಾಗಿ ತನ್ನ “ಹಳೆಯ ಮಾಧ್ಯಮ"ದಲ್ಲಿದ್ದ ಸಂಪರ್ಕಗಳಿಂದ ಬೇರೆಯದೇ ದಿಕ್ಕಿಗೆ ಹೊರಳಿಕೊಂಡಿದ್ದನ್ನು ಉದಾಹರಿಸುತ್ತಾರೆ. ಇದಕ್ಕೆ ಸಮನಾಗಿ ಮಿಟ್ಜಿ ಸೆರೆಟೋರಂತಹ ಹಲವಾರು ಖ್ಯಾತ ಲೇಖಕರು ತಮಗೆ ಸಂಬಂಧಿಸಿದ ಹೊಸ ಮಾಹಿತಿಗಳನ್ನು ಅಭಿಮಾನಿಗಳಿಗೆ ಒದಗಿಸಲು ಮಾತ್ರವಲ್ಲದೆ, ಬರವಣಿಗೆಯ ಹೊಸ ಸಾಧ್ಯತೆಗಳತ್ತ ವಿಸ್ತರಿಸಿಕೊಳ್ಳುವುದಕ್ಕಾಗಿಯೂ ಬ್ಲಾಗ್ ಬಳಕೆಯನ್ನು ಆರಂಭಿಸಿದ್ದಾರೆ.

ಬ್ಲಾಗ್ ಗಳು ಅಲ್ಪಸಂಖ್ಯಾತ ಭಾಷೆಗಳ ಮೇಲೆ ಸತ್ಪರಿಣಾಮ ಬೀರಿದ್ದು, ಚದುರಿಹೋಗಿರುವ ಭಾಷಿಗರು ಹಾಗೂ ಅಧ್ಯಯನಕಾರರನ್ನು ಒಟ್ಟುಗೂಡಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ನಿರ್ದಿಷ್ಟವಾಗಿ ಕೆಲ್ಟ್ ಜನರ ಭಾಷೆಗಳ (ಗೇಲಿಕ್ ಭಾಷೆಗಳು) ಬ್ಲಾಗ್ ಬಗ್ಗೆ ಈ ಮಾತನ್ನು ಹೇಳಬಹುದು. ಅಲ್ಪಸಂಖ್ಯಾತ ಭಾಷೆಗಳ ಪ್ರಕಟಣೆಗಳು (ಆರ್ಥಿಕ ಬೆಂಬಲದ ಕೊರತೆ ಅನುಭವಿಸುವಂತಹವು) ದುಬಾರಿಯಲ್ಲದ ಬ್ಲಾಗಿಂಗ್ ಮೂಲಕ ತನ್ನ ಶ್ರೋತೃಗಳನ್ನು ಕಂಡುಕೊಳ್ಳಬಹುದು.

ಬ್ಲಾಗಿಗರು ತಮ್ಮ ಬ್ಲಾಗ್ ಅನ್ನು ಆಧರಿಸಿ ಪುಸ್ತಕಗಳನ್ನು ಪ್ರಕಟಿಸಿರುವ ಹಲವಾರು ನಿದರ್ಶನಗಳನ್ನು ಕೊಡಬಹುದು. ಉದಾ: ಸಲಮ್ ಪಾಕ್ಸ್, ಎಲೆನ್ ಸಿಮೊನೆಟ್ಟಿ, ಜೆಸ್ಸಿಕಾ ಕಟ್ಲರ್, ಸ್ಕ್ರಾಪಲ್ ಫೇಸ್ ಮೊದಲಾದವರು. ಬ್ಲಾಗ್ ಮೂಲದ ಪುಸ್ತಕಗಳಿಗೆ ಬ್ಲೂಕ್ ಎಂದು ಹೆಸರಿಸಲಾಗಿದೆ, ಅತ್ಯುತ್ತಮ ಬ್ಲಾಗ್ ಆಧಾರಿತ ಪುಸ್ತಕಕ್ಕೆ ಲುಲು ಬ್ಲೂಕರ್ ಪ್ರೈಜ್ ಅನ್ನು ನೀಡುವ ಪರಿಪಾಠವು 2005ರಲ್ಲಿ [೧೯] ಆರಂಭಗೊಂಡಿತು.[೨೦] ಇಂತಹ ಪುಸ್ತಕಗಳು ಅಷ್ಟಾಗಿ ಮಾರಾಟಗೊಳ್ಳದೆ ಈ ಪ್ರಯತ್ನವು ಯಶಸ್ಸು ಕಾಣದೆ ಹೋಯಿತು. ಟಕರ್ ಮ್ಯಾಕ್ಸ್ ಎಂಬ ಬ್ಲಾಗಿಗರೊಬ್ಬರ ಪುಸ್ತಕವೊಂದೇ ನ್ಯೂಯಾರ್ಕ್ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದ್ದು.[೨೧] ಈ ಪುಸ್ತಕವು ಜೂಲಿ ಪಾವೆಲ್ ರ ರ ಬ್ಲಾಗ್ “ದ ಜೂಲಿ/ಜೂಲಿಯಾ ಪ್ರಾಜೆಕ್ಟ್" ಆಧರಿಸಿತ್ತು. ಅದು ಜೂಲಿ ಅಂಡ್ ಜೂಲಿಯಾ ಎಂಬ ಚಲನ ಚಿತ್ರವಾಗಿ ನಿರ್ಮಾಣಗೊಂಡಿದ್ದು, ಈ ನಿಟ್ಟಿನಲ್ಲಿ ಪ್ರಥಮ ಪ್ರಯತ್ನವೂ ಆಗಿತ್ತು.

ಕಾನೂನು ಹಾಗೂ ಸಾಮಾಜಿಕ ಸನ್ನಿವೇಶಗಳು[ಬದಲಾಯಿಸಿ]

ಬ್ಲಾಗಿಂಗ್ ಕಾನೂನಿನ ಉತ್ತರದಾಯಿತ್ವಕ್ಕೆ ಹಾಗೂ ಇನ್ನಿತರ ಅನಿರೀಕ್ಷಿತ ಸನ್ನಿವೇಶಗಳಿಗೆ ಒಳಪಡಬಹುದಾಗಿದೆ.

ಮಾನನಷ್ಟ ಪ್ರಕರಣಗಳು ಅಥವಾ ಉತ್ತರದಾಯಿತ್ವ[ಬದಲಾಯಿಸಿ]

ಮಾನನಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ನಡೆದ ಹಲವಾರು ಉದಾಹರಣೆಗಳಿವೆ. 2009ರ ವೇಳೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬ್ಲಾಗಿಂಗ್ ನ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಲೆಹಾಕಿದ ಒಟ್ಟು ದಂಡದ ಮೊತ್ತ ಸುಮಾರು 17.4 ಮಿಲಿಯನ್ ಡಾಲರ್ ಗಳು; ಕೆಲವು ಪ್ರಕರಣಗಳಲ್ಲಿ ಇದನ್ನು ಅಂಬ್ರೆಲಾ ವಿಮೆಯ ಮೂಲಕ ವಸೂಲು ಮಾಡಿದ ನಿದರ್ಶನಗಳೂ ಇವೆ.[೨೨] ನ್ಯಾಯಾಲಯಗಳು ಮಿಶ್ರ ತೀರ್ಮಾನಗಳೊಂದಿಗೆ ವ್ಯಾಜ್ಯವನ್ನು ಇತ್ಯರ್ಥಗೊಳಿಸುತ್ತವೆ. ಅಂತರ್ಜಾಲ ಸೇವೆ ಒದಗಿಸುವವರು (ISPs) ಸಾಮಾನ್ಯವಾಗಿ ಮೂರನೆಯ ವ್ಯಕ್ತಿಯಿಂದ ವ್ಯುತ್ಪನ್ನಗೊಂಡ ಮಾಹಿತಿಗಳಿಗೆ ಜವಾಬ್ದಾರರಾಗಿರುವುದಿಲ್ಲ. (ಅಮೆರಿಕ ಸಂಯುಕ್ತ ಸಂಸ್ಥಾನ ಕಮ್ಯುನಿಕೇಶನ್ ಡೀಸೆನ್ಸಿ ಕಾಯ್ದೆ ಮತ್ತು EU ನಿರ್ದೇಶಕಗಳು 2000/31/EC).

ಡೋ ಹಾಗೂ ಕಹಿಲ್ ಪ್ರಕರಣದಲ್ಲಿ ಡಿಲವೇರ್ ಸರ್ವೋಚ್ಚ ನ್ಯಾಯಾಲಯವು ಬ್ಲಾಗಿಗರ ಅನಾಮಿಕ ಬರಹಗಳ ಮುಖವಾಡ ಕಳಚಲು ಬಿಗಿಯಾದ ನಿಯಮಗಳಿರಬೇಕೆಂಬುದನ್ನು ಎತ್ತಿಹಿಡಿಯಿತು ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಪುನರ್ಪರಿಶೀಲನೆಗೆ ಅವಕಾಶ ನೀಡದೆ ಸ್ವತಃ ಆ ಮಾನನಷ್ಟ ಪ್ರಕರಣವನ್ನೇ ವಜಾಗೊಳಿಸುವ ಮೂಲಕ (ಅಮೆರಿಕೆಯ ಮಾನನಷ್ಟ ಕಾನೂನಿನಲ್ಲಿ ಕಾಣದಿರುವ) ಅಸಾಧಾರಣ ಹೆಜ್ಜೆಯನ್ನು ಮುಂದಿರಿಸಿತು.[೨೩] ಅಚ್ಚರಿಯ ತಿರುವಿನಲ್ಲಿ ಕಹಿಲ್ಲರಿಗೆ ತಾವು ಅನುಮಾನಿಸುತ್ತಿದ್ದ ವ್ಯಕ್ತಿ: ಪಟ್ಟಣದ ಮೇಯರ್ ಹಾಗೂ ಕಹಿಲ್ಲರ ರಾಜಕೀಯ ಎದುರಾಳಿ ಜಾನ್ ಡೋ ಎಂಬುದರ ಸುಳಿವು ತಿಳಿಯಿತು. ಅನಂತರ ಕಹಿಲ್ಲರು ತಮ್ಮ ಮೂಲ ದೂರಿನಲ್ಲಿ ತಿದ್ದುಪಡಿ ಮಾಡಿಕೊಂಡರು ಹಾಗೂ ಮೇಯರ್ ವಿಚಾರಣೆಗೆ ಹೋಗುವ ಬದಲಾಗಿ ಪ್ರಕರಣವನ್ನು ಅಲ್ಲಿಯೇ ಇತ್ಯರ್ಥಗೊಳಿಸಿದರು.

ಜನವರಿ 2007ರಲ್ಲಿ ಮಲೇಶಿಯಾದ ಇಬ್ಬರು ಪ್ರಮುಖ ರಾಜಕೀಯ ಬ್ಲಾಗರ್ ಗಳಾದ ಜೆಫ್ ಊಯಿ ಮತ್ತು ಅಹಿರುದ್ದಿನ್ ಅತ್ತನ್ ಸರ್ಕಾರಪರ ದಿನಪತ್ರಿಕೆ ದ ನ್ಯೂ ಸ್ಟ್ರೈಟ್ಸ್ ಟೈಮ್ಸ್ ಪ್ರೆಸ್ಸ್ (ಮಲೇಶಿಯಾ) ಬರ್ಹಾಡ್, ಕಲೀಮುಲ್ಲಾಹ್ ಬಿನ್ ಮಶೀರುಲ್ ಹಸನ್, ಹಿಶಾಮುದ್ದಿನ್ ಬಿನ್ ಅನ್ ಹಾಗೂ ಬ್ರೆಂಡೆನ್ ಜಾನ್ ಅಲಿಯಾಸ್ ಜಾನ್ ಪಿರೇರಾ ಅವರಿಂದ ಆಪಾದಿತರಾಗಿ ಮಾನನಷ್ಟ ಮೊಕದ್ದಮೆಗೆ ಒಳಗಾಗಿದ್ದರು. ಮಲೇಶಿಯಾ ಸರ್ಕಾರ ಕೂಡ ಅದನ್ನು ಬೆಂಬಲಿಸಿತ್ತು.[೨೪] ಈ ಪ್ರಕರಣವನ್ನು ಮುಂದಿಟ್ಟುಕೊಂಡು, ತನ್ನ ಆಸಕ್ತಿಗೆ ಧಕ್ಕೆ ತರುವವರ ಮೇಲೆ ನಿಯಂತ್ರಣ ಹೇರುವ ಸಲುವಾಗಿ, ಮಲೇಶಿಯಾ ಸರ್ಕಾರವು ದೇಶದ ಎಲ್ಲ ಬ್ಲಾಗರ್ ಗಳೂ “ನೋಂದಾವಣೆ" ಮಾಡಿಸಿಕೊಳ್ಳಬೇಕೆಂಬ ಸೂಚನೆ ಹೊರಡಿಸಿತು.[೨೫] [೨೫] ಬ್ಲಾಗರ್ ಗಳ ಮೇಲೆ ದೇಶದಲ್ಲಿ ಈ ಬಗೆಯ ಕಾನೂನಾತ್ಮಕ ಕ್ರಮ ಜಾರಿಗೊಳಿಸಿದ ಮೊದಲ ಪ್ರಕರಣ ಇದಾಗಿದೆ.

2005ರಲ್ಲಿ ಅಮೆರಿಕೆಯ ಬ್ಲಾಗರ್ ಆರೋನ್ ವಾಲ್, ಮಾನನಷ್ಟದ ಹಾಗೂ ವ್ಯಾಪಾರಿ ರಹಸ್ಯಗಳನ್ನು ಪ್ರಕಟಿಸಿದ ಆರೋಪಗಳ ಮೇಲೆ ಟ್ರಾಫಿಕ್ ಪವರ್ ನಿಂದ ಆಪಾದನೆಗೊಳಗಾಗಿದ್ದರು.[೨೬] ವೈರ್ಡ್ ಮ್ಯಾಗಜಿನ್ ಪ್ರಕಾರ, ಟ್ರಾಫಿಕ್ ಪವರ್, “ಸರ್ಚ್ ಎಂಜಿನ್ ಫಲಿತಾಂಶಗಳನ್ನು ಸೆಳೆಯುವ ಆಪಾದನೆಯ ಮೇಲೆ Google ನಿಂದ ನಿಷೇಧಕ್ಕೊಳಗಾಗಿತ್ತು".[೨೭] ವಾಲ್ ಮತ್ತಿತರ “ವೈಟ್ ಹ್ಯಾಟ್" ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಸಲಹೆಗಾರರು ಟ್ರಾಫಿಕ್ ಪವರ್ ಅನ್ನು ಹೊರಬಿಟ್ಟು, ಅದು ಸಾರ್ವಜನಿಕರ ರಕ್ಷಣೆಯ ಪ್ರಯತ್ನವೆಂದು ಹೇಳಿಕೊಂಡರು. ಈ ಇಡಿಯ ಪ್ರಕರಣವನ್ನು ಬಹಳಷ್ಟು ಬ್ಲಾಗಿಗರು ಸೂಕ್ಷ್ಮವಾಗಿ ಗಮನಿಸಿದರು. ಏಕೆಂದರೆ ಅದು, ಬ್ಲಾಗ್ ಬರಹಗಳಿಗೆ ಬರುವ ಓದುಗರ ಪ್ರತಿಕ್ರಿಯೆಗಳಿಗೆ ಯಾರು ಜವಾಬ್ದಾರರಾಗುವರೆಂಬ ಮಸುಕಾದ ಕಾನೂನು ಸಂಬಂಧಿ ಪ್ರಶ್ನೆಯನ್ನು ಒಳಗೊಂಡಿತ್ತು.[೨೮] ಅಂತಿಮವಾಗಿ ಈ ಪ್ರಕರಣವು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಾಗೂ ನಿಗದಿತ ಸಮಯದೊಳಗೆ ಮನವಿ ಸಲ್ಲಿಸಲು ಟ್ರಾಫಿಕ್ ಪವರ್ ವಿಫಲವಾದ ಕಾರಣಗಳಿಂದಾಗಿ ವಜಾಗೊಂಡಿತು.[೨೯][೩೦][೩೧][೩೨]

೨೦೦೯ರಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಎಡಿ ಅವರು ರಿಚರ್ಡ್ ಹಾರ್ಟನ್ನರ ಅನಾಮಿಕತೆಯನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಮಾನ್ಯಮಾಡಲು ನಿರಾಕರಿಸುವ ಮೂಲಕ ವಿವಾದಾತ್ಮಕ ಆದರೆ ಅತಿ ಮಹತ್ವದ ತೀರ್ಪನ್ನು ನೀಡಿದ್ದರು.[೩೩]

NDTV 2009ರಲ್ಲಿ, ತನ್ನ ಮುಂಬಯಿ ದಾಳಿ ಚಿತ್ರೀಕರಣವನ್ನು ಟೀಕಿಸಿ “ನಿಂದನಾತ್ಮಕ ಲಘು ಮಾತುಗಳ" ಬ್ಲಾಗ್ ಬರಹವನ್ನು ಪ್ರಕಟಿಸಿದ್ದಕ್ಕಾಗಿ ಭಾರತದ ಬ್ಲಾಗಿಗ ಚೇತನ್ ಕುಂಟೆಗೆ ಕಾನೂನು ರೀತ್ಯಾ ಎಚ್ಚರಿಕೆ ರವಾನಿಸಿತ್ತು.[೩೪] ಇದಕ್ಕೆ ಪ್ರತಿಯಾಗಿ ಚೇತನ್ ಕುಂಟೆ ಯಾವ ತಕರಾರೂ ಇಲ್ಲದೆ ತಮ್ಮ ಬರಹವನ್ನು ಹಿಂಪಡೆದು, ಕಾನೂನು ರೀತ್ಯಾ ಅದನ್ನು ಹಿಂಪಡೆಯುತ್ತಿರುವುದಾಗಿಯೂ ತನ್ನ ಬ್ಲಾಗ್ ಬರಹದಲ್ಲಿ “ಅಪಮಾನಕರ ಹಾಗೂ ಅಸತ್ಯದ" ಸಂಗತಿಯನ್ನು ಪ್ರಕಟಿಸಿದ್ದಾಗಿಯೂ ಹೇಳಿಕೊಂಡರು. ಇದು ಭಾರತದ ಬಹಳಷ್ಟು ಬ್ಲಾಗಿಗರಲ್ಲಿ ಸಂಚಲನ ಮೂಡಿಸಿದ ಸಂಗತಿಯಾಗಿದ್ದು, ಟೀಕೆಗಳ ಬಾಯಿ ಮುಚ್ಚಿಸುವ NDTVಯ ವರ್ತನೆಯನ್ನು ಅವರು ವ್ಯಾಪಕವಾಗಿ ಟೀಕಿಸುವುದರೊಂದಿಗೆ ಪರ್ಯವಸಾನಗೊಂಡಿತು.[೩೫]

ಉದ್ಯೋಗ[ಬದಲಾಯಿಸಿ]

ತಮ್ಮ ಉದ್ಯೋಗ ಸ್ಥಳದ ವಸ್ತುವಿಷಯಗಳ ಬಗ್ಗೆ ಬ್ಲಾಗ್ ನಲ್ಲಿ ಬರೆಯುವ ಉದ್ಯೋಗಿಗಳು ತಮ್ಮ ಗುರುತನ್ನು ಛಾಪಿಸುವ ಸಂಗತಿಗಳನ್ನು ಎತ್ತಿಕೊಳ್ಳುವರು, ಮತ್ತು ಅವರ ಚಟುವಟಿಕೆಗಳು ತಮ್ಮ ಉದ್ಯೋಗದಾತರ ಸ್ಥಾಪಿತ ಗುರುತಿನ ಮೇಲೆ ಪರಿಣಾಮ ಬೀರಲಾರಂಭಿಸುವುದು. ಸಾಮಾನ್ಯವಾಗಿ, ಉದ್ಯೋಗಿ ಬ್ಲಾಗಿಗರು ಅನಾಮಿಕತೆಯ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನಗಳು ನಿಷ್ಪರಿಣಾಮಕಾರಿಯೆಂದು ಸಾಬೀತಾಗಿವೆ.[೩೬]

ಚಿತ್ರ:QoS3.png
2004ರ ಉತ್ತರಾರ್ಧದಲ್ಲಿ ಎಲೆನ್ ಸಿಮೊನೆಟ್ಟಿ, ತನ್ನ ಸಂಸ್ಥೆ ಡೆಲ್ಟಾ ಏರ್ ಲೈನ್ಸ್ ನಿಂದ, ಬ್ಲಾಗಿನಲ್ಲಿ ಸಲ್ಲದ ವಿಷಯವನ್ನು ಬರೆದಿದ್ದಕ್ಕಾಗಿ ಕೆಲಸದಿಂದ ಹೊರಹಕಲ್ಪಟ್ಟಳು. ಆಕೆಯು ತನ್ನ ಬ್ಲಾಗನ್ನು ಆಧರಿಸಿ ಪುಸ್ತಕವೊಂದನ್ನು ಬರೆದಳು.

ಡೆಲ್ಟಾ ಏರ್ ಲೈನ್ಸ್ ಫ್ಲೈಟ್ ಅಟೆಂಡೆಂಟ್ ಆಗಿದ್ದ ಎಲೆನ್ ಸಿಮೊನೆಟ್ಟಿಯನ್ನು, ಆಕೆ ವಿಮಾನದಲ್ಲಿ ಸಮವಸ್ತ್ರ ಧರಿಸಿದ್ದ ತನ್ನ ಭಾವಚಿತ್ರವನ್ನು ತನ್ನದೇ ಬ್ಲಾಗ್ “ಕ್ವೀನ್ ಆಫ್ ಸ್ಕೈ: ಡೈರಿ ಆಫ್ ಎ ಫ್ಲೈಟ್ ಅಟೆಂಡೆಂಟ್" ಬ್ಲಾಗಿನಲ್ಲಿ ಹಾಕಿಕೊಂಡಿದ್ದರೆಂಬ ಕಾರಣಕ್ಕೆ ವಿಚಾರಣೆಗೆ ಗುರಿಪಡಿಸಿತ್ತು.[೩೭][೩೮] ಈ ಪ್ರಕರಣವು ವೈಯಕ್ತಿಕ ಬ್ಲಾಗಿಂಗ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಉದ್ಯೋಗದಾತರ ಹಕ್ಕುಗಳು ಮತ್ತು ಜವಾಬ್ದಾರಿಗಳ ನಡುವಿನ ಸಂಘರ್ಷಕ್ಕೆ ಒತ್ತು ನೀಡಿತು, ಮತ್ತು ಈ ಕಾರಣದಿಂದ ವ್ಯಾಪಕವಾಗಿ ಮಾಧ್ಯಮಗಳ ಗಮನ ಸೆಳೆಯಿತು. ಸಿಮೊನೆಟ್ಟಿ ಏರ್ ಲೈನ್ ವಿರುದ್ಧ “ತನ್ನನ್ನು ಹೊರಹಾಕಿದ ತಪ್ಪು ನಿರ್ಣಯ, ಮಾನನಷ್ಟ ಹಾಗೂ ಭವಿಷ್ಯದ ವೇತನದ ನಷ್ಟ"ಗಳಿಗಾಗಿ ಕಾನೂನು ಕ್ರಮ ಕೈಗೊಂಡಳು.[೩೯] ದಾವೆಯ ನ್ಯಾಯಾಲಯ ಸೂಚಿಪತ್ರ Archived 2008-05-28 ವೇಬ್ಯಾಕ್ ಮೆಷಿನ್ ನಲ್ಲಿ. ಹೊರಡಿಸುವ ವೇಳೆಗೆ ಡೆಲ್ಟಾ ದಿವಾಳಿಯ ಅಂಚಿನಲ್ಲಿದ್ದುದರಿಂದ ಈ ಪ್ರಕರಣದ ವಿಚಾರಣೆಯು ಮುಂದೂಡಲ್ಪಟ್ಟಿತು.

2006ರ ಆರಂಭ ಭಾಗದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಹಿರಿಯ ಉಪನ್ಯಾಸಕರಾಗಿದ್ದ ಎರಿಕ್ ರಿಂಗ್ಮರ್ ತಮ್ಮ ಬ್ಲಾಗಿನಲ್ಲಿ ಸಂಸ್ಥೆಯ ಶಿಕ್ಷಣ ಗುಣಮಟ್ಟದ ಕುರಿತು ಚರ್ಚಿಸಿದ್ದರು. ಇದನ್ನು ಮುಂದಿಟ್ಟುಕೊಂಡು ಇಲಾಖೆಯ ಮುಖ್ಯಸ್ಥರು ಅವರಿಗೆ ತಮ್ಮ ಬ್ಲಾಗ್ ಅನ್ನು ಹಿಂಪಡೆದು ಮುಚ್ಚಿಬಿಡಬೇಕೆಂದು ತಾಕೀತು ಮಾಡಿದರು.[೪೦]

2006ರ ಸುಮಾರಿನಲ್ಲಿ ಡಲ್ಲಾಸ್ ಮೆವರಿಕ್ಸ್ ನ ಒಡೆಯ ಮಾರ್ಕ್ ಕ್ಯೂಬನ್, NBA ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ಹಾಗೂ ತಮ್ಮ ಬ್ಲಾಗಿನಲ್ಲಿ ಟೀಕಿಸಿದ್ದಕ್ಕಾಗಿ NBA ಗೆ ದಂಡಕಟ್ಟಬೇಕಾಗಿ ಬಂದಿತ್ತು.[೪೧]

2005 ರಲ್ಲಿ ಮಾರ್ಕ್ ಜೆನ್, Google ಸಂಸ್ಥೆಯಲ್ಲಿ ಸಹಾಯಕ ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಗೆ ನೇಮಕಗೊಂಡ ಹತ್ತೇ ದಿನಗಳಲ್ಲಿ, ಸಾಂಸ್ಥಿಕ ರಹಸ್ಯಗಳನ್ನು ತಮ್ಮ ಖಾಸಗಿ ಬ್ಲಾಗ್ ನಲ್ಲಿ ಚರ್ಚಿಸಿದರೆನ್ನುವ ಕಾರಣಕ್ಕೆ ಹೊರಹಾಕಲ್ಪಟ್ಟರು. ಅವರು ಅದನ್ನು 99 ಸೊನ್ನೆಗಳೆಂದು ಕರೆದಿದ್ದರು ಮತ್ತು Google ಒಡೆತನದ ಬ್ಲಾಗರ್ ಸೇವೆಗಳನ್ನು ನಿರ್ವಹಿಸುತ್ತಿದ್ದರು.[೪೨] ಅವರು ಸಂಸ್ಥೆಯ ಇನ್ನೂ ಅನಾವರಣಗೊಳ್ಳದ ಉತ್ಪನ್ನಗಳ ಬಗ್ಗೆ ಹಾಗೂ ಸಂಸ್ಥೆಯು ತನ್ನ ಗಳಿಕೆಯನ್ನು ಘೋಷಿಸಿಕೊಳ್ಳುವುದಕ್ಕೆ ಒಂದು ವಾರ ಮುಂಚಿತವಾಗಿಯೇ ಅದರ ಆರ್ಥಿಕತೆಯ ಬಗ್ಗೆ ತಮ್ಮ ಬ್ಲಾಗಿನಲ್ಲಿ ಬರೆದಿದ್ದರು. ತಮ್ಮ ಬ್ಲಾಗಿನಿಂದ ಈ ಸೂಕ್ಷ್ಮ ಸಂಗತಿಗಳನುಳ್ಳ ಲೇಖನವನ್ನು ತೆಗೆದುಹಾಕುವಂತೆ ಸಹೋದ್ಯೋಗಿಯ ಕೋರಿಕೆಯನ್ನು ಮನ್ನಿಸಿದ ಎರಡು ದಿನಗಳ ಅನಂತರ ಸಂಸ್ಥೆಯಿಂದ ಹೊರಹಾಕಲ್ಪಟ್ಟರು.[೪೩]

ಭಾರತದಲ್ಲಿ, ಗೌರವ್ ಸಬ್ನಿಸ್ IIPM ಮ್ಯಾನೇಜ್ ಮೆಂಟ್ ಸ್ಕೂಲ್ ಕುರಿತು ತಪ್ಪು ಹೇಳಿಕೆಗಳುಳ್ಳ ಲೇಖನವನ್ನು ತಮ್ಮ ಬ್ಲಾಗಿನಲ್ಲಿ ಹಾಕಿದ್ದು, ಅದಕ್ಕೆ ಪ್ರತಿಭಟನೆಯಾಗಿ IIPM ನಿರ್ವಹಣಾ ಸಮಿತಿಯು ತಮ್ಮ IBM ಲ್ಯಾಪ್‌ಟಾಪ್‌ಗಳನ್ನು ಸುಟ್ಟುಹಾಕುವುದಾಗಿ ಬೆದರಿಕೆಯೊಡ್ಡಿತ್ತು. ಅದರ ಪರಿಣಾಮವಾಗಿ ಗೌರವ್ IBM ಸಂಸ್ಥೆಗೆ ರಾಜೀನಾಮೆ ನೀಡಿ ಹೊರನಡೆಯಬೇಕಾಯಿತು.[೪೪]

ಜೆಸ್ಸಿಕಾ ಕಟ್ಲರ್ ಅಲಿಯಾಸ್ “ದ ವಾಶಿಂಗ್ಟನೀನ್" ತಾನು ಕಾಂಗ್ರೆಸ್ಸಿನ ಸಹಾಯಕಿಯಾಗಿ ನೇಮಕವಾಗಿದ್ದಾಗಲೇ ತನ್ನ ಲೈಂಗಿಕ ಜೀವನದ ಬಗ್ಗೆ ಬ್ಲಾಗಿನಲ್ಲಿ ಬರೆದಿದ್ದರು. ಈ ಸಂಗತಿ ಬೆಳಕಿಗೆ ಬಂದನಂತರ ಆಕೆಯನ್ನು ವಿಚಾರಣೆಗೊಳಪಡಿಸಿ ಹುದ್ದೆಯಿಂದ ಹೊರಹಾಕಲಾಯಿತು.[೪೫] ಆಕೆಯು ತನ್ನ ಅನುಭವಗಳು ಹಾಗೂ ಬ್ಲಾಗ್ ಕುರಿತು ದ ವಾಶಿಂಗ್ಟನೀನ್- ಎ ನಾವೆಲ್ ಎಂಬ ಒಂದು ಕಾದಂಬರಿಯನ್ನೇ ಬರೆದರು.

ಪ್ರಸ್ತುತ ಕಟ್ಲರ್ ತನ್ನ ಮಾಜಿ ಪ್ರಿಯಕರನೊಬ್ಬನು ಹೂಡಿದ ಮೊಕದ್ದಮೆಯನ್ನು ಎದುರಿಸುತ್ತಿದ್ದು, ಈ ಪ್ರಕರಣವು ಬ್ಲಾಗಿಗರು ತಮ್ಮ ನಿಜ ಜೀವನದ ಸಂಗಾತಿಗಳ ಖಾಸಗಿತನವನ್ನು ಕಾಪಾಡುವ ನಿಯಮಕ್ಕೊಳಪಡಬಹುದಾದ ಸಾಧ್ಯತೆಗಳನ್ನು ಹೆಚ್ಚಿಸಿದೆ.[೪೬]

ಕ್ಯಾಥರೀನ್ ಸ್ಯಾಂಡರ್ಸನ್ ಅಲಿಯಾಸ್ ಪೆಟಿಟ್ ಆಂಗ್ಲೈಸ್, ಬ್ಲಾಗಿಂಗ್ ನ ಕಾರಣದಿಂದಾಗಿ ಪ್ಯಾರಿಸ್ ನ ಬ್ರಿಟಿಶ್ ಅಕೌಂಟೆನ್ಸಿ ಫರ್ಮ್‌ನಲ್ಲಿದ್ದ ತನ್ನ ಕೆಲಸವನ್ನು ಕಳೆದುಕೊಂಡಳು.[೪೭] ಈಕೆಯ ಬ್ಲಾಗಿನಲ್ಲಿ ಒಳ್ಳೆಯ ರೀತಿಯಲ್ಲಿಯೇ ಅನಾಮಿಕವಾಗಿ ಲೇಖನವನ್ನು ಹಾಕಲಾಗಿದ್ದರೂ ಕೂಡ ಅದರಲ್ಲಿನ ಸಂಸ್ಥೆಯ ಹಾಗೂ ಅದರ ಕೆಲವು ಉದ್ಯೋಗಿಗಳ ವಿವರಗಳು ಹೊಗಳಿಕೆಯಂತೇನೂ ಇದ್ದಿರಲಿಲ್ಲ. ಆದರೆ ಸ್ಯಾಂಡರ್ಸನ್ ಬ್ರಿಟಿಶ್ ಫರ್ಮ್ ವಿರುದ್ಧ ಪ್ರಕರಣ ದಾಖಲಿಸಿ ಪರಿಹಾರ ಧನ ಪಡೆಯುವಲ್ಲಿ ಯಶಸ್ವಿಯಾದಳು.[೪೮]

ಮತ್ತೊಂದೆಡೆ, ಪೆನೆಲೋಪ್ ಟ್ರಂಕ್, 2006ರಲ್ಲಿ ಗ್ಲೋಬ್ ನಲ್ಲಿ ಬರೆಯುತ್ತಾ, ಮೊದಲಬಾರಿಗೆ, ಹೆಚ್ಚಿನ ಸಂಖ್ಯೆಯ ಬ್ಲಾಗಿಗರು ಕಸುಬುದಾರರಾಗಿರುವರೆಂದೂ, ಚೆನ್ನಾಗಿ ಬರೆಯಲ್ಪಟ್ಟ ಬ್ಲಾಗ್‌ಗಳು ಉದ್ಯೋಗದಾತರನ್ನು ಸೆಳೆಯುತ್ತವೆಂದೂ ಬೆಟ್ಟುಮಾಡಿ ತೋರಿಸಿದರು.

ರಾಜಕೀಯ ಅಪಾಯಗಳು[ಬದಲಾಯಿಸಿ]

ಸೂಕ್ಷ್ಮ ರಾಜಕೀಯ ವ್ಯಾಪ್ತಿಯಲ್ಲಿ ಬ್ಲಾಗಿಂಗ್ ಕೆಲವು ಬಾರಿ ಅನಿರೀಕ್ಷಿತ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರುತ್ತದೆ. ಬಾನುಲಿ ಪ್ರಸಾರ ಅಥವಾ ಮುದ್ರಣ ಮಾಧ್ಯಮಗಳಿಗಿಂತ ಬ್ಲಾಗ್ ಅನ್ನು ನಿಯಂತ್ರಿಸುವುದು ಹೆಚ್ಚು ಕಠಿಣ. ತತ್ಪರಿಣಾಮವಾಗಿ, ಟೋಟಲಿಟೇರಿಯನ್ (ಸಂಪೂರ್ಣ ಜವಾಬ್ದಾರಿ ಹೊತ್ತಿರುವ) ಹಾಗೂ ಅಥಾರಿಟೇರಿಯನ್ (ಅಧಿಕಾರಯುತ) ವಲಯಗಳು ಮೇಲಿಂದ ಮೇಲೆ ಬ್ಲಾಗ್‌ಗಳನ್ನು ಹತ್ತಿಕ್ಕುವ ಮತ್ತು/ಅಥವಾ ಅವುಗಳ ನಿರ್ವಾಹಕರನ್ನು ಶಿಕ್ಷೆಗೊಳಪಡಿಸುವ ಒತ್ತಡ ತರುತ್ತಿರುತ್ತವೆ.

ಸಿಂಗಾಪುರದಲ್ಲಿ ಇಬ್ಬರು ಸಂಪ್ರದಾಯವಾದಿ ಚೀನೀಯರನ್ನು, ಅವರು ತಮ್ಮ ಬ್ಲಾಗಿನಲ್ಲಿ ಮುಸ್ಲಿಮ್ ವಿರೋಧಿ ಪ್ರತಿಕ್ರಿಯೆಗಳನ್ನು ತಮ್ಮ ಬ್ಲಾಗ್ ಪೋಸ್ಟಿನಲ್ಲಿ ದಾಖಲಿಸಿದ್ದರೆನ್ನುವ ಕಾರಣಕ್ಕಾಗಿ ದೇಶದ ಬಂಡಾಯ ಪ್ರಚೋದನೆ ವಿರೋಧಿ ಕಾನೂನಿನ ಅಡಿಯಲ್ಲಿ ಬಂಧನಕ್ಕೊಳಪಡಿಸಲಾಗಿತ್ತು.[೪೯]

ಈಜಿಪ್ಟಿನ ಬ್ಲಾಗರ್ ಕರೀಮ್ ಅಮೀರ್, ತಮ್ಮ ಬ್ಲಾಗ್ ಮೂಲಕ ಈಜಿಪ್ಟಿನ ಅಧ್ಯಕ್ಷ ಹೊಸ್ನಿ ಮುಬಾರಕ್ ರನ್ನು ಮತ್ತು ಮುಸ್ಲಿಮ್ ಸಂಸ್ಥೆಯೊಂದನ್ನು ಅವಮಾನಿಸಿದ್ದರು. ಈ ಕಾರಣಕ್ಕಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಈಜಿಪ್ಟಿನ ಇತಿಹಾಸದಲ್ಲಿ ಬ್ಲಾಗಿಗರೊಬ್ಬರು ಕಾನೂನು ಕ್ರಮಕ್ಕೆ ಒಳಗಾದ ಪ್ರಥಮ ಪ್ರಕರಣ ಇದಾಯಿತು. ಅಲೆಕ್ಸಾಂಡ್ರಿಯಾದಲ್ಲಿ ನಡೆದ ಕೂಲಂಕಷ ವಿಚಾರಣೆಯ ನಂತರ ಈ ಬ್ಲಾಗಿಗರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ, ಇಸ್ಲಾಮ್ ಅನ್ನು ಅವಮಾನಿಸಿದ ಹಾಗೂ ರಾಜದ್ರೋಹದ ಕಾರಣಗಳಿಗಾಗಿ 3 ವರ್ಷ ಮತ್ತು ಮುಬಾರಕ್ ಅವರನ್ನು ಅವಮಾನಿಸಿದ್ದಕ್ಕೆ 1 ವರ್ಷ ಕಾಲ ಸೆರೆಮನೆವಾಸದ ಶಿಕ್ಷೆ ವಿಧಿಸಲಾಯಿತು.[೫೦]

ಈಜಿಪ್ಟಿನ ಮತ್ತೊಬ್ಬ ಬ್ಲಾಗರ್ ಅಬ್ದೆಲ್ ಮೊನೆಮ್ ಮಹಮದ್ ಅವರನ್ನು ಸರ್ಕಾರದ ವಿರುದ್ಧ ತಮ್ಮ ಬ್ಲಾಗಿನಲ್ಲಿ ಬರೆದರೆನ್ನುವ ಕಾರಣಕ್ಕಾಗಿ, 2007ರಲ್ಲಿ ದಸ್ತಗಿರಿ ಮಾಡಲಾಗಿತ್ತು. ಮೊನೆಮ್, ನಿಷೇಧಿತ ಮುಸ್ಲಿಮ್ ಬ್ರದರ್ ಹುಡ್ ಸಂಘಟನೆಯ ಸದಸ್ಯರಾಗಿರುವರು

ಸೂಡಾನಿನ ವಿಶ್ವಸಂಸ್ಥೆಯ ಪ್ರತಿನಿಧಿ ಜಾನ್ ಪ್ರಾಂಕ್, ಸೂಡಾನಿನ ಸಶಸ್ತ್ರಪಡೆಗಳ ಸ್ಥಿತಿಗತಿ ಕುರಿತು ತಮ್ಮ ಖಾಸಗಿ ಬ್ಲಾಗಿನಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಈ ಕಾರಣಕ್ಕಾಗಿ ಅವರಿಗೆ ಮೂರು ದಿನಗಳಲ್ಲಿ ಸೂಡಾನ್ ತೊರೆಯುವಂತೆ ಸೂಚನೆ ನೀಡಲಾಗಿತ್ತು. ಸೂಡಾನ್ ಸೇನೆ ಅವರನ್ನು ಗಡೀಪಾರು ಮಾಡುವಂತೆ ಆಗ್ರಹಿಸಿತ್ತು.[೫೧][೫೨][೫೩]

ಮ್ಯಾನ್‌ಮಾರ್ ನಲ್ಲಿ ನೇಯ್ ಫೋನ್‌ಲ್ಯಾಟ್ ಎನ್ನುವ ಬ್ಲಾಗಿಗರು ರಾಜ್ಯದ ಮುಖ್ಯಸ್ಥ ಥಾನ್ ಶ್ವೆ ಅವರನ್ನು ಟೀಕಿಸುವ ವ್ಯಂಗ್ಯಚಿತ್ರವನ್ನು ಬ್ಲಾಗಿನಲ್ಲಿ ಹಾಕಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾದರು.[೫೪]

ವೈಯಕ್ತಿಕ ಸುರಕ್ಷೆ[ಬದಲಾಯಿಸಿ]

ಬ್ಲಾಗಿಗರ ವಿರುದ್ಧ ಬೆದರಿಕೆ ಹಾಗೂ ದಾಳಿಗಳು ನಡೆಯುವ ಸಾಧ್ಯತೆಗಳಿದ್ದು, ಕೆಲವೊಮ್ಮೆ ಸೂಕ್ತ ಕಾರಣಗಳಿಲ್ಲದೆ ಇಂತಹ ಸನ್ನಿವೇಶಗಳಿಗೆ ಒಳಗಾಗುವ ಅಪಾಯಗಳಿರುತ್ತವೆ. ಕ್ರಿಯೇಟಿಂಗ್ ಪ್ಯಾಶನೇಟ್ ಯೂಸರ್ಸ್ Archived 2021-05-01 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ನಿರುಪದ್ರವಿ ಬ್ಲಾಗಿನ ಒಡತಿ ಕೇಥಿ ಸಿಯೆರ್ರಾ ಇಂತಹ ದುರುದ್ದೇಶಿತ ಬೆದರಿಕೆಗಳಿಗೆ ಮತ್ತು ಸ್ತ್ರೀದ್ವೇಷಿ ಅವಮಾನಗಳಿಗೆ ಗುರಿಯಾಗಿದ್ದಳು ಹಾಗೂ ಈ ಕಾರಣದಿಂದಲೇ ತನ್ನ ಸುರಕ್ಷತೆಗಾಗಿ ಸ್ಯಾನ್ ಡಿಯಾಗೋದಲ್ಲಿ ಮಾಡಬೇಕಿದ್ದ ಆಶಯಭಾಷಣವನ್ನು ರದ್ದು ಮಾಡಿಕೊಂಡಳು.[೫೫] ಬ್ಲಾಗಿಗರ ಅನಾಮಿಕತೆಯೊಂದು ಸೂಕ್ಷ್ಮ ಸಂಗತಿಯಾಗಿದ್ದು, ಬ್ಲಾಗಿಗರನ್ನು ಬೆದರಿಸುವ ಅಥವಾ ಅವಮಾನಿಸುವಂಥವರು ಅಂತರ್ಜಾಲದ ಗಾಳಕ್ಕೆ ಸಿಲುಕದೆ ಅನಾಮಿಕತೆಯಿಂದ ಹೆಚ್ಚಿನ ಪ್ರೋತ್ಸಾಹ ಗಳಿಸಿಕೊಳ್ಳುತ್ತಾರೆ. ಸಿಯೆರ್ರಾ ಮತ್ತ ಅಕೆಯ ಬೆಂಬಲಿಗರು,[೫೬] ಅಂತರ್ಜಾಲದಲ್ಲಿ ಅಸಭ್ಯವಾದ ನಡವಳಿಕೆಯನ್ನು ಗುರಿಯಾಗಿಟ್ಟುಕೊಂಡು ಆನ್‌ಲೈನ್ ಚರ್ಚೆಗಳನ್ನು ಏರ್ಪಡಿಸಿದರು ಮತ್ತು ಬ್ಲಾಗಿಗರ ನಡವಳಿಕೆಗೆ ನೀತಿಸಂಹಿತೆಯನ್ನು ರೂಪಿಸಿದರು.

ಇತಿಹಾಸ[ಬದಲಾಯಿಸಿ]

“ವೆಬ್ಲಾಗ್" ಎನ್ನುವ ಪದವನ್ನು ಜಾನ್ ಬರ್ಗರ್[೫೭] ಎನ್ನುವವರು 17 ಡಿಸೆಂಬರ್ 1997ರಂದು ಬಳಕೆಗೆ ತಂದರು. ಇದರ ಸಂಕ್ಷೇಪ ರೂಪ “ಬ್ಲಾಗ್" ಅನ್ನು ಚಾಲ್ತಿಗೆ ತಂದವರು ಪೀಟರ್ ಮೆರ್ಹೋಲ್ಜ್. 1996ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅವರು ತಮಾಷೆಗೆಂದು ವೆಬ್ ಲಾಗ್ ಅನ್ನುವ ಪದವನ್ನು ಕ್ರಿಯಪದವಾಗಿಸಿ ವಿ ಬ್ಲಾಗ್ ಎಂದು ಒಡೆದು ತಮ್ಮ ಬ್ಲಾಗ್ peterme.ಕಂ ನ ಸೈಡ್ ಬಾರಿನಲ್ಲಿ ಹಾಕಿಕೊಂಡರು.[೫೮][೫೯][೬೦] ಅನತಿಕಾಲದಲ್ಲಿಯೇ ಇವಾನ್ ವಿಲಿಯಮ್ಸ್ ತಮ್ಮ ಪೈರಾ ಲ್ಯಾಬ್ಸ್ ನಲ್ಲ್ಲಿ “ಬ್ಲಾಗ್" ಪದವನ್ನು ನಾಮಪದ ಹಾಗೂ ಕ್ರಿಯಾಪದಗಳೆರಡೂ ಬಗೆಯಲ್ಲಿ ಬಳಸಿದರು (“ಟು ಬ್ಲಾಗ್" ನ ಅರ್ಥ “ವೆಬ್ಲಾಗ್ ಅನ್ನು ತಿದ್ದುವುದು ಅಥವಾ ವೆಬ್ಲಾಗಿನಲ್ಲಿ ಹೊಸ ಲೇಖನವನ್ನು ಹಾಕುವುದು ಎಂದಾಯಿತು) ಮತ್ತು “ಬ್ಲಾಗರ್" ಎಂಬ ಪದವನ್ನು ಪೈರಾ ಲ್ಯಾಬ್ಸ್ ಬ್ಲಾಗರ್ ಉತ್ಪನ್ನಗಳಿಗೆ ತಳಕುಹಾಕಿ ಚಾಲ್ತಿಗೆ ತಂದರು. ಇದು ಈ ಪದಗಳ ಜನಪ್ರಿಯತೆಗೆ ನಾಂದಿಯಾಯಿತು.[೬೧]

ಮೂಲಗಳು[ಬದಲಾಯಿಸಿ]

ಬ್ಲಾಗಿಂಗ್ ಜನಪ್ರಿಯಗೊಳ್ಳುವ ಮುನ್ನ ಡಿಜಿಟಲ್ ಸಮುದಾಯಗಳು ಯೂಸರ್ ನೆಟ್ ಅನ್ನೂ ಒಳಗೊಂಡಂತೆ, ವಾಣಿಜ್ಯಕ ಆನ್‌ಲೈನ್ ಸೇವೆಗಳಾದ GEnie, BiX ಹಾಗೂ ಆರಂಭದ ದಿನಗಳ CompuServe, ಇ-ಮೇಲ್ ಪಟ್ಟಿಗಳು[೬೨] ಮತ್ತು ಬುಲೆಟಿನ್ ಬೋರ್ಡ್ ಸಿಸ್ಟಮ್ (BBS) ಮೊದಲಾದ ಹಲವು ಸ್ವರೂಪಗಳನ್ನು ಪಡೆದಿದ್ದವು. 19990ರ ಅವಧಿಯಲ್ಲಿ,WebExನಂತಹ ಇಂಟರ್ ನೆಟ್ ಫೋರಮ್ ತಂತ್ರಾಶವು “ಥ್ರೆಡ್ಸ್" ಮೂಲಕ ಸಂಭಾಷಣೆಯ ನಿರಂತರತೆಗೆ ಅವಕಾಶ ಮಾಡಿಕೊಟ್ಟಿತ್ತು. ಥ್ರೆಡ್ಸ್, ಅಲಂಕಾರಿಕ “ಕಾರ್ಕ್ ಬೋರ್ಡಿನ" ಮೇಲೆ ಸಂದೇಶಗಳ ನಡುವೆ ಸಂಪರ್ಕ ಕಲ್ಪಿಸಿಕೊಡುವ ಮಾಧ್ಯಮವಾಗಿ ವರ್ತಿಸುತ್ತಿದ್ದವು.

ಇತ್ತೀಚಿನ ಬ್ಲಾಗ್, ಜನರು ತಮ್ಮ ವೈಯಕ್ತಿಕ ವಿವರಗಳನ್ನು ನಿರಂತರವಾಗಿ ದಾಖಲಿಸಿಡಬಹುದಾದ ಆನ್ ಲೈನ್ ದಿನಚರಿ ಪರಿಕಲ್ಪನೆಯ ಆಧಾರದ ಮೇಲೆ ವಿಕಸಿತಗೊಂಡಿದೆ. ಈ ಬಗೆಯ ಬರಹಗಾರರು ತಮ್ಮನ್ನು ತಾವು ಡೈರಿಸ್ಟ್, ಜರ್ನಲಿಸ್ಟ್ ಅಥವಾ ಜರ್ನಲರ್ ಗಳೆಂದು ಕರೆದುಕೊಳ್ಳುತ್ತಾರೆ. ಜಸ್ಟಿನ್ ಹಾಲ್, 1994 ರಲ್ಲಿ ಸ್ವಾರ್ತ್ ಮೋರ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಖಾಸಗಿ ಬ್ಲಾಗನ್ನು ಆರಂಭಿಸಿದರು. ಇವರು ಜೆರ್ರಿ ಪೌರ್ನೆಲ್ಲರಂತೆ [೬೩] ಆರಂಭಿಕ ಬ್ಲಾಗರುಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುತ್ತಾರೆ.[ಸಾಕ್ಷ್ಯಾಧಾರ ಬೇಕಾಗಿದೆ] ಡೇವ್ ವಿನ್ನರ್ ಅವರ ಸ್ಕ್ರಿಪ್ಟಿಂಗ್ ನ್ಯೂಸ್ ಕೂಡ ಹಳೆಯ ಹಾಗೂ ಅತಿ ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಬ್ಲಾಗುಗಳಲ್ಲಿ ಒಂದೆಂಬ ಹೆಗ್ಗಳಿಕೆ ಪಡೆದಿದೆ.[೬೪][೬೫] 1994ರ ಸುಮಾರಿನ ಆರಂಭಿಕ ದಿನಗಳ ಒಂದು ಬ್ಲಾಗ್ ವಿಧ ವೇರೆಬಲ್ ವೈರ್ ಲೆಸ್ ವೆಬ್ ಕ್ಯಾಮ್, ವ್ಯಕ್ತಿಯೊಬ್ಬನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿವರಗಳಿಂದ ಕೂಡಿದ ಆನ್‌‌ಲೈನ್ ದಿನಚರಿಯಂತಿದ್ದು, ಪಠ್ಯ, ವಿಡಿಯೋ ದೃಶ್ಯಗಳು ಹಾಗೂ ನೇರವಾಗಿ ವೇರೆಬಲ್ ಕಂಪ್ಯೂಟರ್ ಹಾಗೂ EyeTap ಸಾಧನಗಳಿಂದ ಜಾಲತಾಣಕ್ಕೆ ವರ್ಗಾಯಿಸಲ್ಪಟ್ಟ ಚಿತ್ರಗಳ ಸಂಯೋಜನೆಯಾಗಿತ್ತು. ನೇರ ವಿಡಿಯೋ ಹಾಗೂ ಪಠ್ಯಗಳ ಸಂಯೋಜನೆಯ ಸೆಮಿ ಆಟೊಮೋಟೆಡ್ ಬ್ಲಾಗಿಂಗ್ ನ ಈ ರೂಢಿಯು ಸೌಸ್‌ವೀಲೆನ್ಸ್ (sousveillance) ಎಂದು ಗುರುತಿಸಲ್ಪಡುತ್ತಿತ್ತು. ಇಂತಹ ದಾಖಲೆಗಳು ಸಾಮಾನ್ಯವಾಗಿ ಕಾನೂನು ಪ್ರಕ್ರಿಯೆಗಳಲ್ಲಿ ಸಾಕ್ಷಿಗಳಾಗಿ ಬಳಸಲ್ಪಡುತ್ತಿದ್ದವು

ಆರಂಭಿಕ ಬ್ಲಾಗ್‌ಗಳು ಸರಳವಾಗಿ, ಸ್ವತಃ ನಾವೇ ನಿರ್ವಹಿಸಬೇಕಿದ್ದ ಸಾಮಾನ್ಯ ಜಾಲತಾಣದ ಅಂಗಗಳಾಗಿದ್ದವು. ಜಾಲಬರಹಗಳಿಗೆ ಅನುಕೂಲ ಮಾಡಿಕೊಡಲಿಕ್ಕಾಗಿ ಹಲವು ಸಾಧನಗಳು ವಿಕಸಿತಗೊಂಡು ನಿರ್ವಹಣೆ ಕಾರ್ಯ ಸುಲಭಗೊಂಡಿತು. ಲೇಖನಗಳು ತಿರುವುಮುರುವಾದ ಕ್ರಮಾಂಕದಲ್ಲಿ ಪ್ರದರ್ಶಿತಗೊಳ್ಳುವ ಅನುಕೂಲತೆಯು ಬ್ಲಾಗ್ ನಿರ್ವಹಣೆಯನ್ನು ಮತ್ತಷ್ಟು ಸುಲಭವೂ, ಕಡಿಮೆ ತಾಂತ್ರಿಕವೂ ಹಾಗೂ ಮಾನವ ಹಸ್ತಕ್ಷೇಪ ಹೆಚ್ಚು ಅಗತ್ಯವಿರದಂಥದನ್ನಾಗಿಯೂ ಮಾಡಿತು. ಆತ್ಯಂತಿಕವಾಗಿ ಇದು, ವಿವಿಧ ವರ್ಗಗಳ ಆನ್‌ಲೈನ್ ಪ್ರಕಾಶನದಿಂದಾಗಿ ಇಂದು ನಾವು ಗುರುತಿಸುವ ಬ್ಲಾಗ್‌ಗಳ ಸೃಷ್ಟಿಗೆ ಕಾರಣವಾಯಿತು. ಒಂದು ಬಗೆಯ ಬ್ರೌಸರ್ ಆಧಾರಿತ ತಂತ್ರಾಂಶದ ಬಳಕೆಯು ಈಗ “ಬ್ಲಾಗಿಂಗ್"ನ ಅತಿ ಸಮರ್ಪಕ ನಿರೂಪಣೆಯಾಗಿರುವುದು ಇದಕ್ಕೆ ನಿದರ್ಶನವಾಗಿದೆ. ಬ್ಲಾಗ್‌ಗಳನ್ನು ಪೂರ್ಣಾವಧಿ ಬ್ಲಾಗ್ ಹೋಸ್ಟಿಂಗ್ ಸೇವೆಗಳ ಮೂಲಕ ನಿರ್ವಹಿಸಬಹುದು. ಅಥವಾ ಬ್ಲಾಗ್ ತಂತ್ರಾಂಶ ಅಥವಾ ನಿಯಮಿತ ವೆಬ್ ಹೋಸ್ಟಿಂಗ್ ಸೇವೆಗಳ ಮೂಲಕ ನಿಭಾಯಿಸಬಹುದು.

ಜನಪ್ರಿಯತೆಯಲ್ಲಿ ಹೆಚ್ಚಳ[ಬದಲಾಯಿಸಿ]

ನಿಧಾನವಾಗಿ ಆರಂಭಗೊಂಡ ಬ್ಲಾಗಿಂಗ್ ಪ್ರಕ್ರಿಯೆಯು ವೇಗದ ತಿರುವನ್ನು ಪಡೆದುಕೊಂಡು ಜನಪ್ರಿಯತೆಯ ತುದಿಗೇರಿತು. ಬ್ಲಾಗ್ ಬಳಕೆಯು 1999ರಲ್ಲಿ ವ್ಯಾಪಕಗೊಳ್ಳುತ್ತ ಸಾಗಿ, ಮುಂದಿನ ದಿನಗಳಲ್ಲಿ ಒಟ್ಟೊಟ್ಟಿಗೆ ಬಳಕೆಗೆ ತೆರೆದುಕೊಂಡ ಬ್ಲಾಗ್ ಹೋಸ್ಟಿಂಗ್ ಸಾಧನಗಳಿಂದ ಮತ್ತಷ್ಟು ಜನಪ್ರಿಯತೆ ಪಡೆಯಿತು:

 • ಬ್ರೂಸ್ ಅಬೆಲ್ಸನ್ 1998ರ ಅಕ್ಟೋಬರ್ ತಿಂಗಳಲ್ಲಿ ಓಪನ್ ಡೈರಿಯನ್ನು ಆರಂಭಿಸಿದರು. ಅದು ಅತಿ ಶೀಘ್ರದಲ್ಲಿಯೇ ಸಾವಿರಾರು ಆನ್‌ಲೈನ್ ದಿನಚರಿಗಳ ಆರಂಭಕ್ಕೆ ಕಾರಣವಾಯಿತು.

ಓಪನ್ ಡೈರಿ ಓದುಗರ ಪ್ರತಿಕ್ರಿಯೆಗಳನ್ನು ದಾಖಲಿಸುವ ಮಾರ್ಗವನ್ನು ಪರಿಚಯಿಸಿತು. ತನ್ಮೂಲಕ, ಓದುಗರು ಇತರ ಬ್ಲಾಗಿಗರ ಬ್ಲಾಗ್ ಲೇಖನಗಳಿಗೆ ಪ್ರತಿಕ್ರಿಯೆ ನೀಡುವ ಅವಕಾಶ ಕಲ್ಪಿಸಿದ ಮೊದಲ ಬ್ಲಾಗ್ ಸಮುದಾಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

 • ಬ್ರಾಡ್ ಫಿಟ್ಜ್ ಪ್ಯಾಟ್ರಿಕ್ ಲೈವ್‌ಜರ್ನಲ್ ಅನ್ನು ಮಾರ್ಚ್ 1999ರಲ್ಲಿ ಆರಂಭಿಸಿದರು.
 • ಆಂಡ್ರ್ಯೂ ಸ್ಮಾಲ್ಸ್ pitas.com ಅನ್ನು ಜುಲೈ 1999ರಲ್ಲಿ ಆರಂಭಿಸಿದರು. ಇದು ಜಾಲತಾಣದಲ್ಲಿ ‘ನ್ಯೂಸ್ ಪೇಜ್’ ನಿರ್ವಹಣೆಗೆ ಪರ್ಯಾಯಮಾರ್ಗ ರೂಪಿಸಿದ ಆರಂಭಿಕ ತಾಣವಾಗಿತ್ತು. ಮುಂದೆ 1999ರ ಸೆಪ್ಟೆಂಬರ್ ನಲ್ಲಿ ಅದನ್ನು ಅನುಸರಿಸಿದ ಡೈರಿಲ್ಯಾಂಡ್, ಖಾಸಗಿ ದಿನಚರಿ ಸಮುದಾಯಕ್ಕೆ ಹೆಚ್ಚಿನ ಒತ್ತುನೀಡಿತು.[೬೬]
 • ಇವಾನ್ ವಿಲಿಯಮ್ಸ್ ಮತ್ತು ಮೆಗ್ ಹೌರಿಹನ್ ಪೈರಾ ಲ್ಯಾಬ್ಸ್ blogger.com ಅನ್ನು 1999ರ ಅಗಸ್ಟ್ ತಿಂಗಳಿನಲ್ಲಿ ಆರಂಭಿಸಿದರು (2003ರ ಫೆಬ್ರವರಿಯಲ್ಲಿ Googleಸಂಸ್ಥೆ ಇದನ್ನು ಖರೀದಿಸಿತು)

ರಾಜಕೀಯ ಪರಿಣಾಮ[ಬದಲಾಯಿಸಿ]


ಇದನ್ನೂ ನೋಡಿ: ರಾಜಕೀಯ ಬ್ಲಾಗ್

2002ರಿಂದೀಚೆಗೆ ಬ್ಲಾಗ್‌ಗಳು ಸುದ್ದಿಸ್ಫೋಟ, ರೂಪಿಸುವಿಕೆ ಹಾಗೂ ಸುದ್ದಿ ಕಥೆಗಳ ನೇಯುವಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಗಮನ ಸೆಳೆಯುತ್ತ ವ್ಯಾಪಕ ಪ್ರಚಾರ ಪಡೆಯತೊಡಗಿವೆ.

ಇರಾಕ್ ಯುದ್ಧ ಸಂದರ್ಭದಲ್ಲಿ ಬ್ಲಾಗಿಗರು ಸಾಂಪ್ರದಾಯಿಕವಾದ ರಾಜಕೀಯ ದೃಷ್ಟಿಕೋನಎಡ-ಬಲಗಳಿಗೆ ಅತೀತವಾಗಿ ಅಳತೆಗೋಲುಗಳಿಂದ ಭಿನ್ನ ಒಳನೋಟಗಳನ್ನು ಪ್ರಸ್ತುತಪಡಿಸಿದ್ದರು.

ಚಿತ್ರ:Talkingpointsmemo2.png
6 ಡಿಸೆಂಬರ್ 2002ರಂದು ಜೋಶ್ ಮಾರ್ಶೆಲ್ಲರ alkingpointsmemo.com ಬ್ಲಾಗ್, ಅಮೆರಿಕೆಯ ಹಿರಿಯ ಸೆನೆಟರ್ ಲೊಟ್ ಅವರು ಸೆನೆಟರ್ ಥರ್ಮೊಂಡ್ ಅವರ ಕುರಿತು ನೀಡಿದ ಹೇಳಿಕೆಯ ಬಗ್ಗೆ ಬರೆದು ಗಮನ ಸೆಳೆಯಿತು ಮುಂದೆ ಸೆನೆಟರ್ ಲೊಟ್ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಬೇಕಾಗಿ ಬಂತು.

ಬ್ಲಾಗ್‌ಗಳ ಪ್ರಾಮುಖ್ಯತೆ ಹೆಚ್ಚಿದುದಕ್ಕೆ, 2002ರಲ್ಲಿ ಹಲವು ಬ್ಲಾಗುಗಳು ಅಮೆರಿಕ ಶಾಸನ ಸಭೆಯ ಬಹುಸಂಖ್ಯಾಕ ಸದಸ್ಯರ ನೇತಾರ ಟ್ರೆಂಟ್ ಲೊಟ್ ಅವರ ಪ್ರತಿಕ್ರಿಯೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದನ್ನು ಉದಾಹರಿಸಬಹುದು. ಸೆನೆಟರ್ ಲೊಟ್, ಅಮೆರಿಕದ ಸೆನೆಟರ್ ಸ್ಟ್ರೋಮ್ ಥರ್ಮೊಂಡ್ ಅವರ ಗೌರವಾರ್ಥ ಕೂಟದಲ್ಲಿ ಥರ್ಮೊಂಡರನ್ನು ಹೊಗಳುತ್ತಾ, ಅಮೆರಿಕ ಸಂಯುಕ್ತ ಸಂಸ್ಥಾನವು ಥರ್ಮೊಂಡ್ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿದ್ದಿದ್ದರೆ ಇನ್ನೂ ಹೆಚ್ಚಿನ ಒಳಿತಾಗಿರುತ್ತಿತ್ತೆಂದು ಅಭಿಪ್ರಾಯಪಟ್ಟಿದ್ದರು. ಲೊಟ್ಟ್ ಅವರ ಟೀಕಾಕಾರರು ಈ ಪ್ರತಿಕ್ರಿಯೆಯನ್ನು ಥರ್ಮೊಂಡರು ತಮ್ಮ 1948ರ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯ ಪ್ರಚಾರ ಸಂದರ್ಭದಲ್ಲಿ ಪ್ರತಿಪಾದಿಸಿದ್ದ ವರ್ಣೀಯ ಪ್ರತ್ಯೇಕತಾವಾದದ ಮೌನ ಅನುಮೋದನೆಯಾಗಿ ಕಂಡರು. ಈ ನೋಟವು ಬ್ಲಾಗರುಗಳು ಅಗೆದು ತೆಗೆದ ದಾಖಲೆಗಳು ಹಾಗೂ ಸಂಗ್ರಹಿತ ಸಂದರ್ಶನಗಳ ಮೂಲಕ ಪುನರ್ಚರ್ಚೆಗೆ ಒಳಗಾಯಿತು. (ನೋಡಿ: ಜೋಶ್ ಮಾರ್ಶೆಲ್ಲರ ಟಾಕಿಂಗ್ ಪಾಯಿಂಟ್ಸ್ ಮೆಮೊ ) ಲೊಟ್ ಅವರ ಹೇಳಿಕೆಗಳು ಮಾಧ್ಯಮ ಪ್ರತಿನಿಧಿಗಳು ಕೂಡ ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನೀಡಲ್ಪಟ್ಟವಾದರೂ, ಯಾವ ಪ್ರಮುಖ ಮಾಧ್ಯಮ ಸಂಸ್ಥೆಯೂ ಈ ವಿವಾದಾತ್ಮಕ ಹೇಳಿಕೆಯನ್ನು ಬ್ಲಾಗರುಗಳು ಸುದ್ದಿ ಮಾಡುವತನಕ ವರದಿ ಮಾಡಿರಲಿಲ್ಲ. ಲೊಟ್ ಅವರು ಬಹುಸಂಖ್ಯಾಕ ಸದಸ್ಯರ ನೇತಾರ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸುವ ಮಟ್ಟಿಗೆ ರಾಜಕೀಯ ಒತ್ತಡ ಸೃಷ್ಟಿಸುವಲ್ಲಿ ಬ್ಲಾಗುಗಳ ಕೊಡುಗೆ ಹೆಚ್ಚಿನದಾಗಿತ್ತು.

ಇದೇ ಪ್ರಕಾರವಾಗಿ “ರಾದರ್‌ಗೇಟ್" ಹಗರಣವನ್ನು ಬಯಲುಗೊಳಿಸಿದ ಹಿನ್ನೆಲೆಯಲ್ಲಿಯೂ ಬ್ಲಾಗುಗಳ ವಿಶೇಷ ಕೊಡುಗೆಯಿತ್ತು. (ಕಿರುತೆರೆ ಪತ್ರಕರ್ತ)ಡ್ಯಾನ್ ರಾದರ್ (CBS 60 ಮಿನಟ್ಸ್ ಷೋದಲ್ಲಿ) ಅಧ್ಯಕ್ಷ ಬುಷ್ ಅವರ ಮಿಲಿಟರಿ ಸೇವೆಯ ಪುರಾವೆಗಳ ಬಗ್ಗೆ ಭಿನ್ನಾಭಿಪ್ರಾಯವುಳ್ಳ ಕೆಲವು ದಾಖಲೆಗಳನ್ನು ಪ್ರಸ್ತುತಪಡಿಸಿದ್ದರು. ಬ್ಲಾಗರುಗಳು ಈ ದಾಖಲೆಗಳೆಲ್ಲ ನಕಲಿಯೆಂದು ಘೋಷಿಸಿ, ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಹಾಗೂ ವಾದಗಳನ್ನು ಮಂಡಿಸಿದರು. ಇದಕ್ಕೆ ಸರಿಯಾಗಿ CBS ಕೂಡ, ತಾನು ಬಿತ್ತರಿಸಿದ ಮಾಹಿತಿಯು ಅಸಂಬದ್ಧ ವರದಿಗಾರಿಕೆಯಾಗಿತ್ತೆಂದು ಕ್ಷಮಾಪಣೆ ಕೇಳಿತು. (ನೋಡಿ: ಲಿಟ್ಲ್ ಗ್ರೀನ್ ಫುಟ್ ಬಾಲ್ಸ್) ಬಹುತೇಕ ಬ್ಲಾಗರುಗಳು ಈ ಹಗರಣವನ್ನು, ಸಮೂಹ ಮಾಧ್ಯಮವು ಬ್ಲಾಗುಗಳನ್ನು ಸುದ್ದಿ ಮೂಲವಾಗಿ ಹಾಗೂ ಜನಾಭಿಪ್ರಾಯ ಮತ್ತು ರಾಜಕೀಯ ಒತ್ತಡ ಹೇರಿಕೆಯ ಮಾಧ್ಯಮವಾಗಿ ಒಪ್ಪಿಕೊಂಡಿರುವ ಸೂಚನೆಯೆಂದು ಪರಿಗಣಿಸಿದರು.

ಈ ಘಟನೆಗಳ ಪರಿಣಾಮವು ಬ್ಲಾಗುಗಳನ್ನು ಸುದ್ದಿ ಪ್ರಸಾರದ ಉನ್ನತ ಮಾಧ್ಯಮವೆಂಬ ವಿಶ್ವಾಸಾರ್ಹತೆಗೆ ಒಳಪಡಿಸಿತು. ಬಹುತೇಕ ಹರಟೆಯ ವೇದಿಕೆಯಾಗಿ ಕಂಡುಬಂದರೂ, ಬ್ಲಾಗಿಗರು ಕೆಲವು ಬಾರಿ ಸೂಕ್ಷ್ಮಸಂಗತಿಗಳನ್ನು ಜನರ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುವರು, ಹಾಗೂ ಮಾಧ್ಯಮದ ಮುಖ್ಯ ವಾಹಿನಿಯು ತಮ್ಮನ್ನು ಅನುಸರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವರು. ಇನ್ನೂ ಬಹಳ ಬಾರಿ ಸುದ್ದಿ ಬ್ಲಾಗುಗಳು, ಮುಖ್ಯವಾಹಿನಿ ಮಾಧ್ಯಮದಲ್ಲಿ ಬಿತ್ತರವಾದ ಸುದ್ದಿಗಳಿಗೆ ಪ್ರತಿಕ್ರಿಯಿಸುವ ಕೆಲಸ ಮಾಡುವವು. ಹಾಗೆಯೇ, ಹೆಚ್ಚಿನ ಸಂಖ್ಯೆಯ ಅನುಭವಿ ಬ್ಲಾಗಿಗರು ಬ್ಲಾಗುಗಳನ್ನು ಗಹನ ವಿಶ್ಲೇಷಣೆಯ ಆಕರಗಳನ್ನಾಗಿ ಮಾಡಿರುವರು. (ನೋಡಿ: ಡೇನಿಯಲ್ ಡ್ರೆಜ್ನರ್, ಜೆ.ಬ್ರಾಡ್ ಫೋರ್ಡ್ ಡೆಲಾಂಗ್ ಅಥವಾ ಬ್ರಾಡ್ ಸೆಟ್ಸರ್)

ಮುಖ್ಯವಾಹಿನಿಯ ಜನಪ್ರಿಯತೆ[ಬದಲಾಯಿಸಿ]

2004ರ ವೇಳೆಗೆ ಬ್ಲಾಗುಗಳು ರಾಜಕೀಯ ಸಲಹೆಗಾರಿಕೆ, ಸುದ್ದಿ ಸೇವೆಗಳನ್ನು ಒದಗಿಸುವ ಮೂಲಕ ಮುಖ್ಯವಾಹಿನಿಯ ಹಂತಕ್ಕೇರಿ ತನ್ನ ಪಾತ್ರವನ್ನು ನಿರ್ವಹಿಸಲಾರಂಭಿಸಿದವು. ಹಾಗೂ ಅಭ್ಯರ್ಥಿಗಳು ಅದನ್ನು ಜನಸಂಪರ್ಕದ ಹಾಗೂ ಅಭಿಪ್ರಾಯ ರೂಪಿಸುವ ಸಾಧನವಾಗಿ ಬಳಸಲಾರಂಭಿಸಿದರು. ರಾಜಕಾರಣಿಗಳು ಹಾಗೂ ರಾಜಕಾರಣದ ಅಭ್ಯರ್ಥಿಗಳು ಬ್ಲಾಗಿಸುವಿಕೆಯನ್ನು ಯುದ್ಧ ಮತ್ತಿತರ ಘಟನೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಮಾಧ್ಯಮವನ್ನಾಗಿ ಸ್ಥಾಪಿಸಿದರು ಮತ್ತು ಬ್ಲಾಗುಗಳ ಪಾತ್ರವನ್ನು ಸುದ್ದಿ ಮೂಲವಾಗಿ ಗಟ್ಟಿಗೊಳಿಸಿದರು. (ನೋಡಿ: ಹೊವಾರ್ಡ್ ಡೀನ್ ಮತ್ತು ವೆಸ್ಲಿ ಕ್ಲಾರ್ಕ್) ಯುನೈಟೆಡ್ ಕಿಂಗ್‌ಡಂ ನ ಲೇಬರ್ ಪಕ್ಷದ ಸಂಸತ್ ಸದಸ್ಯ ಟಾಮ್ ವ್ಯಾಟ್ಸನ್ನರಂತಹಪ್ರಚಾರ ನಿರತರಲ್ಲದ ರಾಜಕಾರಣಿಗಳು ಕೂಡ ಜನಪ್ರತಿನಿಧಿ ಆಯ್ಕೆಯ ಪ್ರಕ್ರಿಯೆಗಳೊಂದಿಗೆ ಬೆಸೆದುಕೊಳ್ಳಲು ಬ್ಲಾಗನ್ನು ಆರಂಭಿಸಿದರು.

ಜನವರಿ 2005ರಲ್ಲಿ ಫಾರ್ಚ್ಯೂನ್ ಪತ್ರಿಕೆಯು ಉದ್ಯಮಿಗಳು “ಉಪೇಕ್ಷೆ ಮಾಡಲಾಗದಂತಹ" 8 ಬ್ಲಾಗರುಗಳ ಪಟ್ಟಿಯನ್ನು ಪ್ರಕಟಿಸಿತ್ತು: ಪೀಟರ್ ರೋಜಾಸ್, ಕ್ಸೆನಿ ಜರ್ಡಿನ್, ಬೆನ್ ಟ್ರೊಟ್, ಮೆನಾ ಟ್ರೊಟ್, ಜೊನಾಥನ್ ಶ್ವಾರ್ಟ್ಜ್, ಜಾಸನ್ ಗೋಲ್ಡ್‌ಮನ್, ರಾಬರ್ಟ್ ಸ್ಕೋಬ್ಲ್, ಮತ್ತು ಜಾಸನ್ ಕಾಲ್ಕನಿಸ್

ಇಸ್ರೇಲ್, ಸರ್ಕಾರಿ ಬ್ಲಾಗನ್ನು ಆರಂಭಿಸಿದ ರಾಷ್ಟ್ರಗಳಲ್ಲಿ ಮೊದಲನೆಯದಾಗಿತ್ತು.[೬೭] ಇಸ್ರೇಲಿನ ವಿದೇಶ ವ್ಯವಹಾರಗಳ ಸಚಿವ ಡೇವಿಡ್ ಸಾರಂಗ ಅವರ ಮುಂದಾಳುತ್ವದಲ್ಲಿ ಸರ್ಕಾರವು Web 2.0 ಸೌಲಭ್ಯಗಳನ್ನು ಸಕ್ರಿಯವಾಗಿ ಅಳವಡಿಸಿಕೊಂಡು ವಿಡಿಯೋ ಬ್ಲಾಗ್[೬೭] ಮತ್ತು ರಾಜಕೀಯ ಬ್ಲಾಗ್ ಗಳನ್ನು ನಡೆಸಲಾರಂಭಿಸಿತು.[೬೮] ವಿದೇಶೀ ವ್ಯವಹಾರಗಳ ಸಚಿವಾಲಯವು ಹಮಾಸ್ ವಿರುದ್ಧದ ತನ್ನ ಯುದ್ಧವನ್ನು ಕುರಿತು ಜನಸಮಾನ್ಯರು ಪಠ್ಯಸಂದೇಶಗಳ ಮೂಲಕ ಕೇಳುವ ಪ್ರಶ್ನೆಗಳಿಗೆ ಸಾರಂಗ ಅವರು ಉತ್ತರಿಸುವ ವಿಶ್ವವ್ಯಾಪಿ ನೇರ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ, ಮೈಕ್ರೋಬ್ಲಾಗಿಂಗ್ ಪತ್ರಿಕಾ ಗೋಷ್ಠಿಯನ್ನು Twitter ಮೂಲಕ ಏರ್ಪಡಿಸಿತ್ತು.[೬೯] ಈ ಪ್ರಶ್ನೋತ್ತರಗಳು ಮುಂದಿನ ದಿನಗಳಲ್ಲಿ ಪತ್ರಮುಖೇನ ಇಸ್ರೇಲ್ ಪೊಲಿಟಿಕ್ ಎಂಬ ದೇಶದ ಆಡಳಿತ ವಿಭಾಗದ ರಾಜಕೀಯ ಬ್ಲಾಗ್ ನಲ್ಲಿ ಪ್ರಕಟಗೊಂಡವು.[೭೦]

ಇದನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ವೆಬ್ಲಾಗ್ಸ್: ಎ ಹಿಸ್ಟರಿ ಅಂಡ್ ಪರ್ಸ್ಪೆಕ್ಟಿವ್, ರೆಬೆಕ್ಕಾ ಬ್ಲಡ್, ಸೆಪ್ಟೆಂಬರ್ 7, 2000.
 2. "Welcome to Technorati". unknown. Archived from the original on 2006-11-08. Retrieved 2008-06-05. {{cite web}}: Check date values in: |date= (help)
 3. ಸ್ಟೀಫನ್ ಮೆಟ್ಕಾಫ್, “ಫಿಕ್ಸಿಂಗ್ ಎ ಹೋಲ್", ನ್ಯೂಯಾರ್ಕ್ ಟೈಮ್ಸ್ , ಮಾರ್ಚ್ 2006
 4. ಜೆನ್ನಿಫರ್ ಸರನೊವ್, “ಬ್ಲಾಗ್ ವಾಚ್: ದಿಸ್ ಓಲ್ಡ್ ಹೌಸ್", ವಾಲ್ ಸ್ಟ್ರೀಟ್ ಜರ್ನಲ್ , ಸೆಪ್ಟೆಂಬರ್ 2007
 5. "ಆರ್ಕೈವ್ ನಕಲು". Archived from the original on 2010-01-18. Retrieved 2009-10-29.
 6. http://www.post-gazette.com/pg/07304/829747-51.stm
 7. "ಆರ್ಕೈವ್ ನಕಲು". Archived from the original on 2009-07-21. Retrieved 2009-10-29.
 8. "ಆರ್ಕೈವ್ ನಕಲು". Archived from the original on 2008-05-15. Retrieved 2021-08-29.
 9. https://www.nytimes.com/2008/07/27/fashion/27blogher.html?_r=2&sq=blogher%20women%20blogging&st=cse&adxnnl=1&scp=1&adxnnlx=1228493929-MAKTyKJ3qiW/+fidCwXbFg
 10. "What is a photoblog". Photoblogs.org Wiki. Archived from the original on 2007-03-20. Retrieved 2006-06-25.
 11. "Blogging goes mobile". BBC News. 2003-02-23. Retrieved 2008-06-05.
 12. "Welcome to Technorati". unknown. Archived from the original on 2008-02-05. Retrieved 2008-06-25. {{cite web}}: Check date values in: |date= (help)
 13. name=``MyBlogLog">"About MyBlogLog". MyBlogLog. Archived from the original on 2007-06-29. Retrieved 2007-06-29.
 14. Gogoi, Pallavi (2006-10-09). "Wal-Mart's Jim and Laura: The Real Story". BusinessWeek. Retrieved 2008-08-06.
 15. ಮರ್ಲೋ,ಸಿ. ಆಡಿಯೆನ್ಸ್, ಸ್ಟ್ರಕ್ಚರ್ ಅಂಡ್ ಅಥಾರಿಟಿ ಇನ್ ದ ವೆಬ್ಲಾಗ್ ಕಮ್ಯುನಿಟಿ Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.. ಮೇ 2004ರಲ್ಲಿ, ನ್ಯೂ ಓರ್ಲಿಯೆನ್ಸ್, ಎಲ್.ಎ.ಯಲ್ಲಿ ನಡೆದ ಅಂತಾರಾಷ್ಟ್ರೀಯ ಕಮ್ಯುನಿಕೇಶನ್ ಅಸೋಸಿಯೇಶನ್ ಗೋಷ್ಟಿಯಲ್ಲಿ ಪ್ರಸ್ತುತಪಡಿಸಿದ ಪ್ರಬಂಧ.
 16. ೧೬.೦ ೧೬.೧ ಫಿಕ್ಲಿಂಗ್, ಡೇವಿಡ್, ಇಂಟರ್ನೆಟ್ ಕಿಲ್ಡ್ ದ ಟೀವಿ ಸ್ಟಾರ್, ದ ಗಾರ್ಡಿಯನ್ ನ್ಯೂಸ್ ಬ್ಲಾಗ್, 15 ಅಗಸ್ಟ್ 2006
 17. "Xu Jinglei most popular blogger in world". China Daily. 2006-08-24. Retrieved 2008-06-05.
 18. "blogging Bonnie". Poynter.org. 2003-09-18. Archived from the original on 2010-08-06. Retrieved 2021-08-29.
 19. "Blooker rewards books from blogs". BBC News. 2005-10-11. Retrieved 2008-06-05.
 20. "Blooker prize honours best blogs". BBC News. 2007-03-17. Retrieved 2008-06-05.
 21. ಡ್ಯೂಡ್, ಹಿಯರ್ ಇಸ್ ಮೈ ಬುಕ್
 22. ಮ್ಯಾಕ್ ಕ್ವೀನ್ ಎಮ್ ಪಿ. (2009).ಬ್ಲಾಗರ್ಸ್, ಬೀ ವೇರ್: ವಾಟ್ ಯು ರೈಟ್ ಕ್ಯಾನ್ ಗೆಟ್ ಯು ಸ್ಯೂಡ್. ಡಬ್ಲ್ಯೂ ಎಸ್ ಜೆ.
 23. ಡೋ ವರ್ಸಸ್ ಕಹಿಲ್, 884 A 2d 451 (Del. 2005)
 24. "New Straits Times staffers sue two bloggers". Reporters Without Borders. 2007-01-19. Archived from the original on 2007-02-09. Retrieved 2008-06-05.
 25. ೨೫.೦ ೨೫.೧ "Government plans to force bloggers to register". Reporters Without Borders. 2007-04-06. Archived from the original on 2007-04-29. Retrieved 2008-06-05.
 26. Kesmodel, David (2005-08-31). "Blogger Faces Lawsuit Over Comments Posted by Readers". Wall Street Journal Online. Archived from Wall Street Journal the original on 2013-07-22. Retrieved 2008-06-05. {{cite news}}: Check |url= value (help)
 27. ವೈರ್ಡ್ ಮ್ಯಾಗಜಿನ್, ಲೀಗಲ್ ಶೋಡೌನ್ ಇನ್ ಸರ್ಚ್ ಫ್ರಕಾಸ್, ಸೆಪ್ಟೆಂಬರ್ ೮,೨೦೦೫
 28. ಸ್ಲ್ಯಾಶ್ ಡಾಟ್, ಅಗಸ್ಟ್ 31
 29. "ಸರ್ಚ್ ಎಂಜಿನ್ ವಾಚ್". Archived from the original on 2009-02-04. Retrieved 2009-10-29.
 30. "ಅರೋನ್ ವಾಲ್ ರೊಂದಿಗೆ ಸಂದರ್ಶನ". Archived from the original on 2009-07-22. Retrieved 2009-10-29.
 31. "ಲೋಕಲ್ ಸರ್ಚ್ ಕುರಿತು ಅರೋನ್ ವಾಲ್". Archived from the original on 2013-04-01. Retrieved 2009-10-29.
 32. ಅರೋನ್ ವಾಲ್ ಅವರ SEO ಬುಕ್ ಬ್ಲಾಗ್
 33. ನೈಟ್ ಜಾಕ್ ಒಡೆಯ ರಿಚರ್ಡ್ ಹಾರ್ಟನ್ ರ ಮೇಲೆ ಅಧಿಕಾರ ಚಲಾವಣೆಯಿಂದ ಅನಾಮಿಕತೆಯ ಅಂತ್ಯ
 34. "Barkha versus blogger". The Hoot. Archived from the original on 2017-10-18. Retrieved 2009-02-02.
 35. ಭಾರತೀಯ ಬ್ಲಾಗಿಗರಿಂದ NDTVಯ ಟೀಕೆ:http://www.desipundit.com/2009/01/28/blogger-silenced-by-ndtv/ Archived 2020-11-09 ವೇಬ್ಯಾಕ್ ಮೆಷಿನ್ ನಲ್ಲಿ.
 36. Sanderson, Cathrine (2007-04-02). "Blogger beware!". Guardian Unlimited. Retrieved 2007-04-02.
 37. Twist, Jo (2004-11-03). "US Blogger Fired by her Airline". BBC News. Retrieved 2008-06-05.
 38. "Delta employee fired for blogging sues airline". USA Today. 2005-09-08. Retrieved 2008-06-05.
 39. "Queen of the Sky gets marching orders". The Register. 2004-11-03. Retrieved 2008-06-05.
 40. "Lecturer's Blog Sparks Free Speech Row". The Guardian. 2006-05-03. Retrieved 2008-06-05.ಇದನ್ನೂ ನೋಡಿ: ಫಾರ್ಗೆಟ್ ದ ಫೂಟ್ ನೋಟ್ಸ್ Archived 2006-04-13 ವೇಬ್ಯಾಕ್ ಮೆಷಿನ್ ನಲ್ಲಿ.
 41. "NBA fines Cuban $200K for antics on, off court". ESPN. 2006-05-11. Retrieved 2008-06-05.
 42. Hansen, Evan (2005-02-08). "Google blogger has left the building". CNET News. Retrieved 2007-04-04.
 43. "Official Story, straight from the source". Archived from the original on 2008-07-25. Retrieved 2009-10-29.
 44. http://cities.expressindia.com/fullstory.php?newsid=152721
 45. "The Hill's Sex Diarist Reveals All (Well, Some)". The Washington Post. 2004-05-23. Retrieved 2008-06-05.
 46. "Steamy D.C. Sex Blog Scandal Heads to Court". The Associated Press ,MSNBC. 2006-12-27. Archived from the original on 2012-10-19. Retrieved 2008-06-05.
 47. "Bridget Jones Blogger Fire Fury". CNN. 2006-07-19. Retrieved 2008-06-05.
 48. "Sacked "petite anglaise" blogger wins compensation claim". AFP. 2007-03-30. Archived from the original on 2007-03-30. Retrieved 2008-06-05.
 49. Kierkegaard, Sylvia (2006). "Blogs, lies and the doocing: The next hotbed of litigation?". Computer Law & Security Report. 22: 127. doi:10.1016/j.clsr.2006.01.002.
 50. "Egypt blogger jailed for "insult"". BBC News. 2007-02-22. Retrieved 2008-06-05.
 51. "Sudan expels U.N. envoy for blog". CNN. 2006-10-22. Retrieved 2007-03-14.
 52. "UN envoy leaves after Sudan row". BBC NEWS. BBC. 23 October 2006. Retrieved 2006-10-24.
 53. "Annan confirms Pronk will serve out his term as top envoy for Sudan". UN News Centre. UN. 27 October 2006. Retrieved 2008-06-05.
 54. http://news.bbc.co.uk/2/hi/asia-pacific/7721271.stm
 55. Pham, Alex (2007-03-31). "Abuse, threats quiet bloggers' keyboards". Los Angeles Times. Archived from the original on 2007-06-15. Retrieved 2008-06-05.{{cite news}}: CS1 maint: bot: original URL status unknown (link)
 56. "Blog death threats spark debate". BBC News. 2007-03-27. Retrieved 2008-06-05.
 57. "After 10 Years of Blogs, the Future's Brighter Than Ever". Retrieved 2008-06-05.
 58. "It's the links, stupid". The Economist. 2006-04-20. Retrieved 2008-06-05.
 59. Merholz, Peter (1999). "Peterme.com". The Internet Archive. Archived from the original on 1999-10-13. Retrieved 2008-06-05.
 60. Kottke, Jason (2003-08-26). "kottke.org". Retrieved 2008-06-05.
 61. “ಬ್ಲಾಗ್" ಮತ್ತು “ಬ್ಲಾಗರ್" ವ್ಯುತ್ಪತ್ತಿ Archived 2009-02-21 ವೇಬ್ಯಾಕ್ ಮೆಷಿನ್ ನಲ್ಲಿ., ಅಮೆರಿಕನ್ ಡೈಯಲೆಕ್ಟ್ ಸೊಸೈಟಿ ಮೇಲಿಂಗ್ ಲಿಸ್ಟ್ (ಏಪ್ರಿಲ್ 20,2008).
 62. 1996ರ ಸುಮಾರಿನಿಂದಲೇ ಇ-ಅಂಚೆಯ ಮೂಲಕ ರವಾನಿಸಲಾಗುವ ಪತ್ರಿಕಾ ವರದಿಗಳಿಗೆ ಇ-ಲಾಗ್ ಎನ್ನುವ ಪದವನ್ನು ಬಳಸಲಾಗುತ್ತಿದೆ.Norman, David (2005-07-13), Users confused by blogs, archived from the original ([ಮಡಿದ ಕೊಂಡಿ]Scholar search) on 2007-06-07, retrieved 2008-06-05 {{citation}}: External link in |format= (help)"Research staff and students welcome 'E-Log'". University College London. 2003. Archived from the original on 2007-08-12. Retrieved 2008-06-05. {{cite web}}: Unknown parameter |month= ignored (help)
 63. Harmanci, Reyhan (2005-02-20). "Time to get a life — pioneer blogger Justin Hall bows out at 31". San Francisco Chronicle. Retrieved 2008-06-05.
 64. Paul Festa (2003-02-25). "Newsmaker: Blogging comes to Harvard". CNET. Retrieved 2007-01-25.
 65. "..ಡೇವ್ ವಿನರ್... ಈತನ ಸ್ಕ್ರಿಪ್ಟಿಂಗ್ ನ್ಯೂಸ್ (scripting,com) ಆರಂಭಿಕ ಬ್ಲಾಗ್‌ಗಳಲ್ಲಿ ಒಂದು."David F. Gallagher (2002-06-10). "Technology; A rift among bloggers". New York Times.
 66. ಜೆನ್ಸನ್, ಮಲ್ಲೊರಿ ಎ ಬ್ರೀಫ್ ಹಿಸ್ಟರಿ ಆಫ್ ವೆಬ್ಲಾಗ್ಸ್ Archived 2008-04-11 ವೇಬ್ಯಾಕ್ ಮೆಷಿನ್ ನಲ್ಲಿ.
 67. ೬೭.೦ ೬೭.೧ ಇಸ್ರೇಲ್ ವಿಡಿಯೋ ಬ್ಲಾಗ್, ಜಗತ್ತಿಗೆ ‘ನಿಜವಾದ ಇಸ್ರೇಲಿನ ಸುಂದರವಾದ ಮುಖ’ವನ್ನು ತೋರಿಸಲು ಉದ್ದೇಶಿಸಿದೆ, ವೈನೆಟ್, ಫೆಬ್ರವರಿ 24,2008.
 68. ಇತ್ತೀಚೆಗೆ ನ್ಯೂಯಾರ್ಕಿನಲ್ಲಿ ಇಸ್ರೇಲ್ ನಡೆಸಿದ ರಾಜತಾಂತ್ರಿಕ ಕಾರ್ಯಾಚರಣೆಯ ಪ್ರಯತ್ನವು ಹೆಚ್ಚಿನ ಸಂಖ್ಯೆಯ ಅರಬ್ ವೀಕ್ಷಕರನ್ನು ಆಕರ್ಷಿಸಿತು, ವೈನೆಟ್, ಜೂನ್ 21, 2007.
 69. ಬ್ಯಾಟಲ್ ಫ್ರಂಟ್ Twitter Archived 2009-10-01 ವೇಬ್ಯಾಕ್ ಮೆಷಿನ್ ನಲ್ಲಿ., HAVIV RETTIG GUR,ದ ಜೆರುಸಲೇಮ್ ಪೋಸ್ಟ್ , ಡಿಸೆಂಬರ್ 30, 2008.
 70. ದ ಟಫೆಸ್ಟ್ ಕ್ವೆಸ್ಚನ್ಸ್ ಆನ್ಸರ್ಡ್ ಇನ್ ದ ಬ್ರೀಫೆಸ್ಟ್ ಟ್ವೀಟ್ಸ್, ನೋಅಮ್ ಕೊಹೆನ್, ದ ನ್ಯೂಯಾರ್ಕ್ ಟೈಮ್ಸ್, ಜನವರಿ 3, 2009; ಲಭ್ಯವಾಗಿದ್ದು- ಜನವರಿ 5,2009.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಬ್ಲಾಗ್&oldid=1191512" ಇಂದ ಪಡೆಯಲ್ಪಟ್ಟಿದೆ