ಬೇಂದ್ರೆ ಕಾವ್ಯ ಮತ್ತು ಜಾನಪದ

ವಿಕಿಪೀಡಿಯ ಇಂದ
Jump to navigation Jump to search


ಬೇಂದ್ರೆ ಕಾವ್ಯದಲ್ಲಿ ಗಾದೆ,ನಾಣ್ನುಡಿ,ಪಡೆನುಡಿ,ನುಡಿಗಟ್ಟುಗಳ ಸಮೃದ್ಧತೆ[ಬದಲಾಯಿಸಿ]

ಕನ್ನಡ ನವೋದಯ ಕಾವ್ಯದ ಮುಖ್ಯ ಕವಿಗಳಲ್ಲಿ ಅಂಬಿಕಾತನಯ ದತ್ತ ಕಾವ್ಯ ನಾಮದ ದ.ರಾ.ಬೇಂದ್ರೆ ಅವರು ಜನಪದ ಗಾರುಡಿಗರಂದೇ ಖ್ಯಾತಿವೆತ್ತವರು. ಜಾನಪದ ಅವರ ಕಾವ್ಯದ ಪ್ರಧಾನ ಹೊರ ಮತ್ತು ಒಳ ಆವರಣದ ನೆಲೆಯಾಗಿದೆ. “ನಾಡ ಬಳಕೆಯಾನುಡಿಗೆ ಸೋತಿದ್ದ ಮನವನ್ನು ಹಾಡಿನ ಮೋಡಿಗೆ ಒಲಿಸಿಕೊಂಡ” ಕವಿ ಬೇಂದ್ರೆಯವರು. ಇವರ ಕಾವ್ಯದ ‘ಬೃಂಗದ ಬೆನ್ನೇರಿ’ ಕಲ್ಪನಾವಿಲಾಸದಲ್ಲಿ ವಿಹರಿಸುತ್ತಿದ್ದರೂ ಅದರ ತಾಯಿಬೇರು ಜನಪದದಲ್ಲಿಯೇ ಹೂತಿದೆ. ಅಂಬಿಕಾತನಯದತ್ತರ ಕವಿತೆಗಳಲ್ಲಿ ಗಾದೆ ಮತ್ತು ನಾಣ್ನುಡಿಗಳು ಸಮೃದ್ಧವಾಗಿ ತುಂಬಿಕೊಂಡಿವೆ. ಅವರ ಕವಿತೆಯಲ್ಲಿರುವ ಆಡುಮಾತಿನ ಲಯ, ಶಬ್ದಸಂಪತ್ತು, ಪ್ರತಿಮೆ, ಪಡೆನುಡಿ, ಗಾದೆ, ಧ್ವನಿಶಕ್ತಿ, ಭಾಷೆ, ಛಂದಸ್ಸು, ಲಯಗಳೆಲ್ಲವು ಜನಪದರಿಂದಲೇ ಎತ್ತಿಕೊಂಡಿರುವುದರಿಂದ ಇವು ಬೇಂದ್ರೆ ಗೀತೆಗಳು ಎನ್ನುವುದನ್ನು ಮರೆಯಿಸಿ ಜನಪದ ವಲಯಕ್ಕೆ ಸೇರುತ್ತವೆ. ಬೇಂದ್ರೆಯವರ ಕವಿತೆಗಳಲ್ಲಿ ವ್ಯಕ್ತವಾದ ಕೆಲವು ಗಾದೆ, ನಾಣ್ನುಡಿ, ಪಡೆನುಡಿಗಳು ಇಂತಿವೆ.

‘ಬೆಲ್ಲಕ್ಕ್ಯಾಕ ಬ್ಯಾರೇ ಸವಿ, ಭಕ್ತಗಿಲ್ಲಾ ಬ್ಯಾರೆ ಕಿವಿ’ (ಚತುರೋಕ್ತಿ)

‘ಸಾಕು ಒಂದು ಅಗಳು ಸಿಕ್ಕರೆ, ಇಲ್ಲಾ ತೊಟಗು ಸಕ್ಕರೆ’ (ಸಕ್ಕರೆ)

‘ಇರಲಿ ನೀರು ಕಪ್ಪೆ ಕೆಸರು, ಸಾಕು ಇರಲು ತಾವರೆ’ (ಗಂಗಾವತರಣ)

‘ರೆಕ್ಕೀ ನೋಡಕೊಂಡ ಹಕ್ಕಿ ಕೂಡತಾವ (ಗೆಣಿತಾನ)

‘ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು (ನಾಕುತಂತಿ)

‘ಹುಸೀ ಬಾರಿಗೆ ಹುಳಾ ಸಾಯೋದಿಲ್ಲ’ (ನಾ ಕವಿತಾ ಬರೀ ಬಾರದಿತ್ತು)

‘ಕವಿತಾ ಕಪ್ಪು ಮಶೀಲೆ ಬರೀತಾರ ಯುದ್ಧ ಕೆಂಪ ರಕ್ತದಿಂದ ಕೊರೀತಾರ’ (ನಾ ಕವಿತಾ ಬರೀ ಬಾರದಿತ್ತು)

‘ಬೆಳಕಿಗೆ ಕತ್ತಲೆ ಕೊಟ್ಟಾಗ ಮುದ್ದು, ಮೂಡ್ಯಾನೋ ಚಂದಿರಾ’ (ಮುಗಿಲ ಮಲ್ಲಿಗೆ)

‘ಜೇನು ಹುಳಕ್ಕ ತಿಳಿದಷ್ಟು - ಹೇನಿಗೆ ಏನು ತಿಳೀತsದ’ (ಶ್ರೀಮಾತಾ)

ಯಕ್ಷ ಯಕ್ಷಿ ಕವಿತೆಯಲ್ಲಿನ ಉಕ್ತಿಗಳು[ಬದಲಾಯಿಸಿ]

‘ಆ ಕವಿಗಿಂತಲೂ ಗವಿ ಲೇಸೇನೋ ಎನುವಂತಿದೆ ಕಾಲ’

ವರ್ತಮಾನವೇ ಇರದ ಭೂತತಳ ಮಸಣ ಎಷ್ಟೊ ಹಸನ ಬಾಳಗೇಡಿಗಳ ಹಾಳ ಬದುಕಿನಲಿ ಬಾಳೆ ಒಂದು ವ್ಯಸನ.

ವಿಷದ ಮೇಲೆ ವಿಷ ತಾಯ ಕೈಲೆ ಬಡಿಸಿದರೆ ನುಂಗು ನಂಜು

ಹೊಟ್ಟೆ ಹೊಸೆದರೆ ಹಸಿವು ಹಿಂಗುವುದೇನೋ ಬೆಂಕಿಗೆ ಮೇರೆಯೆ? ಹಲ್ಲ ಮಸೆದರೆ ದವಡೆ ಸವೆವುದು ರಸದ ರುಚಿಯದು ಬೇರೆಯೆ?

ಇರುಳ ಮೈಯ ಹರಕೊಂಡನು ಸೂರ್ಯ ಆದವೊ ನಕ್ಷತ್ರ ಇಲ್ಲ, ನಿಶೆಯ ಹರಕೊಂಡಳೊ ಮುನಿಸಲೆ ತನ್ನ ಕಂಠಸೂತ್ರ.

ಹುಲಿಕವಿಗಿಂತಲು ಮುದಿಕವಿ ಲೇಸು, ಇಲ್ಲ ಅವಗೆ ಹಲ್ಲು

ಹಲ್ಲಿರದವನಿಗೆ ಕಬ್ಬಿಣವಿರಲಿ, ಕಡಲೆ ಕೂಡ ಕಲ್ಲು

ಇತರೆ[ಬದಲಾಯಿಸಿ]

‘ಉರವಲು ಕಟಗೀ ಎರವಲ ತಂದು ಸಾಗಿತೇನು ಬಾಳು?’ ‘ಮುತ್ತು ಯಾರು ತಿಂದಾರು? ಬೇಕು ಅಕ್ಕಿ ಜೋಳಾ ಕಾಳು’ (ಪ್ರತಿಬಿಂಬಗಳು)

‘ಬಾಜಾರ ಮಾಲು ಅಲ್ಲ ಹೃದಯ’ (ಪ್ರತಿಬಿಂಬಗಳು)

‘ಯುಕ್ತಿ ಉಕ್ತಿಯ ಚೀಲ, ಭಕ್ತಿ ಮುಕ್ತಿಗೆ ಚೀಲ (ಸ್ಪುರಣಗಳು)’

‘ಹೀಗಿರಿ’ ಎಂದು ‘ಶ್ರೀಗಿರಿಗೆ’ ಹೇಳುವವರು ನಾವಾರು? ನೀವಾರು? (ಸ್ಪುರಣಗಳು)

‘ಇರಾಕ ಅಂತ ಇರಾಣಕ್ಕ ಹೋದೆ, ಬರಾಣ ಆಗಲಿಲ್ಲ’ (ಸ್ಪುರಣಗಳು)

‘ಇಕೋ ನೆಲ - ಅಕೋ ಜಲ, ಅದರ ಮೇಲೆ ಮರದ ಫಲ’ (ಸಖಿಗೀತ)

‘ಕಣ್ಣು ತಿಳಿ ಆದರs ಎಲ್ಲಾ ತಿಳಿ’ (ಮುಗಿಲ ಮಲ್ಲಿಗೆ)

‘ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿದ್ಹಾಂಗ’ (ಚಿಗರಿಗಂಗಳ ಚೆಲುವಿ)

‘ಬಯಲಂಗಡಿಗೆ ಕದಾಗಿದಾಯಾಕ’ (ಪರಾಕಿ)

‘ಪ್ರೀತಿನ ಇಲ್ಲದಲ್ಲಿ ದೂತೀ ಕೆಲಸ ಏನು?’ (ಚತುರೋಕ್ತಿ)‘ಅವ್ವನ ಸೀರಿ ಮಡಿಚಲಾರೆ,

ಅಪ್ಪನ ರೊಕ್ಕ ಎಣಿಸಲಾರೆ ಎಂಥಾ ಪ್ರಕಾಶ, ತುಂಬಿತಾಕಾಶಾ’ (ಅವ್ವನ ಸೀರಿ ‘ಸಂಚಯ’)

‘ಶಿವನಗೆರೀ | ನನ್ನ ಕೈಯಾಗೈತಿ ಗೌರೀ ಗೆರಿ ನಿನ | ಮುಟಗ್ಯಾಗೈತಿ’ (ಕಾಂಜಾಣ, ಯಕ್ಷ ಯಕ್ಷಿ)

‘ಪಾಂಡವ್ರು ಕೌರವ್ರು ಎಂದೂ ಇದ್ದಾರ’ (ಶ್ರೀಮಾತಾ)

‘ಹುಂಜ ಹೇಂಟೆಗಳ ಕಾವಿನಲ್ಲಿ ರೂಪಾಯ್ತು ನೀರ ತತ್ತಿ’ (ಒಲವಿನ ನಿಲುವು ‘ಮರ್ಯಾದೆ’)

‘ಅಡ್ಡಗೋಡೆಯ ಮೇಲೆ ದೀಪವಿಟ್ಟೆ ಕಣ್ಣಿದ್ದವ ಕಂಡಾನು, ಕುರುಡನಿಗೆ ಕಂಡಾಬಟ್ಟೆ (ಚತುರೋಕ್ತಿ)

ಭೂಮಿ ಎಂಬುದು ಮಣ್ಣು, ಪ್ರಜೆ ಎಂಬುದೂ ಮಣ್ಣು ಸುಡಗಾಡು ನಾಗರಿಕತೆ (ನಿರ್ಬುದ್ಧ ‘ನಾಕುತಂತಿ)

‘ಕಬ್ಬಿಣ ಕಡಲಿಗೆ ವಜ್ರದ ಹಲ್ಲಬೇಕು’ (ಶ್ರೀಮಾತಾ)

‘ಜಗಕ್ಕ ಆದಿ ಇಲ್ಲಾ’ (ಶ್ರೀಮತಾ)


‘ಬೀಜದಾಗ ಗಿಡಾ ಇರ್ತಾವ, ಗಿಡದಾಗ ಬೀಜ ಇರ್ತಾವ’

ಬಡ್ಡಿ ಒಡದರ ಬೇರು ಇಳೀತಾವ; ಬೇರು ಕೂಡಿದರ ಬಡ್ಡಿ ಬೆಳೀತಾವ’

ಮಡದಿಗೇ ಮಣ್ಣಕೊಟ್ಟರ, ಮನೀ ಮಸಣಾ ಬ್ಯಾರೆ ಇಲ್ಲಾ ಆಕೀನs ಕಣ್ಣಕೊಟ್ಟರ, ಹೊಲಾ ಮನೀ ಹ್ವಾರೆ ಇಲ್ಲೇ ಎಲ್ಲಾ

ಸರಿಬೆರಕೀ ಮಾಡಲಿಕ್ಕೆ ಹೋಗಿ ಕಲಬೆರಕಿ ಕಲಕ್ಯಾಡಿ ಬಿಟ್ಟರೆ

ಬಣ್ಣದಾಗ ಬೆಳಕು ಹೊಮ್ಮೊದಿಲ್ಲಾ ಮಸೀಯೊಳಗ ರಸ ಚಿಮ್ಮೊದಿಲ್ಲಾ (ಸಮಗ್ರಕಾವ್ಯ, ಸಂ. 4)

ಕೊಟ್ಟಿದ್ದೇ ನಿನ ದಾರಿ ಬುತ್ತಿ ಇಟ್ಟದೆಲ್ಲಾ ಯಾವ ಕಟ್ಟೀ ಕಲ್ಲಾಕ್ಕೈತಿ? (ಕಾಂಚಾಣ ಯಕ್ಷಿ ಯಕ್ಷಿ)

‘ಮಲ ಬ್ಯಾರೆ; ಕಮಲ ಬ್ಯಾರೆ’ (ಸಮಗ್ರಕಾವ್ಯ ಸಂ. 5)

‘ಅಚ್ಚಿತುಪ್ಪಾ ಅಲ್ಲ, ರಾಜ್ಯ ನಡೆಸೋದು’ (ಸಮಗ್ರಕಾವ್ಯ ಸಂ. 5)

‘ಕಸಕಿದ್ದರ ಕಿಸದು ತೋರಬ್ಯಾಡ’ (ಬಸವ-ಮುಸವ)

‘ಒತ್ತೀ ಇಟ್ಟೀ ಏನ ತಲಿ?’ (ಹೇಳತೇನಿ ಕೇಳ)

‘ಬೆಲಿಗೆ ಹಚ್ಚಬ್ಯಾಡ ನಿನ್ನ ಮೊಲೀ’ (ಹೇಳತೇನಿ ಕೇಳ)

‘ಉಣದವ್ರ ಇರುವಾಗ, ಉಂಡವ್ರ ಡರಕಿಯಾಕ’ (ಸಮಗ್ರಕಾವ್ಯ ಸಂ. 5)

‘ಪಾಠ ಕಲಿಯೋದಿದ್ರ ಇಲ್ಲೇ ಕಲಿ’ (ಚತುರೋಕ್ತಿ)

‘ಹುಳದ ಬಾಯೊಳಗ ಹೂವಿನ ಜೇನು’ (ಚತುರೋಕ್ತಿ)

‘ಮುಖಾನ ಇಲ್ಲಾ ಮೂಗ್ಯಾಕ? ಮೈನ ಇಲ್ಲಾ ಡೂಗ್ಯಾಕ (ಗರಗರ)

‘ತಂತೀದು ಸುಂತೀ ಮಾಡಿಲ್ಲಾ’ (ಸಮಗ್ರಕಾವ್ಯ ಸಂ. 5)

‘ಸಾಕಾದವರ್ನ ಸಾಕಾವರ್ಯಾರು?’ (ಸಮಗ್ರಕಾವ್ಯ ಸಂ. 5) ‘ಮಾರೋಕಟ್ಟಿಗ್ಯಾಕ ಸಂದಿಗೊಂದಿ’ (ಸಮಗ್ರಕಾವ್ಯ ಸಂ. 5)

‘ಎಡವಿದಲ್ಲೇ ಎಡವಬ್ಯಾಡ’ (ಅದೇ)

‘ಹರಾ ಗಿರೀ ಏರಿದರೂ, ಇರಬೇಕಾತು ಗಿರಿಜಾನ ಸರಿ’ (ಅದೇ)

‘ಸ್ಮರಗ ಬಂತು ಮರಣಾ’ (ಅದೇ)

‘ಸಿಂಪಿಗಿಲ್ಲಾ ಮುತ್ತಿನ ಪಾಲು’ (ಅದೇ)

‘ನೀವೆ ನಿಮ್ಮ ವೈರಿ, ಮನೆಯೊಳಗಿರ್ರಿ, ಇಲ್ಲಾ ಮಸಣಕ್ಕ ವೈರಿ’ (ಅದೇ)

‘ಕಾಮಗಿರಿ ಸದಾ ಚಾಲೂ ಇರ್ತಾವ, ರಸ್ತೆ ಮಾತ್ರ ಬಂದ ಇರ್ತಾವ’ (‘ಕಾಲಚಕ್ರ’)

‘ಇಲ್ಲದಲ್ಲಿ ಬರೆ ಗುಮ್ಮ ಗುಮ್ಮಿದರ ಕಟ್ಟಿದ ಮನೆಯೂ ಬರಿ ಮಣ್ಣಾ’ (ಸಂಚಯ)

ತಲೆ ಬಾಗುವವರು ಬಾಳತಾರ ಹುಲ್ಲು ಬಿದ್ದಾಂಗ ನೆಲಾ ಅಪ್ಪಿದವರು ತಾಳತಾರ ಕರಕಿ ಇದ್ದಾಂಗ (ಶ್ರೀಮತಾ)

‘ನೋಡ್ ನೋಡ್ತs ದಿನಮಾನಾ ಆಡಾಡ್ತs ಆಯುಷ್ಯಾ’ (ಗರಿ)

ಉಜ್ಜೇ ಉಜ್ಜತೇವಿ ಮಬ್ಬಿನ ಮಕ್ಕು ಇದ್ದs ಇರತsದ ಕತ್ತಲೀ ಕೆಚ್ಚು (ಮುಗಿಲ ಮಲ್ಲಿಗೆ ಪು.55)

‘ಮುಳಗಾಂವ ಬೆಂಡಿಗೆ ತೆಕಿಮುಕ್ಕಿ ಬಿದ್ದಾಂಗ’ (ಗರಿ)

ಹರೆಯೆಂಬೋದು ತೆರೀ ಹಾಂಗ ಬಂತ ಅಂತ ಹೊರಟಿತು ಬ್ಯಾಗ (ಅರಳು ಮರಳು)

ಅಂಬಿಕಾತನಯ ಕಟ್ಟಿದ ಕಗ್ಗಾ ಜಗ್ಗಬ್ಯಾಡ ನೀ ಹಿಗ್ಗಾ ಮುಗ್ಗಾ ಹುರಿ ಐತಿ ಒಳಗs ಬರಿದಲ್ಲಾ ಹಗ್ಗಾ (ಅರಳು ಮರಳು)


ಹೀಗೆ ಬೇಂದ್ರೆಯವರಲ್ಲಿ ಗಾದೆ, ನಾಣ್ನುಡಿಗಳು ಜಾನಪದವೇ ಎನ್ನುವಷ್ಟು ಪ್ರಖರವಾಗಿದ್ದರೂ ಅವರ ಕಾವ್ಯಶಕ್ತಿಯ ಬೌದ್ಧಿಕ ಮೇಲ್ಮೈಯ, ಜಾಣ್ಮೆಯ ಸಾಧನಗಳಾಗಿ ಬಳಕೆಯಾಗಿವೆ. ಗಾದೆ, ನಾಣ್ನುಡಿ, ಕತೆ, ಎಲ್ಲ ಎಲ್ಲವೂ ಜನಪದರ ನಿತ್ಯದ ಬಳಕೆಯ ನುಡಿಸಂಪತ್ತುಗಳಾಗಿವೆ. “ಜಾನಪದರಿಗಂತೂ ಗಾದೆ, ಒಗಟು, ಕತೆ, ಗೀತೆಗಳಿಲ್ಲದ ಜೀವನ ಬರಡೆನ್ನಿಸುತ್ತಿತ್ತು. ಅನ್ಯ ಬಗೆಯ ಮನರಂಜನಾ ಮಾಧ್ಯಮಗಳು ದುರ್ಲಭವಾಗಿದ್ದು, , ಕಲ್ಪನೆಯ ಕೂಸು, ಕುಸುಮಗಳಾದ ಸಾಹಿತ್ಯ ಕೃತಿಗಳನ್ನು ಅವರು ಜೀವನದ ಅಂಗವನ್ನಾಗಿಸಿಕೊಂಡಿದ್ದರು. ಏಕೆಂದರೆ ಜನಪದ ಸಾಹಿತ್ಯ ಆದ್ಯಂತವಾಗಿ ಜನತೆಯದು; ಸಮಸ್ತ ಜನತೆಯ ಪ್ರತಿನಿದಿsಯಾದ ಒಬ್ಬ ಪ್ರತಿಭಾವಂತನಿಂದ ಮೊದಲು ಸೃಷ್ಟಿಯಾಗಿ ಅನಂತರ ಜಾನಪದರೆಲ್ಲರ ಸಾರ್ವತ್ರಿಕ ಸ್ವತ್ತಾಗುವಂಥ ಸಾಸ್ಕೃತಿಕ ಸಾಮುದಾಯಕ ಸಂಪತ್ತು ಅದು. ಒಟ್ಟಾರೆ ಕವಿ ದ.ರಾ.ಬೇಂದ್ರೆ ಅವರ ಕವಿತೆಗಳೆಲ್ಲ ಜನಪದ ಸಮೃದ್ದಿಯಿಂದ ತುಂಬಿ ತುಳುಕುತ್ತಿವೆ.

ಆಧಾರ[ಬದಲಾಯಿಸಿ]

  • ಡಾ.ಪ್ರಕಾಶ ಗ.ಖಾಡೆ ಅವರ 'ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ 'ಕೃತಿಯಿಂದ ಆರಿಸಿಕೊಳ್ಳಲಾಗಿದೆ.